ಅಂಕಣ

ರಾಷ್ಟ್ರಪ್ರೇಮದ ಪ್ರಸಾರದಲ್ಲಿ ಹಲವು ಹರಹುಗಳ ಅವಜ್ಞೆ.

’ಒಂದಾನೊಂದು ಕಾಲದ’ ನೀತಿಭೋಧಕ ಕತೆಯಿಂದ ಮೊದಲ್ಗೊಳ್ಳೋಣ. ಅರಣ್ಯದ ಅಂಚಲ್ಲಿ ಹರಿಯುವ ನದಿಯಾಚೆಗಿತ್ತಾ ಕುಟೀರ. ಕುಟೀರವೆಂದ ಮೇಲೆ ಋಷಿಗಳೋ, ಜ್ಞಾನಿಗಳೋ ಇದ್ದೇ ಇರುತ್ತಾರೆಂಬುದು ನಿಶ್ಚಯವೇ ಸರಿ; ಗುರುವರೇಣ್ಯರು ತಮ್ಮ ನಾಲ್ಕು ಜನ ಶಿಷ್ಯರೊಂದಿಗೆ ವಾಸಿಸುತ್ತಿದ್ದರು. ಉತ್ತಮ ಆಲೋಚನೆ, ನಿಷ್ಕಾಮ ಕರ್ಮದ ಹೊಸಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ಅವರದ್ದು. ಜ್ಞಾನಾಕಾಂಕ್ಷಿಗಳಾಗಿ, ವಿದ್ಯಾಕಾಂಕ್ಷಿಗಳಾಗಿ, ಮುಮುಕ್ಷುಗಳಾಗಿ ಬರುವವರೆಲ್ಲರಿಗೂ ಸಮಾನ ಸತ್ಕಾರವಿತ್ತು. ಪೂರ್ವಾಶ್ರಮದ ಯಾವುದೇ ಹಮ್ಮು-ಬಿಮ್ಮು, ನಿರಾಶೆ-ದುಃಖಗಳಿಗವಕಾಶವಿಲ್ಲದಂತೆ ಗುರುವಿನ ಪದತಲದಲ್ಲಿ ಕುಳಿತು ಜ್ಞಾನಾರ್ಜನನೆ ಮಾಡುತ್ತಿದ್ದರು. ಒಂದೊಂದು ಆಶ್ರಮಕ್ಕೂ ತನ್ನದೇ ಆದ ವಿಶಿಷ್ಟ ಪಠ್ಯ, ಬೇರೆಯದೇ ಆದ ಕಲಿಸುವಿಕೆಯ ಶೈಲಿ ಇರುತ್ತಿತ್ತು. ಎಲ್ಲ ವೈವಿಧ್ಯ-ವೈರುಧ್ಯಗಳ ನಡುವೆಯೂ ಜೀವನದಲ್ಲಿ ಸಂಪಾದಿಸಿ ಆತ್ಮೈಕಗೊಳಿಸಿಕೊಳ್ಳಬೇಕಾದ ಮೌಲ್ಯಗಳ ಪರಮಧ್ಯೇಯ ಒಂದೇ ಆಗಿತ್ತು; ಲೋಕಕಲ್ಯಾಣ ಮತ್ತು ಶುದ್ಧಶಾಂತಿ. ಪ್ರಸ್ತುತ ಆಶ್ರಮದ ಅಧ್ಯಾಪಕರು, ನೀತಿಕತೆಗಳ ಅಥವಾ ಅನುಭವಗಳ ಮುಖಾಂತರ ಉಪದೇಶಿಸುತ್ತಿದ್ದರು. ಅಂದಿನ ದಿನದ ಪಾಠದ ಕೊನೆಯಲ್ಲಿ ಪ್ರಶ್ನೆ ಎದ್ದಿತು, “ರಾಷ್ಟ್ರ ಎಂದರೇನು?”

ಮೊದಲನೇಯವನೆಂದ, “ಸಾವಿರಾರು ಯೋಜನ ವಿಸ್ತೀರ್ಣದ, ನೆಲ-ಜಲಗಳನ್ನೊಳಗೊಂಡ ಭೌಗೋಳಿಕ ರಚನೆ.”

ಗುರುಗಳು ತಲೆದೂಗಿದರು.

“ಹಲವಾರು ಜನರು ಗುಂಪಲ್ಲಿ ವಾಸಿಸುವ ಜಾಗ” -ಎರಡನೇಯವನ ಸರದಿಯಾಗಿತ್ತು.

ಮುಗುಳ್ನಕ್ಕ ಅಧ್ಯಾಪಕರು, “ನೀನು?” ಎಂದು ಇನ್ನೊಬ್ಬನೆಡೆಗೆ ಹುಬ್ಬು ಹಾರಿಸಿದರು.

“ಜನ ಅಥವಾ ಗುಂಪು ಒಬ್ಬ ಬಲಿಷ್ಟ ನಾಯಕನಡಿಯಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲ್ಪಟ್ಟು, ಆದೇಶಗಳಿಗೆ ಬದ್ಧರಾಗಿರುವುದು ಮತ್ತು ಸ್ವತಃ ಪ್ರಜೆಗಳಿಂದಾದ ಸ್ವತಂತ್ರ ಸೈನ್ಯವೊಂದನ್ನು ಹೊಂದಿರುವುದು” ಉತ್ತರ ಕೇಳಿದ ಉಪಾಧ್ಯಾಯರು, ನೀಳ ಗಡ್ಡವನ್ನು ನೀವುತ್ತಾ ಕಣ್ಣಲ್ಲೇ ನಕ್ಕರು.

ಅವರನ್ನು ನೋಡುತ್ತಾ ಉಸುರಿದ ಕೊನೆಯವ, ” ರಾಷ್ಟ್ರವೆಂದರೆ ತನ್ನದೇ ಆದ ಸಂಸ್ಕೃತಿಯೊಂದನ್ನು ಹೊಂದಿ, ವೈವಿಧ್ಯಮಯವಾದ ಜನಜೀವನವನ್ನೂ, ಜೀವನಕಲೆಯನ್ನೂ, ಜ್ಞಾನವನ್ನೂ ಹೊಂದಿರುವುದು”

