ಅಂಕಣ

ಆ ಸಿಹಿಸುದ್ದಿಯನ್ನು ಕೇಳಲು ಅವರಿಗೆ ಸಾಧ್ಯವಿರುತ್ತಿದ್ದರೆ…?

೨೦೦೦ ನೇ ಇಸವಿ.. ದೇಶ ಕಾರ್ಗಿಲ್ ಯುದ್ಧದಲ್ಲಿ ಮಿಂದೆದ್ದಿತ್ತಷ್ಟೇ… ಮಡಿದ ಸೈನಿಕರ ಕುಟುಂಬಗಳಿಗೆ ಪರಿಹಾರ ನೀಡುವುದು, ಶೌರ್ಯ ಇತ್ಯಾದಿ ಪ್ರಶಸ್ತಿಗಳನ್ನು ಪ್ರಧಾನಿಸುವುದು, ಗಾಯಗೊಂಡವರ ಚಿಕಿತ್ಸೆ ಇತ್ಯಾದಿಗಳು ಭರದಿಂದ ಸಾಗಿತ್ತು. ಅದರ ಜೊತೆಗೆ ಯುದ್ಧ ಭೂಮಿಯ ಪುನಶ್ಚೇತನ. ಇದೆಲ್ಲ ಮುಗಿಯುವ ಮೊದಲೇ ಭಾರೀ ವಿವಾದವೊಂದು ಭುಗಿಲೆದ್ದಿತು. ಯುದ್ಧದಲ್ಲಿ ಮಡಿದ ಸೈನಿಕರ ಮೃತದೇಹ ಸಾಗಿಸುವುದಕ್ಕಾಗಿ ಖರೀದಿಸಿದ ಶವಪೆಟ್ಟಿಗೆಯನ್ನು ಲೆಕ್ಕಕ್ಕಿಂತ ಹೆಚ್ಚಿನ ಹಣಕೊಟ್ಟು ಖರೀದಿ ಮಾಡಲಾಗಿತ್ತು ಎಂದು ಸಿವಿಸಿ ವರದಿ ನೀಡಿತ್ತು. ಪ್ರತಿಪಕ್ಷಗಳು ಮೈಕೊಡವಿ ನಿಂತವು. ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸಂಸತ್ತಿನಲ್ಲಿ ಭಾರೀ ಗಲಾಟೆ ನಡೆಯಿತು. ಹೊರಗೆ ಯುದ್ಧ ಮುಗಿದ ಬಳಿಕ ಒಳಗೆ ಯುದ್ಧ ಶುರುವಾಗಿತ್ತು.

ರಕ್ಷಣಾ ಸಚಿವರಾಗಿದ್ದುದು ಮತ್ಯಾರೂ ಅಲ್ಲ, ನಮ್ಮ ಜಾರ್ಜ್ ಫೆರ್ನಾಂಡಿಸ್.. ಕಾರ್ಮಿಕ ನಾಯಕರಾಗಿದ್ದಾಗ ಸರಕಾರದ ವಿರುದ್ಧ ಹೋರಾಟಗಳನ್ನು ನಡೆಸಿದ್ದ ಜಾರ್ಜ್ ಅದುವರೆಗೂ ಒಂದೇ ಒಂದು ಕಳಂಕ ಮೆತ್ತಿಕೊಂಡವರಲ್ಲ. ಆದರೆ ಈ ಶವಪೆಟ್ಟಿಗೆ ಹಗರಣವಿದೆಯಲ್ಲ, ಅವರನ್ನು ಭಾರೀ ಘಾಸಿಗೊಳಿಸಿತ್ತು. ಯಾಕಂದ್ರೆ ಅದು ಕೇವಲ ವಿಷಯವಾಗಿರಲಿಲ್ಲ, ತನ್ನ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರ ಮರಣದಲ್ಲೂ ಲಾಭ ಮಾಡ ಹೊರಟ ಎನ್ನುವ ಅಪವಾದವಿದೆಯಲ್ಲ ಅದೊಂದು ಭಾವನಾತ್ಮಕವಾದ ವಿಚಾರವಾಗಿತ್ತು. ದೇಶಭಕ್ತನಾದ ಯಾರಿಗೂ ಆ ಅರೋಪವನ್ನು ಅರಗಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಾದ್ದರಲ್ಲಿ “ರಕ್ಷಾ ಮಂತ್ರಿ ಚೋರ್ ಹೈ” ಅಂತ ವಿರೋಧ ಪಕ್ಷಗಳು ಗದ್ದಲವೆಬ್ಬಿಸಿದಾಗ, ನನ್ನ ಹೆಸರಿನಲ್ಲಿ ಸಂಸತ್ತಿನ ಕಲಾಪ ನಷ್ಟವಾಗುತ್ತಿದೆ ಎಂದಾದಾಗ ಆ ಮನುಷ್ಯನಿಗೆ ಅದೆಷ್ಟು ಬೇಸರವಾಗಿರಬೇಕು?

