ಅಂಕಣ

ಕೆಟ್ಟ ಕ್ಷಣಗಳನ್ನು ಮರೆತು ಒಳ್ಳೆಯದನ್ನು ಸ್ಮರಿಸೋಣ.

ಬಿಜೆಪಿಯ ಉದಯದಿಂದ ಇಲ್ಲಿಯವರೆಗೂ ಸಕ್ರೀಯರಾಗಿರುವವರು ಅಡ್ವಾಣಿ. ಸ್ವಾತಂತ್ರಾ ನಂತರದಲ್ಲಿ ನಮ್ಮ ದೇಶ ಕಂಡ ಎಲ್ಲಾ ಚುನಾವಣೆಗಳಲ್ಲಿ ಭಾಗವಹಿಸಿದ, ಈಗಲೂ ಚಟುವಟಿಕೆಯಿಂದಿರುವ ಏಕೈಕ ರಾಜಕಾರಣಿ ಅವರು.  ಅವರೊಬ್ಬ ಥಿಂಕ್ ಟ್ಯಾಂಕರ್, ಹೋರಾಟಗಾರನೂ ಹೌದು, ಉತ್ತಮ ಆಡಳಿತಗಾರನೂ ಹೌದು. ಮೊನ್ನೆ ಮೊನ್ನೆಯವರೆಗೂ  ಬಿಜೆಪಿಯ ಫ್ರಂಟ್ಲೈನಿನಲ್ಲಿದ್ದ ಅಡ್ವಾಣಿ ಸದ್ಯ ತೆರೆಮರೆಗೆ ಸರಿಯುತ್ತಿದ್ದಾರೆ. ಬಹುಶಃ ಅವರೀಗ ತನ್ನ ವೈಭವಯುತ  ರಾಜಕೀಯ ಜೀವನದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಿರಬಹುದು.

ಲಾಲ್ ಕೃಷ್ಣ ಅಡ್ವಾಣಿ.. ತನ್ನ ಸ್ವಂತ ಸಾಮರ್ಥ್ಯ, ಪ್ರತಿಭೆಯಿಂದಲೇ ಭಾರತೀಯ ರಾಜಕೀಯ ರಂಗದಲ್ಲಿ ರಾರಾಜಿಸಿದ ಕೆಲವೇ ಕೆಲವರಲ್ಲಿ ಅಡ್ವಾಣಿಯೂ ಒಬ್ಬರು. ಒಬ್ಬ ವ್ಯಕ್ತಿ ಒಂದು ಪಕ್ಷಕ್ಕಾಗಿ ತನ್ನನ್ನು ತಾನು ಎಷ್ಟರ ಮಟ್ಟಿಗೆ ಸಮರ್ಪಿಸಿಕೊಳ್ಳಬಹುದು ಎಂದು ಕೇಳಿದರೆ ಉತ್ತರ ಅಡ್ವಾಣಿಯವರ ಕಡೆಗೆ ತಿರುಗುತ್ತದೆ. ಊಟವಿಲ್ಲ, ನಿದ್ದೆಯಿಲ್ಲ. ವಿಶ್ರಾಂತಿಯಿಲ್ಲ, ಮನೆಯವರ ಸಾಂಗತ್ಯವಿಲ್ಲ. ಒಟ್ಟಿನಲ್ಲಿ ಅಡ್ವಾಣಿ ಬಿಜೆಪಿಗಾಗಿ ಮಾಡದ್ದಿಲ್ಲ.  ಒಂದು ಉತ್ತಮ ಉದ್ದೇಶಕ್ಕಾಗಿ, ದೇಶಕ್ಕಾಗಿ   ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಶಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ, ಲಾಲ್ ಬಹುದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಾಭಾಯ್ ಪಟೇಲ್, ಅಟಲ್ ಬಿಹಾರಿ ವಾಜಪೇಯಿಯವರ ಸಾಲಿಗೆ ಅಡ್ವಾಣಿಯವರೂ ಸೇರುತ್ತಾರೆ.

