ಅಂಕಣ

ಮಾಲತಿ ಪಟ್ಟಣಶೆಟ್ಟಿ, ದಯವಿಟ್ಟು ಉತ್ತರ ಕೊಡಿ

ನಾನು ಈ ಪತ್ರ ಬರೆಯುತ್ತಿರುವುದು ಏಕೆ ಎಂಬುದು ನಿಮಗೂ ಗೊತ್ತಿರುವುದರಿಂದ ನಮ್ಮ ನಡುವಿನ ಕಷ್ಟ-ಸುಖಗಳ ಮಾತುಕತೆ ಎಲ್ಲ ಬೇಡ. ನೇರ ವಿಷಯಕ್ಕೆ ಬರುತ್ತೇನೆ.

ಪ್ರೊಫೆಸರ್ ಕೆ.ಎಸ್. ಭಗವಾನ್ ಎಂಬ ಸೋಕಾಲ್ಡ್ ಲೇಖಕನಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ವತಿಯಿಂದ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದೀರಿ.ಪ್ರಶಸ್ತಿ ಕೊಡುವ ಮೊದಲು ನಾವು ಇಪ್ಪತ್ತೈದು ಜನರನ್ನು ಒಂದು ಪಟ್ಟಿ ಕೊಡುವಂತೆ ಕೇಳಿಕೊಳ್ಳುತ್ತೇವೆ. ಅವರಿಂದ ಬಂದ ಉತ್ತರಗಳನ್ನು ಎದುರಿಟ್ಟುಕೊಂಡು ಆಯ್ಕೆಯನ್ನು ಅಂತಿಮಗೊಳಿಸುತ್ತೇವೆಎಂದು ಹೇಳಿಕೆ ಕೊಟ್ಟಿದ್ದೀರಿ. ಆದರೆ, ನಿಮ್ಮ ಅಕಾಡೆಮಿಯ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ, “ನಾವು ಐವತ್ತು ಜನರನ್ನು ಸಂಪರ್ಕಿಸುತ್ತೇವೆ. ಅವರಿಂದ ಬಂದ ಉತ್ತರಗಳನ್ನು ಪರಿಶೀಲಿಸುತ್ತೇವೆ. ಕೊನೆಗೆ ಅವರ್ಯಾರೂ ಹೇಳದ ಹೆಸರನ್ನೂ ಅಂತಿಮಗೊಳಿಸುವ ಅಧಿಕಾರ ಕಾಯ್ದಿಟ್ಟುಕೊಂಡಿದ್ದೇವೆಎಂದು ಉತ್ತರಿಸಿದ್ದಾರೆ. ಅಂದರೆ ಅಕಾಡೆಮಿಯ ಒಂದೇ ಕಟ್ಟಡದೊಳಗಿದ್ದೂ ನೀವಿಬ್ಬರೂ ವಿಭಿನ್ನ ಸಂವಿಧಾನಗಳನ್ನು ಫಾಲೋ ಮಾಡುತ್ತಿದ್ದೀರಿ ಎಂದಾಯಿತು. ಈಗ ನಾವು ಯಾರ ಹೇಳಿಕೆಯನ್ನು ನಂಬಬೇಕು? ನೀವು ಹೇಳಿರುವಂತೆ ಕೇವಲ ಇಪ್ಪತ್ತೈದು ಜನರನ್ನು ಮಾತ್ರ ಸಂಪರ್ಕಿಸಿದ್ದರೆ, ಅದು ನಿಮ್ಮ ಅಕಾಡೆಮಿಯ ಕಾನೂನಿಗೆ ವಿರುದ್ಧವಾದ ನಡೆಯಾಗುತ್ತದೆ. ಮಾಡಿದ ತಪ್ಪಿಗೆ ನೀವು ಸ್ಪಷ್ಟೀಕರಣ ಕೊಡಬೇಕು. ಹಾಗಲ್ಲ, ಭಾಗ್ಯ ಅವರೇ ಸುಳ್ಳು ಮಾಹಿತಿ ಕೊಟ್ಟಿದ್ದಾರೆ ಎಂದಾದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಸುಳ್ಳು ಉತ್ತರ ಹೇಳಿ ನುಣುಚಿಕೊಂಡ ತಪ್ಪಿಗೆ ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ನಿಮ್ಮಲ್ಲಿ ಯಾರು ಸುಳ್ಳು ಹೇಳಿದ್ದೀರಿ, ದಯವಿಟ್ಟು ನಮ್ಮ ಗೊಂದಲ ಪರಿಹರಿಸಿ. ನಮ್ಮ ಸಂಶಯಕ್ಕೆ ಖಚಿತ ಉತ್ತರ ಕೊಡಿ.

