ಜನ ಅಂದುಕೊಂಡಿದ್ದು ನಿಜ ಆಗಿದೆ. ರಾಘವೇಶ್ವರ ಶ್ರೀಗಳನ್ನು ಷಡ್ಯಂತ್ರ ಮಾಡಿ ಬಲಿಪಶುಮಾಡಲಾಗಿದೆ, ಇದರಲ್ಲಿ ಕೆ.ಜೆ ಜಾರ್ಜ್ ಅವರ ಸ್ಪಷ್ಟ ಕೈವಾಡವಿದೆ ಎನ್ನುವುದು ಶ್ರೀಗಳ ಶಿಷ್ಯವೃಂದದ ಗಾಢ ಅನುಮಾನವಾಗಿತ್ತು. ಕೆಲವರು ನಿಖರವಾಗಿ ಹೌದು ಎನ್ನುತ್ತಿದ್ದರೆ, ಇನ್ನು ಕೆಲವರು ಹೌದಂತೆ ಎನ್ನುತ್ತಿದ್ದರು. ಆದರೆ ಅದು ಯಾವತ್ತೂ ಅಧಿಕೃತ ಸುದ್ದಿಯಾಗಿರಲಿಲ್ಲ. ಗೃಹಸಚಿವರು ಬೇರೆ ಧರ್ಮದವರು, ಶ್ರೀಗಳ ತೇಜೋವಧೆಯಿಂದ ಅವರಿಗೇನು ಲಾಭ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೀಗ ಭಕ್ತರ ಅನುಮಾನ ನಿಜವಾಗುತ್ತಿದೆ. ರಾಘವೇಶ್ವರ ಶ್ರೀಗಳ ಘನತೆಗೆ ಚ್ಯುತಿ ಬರುವಂತೆ ಮಾಡಲು ಗೃಹ ಸಚಿವರ ನೇತೃತ್ವದಲ್ಲಿ ಸರಕಾರವೇ ಆಸಕ್ತಿ ವಹಿಸಿತ್ತು ಎನ್ನುವುದಕ್ಕೆ ಪುರಾವೆಗಳು ಸಿಗಲಾರಂಭಿಸಿದೆ.
ನಕಲಿ ಸಿಡಿ ಪ್ರಕರಣ! ರಾಘವೇಶ್ವರ ಶ್ರೀಗಳ ತೇಜೋವಧೆಗಾಗಿ ನಡೆದ ಮೊದಲ ದೊಡ್ಡ ಮಟ್ಟದ ಪಿತೂರಿ ಅದಾಗಿತ್ತು. ರಾಘವೇಶ್ವರ ಶ್ರೀಗಳ ರಾಮಚಂದ್ರಾಪುರ ಮಠದ ಸುಪರ್ದಿಗೆ ಗೋಕರ್ಣದ ಮಹಾಬಲೇಶ್ವರ ದೇವಾಲಯ ಬಂದಿದ್ದನ್ನು ಗೋಕರ್ಣದಲ್ಲಿ ತಲೆತಲಾಂತರಗಳಿಂದ ಹಣ ಪೀಕುವ ದಂಧೆ ಮಾಡಿಕೊಂಡು ಬಂದವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಇನ್ನು ಇಲ್ಲಿ ತಮ್ಮ ಆಟ ನಡೆಯುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗಲಿಲ್ಲ. ಅದಕ್ಕೆ ತಕ್ಕ ಹಾಗೆ ಶ್ರೀಗಳು ಗೋಕರ್ಣವನ್ನು ಸ್ವಚ್ಚ ಗೋಕರ್ಣ ಮಾಡಲು ಹೊರಟರು. ತಿಥಿ, ಉತ್ತರಕ್ರಿಯೆಯ ನೆಪದಲ್ಲಿ ನಡೆಯುತ್ತಿದ್ದ ದರೋಡೆಗೆ ಕಡಿವಾಣ ಹಾಕಿದರು. ಆವಾಗ ಅಲ್ಲಿನ ಪಟ್ಟಭದ್ರರೊಳಗೆ ಅಸಹಿಷ್ಣತೆ ಭುಗಿಲೆದ್ದು ಜನ್ಮ ತಾಳಿದ್ದೇ ಈ ನಕಲಿ ಸಿಡಿ!