ಸದ್ಯ ಅಡ್ವಾಣಿಯವರ ಚರಿಷ್ಮಾ ಕಳೆಗುಂದಿರಬಹುದು. ಹಿಂದೆ ಅದು ಹೇಗಿತ್ತೆಂದರೆ, 90ರ ದಶಕದಲ್ಲಿ ಅಡ್ವಾಣಿ ಭಾಷಣಕ್ಕೆ ಮೈದಾನವಿಡೀ ತುಂಬುತ್ತಿತ್ತಂತೆ. ಅವರು ರಥಯಾತ್ರೆ ಕೈಗೊಳ್ಳುತ್ತಾರೆಂದರೆ ಸಾವಿರಾರು ಜನ ಹಿಂಬಾಲಿಸುತ್ತಿದ್ದರಂತೆ. ಬಹುಶಃ ರಥಯಾತ್ರೆಗಳ ಮೂಲಕ ದೇಶದ ಉದ್ದಗಲಕ್ಕೂ ಭೇಟಿ ನೀಡಿದ, ಜನರೊಂದಿಗೆ ಬೆರೆತ ನಾಯಕ ಮತ್ತೊಬ್ಬನಿರಲಿಕ್ಕಿಲ್ಲ. ಆದ್ದರಿಂದಲೇ ಅವರನ್ನು ರಥಯಾತ್ರೆಗಳ ಸರದಾರನೆಂದು ಕರೆಯುವುದು. ಎಂಬತ್ತನಾಲ್ಕನೇ ವಯಸ್ಸಿನಲ್ಲಿಯೂ ’ಜನ ಚೇತನಾ’ ಯಾತ್ರೆ ಮಾಡುವ ಮೂಲಕ  ಬಗ್ಗೆ ಮೊದಲ ಬಾರಿಗೆ ಕಪ್ಪು ಹಣವನ್ನು ವಾಪಾಸು ತರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿದಾಗಲೂ ಅವರ ಪಾದರಸದಂತಹ ವ್ಯಕ್ತಿತ್ವ ಒಂಚೂರೂ ಕಳೆಗುಂದಿರಲಿಲ್ಲ. ಹೋರಾಟದ ಕಿಚ್ಚು ಕಮ್ಮಿಯಾಗುವ ಲಕ್ಷಣವಂತೂ ಇರಲೇ ಇಲ್ಲ.

