ಅಂಕಣ

“ರಾಜು”ಎಂಬ ಗಾನಗಾರುಡಿಗನಿಗೆ ಅಕ್ಷರ ನಮನ

ಕವಿ ಚಂದದ ಕಲ್ಪನೆ ಮತ್ತು ಅದ್ಭುತವಾದ ಭಾವನೆಯಿಂದ ಕವನವನ್ನು ಬರೆಯುತ್ತಾನೆ. ಆ ಸಾಲುಗಳಲ್ಲಿರುವ ಭಾವನೆ ಅದೆಷ್ಟು ಚಂದದ್ದು ಎಂದರೆ ಅದೆಷ್ಟೋ ಮನಸ್ಸುಗಳಿಗೆ ಕನ್ನಡಿ ಹಿಡಿದಂತೆ ಭಾಸವಾಗುವಂತಿರುತ್ತದೆ. ಕವಿ ಕನಸುಗಳನ್ನು ಸೃಷ್ಟಿಸಬಲ್ಲ,ಕಲ್ಪನೆಗೂ ಮೀರಿದ ಪ್ರಸ್ತುತವನ್ನ ನಿರ್ಮಿಸಬಲ್ಲ,ಎಲ್ಲಕ್ಕಿಂತಲೂ ಮುಖ್ಯವಾಗಿ ಅದೆಷ್ಟೋ ಮನಸ್ಸುಗಳನ್ನು ಅರಳಿಸಬಲ್ಲ. ಇನ್ನು ಕವಿ ಬರೆದ ಕವನಕ್ಕೆ  ಸಂಗೀತ ನೀಡುವ ಸಂಗೀತಗಾರ ತನ್ನೊಳಗಿನ ಭಾವವನ್ನು ಸ್ವರ,ರಾಗ,ಶೃತಿಗಳ ರೂಪದಲ್ಲಿ ಕವಿಯ ಭಾವ ತುಂಬಿರುವ ಸಾಲುಗಳ ಜೊತೆ ಸಮೀಕರಣಗೊಳಸಿ ಚಂದದ ಹಾಡಿನ ಉಗಮದ ಭಾಗವಾಗುತ್ತಾನೆ. ಕವಿ ಮತ್ತು ಸಂಗೀತಗಾರನಾಗಿ ಜೊತೆ ಹಾಡುಗಾರ ಕೂಡ ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಕವಿ ಸೃಷ್ಟಿಸಿದ ಹಾಡು ಮತ್ತು ಸಂಗೀತಗಾರನ ರಾಗಗಳ ಜೊತೆ ಹಾಡುಗಾರನ ಸ್ವರ ಸೇರಿದಾಗ ಮಾತ್ರ ಚಂದದ ಭಾವತುಂಬಿದ ಹಾಡೊಂದರ ಉಗಮವಾಗುತ್ತದೆ. ಸಂಗೀತಕ್ಕೆ ಅನಂತ ಶಕ್ತಿಯಿದೆ,ಅದ್ಯಾವುದೋ ಲೋಕಕ್ಕೆ ವಿಹರಿಸಬೇಕೆಂದು ಕೂತ ವ್ಯಕ್ತಿ ಸಂಗೀತದ ಮೂಲಕ ಅದನ್ನು ಈಡೇರಿಸಿಕೊಳ್ಳಬಲ್ಲ. ಸೋತು ಕೂತವನೊಬ್ಬ ಸೋಲನ್ನು ಮರೆಯಲು ಸಂಗೀತದ ಸೆಲೆಯಲ್ಲಿ ಮನಸ್ಸನ್ನಿಟ್ಟು ಹೊಸ ಪ್ರಾರಂಭಕ್ಕೆ ಅನುವಾಗಬಲ್ಲ. ಹೌದು ಅದ್ಯಾವುದೋ ಶಕ್ತಿ ಸಂಗೀತಕ್ಕಿದೆ. ನಮ್ಮೊಳಗಿನ ನಮ್ಮತನದ ಹುಡುಕಾಟ,ಅಸಹ್ಯ ಅನ್ನಿಸಿದ ಪ್ರಸ್ತುತದ ಮರೆವು,ನಿರಂತರವಾದ ಬದುಕಿನ ಅನಂತ ಅನುಭವ,ಪ್ರೇಮಿಯೊಬ್ಬನ ಕಲ್ಪನೆಗೂ ಮೀರಿದ ‘ಅವಳ’ ಹುಡುಕಾಟ ಎಲ್ಲದಕ್ಕೂ ಉತ್ತರವಾಗಿ ನಿಲ್ಲಬಲ್ಲುದು ಸಂಗೀತ. ರಾಗ,ತಾಳ,ಶೃತಿಯನ್ನರಿಯನೂ  ಕೂಡ ಹಾಡುಗಾರ ಸೃಷ್ಟಿಸುವ ಆ ಭಾವಲೋಕದ ಭಾಗವಾಗಬಲ್ಲ. ನಿರಂತರವಾಗಿ ಆ ಸಾಲುಗಳನ್ನು ಅನುಭವಿಸಬಲ್ಲ. ಓಶೋ ರಜನೀಶ್,ಸದ್ಗುರುವಿನಂತಹ ಅನೇಕ ಧ್ಯಾನಗುರುಗಳು ತಮ್ಮ ಧ್ಯಾನ ವಿಧಾನದಲ್ಲಿ ಸಂಗೀತಕ್ಕೆ ಪ್ರಾಮುಖ್ಯತೆ ನೀಡಿರುವುದನ್ನ ಇಲ್ಲಿ ಗಮನಿಸಬೇಕು. ಓಶೋ ರಜನೀಶರ ಧ್ಯಾನ ಶಿಬಿರಗಳಲ್ಲಿ ಸಂಗೀತಕ್ಕೆ ಪ್ರಮುಖ ಪ್ರಾಶಸ್ತ್ಯ ನೀಡಲಾಗುತ್ತದೆ. ಸಂಗೀತದಲ್ಲಿನ ಆ ಶಕ್ತಿಯೊಡನೆ ನಮ್ಮೊಳಗಿನ ಸುಪ್ತ ಶಕ್ತಿ ಸಮ್ಮಿಲನಗೊಂಡಾಗ ಧ್ಯಾನದ ಸ್ಥಿತಿಗಳನ್ನ ಹಂತ ಹಂತವಾಗಿ ಅನುಭವಿಸಲು ಸಾಧ್ಯ. ಹಾಡು,ಸಂಗೀತ ಮತ್ತು ಹಾಡುಗಾರನ ಆ ಭಾವ ತುಂಬಿದ ಗಾಯನ ನಮ್ಮೊಳಗೊಂದು ಶಕ್ತಿಯ ಸಂಚಲನವನ್ನು ಉಂಟುಮಾಡುವುದರಲ್ಲಿ ಅನುಮಾನವಿಲ್ಲ. ಭಾಷೆ ಯಾವುದೇ ಇರಲಿ ಹಾಡುಗಾರನ ಭಾವ ತುಂಬಿದ ಗಾಯನ ನಮ್ಮೊಳಗೊಂದು ಭಾವಲೋಕದ ಸೃಷ್ಟಿಯನ್ನಂತೂ ಮಾಡುತ್ತದೆ. ಅಂತಹ ಭಾವಲೋಕದ ಸೃಷ್ಟಿ ಮಾಡುತ್ತಿದ್ದ ಗಾನ ಗಾರುಡಿಗನ ಬಗ್ಗೆ ಬರೆಯುವ ಹಂಬಲ ನನ್ನದು.