ಶ್ರೀಗಳು ಆವಾಗ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ತಮ್ಮ ಅಸ್ತಿತ್ವಕ್ಕೆ ಭಂಗ ತಂದ ಶ್ರೀಗಳನ್ನು ಗೋಕರ್ಣದಿಂದ ಓಡಿಸಲು ಅಲ್ಲಿನ ಪಟ್ಟಭದ್ರರೆಲ್ಲಾ ಒಂದಾಗಿದ್ದರು. ಗೋಕರ್ಣ ಹಿತರಕ್ಷಣಾ ಸಮಿತಿ ಎನ್ನುವ ತಂಡ ಕಟ್ಟಿಕೊಂಡು ರಾಘವೇಶ್ವರರನ್ನೇ ಹೋಲುವ ವ್ಯಕ್ತಿಯನ್ನು ರೆಡಿ ಮಾಡಿಕೊಂಡು, ಅಗತ್ಯದ ಸೆಟ್ಟಪ್ಪುಗಳನ್ನೆಲ್ಲ ಮಾಡಿಕೊಂಡು ಬ್ಲೂ ಫಿಲಂ ಚಿತ್ರೀಕರಿಸಿದರು. ನಮ್ಮ ಪುಣ್ಯಕ್ಕೆ ಪೋಲೀಸರ ಚಾಣಕ್ಷತೆಯಿಂದ ಸಿಡಿ ಹೊರಜಗತ್ತಿಗೆ ಬರುವ ಮೊದಲೇ ಈ ಷಡ್ಯಂತ್ರ ಬಯಲಾಗಿತ್ತು. ವೆಂಕಟೇಶ್ ಪ್ರಸನ್ನ ಎಂಬ ದಕ್ಷ ಅಧಿಕಾರಿಯ ನೇತೃತ್ವದ ತಂಡ ರಾತ್ರೋ ರಾತ್ರಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿತ್ತು.
ಈ ಪ್ರಕರಣದ ಬಗ್ಗೆ ನಿಮಗೇನನಿಸುತ್ತದೆ? ಗೋಕರ್ಣದ ಆಡಳಿತದ ಹಕ್ಕನ್ನು ಪಡೆದುಕೊಂಡ ಶ್ರೀಗಳನ್ನು “ಅವರ ನಡೆ ಸರಿಯಿಲ್ಲ, ಶುದ್ಧ ಹಸ್ತರಲ್ಲ, ಬ್ಲೂ ಫಿಲಂನಲ್ಲಿ ಸಿಕ್ಕಿ ಬಿದ್ದ ಅವರಿಂದ ಗೋಕರ್ಣ ಆಡಳಿತಕ್ಕೊಳಗಾಗುವುದು ಬೇಡ” ಎನ್ನುವ ಕಾರಣಗಳನ್ನು ನೀಡಿ ಶ್ರೀಗಳನ್ನು ಅಲ್ಲಿಂದ ಓಡಿಸಲು ಮಾಡಿದ ಪ್ರಯತ್ನವಲ್ಲವೇ ಅದು? ಒಬ್ಬ ಪ್ರತಿಷ್ಠಿತ ಧಾರ್ಮಿಕ ಮುಖಂಡನನ್ನು ದುರುದ್ದೇಶಪೂರಿತವಾಗಿ ಬ್ಲೂ ಫಿಲಂನಂತಹ ಗಂಭೀರ ಪ್ರಕರಣವೊಂದರಲ್ಲಿ ಸಿಲುಕಿಸಲು ಯತ್ನಿಸುವುದು ಸಣ್ಣ ತಪ್ಪೇನು? ವ್ಯಕ್ತಿ ಪ್ರತಿಷ್ಟಿತನೇ ಇರಲಿ, ಸಾಮಾನ್ಯನೇ ಇರಲಿ ಅನುಮತಿಯಿಲ್ಲದೇ ಆತನನ್ನೇ ಹೋಲುವಂತಹ ವ್ಯಕ್ತಿಯನ್ನು ಬಳಸಿ, ಅದು ಆತನೇ ಎಂದು ಬಿಂಬಿಸಿ ವಿಡಿಯೋ ಮಾಡುವುದು ಆತನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ. ಒಂದು ವೇಳೆ ಆ ಸಿಡಿ ಹೊರಬರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಶ್ರೀಗಳ ಹೆಸರಿನ ಜೊತೆಗೆ ಜಗತ್ಪ್ರಸಿದ್ಧವಾದ ಗೋಕರ್ಣ ಹೆಸರಿಗೂ ಕಳಂಕ ಬರುತ್ತಿತ್ತು. ಇದೇ ನೋಡಿ ಅವರು ಮಾಡಿದ ಗೋಕರ್ಣದ ಹಿತರಕ್ಷಣೆ!
