ಅಂಕಣ

ನಿಜವಾಗಿಯೂ ನಾವು ನೆನೆಯಬೇಕಿರುವುದು ಯಾರನ್ನು?

ನಿಮಗೆ ಬಿ.ಆರ್. ಅಂಬೇಡ್ಕರ್ ಗೊತ್ತು. ಬಿ.ಎನ್. ರಾವ್ ಬಗ್ಗೆ ಗೊತ್ತೆ? ಬಹುಶಃ ಗೊತ್ತಿರಲಿಕ್ಕಿಲ್ಲ. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಮಾರ್ಕೆತಿನಲ್ಲಿ ಅಥವಾ ಹೋಟೇಲಲ್ಲಿ ಯಾರನ್ನು ಬೇಕಾದರೂ ಕೇಳಿ; ಅವರಿಗೆ ಈ ಹೆಸರಿನ ವ್ಯಕ್ತಿಯ ಪರಿಚಯ ಇಲ್ಲ; ಇವರ ಬಗ್ಗೆ ಅವರೆಲ್ಲೂ ಓದಿಲ್ಲ ಎಂದು ಧೈರ್ಯದಿಂದ ಬೆಟ್ ಕಟ್ಟಬಹುದು! ಈಗ ಅವರ ಕತೆ ಕೇಳಿ.

ಇವರ ಹೆಸರಿನ ಎನ್ ಎಂದರೆ ನರಸಿಂಗ; ಬಿ ಎಂದರೆ ಬೆನಗಲ್ ಅಂತ ಅರ್ಥ. ಬೆನಗಲ್, ಕಾರ್ಕಳ ಮಂಗಳೂರುಗಳ ಮಧ್ಯೆ ಇರುವ ಪುಟ್ಟದೊಂದು ಹಳ್ಳಿ. ಈ ಹಳ್ಳಿಯ ಚಿತ್ರಾಪುರ ಬ್ರಾಹ್ಮಣರ ಮನೆತನದಲ್ಲಿ 1887ರ ಫೆಬ್ರವರಿ 26ರಂದು ಹುಟ್ಟಿದ ಕೂಸು ನರಸಿಂಗ. ಈ ವಂಶದ ಜನ ಪಾರ್ಸಿಗಳಿಗಿಂತಲೂ ಅಲ್ಪಸಂಖ್ಯಾತರು. ಇಡೀ ಜಗತ್ತಿನಲ್ಲಿ 30 ಸಾವಿರ ಚಿತ್ರಾಪುರ ಬ್ರಾಹ್ಮಣರಿದ್ದರೇ ಹೆಚ್ಚು. ಆದರೆ ಈ ಜಾತಿಯಲ್ಲಿ ಹುಟ್ಟಿ ಜಗತ್ತೆಲ್ಲ ಹೆಸರು ಮಾಡಿದ ಮಹಾಮಹಿಮರು ಬಹಳ ಜನ ಇದ್ದಾರೆ. ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಕುದ್ಮುಲ್ ರಂಗರಾವ್, ಸಹಕಾರ ಕ್ರಾಂತಿಯ ಮೊಳಹಳ್ಳಿ ಶಿವರಾಯರು, ಪಂಜೆ ಮಂಗೇಶರಾಯರು, ಕಮಲಾದೇವಿ ಚಟ್ಟೋಪಾಧ್ಯಾಯ, ಗೌರೀಶ ಕಾಯ್ಕಿಣಿ, ಪ್ರಕಾಶ್ ಪಡುಕೋಣೆ, ಸಂತೋಷಕುಮಾರ ಗುಲ್ವಾಡಿ, ಗಿರೀಶ ಕಾರ್ನಾಡ ಇವರೆಲ್ಲ ಚಿತ್ರಾಪುರ ಬ್ರಾಹ್ಮಣರೇ. ನರಸಿಂಗನ ಅಪ್ಪ ರಾಘವೇಂದ್ರ ರಾಯರು ಸುತ್ತಮುತ್ತಲಿನ ಹಳ್ಳಿಗೆಲ್ಲ ಪ್ರಸಿದ್ಧ ವೈದ್ಯರು. ನರಸಿಂಗ ಮಂಗಳೂರಿನ ಕೆನರಾ ಶಾಲೆಯಲ್ಲಿ ಕಲಿಯುತ್ತಿದ್ದವನು 1901ರಲ್ಲಿ ನಡೆದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರೆಸಿಡೆನ್ಸಿಗೆ ಮೊದಲ ರ್ಯಾಂಕ್ ಪಡೆದುಬಿಟ್ಟ. ಅಲ್ಲಿಂದ ಮದ್ರಾಸಿಗೆ ಹೋಗಿ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಸೇರಿದ್ದಾಯಿತು. ಅಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿ ಎಫ್ಎ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ರ್ಯಾಂಕ್ ಪಡೆದದ್ದೂ ಆಯಿತು. ವಿದ್ಯಾರ್ಥಿವೇತನ ಸಿಕ್ಕಿದ್ದರಿಂದ ನರಸಿಂಗ ಇಂಗ್ಲೆಂಡಿಗೆ ಹೋದ. ಅಲ್ಲಿ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ ಪದವಿ ವ್ಯಾಸಂಗ ಮಾಡಿ 1909ರಲ್ಲಿ ಟ್ರೈಪೋಸ್ ಪಾಸು ಮಾಡಿದ. ಅದೇ ವರ್ಷ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಅದನ್ನೂ ಪಾಸು ಮಾಡಿಕೊಂಡು ಆಗಿನ ಬ್ರಿಟಿಷ್ ಭಾರತದ ರಾಜಧಾನಿ ಕಲ್ಕತ್ತಕ್ಕೆ ನ್ಯಾಯಾಧೀಶನಾಗಿ ಆಯ್ಕೆಯಾಗಿ ಬಂದ.

ನರಸಿಂಗ ರಾಯರು ಆ ಕಾಲದಲ್ಲಿ ಮಾಡಿದ ಬಹುದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ಬರೆದದ್ದು. ಬ್ರಿಟಿಷ್ ಸರಕಾರ ವಹಿಸಿದ್ದ ಈ ಕೆಲಸವನ್ನು ದಾಖಲೆಯ ