ಅಂಕಣ

ನಮ್ಮ ಸಹಿಷ್ಣತೆಯನ್ನು ಕೆಣಕುತ್ತಿರುವವರು ಯಾರು?!

“ನಾನು ಇದುವರೆಗೆ ದನದ ಮಾಂಸ ತಿಂದಿಲ್ಲ, ಆದರೆ ಇನ್ಮುಂದೆ ತಿನ್ನುತ್ತೇನೆ, ನೀವೇನು ಮಾಡ್ತೀರೋ ನೋಡ್ತೇನೆ; ನಾನು ಇದುವರೆಗೆ ಹಂದಿ ಮಾಂಸವನ್ನು ತಿಂದಿಲ್ಲ, ಜಗದೀಶ್ ಶೆಟ್ಟರ್ ಹೇಳಿದ ಮೇಲೆ ಅದನ್ನೂ ತಿನ್ನೋಣ; ನೀವೆಲ್ಲಾ ಒಟ್ಟಾಗಿ ಬಜರಂಗದಳದವರ ವಿರುದ್ಧ ಹೋರಾಡಬೇಕು, ಹಿಂದುತ್ವವಾದಿ ಅಜೆಂಡಾಗಳನ್ನು ಹೇರಲು ಯತ್ನಿಸುತ್ತಿರುವವರನ್ನು ತಡೆಯಬೇಕು;  ”

ನಿತ್ಯವೂ ಹಿಂದೂಗಳ ಬಗ್ಗೆ ದ್ವೇಷ ಕಾರುವ  ಅಕ್ಬರುದ್ದೀನ್ ಒವೈಸಿ ಹೀಗೆ  ಹೇಳಿದಿದ್ದರೆ, ಬೊಗಳುವ ನಾಯಿ ಕಚ್ಚುವುದಿಲ್ಲ ಎಂದು ಸುಮ್ಮನಿರಬಹುದಿತ್ತು. ಪ್ರಚಾರ ಹಪಹಪಿ ಭಗವಾನ ಈ ಥರ ಒಂದು ಹೇಳಿಕೆ ಕೊಟ್ಟಿದ್ದರೆ ಅವ ಹುಚ್ಚ ಭಗವಾನ ಅಂತ ಸೈಲೆಂಟಾಗಬಹುದಿತ್ತು. ಆದರೆ ಈ ಥರ ದರ್ಪದ ಮಾತುಗಳನ್ನಾಡಿಸಿದ್ದು  ನಮ್ಮ ರಾಜ್ಯದ ಅಗ್ರೇಸರನಂತಿರುವ ಮುಖ್ಯಮಂತ್ರಿಗಳು.  ವಾಹ್…! ಧನ್ಯವಾಯ್ತು ನಮ್ಮ ಚೆಲುವ ಕನ್ನಡ ನಾಡು ಇಂತಹಾ ಒಬ್ಬ ಮುಖ್ಯಮಂತ್ರಿಯನ್ನು ಪಡೆದಿದ್ದಕ್ಕೆ.!

