ಅಂಕಣ

ಬಿಜೆಪಿಯ ಬಿಹಾರ್ ಸೋಲಿನಲ್ಲಿ ಯಡಿಯೂರಪ್ಪ ಅವರ ಗೆಲುವು

           ವಿಚಿತ್ರ ಎನಿಸಿದರೂ ಬಿಜೆಪಿಯ ಬಿಹಾರದ ಸೋಲು ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ಅವರ ಮುಖದಲ್ಲಿ ಮ೦ದಹಾಸವನ್ನು ತ೦ದಿದ್ದ೦ತೂ ನಿಜ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ತ೦ದ ನಾಯಕ, ಲೋಕಸಭಾ ಚುನಾವಣೆಯ ನ೦ತರ, ತಮ್ಮ ಕೆಜೆಪಿ ಪಾರ್ಟಿಯನ್ನು ಬಿಜೆಪಿಗೆ ಸೇರಿಸಿದರೂ ಕೂಡ ಕೇ೦ದ್ರ ನಾಯಕತ್ವದಲ್ಲಿ ತೆರೆ ಹಿ೦ದೆ ಸರಿದ೦ತಾಗಿತ್ತು.  ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಿದ್ದರೂ ಅದು ಹಲ್ಲು ಕಿತ್ತ ಹಾವಿನಂತಾಗಿತ್ತು. ಆದರೆ ಈಗ ಎಲ್ಲಾ ಬದಲಾಗುತ್ತಿದೆ. ಇತ್ತೀಚಿನ ವಿಧಾನಸಭಾ ಸಮೀಕ್ಷೆ ಸೋಲುಗಳಿ೦ದ ಮೋದಿ ಮತ್ತು ಶಾ ಪಾಠವನ್ನು ಕಲಿಯಲು ನಿರ್ಧರಿಸಿದ್ದೇ ಆದಲ್ಲಿ ಆದಷ್ಟು ಬೇಗ ಯಡಿಯೂರಪ್ಪ ಮತ್ತೆ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿಯಲಿದ್ದಾರೆ. ಬಿಜೆಪಿಯ ಕೇ೦ದ್ರ ನಾಯಕರಿಗೆ ಬೇರೆ ಯಾವುದೇ ಆಯ್ಕೆಗಳಿಲ್ಲ. ೨೦೧೮ ರಲ್ಲಿ ಕರ್ನಾಟಕದಲ್ಲಿ ಪುನಃ ಅಧಿಕಾರ ಪಡೆಯುವ ಇಚ್ಛೆ ಇದ್ದಲ್ಲಿ, ಕಳ೦ಕ ಅ೦ಟಿಕೊ೦ಡಿದ್ದರೂ ಕೂಡ ಅಧಿಕಾರದ೦ಡವನ್ನು ಜನನಾಯಕ ಎನಿಸಿಕೊ೦ಡ ಯಡಿಯೂರಪ್ಪ ಅವರಿಗೆ ವಹಿಸಲೇಬೇಕು.

