ಅಂಕಣ

ಸಂಘಟಿತ ಮನಸ್ಸು ಸಮಾಜವನ್ನು ಬದಲಿಸುತ್ತದೆ

ಸ್ನೇಹಿತರೇ ನಿಮಗೆಲ್ಲ ನೆನಪಿರಬಹುದು 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಬಿ‌ಜೆ‌ಪಿ , ಕಾಂಗ್ರೆಸ್ ಅಲ್ಲದೆ ಇನ್ನೊಂದು ಸಂಘಟನೆ ತುಂಬಾ ಪ್ರಚಲೀತದಲ್ಲಿತ್ತು ಅದೇನಮೋ ಬ್ರಿಗೇಡ್ಎಂಬ ಸಂಘಟನೆ.ಚುನಾವಣೆ ಘೋಷಣೆ ಆದ ಸಂದರ್ಭದಲ್ಲಿ ಸಮೀಕ್ಷೆ ನಡೆಸಿದ ಅನೇಕ ಮಾಧ್ಯಮಗಳು ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎಂದು ತೀರ್ಮಾನ ಮಾಡಿದ್ದರು. ಕರ್ನಾಟಕದ28 ಲೋಕಸಭಾ ಕ್ಷೇತ್ರಗಳಲ್ಲಿ ಬಿ‌ಜೆ‌ಪಿಗೆ ಗೆಲ್ಲಲು ಸಾಧ್ಯವಾಗುವುದು ಕೇವಲ 7 ಕ್ಷೇತ್ರಗಳಲ್ಲಿ ಮಾತ್ರ ಎಂದು ಪ್ರಾರಂಭದಲ್ಲಿ ಎಲ್ಲ ಮಾಧ್ಯಮಗಳು ಸಮೀಕ್ಷೆಯಲ್ಲಿ ಹೇಳಿದ್ದವು. ಆದರೆ ಒಂದು ಸಂಘಟನೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಪಣ ತೊಡುತ್ತೇವೆ, ನಮ್ಮ ಕೈಲಾದಷ್ಟು ಸಹಾಯವನ್ನು ಮೋದಿಗೆ ಮಾಡುತ್ತೇವೆ ಎಂದು ಬೀದಿಗೆ ಇಳಿದು ಪ್ರಚಾರ ಕಾರ್ಯವನ್ನು ಶುರು ಮಾಡಿತು ಅದೇ ” ನಮೋ ಬ್ರಿಗೇಡ್ “. ನಮೋ ಬ್ರಿಗೇಡ್ ಬಿ‌ಜೆ‌ಪಿಯನ್ನು ಸಂಪೂರ್ಣವಾಗಿ ಒಪ್ಪಿರಲಿಲ್ಲ ಆದರೆ ನರೇಂದ್ರ ಎಂಬ ನಾಯಕನನ್ನು ಒಪ್ಪಿತ್ತು. ಜನರ ಮನಸ್ಸಿಗೆ ನರೇಂದ್ರ ಗುಜರಾತ್ ನಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಯಿತು.ಪರಿಣಾಮ ಚುನಾವಣೆ ಘೋಷಣೆಯಾದ 1 ತಿಂಗಳ ನಂತರ ಮೋದಿ ಅಲೆ ರಾಜ್ಯದಲ್ಲೂ ಆವರಿಸಿತ್ತು. ಕೇವಲ 7 ಸ್ಥಾನ ಮಾತ್ರ ಬಿ‌ಜೆ‌ಪಿ ಗೆಲ್ಲಲು ಸಾಧ್ಯ ಎಂದಿದ್ದ ಮಾದ್ಯಮಗಳು ಈಗ ಸಮೀಕ್ಷೆ ನಡೆಸಿ 12 ಸ್ಥಾನವನ್ನು ಬಿ‌ಜೆ‌ಪಿ ಗೆಲ್ಲುತ್ತದೆ ಅಂದಾಗ ಅಲ್ಲಿ ನಮೋ ಬ್ರಿಗೇಡ್’ನ ಅದೆಷ್ಟೋ ಯುವಕರ ಕೆಲಸಕ್ಕೆ ಮತ್ತಷ್ಟು ಪ್ರೇರಣೆ ದೊರಕಿದಂತಾಗಿತ್ತು. ನಮೋ ಬ್ರಿಗೇಡ್ ಒಂದು ಸ್ಪಷ್ಟ ಗುರಿ ಇಟ್ಟುಕೊಂಡು ಹುಟ್ಟಿತು. ನರೇಂದ್ರ ಪ್ರಧಾನಿಯಾದ ಮಾರನೇ ದಿನವೇ ಈ ಸಂಘಟನೆಯನ್ನು ವಿಸರ್ಜನೆ ಮಾಡುವ ಇರಾದೆಯನ್ನು ಚಕ್ರವರ್ತಿ ಸೂಲಿಬೆಲೆ ಮತ್ತು ನರೇಶ್ ಶೆಣೈ ಹೊಂದಿದ್ದರು ಮತ್ತು ಆ ಮಾತಿನಂತೆಯೇ ನಡೆದುಕೊಂಡರು. ಮೇ 26 2014 ರಂದು ನಮೋ ಬ್ರಿಗೇಡ್’ನ ಲಕ್ಷಾಂತರ ಯುವಕ ಯುವತಿಯರು ಅತ್ಯಂತ ಖುಷಿಯಿಂದ ಸಂಬ್ರಮಿಸಿದ ದಿನವಾಯಿತು. ಮಿಷನ್ ಪೊಸ್ಸಿಬಲ್ ಆಗಿತ್ತು. ಮೈಸೂರು, ಬೆಂಗಳೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ ಹೀಗೆ ಅನೇಕ ಕಡೆಯ ಚುನಾವಣಾ ಫಲಿತಾಂಶ ನರೇಂದ್ರ ಮೋದಿಯವರ ಪರ ಬರಲು ನಮೋ ಬ್ರಿಗೇಡ್ ತುಂಬಾ ಶ್ರಮಿಸಿದೆ ಅಂದರೆ ಅಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ನಮೋ ಬ್ರಿಗೇಡ್ ಅನ್ನು ಹೇಳಿದಂತೆ ವಿಸರ್ಜಿಸಲಾಯಿತು. ಆದರೆ ಲಕ್ಷಾಂತರ ಯುವಕರ ಸಂಘಟನೆಯನ್ನು ಜೀವಂತ ಇಡುವ ನಿಟ್ಟಿನಲ್ಲಿ “ಯುವಾ ಬ್ರಿಗೇಡ್” ಅನ್ನು ಜೂನ್ 8,2014 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲಾಯಿತು.ಪ್ರಮುಖವಾಗಿ ನಾಲ್ಕು ವಿಚಾರಗಳನ್ನು ಧ್ಯೆಯವನ್ನಾಗಿಸಿಕೊಂಡಿದೆ ಯುವ ಬ್ರಿಗೇಡ್. “ಮಹಾರಕ್ಷಕ್”,”ಸಧ್ಬಾವನ”,”ವಿತ್ತ ಶಕ್ತಿ” ಮತ್ತು “ಡಿಜಿಟಲ್ ಸಂಸ್ಕಾರ್” ಎಂಬ ನಾಲ್ಕು ವಿಚಾರಧಾರೆಗಳು ಯುವ ಬ್ರಿಗೇಡ್’ನ ಧ್ಯೇಯೋದ್ದೇಶವಾಗಿತ್ತು. ಮಹಾ ರಕ್ಷಕ್ ಅಂದರೆ ಯುವಕರಲ್ಲಿ ದೇಶ ಮೊದಲು ಎಂಬ ಭಾವನೆ ತರಲು ಪ್ರಯತ್ನಿಸುವುದು ಹಾಗೂ ದೇಶದ ಸೇನೆಗೆ ಮತ್ತು ಪೊಲೀಸ್ ಕೆಲಸಕ್ಕೆ ಯುವಕರನ್ನು ಸೇರಲು ಪ್ರೇರೇಪಿಸುವುದು. ಸಧ್ಬಾವನ ಅಂದರೆ ಹೆಸರೇ ಹೇಳುವಂತೆ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಎಲ್ಲರಲ್ಲೂ ಮುಡಿಸುವುದಾಗಿದೆ.ಜಾತಿ,ಮತ,ಪಂಥಗಳನ್ನ ಮೀರಿ ನಾವೆಲ್ಲ ಭಾರತೀಯರು ಎಂದು ಹೆಮ್ಮೆಯಿಂದ ಹೇಳಬೇಕೆಂಬುದು ಈ ವಿಚಾರದ ಮೂಲ ಉದ್ದೇಶವಾಗಿದೆ.ವಿತ್ತಶಕ್ತಿಯೆಂದರೆ ಹೊಸ ಹೊಸ ಉದ್ಯೋಗಗಳಿಗೆ ಯುವಕರು ತೊಡಗಿಕೊಳ್ಳುವಂತೆ ಮಾಡುವುದು ಮತ್ತು ಭಾರತದ ಅರ್ಥಶಾಸ್ತ್ರದ ಅನ್ವೇಷಣೆ ಮತ್ತು ಚರ್ಚೆ ಮಾಡುವುದಾಗಿದೆ.ಯುವಾ ಬ್ರಿಗೇಡ್’ನ ಇನ್ನೊಂದು ಪ್ರಮುಖ ವಿಚಾರವೆಂದರೆ ಅದು ಡಿಜಿಟಲ್ ಸಂಸ್ಕಾರ್ , ಭಾರತದ ಅವಿಚ್ಛಿನ್ನ ಪರಂಪರೆ ಮತ್ತು ಸಂಸ್ಕೃತಿಯನ್ನು ಡಿಜಿಟಲ್ ಮೀಡಿಯಾ ಬಳಸಿ ಪಸರಿಸುವುದೇ ಈ ವಿಚಾರದ ಧ್ಯೇಯವಾಗಿದೆ.ಒಟ್ಟಿನಲ್ಲಿ ನಾಲ್ಕು ಪ್ರಮುಖ ದ್ಯೇಯೋದ್ದೇಶಗಳೊಂದಿಗೆ ಯುವಾ ಬ್ರಿಗೇಡ್ ಜೀವ ತಳೆಯಿತು.

