ಅಂಕಣ

ಮೋದಿ ಎಂದರೆ ಮೋಡಿ…

ಮೋದಿ ಪ್ರಧಾನಿಯಾದಾಗಿನಿಂದ ಹಲವು ಲೇಖನ, ಹೊಗಳಿಕೆ, ಪರ ವಿರೋಧ, ಅಸಹಿಷ್ಣುತೆ, ಅರಾಜಕತೆ ಎಂಬ ಕೂಗು ಮತ್ತೆ ಹಲವರದ್ದು, ಅದಲ್ಲೆವನ್ನೂ ಮೀರಿ ವಿಶ್ವದೆಲ್ಲೆಡೆಯಿಂದ ಪ್ರೀತಿಯ ಸುರಿಮಳೆ. ಆದರೆ ಎಲ್ಲರೂ ಲೇಖನ ಬರೆದರೂ ಇಂದಿನವರೆಗೂ ಬರೆಯುವ ಮನಸ್ಸು ಮಾಡಿರಲಿಲ್ಲ ಎಲ್ಲರೂ ಬರೆಯುತ್ತಾರೆ ಎನ್ನುವ ಉಢಾಫೆಯೂ ಇದ್ದಿರಬಹುದು. ವೆಂಬ್ಲೆಯಲ್ಲಿ ಕೆಮರೂನ್ ಕೂಡಾ ಮೋದಿ ಮೋಡಿ ಎಂದ ಮೇಲೆ ಸುಮ್ಮನಿರಬಾರದು ಎಂದೆನಿಸಿತು.

ಕೆಮರೂನ್’ಗೂ ಗೊತ್ತಾಗಿರಬೇಕು ಮೋದಿ ಎಂದರೆ ಮೋಡಿ ಎಂದು!!
ಮೋದಿ ಭಾಷಣ ಶುರು ಮಾಡುವ ಮೊದಲು ಡೇವಿಡ್ ಕೆಮರೂನ್ ಮಾತನಾಡುವಾಗ ಮೋದಿ ಅವರನ್ನು ಸಂಬೋಧಿಸುವಾಗೆಲ್ಲಾ ಮೋಡಿ ಎಂದು ಉಚ್ಚರಿಸುತ್ತಿದ್ದರು, ಬಹುಶಃ ಅವರಿಗೂ ತಿಳಿದು ಹೋಯಿತೋ ಅಥವಾ ಅವರೂ ಎರಡು ದಿನಗಳಲ್ಲಿ ಮೋದಿ ಮೋಡಿಗೆ ಒಳಗಾದರೋ ತಿಳಿಯದು!!

ಇರಲಿ ವಿಷಯಕ್ಕೆ ಬರೋಣ,

ಲಂಡನ್, ಬ್ರಿಟಿಷರ ದೇಶ. ಒಂದು ಕಾಲದಲ್ಲಿ ಡಿವೈಡ್ ಆಂಡ್ ರೂಲ್ ಮೂಲಕ ನಮ್ಮನ್ನಾಳಿದ ರಾಷ್ಟ್ರ, ಅದು ಯಾವ ಪರಿಯಿಂದೆಲ್ಲಾ ಸಾಧ್ಯವೋ ಹಾಗೆಲ್ಲಾ ನಮ್ಮನ್ನು ಗುಲಾಮೀತನಕ್ಕೊಡ್ಡಿ ವ್ಯಾಪಾರಕ್ಕೆ ಬಂದವರು – ಅರಸರಾಗುವ ಕನಸು ಕಂಡವರು, ಭಾರತ ಹಾವಾಡಿಗರ ದೇಶ ಎಂದೆಲ್ಲಾ ಹೀಗಳೆದವರು…. ಆದರೆ ಇಂದು? ಅದೇ ಹಾವಾಡಿಗ ದೇಶದ ಪ್ರಧಾನ ಮಂತ್ರಿಗೆ ಬ್ರಿಟಿಷ್ ನೆಲದಲ್ಲಿ  ಸಕಲ ಸರ್ಕಾರಿ ಮರ್ಯಾದಿ ಗೌರವಗಳು ಸಿಗುತ್ತವೆ, ಅದೇ  ನೆಲದಲ್ಲಿ ಭಾರತದ ನಾಯಕ ಭಾಷಣ ಮಾಡಲು ನಿಂತ ಪೋಡಿಯಂ ಅಲ್ಲಿ ಬರೆಯುತ್ತಾರೆ “Two Great Nations, One Glorious Future:”  ,”ಯುಕೆ ವೆಲ್’ಕಮ್ಸ್ ಮೋದಿ” ಎಂದು ಬೋರ್ಡುಗಳು, #ModiInUK #ModiAtWembley ಎಂದು ಇದ್ದಲ್ಲೆಲ್ಲ್ಲಾ ಹರಿದಾಡುತ್ತದೆ, ಆ ನೆಲದಲ್ಲಿ ನಿಂತ ಕೆಮರೂನ್ ಮೋದಿಯನ್ನು ಮನದಾಳದಿಂದ ಹೊಗಳುತ್ತಾರಷ್ಟೇ ಅಲ್ಲದೇ ಹಿಂದಿನ ದಿನ ನಡೆದ ಪತ್ರಿಕಾಗೋಷ್ಟಿಯಲ್ಲಿಯೂ ಮೋದಿಯ ಪರವಾಗಿಯೇ ಮಾತನಾಡುತ್ತಾರೆ. ಇಂತಹದ್ದೆಲ್ಲಾ ನಡೆದಾಗ ನಿಜವಾದ ಭಾರತೀಯನೊಬ್ಬ ಸಂತೋಷ ಪಡದೇ ಹೇಗಿದ್ದಾನು ನೀವೇ ಹೇಳಿ?
ದೇಶಪ್ರೀತಿ, ಸಹಿಷ್ಣುತೆ, ಜಾತ್ಯಾತೀತತೆ ಎನ್ನುವ ನಿಜವಾದ ಅಂತಃಕರಣವೊಂದು ನಿಮ್ಮಲ್ಲಿದ್ದರೆ ಸಂತಸಪಡದೇ ಇರಲಾರಿರಿ.

ಸುಮಾರು ಎರಡು ಗಂಟೆಗಳ ಮೊದಲೇ ಸಾಂಸ್ಕೃತಿಕ ಕಾರ್ಯಕ್ರಮ ಅದಾದ ಬಳಿಕ ಮೋದಿ ಆಗಮನ. ಅಲ್ಲಿಂದ ಶುರು ಆಯಿತು ನೋಡಿ ಅಸಲೀ ತಾಕತ್ತಿನ ಪ್ರದರ್ಶನ. ಅಷ್ಟೊತ್ತು ಕಾರ್ಯಕ್ರಮದಲ್ಲಿ ಮುಳುಗಿ ಹೋಗಿದ್ದ ಬರೋಬ್ಬರಿ ಅರುವತ್ತು ಸಾವಿರ ಜನ ಮೋದಿ ಮೋದಿ ಅನ್ನುತ್ತಿದ್ದರೆ ಕ್ಯಾಮರೂನ್ ಕೂಡಾ ತನ್ನ ಮಾತನ್ನು ಕೆಲವು ಸೆಕೆಂಡುಗಳ ಕಾಲ ನಿಲ್ಲಿಸಬೇಕಾಯಿತು. ಕೆಮರೂನ್ ಹೇಳಿದ ಮಾತುಗಳ ಸತ್ಯಾಸತ್ಯತೆ ಬದಿಗಿಟ್ಟು ನೋಡಿದರೂ ಒಬ್ಬ ಬ್ರಿಟಿಷ್ ನೆಲದ ವ್ಯಕ್ತಿ ಅದೂ ಪ್ರಧಾನಿ ಅದನ್ನು ಹೇಳುತ್ತಿದ್ದಾನೆ ಎನ್ನುವುದೇ ನಿಜವಾದ ರೋಮಾಂಚನವನ್ನು ಹುಟ್ಟುಹಾಕಿತ್ತು. ಹೇಳಿದ್ದರಲ್ಲಿ ನೈಜತೆ ಇತ್ತು ಎನ್ನುವುದು ಸಾರ್ವತ್ರಿಕ ಸತ್ಯವೇ ಅದು ಬಿಡಿ. ನಿಜವಾದ ಪ್ರಜಾಪ್ರಭುತ್ವ ಎಂದರೆ ಇದು, ಚಾಯವಾಲಾ ಒಬ್ಬ ದೇಶದ ಪ್ರಧಾನಿ ಮಾತ್ರವಲ್ಲ ಆತ ವಿಶ್ವ ನಾಯಕ ಆಗಬಹುದು ಅಂದರು, ಇದನ್ನು ನಮ್ಮಲ್ಲಾರೋ ಹೇಳುತ್ತಿದ್ದರೆ ಅಥವ ಮೋದಿ ಭಕ್ತರೆಂದು ಲೇಬಲ್ ಮಾಡಲ್ಪಟ್ಟವರು ಹೇಳಿದ್ದರೆ ಸುಮ್ಮನಿರಬಹುದಿತ್ತೇನೋ ನೆನಪಿಡಿ ಇದನ್ನು ಹೇಳಿದ ಬ್ರಿಟನ್ ಪ್ರಧಾನಿಗೆ ಮೋದಿಯನ್ನು ಹೊಗಳಿ ಮಾಡಬೇಕಾದ್ದೇನಿಲ್ಲ, ಯಾವ ಪಟ್ಟವನ್ನೂ ಕಟ್ಟಿಕೊಳ್ಳಬೇಕಾಗಿಲ್ಲ. ಅದೆಲ್ಲವನ್ನೂ ಮೀರಿ ಇಂತಹಾ ಮಾತೊಂದು ಬಂದಾಗ ಖುಷಿ ಪಡದೇ ಇನ್ನೂ ಅಸಹಿಷ್ಣುತೆ ಅನ್ನುತ್ತಿದ್ದರೆ, ನಾವಿನ್ನೂ ನಮ್ಮನ್ನು ಅರಿತುಕೊಂಡಿಲ್ಲ ಎನ್ನಬೇಕಷ್ಟೆ!

ದಿವಾಲೀ ಟೀಕ್ ಸೇ ಮನಾಯೀ? ಎನ್ನುವಲ್ಲಿಂದ ಶುರುವಾಯಿತು ಮೋದಿ ಮೋಡಿಯ ಘಮ. ಹನ್ನೆರಡು ವರ್ಷಗಳ ಹಿಂದೆ ಲಂಡನ್’ಗೆ ಬಂದಿದ್ದೆ ಇಲ್ಲಿಯ ಥೇಮ್ಸ್ ನದಿ ಅದೆಷ್ಟೋ ಹರಿವನ್ನು ಕಂಡಿದೆ. ಅದೇ ನಾನು ೧೨ ವರ್ಷಗಳ ಹಿಂದಿನ ಕನಸನ್ನು ನನಸಾಗಿಸುತ್ತಾ ಅನುಭವ ಪಡೆದುಕೊಂಡು ಸಾಗುತ್ತಲೇ ಇದ್ದೇನೆ. ೧೮ ತಿಂಗಳುಗಳ ಅನುಭವದಿಂದ ಹೇಳುತ್ತಿದ್ದೇನೆ ಬಡತನವನ್ನು ದೇಶದಲ್ಲಿ ನಾವೇ ಪಾಲಿಸಿದ್ದೇವೆ ಹೊರತು ಭಾರತ ಖಂಡಿತಾ ಬಡ ರಾಷ್ಟ್ರವಾಗಬೇಕಿಲ್ಲ, ಅಥವಾ ಬಡ ರಾಷ್ಟ್ರವಾಗಿ ಉಳಿಯುವುದೂ ಇಲ್ಲ ಅಂತಹಾ ಸ್ಥಿತಿ ನಮ್ಮಲ್ಲಿ ಇಲ್ಲ. ಇಂದು ಇಲ್ಲಿ ನಡೆಯುತ್ತಿರುವ ಈ ಎಲ್ಲಾ ಗೌರವ ನನಗಲ್ಲ ಭಾರತದ ಪ್ರತಿ ಪ್ರಜೆಗೂ ಇದು ತಲುಪುತ್ತಿದೆ, ದೇಶ ಹಿಂದುಳಿಯುವ ಪ್ರಶ್ನೆಯೇ ಇಲ್ಲ ಮುನ್ನಡೆ ಮಾತ್ರ ನಮ್ಮ ಮುಂದಿದೆ ಎನ್ನುತ್ತಿದ್ದರೆ ಪ್ರತಿ ಮನದಲ್ಲೂ ಆನಂದದ ಘಮಲು.

