ಅಂಕಣ

ದೀಪಗಳ ಹಾವಳಿ…

          ಮನೆ-ಮನೆಯಲ್ಲೂ, ಅರಿಶಿಣ-ಕುಂಕುಮ ಮಿಶ್ರಿತ ಸೀರೆಯುಟ್ಟು ಸಾಲಾಗಿ ನಿಂತು ತಂಗಾಳಿಗೆ ನಡು ಬಳುಕಿಸುತ್ತ ಜಗತ್ತನ್ನೇ ತಮ್ಮತ್ತ ಸೆಳೆಯುವ ಚೆಲುವೆಯರ ಹಾವಳಿಯಾಗುವ ದಿನವೇ ದೀಪಾವಳಿ. ಅದನ್ನು ನೋಡುವುದೇ ಒಂದು ಹಬ್ಬ. ಹಾಗೆಯೇ ಆ ಸಾಲು ಸಾಲು ಚೆಲುವೆಯರನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ನೆನಪಿನ ಪುಟಗಳಲ್ಲಿ ಅಚ್ಚೊತ್ತುವುದು ಇನ್ನೊಂದೇ ರೀತಿಯ ಸಂಭ್ರಮ. ಇನ್ನು ಬಿಳಿಯ ಬೆಳಕನ್ನು ಒಡಲಲ್ಲಿಟ್ಟುಕೊಂಡು, ಬಣ್ಣಬಣ್ಣದ ಬೆಳಕನ್ನು ಹೊರಚೆಲ್ಲಲು ಗರಿಬಿಚ್ಚಿ ನಿಲ್ಲುವ ’ಗೂಡುದೀಪ’ದ್ದೇ ಒಂದು ಸೊಬಗು. ಪ್ರತಿ ಮನೆಯಲ್ಲೂ ದೀಪಾವಳಿ ಆಚರಣೆಯ ಸಾಂಕೇತಿಕ ಪ್ರತಿನಿಧಿ ಈ ಗೂಡುದೀಪಗಳು. ಸ್ವಲ್ಪ ದಿನಗಳ ಮಟ್ಟಿಗಾದರೂ ಈ ಗೂಡುದೀಪಗಳು ಮನೆಗಳಿಗೆ ಗುರುತಿನ ಚೀಟಿ ಇದ್ದಂತೆ. ರಾತ್ರಿಯಲ್ಲಿ ಬರುವಾಗ ಆ ಗೂಡುದೀಪವನ್ನು ನೋಡಿಯೇ “ಹೋ..ಇದು ನಮ್ಮ ರಾಮಣ್ಣನ ಮನೆ.” ಎಂದು ಗುರುತಿಸುವ ಸಂದರ್ಭಗಳಿರುತ್ತವೆ. ಗೂಡುದೀಪದ ಬಣ್ಣದ ಬೆಳಕಿಗೆ ಮರುಳಾಗದವರಿಲ್ಲ. ದೀಪಾವಳಿಯಲ್ಲಿ ಗೂಡುದೀಪ ಇಲ್ಲದಿದ್ದರೆ, ಅಜ್ಜನಿಗೂ ಬೇಸರ; ಮೊಮ್ಮಗನಿಗೂ ಬೇಸರ. ಈ ಬೇಸರಕ್ಕೆ ವಯಸ್ಸಿನ ಮಿತಿಯಿರುವುದಿಲ್ಲ. ಅಂತೆಯೇ ಗೂಡುದೀಪ ಇದ್ದಾಗ ಆಗುವ ಸಂತಸಕ್ಕೂ ವಯಸ್ಸಿನ ಮಿತಿಯಿಲ್ಲ.

          ಪ್ರತಿ ವರ್ಷವೂ ದೀಪಾವಳಿ ಬಂತೆಂದರೆ ಹಬ್ಬದ ತಯಾರಿಗೆ ಹೊಸತನ್ನು ಹುಡುಕುವುದೇ ಮನಸಿಗೊಂದು ಉತ್ಸಾಹ. ಹೊಸ ರೀತಿಯ ಹಣತೆಗಳು, ಮೇಣದ ಬತ್ತಿಗಳು, ಹೊಸ ವಿನ್ಯಾಸದ ಗೂಡುದೀಪಗಳು, ಹೊಸ ಹೊಸ ರೀತಿಯ ಪಟಾಕಿಗಳು, ಭೂ-ಚಕ್ರಗಳು, ಹೂ-ಕುಂಡಗಳು, ರಾಕೆಟ್’ಗಳು ಹೀಗೆ ಎಲ್ಲವೂ ಹೊಸತೇ. ಇಷ್ಟೆಲ್ಲ ಹೊಸದು ಅಂದಮೇಲೆ ಹೊಸ ಬಟ್ಟೆ ಕೊಳ್ಳದಿದ್ದರಾಗುತ್ತದೆಯೇ? ಅದೂ ಕೂಡ ಹೊಸತೇ ಆಗಬೇಕು. ದೀಪಾವಳಿಯ ಹಿಂದಿನ ದಿನ ತನ್ನ ರೂಪವನ್ನು ಅಡಗಿಸಿ ಕುಳಿತ ಗೂಡುದೀಪವನ್ನು ಹೊರತೆಗೆದು ಅದಕ್ಕೆ ಅದರದೇ ಅದ ಸುಂದರ ರೂಪ ಕೊಟ್ಟು ಮನೆಯ ಎದುರು ಅಲಂಕರಿಸಲಾಗುತ್ತದೆ. ಅದು ದೀಪಾವಳಿ ಆರಂಭದ ಸೂಚನೆ. ಅಲ್ಲಿಂದ ಮೂರು ದಿನ ವಿವಿಧ ಪೌರಾಣಿಕ ಹಿನ್ನೆಲೆಗಳನ್ನೊಳಗೊಂಡ ಪೂಜೆಗಳು, ಆಚರಣೆಗಳು ಮನೆ-ಮನಗಳನ್ನು ತುಂಬಿಕೊಳ್ಳುತ್ತದೆ.

          ಮೊದಲನೆಯ ದಿನ ತೈಲಸ್ನಾನ; ನಂತರ ಹಬ್ಬಕ್ಕಾಗಿಯೇ ಕೊಂಡ ಹೊಸ ಬಟ್ಟೆಗಳನ್ನು ತೊಡುವ ಸಂಭ್ರಮವಾದರೆ, ಎರಡನೇ ದಿನ ಲಕ್ಷ್ಮೀ ಪೂಜೆ ಹಾಗೂ ವಾಹನ ಪೂಜೆ, ಮೂರನೇ ದಿನ ಬಲಿ ಪಾಡ್ಯಮಿ ಹಾಗೂ ಗೋ ಪೂಜೆಗಳು ನಡೆಯುವುದು ವಾಡಿಕೆ. ಇವೆಲ್ಲವುಗಳೊಂದಿಗೆ ರುಚಿ-ರುಚಿಯಾದ ತಿಂಡಿ ತಿನಿಸುಗಳು, ಪ್ರತಿದಿನ ಸಂಜೆ ಪಟಾಕಿಗಳ ಹಾವಳಿ, ಹಬ್ಬದ ಸಂಭ್ರಮದ ಮತ್ತಿಗೆ ಇನ್ನಷ್ಟು ಕಿಕ್ ಇದ್ದಂತೆ. ಆಕಾಶದೆತ್ತರಕ್ಕೆ ಹಾರಿ ಅಲ್ಲಿ ಸ್ಪೋಟಗೊಂಡು ಬಾನಿಗೆ ಬಣ್ಣ ಬಳಿಯುವ ಪಟಾಕಿಗಳ ಪರಿಯೇ ಸುಂದರ. ಇನ್ನು ನಿತ್ತಲ್ಲಿಯೇ ನಮ್ಮನ್ನು ಸುತ್ತಿಸುವ ಭೂ-ಚಕ್ರದ ಬೆಳಕಿನ ಸುರುಳಿಗೆ ಹೋಲಿಕೆಯುಂಟೇ? ಮನೆಯೆದುರು ಬೆಳಕಿನ ಕಾರಂಜಿ ಸೃಷ್ಟಿಸುವ ಹೂ-ಕುಂಡಗಳ ಬೆಡಗಿಗೆ ಮನಸೋಲದೇ ಇರುವವರಿಲ್ಲ. ಆಬಾಲವೃದ್ಧರಾದಿಯಾಗಿ ಎಲ್ಲರ ಕೈಯಲ್ಲೂ ಚಂದ ಎಂದೆನಿಸುವ ನಕ್ಷತ್ರ ಕಡ್ಡಿಗಳ ಸೌಂದರ್ಯಕ್ಕೆ ಸಾಟಿ ಇನ್ನೆಲ್ಲಿ ಅಲ್ಲವೇ? ಈ ಎಲ್ಲ ಬೆಳಕಿನ ಆಟಿಕೆಗಳಿಗಾಗಿ ಮಕ್ಕಳು ಹಟ ಮಾಡುವ ಪರಿ ನೋಡುವುದು ಇನ್ನೊಂದೇ ರೀತಿಯ ಖುಷಿ. “ನಾನು ಹಚ್ಬೇಕಿದ್ದ ನೆಲ ಚಕ್ರವನ್ನ ಅಣ್ಣ ಹಚ್ಚಿದ” ಎನ್ನುವ ತಮ್ಮನ ದೂರು, “ನನ್ನ ನಕ್ಷತ್ರ ಕಡ್ಡಿಯನ್ನ ಅವಳು ಕೆಳಗೆ ಬೀಳಿಸಿದ್ಲು” ಎನ್ನುವ ಪುಟ್ಟ ಅಕ್ಕನ ಅಳು, ಕೊನೆಗೆ ಇಬ್ಬರಿಗೂ ಹೊಸತೇನನ್ನೋ ತಂದು ಅಪ್ಪ ನೀಡಿದಾಗ ಮತ್ತೆ ಒಂದಾಗಿ ಇಬ್ಬರೂ ಸಂತಸದ ಬೆಳಕಲ್ಲಿ ಆಟವಾಡುವ ಪರಿ ಇವೆಲ್ಲವೂ ನಮ್ಮ ಬದುಕಿನ ಸುಂದರ ಭಾಗವಾಗಿ ನೆನಪಿನ ಪುಟಗಳಲ್ಲಿ ಸರಿಯುತ್ತವೆ. ಮತ್ತೊಮ್ಮೆ ಬಾಲ್ಯದ ನೆನಪುಗಳ ಹುಲ್ಲುಗಾವಲುಗಳ ಮೇಲೆ ಇಬ್ಬನಿ ಬಿದ್ದು ಹಸಿಯಾದಂತೆ ಭಾಸವಾಗುತ್ತದೆ. ಮತ್ತೆ ಚಿಕ್ಕವರಾಗೋಣ ಅನಿಸುತ್ತದೆ. ಇನ್ನೆಲ್ಲೋ  ಒಂದು ಕಡೆ ಯಾವುದೋ ಕಾರಣಕ್ಕೆ ದೂರ ಪ್ರಯಾಣ ಮಾಡುತ್ತಾ ಹಬ್ಬದ ಸಂಭ್ರಮದಿಂದ ವಂಚಿತವಾದ ಮನಸೊಂದು ಬಸ್ಸಿನ ಅಥವಾ ರೈಲಿನ ಕಿಟಕಿ ಗಾಜುಗಳಿಂದ ಹೊರನೋಡುತ್ತಾ ಇಂಥದೇ ನೆನಪುಗಳನ್ನು ಮೆಲುಕು ಹಾಕುತ್ತ ತನ್ನಷ್ಟಕ್ಕೆ ತಾನು ನಗುತ್ತಿರುತ್ತದೆ. ಆ ಮನಸಿಗೆ ಅರಿವಿಲ್ಲದಂತೆಯೇ ಕಣ್ಣ ಹನಿಗಳು ರೆಪ್ಪೆಗಳ ಅಣೆಕಟ್ಟನ್ನು ಮೀರಿರುತ್ತವೆ.

