ಅಂಕಣ

ನಡುಬೀದಿಯಲ್ಲಿ ಶ್ರೀರಾಮ; ಪುಢಾರಿಗಳು ಮಾತ್ರ ಆರಾಮ

ಮೌಲಾನಾ ಅಬ್ದುಲ್ ಹೈ ಇಸ್ಲಾಮ್ ಮತದ ಬಹಳ ದೊಡ್ಡ ಪಂಡಿತ; ಪ್ರಾಜ್ಞ. ಅಬ್ದುಲ್ ಹೈ ಭಾರತದಲ್ಲಿ ಯಾವ ಯಾವ ಹಿಂದೂ ದೇವಸ್ಥಾನಗಳನ್ನು ಒಡೆದು ಮುಸ್ಲಿಮರು ಮಸೀದಿಗಳನ್ನು ಕಟ್ಟಿಕೊಂಡರು ಎಂಬ ಸಂಶೋಧನೆ ಮಾಡಿ “ಹಿಂದೂಸ್ತಾನಿ ಇಸ್ಲಾಮೀ ಅಹದ್ ಮೆ” ಎಂಬ ಪುಸ್ತಕ ಬರೆದರು. ಇದರ ಕೆಲವು ವಿವರಗಳನ್ನು ನೋಡಿ:

(1) ಕವ್ವತ್ ಅಲ್ ಇಸ್ಲಾಮ್ ಮಸೀದಿ (ದೆಹಲಿ): ದೆಹಲಿಯಲ್ಲಿ ಕಟ್ಟಲ್ಪಟ್ಟ ಮೊದಲ ಮಸೀದಿ ಇದು. ಕುತ್ಬುದ್ದೀನ್ ಐಬಕ್ ಹಿಜರಿ ಶಕೆ 587ರಲ್ಲಿ, ಪ್ರಥ್ವೀರಾಜನಿಂದ ಹಿಂದೆ ಕಟ್ಟಲ್ಪಟ್ಟಿದ್ದ ದೇವಸ್ಥಾನವನ್ನು ಒಡೆದು ಅದೇ ಜಾಗದಲ್ಲಿ ಈ ಮಸೀದಿ ಎಬ್ಬಿಸಿದ. ಹಿ. 592ರಲ್ಲಿ ಆತ ಘಜನಿಯಿಂದ ವಾಪಸು ಬಂದ ಮೇಲೆ ಶಿಹಾಬುದ್ದೀನ್ ಘೋರಿಯ ಆಜ್ಞೆಯ ಮೇರೆಗೆ ದೆಹಲಿಯಲ್ಲಿ ಇನ್ನೊಂದು ದೊಡ್ಡ ಮಸೀದಿ ಕಟ್ಟಿಸಿದ.

(2) ಜೌನ್ಪುರದ ಮಸೀದಿ: ಸುಲ್ತಾನ್ ಇಬ್ರಾಹಿಮ್ ಶಾರಕಿ ಎಂಬವನು ಅತ್ಯಂತ ಬೆಲೆಬಾಳುವ ಕಲ್ಲುಗಳನ್ನು ಬಳಸಿ ಕಟ್ಟಿದ್ದು.  ಮೊದಲು ದೇವಸ್ಥಾನವಾಗಿತ್ತು. ಈಗ ಇದನ್ನು ಅಟಾಲಾ ಮಸೀದಿ ಎಂದೂ ಕರೆಯುತ್ತಾರೆ.

(3) ಕನೌಜದ ಮಸೀದಿ: ಹಿಂದೂ ದೇವಸ್ಥಾನವನ್ನು ಒಡೆದು ಅದೇ ಜಾಗದಲ್ಲಿ ಹಿ. 809ರಲ್ಲಿ ಇಬ್ರಾಹಿಂ ಶಾರಕಿಯಿಂದ ಕಟ್ಟಲ್ಪಟ್ಟ ಮಸೀದಿ. ಇದರ ಕೆಳಗಿನ ಅರ್ಧಭಾಗ ಇನ್ನೂ ಹಿಂದೂ ದೇವಾಲಯದಂತೆಯೇ ಇದೆ.

(4) ಎತ್ವಾದ ಜಾಮಿ ಮಸೀದಿ: ಯಮುನಾ ನದಿಯ ತಟದಲ್ಲಿ ಎದ್ದು ನಿಂತಿದ್ದ ಒಂದು ಭವ್ಯ ಹಿಂದೂ ದೇವಸ್ಥಾನವನ್ನು ಕೆಡವಿ ಅದರ ಮೇಲೆ ಕಟ್ಟಿದ ಕಟ್ಟಡ.

(5) ಅಯೋಧ್ಯೆಯ ಬಾಬ್ರಿ ಮಸೀದಿ: ಹಿಂದೂಗಳ ಆರಾಧ್ಯದೈವ ಶ್ರೀರಾಮಚಂದ್ರ ಹುಟ್ಟಿದ ಸ್ಥಳ. ಇಲ್ಲಿ ಸೀತಾಮಾತೆಯ ದೇವಸ್ಥಾನ ಇತ್ತು.  ಈ ಜಾಗದಲ್ಲಿ ಹಳೆಯ ಅರಮನೆ, ದೇವಸ್ಥಾನಗಳನ್ನು ಕೆಡವಿಹಾಕಿ ಬಾಬರ್ ಹಿ. 963ರಲ್ಲಿ ಕಟ್ಟಿದ ಮಸೀದಿ.

(6) ಕಾಶೀ ಮಸೀದಿ: ಕಾಶಿಯಲ್ಲಿದ್ದ  ಬಿಶೇಶ್ವರ (ವಿಶ್ವೇಶ್ವರ) ದೇವಸ್ಥಾನ ಒಂದು ಕಾಲದಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದ ಹಿಂದೂ ಧಾರ್ಮಿಕ ನೆಲೆ. ದೇವಸ್ಥಾನದ ಗೋಪುರ ಬಹು ಎತ್ತರವಾಗಿತ್ತು. ದೇವಸ್ಥಾನವನ್ನು ಒಡೆದುಹಾಕಿ ಅದರ ಬೆಲೆಬಾಳುವ ಕಲ್ಲುಗಳನ್ನೇ ಬಳಸಿ ಬನಾರಸ್ ಮಸೀದಿಯನ್ನು ಔರಂಗಜೇಬ ಕಟ್ಟಿಸಿದ.

(7) ಮಥುರೆಯ ಮಸೀದಿ: ಮಥುರೆಯ ಗೋವಿಂದ ದೇವ ದೇವಸ್ಥಾನವನ್ನು ಒಡೆದು ಅದರ ಪಂಚಾಂಗದ ಮೇಲೆ ಔರಂಗಜೇಬ ಕಟ್ಟಿಸಿದ್ದು.

ಇವೆಲ್ಲ ಇತಿಹಾಸದಲ್ಲಿ ದಾಖಲಾಗಿ ಹೋಗಿರುವ ಸತ್ಯಗಳು.

ಫುತುಹುಲ್ ಬುಲ್ದಾನ್ (ಬರೆದವನು: ಅಹ್ಮದ್ ಬಿನ್ ಯಾಹ್ಯಾ ಬಿನ್ ಜಬೀರ್), ತರಿಖ್-ಇ-ತಬರಿ (ಅಬು ಜಾಫರ್ ಮುಹಮ್ಮದ್ ಬಿನ್ ಜರೀರ್), ತರಿಖುಲ್-ಹಿಂದ್ (ಅಬು ರಿಹಾನ್ ಮುಹಮ್ಮದ್ ಬಿನ್ ಅಹ್ಮದ್ ಅಲ್ಬರೂನಿ ಅಲ್ಖ್ವಾರಿಜ್ಮಿ), ಕಿತಾಬುಲ್ ಯಮಿನಿ (ಅಬು ನಾಸಿರ್ ಮುಹಮ್ಮದ್ ಇಬ್ನ್ ಮುಹಮ್ಮದ್ ಅಲ್ ಜಬ್ಬರೂಲ್ ಉತಬಿ), ದಿವಾನ್-ಇ-ಸಲ್ಮಾನ್ (ಕವಾಜಾಹ್ ಮಸೂದ್ ಬಿನ್ ಸಾದ್ ಬಿನ್ ಸಲ್ಮಾನ್), ಚಾಚ್-ನಮಹ್ (ಮುಹಮ್ಮದ್ ಅಲ್ ಬಿನ್ ಹಮೀದ್ ಬಿನ್ ಅಬು ಬಕ್ರ್ ಕೂಫಿ), ಜಮಿಉಲ್-ಹಿಕಾಯತ್ (ಮೌಲಾನಾ ನೂರುದ್ದೀನ್ ಮುಹಮ್ಮದ್ ಉಫಿ), ತಜೂಲ್-ಮಾಸಿರ್ (ಸದ್ರೂದ್ದಿನ್ ಮುಹಮ್ಮದ್ ಹಸನ್ ನಿಜಾಮಿ), ಕಮಿಲೂತ್-ತವಾರಿಖ್ (ಇಬ್ನ್ ಆಸಿರ್) ಹೀಗೆ ಇಸ್ಲಾಮೀ ಇತಿಹಾಸಕಾರರೇ ಬರೆದಿರುವ ನೂರಾರು ಪುಸ್ತಕಗಳು ಜಗತ್ತಿನಲ್ಲಿ ಎಷ್ಟೆಲ್ಲ ಹಿಂದೂ, ಜೊರಾಷ್ಟ್ರಿಯನ್, ಯಹೂದಿ, ಕ್ರಿಶ್ಚಿಯನ್ ಮತ-ಧರ್ಮಗಳ ಶ್ರದ್ಧಾಕೇಂದ್ರಗಳನ್ನು ಒಡೆದು, ಕೆಡವಿ ಮಸೀದಿಗಳನ್ನು ಎಬ್ಬಿಸಲಾಯಿತು ಎಂಬ ವಿಸ್ತಾರವಾದ ಮಾಹಿತಿ ಕೊಡುತ್ತವೆ.