ಇನ್ನು, ನೀವು ಭಗವಾನ್ ಹೆಸರನ್ನು ಅಂತಿಮಗೊಳಿಸಲು ಬಹುಮತದ ನಿರ್ಣಯ ಕೈಗೊಂಡೆವು ಎಂಬ ಹೇಳಿಕೆಯನ್ನೂ ಕೊಟ್ಟಿರಿ. ಮಾಲತಿಯವರೇ, ಯಾಕೆ ಸುಳ್ಳು ಹೇಳುತ್ತೀರಿ? ಗೌರವ ಪ್ರಶಸ್ತಿಗೆ ಅಂತಿಮ ಪಟ್ಟಿಯಲ್ಲಿ ಇದ್ದವರು ಯಾರು? ನಿಮ್ಮ ಅಕಾಡೆಮಿಯ ಎಲ್ಲ ದಾಖಲೆಗಳನ್ನೂ ಹೊರತೆಗೆಯಲು ಶುರು ಮಾಡಿದರೆ, ಅಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಹೆಸರುಗಳು ಕಾಣಬಹುದಲ್ಲವೆ? ಈ ಸಾಲುಗಳನ್ನು ಓದುತ್ತಿರುವಾಗಾದರೂ ನಿಮಗೆ ನಿಮ್ಮ ಆತ್ಮಸಾಕ್ಷಿ ಚುಚ್ಚುವುದಿಲ್ಲವೆ? ಯಾಕೆ ಅವರಿಬ್ಬರ ಹೆಸರನ್ನು ನಿಮ್ಮ ಪಟ್ಟಿಯಿಂದ ಕೈಬಿಟ್ಟಿರಿ? ನಿಮ್ಮ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ಸಭೆ ನಡೆದಾಗ ಅಲ್ಲಿ ಹೆಚ್ಚೆಂದರೆ 8 ಜನ ಸದಸ್ಯರು ಮಾತ್ರ ಇದ್ದರು. ಆದರೆ, ನಿಮ್ಮ ಅಂತರ್ಜಾಲ ಪುಟದಲ್ಲಿ, ಅಕಾಡೆಮಿಯಲ್ಲಿ ಕನಿಷ್ಠ ಹದಿನೈದು ಜನ ಸದಸ್ಯರು ಇದ್ದಾರೆ ಎಂಬ ಮಾಹಿತಿ ಇದೆ. ಹಾಗಿರುವಾಗ ಕೇವಲ ಎಂಟು ಜನ ಭಾಗವಹಿಸಿದ ಸಭೆ ಸರ್ವಸದಸ್ಯರ ಸಭೆ ಆಗುವುದು ಹೇಗೆ? ದಯವಿಟ್ಟು ನಿಮ್ಮ ಸರ್ವಸದಸ್ಯರ ಸಭೆ ನಡೆದ ದಿನಾಂಕದ ರಿಜಿಸ್ಟರ್ ಪುಸ್ತಕವನ್ನು ಕನ್ನಡ ನಾಡಿನ ಜನರ ಮುಂದೆ ಹಿಡಿಯುತ್ತೀರಾ? ನೀವು ಮತ್ತು ಅಕಾಡೆಮಿಯ ರಿಜಿಸ್ಟ್ರಾರ್ – ಇಬ್ಬರ ಫೋನ್ ಕಾಲ್ಗಳನ್ನು ಪರಿಶೀಲಿಸಿದರೆ, ಸರ್ವಸದಸ್ಯರ ಸಭೆಯ ದಿನ ಏನೆಲ್ಲ ಪ್ರಹಸನಗಳು ನಡೆದವು ಎನ್ನುವುದು ಗೊತ್ತಾಗುತ್ತದೆ.