ಮೋದಿ ಹೇಳಲು ಮರೆಯಲಿಲ್ಲ, ಬ್ರಿಟಿಷ್ ಪಾರ್ಲಿಮೆಂಟ್ ಭವನದ ಎದುರು ಮಹಾತ್ಮ ಗಾಂಧಿ ಅವರ ಮೂರ್ತಿ ಇದೆ, ಇದಕ್ಕಿಂತ ಗೌರವದ ವಿಷಯ ಏನಿದೆ ಹೇಳಿ ಎಂದಾಗ ಮಾತಿನಲ್ಲಿ ನಿಜವಾದ ಗೌರವ ಕಾಣಿಸಿತು. ಮುಂದುವರಿದು ಶ್ಯಾಮ್’ಜೀ ಕೃಷ್ಣ ವರ್ಮಾ, ಸ್ವಾತಂತ್ರ್ಯ ಹೋರಾಟದ ವ್ಯಕ್ತಿ ಇವರು. ಇವರು ಬ್ರಿಟನ್ ಅಲ್ಲಿ ತಮ್ಮ ಕೊನೆಯುಸಿರೆಳೆದಿದ್ದರು ಆದರೆ ಅವರ ಅಸ್ತಿಯನ್ನು ತಮ್ಮ ಜನ್ಮ ಭೂಮಿಗೆ ತಲುಪಿಸಬೇಕೆಂದ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನಂಬಿ ಈ ಕೆಲಸ ಮಾಡಿದ್ದು ಹನ್ನೆರಡು ವರ್ಷಗಳ ಹಿಂದೆ ಮೋದಿ ಲಂಡನ್’ಗೆ ಹೋದಾಗ. ೧೯೩೦ ರಲ್ಲಿ ಅವರು ಮರಣ ಹೊಂದಿದ್ದು ಅಲ್ಲಿಂದ ಇಲ್ಲಿಯ ತನಕ ಯಾರೂ ಇದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಇರಲಿ ಬಿಡಿ, ಇದರಿಂದಲೂ ಅದ್ಭುತ ಕ್ಷಣವೊಂದಕ್ಕೆ ಮೋದಿ ಸಾಕ್ಷಿಯಾಗಿದ್ದಾರೆ ಅಲ್ಲಲ್ಲ ನಾವು ಸಾಕ್ಷಿಯಾಗಿದ್ದೇವೆ. ಅವರ ಹೆಸರನ್ನು ಅಲ್ಲಿಯ ಬ್ರಿಟಿಷ್ ಬಾರ್ ಕೌನ್ಸಿಲ್ ನಿಂದ ತೆಗೆಯಲಾಗಿತ್ತು ಅವರು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂಬ ಕಾರಣಕ್ಕೆ ಆದರೆ ಮೋದಿ ಮೊನ್ನೆಯ ಭೇಟಿಯ ಬಳಿಕ ಅಲ್ಲಿ ಅವರ ಹೆಸರನ್ನು ಮತ್ತೆ ಸೇರಿಸಲಾಗಿದೆ. ಇದು ನಿಜವಾದ ಹೋರಾಟಗಾರನಿಗೆ ಸಂದ ನಿಜವಾದ ಗೌರವ.

ಡಿಜಿಟಲ್ ಇಂಡಿಯಾ, ಸೆಲ್ಫೀ ವಿತ್ ಡಾಟರ್ ಅಂದಾಗ ರೈತನು ಆತ್ಮಹತ್ಯೆ ಮಾಡುವ ಕಾರ್ಟೂನ್ ಸೆಲ್ಹೀ ಹಾಕಿಕೊಂಡವರೆಲ್ಲಾ ಹೇಳಲೇಬೇಕು ಇನ್ನೊಂದಿಷ್ಟು ಸಮಯದಲ್ಲಿ ಪ್ರತೀ ಹಳ್ಳಿಗೂ ವಿದ್ಯುತ್ ಒದಗಿಸುತ್ತೇನೆ ಎಂದಾಗ ನೀವೂ ಖುಷಿ ಪಟ್ಟಿಲ್ವಾ? ಖುಷಿ ಪಟ್ಟಿಲ್ಲ ಎಂದದಾರೆ, ಅದ್ಯಾಕೆ ರೈತನಿಗೆ ವಿದ್ಯುತ್ ಬಂದರೆ ನಿಮಗ್ಯಾಕೆ ಸಂತೋಷವೇ ಇಲ್ಲವೇ?? ಅದ್ಯಾವ ಪರಿ ಕಾಳಜಿ ನಿಮ್ಮದು? ಹಳ್ಳಿ ಹಳ್ಳಿಗೂ ವಿದ್ಯುತ್ ಬೇಕು ಅದು ಅನಿವಾರ್ಯ, ಡಿಜಿಟಲ್ ಇಂಡಿಯಾ ಅಂದ ಕೂಡಲೇ ಎಲ್ಲವೂ ಹಾಳಾಗುತ್ತದೆ ಎನ್ನುವ ಮನಸ್ಥಿತಿಯಿಂದ ಹೊರಬರಬೇಕಾಗಿದೆ.

ಇನ್ನು ಸ್ವಚ್ಛ ಭಾರತ ವಿಷಯಕ್ಕೆ ಬಂದರೆ, ಅಲ್ಲಿ ಕಸವಿದೆ, ಇಲ್ಲಿ ಕೊಳಕಿದೆ ಮೋದಿ ಏನು ಮಾಡಿದ, ಮೋದಿ ಸ್ವಚ್ಛ ಭಾರತ ಅಂತೆ ಎಂದೆಲ್ಲಾ ಹೀಗಳೆಯುತ್ತೇವಲ್ಲ, ಸ್ವಚ್ಛ ಭಾರತ ಬೇಕಾಗಿರುವುದು ಯಾರಿಗೆ? ಮೋದಿಗೆ ಮಾತ್ರವೇ? ಭಾರತ ನಮ್ಮದು ತಾನೇ, ಸ್ವಚ್ಛತೆ ಬೇಕು ಎಂದರೆ ನಾವೂ ಇದರಲ್ಲಿ ಪಾತ್ರಧಾರಿಗಳೇ ಎಂಬುದು ನಮ್ಮ ಚಿತ್ತಕ್ಕೆ ಅರಿವಾದರೆ ಸ್ವಚ್ಛ ಭಾರತ ಆಗಲು ೨೦೧೯ ರ ತನಕ ಕಾಯಬೇಕಿಲ್ಲ.