ಒಂದು ಸರಕಾರ ಅಂದ್ರೆ ಹೇಗಿರಬೇಕು? ಜನರ, ಜಾತಿ ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸುತ್ತಾ, ಜನರ ಬಾಳಿಗೆ ಬೆಳಕಾಗುತ್ತಾ, ಎಲ್ಲರೂ ಸಹಬಾಳ್ವೆ ಮಾಡುವಂತಹಾ ವ್ಯವಸ್ಥೆ ನಿರ್ಮಾಣ ಮಾಡಬೇಕಾಗಿರುವುದು ಯಾವುದೇ ಸರಕಾರದ ಕರ್ತವ್ಯ. ಅದರ ಜೊತೆಗೆ ಅಭಿವೃದ್ಧಿಯ ಕೆಲಸ ಕಾರ್ಯಗಳು  ನಡೆದರೆ ಯಾವುದೇ ಪಕ್ಷದ ಸರಕಾರವಾದರೂ ಸರಿ, ನಾವೆಲ್ಲರೂ ಕೈಗೊಂಡ ಸಂಕಲ್ಪವೊಂದು ಸಾಕಾರಗೊಳ್ಳುತ್ತದೆ. ಆದರೆ ನಮ್ಮ ಕರುನಾಟಕದಲ್ಲಿ ಮೊದಲಿನಿಂದಲೂ  ಆಗುತ್ತಿರುವುದೇನು? ಸರಕಾರವೇ ಮುಂದೆ ನಿಂತು ಜಾತಿ ಬೀಜ ಬಿತ್ತುತ್ತದೆ ಸರಕಾರದ ಮುಖ್ಯಸ್ಥರೇ ತಮ್ಮ ಪಕ್ಷದ ಕಾರ್ಯಕರ್ತರನ್ನು ’ಅವರ ವಿರುದ್ಧ ಹೋರಾಡಿ’ ಎಂದು ಛೂ ಬಿಡುತ್ತಾರೆ. ಜಾತಿ, ಉಪಜಾತಿ, ಜನಾಂಗ, ಉಪಜನಾಂಗವೆಂದು ಸರಕಾರವೇ ಭೇದವನ್ನುಂಟು ಮಾಡಿದರೂ ತಮ್ಮದು ಜಾತ್ಯಾತೀತ ಸರಕಾರವೆಂದು ಹೇಳಿಕೊಳ್ಳುತ್ತದೆ. ಸಣ್ಣ ಮಕ್ಕಳಿಗೂ ಸವಲತ್ತುಗಳನ್ನು ಕೊಡುವಾಗ ಜಾತಿಯನ್ನು ನೋಡಿಯೇ ಕೊಡುತ್ತದೆ. ಆ ಭಾಗ್ಯ ಈ ಭಾಗ್ಯವೆಂದು ಒಂದು ಸಮಾಜದವರಿಗೆ ಸಾಧ್ಯವಾದಷ್ಟು ಸವಲತ್ತುಗಳನ್ನು ನೀಡಿ ಮತ್ತೊಂದು ಸಮಾಜದ ಮೂಗಿಗೆ ತುಪ್ಪ ಸವರುತ್ತಿದೆ. ಮತ್ತೊಂದು ಸಮಾಜದ ಭಾವನೆಗಳನ್ನೂ ಕೆರಳಿಸುವ ಮೂಲಕ ಸಾರ್ವಜನಿಕ ಅಶಾಂತಿಗೆ ಸರಕಾರವೇ ಕಾರಣವಾಗುತ್ತಿದೆ ಎಂದರೆ ಬಹುಶಃ ಇದು ಇಡೀಯ ರಾಜ್ಯದ ದೌರ್ಭಾಗ್ಯವೇ ಹೊರತು ಮತ್ತೇನಲ್ಲ.

