ಅಂಕಣ

ನಮ್ಮ ಆದ್ಯತೆ ಯಾವುದಕ್ಕೆ? ಒಳಿತಿಗೋ ಅಥವಾ ಕೆಡುಕಿಗೋ?

ಇಂದು ಸಮಾಜದಲ್ಲಿ ಕಳ್ಳತನ, ಸುಲಿಗೆ, ವಂಚನೆ,ದ್ರೋಹ, ಅತ್ಯಾಚಾರ ಇತ್ಯಾದಿ ಇತ್ಯಾದಿ ಸಮಾಜಘಾತುಕ ಚಟುವಟಿಕೆಗಳು ಸಾಲುಸಾಲಾಗಿ ದಾಳಿಮಾಡುತ್ತಿವೆ. ಜನ ತಮ್ಮನ್ನು ರಕ್ಷಿಸು ಎಂದು ಬೇಡುವ ದೇವರ ವಿಗ್ರಹವೇ ಕಳ್ಳತನವಾಗುತ್ತಿದೆ. ಸ್ವಂತ ಎಂದೆನಿಸಿದವರೇ ವಂಚಿಸಿ ಆಸ್ತಿ ಕಬಳಿಸಿ ನಂಬಿಕೆ ದ್ರೋಹ ಎಸಗುತ್ತಾರೆ. ತನ್ನದೇ ತೋಳಲ್ಲಿ ಆಡಿ ಬೆಳೆದ ಮಗಳನ್ನು ತಂದೆಯೇ ಅತ್ಯಾಚಾರ ಮಾಡುತ್ತಾನೆ. ಮಾನವೀಯ ಮೌಲ್ಯಗಳ ಅಧಃಪತನದ ಮಟ್ಟ ಇದಕ್ಕಿಂತ ಹೆಚ್ಚಾಗಲುಸಾಧ್ಯವಿಲ್ಲವೇನೋ. ಜೀವಕ್ಕಂತೂ ಬೆಲೆಯೇ ಇಲ್ಲದಂತಾಗಿದೆ. ಪ್ರೀತಿಸಿದರೂ ಕೊಲೆ, ಪ್ರೀತಿಸಲಾರೆ ಎಂದರೂ ಕೊಲೆ. ದ್ವೇಷದಿಂದಲೂ ಕೊಲೆ. ಇತ್ತೀಚೆಗೆ ಒಂದು ಪ್ರಾದೇಶಿಕ ಪತ್ರಿಕೆಯಲ್ಲಿ ಓದಿದೆ. ನಿಜವೋ ಸುಳ್ಳೋ ಅರಿಯೆ. ಅದೇನೆಂದರೆ ಖರೀದಿಸಿದ ವಸ್ತುಗಳಿಗೆ ದೀಪಾವಳಿ ಆಫರ್ ಕೊಡಲಿಲ್ಲವೆಂದು ಅಂಗಡಿ ಮಾಲೀಕನನ್ನು ಕೊಂದರಂತೆ. ಇದೇನು ಅಜ್ಞಾನದ ಪರಮಾವಧಿಯೋ, ಅತಿಯಾದ ಜ್ಞಾನಾರ್ಜನೆಯ ಅತಿರೇಕವೋ ನಾ ಕಾಣೆ. ಕ್ಷುಲ್ಲಕ ಕಾರಣಗಳಿಗಾಗಿ ಒಂದು ಜೀವದ ಬಲಿ ನಡೆಯುತ್ತಿದೆ ಎಂದರೆ ಸಮಾಜದ ಸ್ವಾಸ್ಥ್ಯದ ಬಗ್ಗೆ ಚಿಂತೆಯಾಗುವುದು ಖಂಡಿತ.

ಇವೆಲ್ಲವುಗಳ ನಡುವೆ ನನಗೆ ಈ ಸಮಸ್ಯೆಯ ಇನ್ನೊಂದೇ ಮುಖದ ಕುರಿತಾದ ಕೆಲವು ಪ್ರಶ್ನೆಗಳು ಕಾಡುತ್ತಿವೆ. ಮನುಷ್ಯ ಸ್ವಾರ್ಥಿಯಾದಂತೆಲ್ಲ ಇಂತಹ ಅನ್ಯಾಯ ಅಕ್ರಮಗಳು ಹೆಚ್ಚುತ್ತದೆ. ವೈಯಕ್ತಿಕ ಲಾಭಕ್ಕಾಗಿ ತನ್ನವರು ಎಂದೆಣಿಸಿದವರಿಗೂ ಆತ ಹಾನಿಯುಂಟುಮಾಡಬಲ್ಲ. ಹೀಗೆ ಸ್ವಾರ್ಥತೆಯ ಪರಮಾವಧಿ ತಲುಪಿರುವ ಸಮಾಜದ ಸ್ಥಿತಿ ಇನ್ನಷ್ಟು ಹದಗೆಡುವ ಮೊದಲು ಸ್ವಲ್ಪ ಮಟ್ಟಿಗಾದರೂ ಸುಧಾರಿಸುವುದು ಅಗತ್ಯ ಎನಿಸುತ್ತದೆ. ಈ ಸಮಾಜದ ಅಸ್ವಸ್ಥತೆಗೆ ಇನ್ನೊಂದು ಮುಖ್ಯ ಕಾರಣ ಪರಸ್ಪರ ಅಪನಂಬಿಕೆ. ಇಲ್ಲಿ ಯಾರೂ ಯಾರನ್ನೂ ನಂಬದ ಸ್ಥಿತಿಗೆ ನಾವು ತಲುಪಿದ್ದೇವೆ. ಯಾರಾದರೂ ಒಂದು ಉಪಕಾರ ಮಾಡಿದರೂ ಅವನಿಗೇನೋ ಲಾಭ ಇರಬೇಕು, ಸುಮ್ಮನೆ ಆತ ಹಾಗೆ ಮಾಡಿರಲಾರ ಎನ್ನುವಷ್ಟರ ಮಟ್ಟಿಗೆ ನಂಬಿಕೆಯ ತಳಪಾಯ ಕುಸಿದಿದೆ. ಆದ್ದರಿಂದ ಜನರ ಮಧ್ಯೆ ಪರಸ್ಪರ ನಂಬಿಕೆ ಹೆಚ್ಚಿಸುವ ಕೆಲಸ ನಡೆಯಬೇಕಿದೆ ಎಂಬುದು ನನ್ನ ಅಭಿಪ್ರಾಯ. ಇಲ್ಲಿ ನನಗೆ ಮುಖ್ಯ ಸಾಧನವಾಗಿ ಕಾಣುವುದು ಮಾಧ್ಯಮಗಳು. ಸಮಾಜವನ್ನು ಯಾವುದೇ ರೀತಿಯಲ್ಲಿ ತಕ್ಕ ಮಟ್ಟಿಗಾದರೂ ಬದಲಾಯಿಸುವ ಶಕ್ತಿ ಮಾಧ್ಯಮಗಳಿಗಿದೆ ಎಂಬುದು ನನ್ನ ಅನಿಸಿಕೆ.

ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಜನರಿಗೆ ತಕ್ಷಣ ಸುದ್ದಿ ಮುಟ್ಟಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ನಿಜಕ್ಕೂ ಇದು ಶ್ಲಾಘನೀಯ ಸಂಗತಿಯೇ. ಆದರೆ ಆಗಲೇ ಹೇಳಿದಂತೆ ನನಗೆ ಗೋಚರಿಸುತ್ತಿರುವ ಸಮಸ್ಯೆಯ ಇನ್ನೊಂದು ಮುಖ ಯಾವುದೆಂದರೆ  ಎಲ್ಲಾ ಮಾಧ್ಯಮಗಳು ಸುದ್ದಿಯನ್ನೇನೋ ಬಿತ್ತರಿಸುತ್ತಿವೆ. ಆದರೆ ಅವುಗಳಲ್ಲಿ ಬಹುಪಾಲು ಯಾವ ತರಹದ ಸುದ್ದಿಗಳಿರುತ್ತವೆ ಮತ್ತು ಅದನ್ನು ಹೇಗೆ ಬಿತ್ತರಿಸಲಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ನಾನು ಕಂಡಿರುವ ಪ್ರಕಾರ ಎಲ್ಲೊ ಒಂದು ಕೊಲೆ ನಡೆದಿದ್ದರೆ ಅದನ್ನು ಕಡಿಮೆ ಎಂದರೆ ಅರ್ಧ ಗಂಟೆಗಳ ಮಟ್ಟಿಗಾದರೂ ಬಿತ್ತರಿಸಲಾಗುತ್ತದೆ. ಅದರ ಕುರಿತಾದ ಚರ್ಚೆಗಳು ನಿರಂತರ ನಡೆಯುತ್ತವೆ. ಇನ್ನು ಅತ್ಯಾಚಾರ ನಡೆದರೆ ಅದಕ್ಕೂ ಇಂಥದ್ದೆ ಪ್ರಚಾರ. ಬಹುಶಃ ಇಂದು ಎಲ್ಲೆಡೆ ಇವುಗಳೇ ನಡೆಯುತ್ತಿರುವುದರಿಂದ ಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನೋಡುವುದಾದರೆ ಸರಿ ಎನ್ನೋಣ. ಆದರೆ ಎಲ್ಲೊ ಒಂದು ಒಳ್ಳೆ ಕೆಲಸ ನಡೆದಿದೆ ಎಂದಾಗ ಸಹ ಇಂಥದೇ ಪ್ರಚಾರ, ಸಮಯ ಹಾಗೂ ಪ್ರಾಮುಖ್ಯತೆ ನೀಡಬೆಕಲ್ಲವೇ? ನನ್ನ ಪ್ರಕಾರ ಸಮಾಜಕ್ಕೆ ಒಳಿತಾಗುವ ಕೆಲಸಗಳ ಕುರಿತು ಕೂಡ ಜನರಿಗೆ ಹೆಚ್ಚು ತಲುಪುವಂತೆ ಮಾಡಿದಾಗ ಎಲ್ಲೊ ಒಂದು ಕಡೆ ನೋಡುಗರಲ್ಲಿ ಒಂದಿಷ್ಟು ನಂಬಿಕೆ ಕುಡಿಯೊಡೆಯುವ ಸಾಧ್ಯತೆ ಇದೆ ಎಂಬುದು ನನ್ನ ವಿಚಾರಸರಣಿ.

ಜಗತ್ತು ಹಾಳಾಗಿ ಹೋಗಿದೆ, ಬರಿ ಮೋಸ, ವಂಚನೆ ಹಾಗೆ ಹೀಗೆ ಎಂಬ ಮಾತುಗಳನ್ನು ಹಲವರಿಂದ ನಾನು ಕೇಳಿದ್ದೇನೆ. ಈ ಮಾತಿನಲ್ಲಿ ನಿಜಾಂಶ ಇದೆ. ಆದರೆ ಈ ಪರಿಸ್ಥಿತಿ ಹೇಗೆ ನಿರ್ಮಾಣ ಆಯಿತು ಎಂಬುದನ್ನು ಪರಿಶೀಲಿಸುವುದು ಅಗತ್ಯ. ಸಮಾಜ ಎಂದರೆ ಯಾರು? ನಾವು ಹಾಗೂ ನಮ್ಮ ಸುತ್ತಮುತ್ತಲಿನ ಜನರೇ ಅಲ್ಲವೇ. ನನ್ನ ಪ್ರಕಾರ ಜಗತ್ತಿನಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಅನಾದಿಕಾಲದಿಂದಲೂ ಇದೆ. ಆದರೆ ಇಂದು ದುಷ್ಟಶಕ್ತಿಗಳಿಗೆ ನಾವೇ ಅತಿಯಾದ ಪ್ರಚಾರ ಕೊಟ್ಟು ವೈಭವೀಕರಿಸಿ ಇನ್ನಷ್ಟು ಅಂತಹ ಕಾರ್ಯಗಳಿಗೆ ಪ್ರೇರೇಪಿಸುತ್ತಿದ್ದೇವೇನೋ ಅನಿಸುತ್ತದೆ ನನಗೆ. ಕೊಲೆ, ಅತ್ಯಾಚಾರ ಮಾಡಿದವರಿಗೆ ಯಾವುದೇ ರೀತಿಯ ಅನುಕಂಪ ಇಲ್ಲದೇ ಮೊದಲಾಗಿ ಆಗಬೇಕಾದದ್ದು ಶಿಕ್ಷೆ. ಆದರೆ ಇಲ್ಲಿ ಶಿಕ್ಷೆಗಿಂತ ಹೆಚ್ಚು ಪ್ರಚಾರ ಸಿಗುತ್ತಿದೆ ಅನಿಸುವುದಿಲ್ಲವೇ? ನನಗಂತೂ ಖಂಡಿತ ಹಾಗೆ ಅನಿಸುತ್ತಿದೆ. ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂದಾಗ ಕೆಲವು ಪ್ರಚಾರಕ್ಕಾಗಿ ಬಕಪಕ್ಷಿಗಳಂತೆ ಕಾಯುವ ಬುದ್ಧಿಹೀನ ಜೀವಿಗಳು ಅದನ್ನೇ ಬಂಡವಾಳವನ್ನಾಗಿ ಬಳಸುವ ಹುನ್ನಾರ ನಡೆಸುತ್ತಿದ್ದಾರೆ. ಅದರ ಪರಿಣಾಮವನ್ನು ಅರಿಯುವಷ್ಟು ವಿವೇಕ ಸಹ ಅವರಲ್ಲಿರುವುದಿಲ್ಲ. ಅಂತಹ ವ್ಯಕ್ತಿಗಳನ್ನು ಕಂಡು ಅಯ್ಯೋ ಪಾಪ ಎನ್ನಬೇಕೆ ಹೊರತು ಅವರಿಗೆ ಬಿಟ್ಟಿ ಪ್ರಚಾರ ಕೊಡುವುದೋ, ಅವರ ಹೇಳಿಕೆಗಳನ್ನೆಲ್ಲ ಪ್ರಸಾರ ಮಾಡುವುದೊ ಮಾಡಿದರೆ ಅದಕ್ಕಿಂತ ಸಮಯದ ದುರುಪಯೋಗ ಬೇರೊಂದಿಲ್ಲ. ಅವರ ಕುರಿತಾಗಿ ಚರ್ಚೆಗಳಾದಂತೆಲ್ಲ ಅವರುಗಳು ತಾವು ಮಹಾನ್ ಸಾಧಕರೆಂಬ ಭ್ರಮಗೆ ಒಳಗಾಗಿ ಇನ್ನಷ್ಟು ಅರ್ಥವಿಲ್ಲದ ಹೇಳಿಕೆಗಳ ಮೂಲಕ ಜನಮಾನಸದ ಶಾಂತಿ ಕದಡಲು ಮುಂದಾಗುತ್ತಾರೆ. ಆದ್ದರಿಂದ ಅಂತಹವರ ಎದುರು ಕ್ಯಾಮರಾ ಇಡುವುದನ್ನು ಮೊದಲು ನಿಲ್ಲಿಸಬೇಕು.

ಪ್ರತಿದಿನವೂ ನಮ್ಮ ಸುತ್ತ-ಮುತ್ತ ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಕೇಳಿಬರುವ ಸುದ್ದಿಗಳನ್ನು ಕಾಣುವಾಗ ನನ್ನಲ್ಲಿ ಮೂಡುವ ಪ್ರಶ್ನೆ ಏನೆಂದರೆ, ಸಮಾಜದಲ್ಲಿ ಒಳ್ಳೆಯ ಕೆಲಸಗಳೇ ನಡೆಯುತ್ತಿಲ್ಲವೇ? ಎಂದು. ಖಂಡಿತ ಒಳ್ಳೆಯ ಕೆಲಸಗಳೂ ನಡೆಯುತ್ತಿವೆ. ಅವುಗಳಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ ಅಷ್ಟೆ. ನಮ್ಮ ಮಾಧ್ಯಮಗಳು ಕಾಲಹರಣಕ್ಕೊಂದು ಸುದ್ದಿ ಬೇಕು ಎನ್ನುವಂತೆ ನಡೆದುಕೊಳ್ಳುತ್ತಿವೆ.  ನನ್ನ ಪ್ರಕಾರ ಒಳ್ಳೆಯ ಕೆಲಸ ಎಂದರೆ, ಒಂದು ಧರ್ಮಛತ್ರ ಕಟ್ಟಿಸಿ ಸಾವಿರಾರು ಜನರಿಗೆ ಊಟ ಹಾಕಿಸುವಂಥದ್ದೆ ಆಗಬೇಕೆಂದಿಲ್ಲ. ಒಂದು ಅಪಘಾತ ಆದಾಗ ತಕ್ಷಣ ಆಸ್ಪತ್ರೆ ಸಾಗಿಸುವಲ್ಲಿ ಸಹಕರಿಸುವುದೋ ಅಥವಾ ಒಬ್ಬರು ವೃದ್ದೆ ರಸ್ತೆ ದಾಟಲು ಕಷ್ಟಪಡುವಾಗ ಅವರನ್ನು ರಸ್ತೆ ದಾಟಲು ಸಹಾಯ ಮಾಡುವುದೋ ಇಂತಹ ಸಣ್ಣ ಕೆಲಸಗಳು ಸಹ ಸಮಾಜದಲ್ಲಿ ಪರಸ್ಪರ ಸೌಹಾರ್ದತೆ ಬೆಳೆಸುವ ಮಾನವನ ಉನ್ನತ ನಡೆಗಳು. ಹಾಗಾದರೆ ಇಂತಹ ಎಲ್ಲವನ್ನು ಮಾಧ್ಯಮದಲ್ಲಿ ಬಿತ್ತರಿಸುತ್ತಾ ಇರಲು ಸಾಧ್ಯವೇ ಎಂದು ಕೇಳಬಹುದು. ನಿಜ ಸಾಧ್ಯವಿಲ್ಲ. ಆದರೆ ನನ್ನದೊಂದು ಪ್ರಶ್ನೆಯಿದೆ, ಯಾರಿಗೂ ಉಪಯೋಗವಿರದ ಒಂದು ರಿಯಾಲಿಟಿ ಶೋನ ಆಗುಹೋಗುಗಳು ಒಂದೇ ಕಾಲಕ್ಕೆ ಎಲ್ಲ ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ ಆಗಬಲ್ಲದು ಎಂದಾದರೆ, ಯಾಕೆ ನಾನು ಹೇಳಿರುವ ಸಮಾಜಮುಖಿ ಕಾರ್ಯಗಳು ಸುದ್ದಿಯಾಗಬಾರದು? ನನ್ನ ಮಟ್ಟಿಗೆ ರಿಯಾಲಿಟಿ ಶೋ ಗಿಂತ ಅಜ್ಜಿಯನ್ನು ರಸ್ತೆ ದಾಟಿಸಿದ ಸುದ್ದಿ ಹೆಚ್ಚು ಮೌಲ್ಯಯುತವಾದದ್ದು ಎನಿಸುತ್ತದೆ. ಹಾಗೆಯೇ ಯಾರೋ ಒಬ್ಬ ಸೆಲೆಬ್ರಿಟಿ ಹೆಂಡತಿಗೆ ಹೊಡೆದರೆ, ಅಥವಾ ವಿಚ್ಛೇದನೆ ನೀಡಿದರೆ ಅದನ್ನು ಗಂಟೆಗಟ್ಟಲೆ ಪ್ರಸಾರ ಮಾಡುವ ಮಾಧ್ಯಮಗಳು ಅದೇ ಸೆಲೆಬ್ರಿಟಿ ಬಡಮಕ್ಕಳಿಗೆ ಸಹಾಯ ಮಾಡಿದ್ದರೆ ಅದನ್ನು ಯಾಕೆ ಸಮಾಜದ ಮುಖ್ಯವಾಹಿನಿಗೆ ತಲುಪಿಸುವ ಕೆಲಸ ಮಾಡುವುದಿಲ್ಲ? ಯಾರದ್ದೇ ವೈಯಕ್ತಿಕ ಬದುಕು ಸಮಾಜಕ್ಕೆ ಬ್ರೇಕಿಂಗ್ ನ್ಯೂಸ್ ಆಗುತ್ತಿರುವುದು ವಿಪರ್ಯಾಸವೇ ಸರಿ. ಒಬ್ಬಳು ನಟಿ ಬರ್ಗರ್ ತಿಂದದ್ದು ಮುಖ್ಯಾಂಶವಾಗಿ ಬಿತ್ತರವಾಗುವುದಾದರೆ, ತಾನು ಊಟ ಮಾಡದೆ, ಮಕ್ಕಳಿಗೆ ಉಣಬಡಿಸುವ ಬಡ ತಾಯಿಯೊಬ್ಬಳ ಕಥೆ ಇನ್ನೆಷ್ಟು ಔನ್ನತ್ಯದಲ್ಲಿರಬೇಕು ಅಲ್ಲವೇ?