ಅಡ್ವಾಣಿ ರಾಷ್ಟ್ರೀಯವಾದಾದ ಸಿದ್ಧಾಂತವನ್ನು ಬಹಳವಾಗಿಯೇ ಹಚ್ಚಿಕೊಂಡಿದ್ದವರು(ಅದೊಂದು  ಅತ್ಯಂತ ಕೆಟ್ಟ ಕ್ಷಣ, ಜಿನ್ನಾನನ್ನು ಹೊಗಳಿ ಪಕ್ಷದ ಅಧ್ಯಕ್ಷ ಸ್ಥಾನ ಕಳೆದುಕೊಂಡರೂ, ತನ್ನ ಮಾತಿನಿಂದ ಹಿಂದೆ ಸರಿಯಲಿಲ್ಲ) ಆದರೆ ತಮ್ಮ ಸಿದ್ಧಾಂತಗಳನ್ನು ವ್ಯೈಯಕ್ತಿಕವಾಗಿ ಯಾರ ಮೇಲೂ ಹೇರುವವರಲ್ಲ. ೨೦೦೯ ರಲ್ಲಿ ನಡೆದ ಲೋಕಸಭಾ ಚುನಾವನಣೆಯ ಪ್ರಚಾರದಲ್ಲಿ ಮನಮೋಹನ್ ಸಿಂಗರನ್ನು ‘ದುರ್ಬಲ ಪ್ರಧಾನಿ’ ಎಂದು ಹಿಗ್ಗಾಮುಗ್ಗ ಟೀಕಿಸಿದ್ದರು ಅಡ್ವಾಣಿ. ಆದರೆ ಅದೇ ದುರ್ಬಲ ಪ್ರಧಾನಿ ಮುಂದೆ ಅಡ್ವಾಣಿ ಪ್ರಧಾನಿಯಾಗಲು ವಿಫಲರಾಗಿ ಅಪಮಾನಕ್ಕೀಡಾದರು. ಇದು ನಮಗೆ ಗೊತ್ತಿರುವ ವಿಷಯ. ಅದೇ, ಅಡ್ವಾಣಿ ೨೦೦೬ ರಲ್ಲಿ ತಮ್ಮ ಮನೆಯಲ್ಲಿ ನಡೆದ ಗುರುನಾನಕ್ ಜಯಂತಿಗೆ ಅದೇ ದುರ್ಬಲ ಪ್ರಧಾನಿಯನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿ ಅವರನ್ನು ಸತ್ಕರಿಸಿದ್ದರು. ಅದರರ್ಥ ದ್ವೇಷ ವಿಷಯದ ಕುರಿತಷ್ಟೇ, ವ್ಯಕ್ತಿಯ ಮೇಲಲ್ಲ ಎಂಬ ರಾಮನ ವಾಕ್ಯವನ್ನು ಅಡ್ವಾಣಿ ಪರಿಪಾಲಿಸಿದ್ದರು. ಭಾರತೀಯ ರಾಜಕೀಯ ರಂಗದಲ್ಲಿ ಅಟಲ್-ಅಡ್ವಾಣಿಯವರಂತಹಾ ಜನುಮದ ಜೋಡಿ ಮತ್ತೊಂದು ಸಿಗಲಾರದು. ಪಕ್ಷ ಸ್ಥಾಪನೆಯಿಂದ ಹಿಡಿದು ಅಧಿಕಾರಕ್ಕೆ ಕೊಂಡೊಯ್ಯುವವರೆಗೂ ಜೊತೆಯಾಗಿಯೇ ಕೆಲಸ ಮಾಡಿದವರು ಅವರಿಬ್ಬರು. ಹಾಗಂತ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳೇ ಇರಲಿಲ್ಲ ಅಂತಲ್ಲ. ಆದರೆ ರಾಷ್ಟ್ರೀಯ ಹಿತಾಸಕ್ತಿಗಳ ವಿಷಯ ಬಂದಾಗ ಭಿನ್ನಾಭಿಪ್ರಾಯಗಳನ್ನೆಲ್ಲಾ ಬದಿಗೊತ್ತಿ ಒಟ್ಟಿಗೆ ಕೆಲಸ ಮಾಡಿದರು. ಅದು ನಮಗೆಲ್ಲರಿಗೂ ಆದರ್ಶ. ಆರು ವರುಷಗಳ ಕಾಲ ದೇಶದಲ್ಲಿ ಎನ್.ಡಿ.ಎ ಆಡಳಿತ ನಡೆಸಿದಾಗ ಅಟಲ್ ಬಿಹಾರಿ ವಾಜಪೇಯಿಯವರ ಹೆಜ್ಜೆ ಹೆಜ್ಜೆಗೂ ಹೆಗಲು ಕೊಟ್ಟು ದೇಶವನ್ನು ಮುನ್ನಡೆಸಿದರು. ಈ ಜೋಡಿಯ ಯಶಸ್ವೀ ಜೊತೆಯಾಟವನ್ನು ಮುರಿಯಲು ವಿರೋಧ ಪಕ್ಷಗಳಿಗೆ ೨೦೦೪ರವರೆಗೂ ಕಾಯುವಂತಾಗಿತ್ತು.