ಈಗ ಅಸಹಿಷ್ಣುತೆ, ನ್ಯಾಷನಲ್ ಹೆರಾಲ್ಡ್ ಕೇಸನ್ನು ಹಿಡಿದು ವಿಪಕ್ಷಗಳು ಸಂಸತ್ತಿನ ಕಾರ್ಯ ಕಲಾಪಗಳಿಗೆ ಅಡ್ಡಿ ಮಾಡುತ್ತಿದೆಯಲ್ಲಾ, ಆವತ್ತು ಇದಕ್ಕೆ ಎರಡು ಪಟ್ಟು ಗದ್ದಲವೆಬ್ಬಿಸಿತ್ತು. ಪ್ರತಿನಿತ್ಯ ಸದನ ಸೇರಿದಾಗ ಅದೇ ಘೋಷಣೆ, ಅದೇ ಗದ್ದಲ. ಆವಾಗ ಕಾಂಗ್ರೆಸ್ ಸಂಸದರ ಸಂಖ್ಯೆಯೂ ದುಪ್ಪಟ್ಟು ಇದ್ದದುರಿಂದ ಹೆಚ್ಚು ಕಡಿಮೆ ಒಂದು ತಿಂಗಳ ಅಧಿವೇಶನ ಸಂಪೂರ್ಣ ನಷ್ಟವಾಗಿತ್ತು. ಜಾರ್ಜ್ ರಾಜೀನಾಮೆ ನೀಡಬೇಕೆಂಬುದೊಂದೇ ಅವರುಗಳ ಆಗ್ರವಾಗಿತ್ತು. ಆದರೆ ಪ್ರಧಾನಿ ವಾಜಪೇಯಿಗೆ ಜಾರ್ಜ್ ಬಗ್ಗೆ ವಿಶ್ವಾಸವಿದ್ದುದರಿಂದ ಜಾರ್ಜ್ ರಾಜೀನಾಮೆ ನೀಡಿರಲಿಲ್ಲ.