ಆ ಕಿಡಿಗೇಡಿಗಳ ವಿಷಯ ಆಚೆಗಿಡಿ. ಅವರು ಯಾವ ಉದ್ದೇಶದಿಂದ ಆಥರ ಮಾಡಿದ್ದು, ಅದಾದ ಬಳಿಕ ಅವರು ಏನೆಲ್ಲಾ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಕೇಸು ಹಿಂಪಡೆದ ಸರ್ಕಾರದ ಉದ್ದೇಶವೇನು ಎಂಬುದು ಸ್ಪಷ್ಟವಾಗಬೇಕಾಗಿದೆ. ಪೋಲೀಸ್ ಇಲಾಖೆ ಹಾಗು ಕಾನೂನು ಇಲಾಖೆ ಎರಡೂ ಕೂಡಾ “ಈ ಕೇಸು ವಾಪಾಸ್ ಪಡೆದುಕೊಳ್ಳಲು ಯೋಗ್ಯವಲ್ಲ. ವಾಪಾಸ್ ಪಡೆದುಕೊಂಡರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ” ಎಂದು ಹೇಳಿದರೂ ಕೂಡಾ ಅದನ್ನು ತಿಪ್ಪೆಗೆಸೆದು ಕೇಸು ವಾಪಾಸು ತೆಗೆದುಕೊಂಡಿದ್ದೇಕೆ? ಕೆ.ಜೆ ಜಾರ್ಜ್’ಗೂ ಪ್ರಕರಣಕ್ಕೂ ಏನಾದರೂ ಸಂಬಂಧ ಇದೆಯಾ? ಇಲ್ಲದೇ ಇದ್ದರೆ ಮಹಾನಿರ್ದೇಶಕರೇ ಬೇಡ ಎಂದ ಮೇಲೆ ಸ್ವತಃ ಆಸ್ಥೆ ವಹಿಸಿ ಕೇಸನ್ನು ವಾಪಾಸ್ ಪಡೆಯುವಂತೆ ಆದೇಶ ಹೊರಡಿಸಿದ್ದೇಕೆ? ಒಂದು ಪ್ರಕರಣದ ತನಿಖೆ ವಿಚಾರಣೆಯ ಹಂತದಲ್ಲಿರುವಾಗ ಆ ಕೇಸನ್ನೇ ಕಾರಣ ನೀಡದೆ ಹಿಂತೆಗೆದರೆ ಅದು ಪೋಲೀಸರ ನಿಯತ್ತಿನ, ಚಾಣಾಕ್ಷ ಕೆಲಸಕ್ಕೆ ಮಾಡುವ ಅವಮಾನವಲ್ಲವೇ? ಇನ್ನು ಮುಂದಿನ ಪ್ರಕರಣಗಳಲ್ಲಿ “ನಾವು ಎಷ್ಟು ಮಾಡಿದರೂ ಅಷ್ಟೇ” ಎಂದು ಪೋಲೀಸರ ಧೃತಿ ಕೆಡಿಸಿದಂತಲ್ಲವೇ? ರಾತ್ರೋ ರಾತ್ರಿ ದಾಳಿ ಮಾಡಿ ಸಂಭವನೀಯ ಅನಾಹುತವನ್ನು ತಪ್ಪಿಸಿ ಕೇಡಿಗಳನ್ನು ಹಿಡಿದಿದ್ದಕ್ಕಾಗಿ ವೆಂಕಟೇಶ್ ಪ್ರಸನ್ನ ಮತ್ತವರ ತಂಡಕ್ಕೆ ಹಿಂದಿನ ಗೃಹಮಂತ್ರಿಗಳು ನೀಡಿದ ಬಹುಮಾನ ಇದು!