ಈ ಇತಿಹಾಸವನ್ನು ಬರೆದವರು ಬ್ರಾಹ್ಮಣರಲ್ಲ, ಹಿಂದೂಗಳಲ್ಲ.  ಬದಲು ಮುಸ್ಲಿಮರೇ.  ಅದೂ ಕೂಡ ಎಂಥವರು? ರಾಜ ಮಹಾರಾಜರಿಗೆ ಆಸ್ಥಾನ ವಿದ್ವಾಂಸರಾಗಿ ಸೇವೆ ಮಾಡಿದವರು. ಉದಾಹರಣೆಗೆ, ಮೌಲಾನಾ ಅಬ್ದುಲ್ ಹೈ, ತಬರಿ, ಸಲ್ಮಾನ್, ಅಬು ಬಕ್ರ್ ಕೂಫಿ, ಇಬ್ನ್ ಆಸೀರ್ ಮೊದಲಾದವರು ಇಸ್ಲಾಮಿಕ್  ಚರಿತ್ರೆಯ ಅತ್ಯಂತ ಅಥೆಂಟಿಕ್ ವಿದ್ವಾಂಸರು ಎಂದು ಹೆಸರು ಮಾಡಿದವರು. ಫುತುಹುಲ್ ಬುಲ್ದಾನ್ ಎಂಬ ಇತಿಹಾಸ ಕೃತಿ ಬರೆದ ಜಬೀರ್ ಎಂಬಾತ ಖಲೀಫಾ ಅಲ್-ಮುತವಕ್ಕಲ್ ಎಂಬ ಖಲೀಫ (ಚಕ್ರವರ್ತಿ) ನ ಆಸ್ಥಾನ ವಿದ್ವಾಂಸನಾಗಿದ್ದ. ಅಲ್ಬರೂನಿ ಅಲ್-ಖ್ವಾರಿಜ್ಮಿ ಮುಹಮ್ಮದ್ ಘಜಿನಿಯ ಕಾಲದಲ್ಲಿ 40 ವರ್ಷಗಳನ್ನು ಭಾರತದಲ್ಲಿ ಕಳೆದ ಚರಿತ್ರಕಾರ. ಮಿಫತೂಲ್-ಫುತುಹ್, ನುಹ್ ಸಿಫಿರ್ ಎಂಬ ಗ್ರಂಥಗಳನ್ನು ಬರೆದ ಅಮೀರ್ ಖುಸ್ರೊ ತನ್ನ ಇಡೀ ಜೀವನವನ್ನು ರಾಜ-ಮಹಾರಾಜರ ಆಸ್ಥಾನ ಕವಿಯಾಗಿ ವೈಭವೋಪೇತವಾಗಿ ಕಳೆದವನು. “ರೆಹಾಲ” ಎಂಬ  ಪುಸ್ತಕ ಬರೆದ ಇಬ್ನ್ ಬತ್ತೂತ ಎಂಬವನು ಸ್ಪೇನ್ ದೇಶದಿಂದ ಭಾರತಕ್ಕೆ ಬಂದು ಮುಹಮ್ಮದ್ ಬಿನ್ ತುಘಲಕ್’ನ ರಾಜಾಶ್ರಯ ಪಡೆದು ದೇಶವನ್ನೆಲ್ಲ ಸುತ್ತಿ ಸಿಕ್ಕಸಿಕ್ಕ ಹಿಂದೂ ಮತ್ತು ಮುಸ್ಲಿಮ್ ಹುಡುಗಿಯರನ್ನು ಮದುವೆಯಾಗಿ ಸುಖ ಅನುಭವಿಸಿದ ಮೇಲೆ ತಲ್ಲಾಖ್ ಕೊಟ್ಟು, ಒಟ್ಟಲ್ಲಿ ತನ್ನ ಇಡೀ ಜೀವನವನ್ನು ಭಾರತದಲ್ಲಿ ಖುಷಿಯಾಗಿ ಕಳೆದು ತನ್ನ ಹುಟ್ಟೂರಿಗೆ ಹೊರಟುಹೋದ ಇನ್ನೊಬ್ಬ ವಿದ್ವಾಂಸ. ಇವರಲ್ಲಿ ಹೆಚ್ಚಿನವರು ಹಿಂದೂ ದೇವಸ್ಥಾನಗಳನ್ನು ಮಸೀದಿಯಾಗಿ ಪರಿವರ್ತಿಸಿದ್ದನ್ನೂ, ಮೂರ್ತಿ ಪೂಜೆ ಮಾಡುತ್ತಿದ್ದ ಹಿಂದೂಗಳನ್ನು ಜೀವಂತ ಸುಟ್ಟದ್ದನ್ನೂ, ಹೊಸ  ಊರುಗಳಿಗೆ ದಂಡೆತ್ತಿ ಹೋಗಿ ಮುಸ್ಲಿಮ್ ಸುಲ್ತಾನರು ಅಲ್ಲಿನ ಮನೆಮಠಗಳನ್ನು ಕೆಡವಿ ಹಾಕುತ್ತಿದ್ದದ್ದನ್ನೂ, ಅವರ ಸೈನಿಕರು ಮೂರ್ನಾಲ್ಕು ದಿನಗಳ ಕಾಲ ಸಿಕ್ಕ ಸಿಕ್ಕ ಹೆಂಗಸರನ್ನು ಭೋಗಿಸಿ ಎಸೆಯುತ್ತಿದ್ದದ್ದನ್ನೂ ಹೆಮ್ಮೆಯ ವಿಷಯವೆಂಬಂತೆ ವರ್ಣಿಸುತ್ತಾ ಹೋಗುತ್ತಾರೆ. “ತಜೂಲ್ ಮಾಸಿರ್” ಎಂಬ ಕೃತಿಯಲ್ಲಿ ಚರಿತ್ರಕಾರ ಹಸನ್ ನಿಜಾಮಿ ಎಂಬವನು ಅಜ್ಮೀರ್, ಕುಹ್ರಮ್ (ಪಂಜಾಬ್), ಮೀರತ್, ದೆಹಲಿ, ವಾರಾಣಸಿ, ಅಲಿಘಡ, ಬಯಾನ (ರಾಜಸ್ಥಾನ), ಕಾಲಿಂಜರ್ (ಉತ್ತರ ಪ್ರದೇಶ) ಗಳಲ್ಲಿ ದೇವಸ್ಥಾನಗಳ ಕೆಡವುವಿಕೆ, ವಿಗ್ರಹಭಂಜನೆ, ದೇವಸ್ಥಾನಗಳ ಜಾಗದಲ್ಲಿ ಮಸೀದಿ ಸ್ಥಾಪನೆ ಆದದ್ದರ ಬಗ್ಗೆ ವಿಸ್ತೃತವಾದ ವಿವರಗಳನ್ನು ಕೊಡುತ್ತಾ ಹೋಗುತ್ತಾನೆ.

ಕೆಲವು ಗ್ರಂಥಗಳಲ್ಲಿ ಬರುವ ಒಂದಷ್ಟು ವಿವರಗಳನ್ನು ನೋಡಿ:

(1) ಮುಹಮ್ಮದ್ ಬಿನ್ ಖಾಸಿಮ್ ಕ್ರಿಶ 712ರಿಂದ 715ರವರೆಗೆ ಸಿಂಧ್ ಪ್ರಾಂತ್ಯವನ್ನು ಆಳಿದ. ಈ ಕಾಲದಲ್ಲಿ ದೆಬಾಲ್ ಎಂಬ (ಸಿಂಧ್) ಪ್ರಾಂತ್ಯವನ್ನು ವಶಪಡಿಸಿಕೊಂಡಾಗ ಆತನ ಸೈನಿಕರು ಮೂರು ದಿನಗಳವರೆಗೆ ಸಿಕ್ಕಸಿಕ್ಕ ಆಸ್ತಿಗಳನ್ನೆಲ್ಲ ಲೂಟಿ ಮಾಡಿದರು. ಇವರ ಕ್ರೌರ್ಯಕ್ಕೆ  ಹೆದರಿ ಆ ಪ್ರಾಂತ್ಯದ ಮಾಂಡಲಿಕ ಜೀವ ಉಳಿಸಿಕೊಳ್ಳಲು ಓಡಿಹೋಗಬೇಕಾಯಿತು. ದೇವಸ್ಥಾನಗಳಲ್ಲಿದ್ದ  ಅರ್ಚಕರನ್ನು ಬರ್ಬರವಾಗಿ ಕೊಚ್ಚಿಹಾಕಲಾಯಿತು. ದೇಗುಲವನ್ನು ಕೆಡವಿ ಅದನ್ನು ಮುಂದೆ ಭವ್ಯವಾದ ಮಸೀದಿಯಾಗಿ ಕಟ್ಟಲಾಯಿತು. ಖಾಸಿಮನು ಅಲ್ಲಿ 4000 ಮುಸಲ್ಮಾನರನ್ನು ಬಿಟ್ಟುಹೋದನು. ಅವರೇ ಆ ಪ್ರಾಂತ್ಯದ ವಾರಸುದಾರರಾಗಿ ಎಲ್ಲ ಆಸ್ತಿಯನ್ನು ಭೋಗಿಸಿದರು. ಮುಂದೆ ಅಲ್ಲಿ ಪ್ರಾಂತ್ಯಾಧ್ಯಕ್ಷನಾಗಿ ಬಂದ ಇಶಾಕ್ ಅಜ್ ಜಬ್ಬಿ ಎಂಬವನ ಮಗ ಊರಲ್ಲಿದ್ದ ದೇವಸ್ಥಾನದ ಗೋಪುರವನ್ನು ಒಡೆದು ಸೆರೆಮನೆಯಾಗಿ ಪರಿವರ್ತಿಸಿದನು – “ಫುತುಹುಲ್ ಬುಲ್ದಾನ್”ನಲ್ಲಿ.