ಕೆಲವು ಸಮಯದ ಮೌನದ ನಂತರ ಶಿಷ್ಯಂದಿರಿಗೆ ತಮ್ಮ ವಿಚಾರಧಾರೆಯನ್ನು ಹರಿಸಿದರು, ” ನೀವು ಹೇಳಿದ್ದು ತಪ್ಪೂ ಹೌದು, ಸರಿಯೂ ಹೌದು. ಪ್ರತಿಯೊಬ್ಬರ ವಾಕ್ಯಗಳನ್ನು ಏಕವಾಗಿ ಗ್ರಹಿಸಿದರೆ ತಪ್ಪಾಗಿಯೂ, ಅವೆಲ್ಲವನ್ನೂ ಜೋಡಿಸಿ ಅರ್ಥೈಸಿಕೊಂಡರೆ ಸರಿಯಾದ ಉತ್ತರವಾಗಿಯೂ ಇರುತ್ತದೆ. ಆದಕಾರಣ ರಾಷ್ಟ್ರಕ್ಕೆ ನಾಯಕ, ಸೈನ್ಯವೆಷ್ಟು ಮುಖ್ಯವೋ ಭೂಮಿ, ಕಾನೂನು, ಪ್ರಜೆಗಳು ಮತ್ತವರ ವೈಯಕ್ತಿಕ ಕರ್ತವ್ಯಗಳು, ಸಂಸ್ಕೃತಿ, ಜ್ಞಾನದ ಒರತೆ ಎಲ್ಲವೂ ಅಷ್ಟೇ ಪ್ರಮುಖವಾದುದು. ಮಣ್ಣಲ್ಲಿ ಹರಿಯುವ ಒಂದೇ ಒಂದು ಎರೆಹುಳವೂ ಸಹ ರಾಷ್ಟ್ರದ ಭಾಗ; ಅದರ ಸ್ವಕಾರ್ಯವೇ ರಾಷ್ಟ್ರಕ್ಕೀಯುವ ಕೊಡುಗೆ.”

ರಾಷ್ಟ್ರ ಯಾ ದೇಶವೆಂದರೇನೆಂದು ಸ್ವಲ್ಪಮಟ್ಟಿಗೆ ಸ್ಥೂಲವಾಗಿ ಅರಿತೆವು. ಇನ್ನು ಪ್ರೇಮದ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ನಿಜವಾಗಿಯೂ ’ಪ್ರೇಮ’ ಎಂದರೇನು? ನಾನು ಇಷ್ಟಪಡುತ್ತೇನೆ ಎನ್ನುವುದೇ? ಇಷ್ಟಪಡುವುದೆಲ್ಲವೂ ಪ್ರೇಮದ ಒಳವಲಯದೊಳಗೆ ಬರುವುದಿಲ್ಲ. ಸಿಹಿಯನ್ನು ಇಚ್ಚಿಸುತ್ತೇವೆಯೇ ಹೊರತು ಪ್ರೇಮಿಸುವುದಿಲ್ಲ. ಅಷ್ಟಕ್ಕೂ ವರ್ಣನೆಗೂ ಎಣುಕದ್ದು ಪ್ರೇಮ; ಅನುಭಾವದ ಮುಖಾಂತರವಾಗಿ ಪ್ರಜ್ಞೆಯೊಳಗೆ ಮೂಡಿಬರಬೇಕಾದಂಥದ್ದು. ಉಪ್ಪಿನ ರುಚಿಯನ್ನು ವಿವರಿಸಿ ಎಂದರೆ ಸಾಧ್ಯವೇ ಅದು? ರುಚಿಗ್ರಾಹ್ಯವಾಗದವನಿಗೆ ಮೂಲದ ಅನಿರ್ವಚನೀಯ ಅನುಭೂತಿಯನ್ನೊದಗಿಸಲು ಪದಗಳಿಗೆ ಅಥವಾ ಸಾಹಿತ್ಯಕ್ಕೆ ಸಾಧ್ಯವಾಗುವುದಿಲ್ಲ. ಅಂತೆಯೇ ಪ್ರೇಮ ಕೂಡಾ; ಅನುಭವಿಸಿಯೇ ಅರಿಯಬೇಕು. ಅದರ ’ತೀವ್ರತೆ’ಯನ್ನು ಪದಃಪುಂಜಗಳ ಅಲಂಕಾರ ಮಾಧ್ಯಮದಿಂದ ವಿವರಿಸಬಹುದೇ ಹೊರತು ಮೂಲದ ಪರಿಶುದ್ಧ ಪ್ರೇಮದ ಸ್ಥಾಯೀಭಾವವನ್ನಲ್ಲ. ವರ್ಣಿಸಲಾಗದ ಮಾತ್ರಕ್ಕೆ ಅವ್ಯಕ್ತವೆಂದೇನೂ ಅಲ್ಲವಲ್ಲ; ಭಾವನೆಗಳು ತಾನೇತಾನಾಗಿ ಪ್ರಕಟಗೊಳ್ಳುತ್ತವೆ. ಹಾಗೆ ಸೃಜಿಸಲ್ಪಟ್ಟ ಸದ್ಯೋಜಾತ ರಸಗಳು ಸೃಷ್ಟಿಯ ಕಾರ್ಯಕ್ಕೆ ಕಾರಣವಸ್ತುವಾಗಿ ಪ್ರಕಾಶಿಸುತ್ತವೆ. ಇರಲಿ, ಪ್ರಸ್ತುತ ವಿಷಯಕ್ಕೆ ಬಂದರೆ ಪ್ರೇಮವೆನ್ನುವುದು ಯಾವುದರೆಡೆಗೆ ನಿರ್ದೇಶಿತವಾಗಿದೆಯೆನ್ನುವುದು ಪ್ರಶ್ನೆ. ಅಂದರೆ ಒಬ್ಬ ಗಂಡು, ಹೆಣ್ಣಿನೆಡೆಗೆ ತೋರುವ ಪ್ರೀತಿ ಯಾವುದಕ್ಕೆ ಸಂಬಂಧಿಸಿದ್ದಾಗಿರುತ್ತದೆ? ಆಕೆಯ ಮಾಟವಾದ ದೇಹಸೌಂದರ್ಯಕ್ಕೇ? ಮೊಗದಲ್ಲಿ ಸೂಸುವ ಕಳೆಗೇ? ಹಾವಿನಂತೆ ಬಳುಕುವ ನಡಿಗೆಗೇ? ಮಿಂಚುವ ದಂತಪಂಕ್ತಿಗಳಿಗೇ? ಸುಂದರ ನೀಳಜಡೆಯೆಡೆಗೇ? ಬಾಹ್ಯದಲ್ಲಿ ಕುರೂಪಿಯಾಗಿದ್ದರೂ (ಕುರೂಪವೆನ್ನುವುದೂ ಕೂಡ ತಾತ್ಕಾಲಿಕವಾದ, ವೈಯಕ್ತಿಕ ಮನೋಭಾವ) ಆಂತರ್ಯದ ವಿಶಾಲ ಗುಣಗಳಿಗೇ? ನೀಳಜಡೆಯಿಂದಲೇ ಆಕರ್ಷಿತನಾಗಿದ್ದಾನೆಂದುಕೊಳ್ಳೋಣ. ಅದೇ ಸುಂದರ, ಕಡುಕಪ್ಪು, ಕೇಶರಾಶಿಯನ್ನು ಹೆಣ್ಣಿನಿಂದ ಬೇರ್ಪಡಿಸಿ, ಅಂದರೆ ಕತ್ತರಿಸಿಟ್ಟರೆ ಮೊದಲಿನ ದಿವ್ಯೋಲ್ಲಾಸಭರಿತವಾದ ಪ್ರೇಮದ ಉತ್ಕಟತೆ ಹುಟ್ಟಲು ಸಾಧ್ಯವೇ? ಛೀ, ಥೂ ಎಂದು ಕೂದಲೆಡೆಗೆ ಕ್ಯಾಕರಿಸಿ ಹೋಗುತ್ತಾನಾತ. ಆದರೆ ಹೆಣ್ಣಿನೆಡೆಗಿನ ಪೂರ್ವಭಾವ ಇನ್ನೂ ಜಾಗ್ರತವಾಗಿರುತ್ತದೆ. ನಾವೀಗ ಹೀಗೊಂದು ತೀರ್ಮಾನಕ್ಕೆ ಬರೋಣ- ಪ್ರೇಮದ ಉತ್ಪತ್ತಿಗೆ ಮಾತ್ರ ವಸ್ತು ವಿಶೇಷ ಕಾರಣವಾಗಬಹುದೇ ಹೊರತು ಅದರ ನಿತ್ಯಸ್ಥಾಯಿತನ ಅಥವಾ ಶಾಶ್ವತತೆಗಲ್ಲ. ಇದನ್ನೇ ದೇಶಕ್ಕೆ ಹೋಲಿಸಿ ನೋಡೋಣ. ಪೂರ್ವದಲ್ಲಿ ತಿಳಿಸಿದಂತೆ ದೇಶವೆಂದರೆ ಭೌಗೋಳಿಕ ವಿಸ್ತೀರ್ಣವಲ್ಲ; ಅಂತೆಯೇ ದೇಶಪ್ರೇಮವೆಂದರೆ ತಾನು ವಾಸಿಸುವ ಭೂಮಿ ಯಾ ಕಲ್ಲು-ಮಣ್ಣು ಯಾ ನದಿ-ತೊರೆ-ಸಮುದ್ರಗಳ ಕುರಿತಾದುದುದಲ್ಲ. ಕೇವಲ ಜನರ ಗುಂಪು ಅಥವಾ ಬಲಿಷ್ಟ ನಾಯಕತ್ವದಡಿಯಲ್ಲಿರುವ ಸೇನೆ ದೇಶವಾಗುವುದಿಲ್ಲ; ಆದ್ದರಿಂದ ಜನಾಂಗ ಪ್ರೀತಿ, ನಾಯಕರ ಆರಾಧನೆ ವೈಯಕ್ತಿಕ ದೃಷ್ಟಿಕೋನವಾಗುತ್ತದೆಯೇ ಹೊರತು ದೇಶಪ್ರೇಮವಾಗುವುದಿಲ್ಲ. ಸಂಸ್ಕೃತಿಯೆಡೆಗಿನ ಅಭಿಮಾನ ಸ್ವಧರ್ಮ ಪೋಷಣೆ ಯಾ ಧರ್ಮಾಭಿಮಾನವಾಗಬಲ್ಲುದೇ ಹೊರತು ರಾಷ್ಟ್ರಾಭಿಮಾನವಲ್ಲ. ಹೀಗಿರುವಾಗ ರಾಷ್ಟ್ರಪ್ರೇಮವೆಂದರೇನು? ಯಾವ ರೀತಿಯಲ್ಲಿ ಎಲ್ಲಾ ವೈವಿಧ್ಯಮಯ ಆಯಾಮಗಳೂ ಸೇರಿ ಏಕೈಕವಾದ ’ರಾಷ್ಟ್ರ’ವೆಂಬ ಭಾವನೆಯ ಸ್ಫುರಣೆಯಾಗುತ್ತದೆಯೋ ಅದೇ ವಿಧದಲ್ಲಿ ’ರಾಷ್ಟ್ರಪ್ರೇಮ’ವೂ ಕೂಡಾ. ಪೂರ್ವೋಕ್ತ ಸಾಲುಗಳ ಸಂಯೋಗವೇ ದೇಶದೆಡೆಗಿನ ಪ್ರೀತಿಯ ಒಟ್ಟೂ ಅರ್ಥವಿವರಣೆಯನ್ನು ನೀಡುತ್ತವೆ. ಕೊಟ್ಟಕೊನೆಯದಾಗಿ, ರಾಷ್ಟ್ರಪ್ರೇಮವೆಂದರೆ ಇಡೀ ದೇಶದ ಪ್ರತಿಯೊಂದು ವಸ್ತು ಯಾ ಜೀವಿ ಯಾ ಪೃಕೃತಿಯೆಡೆಗಿನ ಮಾನವನ ಪರಿಶುದ್ಧ ಭಾವನೆಯೆನ್ನಬಹುದು.