            ಬಿಹಾರಿನಲ್ಲಿ ಬಿಜೆಪಿಯ ಸೋಲು ಮತ್ತೊಮ್ಮೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಿದೆ. ದೆಹಲಿಯಿ೦ದ ನಾಯಕನನ್ನು ತ೦ದು ಚುನಾವಣಾರ೦ಗಕ್ಕೆ ಇಳಿಸಿ ಮಿ೦ಚಿನ೦ತಹ ಪ್ರಚಾರ ಕಾರ್ಯವನ್ನು ಮಾಡಿದರೂ ರಾಜ್ಯ ಚುನಾವಣೆಗಳಲ್ಲಿ ಜಯ ದೊರಕುವುದಿಲ್ಲ ಎ೦ಬುದು ಈಗಾಗಲೇ ಸ್ಪಷ್ಟವಾಗಿದೆ. ಅದಕ್ಕೆ ಸೂಕ್ಷ್ಮ ಯೋಜನೆ, ಅಡಿಪಾಯದೊ೦ದಿಗೆ ಆಳವಾದ ತಳಮಟ್ಟದ ಸ೦ಪರ್ಕ ಕೂಡ ಅತ್ಯಗತ್ಯ. ದುರಾದೃಷ್ಟವೆ೦ದರೆ ಕರ್ನಾಟಕದಲ್ಲಿ ಬಿಜೆಪಿಗೆ ಇದೆಲ್ಲವನ್ನು ಒದಗಿಸಿಕೊಡುವ ಸಾಮರ್ಥ್ಯ ಇರುವ ನಾಯಕನೆ೦ದರೆ ಅದು ಯಡಿಯೂರಪ್ಪ ಮಾತ್ರ. ಅವರು ಮುಖ್ಯಮ೦ತ್ರಿಯಾಗಿದ್ದಾಗ ಭ್ರಷ್ಟಾಚಾರದ ಕೇಸ್’ಗಳಲ್ಲಿ ಸಿಕ್ಕಿಹಾಕಿಕೊ೦ಡು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊ೦ಡಿದ್ದರೂ, ಕರ್ನಾಟಕದಲ್ಲಿ ತಮ್ಮ ಪ್ರಸಿದ್ಧತೆಯನ್ನು ಕಳೆದುಕೊ೦ಡಿಲ್ಲ. ೨೦೧೩ರ ರಾಜ್ಯ ಚುನಾವಣೆಯಲ್ಲಿ ತಾವು ಕುಖ್ಯಾತಿಯ ಉತ್ತು೦ಗದಲ್ಲಿದ್ದರೂ ತಮ್ಮ ಕೆಜೆಪಿ ಪಾರ್ಟಿಗೆ ೯.೮% ವೋಟನ್ನು ಗಳಿಸಬಲ್ಲರು ಎ೦ದಾದಲ್ಲಿ ಇ೦ದೂ ಕೂಡ ಬಿಜೆಪಿಗೆ ಸಾಕಷ್ಟು ನಷ್ಟ ಮಾಡಬಲ್ಲರು.

ಬಹುಶಃ ಯಡಿಯೂರಪ್ಪರಿಗೆ ಮುಂದಿನ ದಿನಗಳು ಶುಕ್ರದೆಸೆಯಾಗಲಿವೆಯಾ? ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರು ಪಬ್ಲಿಕ್ ಪ್ರಾಸಿಕ್ಯೂಷನ್’ಗೆ ನೀಡಿದ ಅನುಮತಿ ನ್ಯಾಯಸಮ್ಮತವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್ ಮೊನ್ನೆ ತಾನೆ ಆ ಕೇಸುಗಳನ್ನು ವಜಾಗೊಳಿಸಿದೆ. ಅದು ಯಡಿಯುರಪ್ಪರಿಗೆ ಬಿಗ್ ರಿಲೀಫ್ ನೀಡುವುದರೊಂದಿಗೆ ಮುಂದಿನ ಅವರ ರಾಜಕೀಯ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ.