(2) ಮುಲ್ತಾನ್ (ಪಂಜಾಬ್) ಪ್ರಾಂತ್ಯದ ಜನರ ಮುಖ್ಯದೇವತೆ ಆದಿತ್ಯ. ಮುಹಮ್ಮದ್ ಇಬ್ನ್ ಅಲ್ಕಾಸಿಮ್ ಇಬ್ನ್ ಅಲ್ಮುನೈಭ್ ಎಂಬ ಮುಸ್ಲಿಮ್ ರಾಜ ಈ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ ಆತನಿಗೆ ಪ್ರಶ್ನೆಯಾಗಿ ಕಾಡಿದ್ದೇನೆಂದರೆ ಅಲ್ಲಿನ ಜನತೆ ಶ್ರೀಮಂತರಾಗಿ ಉಳಿದದ್ದು ಹೇಗೆ ಎಂಬುದು. ಕೊನೆಗೆ ಅವನಿಗೆ ಅವಕ್ಕೆಲ್ಲ ಮೂಲ ಅಲ್ಲಿನ ದೇವಸ್ಥಾನವೇ ಎನ್ನುವುದು ತಿಳಿಯಿತು. ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಜನ ಇಲ್ಲಿನ ದೇವಸ್ಥಾನಕ್ಕೆ ಬಂದು ತಮ್ಮ ಸಂಪತ್ತನ್ನೆಲ್ಲ ಸುರಿಯುತ್ತಿದ್ದರು. ಇದನ್ನು ನೋಡಿದ ರಾಜನಿಗೆ ಅಲ್ಲೊಂದು ಮಸೀದಿ ಕಟ್ಟಿಸುವ ಆಸೆಯಾಯಿತು. ಆತ, ದೇವಸ್ಥಾನದ ಮೂರ್ತಿಯ ಮೇಲೆ ಹಸುವಿನ ಮಾಂಸದ ಹಾರ ಹಾಕಿಸಿ, ಅದೇ ಜಾಗದಲ್ಲಿ ಮಸೀದಿಯನ್ನು ಎಬ್ಬಿಸಿದ. ಅಲ್ಲಿನ ಅರ್ಚಕರನ್ನು ಊರಾಚೆ ಓಡಿಸಲಾಯಿತು. ಮುಂದೆ ಜಲಾಮ್ ಇಬ್ನ್ ಶೈಬಾನ್ ಎಂಬವನು ಮುಲ್ತಾನ್ ಪ್ರಾಂತ್ಯದ ರಾಜನಾಗಿ ಬಂದಾಗ, ಆತ ಆ ಮೂರ್ತಿಯನ್ನು ಒಡೆಸಿ ಹೊರಗೆಸೆದುಬಿಟ್ಟನು. – “ತರಿಖುಲ್-ಹಿಂದ್” ಕೃತಿಯಲ್ಲಿ.

(3) ಸೋಮ ಎಂದರೆ ಚಂದ್ರ. ಸೋಮನಾಥ ಎಂದರೆ ಚಂದ್ರನ ಅಧಿಪತಿ, ಒಡೆಯ ಎಂದರ್ಥ. ಮುಸ್ಲಿಮರಿಗೆ ಚಂದ್ರನೇ ಅಧಿದೇವತೆಯಾದ್ದರಿಂದ, ಅವನ ಒಡೆಯನಾದ ಸೋಮನಾಥ ಖಂಡಿತವಾಗಿಯೂ ಮುಸ್ಲಿಮರ ವೈರಿಯಾಗಲೇಬೇಕು. ಹೀಗೆ ಯೋಚಿಸಿದ ಮುಹಮ್ಮದ್ ಘಜಿನಿ, ಗುಜರಾತಿನಲ್ಲಿದ್ದ ಸೋಮನಾಥ ದೇವಸ್ಥಾನದ ಮೇಲೆ ದಾಳಿ ಮಾಡುವ ಯೋಚನೆ ಮಾಡಿದ. ಅಲ್ಲದೆ ಅಲ್ಲಿನ ಚಿನ್ನದ ಲಿಂಗ ಜಗದ್ವಿಖ್ಯಾತವಾಗಿತ್ತು. ಮುಹಮ್ಮದ ಆ ಲಿಂಗದ ಮೇಲಿದ್ದ ಚಿನ್ನದ ಲೇಪನವನ್ನು ತೆಗೆಸಿ, ಅದರ ಮೇಲಿನ ಭಾಗವನ್ನು ಬಲವಂತವಾಗಿ ಒಡೆಸಿ ಘಜಿನಿಗೆ ಒಯ್ದ. ಅಲ್ಲಿ ಕಟ್ಟಿದ ಜಾಮಿ ಮಸೀದಿಯ ಹೊರಗಿನ ಮೆಟ್ಟಿಲಿಗೆ ಆ ಕಲ್ಲನ್ನು ಹಾಕಿದ. ಮಸೀದಿಯೊಳಗೆ ಬಂದುಹೋಗುವ ಜನ ತಮ್ಮ ಕೊಳಕು ಕಾಲುಗಳನ್ನು ಆ ಕಲ್ಲಿಗೆ ಉಜ್ಜಿ ಶುಚಿಗೊಳಿಸಿಕೊಳ್ಳಬೇಕೆಂಬುದು ಅವನ ಇಚ್ಛೆಯಾಗಿತ್ತು. ಅದೇ ರೀತಿ (ಈಗಿನ ಹರ್ಯಾಣದಲ್ಲಿರುವ) ಥಾನೇಶರ್ ಎಂಬಲ್ಲಿದ್ದ ಚಕ್ರೇಶ್ವರ ಎಂಬ ದೇವತೆಯ ಕಂಚಿನ ಮೂರ್ತಿಯನ್ನು ಒಡೆದು ಜಾಮಿ ಮಸೀದಿಯ ಮೆಟ್ಟಿಲಿಗೆ ಹಾಕಿದ. – “ತರಿಖುಲ್-ಹಿಂದ್” ಕೃತಿಯಲ್ಲಿ.

(4) ಘಜಿನಿಯ ಮುಹಮ್ಮದ್ ಸುಲ್ತಾನ (ಪಂಜಾಬಿನ) ನಾಡಿರ್ನ್ ಎಂಬ ಪ್ರಾಂತ್ಯದ ಎಲ್ಲ ಜನರಿಗೆ ಬಲವಂತವಾಗಿ ಸುನ್ನತ್ ಮಾಡಿಸಿ ಮುಸಲ್ಮಾನ ಮತಕ್ಕೆ ಬದಲಾಯಿಸಿದ. ಹಿಂದ್ (ಸಿಂಧ್) ಪ್ರಾಂತ್ಯದ ಜನ ನೂರಾರು ಬಗೆಯ ದೇವತೆಗಳನ್ನು ಪೂಜಿಸುತ್ತಿದ್ದದ್ದು ಅವನ ಮೈ ಉರಿಸಿತು. ಅಲ್ಲದೆ ವಿಗ್ರಹಾರಾಧನೆಯೂ ಜೋರಾಗಿಯೇ ನಡೆದಿತ್ತು. ಇವನ್ನೆಲ್ಲ ಬಗ್ಗುಬಡಿಯಬೇಕೆಂದು ಆತ (ಕ್ರಿಶ 1013ರಲ್ಲಿ) ಒಂದು ದಿನ ರಾತ್ರಿಯ ಕತ್ತಲೆಯಲ್ಲಿ ಹೊರಟು ಆ ಪ್ರಾಂತ್ಯದ ಮೇಲೆ ಮುಗಿಬಿದ್ದ. ಸಂಜೆಯ ನಂತರ ಶಸ್ತ್ರ ಹಿಡಿಯಬಾರದೆಂಬ ನಿಯಮ ಪಾಲಿಸುತ್ತಿದ್ದ ಜನ ಸುಲಭವಾಗಿ ಸೆರೆಯಾದರು. ಸಿಂಧ್ ಪ್ರಾಂತ್ಯದ ಒಂದು ದೇವಸ್ಥಾನದಲ್ಲಿ ಒಂದು ದೊಡ್ಡ ಬುದ್ಧನ ಪ್ರತಿಮೆ ಕಾಣಲು ಸಿಕ್ಕಿತು. ಅಲ್ಲಿದ್ದ  ಒಂದು ತಾಮ್ರಪತ್ರದಲ್ಲಿ ಈ ದೇವಸ್ಥಾನ 50,000 ವರ್ಷಗಳ ಹಿಂದೆ ಕಟ್ಟಲ್ಪಟ್ಟಿತು ಎಂಬ ಮಾತು ಇತ್ತು. ಇದನ್ನು ನೋಡಿ ಸುಲ್ತಾನ ಅಲ್ಲಿನ ಜನರ ಹೆಡ್ಡತನಕ್ಕೆ ಮನಸಾರೆ ನಕ್ಕ. ಯಾಕೆಂದರೆ ಆತನ ಪ್ರಕಾರ ಜಗತ್ತು ಹುಟ್ಟಿ ಕೇವಲ 700 ವರ್ಷಗಳು ಮಾತ್ರ ಆಗಿದ್ದವು. ಹಾಗಿರುವಾಗ ಇಂಥ ವಿಚಿತ್ರ ಹೇಳಿಕೆಗಳನ್ನು ಬರೆಯುವುದು ಸರಿಯೇ ಎಂದು ಬಗೆದ ಸುಲ್ತಾನ ಅಲ್ಲಿನ ದೇವಸ್ಥಾನವನ್ನು ಭಗ್ನಗೊಳಿಸಿದ. – “ಕಿತಾಬುಲ್ ಯಮಿನಿ”ಯಲ್ಲಿ.