ಭಾರತದಲ್ಲಿನ ಪ್ರಸಕ್ತ ಸನ್ನಿವೇಶದಲ್ಲಿ ಸ್ವಾತಂತ್ರ್ಯೋತ್ತರ ದಶಕಗಳಲ್ಲೆಂದೂ ಕಂಡುಬರದ ಅತೀ ಹೆಚ್ಚಿನ ಮಟ್ಟದ ದೇಶಪ್ರೇಮದ ಛಳಕು ಹರಿದಾಡುತ್ತಿದೆ. ದೇಶಕ್ಕಾಗಿ ಟೊಂಕಕಟ್ಟಿ ನಿಂತ ಉತ್ತಮ ಮನಸ್ಸಿನ ಯುವಕರ ದಂಡು ಅಲ್ಲಲ್ಲಿ ಕಾಣಬರುತ್ತಿದೆ. ಒಂದು ಕಾಲದಲ್ಲಿ ಮರೆತೇ ಹೋದಂತಿದ್ದ ಮಹಾನ್ ಮಂತ್ರವಾದ ’ವಂದೇ ಮಾತರಂ’ನ ಹಲವು ವಿನ್ಯಾಸದ ಗೀತೆಗಳು ಮೊಬೈಲ್‍ಗಳಲ್ಲಿ ಹರಿದಾಡುತ್ತಿವೆ. ಆಗಾಗ ವಿದ್ವಾಂಸರ ಭಾಷಣ; ಭಗತ್‍ಸಿಂಗ್, ಬೋಸ್‍ರ ದೊಡ್ಡ ದೊಡ್ಡ ಫಲಕಗಳು. ದೇಸೀಯತೆಯ ಹೊಸಗಾಳಿ ಭರ್ರನೆ ಬೀಸುತ್ತಿದೆ. ವೀರಸೈನಿಕರ ಕಥೆಗಳ ಪ್ರಚಾರದೊಂದಿಗೆ ವಿದ್ಯಾವಂತ ಯುವಕರೆಲ್ಲರೂ ಕೆಚ್ಚೆದೆಯವರಾಗಬೇಕೆಂಬ ಘರ್ಜನೆಯ ಕರೆ. ತಾಯಿ, ಮಗುವನ್ನು ಹೆರುವ ಅರೆಕ್ಷಣದಂಥ ಸಂಧಿಕಾಲವಿದು. ಒಂದು ಕಾಲದಲ್ಲಿ ಅವಹೇಳನಕ್ಕೊಳಗಾಗಿದ್ದ ಸನಾತನ ಸಂಸ್ಕೃತಿಯ ಉತ್ತಮಾಂಶಗಳು ಮತ್ತೆ ಬೆಳಕಿಗೆ ಬಂದು ಜ್ಞಾನವಾಹಿನಿಯಂತೆ ಕಂಗೊಳಿಸುವ ನವೀನ ಪರ್ವವಿದು. ಪ್ರತಿಯೊಬ್ಬ ಪ್ರಜ್ಞಾವಂತ ಯುವಕನಲ್ಲೂ, ’ಅವಕಾಶವಿದ್ದರೆ ನಾನೂ ಸೈನಿಕನಾಗಿ ಗಡಿ ಕಾಯುತ್ತಿದ್ದೆ’ನೆಂಬ ಹಪಾಹಪಿ. ಒಂದು ರೀತಿಯಲ್ಲಿ ಯೋಚಿಸಿದರೆ ಈಗ ದೇಶಭಕ್ತಿಯ ಪ್ರಮುಖ ಕೇಂದ್ರಬಿಂದು, ಸೇನೆ ಮತ್ತು ಯೋಧ. ಚಳಿ-ಮಳೆ-ಗಾಳಿಯೆನ್ನದೇ ಮೋಹದ ಸಂಸಾರವನ್ನು ತ್ಯಜಿಸಿ, ಬಟ್ಟಂಬಯಲಿನಲ್ಲಿ ವಿರಾಗಿಯಂತೆ ಗಡಿ ಕಾಯುವಾತನೇ ಅಪ್ರತಿಮ ದೇಶಭಕ್ತ – ಭಾರತಮಾತೆಯ ವೀರಪುತ್ರನೆಂದೂ, ತಾವೂ ಅವರಲ್ಲೊಬ್ಬರಾಗಬೇಕೆಂಬ ದೂರದಾಸೆ ಬಿಸಿರಕ್ತದ ಯುವಕರದ್ದು. ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಸಂಗ್ರಹವಾದ ವಸ್ತುಗಳನ್ನೂ, ಹಣವನ್ನೂ ಹುತಾತ್ಮ ಸೈನಿಕರ ಕುಟುಂಬಕ್ಕೆ ಅರ್ಪಿಸುವ ಸಾರ್ಥಕಭಾವನೆ ಎಲ್ಲರಲ್ಲೂ ಕಾಣುತ್ತಿದೆ. ನಿಜವಾಗಿಯೂ ಇದು ಸಂಧಿಕಾಲವೇ ಸರಿ; ಹಳೆಯ ಒಣಸಿದ್ಧಾಂತದ ಬೇರುಗಳನ್ನು ಕಿತ್ತೆಸೆದು ನವೀನ ಕ್ರಿಯಾಶೀಲ ಸಮಾಜ ಸ್ಥಾಪಿಸುವೆಡೆಗೆ ದಾಪುಗಾಲಿಡಬೇಕಾದ ಪರ್ವಸಮಯ. ಇಂಥ ಗಳಿಗೆಯಲ್ಲಿ ನಿರ್ಲಕ್ಷಕ್ಕೊಳಗಾಗುವ ಸಣ್ಣ ವಿಷಯಗಳೂ ಕೂಡ ಮುಂದಿನ ಸಮಾಜ ಯಾ ದೇಶದ ಸಾರ್ವಕಾಲಿಕ ಸಾರ್ವತ್ರಿಕ ಬೆಳವಣಿಗೆಯ ಹಂತಗಳಲ್ಲಿ ಕೊರತೆಯ ಹುಣ್ಣಾಗಿ ಪರಿಣಮಿಸಬಹುದು.