ಮತ್ತಿನ್ನೇನು? ದನದ ಮಾಂಸವನ್ನಾದರೂ ತಿನ್ನಲಿ, ಬೇಕಾದರೆ ನಾಯಿ ಮಾಂಸವನ್ನಾದರೂ ತಿನ್ನಲಿ. ಆದರೆ ಅದನ್ನು ಅಷ್ಟೊಂದು ದರ್ಪದಿಂದ ಸಾರ್ವಜನಿಕವಾಗಿ ಹೇಳಿಕೊಳ್ಳುವುದೇಕೆ? ಬಹುಸಂಖ್ಯಾತ ಹಿಂದೂಗಳ  ತಾಳ್ಮೆಯನ್ನು ಪರೀಕ್ಷಿಸುವುದಕ್ಕಾಗಿಯೇ? ತಾವೇನೂ ಮಾಡಿದರೂ ಯಾವ್ ನನ್ ಮಗನೂ ಕೇಳಬಾರದು ಎನ್ನುವ  ತಮ್ಮ ಅಧಿಕಾರವೆಂಬ ಅಹಂಕಾರದ ಪರಮಾವಧಿಯನ್ನು ತೋರಿಸಿಕೊಳ್ಳುವುಕ್ಕಾಗಿಯೇ? ಅದರ ಮೇಲಿಂದ “ಆಹಾರ ಪ್ರತಿಯೊಬ್ಬರ ಇಚ್ಛೆಗೆ ಬಿಟ್ಟದ್ದು, ನಾನು ದನ ತಿನ್ನುತ್ತೇನೆಂದರೆ ಬಹುಸಂಖ್ಯಾತರ ಭಾವನೆಗೇನಾಗುತ್ತದೆ?” ಎಂದು ಪ್ರಶ್ನಿಸುತ್ತಾರೆ. ದನ ತಿನ್ನುವುದೇನೋ ಫುಡ್ ಹ್ಯಾಬಿಟ್ ಅನ್ನಬಹುದು, ಹಾಗಂತ ಕಂಡ ಕಂಡವರ ಮನೆಗೆ ರಾತ್ರೋ ರಾತ್ರಿ ನುಗ್ಗಿ, ಹಟ್ಟಿಯಿಂದ ದನ ಕದ್ದುಕೊಂಡು ಬರುವುದನ್ನೂ ಸಮರ್ಥಿಸುತ್ತೀರಾ?  ಸ್ವಾಮೀ, ನಾಡು-ನುಡಿ, ಸಂಸ್ಕೃತಿ ಆಚಾರ ವಿಚಾರಗಳ ಮೇಲೆ ಸ್ವಲ್ಪವಾದರೂ ಗೌರವದ ಭಾವನೆಯಿದ್ದವರಿಗೆ ಅದೆಲ್ಲ ತಿಳಿಯಲು ಸಾಧ್ಯ, ಅದ್ಯಾವದೂ ಇಲ್ಲದ ನಿಮಗೆ, ಜನರ ಭಾವನೆಗಳು ಅರ್ಥಮಾಡಿಕೊಳ್ಳಲು ಬರದ ನಿಮಗೆ ಇವೆಲ್ಲ ತಿಳಿಯುವುದು ಹೇಗೆ? ಸಾಂವಿಧಾನಿಕ ಹುದ್ದೆಯಲ್ಲಿರುವ ಒಬ್ಬ ಮುಖ್ಯಮಂತ್ರಿ ಹೇಳುವ ಮಾತಾ ಇದು?  ಬಹುಸಂಖ್ಯಾತರ ಭಾವನೆಗಳನ್ನು ಕೆರಳಿಸಿ ಕೋಮುಗಲಭೆಗಳಿಗೆ ಕೊಡುವ ಪ್ರೇರಣೆಯಲ್ಲವೇ ಇದು? ಛೇ.. ಇಂತಹಾ ಸರಕಾರವನ್ನು, ಇಂತಹಾ ಮುಖ್ಯಮಂತ್ರಿಯನ್ನು ರಾಜ್ಯ ಹಿಂದೆಂದೂ ಕಂಡಿರಲಿಕ್ಕಿಲ್ಲ. ನ ಭೂತೋ ನ ಭವಿಷ್ಯತಿ… ಅಸಹಿಷ್ಣತೆ ಹೆಚ್ಚಾಗುತ್ತಿರುವುದೇ ಇಲ್ಲಿ. ಕಾಂಗ್ರೆಸ್ಸ್ ಸರಕಾರವಾದರೂ ಆಗಬಹುದು, ಆದರೆ ಸಿದ್ಧರಾಮಯ್ಯನವರ ಸರಕಾರವಾಗದು ಎನ್ನುವಷ್ಟು ಅಸಹನೆ, ಅಸಹಿಷ್ಣತೆ ಭುಗಿಲೇಳುತ್ತಿದೆ. ಒಂದಂತೂ ನಿಜ, ಈ ಅಧಿಕಾರವೆಂಬ ಮದ ಇಳಿದೇ ಇಳಿಯುತ್ತದಲ್ಲಾ ಒಂದಿನ, ಅವಾಗ ಇದಕ್ಕೆಲ್ಲಾ ಪರಿತಪಿಸಿಕೊಳ್ಳುವ ಸ್ಥಿತಿ ಇವರದ್ದಾಗಲಿದೆ.