“ Billion minds, One ambitions “ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಾವಿರಾರು ಯುವಕರ ದಂಡೊಂದು ಭಾರತವನ್ನು ವಿಶ್ವಗುರು ಮಾಡುವ ಕೆಲಸಕ್ಕೆ ಕೈ ಜೋಡಿಸಿದೆ..ದೇಶಕ್ಕಾಗಿ ಬದುಕಬೇಕು,ದೇಶಕ್ಕಾಗಿ ನಿಷ್ಕಲ್ಮಷವಾದ ಕೆಲಸವನ್ನು ಮಾಡಬೇಕೆಂಬ ಅತ್ಯುನ್ನತವಾದ ಧ್ಯೇಯ ವಾಕ್ಯದೊಂದಿಗೆ ಮುನ್ನಡಿಯಿಡುತ್ತಿರುವ ಸಂಘಟನೆ ಯುವಾ ಬ್ರಿಗೇಡ್. ಯುವಾಬ್ರಿಗೇಡ್’ನ ಶಕ್ತಿಯೆಂದರೆ ಸದಾ ದೇಶದ ಬಗ್ಗೆ ಯೋಚಿಸುವ ಚಕ್ರವರ್ತಿ ಸೂಲಿಬೆಲೆ ಅವರ ಮುಂದಾಳತ್ವ.ಅವರ ಮಾರ್ಗದರ್ಶನದಲ್ಲಿ ಯುವಕರ ದೇಶಪ್ರೇಮದ ಮನಸ್ಥಿತಿಯ ನಿರ್ಮಾಣ ಆಗುತ್ತಿದೆ. ಭವ್ಯ ಭಾರತದ ಹಾಗೂ ವಿಶ್ವಗುರು ಭಾರತದ ಅಪ್ರತಿಮ ಕಲ್ಪನೆಯನ್ನಿಟ್ಟುಕೊಂಡು ಮತ್ತು ಯುವಕರಲ್ಲಿ ದೇಶಸೇವೆಯ ಮನೋಭಾವದ ನಿರ್ಮಾಣ ಮಾಡುವಲ್ಲಿ ಶ್ರಮಿಸುತ್ತಿರುವ ಯುವಾ ಬ್ರಿಗೇಡ್ ಚಕ್ರವರ್ತಿ ಸೂಲಿಬೆಲೆ,ನರೇಶ್ ಶೆಣೈ,ಅರುಣಿಮ ಸಿನ್ಹಾ ಮತ್ತು ವಿವೇಕಾನಂದ ಯೂತ್ ಮೂಮೆಂಟ್’ನ ಬಾಲಸುಬ್ರಹ್ಮಣ್ಯ ಅವರ ಮಾರ್ಗದರ್ಶನವನ್ನು ಹೊಂದಿದೆ. ಧರ್ಮ,ಜಾತಿ,ಪಂಥಗಳ ಬೇದವಿಲ್ಲದೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಮತ್ತು ಸಮಾಜಸೇವೆಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ತೊಡಗಿಕೊಂಡಿರುವ ಸಾವಿರಾರು ಯುವಕರ ದಂಡನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದೆ.ರಾಜ್ಯದ ೨೬ ಜಿಲ್ಲೆಗಳಲ್ಲಿ ಮತ್ತು ಸುಮಾರು ಎಲ್ಲ ತಾಲೂಕಗಳಲ್ಲಿ ಜೀವತಳೆದಿರುವ ಯುವಾ ಬ್ರಿಗೇಡ್ ಅತ್ಯುನ್ನತವಾದ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಯಶಸ್ವಿಯಾಗುತ್ತಿದೆ.