ಆತನ ಧ್ವನಿಯೇ ವಿಶಿಷ್ಟವಾದದ್ದು, ಹಾಡುತ್ತಾ ಹಾಡುತ್ತಾ ಅದ್ಯಾವುದೋ ಭಾವಲೋಕದ ಪರಿಧಿಯನ್ನು ತಲುಪಿ ಕೇಳುಗರನ್ನೂ ತಲುಪಿಸುತ್ತಿದ್ದ ಮಹಾನ್ ಸಂಗೀತಗಾರ ಆತ. ಅವನು ಕನ್ನಡ ಸುಗಮ ಸಂಗೀತದ ಮೂಲಕ ಸಮಸ್ತ ಕನ್ನಡ ಜನರ ಮನಸ್ಸಿನಲ್ಲಿ ನೆಲೆನಿಂತ ಚೇತನ. ಆತ

ಸಂಗೀತಗಾರ,ಹಾಡುಗಾರ,ನಟ,ತಬಲಾವಾದಕ,ಮಿಮಿಕ್ರಿ ಕಲಾವಿದ ಇನ್ನು ಏನೇನೋ ಆಗಿದ್ದ. ಆತನೇ ಗಾನಗಾರುಡಿಗ ರಾಜು ಅನಂತಸ್ವಾಮಿ. ಕನ್ನಡ ಭಾವಗೀತಾ ಲೋಕ ಮೈಸೂರು ಅನಂತಸ್ವಾಮಿಯವರ ನಂತರ ಬರಡಾಯಿತು ಅಂದುಕೊಂಡಾಗ ಉದಯಿಸಿದ ಮಹಾನ್ ಪ್ರತಿಭೆ ರಾಜು. ನೀವೆಲ್ಲ ರಾಜರತ್ನಂ ಅವರ “ಯಂಡಾ ಯೆಂಡ್ತಿ ಕನ್ನಡ್ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ,ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ ತಕ್ಕೊ ಪದಗೋಳ್ ಬಾಣ…” ಎಂಬ ಕವನವನ್ನು ರಾಜು ಎಂಬ ಹಾಡುಗಾರನ ಸ್ವರದಿಂದಲೇ ಕೇಳಿರುತ್ತೀರಿ..”ಮುಚ್ಚು ಮರೆಯಿಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೇ ಅಂತರಾತ್ಮ..”ಎಂಬ ಆಧ್ಯಾತ್ಮದ ರಸ ತುಂಬಿರುವ ಕವನವನ್ನು ರಾಜು ಅನಂತಸ್ವಾಮಿಯವರ ಕಂಠದಲ್ಲಿ ಕೇಳಿದಾಗ ಸಿಗುವ ಅನುಭವವೇ ಬೇರೆ. ರಾಜು ಶರೀರ ಮತ್ತು ಶಾರೀರವನ್ನು ಅವರ ತಂದೆ ಮೈಸೂರು ಅನಂತಸ್ವಾಮಿಯವರಿಂದ ದತ್ತು ಪಡೆದಿದ್ದ. ಅನಂತ ಸ್ವಾಮಿಯವರ ತದ್ವತ್ ರೂಪ ರಾಜು ಅನಂತಸ್ವಾಮಿ. ಕನ್ನಡ ಸುಗಮ ಸಂಗೀತ ಲೋಕದ ಅಜರಾಮರವಾಗಿದ್ದರು ಮೈಸೂರು ಅನಂತಸ್ವಾಮಿ. ಅವರ ಹೆಸರನ್ನು ಬೆಳಗಿಸಿದ ಹೆಮ್ಮೆಯ ಮಗ ರಾಜು ಎಂದರೆ ಯಾವುದೇ ಅತಿಶಯೋಕ್ತಿಯಾಗಲು ಸಾಧ್ಯವಿಲ್ಲ. ಆತನ ಸ್ವರಕ್ಕೆ ಜನರನ್ನು ಸೆಳೆಯುವ ಅತೀವ ಶಕ್ತಿಯಿತ್ತು. ಹಾಡುತ್ತ ಹಾಡುತ್ತ ಭಾವಲೋಕದ ಸೃಷ್ಟಿಕರ್ತರಾಗಿಬಿಡುತ್ತಿದ್ದರು ರಾಜು ಅನಂತಸ್ವಾಮಿ.