(5) ಸುಲ್ತಾನ ಜಲಾಲುದ್ದೀನ್ ಖಲ್ಜಿ (ಆಡಳಿತ: ಕ್ರಿಶ 1290-96), ಝೈನ್ (ರಾಜಸ್ಥಾನ) ಎಂಬಲ್ಲಿಗೆ ಬಂದು ತನ್ನ ಸಾಮಂತರಾಜನ ಆಶ್ರಯ ಪಡೆದನು. ಮೊದಲ ದಿನ ವಿಶ್ರಾಂತಿ ಪಡೆದು ಎರಡನೇ ದಿನ ನಗರಪ್ರದಕ್ಷಿಣೆ ಮಾಡಲು ಹೊರಟನು. ಆಗ ಅವನಿಗೆ ಅಲ್ಲಿ ಎಲ್ಲೆಲ್ಲೂ ಎದ್ದುನಿಂತಿದ್ದ ಗುಡಿಗೋಪುರಗಳೂ ಅವುಗಳಲ್ಲಿ ನಡೆಯುತ್ತಿದ್ದ ವಿಗ್ರಹಾರಾಧನೆಗಳೂ ಕಣ್ಣು ಕುಕ್ಕಿದವು. ಸುಲ್ತಾನ ಅವೆಲ್ಲಾ ಕಟ್ಟಡಗಳನ್ನೂ ನಾಶ ಮಾಡಲು ಆಜ್ಞೆ ಮಾಡಿದ. ದೇವಸ್ಥಾನಗಳಲ್ಲಿ ಸಂಗ್ರಹವಾಗಿದ್ದ ಮುತ್ತು-ರತ್ನಗಳನ್ನೂ, ವಿಗ್ರಹಗಳ ಮೇಲಿದ್ದ ಚಿನ್ನವನ್ನೂ ಮೊದಲು ತೆಗೆದು ನಂತರ ಅವೆಲ್ಲಾ ಕಟ್ಟೋಣಗಳನ್ನೂ ಕೆಡವಲಾಯಿತು. ಒಂದು ದೇವಸ್ಥಾನದಲ್ಲಿ ಸಿಕ್ಕ ಎರಡು ಕಂಚಿನ ಪ್ರತಿಮೆಗಳನ್ನು ಜರುಗಿಸಲು ಹರಸಾಹಸ ಪಡಬೇಕಾಯಿತು. ಅವುಗಳಲ್ಲೊಂದು ಪ್ರತಿಮೆ ಸುಮಾರು ಒಂದು ಸಾವಿರ ಮಣಗಳಷ್ಟು ಭಾರವಿತ್ತು. ಕೊನೆಗೆ ಅವುಗಳನ್ನು ಮುರಿದು ತೆಗೆಯಬೇಕಾಯಿತು. ಅದರ ಒಂದೊಂದು ತುಂಡುಗಳನ್ನೂ ಸುಲ್ತಾನ ಸೈನಿಕರಿಗೆ ಬಹುಮಾನವಾಗಿ ಹಂಚಿದನು. – “ಮಿಫತೂಲ್-ಫುತುಹ್” ಎಂಬ ಕೃತಿಯಲ್ಲಿ ಅಮೀರ್ ಖುಸ್ರೊ.

(6) ಮುಹಮ್ಮದ್ ಬಿನ್ ತುಘಲಕ್ (ಆಡಳಿತ: ಕ್ರಿಶ 1325-1351) ಜೆಹಾದ್ಅನ್ನು ಅತ್ಯಂತ ಪವಿತ್ರ ಕಾರ್ಯ ಎಂದು ನಂಬಿದ ದೊರೆ. ಅದಕ್ಕಾಗಿ ನೆಲ ಅಥವಾ ಜಲಮಾರ್ಗಗಳನ್ನು ಬಳಸಬೇಕಾಗಿ ಬಂದರೆ ಹಿಮ್ಮೆಟ್ಟಿದವನೇ ಅಲ್ಲ. ಈತನ ಕಾಲದಲ್ಲಿ ಐದು ಅತಿದೊಡ್ಡ ಹಿಂದೂ ದೇವಾಲಯಗಳು ಧರಾಶಾಯಿಯಾದವು. ಬುದ್ಧನ ವಿಗ್ರಹ ಎಲ್ಲೆಲ್ಲಿ ಕಂಡಿತೋ ಅಲ್ಲೆಲ್ಲ ಅವನ್ನು ಭಗ್ನಗೊಳಿಸಿದ. ನೂರಾರು ಮಸೀದಿಗಳನ್ನು ನಿರ್ಮಿಸಿದ. ಮುಸಲ್ಮಾನ್ ಮತವನ್ನು ಸ್ವೀಕರಿಸಲು ಒಪ್ಪದವರನ್ನು ಬಲಾತ್ಕಾರವಾಗಿ ಅವರ ಜಮೀನುಗಳಿಂದ ಓಡಿಸಲಾಯಿತು. ಇಡೀ ರಾಜ್ಯದಲ್ಲಿ ಸಂಗೀತ-ನೃತ್ಯ-ನಾಟಕಗಳು ನಿಷೇಧವಾದವು. ಅಲ್ಲಾಹ್ನಿಗೆ ಮಾಡುವ ಪ್ರಾರ್ಥನೆಯೊಂದೇ ಸಕ್ರಮ, ಮಿಕ್ಕ ಮನೋರಂಜನೆಗಳೆಲ್ಲ ಅಕ್ರಮವೆಂಬ ಭಾವನೆ ಸುಲ್ತಾನನದಾಗಿತ್ತು. – “ಮಸಲಿಕೂಲ್ ಅಬ್ಸಾರ್ ಫಿ ಮಮಲಿಕೂಲ್ ಅಂಸಾರ್” ಕೃತಿಯಲ್ಲಿ ಶಿಹಾಬುದ್ದೀನ್ ಅಬುಲ್ ಅಬ್ಬಾಸ್ ಅಹ್ಮದ್ ಬಿನ್ ಯಾಹ್ಯಾ

(7) ಸುಲ್ತಾನ್ ಫಿರೂಜ್ ಷಾ ತುಘಲಕ್ (ಕ್ರಿಶ 1351 – 1388) ಬನಾರಸ್ ಅನ್ನು ಬಿಟ್ಟಮೇಲೆ ಜಾಜ್ ನಗರದ ರಾಣಿಯನ್ನು ವಶಪಡಿಸಿಕೊಳ್ಳಬೇಕೆಂದು ಬಗೆದ. ಆದರೆ, ಆತನನ್ನು ಓಡಿಸಲು ಅಲ್ಲಿನ ಜನ ಅರಣ್ಯದಲ್ಲಿದ್ದ ಏಳು ಆನೆಗಳನ್ನು ತಂದುಬಿಟ್ಟಿದ್ದರು. ಅವನ್ನು ತನ್ನ ಜನರಿಂದ ಹಿಡಿಸಿ ಬಂಧಿಸಿದ ಮೇಲೆ ಸುಲ್ತಾನ ಜಾಜ್ ನಗರದ ಕೋಟೆ ಪ್ರವೇಶಿಸಿದ. ಅಲ್ಲಿಯ ಅರಮನೆ, ದೇವಸ್ಥಾನಗಳನ್ನು ನೋಡಿದ ಆತ ಹುಚ್ಚನೇ ಆಗಿಬಿಟ್ಟ. ಈ ಪ್ರಾಂತ್ಯದಲ್ಲಿ ಜನ ಜಗನ್ನಾಥ (ಪುರಿ) ಎಂಬ ದೇವರನ್ನು ಆರಾಧಿಸುತ್ತಿದ್ದರು. ಸುಲ್ತಾನ ಇಲ್ಲಿನ ವಿಗ್ರಹವನ್ನು ತೆಗೆಸಿ ದೆಹಲಿಗೆ ಸಾಗಿಸಿ, ಅಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇರಿಸಿದ. – “ತರೀಖ್-ಇ-ಫಿರುಜ್” ಎಂಬ ಗ್ರಂಥದಲ್ಲಿ ಸಿರಾಜ್ ಅಲೀಫ್ ಎಂಬವನು ಬರೆದ ಸಾಲುಗಳು. ಇದೇ ಗ್ರಂಥದಲ್ಲಿ ಇನ್ನೊಂದು ಕಡೆ ಆತ ಫಿರೂಜ್ ಷಾ ತುಘಲಕ್, ತನ್ನ ರಾಜ್ಯದಲ್ಲಿದ್ದ ಒಬ್ಬ ಧರ್ಮಭೀರು ಬ್ರಾಹ್ಮಣನನ್ನು ಹೇಗೆ ಆಸ್ಥಾನದಲ್ಲಿ ಸುಟ್ಟ ಎಂದು ವಿವರಿಸುತ್ತಾನೆ. ಆ ಬ್ರಾಹ್ಮಣ, ರಾಜ್ಯದಲ್ಲಿ ವಿಗ್ರಹಪೂಜೆಗೆ ನಿಷೇಧವಿದ್ದರೂ ಧೈರ್ಯದಿಂದ ತನ್ನ ಮನೆಯಲ್ಲಿ ವಿಗ್ರಹಾರಾಧನೆ ಮಾಡುತ್ತಿದ್ದನಂತೆ. ಈ ಸುದ್ದಿ ಕಿವಿಯಿಂದ ಕಿವಿಗೆ ಹಬ್ಬಿ ಕೊನೆಗೆ ಸುಲ್ತಾನನನ್ನು ತಲುಪಿತು. ಇಂಥ ಕಾಫೀರನಿಗೆ ಏನು ಶಿಕ್ಷೆ ಎಂದು ಆತ ತನ್ನ ಆಸ್ಥಾನ ಪಂಡಿತರನ್ನು ಕೇಳಿದ. ಅವರು ಒಂದೋ ಆತ ಮುಸಲ್ಮಾನನಾಗಬೇಕು ಇಲ್ಲವೇ ಸಜೀವದಹನ ಮಾಡಬೇಕು ಎಂದು ಸಲಹೆ ಕೊಟ್ಟರಂತೆ. ಬ್ರಾಹ್ಮಣನನ್ನು  ಹಿಡಿದು ಆಸ್ಥಾನಕ್ಕೆ ಎಳೆದುತರಲಾಯಿತು. ಆತನಿಗೆ ರಾಜಾಜ್ಞೆಯನ್ನು ಓದಿಹೇಳಿದಾಗ ಆತ ಯಾವ ಕಾರಣಕ್ಕೂ ತಾನು ಧರ್ಮಭ್ರಷ್ಟನಾಗುವುದಿಲ್ಲ ಎಂದು ಹಠ ಹಿಡಿದ. ಆತನನ್ನು ಕೊನೆಗೆ ಎಲ್ಲರ ಸಮ್ಮುಖದಲ್ಲಿ (ಗ್ರಂಥ ಬರೆದ ಸಿರಾಜ್ ಅಲೀಫ್ ಕೂಡ ಅಲ್ಲಿದ್ದ) ಆಸ್ಥಾನದಲ್ಲೇ, ಆತನ ವಿಗ್ರಹವನ್ನು ಎರಡು ತುಂಡು ಮಾಡಿ ತಲೆಗೂ ಕಾಲಿಗೂ ಕಟ್ಟಿ, ಕೊನೆಗೆ ಬೆಂಕಿ ಹಚ್ಚಿ ಸುಡಲಾಯಿತು.