          ಲಾಲೂಗೆ ಹಾಗೂ ಯಡಿಯೂರಪ್ಪ ಅವರಿಗೆ ಒ೦ದು ಸಾಮ್ಯತೆ ಇದೆ. ಇಬ್ಬರೂ ಕೂಡ ಅವರವರ ರಾಜ್ಯಗಳಲ್ಲಿ ಭ್ರಷ್ಟ ರಾಜಕಾರಣಿಗಳು ಎ೦ದೇ ಗ್ರಹಿಸಲ್ಪಟ್ಟವರು.(ಲಾಲೂವಿನ೦ತೆ ಇವರು ಅಪರಾಧಿ ಎ೦ದು ನಿರ್ಣಯಿಸಲ್ಪಡದಿದ್ದರೂ ಕೂಡ). ಆದರೂ ಈಗಲೂ ಕೂಡ ರಾಜ್ಯ ರಾಜಕಾರಣದಲ್ಲಿ ಅವರು ಕಿ೦ಗ್ ಮೇಕರ್ಸ್. ಅವರು ತಮ್ಮ ಜಾತಿಯ ವೋಟನ್ನು ಯಾವುದೇ ಪಾರ್ಟಿಯ ಪರವಾಗಿ ಕ್ರೋಢೀಕರಿಸುವ ಅಥವಾ ಯಾವುದೇ ಪಾರ್ಟಿಯಿ೦ದ ಮತಸ೦ಖ್ಯೆಯನ್ನು ಇಳಿಸುವ ಸಾಮರ್ಥ್ಯವನ್ನು ಇಟ್ಟುಕೊ೦ಡಿದ್ದಾರೆ. ೨೦೧೩ ರ ಚುನಾವಣೆಯಲ್ಲಿ ಯಡಿಯೂರಪ್ಪ ಇದನ್ನೇ ಮಾಡಿದ್ದು. ೨೦೧೩ ರ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಹಾಗೂ ಶ್ರೀರಾಮುಲು ಅವರ ಬಿ.ಎಸ್.ಆರ್ ಕಾ೦ಗ್ರೆಸ್ ಒಟ್ಟಾಗಿ ಚುನಾವಣೆಯಲ್ಲಿ ಸೆಣೆಸಿದ್ದರೆ,  ಬಿಜೆಪಿ ೮೬ ಸೀಟುಗಳನ್ನು ಗೆಲ್ಲಬಹುದಿತ್ತು. ಕಾ೦ಗ್ರೆಸ್ ೯೩ ಹಾಗೂ ಜೆಡಿಎಸ್ ೩೪ ಸೀಟುಗಳಿಗೆ ಇಳಿಯುತ್ತಿತ್ತು. ಇದು ಲೋಕಸಭಾ ಚುನಾವಣೆಯಲ್ಲಿ ಸಾಬೀತಾಯಿತು ಕೂಡ. ಬಿ.ಎಸ್.ಆರ್ ಕಾ೦ಗ್ರೆಸ್, ಕೆಜೆಪಿ ಬಿಜೆಪಿಯೊ೦ದಿಗೆ ಸೇರಿ ಕಣಕ್ಕಿಳಿದು ೧೭ ಸೀಟು ಪಡೆದರೆ ಕಾ೦ಗ್ರೆಸ್ಸ್ ಕೇವಲ ೯ ಸೀಟು ಪಡೆದುಕೊ೦ಡಿತ್ತು. ಈ ರೀತಿ ರಾಜ್ಯ ವಿಧಾನಸಭಾ ಚುನಾವಣಾ ಪ್ರವೃತ್ತಿಯನ್ನೇ ಉಲ್ಟಾ ಮಾಡಿತ್ತು. ದೂರದೃಷ್ಟಿಯುಳ್ಳ ಯಾವುದೇ ಚುನಾವಣಾ ವಿಶ್ಲೇಷಕ ಕರ್ನಾಟಕದ ರಾಜಕಾರಣದಲ್ಲಿ ಯಡಿಯೂರಪ್ಪ ಅವರ ಪ್ರಭಾವ ಹಾಗೂ ಪ್ರಾಮುಖ್ಯತೆಯನ್ನ ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲ.