೨೦೦೯ ರಲ್ಲಿ ಅಡ್ವಾಣಿ ಪ್ರಧಾನಿಯಾಗಬೇಕಿತ್ತು. ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳು ಅವರಿಗಿತ್ತು. ದುರಾದೃಷ್ಟವಶಾತ್  ಬಿಜೆಪಿ ಗೆಲ್ಲಲಿಲ್ಲ. ೨೦೦೪ಕ್ಕಿಂತಲೂ ಹೀನಾಯವಾಗಿ ಬಿಜೆಪಿ ಸೋತಿತ್ತು.  ಹಾಗಂತ ಅಡ್ವಾಣಿ ನಾಯಕತ್ವವೊಂದೇ ಸೋಲಿಗೆ ಫ್ಯಾಕ್ಟರ್ ಅಲ್ಲ.  ಆರು ವರ್ಷಗಳ ಕಾಲ ಕಿಚಡಿ ಸರಕಾರವನ್ನು ಯಶಸ್ವಿಯಾಗಿ ಮುನ್ನಡೆಸಿ, ಸಮರ್ಥ ಸರಕಾರವನ್ನು ನೀಡಿಯೂ ಅಟಲ್’ಜೀ ಸೋಲಲಿಲ್ಲವಾ? ಅವರು ಒಮ್ಮೆ ಸೋತ ಬಳಿಕವೂ  ಆರೋಗ್ಯವಾಗಿರುತ್ತಿದ್ದರೆ ೨೦೦೯ರಲ್ಲಿ ಮತ್ತೆ ಅವರ ನಾಯಕತ್ವದಲ್ಲೇ ಚುನಾವಣೆಯೆದುರಿಸುತ್ತಿರಲಿಲ್ಲವಾ? ಮೋದಿಯ ಪ್ರಚಂಡ ಹವಾ ಇದ್ದಾಗಿಯೂ  ಮೊನ್ನೆ ದೆಹಲಿಯಲ್ಲಿ ಆಪ್ ಎದುರು ಬಿಜೆಪಿ ಹೀನಾಯವಾಗಿ ಸೋಲಲಿಲ್ಲವಾ?  ಚುನಾವಣೆಯೆಂಬುದು ಬರೀ ಒಬ್ಬ ವ್ಯಕ್ತಿ,(ಮೊನ್ನೆಯ ಲೋಕಸಭೆಯ ಚುನಾವಣೆ ಹೊರತುಪಡಿಸಿ), ಒಂದು ಪಕ್ಷದ ಮೇಲೆ ಅವಲಂಬಿತವಾಗಿ ನಡೆಯುವುದಲ್ಲ. ಯಾರು ಗದ್ದುಗೆ ಹಿಡಿಯುತ್ತಾರೆ, ಯಾರು ಮನೆ ಸೇರುತ್ತಾರೆ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ.  ೨೦೦೯ ರಲ್ಲಿ ಆಗಿದ್ದೂ ಅದೇ, ಕ್ರೀಯಾಶೀಲವಲ್ಲದ ಸಪ್ಪೆ ಸರಕಾರದ ಎದುರು  ಅಡ್ವಾಣಿ ಜಯಗಳಿಸಿಯೇ ಗಳಿಸುತ್ತಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ನಂತರ ಆಗಿದ್ದು ಮಾತ್ರ ನಿಮಗೆಲ್ಲಾ ಗೊತ್ತೇ ಇದೆ.