1973 ರ ಏಪ್ರಿಲ್ 19 ರಂದು ಮೈಸೂರು ಅನಂತಸ್ವಾಮಿ ಮತ್ತು ಶಾಂತಾ ಅನಂತಸ್ವಾಮಿ ಅವರಿಗೆ ಬೆಂಗಳೂರಿನಲ್ಲಿ ಜನಿಸಿದರು ರಾಜು ಅನಂತಸ್ವಾಮಿ. ರಾಜುವಿನ ಮೂಲ ಹೆಸರು ಸತ್ಯಪ್ರಕಾಶ್ ಎಂದಾಗಿತ್ತು. ಅನಂತಸ್ವಾಮಿಯವರು ಪ್ರೀತಿಯಿಂದ ರಾಜು ಎಂದು ಕರೆಯುತ್ತಿದ್ದರು. ಮುಂದೆ ಅನಂತಸ್ವಾಮಿಯವರ ನಿಧನದ ನಂತರ ರಾಜು ಅನಂತಸ್ವಾಮಿ ಎಂದು ಬದಲಾಯಿಸಿಕೊಂಡರು. ಮುದ್ದಿನ ಇಬ್ಬರು ತಂಗಿಯರ ಹೆಮ್ಮೆಯ ಅಣ್ಣನಾಗಿದ್ದರು ರಾಜು ಅನಂತಸ್ವಾಮಿ. ಮುಂಚಿನಿಂದಲೂ ಚೂಟಿಯಾಗಿದ್ದ ರಾಜು ಅನಂತಸ್ವಾಮಿ ಸರಸ್ವತಿ ವಿದ್ಯಾಮಂದಿರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. 3 ವರ್ಷದಲ್ಲೇ ವಯಸ್ಸಿಗೂ ಮೀರಿದ ಜ್ಞಾನ ಅವರಲ್ಲಿತ್ತು ಎಂದು ಅವರ ತಾಯಿ ಹೇಳುತ್ತಾರೆ. ಒಂದು ವರ್ಷದ ಮಗುವಾಗಿದ್ದಾಗಲೇ ತಂದೆಯ ಹಾರ್ಮೋನಿಯಂ ಕಡೆಗೆ ಓಡುತ್ತಿದ್ದ ರಾಜು ಸಂಗೀತದ ತಾಳ ಜ್ಞಾನವನ್ನು ತುಂಬ ಬೇಗ ಗ್ರಹಿಸಲು ಶುರುಮಾಡಿದ್ದರು. ದೂರದರ್ಶನದಲ್ಲಿ ಮೈಸೂರು ಅನಂತಸ್ವಾಮಿಯವರ ಮೊದಲ ಸಂಗೀತ ಕಾರ್ಯಕ್ರಮವೊಂದರ ಆಯೋಜನೆಯಾಗಿತ್ತು.  ಅಲ್ಲಿ ಒಬ್ಬ ಚಿಕ್ಕ ಹುಡುಗ ತನ್ನಷ್ಟೇ ಎತ್ತಿರವಿದ್ದ ತಬಲಾದ ಹಿಂದೆ ಕೂತಿದ್ದ,ಅದೂ ಸಂಗೀತ ದಿಗ್ಗಜ ಅನಂತಸ್ವಾಮಿಯವರಿಗೆ ತಬಲಾ ಸಾತ್ ನೀಡಲು.ಇದನ್ನು ನೋಡಿದ ಅದೆಷ್ಟೋ ದಿಗ್ಗಜರುಗಳಿಗೆ ಅಬ್ಬಾ! ಅನ್ನಿಸಿತ್ತು.ಇಡೀ ರಾಜ್ಯ ನೋಡುತ್ತಿದ್ದ ಆ ಕಾರ್ಯಕ್ರಮದಲ್ಲಿ ಸ್ವಲ್ಪವೂ ಭಯವಿಲ್ಲದೆ ತಬಲಾ ನುಡಿಸಿದ ರಾಜುವಿನ ಸಂಗೀತ ಜ್ಞಾನ ಮತ್ತು ಧೈರ್ಯಕ್ಕೆ ಎಲ್ಲರೂ ತಲೆದೂಗಿದ್ದರು. ರಾಜು ವಿಜಯ ಕಾಲೇಜಿನಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮತ್ತು ನ್ಯಾಶನಲ್ ಕಾಲೇಜಿನಲ್ಲಿ ಪದವಿಯನ್ನು ಓದಿದರು. ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಕಾಲೇಜಿನಲ್ಲಿ ಕೆ ಎಸ್ ನರಸಿಂಹಸ್ವಾಮಿಯವರ ‘ಬಿಳಿಯ ಹಕ್ಕಿಯ ಹಾಡು’ಎಂಬ ಕವನಸಂಕಲನಕ್ಕೆ ಸಂಗೀತ ಸಂಯೋಜನೆ ಮಾಡಿ,ಕಾಲೇಜಿನ ಸ್ನೇಹಿತರೊಡಗೂಡಿ ನೃತ್ಯರೂಪಕವೊಂದನ್ನು ನಿರ್ಮಿಸಿ ಪ್ರದರ್ಶಿದರು ರಾಜು.ಇದನ್ನು ನೋಡಿದ ಅನಂತಸ್ವಾಮಿ ಅವರಿಗೆ ಮುಂದೊಂದು ದಿನ ತನ್ನ ಮಗ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧನಾಗುತ್ತಾನೆ ಎಂಬ ಭರವಸೆ ಮೂಡಿತ್ತಂತೆ. ಹಾರ್ಮೋನಿಯಂ ಮೇಲೆ ಬೆರಳಿಟ್ಟು ಅದೆಷ್ಟೋ ಸಂಗೀತ ಸಂಜೆ ಸೃಷ್ಟಿಸುತ್ತಿದ್ದ ರಾಜು ತನ್ನ ಸಂಗೀತ ಜ್ಞಾನವನ್ನು ಹೊಸ ಹೊಸ ಯುವಕ ಯುವತಿಯರಿಗೂ ಧಾರೆ ಎರೆಯಲು ಶುರುಮಾಡಿದ್ದರು.1995 ರಲ್ಲಿ ತಂದೆ ಗಂಟಲಿನ ಕ್ಯಾನ್ಸರ್’ಗೆ ಬಲಿಯಾದ ನಂತರ ಅವರ ಅದೆಷ್ಟೋ ಸಂಗೀತ ಸಂಯೋಜನೆಯನ್ನು ಇಡೀ ಕರ್ನಾಟಕಕ್ಕೆ ತಲುಪಿಸುವ ಕೆಲಸ ಮಾಡಿದರು ರಾಜು ಅನಂತಸ್ವಾಮಿ.”ಎದೆ ತುಂಬಿ ಹಾಡಿದೆನು”,”ನಿತ್ಯೋತ್ಸವ”,”ಕುರಿಗಳು ಸಾರ್ ಕುರಿಗಳು”,”ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ”,”ರತ್ನನ ಪದಗಳು”,”ಡಿವಿಜಿ ಅವರ ಕಗ್ಗಗಳು” ಹೀಗೆ ಅನೇಕ ಪ್ರಸಿದ್ಧ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ ರಾಜು ಹೊಸ ಪೀಳಿಗೆಗಳಿಗೂ ತನ್ನ ಸಂಗೀತವನ್ನು ಬಿಟ್ಟು ಹೋಗಿದ್ದಾರೆ.”