ಜಾರ್ಜ್ ಈ ಆರೋಪದಿಂದ ಸ್ವಲ್ಪ ಮಾನಸಿಕವಾಗಿ ಕುಗ್ಗಿದ್ದಿರಬಹುದು. ಆದರೆ ಇಂತಹದ್ದಕ್ಕೆಲ್ಲ ಹೆದರುವ ವ್ಯಕ್ತಿ ಖಂಡಿತ ಅವರಲ್ಲ. ಅವರ ಜೀವನವೇ ಒಂದು ಹೋರಾಟ. ಅವರು ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದು, ಕಾರ್ಮಿಕ ನಾಯಕನಾಗಿ ರಕ್ಷಣಾ ಮಂತ್ರಿಯವರಿಗೂ ಬೆಳೆದಿದ್ದು ತಮ್ಮ ಹೋರಾಟಗಳಿಂದಲೇ. ಕೇಂದ್ರದಲ್ಲವರು ಕೈಗಾರಿಕಾ ಮಂತ್ರಿಯಾದರು, ರೈಲ್ವೇ ಮಂತ್ರಿಯಾದರು, ರಕ್ಷಣಾ ಮಂತ್ರಿಯಾದರು. ಎನ್.ಡಿ.ಎ ಮೈತ್ರಿಕೂಟದ ಸಂಚಾಲಕರಾಗಿ ಎಲ್ಲ ಮಿತ್ರ ಪಕ್ಷಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದರು. ವಾಜಪೇಯಿ ಸರಕಾರದಲ್ಲಿ ಅವರು ಭಾರೀ ಪ್ರಭಾವೀ ಮಂತ್ರಿಯಾಗಿದ್ದರು. ಆದರೆ ಆ ಪ್ರಭಾವ ತನ್ನ ಸ್ವ ಸಾಮರ್ಥ್ಯದಿಂದಲೇ ಗಳಿಸಿದ್ದು ಬಿಟ್ಟರೆ, ಯಾವುದೇ ಇನ್’ಫ್ಲುಯೆನ್ಸ್ ಆಗಲಿ ರಾಜಕೀಯ ಮೇಲಾಟದಿಂದಾಗಲೀ ಅಲ್ಲ, ಎಂಬುದು ಈಗಿನ ಕಾಲದ ನಾಯಕರಿಗೆ ಮಾದರಿಯಾಗಬೇಕಾದ ವಿಷಯ.

ಮೈನಸ್ ಡಿಗ್ರಿ ಉಷ್ಣತೆಯಿರುವ, ಅತಿ ಎತ್ತರದ ಯುದ್ಧ ಪ್ರದೇಶವಾದ ಸಿಯಾಚಿನ್’ಗೆ ಅತಿ ಹೆಚ್ಚು ಭಾರಿ ಭೇಟಿ ನೀಡಿ ಸೈನಿಕರ ಕೆಲಸ ಕಾರ್ಯಗಳ ಬಗ್ಗೆ ಮಾಹಿಸಿ ಪಡೆದುಕೊಂಡು, ಸೈನಿಕರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಿದ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್!  ಅಣುಪರೀಕ್ಷೆಯ ಯಶಸ್ಸಿನ ಹಿಂದಿನ ರೂವಾರಿಗಳಲ್ಲಿ ಜಾರ್ಜ್ ಕೂಡಾ ಒಬ್ಬರು. ಅಣು ಪರೀಕ್ಷೆಗೆ ನೆರೆದೇಶಗಳ ವಿರೋಧ ವ್ಯಕ್ತಪಡಿಸಿದಾಗ “ನಮ್ಮ ದೇಶದ ರಕ್ಷಣಾ ಆದ್ಯತೆಗಳೇನು ಎಂಬುದನ್ನು ಯಾರೂ ಹೇಳಬೇಕಾಗಿಲ್ಲ” ಎಂದು ದಿಟ್ಟ ಉತ್ತರ ನೀಡಿದ್ದರು. ಜಾರ್ಜ್ ತಾಕತ್ತು ಏನೆಂದರೆ ಆವತ್ತು ೧೯೭೭ರಲ್ಲಿ ಚುನಾವಣೆ ಘೋಷಣೆಯಾದಾಗ ಅವರು ಬರೋಡಾ ಡೈನಮೈಟ್ ಕೇಸಿನಲ್ಲಿ ಬಂಧನಕ್ಕೊಳಗಾಗಿದ್ದರು.. ಜಾರ್ಜ್ ಚುನಾವಣೆಯಲ್ಲಿ ಜಯಗಳಿಸುತ್ತಾರೋ ಇಲ್ಲವೋ ಎಂಬುದು ರಾಜಕೀಯ ಪಂಡಿತರ ಅನುಮಾನವಾದರೆ, ಕಾರ್ಯಕರ್ತರು ಎದೆಗುಂದದೆ ಜಾರ್ಜ್ ಕೈಗೆ ಕೋಳ ತೊಡಿಸಿರುವ ಫೋಟೋ ಮುಂದಿಟ್ಟು ಮತಯಾಚಿಸಿದರು, ಫಲಿತಾಂಶ ಬಂದಾಗ ದೇಶವೇ ಬೆಚ್ಚಿ ಬಿದ್ದಿತ್ತು. ಜಾರ್ಜ್ ಫೆರ್ನಾಂಡಿಸ್ ಭಾರೀ ಅಂತರದ ಗೆಲುವು ದಾಖಲಿಸಿ ಸಂಸತ್ತಿಗೆ ಲಗ್ಗೆಯಿಟ್ಟಿದ್ದರು. ಅದಕ್ಕೂ ಮೊದಲು, ತಾವು ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಮಹಾರಾಷ್ಟ್ರದ ಪ್ರಭಾವೀ ಕಾಂಗ್ರೆಸ್ಸ್ ನಾಯಕ ಎಸ್.ಕೆ ಪಾಟೀಲ್ ವಿರುದ್ಧ ಜಯಗಳಿಸಿ “ಜೈಂಟ್ ಕಿಲ್ಲರ್” ಎಂಬ ಹೆಸರು ಗಳಿಸಿದ್ದರು.