ನಿಜ ಹೇಳಲಾ, ನೀವು ಯಾರಿಗೆಲ್ಲ ಹೆಸರು ಸೂಚಿಸಲು ಪತ್ರ ಬರೆದು ಕೇಳಿದ್ದಿರೋ ಆ ಅಷ್ಟೂ ಜನರಲ್ಲಿ ಒಬ್ಬನೇ ಒಬ್ಬ ಕೂಡ ಭಗವಾನ್ ಹೆಸರು ಸೂಚಿಸಿರಲಿಲ್ಲ. ಆ ಹೆಸರು ಬಂದದ್ದು ನಿಮ್ಮದೇ ಅಕಾಡೆಮಿಯೊಳಗಿನ ವ್ಯಕ್ತಿಯಿಂದ. ಅದು ಯಾರು ಎನ್ನುವುದು ನಿಮಗೂ ಗೊತ್ತಿದೆ. ಮತ್ತು ಆ ವ್ಯಕ್ತಿಗೆ ಭಗವಾನ್ ಹೆಸರನ್ನು ಸೂಚಿಸಿದವರು ಯಾರು ಎನ್ನುವುದು ನಮಗೆ ಗೊತ್ತಿದೆ. ಭಗವಾನ್ ಹೆಸರು ಅಕಾಡೆಮಿಯ ಅವಾರ್ಡ್ ಲಿಸ್ಟಿಗೆ ಸೇರಿಕೊಳ್ಳುತ್ತಿದೆ ಎನ್ನುವುದರ ವಾಸನೆ ಒಂದು ವಾರದ ಮೊದಲೇ ನಮಗೆ ಸಿಕ್ಕಿಬಿಟ್ಟಿತ್ತು. ಹೀಗೆ ಹಿಂದಿನ ಬಾಗಿಲಲ್ಲಿ ಬಂದು ಒಳನುಸುಳಿಕೊಂಡವರ ಹೆಸರನ್ನು ಅನುಮೋದಿಸಿ ನೀವು ನಿಮ್ಮ ಹೆಸರಿಗೆ ಶಾಶ್ವತವಾದ ಕಳಂಕ ಮೆತ್ತಿಕೊಂಡಿರಿ. ಯಾಕೆ ಮಾಲತಿಯವರೇ, “ಇಂಥ ಒಳಸಂಚುಗಳು ಬೇಡ. ಭಗವಾನ್ ಹೆಸರು ಎಲ್ಲರಿಗೂ ಒಪ್ಪಿಗೆಯಾಗಿದ್ದರೆ ಮಾತ್ರ ಅದನ್ನು ಪಟ್ಟಿಗೆ ಸೇರಿಸೋಣ. ಇಲ್ಲವಾದರೆ ಕೈಬಿಡೋಣ. ಆ ವ್ಯಕ್ತಿಗೆ ಪ್ರಶಸ್ತಿ ಕೊಟ್ಟು ಅಕಾಡೆಮಿಯ ಮರ್ಯಾದೆ ಕಳೆಯುವುದು ಬೇಡಎಂದು ಹೇಳುವ ಅಧಿಕಾರ ನಿಮಗಿರಲಿಲ್ಲವೆ? ನಿಮ್ಮ 50% ಸದಸ್ಯರು ಮಾತ್ರ ಭಾಗವಹಿಸಿದ್ದಸರ್ವ ಸದಸ್ಯರ ಸಭೆಯಲ್ಲಿ ಕೂಡ ಮೂರು ಜನ ಭಗವಾನ್ ಹೆಸರನ್ನು