ಕರ್ನಾಟಕದಲ್ಲಿ ಕತ್ತಲೆ ಭಾಗ್ಯ ಬಯಸದೇ ಬಂದ ಭಾಗ್ಯ. ಇದಕ್ಕೆಲ್ಲಾ ಪರಿಹಾರವಿದೆ ಎಂದು ಗುಜರಾತಿನಲ್ಲಿ ಮೋದಿ ಈಗಾಗಲೇ ತೋರಿಸಿದ್ದಾರೆ, ಅಲ್ಲಿ ಸೋಲಾರ್ ಕ್ರಾಂತಿ ಆಗಿರುವುದು ಹಳೆಯ ವಿಷಯ. ಅದನ್ನೇ ಮೋದಿ ನಿನ್ನೆ ಹೇಳಿದ್ದು. ಸೂರ್ಯ ಪುತ್ರ ರಾಷ್ಟ್ರಗಳ ವಿಚಾರ. ಮತ್ತೆ ಮತ್ತೆ ಬಳಸಲು ಸಾಧ್ಯವಿರುವ ಶಕ್ತಿಯನ್ನು ಉಪಯೋಗಿಸಿಕೊಂಡು ವಿದ್ಯುತ್ ತಯಾರಿಸುವುದು. ಸೋಲಾರ್ ಎನರ್ಜಿ. ಮುಂದಿನ ಐದು ವರ್ಷದಲ್ಲಿ ಮೂರು ಗಿಗಾವ್ಯಾಟ್ ಸೌರ ವಿದ್ಯುತ್ ಘಟಕಗಳ ನಿರ್ವಹಣೆ ಮತ್ತು ವಿನ್ಯಾಸಕ್ಕಾಗಿ ಲೈಟ್ ಸೋರ್ಸ್ ಕಂಪೆನಿಯು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಇದರ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ.
ಅಲ್ಲಿಗೆ ಒಂದು ಬಾಣಕ್ಕೆ ಎರಡು ಹಕ್ಕಿ, ವಿದ್ಯುತ್ ಸಮಸ್ಯೆ ಪರಿಹಾರ ಜೊತೆಗೇ ಉದ್ಯೋಗ ಸೃಷ್ಟಿ. ಅಯ್ಯೋ ಮತ್ತೆ , ರಾತ್ರಿಯಿಡೀ ರಾಮಾಯಣ ಕೇಳಿ ರಾಮ ಸೀತೆಗೆ ಏನಾಗ್ಬೇಕು ಎಂದು ಕೇಳಿದಂತೆ ಮೋದಿ ವಿದೇಶಕ್ಕೆ ಹೋಗಿ ಮಜಾ ಮಾಡ್ತಾರೆ ಅಲ್ಲಿ ಹೋಗಿ ಏನು ಮಾಡಿದ್ರು ಇಲ್ಲಿ ಅಸಹಿಷ್ಣುತೆ ಆಗ್ತಿದೆ ಅಂತ ಕೇಳ್ಬೇಡಿ, ಪ್ಲೀಸ್….