ಹೀಗೆ ಜಾರ್ಜ್ ಫೆರ್ನಾಂಡಿಸ್ ದೇಶದ ರಾಜಕೀಯ ರಂಗದಲ್ಲಿ ಬಹಳ ವೈಭವದ ದಿನಗಳನ್ನು ಕಳೆದರು. ನಿಸ್ಸಂಶಯವಾಗಿಯೂ ಭಾರತೀಯ ರಾಜಕೀಯದ ಧ್ರುವತಾರೆ ಅವರು. ಅವರಂಥ ಕಾರ್ಮಿಕ, ಸಮಾಜವಾದಿ ನಾಯಕ ಮತ್ತೊಬ್ಬ ಇಲ್ಲ. ದುರದೃಷ್ಟವೆಂದರೆ ೨೦೦೪ ರಲ್ಲಿ ವಾಜಪೇಯಿ ನೇತೃತ್ವದ ಎನ್,ಡಿ.ಎ ಸೋತಾಗ ರಾಜಕೀಯ ವಲಯದಲ್ಲಿ ಜಾರ್ಜ್ ಪ್ರಭಾವ ಕುಸಿಯಲಾರಂಭಿಸಿತು. ಜೆಡಿಯುನೊಂದಿಗೆ ಜಾರ್ಜ್ ಕಟ್ಟಿದ ಸಮತಾ ಪಕ್ಷ ವಿಲೀನಗೊಂಡ ನಂತರ ಎರಡನೇ ಪೀಳಿಗೆಯ ನಿತೀಶ್ ಕುಮಾರ್, ಶರದ್ ಯಾದವ್ ಮುಂತಾದವರು ಪ್ರವರ್ಧಮಾನಕ್ಕೆ ಬಂದು ಪಕ್ಷದ ಮೇಲೆ ಹಿಡಿತ ಸಾಧಿಸಿದಾಗ ಜಾರ್ಜ್ ಸಂಪೂರ್ಣ ನಿರ್ಲಕ್ಷಕ್ಕೊಳಗಾದರು. ತನ್ನ ನಾಯಕತ್ವ ಗುಣಗಳಿಂದ ಬೇರೆ ಬೇರೆ ಪಕ್ಷಗಳ ನಾಯಕರ ಪ್ರೀತಿಗೆ ಪಾತ್ರರಾಗಿದ್ದ ಜಾರ್ಜ್ ಕಡೆ ಕಡೆಗೆ ಸ್ವಪಕ್ಷೀಯರ ಅವಗಣನೆಗೆ ಒಳಗಾದರು. ಎಷ್ಟೆಂದರೆ, ಒಂದು ಕಾಲದಲ್ಲಿ ಜೈಲಿನಲ್ಲಿದ್ದುಕೊಂಡು ಜಯಗಳಿಸಿದ್ದ ಜಾರ್ಜ್’ಗೆ ಲೋಕಸಭಾ ಟಿಕೆಟನ್ನು ಸಹ ನಿರಾಕರಿಸಲಾಯಿತು. 2009 ರಲ್ಲಿ ರಾಜ್ಯಸಭೆಗೆ ಅವಿರೋಧ ಆಯ್ಕೆಯಾದರೂ ಕೆಲಸ ನಿರ್ವಹಿಸಲು ದೇಹ ಬಿಡಲಿಲ್ಲ. ಅಲ್ಲಿಗೆ ಜಾರ್ಜ್ ಸಂಸದೀಯ ಜೀವನ ಮುಕ್ತಾಯಗೊಂಡಿತು.

