ಅಂಕಣ

ತಪ್ಪು ಮಾಡಿರುತ್ತಿದ್ದರೆ ಇಷ್ಟು ಹೊತ್ತಿಗೆ ಶರಣಾಗುತ್ತಿದ್ದರು!

ನಮ್ಮ ನೆಲದ ಕಾನೂನು ಯಾರನ್ನೂ ಬಿಟ್ಟಿಲ್ಲ. ವ್ಯಕ್ತಿ ಅದೆಷ್ಟೇ ಬಲಿಷ್ಠವಾಗಿರಲಿ, ಕಾನೂನಿಗೆ ತಲೆಬಾಗಲೇಬೇಕು. ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ್ದಾರೆಂದು ಲೋಕಾಯುಕ್ತರು ವರದಿ ಕೊಟ್ಟಾಗ ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಜೈಲಿಗಟ್ಟಲಾಯಿತು. ಆದಾಯಕ್ಕೂ ಮೀರಿದ  ಆಸ್ಥಿ ಪ್ರಕರಣದಲ್ಲಿ  ದೇಶದ ಪ್ರಭಾವಿಗಳಲ್ಲಿ ಪ್ರಭಾವಿ ಮುಖ್ಯಮಂತ್ರಿಯಾಗಿರುವ ಕುಮಾರಿ ಜಯಲಲಿತಾರನ್ನೇ ಮುಲಾಜಿಲ್ಲದೆ ಬಂಧಿಸಲಾಯಿತು. ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ ಪ್ರಕರಣದಲ್ಲಿ ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ಉಮಾಭಾರತಿಯವರನ್ನು ಅಧಿಕಾರದಲ್ಲಿರುವಾಗಲೇ ಬಂಧಿಸಲಾಗಿತ್ತು.  ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಕಂಚಿ ಶ್ರೀಗಳನ್ನು ಹಿಂದೂ ಸಂಘಟನೆಗಳ ಎಷ್ಟೇ ವಿರೋಧ ವ್ಯಕ್ತವಾದರೂ, ದೇಶಾದ್ಯಂತ ಪ್ರತಿಭಟನೆ ನಡೆದರೂ  ಯಾವುದನ್ನೂ ಲೆಕ್ಕಿಸದೆ ಜೈಲಿಗೆ ಹಾಕಲಾಯ್ತು. ಅಸರಾಂ ಬಾಪು ಎಂಬ ಸಂತನನ್ನೂ ಅತ್ಯಾಚಾರದ ಆರೋಪದಡಿಯಲ್ಲಿ  ಬಂಧಿಸಲಾಗಿದೆ. ಸಲ್ಮಾನ್ ಖಾನ್, ಸಂಜಯ್ ದತ್, ಎ ರಾಜಾ, ಸುರೇಶ್ ಕಲ್ಮಾಡಿ  ಹೀಗೆ ಯಾರನ್ನೇ ಆಗಲಿ ಬಂಧಿಸುವುದಕ್ಕೆ ನಮ್ಮ ಕಾನೂನಿಗೇನೂ ಕಷ್ಟವಲ್ಲ. ತಪ್ಪು ಮಾಡಿದರೂ, ಮಾಡದೇ ಇದ್ದರೂ ಒಮ್ಮೆ ಬಂಧಿಸಬೇಕೆಂಬ ಆದೇಶ ಬಂದರೆ ಅದರ ಕುಣಿಕೆಯಿಂದ ಪಾರಾಗಲು ಯಾರೊಬ್ಬನಿಗೂ ಸಾಧ್ಯವಾಗದು. (ಕೆಲವರಿಗೆ ಸಾಧ್ಯ ಇದೆ ಬಿಡಿ). ಹಾಗಿದ್ದಾಗ್ಯೂ, ವಿಷಯ ಆಧ್ಯಾತ್ಮವೇ ಇರಲಿ, ಇಲ್ಲಾ ಅಧುನಿಕ ಜಗತ್ತಿನ ಆವಿಷ್ಕಾರಗಳೇ ಇರಲಿ, ಅದರ ಬಗ್ಗೆ ಅಪ್ ಟು ಡೇಟ್ ಅಧ್ಯಯನ ಮಾಡಿಕೊಂಡು, ಅರಳು ಹುರಿದಂತೆ ಪ್ರವಚನ ಮಾಡುವ ರಾಘವೇಶ್ವರ ಶ್ರೀಗಳಿಗೆ ಇವೆಲ್ಲ ಗೊತ್ತಿಲ್ಲಾ ಅಂತಾನಾ? ತಪ್ಪು ಮಾಡಿಯೂ ಕಾನೂನಿನ ಕಣ್ಣಿಗೆ ಮಂಕುಬೂದಿ ಎರಚಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥವಾ?