ಹಾಗಾದರೆ ಕಳೆದ ಒಂದು ವರ್ಷದ ನಾಲ್ಕು ತಿಂಗಳುಗಳಲ್ಲಿ ಯುವ ಬ್ರಿಗೇಡ್ ಏನು ಮಾಡಿದೆ?ಒಂದು ಕ್ಷಣ ಯುವ ಬ್ರಿಗೇಡ್ ಮಾಡಿರುವ ಕೆಲಸದ ಮೇಲೆ ಕಣ್ಣು ಹಾಯಿಸಿದರೆ ನಿಜವಾಗಲೂ ಅಬ್ಬಾ! ಅನ್ನಿಸುತ್ತದೆ.ಯುವಕರ ದಂಡಿನ ಉತ್ಸಾಹವನ್ನ ನೋಡಿದರೆ ಖುಷಿ ಆಗುವುದಂತೂ ಸತ್ಯ. ಹಾಗಾದರೆ ಯುವ ಬ್ರಿಗೇಡ್ ಏನು ಮಾಡಿದೆ? ಬನ್ನಿ ಸಂಘಟನೆಯೊಂದರ ಯಶೋಗಾಥೆಯನ್ನು ನೋಡೋಣ.

ಯುವ ಬ್ರಿಗೇಡ್ ಸಾವಿರದ ವಿವೇಕಾನಂದಎಂಬ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು,ವಿವೇಕಾನಂದರ ವಿಚಾರಧಾರೆಗಳನ್ನು ಪಸರಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು.ರಾಜ್ಯದ ೧೦೦೦ ಶಾಲೆ ಕಾಲೇಜುಗಳಲ್ಲಿ ಈ ಕಾರ್ಯಕ್ರಮ ಮಾಡಬೇಕೆಂಬ ಯೋಜನೆ ಹೊಂದಿದ್ದ ಯುವ ಬ್ರಿಗೇಡ್ ಗೆ ಅಭೂತಪೂರ್ವ ಬೆಂಬಲ ದೊರೆಯಿತು ಪರಿಣಾಮ ಸುಮಾರು ೨೪೦೦ ಶಾಲಾ ಕಾಲೇಜುಗಳಲ್ಲಿ ಈ ಕಾರ್ಯಕ್ರಮ ಮಾಡಲಾಯಿತು.ಇದರ ನಂತರ ಯುವ ಬ್ರಿಗೇಡ್ ಆಜಾದ್ ಎ ಹಿಂದ್ ಎಂಬ ಕಾರ್ಯಕ್ರಮವನ್ನ ಮಾಡಿತು. ಸುಭಾಶ್ ಚಂದ್ರ ಭೋಸ್’ರ ಜೀವನಗಾಥೆಯನ್ನು ಚಂದದ ಪೋಸ್ಟರ್ ಗಳ ಮೂಲಕ ಪ್ರದರ್ಶನಕ್ಕೆ ಇಡಲಾಯಿತು.ರಾಜ್ಯದ ಮೂಲೆ ಮೂಲೆಯ ಶಾಲೆಯ ವಿದ್ಯಾರ್ಥಿಗಳು ಸುಭಾಶರ ಜೀವನಗಾಥೆಯನ್ನು ಅನುಭವಿಸಿದರು..ಚಂದದ ದೇಶಭಕ್ತಿಯ ವಾತಾವರಣ ಶಾಲೆಗಳಲ್ಲಿ ನಿರ್ಮಾಣವಾಗಿತ್ತು..ವಿವೇಕಾನಂದರು ಭವಿಷ್ಯದ ಭಾರತದ ನಿರ್ಮಾಣಕ್ಕೆ ಕನ್ಯಾಕುಮಾರಿಯ ಆ ಕಲ್ಲಿನ ಮೇಲೆ ನಿಂತು ಡಿಸೆಂಬರ್ ೨೫ ರಂದು ಸಂಕಲ್ಪ ಮಾಡಿದ್ದರು ಆ ದಿನವನ್ನು ಯುವ ಬ್ರಿಗೇಡ್ ರಾಕ್ ಡೇ ಎಂದು ಆಚರಿಸಿತು,ನಾವು ಯುವಕರು ನಿಮ್ಮ ಸಂಕಲ್ಪಕ್ಕೆ ಬದ್ಧ ಸ್ವಾಮೀಜಿ ಎಂದು ಕರೆ ನೀಡಿದಂತಿತ್ತು ಆ ದಿನ.ಭಗತ್ ಸಿಂಗ್ ರ ಜಯಂತಿಯನ್ನು “I am Bhagath” ಎಂಬ ಕಾರ್ಯಕ್ರಮದ ಆಯೋಜನೆಯ ಮೂಲಕ ರಾಜ್ಯಾದ್ಯಂತ ಆಚರಿಸಲಾಯಿತು.ರಾಜ್ಯದೆಲ್ಲೆಡೆ ಸೈಕಲ್ ಜಾಥಾವನ್ನು ಮಾಡಿ ಪರಿಸರ ಸ್ನೇಹಿ ಸೈಕಲ್’ನ ಬಳಕೆ ಜಾಸ್ತಿಯಾಗಲಿ ಎಂಬ ಕರೆ ನೀಡಲಾಯಿತು.