ಒಟ್ಟಾರೆ ನಾನು ಹೇಳಹೊರಟಿರುವುದು ಇಷ್ಟು. ಜಗತ್ತಿನಲ್ಲಿ ಮಾನವೀಯತೆ ಹಾಗೂ ನಂಬಿಕೆಯ ಬೆಲೆ ಕುಸಿದಿದೆ. ಹಾಗೆಂದು ಅಂತಹ ಚಟುವಟಿಕೆಗಳನ್ನೆ ಮತ್ತೆ ಮತ್ತೆ ವೈಭವೀಕರಿಸಿ ಇನ್ನಷ್ಟು ಅಪನಂಬಿಕೆ ಮೂಡಿಸಿದರೆ ಅಮಾನವೀಯ ಕಾರ್ಯಗಳು ಇನ್ನಷ್ಟು ಹೆಚ್ಚಾಗುತ್ತವೆ ಎನಿಸುತ್ತದೆ ನನಗೆ. ಜನರಲ್ಲಿ ಜಾಗ್ರತೆ ಮೂಡಿಸುವಷ್ಟರ ಮಟ್ಟಿಗೆ ಮಾತ್ರ ಅವುಗಳನ್ನು ಪ್ರಸಾರ ಮಾಡಬೇಕು, ಹಾಗೆಯೇ ಅವುಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವ ಕುರಿತು ಕೂಡ ತಿಳಿಹೇಳಬಹುದು ಎಂಬುದು ನನ್ನ ಅಭಿಪ್ರಾಯ. ಅಂತೆಯೇ ಸಮಾಜದ ಒಳಿತಿಗಾಗಿ ನಡೆಯುವ ಕಾರ್ಯಗಳನ್ನು ಬ್ರೇಕಿಂಗ್ ನ್ಯೂಸ್ ಆಗಿ ತೋರಿಸಿ. ಆ ಮೂಲಕ ಒಂದಿಷ್ಟು ಜನರಾದರೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹ ಕಾರ್ಯಗಳಲ್ಲಿ ತೊಡಗಲಿ ಎಂಬುದು ನನ್ನ ಅನಿಸಿಕೆ. ಪ್ರಚಾರಕ್ಕಾಗಿ ಒಳ್ಳೆಯ ಕೆಲಸ ಮಾಡಲಿ ಎಂದು ಹೇಳುತ್ತಿದ್ದೀಯೋ ಎಂದು ನೀವು ನನ್ನನ್ನು ಪ್ರಶ್ನಿಸಬಹುದು. ಆಗ ನನ್ನ ಉತ್ತರ ಏನೆಂದರೆ ಸಮಾಜಕ್ಕೆ ಒಳಿತನ್ನು ಮಾಡುತ್ತಿದ್ದಾರೆ ಎಂದಾದರೆ ಅದು ಪ್ರಚಾರಕ್ಕಾಗಿಯೇ ಆದರೂ ಹಾನಿಯೇನಿಲ್ಲ ಎನ್ನುತ್ತೇನೆ. ಬದುಕು ಸುಂದರವಾಗಬೇಕಾದರೆ ಮೊದಲು ನಮ್ಮಲ್ಲಿ ಪರಸ್ಪರ ನಂಬಿಕೆಗಳಿರಬೇಕು. ನಂಬಿಕೆಯಿರದ ಬದುಕಿನಲ್ಲಿ ಎಂದಿಗೂ ಆತಂಕವೇ ತುಂಬಿರುತ್ತದೆ. ಅಂತಹ ಆತಂಕದ ಬದುಕು ಬೇಡ, ಒಂದಿಷ್ಟು ಪ್ರೀತಿ-ವಿಶ್ವಾಸಗಳು ಮೊಳಕೆಯೊಡೆಯಲಿ; ಆ ಮೂಲಕ ನಮ್ಮದು, ನಮ್ಮವರು ಎಂಬ ಭ್ರಾತೃತ್ವ ಭಾವ ಬೆಳೆಯಲಿ ಎಂಬುದು ನನ್ನ ಬಯಕೆ. ಜಗತ್ತು ಸರಿಯಿಲ್ಲ, ಸಮಾಜ ಸರಿಯಿಲ್ಲ, ಮನುಷ್ಯರು ಸರಿ ಇಲ್ಲ, ಅದು ಸರಿ ಇಲ್ಲ, ಇದು ಸರಿ ಇಲ್ಲ ಎನ್ನುತ್ತಾ ಅದನ್ನೇ ಜಪಿಸುತ್ತಾ ಕುಳಿತಿರುವ ಬದಲು ಅಲ್ಪ ಪ್ರಮಾಣದಲ್ಲೇ ಆದರೂ ಆಗುತ್ತಿರುವ ಒಳಿತನ್ನು ಗುರುತಿಸಿ, ಅವುಗಳಿಂದ ಪ್ರೇರೇಪಿತರಾಗೋಣ, ನಮ್ಮಿಂದಾದಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗೋಣ ಎಂಬುದು ಈ ಲೇಖನದ ಆಶಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!