ಖಂಡಿತಾ ಇಲ್ಲ, ಒಂದು ವೇಳೆ ತಪ್ಪು ಮಾಡಿರುವುದು ನಿಜವಾದರೆ ಪೀಠ ತ್ಯಾಗವಲ್ಲ, ಪ್ರಾಣತ್ಯಾಗವನ್ನೇ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿರುವ ಶ್ರೀಗಳು ನಿಜವಾಗಿಯೂ ತಪ್ಪು ಮಾಡಿರುತ್ತಿದ್ದರೆ ಕನಿಷ್ಟ ಪಕ್ಷ ಇಷ್ಟು ಹೊತ್ತಿಗೆ ಶರಣಾಗಿ ಬಿಡುತ್ತಿದ್ದರು. ಅವರಿಗೂ ನಮ್ಮ ನೆಲದ ಕಾನೂನಿನ ಬಗ್ಗೆ ಸ್ಪಷ್ಟ ಅರಿವಿದೆ. ತಪ್ಪು ಮಾಡಿದ್ದರೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸಾಮಾನ್ಯ ಜ್ಞಾನ ಖಂಡಿತವಾಗಿಯೂ ಇರುತ್ತದೆ. ಅದರಲ್ಲೂ ಯಡಿಯೂರಪ್ಪ, ಜಯಲಲಿತಾ, ಜನಾರ್ಧನ ರೆಡ್ಡಿ, ಉಮಾಭಾರತಿಯಂತಹಾ ಎಂತೆಂತಾ ಇನ್ಫ್ಲುಯೆನ್ಷಿಯಲ್ ವ್ಯಕ್ತಿಗಳನ್ನೇ ಬಂಧಿಸಿದ ಉದಾಹರಣೆ ಕಣ್ಣ ಮುಂದಿರುವಾಗ  ಕಾನೂನಿನ ಕಣ್ಣಿಗೆ ಮಣ್ಣೆರಚುವಂತಹಾ ಭಂಡ ಧೈರ್ಯವನ್ನು ಖಂಡಿತಾ ಮಾಡಲಾರರು ರಾಘವೇಶ್ವರರು. ಈ ಆರೋಪಗಳು ಶುರುವಾಗಿ ಒಂದೂವರೆ ವರ್ಷವಾಗುತ್ತಾ ಬಂತು. ಅವರು ನಿಜವಾಗಿಯೂ ತಪ್ಪು ಮಾಡಿರುತ್ತಿದ್ದರೆ,  ಆರಂಭದಲ್ಲೇ ತಪ್ಪನ್ನು ಒಪ್ಪಿಕೊಂಡು ಈ ಕೋರ್ಟು ಕೇಸಿನ ಜಂಜಾಟಗಳು, ಟಿವಿ ಮಾಧ್ಯಮಗಳ ರಂಪಾಟಗಳಿಗೆಲ್ಲಾ ಆಸ್ಪದವನ್ನೇ  ಕೊಡದೇ, ಎಲ್ಲಾ ಊಹಾಪೋಹಗಳಿಗೆ ತೆರೆಯೆಳೆಯುತ್ತಿದ್ದರು.