ಮುಸ್ಲಿಮ್ ಮತ ಪ್ರಪಂಚದಾದ್ಯಂತ ಅತ್ಯಂತ ಶೀಘ್ರವಾಗಿ ಹಬ್ಬುತ್ತ ಹೋಗಲು ಈ ಅನ್ಯಧರ್ಮಗಳ ಮೇಲಿನ ಅಸಹಿಷ್ಣುತೆಯೂ ಪ್ರಮುಖ ಕಾರಣವಾಗಿತ್ತು. ಇಸ್ಲಾಂ ಮತ ಮತ್ತು ಹಿಂದೂ ಧರ್ಮಗಳಿಗಿರುವ ಪ್ರಮುಖ ವ್ಯತ್ಯಾಸ ಏನೆಂದರೆ, ಹಿಂದೂ ಧರ್ಮ ಬಹುದೇವೋಪಾಸನೆಯನ್ನು ಪುರಸ್ಕರಿಸುತ್ತದೆ. ಜೊತೆಗೆ “ಸತ್ಯವೊಂದೇ, ಆದರೆ ವಿಪ್ರರು ಹಲವು ಬಗೆಯಲ್ಲಿ ಹೇಳುತ್ತಾರಷ್ಟೆ” ಎಂದೂ ಹೇಳುತ್ತದೆ. ಆದರೆ, ಇಸ್ಲಾಂ ಮತ  ಏಕದೇವೋಪಾಸನೆಯನ್ನು ಪುರಸ್ಕರಿಸುತ್ತದೆ; ಜೊತೆಗೆ ಅದನ್ನು ಒಪ್ಪದವರನ್ನು ನಾಶ ಮಾಡು ಎಂದೂ ಹೇಳುತ್ತದೆ. ತನ್ನ ಮತದವರು ಏನನ್ನು ಪಾಲಿಸಬೇಕು ಮತ್ತು ಅವುಗಳನ್ನು ಪಾಲಿಸದ ಅನ್ಯಧರ್ಮೀಯರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಎರಡು ಬಗೆಯ ಪಾಠಗಳನ್ನು ಅದು ಬೋಧಿಸಿದ್ದರಿಂದ, ಇಸ್ಲಾಂ ಮತೀಯರಲ್ಲಿ ಮುಸ್ಲಿಮರಲ್ಲದವರಲ್ಲಿ ಹೇಗೆ ವ್ಯವಹರಿಸಬೇಕೆಂಬ ವಿಷಯದಲ್ಲಿ ಸ್ಪಷ್ಟತೆ ಮೂಡಿತು. ಇಸ್ಲಾಂ  ಪ್ರಕಾರ, ಅದರ ಮತಾಚರಣೆಗಳನ್ನು ಮಾಡದವರೆಲ್ಲ ಕಾಫಿರರು. ಅವರನ್ನು ಕಂಡಲ್ಲಿ ಕೊಲ್ಲಬೇಕು ಇಲ್ಲವೇ ಬಲಾತ್ಕಾರವಾಗಿಯಾದರೂ ಇಸ್ಲಾಂಗೆ ಮತಾಂತರಿಸಬೇಕು – ಈ ಬೋಧನೆ ಅವರ ಮತಗ್ರಂಥದಲ್ಲೇ ಸಿಗುತ್ತದೆ. ಹಾಗಾಗಿ ಇಸ್ಲಾಮಿ ರಾಜರುಗಳಿಗೆ ಅನ್ಯಧರ್ಮದ ಶ್ರದ್ಧಾಕೇಂದ್ರಗಳನ್ನು ಒಡೆದು ಅವುಗಳ ಮೇಲೆ ತಮ್ಮ ಪ್ರಾರ್ಥನಾ ಮಂದಿರಗಳನ್ನು ಕಟ್ಟಿಕೊಳ್ಳುವುದರಲ್ಲಿ ಯಾವ ಸಂದಿಗ್ಧವೂ ಏಳಲಿಲ್ಲ. ಬೌದ್ಧಸ್ತೂಪಗಳು, ಹಿಂದೂ ದೇವಸ್ಥಾನಗಳು, ಯಹೂದಿ ಸಿನಗಾಜ್ಗಳು ಪ್ರಪಂಚದಾದ್ಯಂತ ಕಟ್ಟಾ ಮುಸ್ಲಿಮ್ ಮತೀಯ ದೊರೆಗಳ ಕೈಯಲ್ಲಿ ಒಡೆಯಲ್ಪಟ್ಟು ಮಸೀದಿಗಳಾದದ್ದು ಇದೇ ಕಾರಣಕ್ಕೆ.

ಇಸ್ಲಾಮ್  ಮತ ಪ್ರವರ್ಧಮಾನಕ್ಕೆ ಬರುವ ಮೊದಲು ಕಾಬಾ, ಅರೇಬಿಯದ ಹಲವು ಬುಡಕಟ್ಟುಗಳ ನೂರಾರು ದೇವರ ಮೂರ್ತಿಗಳಿದ್ದ ಒಂದು ಶ್ರದ್ಧಾಕೇಂದ್ರವಾಗಿತ್ತು. ಆದರೆ ಪ್ರವಾದಿ ಮುಹಮ್ಮದರು ಆ ಎಲ್ಲ ಬುಡಕಟ್ಟು ದೇವತೆಗಳನ್ನು ತೆಗೆದುಹಾಕಿ ಏಕದೇವೋಪಾಸನೆಯನ್ನು ಜಾರಿಗೆ ತಂದರು. ಹೀಗೆ ಇಸ್ಲಾಮ್ ಮತದಲ್ಲಿ ಮೊತ್ತಮೊದಲ ಬಾರಿಗೆ ಬೇರೆ ಧಾರ್ಮಿಕ ಭಾವನೆಗಳ ಮೇಲೆ ಸವಾರಿ ಮಾಡುವ, ಬೇರೆ ಮತಗಳ ದೇವರನ್ನು ಕಿತ್ತುಹಾಕಿ ಇಸ್ಲಾಮೀಕರಣ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು. ಮುಂದೆ ಇಸ್ಲಾಮ್ ಮತ ಕಾಡ್ಗಿಚ್ಚಿನಂತೆ ಉಳಿದೆಲ್ಲ ದೇಶಗಳಿಗೆ ಹರಡತೊಡಗಿದಾಗ, ಅದನ್ನು ಪ್ರಚಾರ ಮಾಡುವ ಜವಾಬ್ದಾರಿ ಹೊತ್ತವರು ಮಾಡಿದ ಕೆಲಸ ಒಂದೇ – ತಾವು ಹೋದೆಡೆಗಳಲ್ಲಿ ಮೊದಲು ಅಲ್ಲಿನ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡಿದ್ದು; ಅವನ್ನು ಕೆಡವಿಹಾಕಿ ಮಸೀದಿ ಕಟ್ಟಿದ್ದು. ಯಹೂದಿಗಳಿಗೆ ಅತ್ಯಂತ ಪವಿತ್ರ ಬೆಟ್ಟವಾದ ಟೆಂಪಲ್ ಮೌಂಟ್ ಎಂಬಲ್ಲಿ ಮುಸ್ಲಿಮರು ಅಲ್-ಅಖಸಾ ಮಸೀದಿ ಕಟ್ಟಿದರು. ಸಿರಿಯದಲ್ಲಿ ಜಾಬ್’ನ ಚರ್ಚ್ ಇದ್ದದ್ದನ್ನು ಕೆಡವಿ ಅದೇ ಪಂಚಾಂಗದ ಮೇಲೆ ಮಸೀದಿ ಎಬ್ಬಿಸಲಾಯಿತು. ಯಹೂದಿಗಳ ಎರಡನೇ ಅತ್ಯಂತ ಪವಿತ್ರ ಕ್ಷೇತ್ರವಾದ ಕೇವ್ ಆಫ್ ಪೇಟ್ರಿಯಾರ್ಕ್ಸ್ ಎಂಬಲ್ಲಿ ಕ್ರಿಶ್ಚಿಯನ್ನರು  ಚರ್ಚ್ ಕಟ್ಟಿದರು. ಅದನ್ನು ಕ್ರಿಶ 1266ರಲ್ಲಿ ಮುಸ್ಲಿಮರು ಆಕ್ರಮಿಸಿ, ಮಸೀದಿ ಕಟ್ಟಿ ಆ ಜಾಗಕ್ಕೆ ಯಹೂದಿಗಳಿಗೂ ಕ್ರಿಶ್ಚಿಯನ್ನರಿಗೂ ಪ್ರವೇಶ ಇಲ್ಲ ಎಂದು ಕಾನೂನು ತಂದರು!