ಬಡವನಾದರೆ ಏನು ಪ್ರಿಯೆ ಕೈತುತ್ತು ತಿನ್ನಿಸುವೆ..” ಈ ಹಾಡು ಇಷ್ಟವಾಗದವರು ಯಾರೂ ಇಲ್ಲ, ಅದನ್ನು ರಾಜು ಅನಂತಸ್ವಾಮಿ ಬಿಟ್ಟು ಬೇರೊಬ್ಬ ಗಾಯಕ ಹಾಡಿದರೆ ಚೆನ್ನಾಗಿರುತ್ತದೆ ಅಂತಾ ಅನ್ನಿಸುವುದೇ ಇಲ್ಲ. ರಾಜು ಕರ್ನಾಟಕ ಸುಗಮ ಸಂಗೀತ,ಹಿಂದುಸ್ಥಾನಿ ಸಂಗೀತ,ವೆಸ್ಟ್ರನ್ ಸಂಗೀತ ಹೀಗೆ ಎಲ್ಲ ಸಂಗೀತ ಪ್ರಕಾರಗಳಲ್ಲೂ ಅಪಾರ ಜ್ಞಾನ ಹೊಂದಿದ್ದರು. ರಾಜು ಅನಂತಸ್ವಾಮಿಯವರು ಅನೇಕ ಚಲನಚಿತ್ರದಲ್ಲೂ ಹಾಡಿದ್ದಾರೆ.ಅದರಲ್ಲೂ ಪ್ರಮುಖವಾಗಿ ಅಮೆರಿಕಾ ಅಮೆರಿಕಾ ಚಲನಚಿತ್ರದ ಮನೋಮೂರ್ತಿ ಸಂಗೀತ ನಿರ್ದೇಶನದ “ಯಾವ ಮೋಹನ ಮುರಳಿ ಕರೆಯಿತೊ ದೂರ ತೀರಕೆ ನಿನ್ನನು…”ಹಾಡು ಎಲ್ಲ ಕೇಳುಗರನ್ನು ಆವರಿಸುತ್ತದೆ ಮತ್ತು ಭಾವಲೋಕಕ್ಕೆ ಕರೆದೊಯ್ಯುತ್ತದೆ. ಈ ಹಾಡು ರಾಜು ಅನಂತಸ್ವಾಮಿ ಅವರಿಗೆ ಜನಪ್ರಿಯತೆಯನ್ನು ಮತ್ತು ಅನೇಕ ಪ್ರಶಸ್ತಿಯನ್ನು ತಂದುಕೊಟ್ಟಿತು.”ಮಾಧವ ನಿನ್ನ ಕೊರಳಿನ ನಾದವ”,”ಸಂತ ಶಿಶುನಾಳ ಷರೀಫರ ಗೀತೆಗಳು”,ಕುವೆಂಪು ಅವರ “ಎಲ್ಲಾದರು ಎಂತಾದರು ಇರು”,”ಪುರಂದರದಾಸರ ದಾಸ ಪದಗಳು”,”ಡಿವಿಜಿ ಅವರ ಕಗ್ಗ ರಸಧಾರೆಗಳು” ಹೀಗೆ ಅನೇಕ ದಿಗ್ಗಜ ಕವಿಗಳ ಕವನ ಸಂಕಲನಗಳಿಗೆ ಸಂಗೀತ ನೀಡಿ,ಹಾಡಿ ಆಲ್ಬಮ್ ಗಳ ರೂಪದಲ್ಲಿ ಹೊರತಂದರು ರಾಜು.ಹೀಗೆ ರಾಜು ಅನಂತಸ್ವಾಮಿ ಎಂಬ ಮಹಾನ್ ಸಂಗೀತಗಾರನ ಸ್ವರ ಪಯಣ ಸಾಗಿತ್ತು.

ಕವಿತೆಯ ಅರ್ಥ ಮತ್ತು ಭಾವಕ್ಕೆ ತಕ್ಕಂತೆ ಆ ಅರ್ಥಭಾವಗಳು ಹೇಗೆ ಚಲಿಸುತ್ತವೆಯೋ ಹಾಗೇನೇ ಅದಕ್ಕೆ ಸರಿಯಾದ ರೀತಿಯಲ್ಲಿ ಸ್ವರಗಳನ್ನು ಸಂಯೋಜನೆ ಮಾಡಿ ಒಂದು ವಿಲಕ್ಷಣವಾದ ಸಂಗೀತ ಶಾರೀರವನ್ನು ಸಾಹಿತ್ಯಕ್ಕೆ ಅವಿನಾಭಾವದಲ್ಲಿ ನಿರ್ಮಾಣ ಮಾಡಿದರು,ಸಾಹಿತ್ಯ ಮತ್ತು ಸಂಗೀತವನ್ನು ಬೇರ್ಪಡಿಸಲಾಗದ ಅಂಗದ ಹಾಗೆ ಎರಕಗೊಳಿಸಿದರು ಮತ್ತು ಐಕ್ಯಗೊಳಿಸಿದರು ರಾಜು