ನಮ್ಮ ಸಂಸ್ಕೃತಿ ಮತ್ತು ಭಗವದ್ಗೀತೆಯ ಮೇಲೆ ದಿನಕ್ಕೊಂದು ಹುಚ್ಚು ಹೇಳಿಕೆ ನೀಡುತ್ತಿದ್ದ ವಿಚಾರವ್ಯಾಧಿಗಳಿಗೆ ಉತ್ತರ ನೀಡುವ ಸಲುವಾಗಿ “ಸುಡುವುದು ದೇಹ ಆತ್ಮವಲ್ಲ” ಎಂಬ ಪುಸ್ತಕವನ್ನು ಯುವ ಬ್ರಿಗೇಡ್ ಬಿಡುಗಡೆಗೊಳಿಸಿತು.ಭಗವದ್ಗೀತೆಯ ಸಾರವನ್ನು ತಿಳಿಸುವ ಪುಸ್ತಕವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ರಾಜ್ಯಾದ್ಯಂತ ವಿತರಿಸಲಾಯಿತು.ಬಿಸಿ ಯಾರಿಗೆ ಮುಟ್ಟಬೇಕೋ ಅವರಿಗೆ ಸರಿಯಾದ ಸಮಯದಲ್ಲಿ ಮುಟ್ಟಿತ್ತು.ರಾಜ್ಯದಲ್ಲಿ ಪಾಳು ಬಿದ್ದಿದ್ದ ಹಳೆಯ ಅನೇಕ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಪುನರುತ್ಥಾನ ಮಾಡುವ ಕೆಲಸವನ್ನು ಯುವ ಬ್ರಿಗೇಡ್ ರಾಜ್ಯದೆಲ್ಲೆಡೆ ಹಮ್ಮಿಕೊಂಡಿತು.ಪರಿಣಾಮ ಅದೆಷ್ಟೋ ಕಲ್ಯಾಣಿಗಳು ನೀರಿನಿಂದ ತುಂಬಿ ತುಳುಕುವಂತಾಯಿತು.ರಾಜ್ಯದಲ್ಲಿ ಒಂದು ನೂರು ಕಲ್ಯಾಣಿಗಳನ್ನು ಪುನರುತ್ಥಾನ ಗೊಳಿಸಲಾಯಿತು.ಕೇವಲ ನಮ್ಮ ರಾಜ್ಯದಲ್ಲೊಂದೇ ಅಲ್ಲದೇ ಪಕ್ಕದ ಗೋವಾದಲ್ಲೂ ನಮ್ಮ ಬ್ರಿಗೇಡಿಯರ್’ಗಳು ಕಲ್ಯಾಣಿ ಸ್ವಚ್ಛ ಮಾಡಿದರು.೩೦ ವರ್ಷದಿಂದ ನೀರೆ ಇಲ್ಲದ ಸೂಲಿಬೆಲೆ ಬಳಿಯ ಕಲ್ಯಾಣಿಯೊಂದರಲ್ಲಿ ಸ್ವಚ್ಛಗೊಳಿಸಿದ ಕೆಲವೆ ದಿನದಲ್ಲಿ ನೀರಿನ ಒರತೆ ಕಾಣಿಸಿಕೊಂಡು ನೀರಿನಿಂದ ತುಂಬಿಕೊಂಡಾಗ ಅದೆಷ್ಟೋ ಯುವಕರು ಅಂದು ಪಟ್ಟ ಶ್ರಮಕ್ಕೆ ಪ್ರತಿಫಲ ದೊರಕಿದಂತಿತ್ತು..ಅದೇ ಕಲ್ಯಾಣಿಗೆ ದೀಪವನ್ನು ಹಚ್ಚಿ “ಯುವ ದೀಪೂತ್ಸವ”ವನ್ನು ಸಂಭ್ರಮದಿಂದ ಆಚರಿಸಲಾಯಿತು.ನಾವೆಲ್ಲ ಹೆಮ್ಮೆ ಪಡುವ ಕೆಲಸವನ್ನು ಯುವಕರ ತಂಡವೊಂದು ನಿರಂತರವಾಗಿ ಮಾಡುತ್ತಿದೆ.ಇದಾದ ನಂತರ ಯುವಾ ಬ್ರಿಗೇಡ್ ಹಮ್ಮಿಕೊಂಡಿದ್ದು “ಪೃಥ್ವಿ ಯೋಗ” ಎಂಬ ಚಂದದ ಕಾರ್ಯವನ್ನು.ಉಸಿರು ನೀಡುವ ಮರಗಳನ್ನು ಬೆಳೆಸುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬ್ರಿಗೇಡಿಯರ್’ಗಳು ಗಿಡ ನೆಡುವ ಕೆಲಸ ಮಾಡಿದರು..