ಸಿದ್ಧರಾಮಯ್ಯನವರಿಗೆ ದನ ತಿನ್ನುವುದು ಅವರಿಗೇ ಇಷ್ಟವಿಲ್ಲ ಎಂದು ಅವರ ಮಾತಿನಲ್ಲೇ ತಿಳಿಯುತ್ತದೆ, ಆದರೂ ರಾಜಕೀಯದ ಆಟಕ್ಕಾಗಿ ಆ ಮಗ್ದ ಪ್ರಾಣಿಯನ್ನು ದಾಳ ಮಾಡಿಕೊಳ್ಳುತ್ತಿದ್ದಾರೆ. ಅಲ್ಲ ಸಿದ್ಧರಾಮಯ್ಯನವರೇ ಆ ಮೂಕ ಪ್ರಾಣಿ ನಿಮಗೇನು ದ್ರೋಹ ಮಾಡಿದೆ? ಪುಣ್ಯಕೋಟಿಯ ಕಥೆಯನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಕೊಟ್ಟ ಮಾತಿಗೆ ತಪ್ಪದೆ ಮತ್ತೆ ಪುನಹಃ ವ್ಯಾಘ್ರನಲ್ಲಿಗೆ ಮರಳಿ ಬಂದ ಪುಣ್ಯಕೋಟಿಯನ್ನು ನೋಡಿ ತನ್ನ ತಪ್ಪಿನ ಅರಿವಾಗಿ ಆ ವ್ಯಾಘ್ರ ತಾನೇ ಪ್ರಾಣ ಕಳೆದುಕೊಳ್ಳುತ್ತದೆ. ನಿಮ್ಮದು ವ್ಯಾಘ್ರಕ್ಕಿಂತಲೂ ಕ್ರೂರ ಮನಸ್ಸಾ? ದೇಶದಲ್ಲಿ ಅಸಹಿಷ್ಣತೆ ಭುಗಿಲೆದ್ದಿದೆ ಎಂದು ರೊಚ್ಚಿಗೇಳುತ್ತಿರುವವರೆಲ್ಲ ಒಂದ್ಸಲ ಇತ್ತ ಕೇಳಿ, ಈ ಸರಕಾರ  ಶಾದಿ ಭಾಗ್ಯ, ಮೌಢ್ಯ ಪ್ರತಿಬಂಧಕ ಕಾಯ್ದೆ ಅದು ಇದು ಅಂತ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ತುಳಿಯಲು ಪ್ರಯತ್ನಿಸುತ್ತಿದೆ,  ನಮ್ಮ ಸಹಿಷ್ಣತೆಯನ್ನು ಕೆಣಕುತ್ತಿರುವವರಾರು? ನಮ್ಮ ಸಹಿಷ್ಣತೆಗೂ ಒಂದು ಮಿತಿ ಇಲ್ಲವೇ ? ಆದರೂ ನಾವುಗಳು ಎಲ್ಲವನ್ನು ಸಹಿಸಿಕೊಂಡು ಕುಳಿತಿಲ್ಲವೇ?