ವಿರೋಧಿಸಿದರು. ಅದಕ್ಕೂ ನೀವು ಕ್ಯಾರೆನ್ನಲಿಲ್ಲ. ಯಾಕೆ? ಅಧಿಕಾರದ ದಂಡ ಅಷ್ಟೊಂದು ದೊಡ್ಡ ಸಮ್ಮೋಹಿನಿ ನಿಮ್ಮ ಮೇಲೆ ಬೀಸಿತ್ತೆ? ಪ್ರಭುತ್ವಕ್ಕೆ ಅಷ್ಟೊಂದು ದಯನೀಯವಾಗಿ ನಿಮ್ಮನ್ನು ಸರಂಡರ್ ಮಾಡಿಕೊಂಡಿದ್ದೀರಾ? ಸರಿ ಬಿಡಿ, ಭಗವಾನ್ ಹೆಸರು ನಿಮ್ಮ ಇಚ್ಛೆಗೆ ವಿರುದ್ಧವಾಗಿ ಪಟ್ಟಿಯಲ್ಲಿ ಸೇರಿತು ಅಂತಲೇ ಇಟ್ಟುಕೊಳ್ಳೋಣ. ಆ ಹೆಸರನ್ನು ನೋಡಿ ಇಡೀ ಕನರ್ಾಟಕದ ಜನ ನಿಮ್ಮ ಅಕಾಡೆಮಿಗೆ ಕ್ಯಾಕರಿಸಿ ಉಗಿಯತೊಡಗಿದಾಗ ನೀವು ಭಗವಾನ್ ಸಮರ್ಥನೆಗೆ ನಿಂತುಬಿಟ್ಟಿರಲ್ಲ! ನಿಮ್ಮ ವ್ಯಕ್ತಿತ್ವವನ್ನು ಒಬ್ಬ ಯಕಶ್ಚಿತ್ ಪರಾವಲಂಬಿ ಬುದ್ಧಿಜೀವಿಗೆ ಮಾರಿಕೊಳ್ಳುವ ಅಗತ್ಯವಿತ್ತೆ? “ಇಷ್ಟೆಲ್ಲ ದೊಡ್ಡ ಮಟ್ಟದಲ್ಲಿ ಭಗವಾನ್ ವಿರುದ್ಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಹಾಗಾಗಿ ನಾವು ಪಟ್ಟಿಯನ್ನು ಮರುಪರಿಶೀಲಿಸಬೇಕು.ಎಂದು ನಿಮಗೆ ಹೇಳುವುದಕ್ಕೆ ಅಧಿಕಾರ ಇಲ್ಲವೆ? ಅಷ್ಟೂ ಅಧಿಕಾರ ಮತ್ತು ಪ್ರಬುದ್ಧತೆ ನಿಮಗಿಲ್ಲ ಅಂತಾದರೆ ಯಾಕಿನ್ನೂ ಅಕಾಡೆಮಿಯ ಅಧ್ಯಕ್ಷಗಾದಿಯಲ್ಲಿ ಮುಂದುವರಿಯುತ್ತಿದ್ದೀರಿ? ನಿಮ್ಮದು ಕನರ್ಾಟಕ ಸಾಹಿತ್ಯ ಅಕಾಡೆಮಿಯೋ ಅಥವಾ ಕನರ್ಾಟಕ ಸರಕಾರ ಪ್ರಾಯೋಜಿತ ಪರಸ್ಪರ ಸಹಕಾರ ಸಂಘವೋ?