ಹಸಿರು ನಮ್ಮ ಭವಿಷ್ಯ ಎಂಬುದನ್ನು ಸಾರಿ ಹೇಳುವ ಕೆಲಸ ನಡೆಯಿತು..ನಮ್ಮ ರಾಜ್ಯದ ಅನೇಕ ಕಡೆ ಬರಡು ಭೂಮಿಯಂತಿದ್ದ ಜಾಗವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಯಿತು..ಇದಲ್ಲದೆ ಫೆಬ್ರವರಿ ೧೪ ರಂದು “My love My Nation ” ಎಂಬ ಕಾರ್ಯವನ್ನು ಎಲ್ಲ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಯಿತು..ಅಂದು ಭಾರತಾಂಬೆಯ ಚಿತ್ರಕ್ಕ ಹೂವನ್ನು ಹಾಕಿ ಭಕ್ತಿಯಿಂದ ಪೂಜೆ ಮಾಡುವ ಕೆಲಸವನ್ನು ಮಾಡಲಾಯಿತು..ನನ್ನ ದೇಶಕ್ಕೆ ನನ್ನ ಪ್ರೀತಿ ಸಮರ್ಪಿತ ಎಂದು ಸಾರುವ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯಿತು..ಪಾಶ್ಚಾತ್ಯರ ಮಾರ್ಕೆಟಿಂಗ್ ಟೆಕ್ನಿಕ್’ಗೆ ಬಲಿಯಾಗಿದ್ದ ಅದೆಷ್ಟೋ ಯುವಕರಿಗೆ ಹೊಸ ದಾರಿಯೊಂದನ್ನು ತೋರುವ ಕೆಲಸವೂ ನಡೆಯಿತು..ಸ್ನೇಹಿತರೇ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಇಷ್ಟೊಂದು ಚಂದದ ಕಾರ್ಯಕ್ರಮವನ್ನ ಆಯೋಜಿಸುತ್ತಿರುವ ಯುವಾ ಬ್ರಿಗೇಡ್ ನಿಜಕ್ಕೂ ಯುವಕರಲ್ಲಿ ರಾಷ್ಟ್ರ ಪ್ರೇಮದ ಭಾವವನ್ನು ಮೂಡಿಸುತ್ತಿದೆ ಅಲ್ಲವೇ? ಸೇನೆಗೆ ಸೇರಬೇಕೆಂಬ ಮಹದಾಸೆಯನ್ನಿಟ್ಟುಕೊಂಡಿದ್ದ ಅದೆಷ್ಟೋ ಯುವಕ ಯುವತಿಯರುಗಳಿಗೆ ಒಂದು ಮಾರ್ಗದರ್ಶನ ನೀಡುವ ಕೆಲಸ ಮಾಡಿತು ಯುವಾ ಬ್ರಿಗೇಡ್.”ಸೈನ್ಯಕ್ಕೆ ಸೇರುವುದು ಹೇಗೆ” ಎಂಬ ಶಿಬಿರವನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡ ಯುವಾ ಬ್ರಿಗೇಡ್ ಸೈನ್ಯಕ್ಕೆ ಸೇರಬೆಕೆಂದರೆ ಯಾವ್ಯಾವ ಹಂತವನ್ನು ದಾಟಬೇಕು ಮತ್ತು ಯಾವ ತರದ ತರಬೇತಿ ಪಡೆದಿರಬೇಕೆಂಬ ಮಾಹಿತಿಯನ್ನು ನೀಡಿತು..ಚೌತಿಯಲ್ಲಿ “ಮಣ್ಣಿನ ಗಣಪ ಮಣ್ಣೇ ಗಣಪ” ಎಂಬ ಸಮಾಜಮುಖಿ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ಆಯೋಜಿಸಿತ್ತು.