ಅನಂತಸ್ವಾಮಿ. ಮೈಸೂರು ಅನಂತಸ್ವಾಮಿ ಹೇಗೆ ಅನೇಕ ಶಿಷ್ಯಸಮುದಾಯವನ್ನು ಬೆಳೆಸಿದ್ದರೋ ಹಾಗೆಯೇ ರಾಜು ಅನಂತಸ್ವಾಮಿ ಕೂಡ ಅರ್ಚನ ಉಡುಪ,ಪಲ್ಲವಿ ಅರುಣ್,ಸುನೀತ,ಮಂಗಳ,ರಾಣಿ ಅವರಂತಹ ಅನೇಕ ಶಿಷ್ಯೆಯರಿಗೆ ಸಂಗೀತ ಜ್ಞಾನವನ್ನು ಧಾರೆ ಎರೆದರು ಜೊತೆಗೆ ತಮ್ಮ ತಂಗಿಯರಿಬ್ಬರಿಗೂ ಸಂಗೀತ ಪಾಠವನ್ನು ಹೇಳುತ್ತಿದ್ದರು. ಸಂಗೀತ ನಿಂತ ನೀರಾಗಬಾರದು ಅದು ನಿರಂತರವಾಗಿ ಸಾಗುತ್ತಲೇ ಇರಬೇಕೆಂಬುದು ಅವರ ಆಶಯವಾಗಿತ್ತು. ರಾಜು ಅನಂತಸ್ವಾಮಿ ಅವರ ಸಂಗೀತ ಸಂಯೋಜನೆಯ ಹಾಡುಗಳನ್ನು ವೇದಿಕೆಯಲ್ಲಿ ಹಾಡಿಬಂದ ಅನೇಕ ಯುವ ಗಾಯಕರುಗಳಿಗೆ ಅದೇನೋ ಸಾಧನೆ ಮಾಡಿಬಂದ ಅನುಭವವಾಗುತ್ತಿತ್ತು. ಕೇವಲ ಹಾಡೊಂದೇ ಅಲ್ಲದೇ ಸದಾ ನಗುತ್ತ,ನಗಿಸುತ್ತಾ ಬದುಕುತ್ತಿದ್ದ ವ್ಯಕ್ತಿ ರಾಜು ಅನಂತಸ್ವಾಮಿ. ತನ್ನ ಕಷ್ಟವೇನೇ ಇದ್ದರು ಅದನ್ನು ತೋರ್ಪಡಿಸದೇ ಸದಾ ನಗುತ್ತಿದ್ದರು ರಾಜು. ಅನೇಕ ಹಾಸ್ಯ ಧಾರವಾಹಿಗಳಲ್ಲಿ ಮತ್ತು ಚಲನಚಿತ್ರದಲ್ಲಿ ನಟಿಸಿದ್ದ ರಾಜು ತಾನೊಬ್ಬ ಉತ್ತಮ ನಟ ಎನ್ನುವುದನ್ನೂ ನಿರೂಪಿಸಿದ್ದರು. ಸುಗಮ ಸಂಗೀತಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬುದು ಅವರ ದೊಡ್ಡ ಕನಸಾಗಿತ್ತು. ಪರಿಣಾಮ ಮೈಸೂರಿನಲ್ಲಿ “ಶಾಂತಿನಿಕೇತನ” ಎಂಬ ಸಂಗೀತ ಶಾಲೆಯನ್ನು ಆರಂಭಿಸಿದರು ರಾಜು ಅನಂತಸ್ವಾಮಿ. ಮಕ್ಕಳಿಗೆ ತಮ್ಮ ಬಿಡುವಿಲ್ಲದ ಸಮಯವನ್ನೂ ನೀಡುತ್ತಿದ್ದ ರಾಜು ತಂದೆಯ ಹೆಸರನ್ನು ಅಜರಾಮರಗೊಳಿಸಿದ್ದರು. ತಮ್ಮ ತಂದೆಯ ಹೆಸರಲ್ಲಿ ಮೈಸೂರಿನಲ್ಲೊಂದು ಕಲಾಮಂದಿರವನ್ನು ನಿರ್ಮಿಸಬೇಕೆಂಬುದು ಅವರ ಕನಸಾಗಿತ್ತು. ವಿಪರ್ಯಾಸ ಅದು ಕನಸಾಗೆಯೇ ಉಳಿಯಿತು.