ಹಾಗಾದರೆ ವೈದ್ಯಕೀಯ ಪರೀಕ್ಷೆಗೇಕೆ ಬರುತ್ತಿಲ್ಲ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಹೌದು ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆಯೇ ಅತ್ಯಂತ ನಿರ್ಣಾಯಕ ಪಾತ್ರವನ್ನು ನಿರ್ವಹಿಸುವುದು. ಹಾಗಂತ ಸುಮ್ಮ ಸುಮ್ಮನೆ ಮಾಡಿರುವ ಆರೋಪಗಳಿಗೆಲ್ಲಾ ವೈದ್ಯಕೀಯ ಪರೀಕ್ಷೆಯನ್ನು ಒಪ್ಪಲಾದೀತೇ? ಅದೂ ಸಹ ಮಹಿಳಾ ಸುರಕ್ಷೆಯ ಕಾನೂನುಗಳು ಹೇರಳವಾಗಿ ದುರ್ಬಳಕೆಯಾಗುತ್ತಿರುವ ಇವತ್ತಿನ ಕಾಲಘಟ್ಟದಲ್ಲಿ? ತಪ್ಪು ಮಾಡಿಯೇ ಇಲ್ಲವೆಂದಾದ ಮೇಲೆ,  ಕುತಂತ್ರಿಗಳ ಷಡ್ಯಂತ್ರಕ್ಕೊಳಪಟ್ಟು ಏತಕ್ಕಾಗಿ ವೀರ್ಯ ಪರೀಕ್ಷೆಗೊಳಪಡುವುದು?     ಅಷ್ಟಕ್ಕೂ ಬೇಕು ಬೇಕೆಂದಾದಾಗ ವೀರ್ಯವನ್ನು ಕೊಡಲು  ಅವರೇನು ನಮ್ಮ ನಿಮ್ಮಂತೆ ಸಾಮಾನ್ಯ ಪುರುಷನಲ್ಲ. ಅವರಿಗೆ ಸಂನ್ಯಾಸ ಪರಂಪರೆಯಿಂದ ಬಂದಿರುವ, ಯಾವುದೇ ಕಾರಣಕ್ಕೂ ಮುರಿಯಲಾಗದ ಕೆಲವೊಂದು ಕಟ್ಟುಪಾಡುಗಳಿವೆ. ಅಕಸ್ಮಾತ್ತಾಗಿ  ಯಾವ ಕಾರಣಕ್ಕಾದರೂ ಅಂತಹಾ ಕಟ್ಟುಪಾಡುಗಳನ್ನು ಮುರಿದರೆ ಅದು ಇಡಿಯ ಸಂನ್ಯಾಸ ಪರಂಪರೆಗೆ, ಹಿಂದಿನ ಎಲ್ಲಾ ಸಂನ್ಯಾಸಿಗಳಿಗೆ ಮಾಡುವ ಘೋರ ಅಪಮಾನ. ಇವತ್ತು ರಾಘವೇಶ್ವರರನ್ನು ವೀರ್ಯ ಪರೀಕ್ಷೆಗೆ ಒತ್ತಾಯಿಸುತ್ತಿರುವವರಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ,  ಶ್ರೀಗಳು ವೀರ್ಯ ಪರೀಕ್ಷೆಗೊಳಪಟ್ಟು ನಾಳೆಯ ದಿನ ಅದು ನೆಗೆಟಿವ್ ಎಂದು ಬಂತೆಂದರೆ , ಅವರ ಸಂನ್ಯಾಸ ವೃತಕ್ಕೆ ಭಂಗ ತಂದ ಹೊಣೆಯನ್ನು ಹೊರಲು ನಿಮಗ್ಯಾರಿಗಾದರೂ ಸಾಧ್ಯವಿದೆಯಾ?  ಅಂತಹಾ ಅಚಾತುರ್ಯಕ್ಕೆ ಕಾರಣರಾದವರಿಗೆ ಕ್ಷಮೆಯೆಂಬುದಿದೆಯಾ? ವೀರ್ಯ ಪರೀಕ್ಷೆಗೊಳಪಟ್ಟ ಶ್ರೀಗಳು ಪೀಠತ್ಯಾಗ ಮಾಡಬೇಕೆಂದು ಮತ್ತೆ ಹುಯಿಲೆಬ್ಬಿಸುವುದು ನೀವುಗಳೇ ತಾನೆ? ಅದೇ ತಾನೆ ನಿಮಗೆ ಬೇಕಾಗಿರುವುದು?