ಭಾರತದಲ್ಲಿ ಮುಸ್ಲಿಮ್ ಅರಸೊತ್ತಿಗೆ ಕೆಡವಿದ ಹಿಂದೂ ದೇವಸ್ಥಾನಗಳಿಗೆ ಲೆಕ್ಕವೇ ಇಲ್ಲ.  ಮುಹಮ್ಮದ್ ಘಜನಿಯಿಂದ ಶುರುವಾದ ಈ ದಾಳಿ ಕಾರ್ಯ ಇಂದಿಗೂ ಒಂದಿಲ್ಲೊಂದು ರೂಪದಲ್ಲಿ ಮುಂದುವರಿದಿದೆ. ಶಿವಮೊಗ್ಗದಲ್ಲೇ ಕಳೆದ ತಿಂಗಳು ನಡೆದ ಒಂದು ಘಟನೆ – ಹಿಂದೂ ಯುವಕನೊಬ್ಬ ದೇವಸ್ಥಾನ ಕಟ್ಟುವುದಕ್ಕೆ ನಿಷೇಧ ಹೇರಬೇಕೆಂದು, ಇಲ್ಲವಾದರೆ ಸಮಾಜದ ಸ್ವಾಸ್ಥ್ಯ ಕದಡಬಹುದೆಂದು ಮುಸ್ಲಿಮ್ ಸಂಘಟನೆಗಳು ಸರಕಾರೀ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ದೇವಸ್ಥಾನ ಕಟ್ಟಬಹುದೇ ಬೇಡವೇ ಎಂದು ಮುಸ್ಲಿಮರು ಸರ್ಟಿಫಿಕೇಟು ಕೊಡಬೇಕಾದ ಪರಿಸ್ಥಿತಿ ಬಂದಿದೆ! ಸೀತಾರಾಮ ಗೋಯೆಲ್ ಎಂಬವರು “ಹಿಂದೂ ಟೆಂಪಲ್ಸ್ – ವಾಟ್ ಹ್ಯಾಪನ್ಡ್ ಟು ದೆಮ್?” ಎಂಬ ಕೃತಿಯಲ್ಲಿ, ಭಾರತದಲ್ಲಿರುವ ಒಟ್ಟು 2000 ಮಸೀದಿಗಳ ಅಡಿಪಾಯಗಳು ಇರುವುದು ಹಿಂದೂ ದೇವಸ್ಥಾನಗಳ ಮೇಲೆ ಎಂಬ ಮಾತು ಬರೆದಿದ್ದಾರೆ. ಭಾರತದ ಆರ್ಕಿಯಾಲಜಿ ವಿಭಾಗ ಉತ್ತರಪ್ರದೇಶದಲ್ಲಿರುವ ಬಾಬರಿ ಮಸೀದಿಯ ಸುತ್ತಮುತ್ತ ಉತ್ಖನನ ನಡೆಸಿದಾಗ, ಅದರಡಿಯಲ್ಲಿ ಹಿಂದೂ ದೇವಸ್ಥಾನ ಇದ್ದದ್ದು ಖಚಿತಪಟ್ಟಿದೆ. 1940ರ ಹಿಂದೆ, ಈ ಮಸೀದಿಯನ್ನು “ಮಸ್ಜೀದ್-ಇ-ಜನ್ಮಸ್ಥಾನ್” ಎಂದೂ ಕರೆಯಲಾಗುತ್ತಿತ್ತು! ಇಲ್ಲಿನ ಮಣ್ಣಿನಲ್ಲಿ ಸಿಕ್ಕಿರುವ ಕೆಲವು ದಾಖಲೆಗಳು ಇಲ್ಲಿ ಕ್ರಿಸ್ತಪೂರ್ವ 17ನೇ ಶತಮಾನದಲ್ಲಿಯೂ ಮಾನವ ವಸತಿ ಇತ್ತು ಎಂದು ಹೇಳುತ್ತಿದೆ! 1986ರ ಎನ್ಸೈಕ್ಲೋಪೀಡಿಯ ಬ್ರಿಟಾನಿಕದಲ್ಲಿ “ರಾಮನ  ಜನ್ಮ ಸ್ಥಳವನ್ನು ಇದೀಗ ಮಸೀದಿಯೊಂದು ಆಕ್ರಮಿಸಿಕೊಂಡಿದೆ. ರಾಮನ  ಜನ್ಮಸ್ಥಳದಲ್ಲಿ ನಿಂತಿದ್ದ ಭವ್ಯವಾದ ದೇವಸ್ಥಾನವನ್ನು ಕ್ರಿಶ 1528ರಲ್ಲಿ ಕೆಡವಿ ಬಾಬರ್ ಎಂಬ ರಾಜ ಮಸೀದಿ ಕಟ್ಟಿಸಿದ” ಎಂದು ಬರೆಯಲಾಗಿದೆ.

ಸೆಕ್ಯುಲರ್ ಬುದ್ಧಿಜೀವಿಗಳು ಬರೆದ ಭಾರತದ ಇತಿಹಾಸದಲ್ಲಿ ಮುಘಲ್ ದೊರೆಗಳನ್ನು ದೇವರೇ ಕಳಿಸಿದ ಜನಸೇವಕರು ಎಂಬಂತೆ ಚಿತ್ರಿಸಲಾಗಿದೆ. ಆದರೆ ಈ ವಂಶದಲ್ಲಿ ಬಂದ ಒಬ್ಬೊಬ್ಬ ರಾಜನೂ ಹಿಂದೂ ದೇವಸ್ಥಾನಗಳನ್ನು ಕೆಡವಿ ಮಸೀದಿ ಎಬ್ಬಿಸುವುದರಲ್ಲೇ ಮಗ್ನನಾಗಿದ್ದ ಎಂಬ ಸತ್ಯ ನೈಜಚರಿತ್ರೆ ಓದುವವರ ಕಣ್ಣಿಗೆ ರಾಚುತ್ತದೆ. ಈ ವಂಶದಲ್ಲಿ ಬರುವ ಜಹಾಂಗೀರ್ ತನ್ನ ತುಜುಕ್-ಇ-ಜಹಾಂಗೀರಿಯಲ್ಲಿ, ಬನಾರಸ್’ನಲ್ಲಿ ರಾಜಾ ಮೌನ್ಸಿಂಗ್ ಎಂಬವನು 65 ಲಕ್ಷ ರುಪಾಯಿ ಖರ್ಚು ಮಾಡಿ ಕಟ್ಟಿದ್ದ ಅತ್ಯಂತ ವೈಭವೋಪೇತವಾದ ದೇವಸ್ಥಾನವನ್ನು ಉರುಳಿಸಿ ಅದೇ ಅಡಿಪಾಯದ ಮೇಲೆ, ಅದರದ್ದೇ ಬೆಲೆಬಾಳುವ ಕಲ್ಲುಗಳನ್ನು ಬಳಸಿ ಹೇಗೆ ತಾನು ಮಸೀದಿ ಕಟ್ಟಿದೆ ಎಂದು ನಿರ್ಲಜ್ಜನಾಗಿ ಹೇಳಿಕೊಳ್ಳುತ್ತಾನೆ. ಫಿರೂಜ್ ಷಾ ತುಘಲಕ್ (ಮುಹಮ್ಮದ್ ಬಿನ್ ತುಘಲಕನ ಮಗ), ಮಲುಹ್ ಎಂಬ ಊರಲ್ಲಿ ಜಾತ್ರೆ ನಡೆಯುವ ವಿಷಯ ತಿಳಿದಾಗ, ಅಲ್ಲಿಗೆ ಹೋಗಿ, ನೂರಾರು ಜನರನ್ನು ಕೊಂದು ದೇವಸ್ಥಾನಗಳನ್ನು ನೆಲಸಮ ಮಾಡಿ, ಇಡೀ ಪ್ರಾಂತ್ಯದಲ್ಲಿ ಒಂದೂ ದೇವಸ್ಥಾನ ಉಳಿಸದಂತೆ ಮಾಡಿದ್ದನ್ನು ತನ್ನ ಫುತುಹತ್-ಇ-ಫಿರೂಜ್ ಶಾಹಿ” ಎಂಬ ಕೃತಿಯಲ್ಲಿ ದೊಡ್ಡ ಸಾಧನೆಯೆಂಬಂತೆ ಬರೆದುಕೊಂಡಿದ್ದಾನೆ. ಮುಘಲ್ ವಂಶದ ಮೂಲಪುರುಷ ಬಾಬರ್, ತನ್ನ “ಬಾಬರ್ ನಾಮಾ” ಎಂಬ ಆತ್ಮಕತೆಯಲ್ಲಿ ಮಧ್ಯಪ್ರದೇಶದ ಚಂದೇರಿ, ಧಾರ್, ಗ್ವಾಲಿಯರ್, ದೆಹಲಿ, ಗುಜರಾತಿನ ವಿಜಾಪುರ್, ಮಲಾನ್, ಕರ್ನಾಟಕ ಮಾನ್ವಿ ಮುಂತಾದ ಕಡೆಗಳಲ್ಲಿ ತನ್ನ ಪ್ರಯತ್ನದಿಂದಾಗಿ ಹಿಂದೂ ದೇವಸ್ಥಾನಗಳು ನಾಮಾವಶೇಷವಾಗಿ ಅಲ್ಲೆಲ್ಲ ಮಸೀದಿಗಳು ತಲೆ ಎತ್ತಿದ್ದನ್ನು ಬರೆದುಕೊಂಡಿದ್ದಾನೆ. ಭಾರತದ ಇತಿಹಾಸ ಇಂಥ ಹತ್ತುಹಲವು ಹಳವಂಡಗಳ ವ್ಯಥೆಯ ಕತೆ. ಹಿಂದೂಗಳ ಭಾವನೆಗಳನ್ನು ಅತ್ಯಂತ ತೀವ್ರವಾಗಿ ಘಾಸಿಗೊಳಿಸಬೇಕಾದರೆ ಅವರ ದೇವಸ್ಥಾನಗಳನ್ನು ತುಂಡು ಮಾಡಬೇಕು ಎಂದು ಮುಸ್ಲಿಮರು ಬಗೆದಿದ್ದರು. ಅಲ್ಲದೆ, ಅದಕ್ಕೆ ಅವರ ಮತಗ್ರಂಥದ ಬೆಂಬಲವೂ ಇತ್ತು. “ಜಗತ್ತಿನಲ್ಲಿ ಇರುವ ಮತ ಇಸ್ಲಾಂ ಒಂದೇ. ಹಾಗಾಗಿ ಬೇರೆ ಮತ-ಧರ್ಮಗಳಿಗೆ ಸೇರಿದ ಯಾವ ಶ್ರದ್ಧಾಕೇಂದ್ರವನ್ನು ಒಡೆದು ಮಸೀದಿ ಕಟ್ಟಿದರೂ ಅದು ಇಸ್ಲಾಮ್’ನ ಮರುಸ್ಥಾಪನೆ ಮಾತ್ರ” ಎಂದು ಖುರಾನ್ ಹೇಳುತ್ತದೆ! ಆದರೆ, ನಮ್ಮ ದೇಶದ ಮುಸ್ಲಿಮ್ ರಾಜರು ಬುದ್ಧಿವಂತರು. ತಾವು ದೇವಸ್ಥಾನಗಳನ್ನು ಕೆಡವಲಿಕ್ಕೂ ಯಾವಾವುದೋ ಅದ್ಭುತ ಕಾರಣಗಳನ್ನು ಹುಡುಕಿಕೊಳ್ಳುತ್ತಿದ್ದರು.

ಮುಸ್ಲಿಮ್ ರಾಜರುಗಳ ಕೈಯಲ್ಲಿ ಕೆಡವಲ್ಪಟ್ಟ ಒಂದಷ್ಟು ದೇವಸ್ಥಾನಗಳ ಉದಾಹರಣೆಗಳನ್ನು ಮತ್ತು ಅವರು ದೇವಸ್ಥಾನಗಳನ್ನು ಕೆಡವಲು ಹುಡುಕುತ್ತಿದ್ದ ಕಾರಣಗಳನ್ನು ನೋಡಿ:

*  1478ರಲ್ಲಿ ಬಹಮನಿ ಸುಲ್ತಾನ ಆಂಧ್ರಪ್ರದೇಶಕ್ಕೆ ದಂಡೆತ್ತಿ ಹೋದಾಗ, ಅಲ್ಲಿನ ಕೋಟೆಗಳನ್ನು ಮುತ್ತಿಗೆ ಹಾಕಿ, ಅಲ್ಲಿದ್ದ ದೇವಸ್ಥಾನಗಳನ್ನು ಕೆಡವಿ ಅಲ್ಲೆಲ್ಲ   ಮಸೀದಿಗಳನ್ನು ಎಬ್ಬಿಸಿದ.