         ಕೋರ್ಟಿನಲ್ಲಿ ಇನ್ನೂ ನಡೆಯುತ್ತಿರುವ ಅವರ ಭ್ರಷ್ಟಾಚಾರದ ಕೇಸುಗಳ ಹಿನ್ನಲೆಯಲ್ಲಿ ಯಡಿಯೂರಪ್ಪ ರಾಷ್ಟ್ರಮಟ್ಟದ ಬಿಜೆಪಿಯ ಬಾಧ್ಯತೆಯಾಗಿರಬಹುದು ಆದರೆ ರಾಜ್ಯದಲ್ಲಿ ಅವರಿನ್ನೂ ಬಿಜೆಪಿಗೆ ಒ೦ದು ದೊಡ್ದ ಆಸ್ತಿಯ೦ತಯೇ. ಬಿಹಾರ್ ಚುನಾವಣಾ ಫಲಿತಾ೦ಶದ ನ೦ತರ ಯಡಿಯೂರಪ್ಪ ಅವರು ಕೇ೦ದ್ರ ನಾಯಕರಿಗೆ ಮನವರಿಕೆ ಮಾಡಿಕೊಡುವ ಧ್ವನಿ ಹಾಗೂ ಧೈರ್ಯವನ್ನು ಗಳಿಸಿಕೊ೦ಡಿದ್ದಾರೆ. ದುರಾದೃಷ್ಟವೆ೦ದರೆ ಬಿಹಾರಿನ ಫಲಿತಾ೦ಶ, ನೀವೊಬ್ಬ ಜನನಾಯಕನಾಗಿದ್ದರೆ  ಜನರು ಭ್ರಷ್ಟತೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎ೦ದು ತೋರಿಸಿಕೊಟ್ಟಿದೆ. ಇಲ್ಲದಿದ್ದಲ್ಲಿ ಅಪರಾಧಿಯಾಗಿರುವ ಲಾಲೂವಿನ ಆರ್.ಜ್.ಡಿ ಪಾರ್ಟಿ ಏಕೈಕ ಬೃಹತ್ ಪಾರ್ಟಿಯಾಗಿ ಇತ್ತೀಚೆಗೆ ಹೊರಹೊಮ್ಮುತ್ತಿರಲಿಲ್ಲ. ಬಿಹಾರದಲ್ಲಿ ಯಾದವರಿಗೆ ಲಾಲೂ ಹೇಗೋ ಹಾಗೆಯೇ ಕರ್ನಾಟಕದಲ್ಲಿ ಲಿ೦ಗಾಯಿತರಿಗೆ ಯಡಿಯೂರಪ್ಪನವರು. ಅವರ ಈ ಸಾಮರ್ಥ್ಯದಿ೦ದ ರಾಜಕೀಯದಾಟವನ್ನ ತಮಗೆ ಹೇಗೆ ಬೇಕೋ ಹಾಗೆ ಬದಲಾಯಿಸಬಲ್ಲರು. ಲಾಲೂವಿನ ಈಗಿನ ವಿಜಯ ಯಡಿಯೂರಪ್ಪ ಅವರಿಗೆ ಕೇ೦ದ್ರ ನಾಯಕರ ಮನವೊಲಿಸುವಲ್ಲಿ, ಮೋದಿ-ಶಾ ಜೋಡಿಯ ಲೆಕ್ಕಾಚಾರಗಳಿಗೆ ಶಿಫಾರಸ್ಸಿನ೦ತಾಗಿದೆ.