ನಮಗೆ ಕೆಲವು ಅನುಮಾನಗಳಿವೆ. ಗೋಕರ್ಣ ಹಿತರಕ್ಷಣಾ ಸಮಿತಿಯವರು ಕೇಸೂ ವಾಪಾಸ್ ಮಾಡಿ ಎಂದು ಮನವಿ ಮಾಡಿದ್ದಕ್ಕೆ ಕೇಸು ವಾಪಾಸ್ ಮಾಡಿದರಲ್ಲಾ, ನಾಳೆ ಎಸ್ಸೈ ಜಗದೀಶ್ ಹಂತಕರೂ ಕೂಡಾ ತಮ್ಮ ಮೇಲಿನ ಕೇಸನ್ನು ವಾಪಾಸ್ ಮಾಡಿ ಎಂದು ಮನವಿ ಮಾಡಿದರೆ ಆ ಕೇಸನ್ನು ವಾಪಾಸ್ಸು ಮಾಡುತ್ತಾರಾ ಹಾಗಾದರೆ? ಕಲ್ಬುರ್ಗಿಯವರನ್ನು ಕೊಂದವರನ್ನು ಬಿಟ್ಟು ಬಿಡಿ ಅಂತ ಯಾರಾದರೂ ಮನವಿ ಮಾಡಿದರೆ ಆ ಕೇಸನ್ನೂ ಬಿಟ್ಟು ಬಿಡುತ್ತಾರಾ? ಈ ಥರಾ ಕೇಸು ವಜಾ ಮಾಡಿದರೆ ಅದರಿಂದಾಗುವ ಪರಿಣಾಮ ಎಂತಾದ್ದು ಅಂತ ಯಾರಾದರೂ ಊಹಿಸಿದ್ದಾರಾ? ನಾವೇನು ಮಾಡಿದರೂ ನಡೆಯುತ್ತೆ,ಹೇಳೋರು ಕೇಳೋರು ಯಾರು ಇಲ್ಲ ಎನ್ನುವ ಭಾವನೆ ಬೆಳೆದು ಇನ್ನಷ್ಟು ಅಪರಾಧ ಚಟುವಟಿಕೆಗಳು ಹೆಚ್ಚುವಂತೆ ನೀಡುವ ಪ್ರೇರಣೆಯಲ್ಲವೇ ಇದು? ಪ್ರಬಲ ಸಾಕ್ಷ್ಯವಿರುವ ಪ್ರಕರಣದಲ್ಲೇ ಮಧ್ಯ ಪ್ರವೇಶಿಸಿದ ಸರಕಾರ ಸಾಕ್ಷವೇ ಇಲ್ಲದ ಸುಳ್ಳು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಅಂತ ನಂಬಲು ಸಾಧ್ಯವೇ ಇಲ್ಲ. ಅಷ್ಟೆಲ್ಲ ಬೇಡ, ರಾಘವೇಶ್ವರರ ಮೇಲೆಯೇ ಈಗ ಅತ್ಯಾಚಾರದ ಕೇಸುಗಳು ದಾಖಲಾಗಿವೆ. ಅವರ ಭಕ್ತರೆಲ್ಲರೂ ಸೇರಿ ಆ ಕೇಸುಗಳನ್ನು ವಾಪಾಸ್ ಮಾಡಿ ಎಂದು ಮನವಿ ಮಾಡಿದರೆ ಆ ಕೇಸನ್ನೂ ವಜಾ ಮಾಡುತ್ತಾರಾ???