ಅದಾದ ಕೆಲವೇ ಸಮಯದಲ್ಲಿ ಜಾರ್ಜ್’ಗೆ ‘ಅಲ್ಜೈಮರ್’ ಕಾಯಿಲೆ ತಗುಲಿತು. ತಾನು ಯಾರು, ತನ್ನ ಹೆಂಡತಿ ಯಾರು ಎಂದು ಗುರುತಿಸಲಾಗದ ಸ್ಥಿತಿಯ ಜೊತೆಗೆ ಕೌಂಟುಬಿಕ ಕಲಹವೂ ಸೇರಿದಾಗ ಅಕ್ಷರಶಃ ತತ್ತರಿಸಿ ಹೋದರು ಜಾರ್ಜ್.

ತಿಂಗಳ ಹಿಂದಷ್ಟೇ ‘ಶವಪೆಟ್ಟಿಗೆ ಹಗರಣ’ದಲ್ಲಿ ಜಾರ್ಜ್ ಸಂಪೂರ್ಣ ನಿರ್ದೋಷಿ ಎಂಬ ತೀರ್ಪು ಸುಪ್ರೀಂ ಕೋರ್ಟಿನಿಂದ ಬಂದಿದೆ. ಆವತ್ತು ‘ರಕ್ಷಾ ಮಂತ್ರಿ ಚೋರ್ ಹೈ’ ಎಂದು ಹೇಳುತ್ತಾ ಅವರ ರಾಜೀನಾಮೆಗೆ ರಂಪ ಮಾಡಿದವರು ಸೌಜನ್ಯಕ್ಕೂ ತೀರ್ಪು ಬಂದ ಬಳಿಕ ವಿಷಾಧ ವ್ಯಕ್ತಪಡಿಸಲಿಲ್ಲ, ವ್ಯಕ್ತಪಡಿಸಿದರೂ ಕೇಳುವ ಸ್ಥಿತಿಯಲ್ಲಿಲ್ಲ ಜಾರ್ಜ್. ಒಬ್ಬ ನಿರ್ದೋಷಿಗೆ ನ್ಯಾಯ ಒದಗಿಸಲು ವಿಳಂಬ ಮಾಡಿದ ನ್ಯಾಯ ವ್ಯವಸ್ಥೆಯೂ ಜಾರ್ಜ್’ಗೆ ಅನ್ಯಾಯ ಮಾಡಿತು ಅಂತ ಹೇಳಬಹುದು..

ಇವತ್ತು ಜಾರ್ಜ್ ನಿರ್ದೋಷಿ ಎಂಬ ತೀರ್ಪು ಬಂದಾಗ ನಾನಂತೂ ಸಂಭ್ರಮಿಸಿದ್ದೇನೆ, ಸಾವಿರಾರು ಅಭಿಮಾನಿಗಳೂ ಸಂಭ್ರಮಿಸಿದ್ದಾರೆ. ಆದರೆ ನಿಜವಾಗಿಯೂ ಸಂಭ್ರಮಿಸಬೇಕಾದ ಜಾರ್ಜ್’ಗೆ ಆ ಯೋಗವೇ ಇಲ್ಲ. ಒಂದು ವೇಳೆ ಈ ಸಿಹಿ ಸುದ್ದಿ ಅವರಿಗೆ ಕೇಳಲು ಸಾಧ್ಯವಾಗಿರುತ್ತಿದ್ದರೆ..? ನೆನೆಯುವಾಗ ಕಣ್ಣಂಚು ಒದ್ದೆಯಾಗುತ್ತದೆ…

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!