* ಮಹಾರಾಷ್ಟ್ರದಲ್ಲಿ ಶಿವಾಜಿಯ ತಂದೆ ಷಹಾಜಿ, ಆದಿಲ್ ಶಾಹಿಗಳಿಗೆ ತಲೆಬಾಗಿ ಆಡಳಿತ ಮಾಡುತ್ತಿದ್ದವನೆಂಬುದು ನಮಗೆ ಗೊತ್ತು. ಆದರೆ   ಆತ್ಮಾಭಿಮಾನದ ಸಿಡಿಲಮರಿ ಶಿವಾಜಿ, ಹೀಗೆ ಮುಸ್ಲಿಮ್ ದೊರೆಗಳಿಗೆ ಅಡಿಯಾಳಾಗಿರಲು ಬಯಸದೆ ಕೊಂಕಣ ಪ್ರಾಂತ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಜಾಪುರದ ರಾಜ್ಯವನ್ನು ಕಟ್ಟಿಹಾಕಿದಾಗ, ಆದಿಲ್ ಶಾಹಿಗಳು ತಮ್ಮ ಬಲಗೈ ಬಂಟ ಅಫ್ಜಲ್’ಖಾನನ್ನು ಶಿವಾಜಿಯ ಜೊತೆ ಕಾದಾಡಲು ಕಳಿಸಿದರು. ಆದರೆ ಈ ಬಿಜಾಪುರದ ಸೇನಾಧಿಕಾರಿ ನೇರವಾಗಿ ಶಿವಾಜಿಯ ಜೊತೆ ಯುದ್ಧ ಮಾಡುವ ಬದಲು, ತುಳಜಾಪುರಕ್ಕೆ ಹೋಗಿ ಅಲ್ಲಿ ಶಿವಾಜಿ ಮತ್ತು ಆತನ ಕುಟುಂಬ ಭಕ್ತಿಯಿಂದ ಪೂಜಿಸುತ್ತಿದ್ದ ಭವಾನಿ ಮಂದಿರವನ್ನು ಕೆಡವಿ ಹಾಕಿದ!

* ಮುಘಲ್ ದೊರೆ ಜಹಾಂಗೀರ್ ಮಾಡಿದ ಬಾನಗಡಿಗಳು ಕಮ್ಮಿಯೇನಲ್ಲ. 1613ರಲ್ಲಿ ಅಜ್ಮೀರ್’ನ ಹತ್ತಿರದ ಪುಷ್ಕರ್ ಎಂಬಲ್ಲಿದ್ದ ಒಂದು ದೇವಸ್ಥಾನದ ವರಾಹ ಮೂರ್ತಿಯನ್ನು ಈತ ಭಗ್ನಗೊಳಿಸಿದ. ಕಾರಣ? ಆ ದೇವಾಲಯವನ್ನು ಕಟ್ಟಿಸಿದ್ದ ಕಿಮ್ಮತ್ತು ಕೊಡುತ್ತಿರಲಿಲ್ಲ ಎನ್ನುವುದು!

* ಜಹಾಂಗೀರ್ ನ ಮಗ ಷಹಜಾನ್ ಕೂಡ ದೇವಸ್ಥಾನಗಳ ನಾಶವನ್ನು ಕರ್ತವ್ಯ ಎನ್ನುವಂತೆ ಮಾಡಿದವನೆ. ರಾಜಾ ಜಝ್ಹಾರ್ ಸಿಂಗ್ ಎಂಬವನು ತನ್ನ ವಿರುದ್ಧ ದಂಗೆ ಎದ್ದ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಷಹಜಾನ್ 1635ರಲ್ಲಿ ಓರ್ಛಾ ಎಂಬಲ್ಲಿದ್ದ ದೇವಸ್ಥಾನವನ್ನು ಪುಡಿಗುಟ್ಟಿದ.

* ಶಿವಾಜಿಯನ್ನು ಬನಾರಸ್’ನಲ್ಲಿ ಕೂಡಿ ಹಾಕಿದಾಗ ಆತ ಜೈಸಿಂಗ್ ಎಂಬ ರಾಜನ ನೆರವಿನಿಂದ ಪಾರಾದ ಕತೆ ಗೊತ್ತಿರಬಹುದು. ಶಿವಾಜಿಯನ್ನು ಬಂಧಿಸಿಟ್ಟಿದ್ದವನು ಷಹಜಾನ್’ನ ಮಗ ಔರಂಗಜೇಬ. ತನ್ನ ಕೈಯಿಂದ ವೈರಿ ತಪ್ಪಿಸಿಕೊಂಡು ಹೋದನೆಂಬ ಕೋಪದಲ್ಲಿ ಔರಂಗಜೇಬ ಕಾಶಿ ವಿಶ್ವನಾಥ ದೇವಸ್ಥಾನವನ್ನು ಕೆಡವಿ ಹಾಕಲು ಆದೇಶ ನೀಡಿದ. ಅದಕ್ಕೂ ಇದಕ್ಕೂ ಏನು ಸಂಬಂಧ ಅಂತೀರಿ? ಶಿವಾಜಿಗೆ ನೆರವಾದ ಜೈಸಿಂಗ್, ಕಾಶಿ ದೇವಸ್ಥಾನವನ್ನು ಕಟ್ಟಿದನೆಂಬ ಪ್ರತೀತಿ ಇರುವ ರಾಜಾ ಮಾನ್ಸಿಂಗ್ ಎಂಬವನ ಮರಿಮೊಮ್ಮಗ ಎಂಬುದಷ್ಟೇ!

* ಈ ಔರಂಗಜೇಬ ಎಂಥಾ ತಿಕ್ಕಲು ವ್ಯಕ್ತಿಯಾಗಿದ್ದನೆಂದರೆ, ತನ್ನ ರಾಜ್ಯದ ವಿರುದ್ಧ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮಥುರೆಯಲ್ಲಿ ಕಾಣಿಸಿಕೊಂಡ ಎಂಬ ಕಾರಣ ಮುಂದಿಟ್ಟುಕೊಂಡು 1670ರಲ್ಲಿ ಅಲ್ಲಿನ ಕೇಶವ ದೇವ ಮಂದಿರವನ್ನು ಉರುಳಿಸಿಹಾಕಲು ಆದೇಶ ನೀಡಿದ್ದ!

ಇನ್ನೂ ತಮಾಷೆ ನೋಡಿ –  

ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸರಕಾರ ದೆಹಲಿಯಲ್ಲಿ ಔರಂಗಜೇಬನ ಹೆಸರಿನಲ್ಲಿದ್ದ ರಸ್ತೆಗೆ ಅಬ್ದುಲ್ ಕಲಾಂ ಅವರ ಹೆಸರಿಡುವ ನಿರ್ಧಾರ  ಕೈಗೊಂಡಿತ್ತಷ್ಟೆ? ಅಷ್ಟರಲ್ಲೇ ಇದುವರೆಗೆ ಕಾಂಗ್ರೆಸ್’ನ ಕೈಯಿಂದ ಹಾಲುಬೆಣ್ಣೆ ತಿಂದಿದ್ದ ಬುದ್ಧಿಜೀವಿ ಇತಿಹಾಸಕಾರರು ಆಕಾಶವೇ ಕಳಚಿ ಬಿದ್ದಂತೆ ಕೂಗಾಡತೊಡಗಿದರು. ಇರ್ಫಾನ್ ಹಬೀಬ್’ನಂಥ ಖೊಟ್ಟಿ ಇತಿಹಾಸ ತಜ್ಞರು ರಾಷ್ಟ್ರಪತಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲು ತಯಾರಾಗಿಬಿಟ್ಟರು. ಆದರೆ, ಇದೇ ಔರಂಗಜೇಬ ಒಂದಾನೊಂದು ಕಾಲದಲ್ಲಿ ಅಫಘಾನಿಸ್ತಾನದ ಬಾಮಿಯಾನ್ ಬುದ್ಧನ ಮೂರ್ತಿಯನ್ನೂ ಕೆಡವಿಹಾಕಲು ಆದೇಶ ಕೊಟ್ಟಿದ್ದ ಎನ್ನುವುದನ್ನು ಮಾತ್ರ ಈ ಎಲ್ಲ ಪಂಡಿತರೂ ಜಾಣತನದಿಂದ ಮರೆತುಬಿಟ್ಟರು. 2011ರಲ್ಲಿ ಇದೇ ಬುದ್ಧನ ಮೂರ್ತಿಗಳನ್ನು ಕೆಡವಲು ನೂರಾರು ಟನ್ ಸ್ಫೋಟಕಗಳನ್ನು ಬಳಸಿದ ತಾಲಿಬಾನ್ ಉಗ್ರರಿಗೂ ಔರಂಗಜೇಬನಿಗೂ ಏನು ವ್ಯತ್ಯಾಸ?