ಈ ಜಾರ್ಜ್ ಗೃಹಸಚಿವರಾಗಿದ್ದಾಗ ನಡೆದ ಅಧ್ವಾನಗಳು ಒಂದೆರಡಲ್ಲ. ನೇರವಾಗಿ ಹೇಳಬೇಕೆಂದರೆ ಎರಡೂವರೆ ವರ್ಷದಲ್ಲಿ ಆವರು ಮಾಡಿರುವ ಒಳ್ಳೆ ಕೆಲಸಗಳು ದೇವರಾಣೆಗೂ ಒಂದೂ ಇಲ್ಲ. ಆಗಲೇ ಬೇಕಿದ್ದು ಆಗಿಲ್ಲ, ಆಗಬಾರದ್ದೇ ಆಗಿದೆ. ರಾಘವೇಶ್ವರ ಶ್ರೀಗಳ ಮೇಲಿರುವ ಈಗಿನ ಕೇಸುಗಳಲ್ಲೂ ಜಾರ್ಜ್ ಕೈವಾಡವಿರುವುದು ಜಗಜ್ಜಾಹೀರಾಗಿರುವ ತಿಳಿದಿರುವ ಸಂಗತಿ. ಈ ಕೇಸಿನಲ್ಲಿ ಇನ್ನು ಅದ್ಯಾವ ಹಂತದಲ್ಲೆಲ್ಲಾ ತನ್ನ ಪ್ರಭಾವ ಬೀರಿದ್ದಾರೋ, ಕಿಡಿಗೇಡಿಗಳ ಜೊತೆ ಕೈಜೋಡಿಸಿದ್ದಾರೋ ದೇವನೇ ಬಲ್ಲ. ಒಟ್ಟಾರೆಯಾಗಿ ಹಿಂದಿನ ಗೃಹ ಸಚಿವರ ಈ ಎಲ್ಲಾ ಅಧ್ವಾನಗಳು ಪೋಲೀಸ್ ಇಲಾಖೆಯ ಮೇಲಿನ ನಮ್ಮ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ದಕ್ಷ ಅಧಿಕಾರಿಗಳಿದ್ದರೂ ಪೋಲೀಸ್ ಇಲಾಖೆಯ ಮೇಲಿರುವ ವಿಶ್ವಾಸವನ್ನು ಕುಂದಿಸಿದೆ.
ಸರಕಾರ ನಕಲಿ ಸಿಡಿ ಪ್ರಕರಣವನ್ನು ಹಿಂಪಡೆದಂತೆ ಶ್ರೀಗಳ ಮೇಲೆ ದಾಖಲಾಗಿರುವ ಕೇಸುಗಳನ್ನೂ ಹಿಂಪಡೆಯಿರಿ ಅಂತ ಯಾರೂ ಹೇಳುವುದಿಲ್ಲ. ಆದರೆ ಪ್ರಭಾವವನ್ನು ಬಳಸಿ ಸರಕಾರವಾಗಲೀ, ಇನ್ನಿತರ ಯಾವುದೇ ಕೇಡಿಗಳಾಗಲೀ ತನಿಖೆಯಲ್ಲಿ ಹಸ್ತಕ್ಷೇಪ ಮಾಡದಿರಲಿ. ತನಿಖೆ ಯಾವುದೇ ಕಳಂಕವಿಲ್ಲದೆ ನಡೆದು ಸತ್ಯ ಹೊರಬರುವಂತಾಗಲಿ ಎನ್ನುವುದಷ್ಟೇ ನಮ್ಮ ಮನವಿ. ನಮ್ಮ ಈ ಮನವಿಯನ್ನಾದರೂ ಸರಕಾರ ಪುರಸ್ಕರಿಸುತ್ತಾ? ಕಾಲವೇ ಉತ್ತರಿಸಬೇಕು!