ಪ್ಲಾಸ್ಟರ್ ಆಪ್ ಪ್ಯಾರಿಸ್ ನಿಂದ ತಯಾರಿಸಿದ ಗಣಪತಿಯನ್ನು ಪೂಜಿಸುವ ಬದಲಾಗಿ ಮಣ್ಣಿನಿಂದಲೇ ನಿರ್ಮಿಸಿದ ಗಣಪನನ್ನ ತುಂಬು ಭಕ್ತಿಯಿಂದ ಪೂಜಿಸೋಣ ಎಂಬ ಕರೆಯನ್ನು ಯುವಾ ಬ್ರಿಗೇಡ್ ನೀಡಿತು..ಇಂತಹ ಕಾರ್ಯಕ್ರಮಗಳ ನಡುವೇ ಯುವಾ ಬ್ರಿಗೆಡ್ ಒನ್ ರಾಂಕ್ ಒನ್ ಪೆನ್ಶನ್ ಯೋಜನೆಗೆ ಒತ್ತಾಯಿಸಿ ನಿರಶನ ಕೂತಿದ್ದ ಸೈನಿಕರಿಗೆ ಬೆಂಬಲ ಸೂಚಿಸಿ ನಮ್ಮ ರಾಜ್ಯದಿಂದ ಒಂದು ಲಕ್ಷ ಜನರ ಸಹಿ ಸಂಗ್ರಹ ಮಾಡಿ ದೆಹಲಿಗೆ ತೆರಳಿ ಸಹಿ ಸಂಗ್ರಹದ ಪ್ರತಿಗಳನ್ನ ನೀಡಿ ಅವರ ಹೋರಾಟಕ್ಕೆ ಬೆಂಬಲ ನೀಡುವ ಕೆಲಸ ಮಾಡಿತು..ಸಮಾಜಮುಖಿ ಮನಸ್ಸುಗಳು ತಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜಕ್ಕಾಗಿ ದುಡಿಯುವ ಕೆಲಸವನ್ನ ಮಾಡುತ್ತಿದೆ ಇದು ನಮಗೆಲ್ಲ ಹೆಮ್ಮೆಯೇ ಸರಿ..ಇವಿಷ್ಟೇ ಅಲ್ಲದೇ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡಿದ್ದ ದಿನವನ್ನು ದಿಗ್ವಿಜಯ ದಿವಸ ಎಂದು ಆಚರಣೆ,ಕಾರ್ಗಿಲ್ ವಿಜಯ ದಿವಸದ ಆಚರಣೆ,ಸೈನಿಕರ ಬಗ್ಗೆ ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ವಿಡಿಯೋ ಮಾಡಿ ಕಳುಹಿಸುವ ಅವಕಾಶ ಮಾಡಿಕೊಡುವ ಸಲುವಾಗಿ ಶೂಟ್ ಯುವರ್ ಎಮೋಷನ್ಸ್ ಎಂಬ ಕಾರ್ಯಕ್ರಮ,ವಿತ್ತ ಶಕ್ತಿಯ ಅಡಿಯಲ್ಲಿ ಅನೇಕ ಜನ ವಿದ್ಯಾವಂತ ಬಡ ಯುವಕರಿಗೆ ಕೆಲಸ ಕೊಡಿಸಿರುವುದು,೧೯೬೫ ರ ಯುಧ್ದ ಗೆದ್ದು ೫೦ ವರ್ಷವಾಗುತ್ತಿರುವುದರಿಂದ ಅದನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ War of Thanks ಎಂಬ ಕಾರ್ಯಕ್ರಮದ ಆಯೋಜನೆ ಹೀಗೇ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಯ ಜೊತೆ ದೇಶ ಭಕ್ತಿಯ ಕಿಚ್ಚನ್ನು ನಮ್ಮೊಳಗೆ ಹಚ್ಚಿಸುವ ಭಾಷಣಗಳ ಆಯೋಜನೆ ಇದು ನಮ್ಮ ಹೆಮ್ಮೆಯ ಯುವಾ ಬ್ರಿಗೇಡ್’ನ ಯುವಕರು ಮಾಡಿರುವ ಕೆಲಸ..ಇದಲ್ಲದೇ ಕಳೆದ ವಾರ ೪೦ ಜನ ಬ್ರಿಗೇಡಿಯರ್ಗಳು ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ LOC ಸಾಹಸ ಯಾತ್ರೆಯನ್ನು ಯಶಸ್ವಿಯಾಗಿ  ಮುಗಿಸಿಕೊಂಡು ಬಂದಿದ್ದಾರೆ.