           ಗೆಳೆಯರೇ, ದೀಪಾವಳಿ ಕೇವಲ ಮೂರು ದಿನಗಳ ಆಚರಣೆಗೆ ಸೀಮಿತವಾದ ಹಬ್ಬವಲ್ಲ.ನಾನು ಮೊದಲೇ ಹೇಳಿದಂತೆ ಅದು ದೀಪಗಳ, ಬೆಳಕಿನ ಹಾವಳಿ.ಬೆಳಕು ಅಂದರೆ ಜ್ಞಾನ, ಬೆಳಕು ಅಂದರೆ ಭಕ್ತಿ, ಬೆಳಕು ಅಂದರೆ ಪ್ರೀತಿ. ತನ್ನನ್ನು ತಾನು ದಹಿಸಿಕೊಂಡು ಲೋಕಕ್ಕೆ ಬೆಳಕನ್ನೀಯುವ ದೀಪದ ಪರಿಯಿಂದ ಮಾನವ ತ್ಯಾಗದ ಅರ್ಥ ಕಂಡುಕೊಳ್ಳಬೇಕು. ಅಂತೆಯೇ  ಒಂದು ದೀಪ ಇನ್ನೊಂದು ದೀಪವನ್ನು ಹಚ್ಚಲು ತನ್ನ ಒಡಲಿನ ಬೆಳಕನ್ನು ಧಾರೆಯೆರೆಯುವ ಪರಿಯಿಂದ ತನ್ನಲ್ಲಿರುವ ಜ್ಞಾನ ಹಾಗೂ ಪ್ರೀತಿಯನ್ನು ಜಗತ್ತಿಗೆ ಹಂಚುವ ಹಂಬಲ ಹೊಂದಬೇಕು. ಬೆಳಕಿರದೇ ಜಗತ್ತು ಶೂನ್ಯ. ಈ ಸಂದರ್ಭದಲ್ಲಿ ಜಗತ್ತನ್ನು ದಿನವೂ ದೀಪಾವಳಿಯಂತೆ ಬೆಳಗುವ, ಜಗದ ಮೂಲೆ ಮೂಲೆಗೂ ಬೆಳಕಿನ ಹಾವಳಿ ಮಾಡುವ ಸೂರ್ಯನಿಗೆ ನಾವು ಕೃತಜ್ಞತೆ ಹೇಳಲೇಬೇಕು. ಸೃಷ್ಟಿಕರ್ತ ನಮಗಾಗಿ ವಿಶಿಷ್ಟವಾಗಿ ತಯಾರಿಸಿ ನೀಡಿರುವ ಲೋಕದ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಹಣತೆಯಂತೆ ಸೂರ್ಯ ನನಗೆ ಕಾಣುತ್ತಾನೆ. ಅಂತೆಯೇ ನಮ್ಮೆಲ್ಲರ ಮನದ ಜಗತ್ತಿನಲ್ಲೂ ಒಬ್ಬ ಸೂರ್ಯನಿದ್ದಾನೆ. ಜ್ಞಾನ ಪಡೆದಂತೆಲ್ಲ ಆ ನಮ್ಮೊಳಗಿನ ಸೂರ್ಯನ ಪ್ರಕಾಶತೆ ಜಾಸ್ತಿ. ಅದನ್ನು ಹಂಚಿದಂತೆಲ್ಲ ನಮ್ಮೊಳಗಿನ ವ್ಯಕ್ತಿತ್ವಕ್ಕೊಂದು ಘನತೆ. ಆದ್ದರಿಂದ ಮೊದಲು ನಮ್ಮ ಮನ ಬೆಳಗಲು ಕಾದಿರುವ ಆ ಸೂರ್ಯನಿಗೆ ಕವಿದಿರುವ ಅಜ್ಞಾನದ ಮೊಡಗಳನ್ನು ತೊಲಗಿಸೋಣ. ಜ್ಞಾನಸಂಪಾದನೆಯ ಬೆಳಕಿನತ್ತ ಹೆಜ್ಜೆಹಾಕೋಣ. ಬದುಕನ್ನು ಪ್ರೀತಿಸೋಣ, ನಮ್ಮ  ಸುತ್ತಮುತ್ತಲಿರುವವರನ್ನು ಪ್ರೀತಿಸೋಣ. ಪ್ರೀತಿಯ ತಂಗಾಳಿಯಿಂದ ಮನದ ಸೂರ್ಯನಿಗೆ ಕವಿದ ದ್ವೇಷದ, ಮೌಢ್ಯತೆಯ ಮೋಡಗಳನ್ನು ಚದುರಿಸೋಣ. ಆ ಮೂಲಕ ದೀಪಾವಳಿಯ ಆಚರಣೆಯ ಸಾರ್ಥ್ಯಕ್ಯವನ್ನು ಪಡೆಯೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!