ನಮ್ಮ ದೇಶದ ಚರಿತ್ರೆ ನಿಜವಾಗಿಯೂ ರಕ್ತಸಿಕ್ತ. ನಮ್ಮ ದೇಶದ ಮೇಲೆ ಕ್ರಿಶ ಏಳನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನದವರೆಗೂ ನಡೆದಿರುವ ಅತ್ಯಾಚಾರಗಳು ಅಸಂಖ್ಯಾತ. ಕಟ್ಟುವುದಕ್ಕಿಂತ ಕೆಡವುವುದರಲ್ಲೇ ಹೆಚ್ಚು ಸುಖ, ಸಂತೃಪ್ತಿ ಕಾಣುತ್ತಿದ್ದ ಮುಸ್ಲಿಮ್ ಸುಲ್ತಾನರು ಈ ದೇಶದಲ್ಲಿ ಕೊಳ್ಳೆ ಹೊಡೆದದ್ದೇನು ಕಡಿಮೆಯೆ? ಆದರೆ, ನಮ್ಮ ದೇಶದ ಸೆಕ್ಯುಲರ್ ಇತಿಹಾಸಕಾರರ ಕೈಯಲ್ಲಿ ಅವೆಲ್ಲ ಅತ್ಯಂತ ಜಾಣತನದಿಂದ ಅಳಿಸೇ ಹೋಗಿವೆ. ನಮ್ಮ ಶಾಲಾಪಠ್ಯಗಳಲ್ಲಿ ನಾವು ಮುಘಲ್ ರಾಜರುಗಳ ಶ್ರೇಷ್ಟತೆಯನ್ನು ಓದಿದ್ದೇ ಓದಿದ್ದು! ಬಾಬರ್ನಿಂದ ಮೊದಲುಗೊಂಡು ಔರಂಗಜೇಬನವರೆಗೆ, (ನಾವೆಲ್ಲ ದೈವಾಂಶ ಸಂಭೂತರೆಂದು ಬಗೆದ ಅಕ್ಬರ್, ಜಹಾಂಗೀರ್, ಷಹಜಾನ್’ರನ್ನೂ ಒಳಗೊಂಡು) ಈ ರಾಜರು ಹಿಂದೂ ದೇವಾಲಯಗಳ ಮೇಲೆ ಮಾಡಿದ ಅನಾಚಾರ, ಅತ್ಯಾಚಾರಗಳೆಷ್ಟು! ಮತ್ತು ಈ ಎಲ್ಲ ದುರಾಚಾರಗಳನ್ನೂ ಮುಚ್ಚಿಹಾಕಲು ನಮ್ಮ ಬುದ್ಧಿವಂತ ಬುದ್ಧಿಜೀವಿಗಳು ಬೆಳೆಸಿದ ಸುಳ್ಳಿನ ಬೆಟ್ಟಗಳೆಷ್ಟು!

ಬೇರೆಲ್ಲ ಬಿಡಿ, ಕೇವಲ ಕರ್ನಾಟಕದಲ್ಲಿ ದೇವಸ್ಥಾನಗಳ ಮೇಲೆ ಮಸೀದಿ ಕಟ್ಟಿದ ಒಟ್ಟು 170 ನಿದರ್ಶನಗಳು ಸಿಗುತ್ತವೆ. ಬಳ್ಳಾರಿಯೊಂದರಲ್ಲೇ ಹಂಪಿ, ಬಳ್ಳಾರಿ, ಹೊಸಪೇಟೆ, ಹೂವಿನಹಡಗಲಿ, ಸಂಡೂರು, ಸಿರಗುಪ್ಪ ಮುಂತಾಗಿ ಎಂಟು ಕಡೆಗಳಲ್ಲಿ ದೇವಸ್ಥಾನಗಳನ್ನು ಒಡೆದು ಹಾಕಿ ಅವುಗಳ ಪಾಯದ ಮೇಲೆ ಮಸೀದಿ ಕಟ್ಟಲಾಗಿದೆ. ಬಿಜಾಪುರದಲ್ಲಿ ಇಂಥ ಮಸೀದಿಗಳ ಸಂಖ್ಯೆ 40 ಮೀರುತ್ತದೆ. ದೊಡ್ಡಬಳ್ಳಾಪುರ, ಹೊಸಕೋಟೆ, ಬೆಳಗಾವಿ, ಗೋಕಾಕ, ಹುಕ್ಕೇರಿ, ರಾಯಭಾಗ, ಚಿಳ್ಳಗರೆ, ಕಲ್ಯಾಣಿ, ಬೀದರ್, ಷಹಾಪುರ, ಅಫ್ಜಲ್ಪುರ, ಬಾದಾಮಿ, ಬಿಜಾಪುರ, ತಾಳಿಕೋಟೆ, ಬಾಬಾ ಬುಡನ್, ಹರಿಹರ, ಬಂಕಾಪುರ, ದಂಬಲ್, ಧಾರವಾಡ, ಹಾನಗಲ್, ಹುಬ್ಬಳ್ಳಿ, ರಾಣಿಬೆನ್ನೂರು, ಸವಣೂರು, ಚಿಂಚೋಳಿ, ಫಿರೋಜಾಬಾದ್, ಗುಲ್ಬರ್ಗ, ಮಾಳಕೇಡ, ಸಾಗರ, ಶಾಹ್ಬಜಾರ್, ಮುಳಬಾಗಿಲು, ಪಾಂಡವಪುರ, ಶ್ರೀರಂಗಪಟ್ಟಣ, ತೊಣ್ಣೂರು, ಭಟ್ಕಳ, ಹಳಿಯಾಳ, ಕೊಪ್ಪಳ, ಮಾನ್ವಿ, ಮುದ್ಗಲ್, ರಾಯಚೂರು, ಸಿಂಧನೂರು, ತವಗೇರಾ, ಬಸವಪಟ್ಟಣ, ನಗರ, ಸಂತೆಬೆನ್ನೂರು, ಸಿರಾಜಪುರ, ಶಿರಾ – ಹೀಗೆ ಕರ್ನಾಟಕದ ಎಲ್ಲೆಲ್ಲೆಲ್ಲೂ ದೇವಸ್ಥಾನಗಳ ಮೇಲೆ ನಿಂತ ಮಸೀದಿಗಳಿವೆ! ಶ್ರೀರಂಗಪಟ್ಟಣದಲ್ಲಿ ನರಸಿಂಹ ದೇಗುಲದ ಮೇಲೆ ಟಿಪ್ಪು ನಿಲ್ಲಿಸಿದ ಮಸೀದಿಯನ್ನು ನೋಡಿನೋಡಿಯೂ ಆತ ಧರ್ಮಸಹಿಷ್ಣುವಾಗಿದ್ದ ಎಂದು ಹೇಳಬಲ್ಲಷ್ಟು ಸಹಿಷ್ಣುಗಳು ನಮ್ಮ ಕನ್ನಡದ ಮಂದಿ!

ಗುಜರಾತಿನ (ಆ ಕಾಲದ ವಿಶ್ವದ ಅತ್ಯಂತ ಶ್ರೀಮಂತ) ಸೋಮನಾಥ ದೇವಾಲಯದ ಲಿಂಗವನ್ನು ಒಡೆದು ಘಜನಿ ಮುಹಮ್ಮದ ಅದರ ಒಂದು ತುಂಡನ್ನು ತಾನು ಕಟ್ಟಲಿದ್ದ ಜಾಮಿ ಮಸೀದಿಯ ಮೆಟ್ಟಿಲಿಗೆ ಹಾಕಲು ಕೊಂಡುಹೋದನಂತೆ. ಆಗ ಹಿಂದೂಗಳಿಗಾದ ಮಾನಸಿಕ ಆಘಾತ ಎಷ್ಟಿರಬಹುದು, ಊಹಿಸುವುದೂ ಅಸಾಧ್ಯ. ಭಾರತದಲ್ಲಿ 3000ಕ್ಕೂ ಅಧಿಕ ದೇವಸ್ಥಾನಗಳನ್ನು ಪುಡಿಗುಟ್ಟಿ, ಅವುಗಳಲ್ಲಿ 2000 ದೇವಸ್ಥಾನಗಳ ಪಾಗಾರದ ಮೇಲೆಯೇ ಮುಸ್ಲಿಮ್ ದೊರೆಗಳು ಮಸೀದಿ ಎಬ್ಬಿಸಿದ ಇತಿಹಾಸ ನಮ್ಮ ಕಣ್ಣೆದುರೇ ಇದ್ದರೂ, ರಾಮನ ಜನ್ಮಸ್ಥಾನದಲ್ಲಿರುವ ಒಂದು ಮಸೀದಿಯನ್ನು ಬೇರೆಡೆಗೆ ವರ್ಗಾಯಿಸಲು ಹಿಂದೂಗಳಿಗೆ ಇನ್ನೂ ಆಗಿಲ್ಲ! ಎಂಥ ವಿಪರ್ಯಾಸ! ರಾಮನ ಜನ್ಮಭೂಮಿಯ ವಿಷಯ ಪ್ರತಿವರ್ಷ ಒಂದೋ ಎರಡೋ ದಿನ ಪತ್ರಿಕೆಗಳ ಮುಖಪುಟಕ್ಕೆ ಬರುತ್ತದೆ. ಒಂದಷ್ಟು ಸುದ್ದಿ ಮಾಡಿ ತಣ್ಣಗಾಗುತ್ತದೆ. ಏಸುವಿನ ಮತಾನುಯಾಯಿಗಳು ಒಂದು ಕಟ್ಟಡವಲ್ಲ; ವ್ಯಾಟಿಕನ್ ಎಂಬ ಸಣ್ಣ ದೇಶವನ್ನೇ ಧಾರ್ಮಿಕ ಕಾರ್ಯಗಳಿಗಾಗಿ ನಿರ್ಮಿಸಿಕೊಂಡಿದ್ದಾರೆ. ಮುಹಮ್ಮದ್ ಪೈಗಂಬರ್ ಅನುಯಾಯಿಗಳು ಮೆಕ್ಕಾವನ್ನು ತಮ್ಮ ಪವಿತ್ರಸ್ಥಾನ ಎಂದು ಗುರುತಿಸಿದ್ದಾರೆ. ಯಹೂದಿಗಳಿಗೆ ಜೆರುಸಲೇಮ್ ಇದೆ. ಆದರೆ ಜಗತ್ತಿನಲ್ಲಿ ನೂರು ಕೋಟಿಯಷ್ಟಿರುವ ಹಿಂದೂಗಳ ಪವಿತ್ರಸ್ಥಳ ಅಯೋಧ್ಯೆ ಮಾತ್ರ ಇನ್ನೂ ವಿವಾದದ  ಹುತ್ತವಾಗಿಯೇ ಉಳಿದಿದೆ! ಇಚ್ಛಾಶಕ್ತಿಯಿಲ್ಲದ ಪಕ್ಷಗಳು ಅಯೋಧ್ಯೆಯನ್ನೂ ರಾಮಮಂದಿರವನ್ನೂ ಚುನಾವಣಾ ವಿಷಯವಾಗಿಯಷ್ಟೇ ನೋಡುತ್ತ  ಜನರ ಕಣ್ಣಿಗೆ ಮಂಕುಬೂದಿ ಬಳಿಯುತ್ತಲೇ ಬರುತ್ತಿವೆ.

ಮರ್ಯಾದಾ ಪುರುಷೋತ್ತಮ ಶ್ರೀರಾಮ, ಹುಟ್ಟಬಾರದಿತ್ತು ನೀನಿಂಥ ಪವಿತ್ರ ದೇಶದಲ್ಲಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!