ಒಮ್ಮೊಮ್ಮೆ ನನಗನಿಸುತ್ತದೆ, ಇದು ನಮಗೆ ಆಗಬೇಕಾಗಿದ್ದೇ. ಯಾಕಂದ್ರೆ ಇದು ನಾವೇ ಕೇಳಿ,ಬಯಸಿ ಪಡೆದ ಸರಕಾರವಲ್ಲವೇ? ಆಗಬೇಕಾಗಿದ್ದೇ. ಬಿಜೆಪಿಯವರಂತೂ ತಮಗೆ ಸಿಕ್ಕಿದ ಚಿನ್ನದಂತಹ ಅವಕಾಶವನ್ನು ಕೈಚೆಲ್ಲಿ, ತಮ್ಮ ಸ್ಥಾನಮಾನ, ಒಣ ಪ್ರತಿಷ್ಠೆಗಾಗಿ  ಜಗಳವಾಡುತ್ತಾ ಬಿಜೆಪಿಯನ್ನು  ಹರಿದು ಹಂಚಿ ತಿಂದರು. ಆ ತಪ್ಪಿನ ಫಲವಾಗಿ ಇವತ್ತು ಕಾಂಗ್ರೆಸ್ಸಿಗರು ಇಡೀ ರಾಜ್ಯವನ್ನೇ ಹರಿದು ತಿನ್ನುತ್ತಿದ್ದಾರೆ, ಆಗಬೇಕಾಗಿದ್ದೇ ಇದು ನಮಗೆ! ಇಲ್ಲದಿದರೆ ಇವತ್ತು ಖಂಡಿತವಾಗಿಯೂ ಮುಖ್ಯಮಂತ್ರಿಗಳೇ ‘ದನ ತಿನ್ನುತ್ತೇನೆ, ಏನು ಮಾಡ್ತಿರೋ ನೋಡೋಣ” ಎನ್ನುವಂತಹ ಸ್ಥಿತಿ ಬರುತ್ತಿರಲಿಲ್ಲ.

ಅತ್ತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ  ಸೇರಿಕೊಂಡು ರಾಷ್ಟ್ರಪತಿಗೆ ದೂರು ನೀಡಿದ್ದಾರೆ ಅಸಹಿಷ್ಣತೆಯ ಬಗ್ಗೆ. ಸಿಕ್ಕರನ್ನು ಬರ್ಬರವಾಗಿ ಕೊಂದಾಗ ಕಾಣದ ಅಸಹಿಷ್ಣತೆ, ಕಾಶ್ಮೀರೀ ಪಂಡಿತರನ್ನು ಸಾವಿರಾರು ಸಂಖ್ಯೆಯಲ್ಲಿ ಕೊಂದಾಗ, ಅತ್ಯಾಚಾರ ಮಾಡಿದಾಗ, ಒಕ್ಕಲೆಬ್ಬಿಸಿದಾಗ ಕಾಣದ ಅಸಹನೆ, ಭೋಪಾಲ್’ನಲ್ಲಿ ಅನಿಲ ದುರಂತ ನಡೆದಾಗ ಕಾಣದ ಅಸಹಿಷ್ಣತೆಗಳು ಈಗ ಒಮ್ಮಿಂದೊಮ್ಮೆಲೇ ಹೊರಹೊಮ್ಮುತ್ತಿದೆ. ನಮ್ಮ ಸಹಿಷ್ಣತೆಯನ್ನು ಕದಕಿದ ತುರ್ತು ಪರಿಸ್ಥಿತಿಯನ್ನು ಹೇರಿದ ಪಕ್ಷಕ್ಕೆ ಅಸಹಿಷ್ಣತೆಯ ಬಗ್ಗೆ ಮಾತನಾಡಲು ಏನು ನೈತಿಕತೆ ಅಂತಾ? ಅಷ್ಟಕ್ಕೂ ಅಸಹಿಷ್ಣತೆ ಹೆಚ್ಚಾಗುತ್ತಿದೆ ಅನ್ನಲು ಕಾರಣವಾದರೂ ಏನು? ಒಂದು ದಾದ್ರಿಯ ಘಟನೆಯೇ? ಒಂದು ಸಾಹಿತಿಯ ಕೊಲೆಯೇ? ಈ ಘಟನೆಗಳೆಲ್ಲಾ ಗಂಭೀರವಾದವುಗಳೇ. ಆದರೆ ಹಿಂದೆ ಎಂದೂ ದೇಶದಲ್ಲಿ ಸಾಹಿತಿಗಳ ಕೊಲೆಯಾಗಿರಲಿಲ್ಲವೇ?  ಕಾಂಗ್ರೆಸ್ಸ್ ಆಡಳಿತದಲ್ಲಿದ್ದಾಗ ಎಲ್ಲವೂ ಶಾಂತಿಯುತವಾಗಿ ಸುವ್ಯವಸ್ಥಿತವಾಗಿದ್ದವೇ? ನಿಮಗೆ ನೆನಪಿರಬಹುದು, ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಶಾಂತಿ ಮೂಡುತ್ತದೆ ಎಂದು ಕಾಂಗ್ರೆಸ್ಸ್ ಚುನಾವಣೆಯ ಸಮಯದಲ್ಲೇ ಅಪಪ್ರಚಾರ ನಡೆಸಿತ್ತು. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಅಶಾಂತಿ ಮೂಡುವಂತಹ ಕೋಮುಗಲಭೆಯೇನೂ ನಡೆದಿಲ್ಲ. ಆದರೂ ನಡೆದಿದೆ, ಮೋದಿ ಅಧಿಕಾರಕ್ಕೆ ಬಂದ ನಂತರ ಅಸಹಿಷ್ಣತೆ ಮೂಡಿದೆ ಎಂದು ಹುಯಿಲೆಬ್ಬಿಸುವ ವ್ಯವಸ್ಥಿತ ಅಪಪ್ರಚಾರಕ್ಕಿಳಿದಿದೆ ಕಾಂಗ್ರೆಸ್ಸ್. ಮೊದಲು ಬಾಡಿಗೆ ಸಾಹಿತಿಗಳನ್ನು ಛೂ ಬಿಟ್ಟು ಈಗ ಅಧಿಕೃತವಾಗಿ ಪಕ್ಷವೇ ಹೋರಾಟಕ್ಕೆ ಧುಮುಕುವ ಮೂಲಕ ಚುನಾವಣೆಗೆ ಹಿಂದೆ ತಾನು ಹೇಳಿದ್ದ ಸುಳ್ಳನ್ನು  ನಿಜವಾಗಿಸುವತ್ತ ಹೊರಟಿದೆ.