ಸಾವಿರಾರು ಜನರು ಸೈನಿಕರ ಬಗ್ಗೆ ಹೆಮ್ಮೆಯಿಂದ ಆಡಿದ್ದ ಮಾತುಗಳ ವಿಡಿಯೋಗಳ CD ಯನ್ನು ಅಲ್ಲಿನ ಸೈನಿಕರಿಗೆ ನೀಡಲಾಗಿದೆ..ದೇಶ ಕಾಯುತ್ತಿರುವ ಹೆಮ್ಮೆಯ ಯೋಧರಿಗೆ ಬ್ರಿಗೇಡಿಯರ್ ಗಳು ಹೆಮ್ಮೆಯಿಂದ ನಮಿಸಿ ಬಂದಿದ್ದಾರೆ.ಯುವಾ ಬ್ರಿಗೇಡ್ ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸೈನಿಕರು ನಮ್ಮ ಹೆಮ್ಮೆಯ ಮಾರ್ಗದರ್ಶನಕರಾದ ಚಕ್ರವರ್ತಿ ಸೂಲಿಬೆಲೆಯವರಿಗೆ “Guard of Honour”ಅನ್ನು ನೀಡುತ್ತಿದ್ದರೆ ಬ್ರಿಗೇಡಿಯರ್ಗಳ ಮನಸ್ಸು ತುಂಬಿ ಬಂದಿತ್ತು.ಒಟ್ಟಿನಲ್ಲಿ ವಿಶ್ವಗುರು ಭಾರತದ ನಿರ್ಮಾಣದ  ಸಂಕಲ್ಪ ತೊಟ್ಟಿರುವ ಈ ಯುವಕರ ತಂಡವನ್ನು ನೋಡಿದರೆ ನಮ್ಮೊಳಗೆ ದೇಶಕ್ಕಾಗಿ ಏನಾದರೂ ಮಾಡಬೇಕು,ಈ ಯವಕರ ಜೊತೆ ಕೈ ಜೋಡಿಸಬೇಕು ಎಂದು ಅನ್ನಿಸುವುದರಲ್ಲಿ ಸಂಶಯವಿಲ್ಲ.

ಹಾದಿ ಬೀದಿಯಲ್ಲಿ ಬೇಕಾ ಬಿಟ್ಟಿ ಹುಟ್ಟಿಕೊಂಡು,ಕಂಡ ಕಂಡವರ ಬಳಿ ಚಂದಾ ಎತ್ತುತ್ತಾ ರಾಜಕೀಯ,ಹೊಡೆದಾಟ ಮಾಡುತ್ತ ಸಮಾಜ ಸೇವಕರು ಎಂಬ ದೊಡ್ಡ ಪೋಸ್ಟರ್ ಹಾಕಿಕೊಳ್ಳುವ ಈಗಿನ ಕಾಲದ ಅದೆಷ್ಟೋ ಯುವ ಸಮಾಜ ಸೇವಕರ ಸಂಘ ಮತ್ತು ಸಮಾಜ ಸೇವಕರ ನಡುವೆ ಯುವಾ ಬ್ರಿಗೇಡ್ ಮತ್ತು ಅದರಲ್ಲಿರುವ ಯುವಕರು ನಿಜವಾಗಲೂ ಮಾದರಿಯಾಗುತ್ತಾರೆ..”ಸಂಘಚ್ಛಧ್ವಂ ಸಂವದಧ್ವಂ” ಎಂಬ ಧ್ಯೇಯ ವಾಕ್ಯವನ್ನು ಎಲ್ಲ ಬ್ರಿಗೇಡಿಯರ್ ಗಳು ತಮ್ಮೊಳಗೆ ಅಳವಡಿಸಿಕೊಂಡಿದ್ದಾರೆ..ಹೌದು “ಸಂಘಟಿತ ,ಸಮಾಜಮುಖಿ ಯುವ ಮನಸ್ಸುಗಳು ಸಮಾಜವನ್ನು ಬದಲಿಸುವುದರಲ್ಲಿ ಅನುಮಾನವೇ ಇಲ್ಲ”..ಕಾಲ ಪಕ್ವವಾಗಿದೆ,ಒಂದೆಡೆ ವಿಶ್ವವನ್ನು ಗೆಲ್ಲುತ್ತಿರುವ ನರೇಂದ್ರ ಇನ್ನೊಂದೆಡೆ ದೇಶಕ್ಕಾಗಿ ಬದುಕುತ್ತಿರುವ ಅದೆಷ್ಟೋ ಯುವಕರು..ವಿಶ್ವಗುರು ಭಾರತದ ನಿರ್ಮಾಣವಾಗುವುರಲ್ಲಿ ಯಾವುದೇ ಅನುಮಾನವಿಲ್ಲ…

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!