ಅದೆಲ್ಲಾ ತುಂಬಾ ಹಳೇ ಕಥೆಯಾಯ್ತು. ಬೇಸರದ ಸಂಗತಿಯೆಂದರೆ ಬಿಜೆಪಿಯ ಏಳ್ಗೆಗಾಗಿ ನಿಸ್ವಾರ್ಥವಾಗಿ ದುಡಿದ ಅಡ್ವಾಣಿಯವರ ಮನದೊಳಗೆ ಬಿಜೆಪಿಯ ಸಂಕ್ರಮಣದ ಕಾಲಘಟ್ಟದಲ್ಲಿ ಸ್ವಾರ್ಥ ಮನೆ ಮಾಡಿತ್ತು. ಹೌದು.. ಕಡೆ ಕಡೆಗೆ ಅಡ್ವಾಣಿಯವರು ಸ್ವಾರ್ಥಿಯಂತೆ ವರ್ತಿಸಿದರು. ಮೋದಿಯವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದಾಗ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರು ಅಡ್ವಾಣಿ. ಮೋದಿಯನ್ನು ಸಮರ್ಥಿಸುವ ಭರದಲ್ಲಿ ಕೆಲವರು ಬಿಜೆಪಿ ಬೆಂಬಲಿಗರೇ ಅಡ್ವಾಣಿಯವರನ್ನು ನಾಯಿಗೆ ಹೋಲಿಸಿದರು. ’ದ್ರೋಹ ಪುರುಷ’ನೆಂದು ಜರೆದರು.   ಮನುಷ್ಯ ಯಾರೇ ಆದರೂ, ಯಾವುದಾದರೂ ಉದ್ದೇಶಕ್ಕಾಗಿ ಕಾಯಾ ವಾಚಾ ಮನಸಾ ದುಡಿದಾಗ ಅದಕ್ಕೆ ತಕ್ಕ ಫಲ ಸಿಗದಾಗ ಬೇಸರಗೊಳ್ಳುವುದು ಸಹಜವೇ.  ಅಂತಹಾ ಸಂದರ್ಭದಲ್ಲಿ ಆತ ಸ್ವಲ್ಪ ಸ್ವಾರ್ಥಿಯಾಗುವುದರಲ್ಲಿ ತಪ್ಪೇನೂ ಇಲ್ಲ.  ಪಕ್ಷವನ್ನು ತಾನೇ ಕೈ ಹಿಡಿದು ಮುನ್ನಡೆಸಿ ಬೆಳೆಸಿ ಅಧಿಕಾರದತ್ತ ಕೊಂಡೊಯ್ದಾಗ ಪ್ರಧಾನಿ ಸ್ಥಾನವನ್ನು ಅಪೇಕ್ಷೆ ಪಟ್ಟಿದ್ದರಲ್ಲಿ ತಪ್ಪೇನೂ ಇಲ್ಲ. ಆದರೆ ಅಡ್ವಾಣಿಯೆಂಬ ಮುತ್ಸದ್ದಿ  ಯುವ ಜನರ ನಾಡಿಮಿಡಿತವನ್ನು ಅರಿಯಬೇಕಿತ್ತೆಂಬುದೊಂದೇ ಕೊರತೆ ನಮ್ಮನ್ನು ಕಾಡುತ್ತಿರುವುದು. ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ನಮಗೆ ಅನಿವಾರ್ಯವಾಗಿದ್ದರು. ಅದನ್ನರಿಯಲು ಅವರು ವಿಫಲರಾಗಿದ್ದರು.

ಆದರೂ… ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದಿದ್ದು ಮೋದಿಯೇ ಇರಬಹುದು. ಆದರೆ ಪಕ್ಷವನ್ನು ಆ ಮಟ್ಟಕ್ಕೆ ಬೆಳೆಸಿದ್ದು ಅಡ್ವಾಣಿ(ಬೇರೆಯವರ ಕೊಡುಗೆಯೂ ಇದೆ) ಎನ್ನುವುದನ್ನು ನಾವು ಮರೆಯಬಾರದು. ಆಗಿದ್ದು ಆಗಿ ಹೋಗಿದೆ. ನಮ್ಮೆಲ್ಲರ ಇಚ್ಚೆಯಂತೆ ಮೋದಿ ಪ್ರಧಾನಿಯಾಗಿದ್ದೂ ಆಗಿದೆ. ಬಿಜೆಪಿಗಾಗಿ ಅಡ್ವಾಣಿಯವರು ಬಹಳಾನೇ ಮಾಡಿದ್ದಾರೆ. ಬಿಜೆಪಿಯು ಅಡ್ವಾಣಿಯವರನ್ನು ಇನ್ನಾದರು ಗೌರವದಿಂದ ನಡೆಸಿಕೊಳ್ಳಲಿ ಎಂಬುದು ನನ್ನ ಆಶಯ.. ಆ  ಕೆಟ್ಟ ಕ್ಷಣಗಳನ್ನು ಮರೆತು, ಬಿಜೆಪಿಯೆಂಬ ಪಕ್ಷ ಭಾರತದಲ್ಲಿ ಪ್ರಜ್ವಲಿಸುವಂತೆ ಮಾಡಿದ ಅವರನ್ನು ಮನಸಾ ಸ್ಮರಿಸೋಣ.

ಹ್ಯಾಪಿ ಬರ್ತ್’ಡೇ ಅಡ್ವಾಣೀಜೀ..

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!