ದೇಶವೆಂದರೆ ಎಲ್ಲವನ್ನೂ ಒಳಗೊಂಡಿರುವುದಷ್ಟೇ. ಹೀಗಿರುವಾಗ ಮುಖ್ಯ ಪ್ರಶ್ನೆ ಏಳುವುದೇನೆಂದರೆ ’ಕೇವಲ’ ಸೇನೆಗೆ ಯಾಕಿಷ್ಟು ಪ್ರಾಮುಖ್ಯತೆ ಕೊಡುತ್ತಿರುವುದು? ಓದುಗರು ಸಂದೇಹವನ್ನು ಸರಿಯಾಗಿ ಗಮನಿಸಬೇಕು; ಇಲ್ಲಿ ’ಕೇವಲ’ ಎಂಬ ಪದವನ್ನು ಬಳಸಲಾಗಿದೆಯೇ ಹೊರತು ’ಸೇನೆಗ್ಯಾಕಿಷ್ಟು ಪ್ರಾಮುಖ್ಯ ಕೊಡಲಾಗುತ್ತಿದೆ?’ ಎಂದು ಕೇಳಲ್ಪಟ್ಟಿಲ್ಲ. ಪ್ರಸ್ತುತದಲ್ಲಿ ಪ್ರಜೆಗಳೆಲ್ಲರಿಗೂ ಸೇನೆ-ಸೈನಿಕರ ಬಗ್ಗೆ ಅರಿವುಂಟಾಗಿ ಆ ಮೂಲಕ ಗೌರವ ಮೂಡಿರುವುದು ಸ್ವಾಗತಾರ್ಹ ಮತ್ತು ಪ್ರಶಂಸಾರ್ಹ ವಿಷಯವೇ ಸರಿ. ಆದರೀ ಘಟ್ಟದಲ್ಲಿ ’ಪ್ರೇಮ’ದ ಹಲವಾರು ಆಯಾಮಗಳು ನಮಗೇ ತಿಳಿಯದಂತೆ ಮುಚ್ಚಿಹೋಗುವ ಸಂಭವವಿರುತ್ತದೆ. ಒಬ್ಬ ರೈತನಾದವ ತನ್ನ ಭೂಮಿಯನ್ನು ಪ್ರೀತಿಸುತ್ತಾನೆ, ಬೆಳೆ ತೆಗೆಯುತ್ತಾನೆ, ಬದುಕುತ್ತಾನೆ. ಆತನಿಗೆ ದೇಶಪ್ರೇಮ, ಸ್ವಾತಂತ್ರ್ಯಸಂಗ್ರಾಮ, ವೀರಯೋಧರ ಬಗೆಗೇನೂ ತಿಳಿಯದು. ಹಾಗೆಂದಮಾತ್ರಕ್ಕೆ ದೇಶಪ್ರೇಮಿಯಲ್ಲವೇ ಅವ? ಹೌದು, ಆ ರೈತನೊಬ್ಬ ಉತ್ತಮ ಮಟ್ಟದ ರಾಷ್ಟ್ರಭಕ್ತ. ಆತ ಸ್ವ-ಅರ್ಥಕ್ಕೋಸ್ಕರ (ಸ್ವಾರ್ಥದ ಉತ್ತಮಾರ್ಥ) ಸಂಪಾದಿಸುವುದರ ಹಿಂದೆ ನ್ಯಾಯ-ನೀತಿಗಳ ಛಾಯೆಯಿರುತ್ತದೆ. ಮೈಮುರಿದು, ಬೆವರು ಸುರಿಸಿ ನ್ಯಾಯದಿಂದ ಗಳಿಸಿ ಉಣ್ಣುತ್ತಾನೆ. ಸೈನಿಕರ ನಿಧಿಗೋ, ಬರಪರಿಹಾರಕ್ಕೋ ದಾನ ಮಾಡಬೇಕೆಂಬ ಆಲೋಚನೆಯೂ ಇಲ್ಲ; ಹಾಗಂದ ಮಾತ್ರಕ್ಕೆ ಕೈಯೊಡ್ಡಿ ಬಂದವರನ್ನು ಬರಿಗೈಯಲ್ಲಿ ಕಳಿಸುವುದೂ ಇಲ್ಲ. ಉತ್ತಮ ಹಾದಿಯಲ್ಲಿ ಸ್ವಾರ್ಥಕ್ಕೋಸ್ಕರ ಸಂಪಾದಿಸುವುದು ದೇಶಪ್ರೇಮವೇ ಸರಿ. ವಿಷಯದ ಹರಿವನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಲು ಇನ್ನೊಂದು ಉದಾಹರಣೆಯನ್ನು ಪರಿಗಣಿಸೋಣ. ಒಬ್ಬ ಶಿಕ್ಷಿತ ಅಧಿಕಾರಿ. ಮೊದಲೇ ವಿದ್ಯಾಭ್ಯಾಸದ ಹಲವು ಮಜಲುಗಳನ್ನು ಕಂಡರಿತು, ಅಪ್ರತಿಮ ದೇಶಭಕ್ತರ, ಜಿಜ್ಞಾಸುಗಳ ಬೌದ್ಧಿಕ ಚಿಂತನೆಗಳನ್ನು ಅರೆದು ಕುಡಿದು ಸಭೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತಾಗಿ ನಿರರ್ಗಳವಾಗಿ ಮಾತನಾಡಬಲ್ಲವ. ತನ್ನ ಮಗನ ಸ್ವದೇಶ ಪ್ರೇಮವನ್ನು ಕಂಡು ಸಂತಸಪಟ್ಟವ. ಆದರಾತ ಮಾಡುವುದೇನು? ದುಡಿದ ಹಣದಲ್ಲಿ ಆದಷ್ಟು ಕರವಿಮುಕ್ತಗೊಳಿಸಿ ಉಳಿದದ್ದನ್ನು ಅಕ್ರಮವಾಗಿ ಶೇಖರಿಸುತ್ತಾನೆ. ಪ್ರಚ್ಚನ್ನ ಮೂಲಗಳಿಂದ ಹೇರಳವಾಗಿ ಹರಿದುಬರುವ ಕಪ್ಪುಹಣ ಬೇರೆ. ಆಗೀಗ ಪರಿಹಾರ ನಿಧಿಗಳಿಗೆ ಒಂದಿಷ್ಟು ಸಹಾಯ ಮಾಡಿ ದಿನಪತ್ರಿಕೆಗಳಲ್ಲಿ ಕಂಡುಬಂದರೂ ಕೂಡ ದೇಶಪ್ರೇಮವೆನ್ನುವುದು ಕೇವಲ ಧರಿಸಿ ಆನಂದಿಸುವ ಆಭರಣ ಆತನಿಗೆ. ಇವೆಲ್ಲವನ್ನೂ ಒತ್ತಟ್ಟಿಗಿಟ್ಟು ಮುಖ್ಯವಿಷಯದ ಭೂಮಿಕೆಗೆ ಬಂದರೆ, ಯೋಧನೊಬ್ಬ ಅಪ್ರತಿಮ ದೇಶಭಕ್ತನಾಗುವುದು ಆತ ಮಾಡುತ್ತಿರುವ ಕಾರ್ಯದ ನಿಷ್ಕಲ್ಮಶತೆಯಿಂದ. ಭಾರತದ ಪ್ರತಿಯೊಬ್ಬ ಪ್ರಜೆಯೂ ದೇಶಭಕ್ತನೇ; ಎಲ್ಲಿಯವರೆಗೆಂದರೆ ಸಮಾಜದೆಡೆಗೆ ತನ್ನ ಪಾಲಿನ ಕೊಡುಗೆಯೇನೆಂದು ಅರಿಯುವ ತನಕ. ಇತಿಹಾಸ ಚಿತ್ರಿಸುವ ವೀರನಂತೆ ಮೀಸೆಬಿಟ್ಟು, ಸೈನಿಕರಂತೆ ಕೂದಲ ಕ್ರಾಪು ಮಾಡಿ, ’ಐ ಲವ್ ಮೈ ಇಂಡಿಯಾ’ ಎಂಬ ಮುದ್ರಿತ ಬರಹದ ಬಟ್ಟೆ ಧರಿಸಿ, ತಣ್ಣಗೆ ಐಶಾರಾಮಿ ಕಾರಿನಲ್ಲಿ ಕುಳಿತು, ವಿವಿಧ ಯೋಧರ ಬದುಕಿನ ಸಾಹಸಗಳನ್ನು ಹೊಗಳುತ್ತಾ, ಹೊಟ್ಟೆಗಿಲ್ಲದೇ ಬಂದ ಹೆಣ್ಣುಮಗಳೊಬ್ಬಳನ್ನು ’ಥೂ ಹೋಗಾಚೆ’ ಎಂದು ಎರಡು ರೂಪಾಯಿಯೆಸೆದು ಕಳಿಸುವ ಕುರುಡು ದೇಶಪ್ರೇಮ ಸುತಾರಾಂ ಬೇಡ ನಮಗೆ. ಮಾತುಮಾತಿತೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ಸಿದ್ಧನಿದ್ದೇನೆಂದು ಬೊಗಳೆ ಬಿಡುವವರೇ ಕೇಳಿ; ನಿಮ್ಮ ಜುಜುಬಿ ಉಸಿರು ತಾಯಿಗೆ ಬೇಕಾಗಿಲ್ಲ. ಭಾರತ ಮಾತೆಗಾಗಿ ಸಾಯುವ ಬದಲು ಬದುಕುವುದನ್ನು ಕಲಿಯಬೇಕು. ವ್ಯರ್ಥವಾಗಿ ಸಾಯುವ ಹತ್ತು ಜನರಿಗಿಂತ ಏಳಿಗೆಗಾಗಿ ಬದುಕುವ ಒಬ್ಬ ಸಾಕು. ಆದ್ದರಿಂದ ಕ್ರಿಯಾಶೀಲರಾಗಿ ಬದುಕುವ ಯುವಕರ ಅಗತ್ಯತೆ ಇಂದಿನ ಕಾಲಘಟ್ಟಕ್ಕಿದೆ. ಸಂಸ್ಕೃತಿಯನ್ನು ಜನರ ಮನೋಭೂಮಿಕೆಯಲ್ಲಿ ಬಿತ್ತುತ್ತಿರುವ ಸಾಂಘಿಕ ಸಂಸ್ಥೆಗಳೂ, ವ್ಯಕ್ತಿವರೇಣ್ಯರುಗಳೂ ಈ ವಿಷಯದ ಗಹನತೆಯನ್ನು ಅರ್ಥೈಸಿಕೊಳ್ಳಬೇಕು. ಯಾವ ರೀತಿಯಲ್ಲಿ ಸೈನಿಕನೊಬ್ಬ ವೀರನಂತೆ ಅನಿಸುತ್ತಾನೋ ಅದೇ ರೀತಿ, ನ್ಯಾಯ-ಪ್ರೀತಿಯ ಹಾದಿಯಲ್ಲಿ ’ಸ್ವಾರ್ಥ’ಕ್ಕೋಸ್ಕರ ದುಡಿಯುವ ಪ್ರತಿಯೊಬ್ಬ ರೈತ, ಶಿಕ್ಷಕ, ವ್ಯಾಪಾರಿ, ವೈದ್ಯ, ಎಂಜಿನಿಯರ್, ಕುಲಿಕಾರ್ಮಿಕರಾದಿ ಎಲ್ಲರೂ ಸಹ ಅಪ್ರತಿಮ ರಾಷ್ಟ್ರಪ್ರೇಮಿಗಳೇ. ಅವರ ’ಸ್ವಾರ್ಥ’ದ ದುಡಿಮೆಯ ನೆಲೆಗಟ್ಟಿನ ಹಿಂದೆ ನ್ಯಾಯ ಮತ್ತು ಪ್ರೀತಿಯ ಗಟ್ಟಿಮಣ್ಣಿರಬೇಕು. ಆದರೀ ಗಟ್ಟಿಮಣ್ಣಿನ ಉದ್ಭಾವ ತಾನೇತಾನಾಗಿ ಆಗುವುದಿಲ್ಲ. ಅದಕ್ಕೆ ’ಪ್ರೇಮ’ದ ವಿಶಾಲಾರ್ಥದ ವಿವರಣೆ ಅತ್ಯಗತ್ಯ. ಜನರ ಮನಸ್ಸಿನಲ್ಲಿ ತಾವೆಲ್ಲರೂ ದೇಶಪ್ರೇಮಿಗಳೆಂಬ ಭಾವನೆಯ ಸ್ಫುರಣವಾಗಿ ಆ ಮೂಲಕ ದಿನನಿತ್ಯದ ಕಾರ್ಯದಲ್ಲೂ ಕೂಡ ಪ್ರವಹಿಸಬೇಕು. ಆಗ ಮಾತ್ರ ದೇಶಿಗರೆಲ್ಲರೂ ತಮ್ಮ ಹೃದಯಾಂತರಾಳದಲ್ಲಿ ತಾಯಿಯನ್ನು ಪ್ರೀತಿಸತೊಡಗುತ್ತಾರೆ. ಎಲ್ಲ ವ್ಯಕ್ತಿ ಯಾ ಸಂಘಟನೆಗಳೂ ಕೂಡ ತಮ್ಮ ಪ್ರಚಾರದಲ್ಲಿ ಈ ವಿಶಾಲಾರ್ಥವನ್ನು ಪಸರಿಸಬೇಕಾದುದು ಇಂದಿನ ಕಾಲಮಾನದಲ್ಲಿ ಮುಖ್ಯವಾಗಿ ಆಗಲೇಬೇಕಾದ ಕಾರ್ಯ.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರಭಕ್ತಿಯ ಬಾಹ್ಯಾಡಂಬರ ಹೆಚ್ಚುತ್ತಿರುವುದು ವಿಷಾದನೀಯ ಸಂಗತಿ. ಆಡಂಬರವೆನ್ನುವುದಕ್ಕಿಂತ ’ತೋರಿಕೆ’ ಅಥವಾ ’ಅಲಂಕಾರ’ ಎನ್ನಬಹುದು. ಈ ಮೊದಲೇ ತಿಳಿಸಿರುವಂತೆ ಮೀಸೆ, ಬಟ್ಟೆ ಮೊದಲಾದವು ಪ್ರಮುಖ ಸಂಗತಿಗಳು. ಇದನ್ನು ಪ್ರೇಮಭಾವದ ಘನೀಭೂತಗೊಳಿಸುವಿಕೆಯೆನ್ನಬಹುದು. ಭಾವನೆಯು ಬಾಹ್ಯವಾಗಿ ಹೆಚ್ಚೆಚ್ಚು ಪ್ರಕಟಗೊಳ್ಳುತ್ತಾ ಹೋದಂತೆ ಆಂತರಿಕ ತೀವ್ರತೆಯು ಕುಂಠಿತವಾಗುತ್ತದೆ. ತೋರಿಕೆಯ ದೇಶಪ್ರೇಮ, ಸಮಾಜದಲ್ಲಿ ಯಾವ ಉನ್ನತ ಬದಲಾವಣೆಗಳನ್ನೂ ತರಲಾರದು. ಘನೀಭೂತವಾಗಿ ತಟಸ್ಥವಾದ ಭಾವನೆಗಳು ಸಮಾಜದ ವಿಕಾಸವನ್ನು ಪೋಷಿಸುವ ಕೆಲಸದಲ್ಲಿ ಸೋಲುತ್ತವೆ. ಈ ಬಾಹ್ಯ ಪ್ರೇಮವೇ ಮುಂದೊಮ್ಮೆ ವಿನಾಶಕಾರಿಯಾಗುವ ಸಂಭವವಿರುತ್ತದೆ; ಕಾಲಗರ್ಭದಲ್ಲಿ ಭಕ್ತಿಯ ಪ್ರತಿರೂಪವಾದ ದೇವಮೂರ್ತಿಗಳು ಬರುಬರುತ್ತಾ ಕುರುಡುನಂಬಿಕೆಯನ್ನು ಹುಟ್ಟುಹಾಕಿದಂತೆ. ಪ್ರಥಮ ಹಂತದ ಈ ಬಾಹ್ಯಾಚರಣೆಗಳೂ ಕೂಡಾ ಮುಂದೊಮ್ಮೆ ಉತ್ತಮ ಭಾವನೆಗಳನ್ನು ಬೆಳೆಸಲು ಸಹಕಾರಿಯಾಗುತ್ತವೆಂಬುದು ಒಪ್ಪಲೇಬೇಕಾದ ವಿಚಾರ. ಪ್ರೇಮದ ಮೂಲಾರ್ಥ ಗೊತ್ತಿಲ್ಲದಾಗ ಅಥವಾ ತಿಳಿಸುವ ಮೂಲಗಳಿಲ್ಲವಾದಾಗ ಬಾಹ್ಯಾಚರಣೆಯು ಆಡಂಬರವಾಗಿ ಕೊನೆಗೊಮ್ಮೆ ಕೇವಲ ಕುರುಡು ನಂಬಿಕೆಯಾಗುತ್ತದೆ. ಆದ್ದರಿಂದ ಆಚರಣೆಯೊಂದಿಗೆ ರಾಷ್ಟ್ರಪ್ರೇಮದ ಜ್ಞಾನ ಮೇಳೈಸಿದಾಗಲೇ ಅದೊಂದು ಸಂಘಟಿತ ಸಹಮನಸ್ಸಿನ ಸಾತ್ವಿಕ ಶಕ್ತಿಯಾಗಲು ಸಾಧ್ಯ.