ಮಾಲತಿಯವರೇ, ಈಗಲೂ ಕಾಲ ಮಿಂಚಿಲ್ಲ.

(1) ಸರ್ವಸದಸ್ಯರ ಸಭೆಯಲ್ಲಿ ಎಲ್ಲ ಸದಸ್ಯರೂ ಭಾಗವಹಿಸಿಲ್ಲ

(2) ರಿಜಿಸ್ಟ್ರಾರ್ ಹೇಳುವಂತೆ ನೀವು ಐವತ್ತು ಜನರ ಅಭಿಪ್ರಾಯ ಕೇಳಿಲ್ಲ

(3) ಭಗವಾನ್ ಹೆಸರು ಅಂತಿಮಗೊಳಿಸಲು ಎಲ್ಲ ಸದಸ್ಯರ ಒಪ್ಪಿಗೆ ಇರಲಿಲ್ಲ

(4) ಅಂತಿಮ ಪಟ್ಟಿಯಲ್ಲಿದ್ದ ಇಬ್ಬರು ಹಿರಿಯ ಸಾಹಿತಿಗಳ ಹೆಸರು ಕೈಬಿಟ್ಟು ಒಬ್ಬ ವ್ಯಕ್ತಿಯ ಸೂಚನೆಯ ಮೇರೆಗೆ ಭಗವಾನ್ ಹೆಸರು ಹಾಕಿದ್ದೀರಿ

(5) ಭಗವಾನ್ ಹೆಸರನ್ನು ಮತ್ತೆಮತ್ತೆ ಸಮರ್ಥಿಸಿಕೊಂಡು ಅಕಾಡೆಮಿಯ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿದ್ದೀರಿ

ಇವಿಷ್ಟು ಸಂಗತಿಗಳು ಸಮಸ್ತ ಕರ್ನಾಟಕದ ಜನತೆಗೆ ತಿಳಿದಿದ್ದರೂ ನೀವಿನ್ನೂ ಭಗವಾನ್ ಹೆಸರನ್ನು ಅಂತಿಮಪಟ್ಟಿಯಲ್ಲಿ ಉಳಿಸಿಕೊಂಡಿದ್ದೀರಿ. ಹೆಸರು ಕೈಬಿಡಿ. ಇದು ಒತ್ತಾಯವಲ್ಲ, ಬೇಡಿಕೆ. ಈಗ ಧೈರ್ಯದಿಂದ ಜನರ ಮುಂದೆ ನಿಜಸಂಗತಿ ಬಿಚ್ಚಿಟ್ಟು ಅಕಾಡೆಮಿಯ ಹೆಸರಿಗೆ ಮೆತ್ತಿರುವ ಕಳಂಕ ಕಳೆಯಿರಿ. ನಿಮ್ಮ ಹಠವನ್ನೇ ನೀವು ಸಾಧಿಸುವುದಾದರೆ, ಕರ್ನಾಟಕದ ಜನರೂ ಮುಂದೇನು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿಟ್ಟಿನಲ್ಲಿ ಪ್ರಬುದ್ಧರಿದ್ದಾರೆ. ಭಗವಾನ್ ಅವರಿಗೆ ಪ್ರಶಸ್ತಿ ಕೊಟ್ಟ ಮೇಲೆ ಜನ ಕಾನೂನಿನ ಮೂಲಕ ಪ್ರಶ್ನಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮಿಂಚಿಸಲಿದ್ದಾರೆ. ಅಕಾಡೆಮಿಯ ಅಧ್ಯಕ್ಷರಾಗಿ ನೀವೂ ಆಗ ಆಯಾಚಿತ ಪ್ರಸಿದ್ಧಿಯನ್ನು ಪಡೆಯಲಿದ್ದೀರಿ. ಒಬ್ಬ ಸಾಹಿತಿ, ತನ್ನ ಸಾಹಿತ್ಯದ ಹೊರತಾಗಿ ಇಂಥ ವಿಷಯಗಳಲ್ಲಿ ಮಾಧ್ಯಮಗಳಲ್ಲಿ ಮಿಂಚುವುದು ಶೋಭೆ ಎಂದು ನೀವು ಬಗೆದಿದ್ದರೆ, ನಾವೇನು ಮಾಡೋಣ!

ನಮಸ್ಕಾರ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!