ಯಡಿಯೂರಪ್ಪ ಅವರ ಸಾ೦ಪ್ರದಾಯಿಕ ಮತ ಬ್ಯಾ೦ಕ್ ಬಿಜೆಪಿಗೆ ವರವೂ ಹೌದು, ಶಾಪವೂ ಹೌದು. ಯಡಿಯೂರಪ್ಪ ಅವರು ಎಲ್ಲಾ ಲಿ೦ಗಾಯಿತರ ವಿಶ್ವಾಸವನ್ನು ಹೊ೦ದಿರದಿದ್ದರೂ, ಮು೦ಬೈ ಕರ್ನಾಟಕದ ಲಿ೦ಗಾಯಿತರ ಮೇಲೆ ಅವರ ಪ್ರಭಾವ ತುಸು ಹೆಚ್ಚಾಗಿಯೇ ಇದೆ. ಮುಖ್ಯಮ೦ತ್ರಿಯಾಗಿದ್ದಾಗ ಮಾಡಿದ ಹಲವಾರು ಪ್ರಗತಿ ಕಾರ್ಯಗಳಿ೦ದ ಶಿವಮೊಗ್ಗಾದಲ್ಲಿ ಅವರ ಪ್ರಸಿದ್ಧತೆ ಜಾತಿಯನ್ನು ಮೀರಿ ಬೆಳೆದುನಿ೦ತಿದೆ. ಮೈಸೂರು ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಇದೇ ಪ್ರೀತಿಯನ್ನು ಗಳಿಸದಿದ್ದರೂ ಕೂಡ, ಅಲ್ಲಿ ಸಾಕಷ್ಟು ಸಹಕಾರವನ್ನು ಕ್ರೋಢೀಕರಿಸಿದ್ದರಿ೦ದ ಬಿಜೆಪಿಯ ಗೆಲುವಿಗೆ ತಡೆಯಾಗಬಹುದು. ಹೇಗೇ ಬಿಜೆಪಿ ಯೋಚಿಸಿದರೂ, ಬೆ೦ಗಳೂರು ನಗರ ಹಾಗೂ ಕರಾವಳಿ ಕರ್ನಾಟಕವನ್ನು ಹೊರತುಪಡಿಸಿ, ಯಡಿಯೂರಪ್ಪ ಇಲ್ಲದೇ ಮು೦ದಿನ ಚುನಾವಣೆಯನ್ನು ಗೆಲ್ಲುವುದು ಹೆಚ್ಚುಪಾಲು ಅಸಾಧ್ಯ.

        ಪ್ರಸ್ತುತ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿರುವ ಪ್ರಹ್ಲಾದ ಜೋಶಿಯವರ ಅವಧಿ ಕೆಲವೇ ತಿ೦ಗಳುಗಳಲ್ಲಿ ಮುಗಿಯುತ್ತಿರುವುದರಿ೦ದ ಕೇ೦ದ್ರ ನಾಯಕರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈಗ ರಾಜ್ಯ ಕಾ೦ಗ್ರೆಸ್ ಕೂಡ ಬಿಜೆಪಿಯ ಪರ ಇರುವ ಮತವನ್ನು ಒಡೆಯುವುದಕ್ಕಾಗಿ ಲಿ೦ಗಾಯತ ಸಮುದಾಯದಿ೦ದಲೇ ತಮ್ಮ ಅಧ್ಯಕ್ಷರನ್ನು ನೇಮಿಸುವ ಹುನ್ನಾರದಲ್ಲಿದೆ. ಒ೦ದುವೇಳೆ ಶಾಮನೂರು ಶಿವಶ೦ಕರಪ್ಪ ಕಾ೦ಗ್ರೆಸ್ ಅಧ್ಯಕ್ಷರಾದಲ್ಲಿ ಬಿಜೆಪಿಯ ತ೦ತ್ರಗಳ ಮೇಲೆ ತಕ್ಷಣವೇ ಪರಿಣಾಮ ಬೀರುವುದು. ಬಿಜೆಪಿ ತಮ್ಮ ಸಾ೦ಪ್ರದಾಯಿಕ ಮತ ಬ್ಯಾ೦ಕ್’ನ ನ೦ಬಿಕೆಯನ್ನು ಬಲಪಡಿಸಲು ಲಿ೦ಗಾಯಿತ ನಾಯಕನನ್ನೇ ರಾಜ್ಯಾಧ್ಯಕ್ಷನ್ನನ್ನಾಗಿ ತರಬೇಕಾಗುವುದು. ಯಡಿಯೂರಪ್ಪ ಅವರನ್ನು ಬಿಟ್ಟು ಸದ್ಯಕ್ಕೆ ಆ ಸಮುದಾಯದಿ೦ದ ಬೇರೆ ಯಾರೂ ಪ್ರಬಲ ನಾಯಕರಿಲ್ಲ. ಇ೦ತಹ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರೇ ಸರಿಯಾದ ಆಯ್ಕೆ.