ಮತ್ತೊಂದು ಆತಂಕಕಾರಿ ವಿಷಯವೇನೆಂದರೆ, ರಾಷ್ಟ್ರೈಕ್ಯ ಭಾವನೆಗಳ ಪ್ರಚಾರವನ್ನು ಒಂದು ವರ್ಗ, ಪಕ್ಷ, ಮತ, ಸಂಘಟನೆಗೆ ಹೋಲಿಸಿ, ಆ ಮೂಲಕ ದೇಶಪ್ರೇಮದ ಕುರಿತಾಗಿ ಮಾತನಾಡುವ ಬಹುಸಂಖ್ಯೆಯ ಜನರೆಲ್ಲ ಒಂದು ಪಂಥಕ್ಕೆ ಸೇರಿದವರೆಂಬ ಅವಾಸ್ತವಿಕ ಸಂಗತಿಯನ್ನು ಬಿತ್ತರಿಸುತ್ತಿರುವುದು. ವ್ಯಕ್ತಿಯೊಬ್ಬ ಮಾತಿನ ನಡುವೆ ಭಗತ್ ಸಿಂಗ್, ಬೋಸ್‍ರುಗಳನ್ನು ಉದಾಹರಿಸಿದರೆ ಮುಗಿಯಿತು; ಇವನಿಂಥದ್ದೇ ಪಂಥೀಯನೆಂಬ ಪೂರ್ವಪೀಡಿತ ನಿರ್ಧಾರವಾಗಿಬಿಡುತ್ತದೆ. ರಾಷ್ಟ್ರಪ್ರೀತಿಯೆನ್ನುವುದು ಪ್ರತಿಯೊಬ್ಬರ ಮನದಲ್ಲಿ ಹಾಸುಹೊಕ್ಕಾಗಿರಬೇಕಾಗಿದ್ದು, ವೀರತ್ಯಾಗಿಗಳ ಸ್ಮರಣೆಯೇ ಅದರ ನಿರಂತರತೆಯ ಜೀವಜಲ. ಇಂಥ ಅಪೂರ್ವ ಕೆಲಸವನ್ನು ಯಾವುದೇ ವ್ಯಕ್ತಿ ಯಾ ಸಂಘಟನೆಯು ಮಾಡುತ್ತಿದೆಯೆಂದಾದಲ್ಲಿ, ಅದು ಅವರುಗಳ ಹೃದಯವೈಶಾಲ್ಯತೆಯನ್ನೂ, ರಾಷ್ಟ್ರಪ್ರೀತಿಯನ್ನೂ ಸೂಚಿಸುತ್ತದೆಯೇ ವಿನಃ ಕುರುಡು ಧರ್ಮಾಂಧತೆ ಅಥವಾ ಪಂಥೀಯತೆಯನ್ನಲ್ಲ. ಸಮಾಜವಾದಿ ಮತ್ತು ಸಮತಾವಾದಿಗಳೆನಿಸಿಕೊಂಡವರು ತಮ್ಮ ಮೂಗಿನ ನೇರಕ್ಕೆ ಯೋಚಿಸುವುದನ್ನು ತ್ಯಜಿಸಿ ಭವಿಷ್ಯದ ಉತ್ತಮ ಸಮಾಜಕ್ಕೆ ತಾವೇನು ಕೊಡುಗೆ ನೀಡಬೇಕೆಂದು ಸ್ವತಃ ನಿರ್ಧರಿಸಿಕೊಳ್ಳುವುದೊಳ್ಳೆಯದು.