ತನ್ನ ರಕ್ತದ ಕಣಕಣದಲ್ಲೂ ಭಾವಗೀತೆಯ ಒಲವು ತುಂಬಿದೆ ಎಂದು ಸಾರಿದ್ದ ರಾಜು ಅನಂತಸ್ವಾಮಿ ಎಂಬ ಜ್ಯೋತಿ ಜನವರಿ 17,2009 ರಂದು ಆರಿಹೋಯಿತು. ತಮ್ಮ 36 ನೇ ವಯಸ್ಸಿನಲ್ಲಿ ಅಪಾರ ಸಂಗೀತ ಪ್ರೇಮಿಗಳನ್ನು ಅಗಲಿದರು ರಾಜು ಅನಂತಸ್ವಾಮಿ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅದೆಷ್ಟೋ ಸಾಧನೆಗಳನ್ನು ಮಾಡಿದ್ದ ರಾಜು ಕನ್ನಡ ಭಾವಗೀತಾ ಲೋಕದ ಅಜರಾಮರ ಎಂದರೆ ತಪ್ಪಾಗಲಾರದು. ಹಾಗಾಗಿಯೇ ಬದುಕಿದ್ದ ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ವಯಸ್ಸಿಗೂ ಮೀರಿದ ಸಾಧನೆ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಿ ನಿಂತವರು ರಾಜು ಅನಂತಸ್ವಾಮಿ.

ಒತ್ತರಿಸಿಕೊಂಡು ಬಂದ ಭಾವದೊರತೆಯ ಮೂಲ ರಾಜು ಅನಂತಸ್ವಾಮಿ ಹಾಡಿದ್ದ “ಎದೆ ತುಂಬಿ ಹಾಡಿದೆನು ಅಂದು ನಾನು….” ಎಂಬ ಹಾಡಾಗಿತ್ತು…ಅದೆಲ್ಲೋ ದೂರಲ್ಲಿದ್ದ ಅಪ್ಪನ ನೆನಪುಗಳಿಗೆ ಜೀವ ಬಂದಿದ್ದು ಅದೇ ರಾಜು ಎಂಬ ಗಾನಗಾರುಡಿಗ ಹಾಡಿದ್ದ ” ಬನ್ನಿ ಹರಸಿರಿ ತಂದೆಯೇ ಆಸೀನರಾಗಿ ಮುಂದೆಯೇ…” ಎಂಬ ಹಾಡಾಗಿತ್ತು. ಭಾವನೆಯ ಜೊತೆಗೆ ಸಾಗುವ ಬದುಕಿನಲ್ಲಿ ಜೊತೆಗಾರನಾಗಿದ್ದು “ಯಾವ ಮೋಹನ ಮುರಳಿ ಕರೆಯಿತು ನಿನ್ನನು….” ಎಂಬ ಭಾವಗೀತೆಯಾಗಿತ್ತು…ನಾನೇ ಸೃಷ್ಟಿಸಿಕೊಂಡ ಈ ಬದುಕಿನ ಬಗ್ಗೆ ನಾನೇ ಪ್ರಶ್ನೆ ಎತ್ತಲು ಶುರು ಮಾಡಿದಾಗ ಮತ್ತೆ ಜೊತೆಯಾದದ್ದು “ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ….” ಎಂಬ ರಾಜು ಹಾಡಿದ್ದ ಗುಂಡಪ್ಪನವರ ಕಗ್ಗ…

ಸರಿದು ಹೋಗುತ್ತಿರುವ ಸಮಯದಲ್ಲಿ ನಿರಂತರವಾಗಿ  ಜೊತೆಯಾಗುತ್ತಿರುವ ಗಾನಗಾರುಡಿಗನಿಗೆ ಅನಂತ ಅಕ್ಷರ ನಮನ…

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!