ಅಹ್ಮದಾಬಾದ್ – ಲಂಡನ್ ಗೆ ಮತ್ತೆ ನೇರ ವಿಮಾನ ಸಂಪರ್ಕ ಡಿಸೆಂಬರ್ ಅಲ್ಲಿ ಆರಂಭವಾಗಲಿದೆ, ಇಂಡಿಯನ್ ಕಮ್ಯುನಿಟಿ ವೆಲ್’ಫೇರ್ ಫಂಡ್ ಒಂದು ಅನಿವಾಸಿ ಭಾರತೀಯರ ಸಹಾಯಕ್ಕೆ ನಿರಂತರವಾಗಿ ನಡೆಯಲಿದೆ ಎಂದಿದ್ದಾರೆ. ವೀಸಾ ಕಿರಿಕಿರಿ ತಪ್ಪಿಸಲು ಇನ್ನೇನೇ ತೊಂದರೆಗಳಿದ್ದರೂ ತಪ್ಪಿಸಲು ಒಂದು ಅಪ್ಲಿಕೇಶನ್ ಕೂಡಾ ತರುತ್ತಿದ್ದಾರಂತೆ, ಅದೇ MADAD.
ಇಂಗ್ಲೆಡ್ ಜೊತೆ ಇಪ್ಪತ್ತೇಳು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇವೆಲ್ಲಾ ನನಸೂ ಅಗಲಿದೆ ಕನಸಷ್ಟೇ ಅಲ್ಲ. ಗಗನದಲ್ಲಿ ವಿಮಾನ ಹಾರಾಡಲಿದೆ ದೇಶ ಅದೆಲ್ಲವನ್ನೂ ಮೀರಿ ಬೆಳೆಯಲಿದೆ.
ಒಂದು ದೇಶಕ್ಕೆ ಸ್ವಾಭಿಮಾನವೊಂದಿದ್ದರೆ, ಆ ದೇಶವನ್ನು ಯಾರೂ ಅಲುಗಾಡಿಸಲು ಬಿಡಿ ಮುಟ್ಟಲೂ ಸಾಧ್ಯವಿಲ್ಲ. ಅಂತಹಾ ಮಾತೊಂದು ನಿನ್ನೆ ಕೇಳಿದೆ : “ದುನಿಯಾ ಸೇ ಅಬ್ ಹಮ್ ಮೆಹರ್ಬಾನಿ ನಹೀ ಚಾಹ್ತೇ, ಚಾಹ್ತೇ ಹೋ ತೋ ಬರಾಬರಿ”. ವಾವ್ ಎನ್ನಲೇ ಬೇಕು, ಅಂದರೆ ವಿಶ್ವದೆಲ್ಲೆಡೆಯ ರಾಷ್ಟ್ರಗಳಿಂದ ನಮಗೆ ಸಹಾಯ ಮಾಡಿ ಎಂದು ಕೈ ಚಾಚುವ ದರ್ದು ಇಲ್ಲ, ಇನ್ನೇನಿದ್ದರೂ ನೀವು ನಮ್ಮೊಡನೆ ಸ್ಪರ್ಧೆಯಲ್ಲಿ ಓಡುತ್ತಿರಬೇಕು. ವಿದೇಶೀ ನೆಲದಲ್ಲಿ ನಿಂತು ಇಂತಹಾ ಮಾತು ಹೇಳಬೇಕಿದ್ದರೆ ಅದೆಷ್ಟು ಸ್ವಾಭಿಮಾನ ಬೇಕು, ಅದೆಂತಹಾ ಗುಂಡಿಗೆ ಬೇಕು ಜೊತೆಗೇ ನಮ್ಮಲ್ಲಿ ಅಂತಹಾ ಶಕ್ತಿಯಿದೆ ಎನ್ನುವ ಆತ್ಮವಿಶ್ವಾಸ ಬೇಕು ಎಂದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯ ಇಲ್ಲ.

ಮೂರಿರಲಿ ವಾದ, ಮುನ್ನೂರಿರಲಿ; ಸಕಲರುಂ|

ಸಾರವಸ್ತುವನೊಂದನೊಪ್ಪಿಕೊಳುವವರೇ ||

ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |

ಭಾರವಾಗದು ಜಗಕೆ – ಮಂಕುತಿಮ್ಮ ||

ಮೇಲಿನ ಕಗ್ಗಕ್ಕನುಸಾರವಾಗಿ ಮೋದಿ ನಡೆಯುತ್ತಿದ್ದಾರೆ ಎಂದು ನಿಮಗನಿಸುತ್ತಿಲ್ಲವೇ? ಈ ಕಗ್ಗ ಎಲ್ಲವನ್ನೂ ಮೀರಿದ ವಿಷಯದ ಬಗ್ಗೆ ಇರುವುದಾದರೂ, ಇಂದಿನ ಕಾಲಕ್ಕೆ ಅನ್ವಯಿಸುವುದಾದರೆ ಅದೆಷ್ಟು ಜನ ಮೋದಿ ಬಗ್ಗೆ ಹಿಗ್ಗಾಮುಗ್ಗಾ ಹೀಗಳೆಯಲಿ ಮೋದಿ ಮಾತ್ರ ಎಲ್ಲವನ್ನೂ ಮೀರಿದ್ದು ಭಾರತ, ಉತ್ತಮ ಭಾರತವೊಂದೇ ನನ್ನ ಗುರಿ ಎಂದು ವ್ಯವಹಾರಗಳನ್ನು ಮುಂದುವರಿಸಿಕೊಂಡೇ ಹೋಗುತ್ತಿದ್ದಾರೆ. ಮೋದಿಯಿಂದ ಕಲಿತುಕೊಳ್ಳುವುದು ಬಹಳ ಇದೆ ಬಿಡಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!