ಇನ್ನೂ ಒಂದು- ದೇಶಪ್ರೇಮದ ವಿಕೃತರೂಪ ನಮ್ಮಲ್ಲಿ ಬೇರುಬಿಟ್ಟಿದೆ. ಅದನ್ನು ಅನೃತರಾಷ್ಟ್ರಪ್ರೇಮ ಎನ್ನಬಹುದು. ಲಿಯೋ ಟಾಲ್‍ಸ್ಟಾಯ್ ಮಾತಿನಲ್ಲಿಯೇ ನೋಡೋಣ; “Patriotism is stupid because every patriot holds his own country to be the best of all, whereas, obviously, only one country can qualify. It is immoral because it enjoins us to promote our country’s interests at the expense of all other countries and by any means, including war, and is thus at odds with the very basic rule of morality, which tells us not to do to others what we do not want them to do to us” ಆದರೀ ವಾಕ್ಯಗಳಲ್ಲೂ ಕೆಲವು ದೋಶವಿದ್ದು ಮೂಲತಃ ದೇಶಪ್ರೇಮವನ್ನು ಮೂರ್ಖತನ ಅಥವಾ ಮೌಲ್ಯರಹಿತ ಭಾವನೆಯೆಂದೇನೂ ಕರೆಯುವ ಅವಶ್ಯಕತೆಯಿಲ್ಲ. ಪ್ರಸ್ತುತ ಸಮಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಒಂದು ಕೆಟ್ಟ ಮನೋಸ್ಥಿತಿಯನ್ನು ವಾಕ್ಯದ ಎರಡನೇ ಸಾಲು ಸೂಚಿಸುತ್ತದೆ. ಸ್ವದೇಶವನ್ನು ಹೊರತಾಗಿ ಬೇರೆ ರಾಷ್ಟ್ರಗಳನ್ನು ಕೀಳಾಗಿ ಕಂಡು ಅವುಗಳ ಹಕ್ಕನ್ನು ತಮ್ಮ ಸಂವರ್ಧನೆಗೋಸ್ಕರ ಬಳಸಿಕೊಳ್ಳುವುದು ಮೌಲ್ಯಯುತವಾದುದಲ್ಲ. ಪಕ್ಕದ ಚೀನಾ, ಟಿಬೇಟನ್ನು ನುಂಗಿ ನೀರ್ಕುಡಿದಿರುವುದರ ಖಂಡಿಸುವ ನಾವು, ದೇಶಪ್ರೇಮದ ವಿಚಾರ ಬಂದಾಗ ಭಾರತ, ಪಾಕ್‍ನ್ನು ಸಂಪೂರ್ಣ ವಶಪಡಿಸಿಕೊಳ್ಳಬೇಕೆಂದು ಒಕ್ಕೊರಲಿನಿಂದ ಕೂಗುತ್ತೇವೆ. ಬೇರೊಬ್ಬಾತ ಹೊಡೆಯಬಾರದೆಂದು ಯೋಚಿಸುವ ನಾವು, ಸ್ವತಃ ಇನ್ನೊಬ್ಬರನ್ನು ಹಿಂಸಿಸಬಾರದೆಂಬುದನ್ನು ಮರೆಯುತ್ತೇವೆ. ರಾಷ್ಟ್ರಪ್ರೇಮವೆಂದರೆ ಸ್ವಂತ ದೇಶದ ಕುರಿತಾದ ಪ್ರೀತಿಯೇ ಹೊರತು ಉಳಿದ ದೇಶಗಳ ಹೀಗಳೆಯುವಿಕೆಯಲ್ಲ. ವಿದೇಶಗಳ ನಿಂದಿಸುವಿಕೆ ಸ್ವದೇಶಪ್ರೇಮದ ಇನ್ನೊಂದು ರೂಪವೆಂಬ ವಿಕೃತಭಾವನೆಯನ್ನು ಅದ್ಯಾರು ಬೆಳೆಸಿದರೋ ತಿಳಿಯುತ್ತಿಲ್ಲ. ಭಾರತ, ಪ್ರಪಂಚದ ಅತ್ಯುತ್ತಮ ದೇಶವಾಗಲೆಂದು ಹಾರೈಸುವುದರಲ್ಲಿ ತಪ್ಪಿಲ್ಲ. ಆದರೆ ಸುತ್ತಮುತ್ತಲ ದೇಶವನ್ನು ಹೊಡೆದುಬಡಿದು ಆಕ್ರಮಿಸಿ ಬಲಿಷ್ಠವಾಗಿ ಬೆಳೆಯಬೇಕೆಂಬುದು, ಪ್ರೇಮಭಾವನೆಯನ್ನು ಕಲುಷಿತಗೊಳಿಸುತ್ತದೆ. ಈ ಹಂತದಲ್ಲಿಯೇ ಪ್ರೀತಿಯ ಜಾಗವನ್ನು ದ್ವೇಶ ಆಕ್ರಮಿಸುವುದು. ಉಳಿದವರನ್ನು ತುಳಿದು ಬೆಳೆಯಬೇಕೆನ್ನುವುದು ಸನಾತನ ಸಂಸ್ಕೃತಿಯ ಸಂದೇಶವೂ ಅಲ್ಲ. ನಿಜವಾದ ದೇಶಪ್ರೇಮಿಗಳಾದ ನಾವು ಹೆಮ್ಮೆಯಿಂದ ಹೇಳಬೇಕು; ವಿಶ್ವದ ಹಲವು ಮಹಾನ್ ವ್ಯಕ್ತಿಗಳನ್ನು ಪ್ರೇರೇಪಿಸಿದ್ದು ನನ್ನ ದೇಶ, ’ವಸುದೈವ ಕುಟುಂಬ’ದ ಮಹೋನ್ನತ ಭಾವನಾಝರಿಯ ಒರತೆ ನನ್ನ ದೇಶ, ಎಲ್ಲವನ್ನೂ ಬಿಟ್ಟು ನಿರಾಧಾರಿ, ದರಿದ್ರರಾಗಿ ಬಂದವರನ್ನು ಕೈಚಾಚಿ ಆಲಂಗಿಸಿದ್ದು ನನ್ನ ದೇಶ. ಹಲವಾರು ಧರ್ಮಗಳನ್ನು ಸೃಜಿಸಿ, ಇನ್ನೂ ಬೇಕಾದಷ್ಟನ್ನು ತನ್ನಲ್ಲಿ ಗರ್ಭೈಸಿಕೊಂಡಿರುವ ವಿಶ್ವಮಾತೆ ನನ್ನ ದೇಶ, ದೇಶಪ್ರೇಮದ ಉತ್ತಮೋತ್ತಮ ನಿದರ್ಶನವೇ ಭಾರತ ನೀಡಿದ ’ನಿಷ್ಕಾಮಕರ್ಮ’ದ ಉಪದೇಶ. ಹೌದಲ್ಲ! ಹೇಳಲು ಬಹಳಷ್ಟು ಒಳ್ಳೆಯ ಘಟನೆಗಳಿರುವಾಗ ಬೇರೆಯವರನ್ನು ತೆಗಳುವ ಕಾರ್ಯವೇಕೆ ನಮಗೆ?