ಅಷ್ಟಕ್ಕೂ ಶ್ರೀಗಳೇನೂ ತಲೆಮರೆಸಿಕೊಂಡಿಲ್ಲವಲ್ಲಾ? ವೀರ್ಯ ಪರೀಕ್ಷೆಯೊಂದು ಬೇಡ ಎಂದಿದ್ದಾರೆ ಬಿಟ್ಟರೆ, ನಿತ್ಯವೂ ಎಂದಿನಂತೆ ಅದೇ ಹಸನ್ಮುಖರಾಗಿ, ನಗು ನಗುತ್ತಾ ಬಹಿರಂಗವಾಗಿಯೇ ಶಿಷ್ಯರ ಜೊತೆಗೂಡಿ ಪೂಜಾ ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಲ್ಲಾ?

ಒಂದು ಉದಾಹರಣೆಯನ್ನೇ ತೆಗೆದುಕೊಳ್ಳಿ. ಮೊದಲಿಗೆ ಆದಾಯಕ್ಕೂ ಮೀರಿದ ಅಕ್ರಮ ಆಸ್ಥಿ ಪ್ರಕರಣದಲ್ಲಿ ಜಯಲಲಿತಾ ತಪ್ಪಿತಸ್ಥೆ ಎಂದು ತೀರ್ಮಾನಿಸಿದ ಬೆಂಗಳೂರು ಸೆಷನ್ಸ್ ಕೋರ್ಟ್ ಆಕೆಯನ್ನು ಜೈಲಿಗಟ್ಟಿತು. ಜಯಲಲಿತಾ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು. ಅವರ ಭಂಟ ಪನ್ನೀರ್ ಸೆಲ್ವಂರನ್ನು ಡಮ್ಮಿಯಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು. ಜಾಮೀನಿಗೆ ಅರ್ಜಿ ಗುಜರಾಯಿಸಿದ ಜಯಲಲಿತಾರ ನಡೆಯನ್ನು ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್ ಆಕೆಗೆ ಜೈಲು ಕಾಯಾಂಗೊಳಿಸಿತು. ಸುಮಾರು ಎಂಟು ತಿಂಗಳುಗಳ ಬಳಿಕ ಏನಾಯ್ತು? ಯಾವ ಕೋರ್ಟ್ ಆಕೆಗೆ ಜಾಮೀನು ನಿರಾಕರಿಸಿತೋ, ಅದೇ ಕೋರ್ಟ್ ಆಕೆ ತಪ್ಪಿತಸ್ತೆಯೇ ಅಲ್ಲ ಎಂದು ತೀರ್ಪಿತ್ತಿತು. ಜಯಲಲಿತಾ ಬಿಡುಗಡೆಯಾದರು. ಡಮ್ಮಿ  ಮುಖ್ಯಮಂತ್ರಿಯನ್ನು ಕೆಳಗಿಳಿಸಿ ಮತ್ತೆ ಜಯಲಲಿತಾರನ್ನೇ ಮುಖ್ಯಮಂತ್ರಿ ಮಾಡಲಾಯಿತು. ಜಯಲಲಿತಾರನ್ನು ಸಮರ್ಥಿಸುವುದಕ್ಕಾಗಿ ನಾನಿಲ್ಲಿ ಈ ವಿಷಯವನ್ನು ಹೇಳಿಲ್ಲ, ಆದರೆ ಅದೇ ರೀತಿ ರಾಘವೇಶ್ವರರ ಕೇಸಿನಲ್ಲಿ ಮಾಡಲು ಸಾಧ್ಯವಿದೆಯೇ? ವಿರೋಧಿಗಳು ಪೀಠತ್ಯಾಗ ಮಾಡಿ ಎಂದು ಬೊಬ್ಬಿಡುತ್ತಿರುವುದಕ್ಕೆ ಶ್ರೀಗಳನ್ನು ಈಗ ಪೀಠತ್ಯಾಗ ಮಾಡಿಸಿ, ಅವರ ಸ್ಥಾನಕ್ಕೊಬ್ಬ ಡಮ್ಮಿಯನ್ನು ಕೂರಿಸಿ, ಮುಂದೆ ಅವರು ತಪ್ಪಿತಸ್ತರಲ್ಲ(ನಮಗದು ನಿಸ್ಸಂಶಯವಾಗಿ ತಿಳಿದಿದೆ) ಎಂದು ನ್ಯಾಯಾಲಯವೇ ಅಧಿಕೃತವಾಗಿ ಆದೇಶ ನೀಡಿದ ಬಳಿಕ ಮತ್ತೆ ಪೀಠಕ್ಕೇರಿಸಲು ಅದೇನು ರಾಜಕೀಯವೆಂದು ಅಂದುಕೊಂಡಿದ್ದೀರಾ?  ಪನ್ನೀರ್ ಸೆಲ್ವಂರನ್ನು ಕೆಳಗಿಳಿಸಿ ಮತ್ತೆ ಜಯಲಲಿತಾಗೆ ಪಟ್ಟಕಟ್ಟಿದಂತೆ ಇಲ್ಲೂ ಹಾಗೇಯೇ ಮಾಡಲು ಅದೇನು ಮಕ್ಕಳಾಟವಾ? ಅಷ್ಟಕ್ಕೂ, ಯಾವ ಉಚ್ಚ ನ್ಯಾಯಾಲಯ ಜಯಲಲಿತಾಗೆ ಜಾಮೀನು  ನೀಡಲು ನಿರಾಕರಿಸಿತ್ತೋ ಅದೇ ನ್ಯಾಯಾಲಯ ಜಯಲಲಿತಾ ತಪ್ಪಿತಸ್ತೆಯಲ್ಲ ಎಂದು ಈಸಿಯಾಗಿ ಹೇಳಿತಲ್ಲ, ನಮ್ಮ ನ್ಯಾಯ ವ್ಯವಸ್ಥೆಯ ಮೇಲೆ ಅದೆಷ್ಟು ವಿಶ್ವಾಸಾರ್ಹತೆಯನ್ನು ಇರಿಸಬಹುದು?  ಸಂನ್ಯಾಸ ಪೀಠವೆಂಬುದು ಸಾಂವಿಧಾನಿಕ ಪೀಠವಲ್ಲದೇ ಇರಬಹುದು, ಆದರೆ ಪುರಾತನ ಪರಂಪರೆಯುಳ್ಳ ಆ ಪೀಠಕ್ಕೂ ಇಂತದ್ದೇ ಆಚಾರ ವಿಚಾರವೆಂಬ ಸಂವಿಧಾನ ಇದ್ದೇ ಇರುತ್ತದಲ್ಲಾ?