ಆದ್ರೂ ನಾವ್ಯಾರೂ ಇದಕ್ಕೆ ತಲೆಕೆಡಿಸಿಕೊಳ್ಳೋದು ಬೇಡ , ಯಾಕಂದ್ರೆ ಅರುವತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದವರಿಗೆ ಒಂದೂವರೆ ವರ್ಷಗಳಿಂದ ಅಧಿಕಾರವಿಲ್ಲದೆ ಚಡಪಡಿಸುತ್ತಿರುವಾಗ, ಕಾಲಿಟ್ಟಲ್ಲೆಲ್ಲಾ ಸೋಲು ಕಟ್ಟಿಟ್ಟ ಬುತ್ತಿಯಾಗುತ್ತಿರುವಾಗ ಅಸಹಿಷ್ಣತೆ ಭುಗಿಲೇಳುವುದು ಸಹಜವೇ ಅಲ್ವಾ? ಇವರ ಸಂಕಟ ನಮಗೆ ಅರ್ಥವಾಗುತ್ತದೆ.

ಲಾಸ್ಟ್ ಪಂಚ್: “ದನ ತಿಂತೀರಾ?; ಇದುವರೆಗೆ ತಿಂದಿಲ್ಲ, ಇನ್ಮೇಲೆ ತಿಂತೇನೆ, ಯಾರ್ ಏನ್ಮಾಡ್ತೋರೋ ನೋಡ್ತೇನೆ; ಸರಿ, ಹಂದಿ ತಿಂತೀರಾ?; ಇದುವರೆಗೆ ತಿಂದಿಲ್ಲ, ನೀವ್ ಹೇಳೆದ್ಮೇಲೆ ಅದನ್ನೂ ತಿಂತೇನೆ; ಸೂಪರ್, ಹೇಸಿಗೆ ತಿಂತೀರಾ?; ಇದುವರೆಗೂ ತಿಂದಿಲ್ಲ,ಇನ್ನು  ಅದನ್ನೂ ತಿಂತೇನೆ ಬಿಡಿ;”

ಹೀಗೆ ನಾನು ಹೇಳಿದ್ದಲ್ಲ, ಫೇಸ್ಬುಕ್’ನಲ್ಲಿ ಜನ ಹೇಳಿದ್ದು!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!