ಪ್ರೇಮವೆನ್ನುವುದು ಅಮೂರ್ತ, ಅನಿರ್ವಚನೀಯ ಭಾವನೆ. ಎಲ್ಲಿ ಅದರ ತೋರಿಸುವಿಕೆಯ ಆರಂಭವಾಗುತ್ತದೆಯೋ ಅಲ್ಲಿಯೇ ನಶಿಸುವಿಕೆ ಶುರುವಾಗುತ್ತದೆ. ಒಂದು ಸಾಗರಕ್ಕೆ ನೂರಾರು ತೀರಗಳಿರುವಂತೆ ಪ್ರೀತಿಗೂ ಕೂಡ ಹಲವಾರು ಮುಖಗಳಿವೆ. ಆದ್ದರಿಂದ ರಾಷ್ಟ್ರಪ್ರೇಮದ ಹತ್ತು ಹಲವಾರು ಆಯಾಮಗಳನ್ನು, ಹರಹುಗಳನ್ನು ಪರಿಗಣಿಸಿ ಅವ್ಯಾವವೂ ಅವಜ್ಞೆಗೊಳಗಾಗದೇ, ತನ್ನದೇ ಆದ ನೆಲೆಯಲ್ಲಿ ಅಭಿವೃದ್ಧಿಗೊಳ್ಳುವಂತೆ ಪ್ರಸಾರಕಾರ್ಯಗಳನ್ನು ಕೈಗೊಳ್ಳುವುದು ಪ್ರಸ್ತುತ ಸಂಧಿಕಾಲದಲ್ಲಿ ಸರ್ವರೂ ಪರಿಗಣಿಸಬೇಕಾದ ಗಹನವಾದ ವಿಚಾರ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandeep Hegde