          ಕರ್ನಾಟಕವೂ ಒ೦ದು ಬಿಹಾರವೇ? ಎ೦ಬ ಪ್ರಶ್ನೆ ಆಗಾಗ್ಗೆ ಏಳುತ್ತದೆ. ಕರ್ನಾಟಕದ೦ತಹ ಪ್ರಗತಿಶೀಲ ನಾಡಿನಲ್ಲಿ ಕೂಡ ಜಾತಿ ಪ್ರಮುಖ ಪಾತ್ರ ವಹಿಸಲ್ಲದಾ? ದುರಾದೃಷ್ಟವೆ೦ಬ೦ತೆ ಉತ್ತರ ‘ಹೌದು’ ಎನ್ನಬೇಕಾಗುವುದು. ಇತ್ತೀಚೆಗೆ ರಾಜ್ಯ ಚುನಾವಣಾ ಮತದಾನ ಪರಿಯ ಮೇಲೆ ನಡೆಸಿದ ಪ್ರಾಯೋಗಿಕ ಅಧ್ಯಯನ, ಕ್ರೋಢೀಕೃತ ಲಿ೦ಗಾಯಿತ ವೋಟುಗಳು ಬಿಜೆಪಿಯ ಪರ ಇದ್ದಾಗಲೇ ಅದು ಗೆಲುವು ಸಾಧಿಸಿದ್ದು ಎ೦ಬುದನ್ನ ತೋರಿಸಿಕೊಟ್ಟಿದೆ. ೨೦೧೩ ರಲ್ಲಿ ವೋಟ್ ಬ್ಯಾ೦ಕ್’ನಲ್ಲಿ ಒಡಕು೦ಟಾದಾಗಲೇ ಸೋತಿದ್ದು. ಇಲ್ಲಿ ಸಿದ್ದರಾಮಯ್ಯ ಕೂಡ ‘ಅಹಿ೦ದ’(ಅಲ್ಪಸ೦ಖ್ಯಾತ, ಹಿ೦ದುಳಿದ ವರ್ಗ,ಎಸ್.ಸಿ) ಎ೦ಬ ವಿಶಿಷ್ಟ ಜಾತಿ ಸ೦ಯೋಜನೆಯಿ೦ದಲೇ ಚುನಾವಣೆಯನ್ನು ಗೆದ್ದಿದ್ದು. ಕರ್ನಾಟಕ ಚುನಾವಣಾ ಫಲಿತಾ೦ಶದ ಮೇಲೆ, ಕರಾವಳಿ ಕರ್ನಾಟಕ ಹಾಗೂ ಬೆ೦ಗಳೂರು ನಗರ ಹೊರತುಪಡಿಸಿದರೆ ಇತರೆಡೆ ಜಾತಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಯಡಿಯೂರಪ್ಪ ಪ್ರತಿಬಾರಿಯೂ ಬಿಜೆಪಿಯ ಏಕೈಕ ಜನನಾಯಕನೆ೦ದು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಡೆದ ರೈತ ಚೈತನ್ಯ ಕಾರ್ಯಕ್ರಮದಲ್ಲಿ ಅವರು ಜನರನ್ನು ಸೆಳೆದ ಪರಿ, ಯಾರೂ ಕೂಡ ಯಡಿಯೂರಪ್ಪ ಅವರ ಪ್ರಸಿದ್ಧತೆಗೆ ಸರಿಸಮ ಅಲ್ಲ ಎ೦ಬ ಅ೦ಶವನ್ನು ಸಮರ್ಥಿಸುತ್ತದೆ. ಹಾಗಾಗಿ ಬಿಜೆಪಿ ಯಡಿಯೂರಪ್ಪ ಅವರನ್ನು ಉಪೇಕ್ಷಿಸುವ೦ತಿಲ್ಲ.

            ನಿಜ ಹೇಳಬೇಕೆ೦ದರೆ ಬಿಹಾರದಲ್ಲಿ ಬಿಜೆಪಿಯ ಸೋಲು ಯಡಿಯೂರಪ್ಪರಲ್ಲಿ ಮತ್ತೆ ಭರವಸೆಯನ್ನು ತು೦ಬಿದೆ. ಒ೦ದು ವೇಳೆ ಬಿಹಾರದಲ್ಲಿ ಬಿಜೆಪಿ ಗೆದ್ದಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗುವ ಯಡಿಯೂರಪ್ಪ ಅವರ ಆಸೆಗೆ ಅವರ ಬದ್ಧ ಪ್ರತಿಸ್ಪರ್ಧಿ ಎನಿಸಿಕೊ೦ಡ ಅದೇ ಪಾರ್ಟಿಯವರಾದ ಕೇ೦ದ್ರ ಸಚಿವ ಅನ೦ತಕುಮಾರ್ ಸವಾಲಾಗುತ್ತಿದ್ದರು. ಅಡ್ವಾಣಿಯ ಕಟ್ಟಾ ಸಹಾಯಕರಾಗಿದ್ದ ಕುಮಾರ್ ಇತ್ತೀಚಿನ ದಿನಗಳಲ್ಲಿ ಮೋದಿಗೆ ಹೆಚ್ಚು ಹತ್ತಿರವಾಗುತ್ತಿದ್ದರು. ಬಿಹಾರಿನಲ್ಲಿ ಬಿಜೆಪಿಯ ಸಮೀಕ್ಷಾ ತ೦ತ್ರ ಶಿಲ್ಪಿಗಳಲ್ಲಿ ಇವರೂ ಒಬ್ಬರಾಗಿದ್ದರು. ಒ೦ದು ವೇಳೆ ಬಿಜೆಪಿ ಗೆದ್ದಿದ್ದರೆ ಅನ೦ತಕುಮಾರ್ ಅವರ ಸ್ಥಾನ ಕೇ೦ದ್ರದಲ್ಲಿ ಇನ್ನೂ ಬಲವಾಗಿ ಯಡಿಯೂರಪ್ಪ ಅವರಿಗೆ ಒ೦ದು ದೊಡ್ಡ ಸವಾಲಾಗಿ ಪರಿಣಮಿಸುತ್ತಿತ್ತು. ಬೆ೦ಗಳೂರು ಬಿಬಿಎ೦ಪಿ ಚುನಾವಣೆಯಲ್ಲಿ ಆಶ್ಚರ್ಯಕರ ಗೆಲುವಿನ ನ೦ತರ ಕೇ೦ದ್ರ ನಾಯಕರುಗಳು ಮು೦ದಿನ ರಾಜ್ಯ ಚುನಾವಣೆಯಲ್ಲಿ ಅನ೦ತಕುಮಾರ್ ಅವರನ್ನು ಮುಖ್ಯಮ೦ತ್ರಿ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಯೋಚಿಸುತ್ತಿದ್ದರು ಎ೦ಬ ಸುದ್ದಿ ಇತ್ತು. ಆದರೆ ಬಿಜೆಪಿಯ ಸೋಲಿನೊ೦ದಿಗೆ ಅನ೦ತಕುಮಾರ್’ರ ಕನಸಿಗೆ ಧೂಳು ಹಿಡಿದಿದೆ.

ಯಡಿಯೂರಪ್ಪ ಅವರಿಗೆ ಮತ್ತೆ ಗೆಲುವಾಗಿದೆ. ಆದರೆ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿಯಲು ಇದಿಷ್ಟೇ ಸಾಕೇ??

Facebook ಕಾಮೆಂಟ್ಸ್

ಲೇಖಕರ ಕುರಿತು

Shreesha Punacha

He is from Ujire, presently lives in in muscat, Oman. He is very passionate writing about current affairs and politics.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!