ಬಹುಶಃ ರಾಘವೇಶ್ವರರಷ್ಟು ದಾಳಿಗೊಳಗಾಗುತ್ತಿರುವ ಸಂತಶ್ರೇಷ್ಠರು ಮತ್ತೊಬ್ಬರಿರಲಿಕ್ಕಿಲ್ಲ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕರ್ಮಗಳಿಗೆ ಮುಕ್ತಿ ಸಿಗದ ಕೆಲವು ಪ್ರೇತಾತ್ಮಗಳು,   ಮಠದಿಂದ ಏನನ್ನೋ ಬಯಸಿ ಕಡೆಗೆ ಅದು ಸಿಗದೆ ನೊಂದ ಅತೃಪ್ತ ಆತ್ಮಗಳು, ಇದುವರೆಗೆ ಮಠಕ್ಕೆ ಬಾರದೆ, ಮಠ ಅಂದರೇನು, ಅದರ ಪರಂಪರೆಯೇನು ಎಂಬುದು ಗೊತ್ತಿಲ್ಲದವರೆಲ್ಲಾ  ಹಾದಿ ಬೀದಿಯಲ್ಲಿ ನಿಂತು ಆರೋಪ ಮಾಡುತ್ತಿದ್ದಾರೆ. ಸಿಐಡಿ, ರಾಜ್ಯ ಸರಕಾರ, ಘಟನಾಘಟಿ ನಾಯಕರುಗಳು, ಮಹಿಳಾ ಆಯೋಗಗಳು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವ ಟಿವಿ ಚಾನಲ್’ಗಳು, ಸಮಾನ ಮನಸ್ಕರೆಂದು ಹೇಳಿಕೊಳ್ಳುವ ವಿಕೃತ ಪುರುಷರುಗಳು.. ಹೀಗೆ ಒಬ್ಬ ರಾಮನನ್ನು ಮಣಿಸಲು ರಾವಣರೆಲ್ಲಾ ಒಂದಾಗಿದ್ದಾರೆ. ತನ್ನ ಆಧ್ಯಾತ್ಮ ಶಕ್ತಿಯಿಂದಲೇ ಜನಪ್ರೀಯತೆಯ ಉತ್ತುಂಗಕ್ಕೇರಿದ  ರಾಘವೇಶ್ವರರನ್ನು ಹಳಿಯಲು ದುಷ್ಟ ಶಕ್ತಿಗಳೆಲ್ಲಾ ಕೈಜೋಡಿಸಿವೆ. ಆದರೆ, ಶ್ರೀಗಳ ಬಂಧನಕ್ಕೆ ಪ್ರಯತ್ನಗಳು ನಿತ್ಯ ನಿರಂತರ ಸಾಗಿರುವಾಗಲೂ ಶ್ರೀಗಳು ಮಾತ್ರ ನಿರಮ್ಮಳರಾಗಿ, ನಿರ್ಭೀತಿಯಿಂದ ತಮ್ಮ ಸಂನ್ಯಾಸ ವೃತವನ್ನು ಮುಂದುವರಿಸಿದ್ದಾರೆ.  ಅವರಿಗೆ ಒಂದಿಂಚೂ ಭಯವಿಲ್ಲ, ಅನುಮಾನವಿಲ್ಲ.  ಬಹುಶಃ ತಪ್ಪು ಮಾಡದವನಿಗೆ ಮಾತ್ರ ಇಷ್ಟೊಂದು ಒತ್ತಡವಿದ್ದಾಗ್ಯೂ ನಿರಮ್ಮಳನಾಗಿರಲು ಸಾಧ್ಯ,  ಅಲ್ವಾ?

ಲಾಸ್ಟ್ ಪಂಚ್: ನೂರಾ ಅರುವತ್ತೊಂಬತ್ತು ಭಾರಿ ಅತ್ಯಾಚಾರವಾಗಿತ್ತು ಎನ್ನುತ್ತಾರಲ್ಲ, ಅಷ್ಟು ನಿಖರ ಲೆಕ್ಕ ಹೇಗೆ ಎಂಬುದೇ ನನಗೆ ಆಶ್ಚರ್ಯ! ಪ್ರತಿ ಭಾರಿ ಅತ್ಯಾಚಾರವಾದಾಗಲೂ “ಆ ಒಂದು.. ಆ ಎರಡು.. ಆ ಮೂರು..” ಎಂದು ಡೈರಿಯಲ್ಲಿ ಬರೆಯುತ್ತಿದ್ದರೋ ಹೇಗೆ? ಅದಿರ್ಲಿ.. ರಾಮ ಪ್ರಸಾದ ತಿಂದ ಅಮಲಿಗೆ ಕಂಟ್ರೋಲ್ ತಪ್ಪುತ್ತಿದ್ದೆ ಎಂದರಲ್ಲಾ, ಹಾಗೆಯೇ ಈ ನೂರಾ ಅರವತ್ತೊಂಬತ್ತರ ಲೆಕ್ಕ ಬರೆಯುವಾಗ  ತಪ್ಪಿರಲಿಲ್ವಾ?!

 Pic Courtesy: Yen Key

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!