ಭಟ್ಕಳ ತಾಲ್ಲೂಕಿನ ಕೆರೆಹಿತ್ಲು ಗ್ರಾಮದವನಾಗಿದ್ದು, ಮೊದಲ ಹಂತದ ಶಿಕ್ಷಣವನ್ನು ಭಟ್ಕಳ ಮತ್ತು ಬೈಂದೂರಿನಲ್ಲಿ ಮುಗಿಸಿ, ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪಡೆದು, ಪ್ರಸ್ತುತ M.N.C ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಚಿಕ್ಕಂದಿನಿಂದಲೂ ಜತನದಿಂದ ಉಳಿಸಿಕೊಂಡು ಬಂದ ಅಭ್ಯಾಸವೆಂದರೆ ಓದುವುದು ಮತ್ತು ಬರೆಯುವುದು. ಅರೆಮಲೆನಾಡಿನ ಜನಜೀವನ, ಭಾಷೆ, ಅಭ್ಯಾಸ, ಕೃಷಿ, ಪ್ರೇಮ, ಕಾಮ, ಹಾಸ್ಯ, ಮಣ್ಣು, ನಿಸರ್ಗ ಸೌಂದರ್ಯದ ಕುರಿತಾಗಿ ಹೇಳಲು ಹಾಗೂ ಬರೆಯಲು ಯಾವಾಗಲೂ ಸಿದ್ಧ. ಹತ್ತು ಹಲವು ವಿಚಾರಧಾರೆಗಳ, ವ್ಯಕ್ತಿಗಳ ಸೈದ್ಧಾಂತಿಕ ಧೋರಣೆಗಳನ್ನು ಗಮನಿಸಿ, ಕೊನೆಗೂ ಯಾವುದಕ್ಕೂ ಪಕ್ಕಾಗದೇ ಇರುವ ವ್ಯಕ್ತಿ. ಹಲವಾರು ಕಥೆಗಳು ಮಯೂರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!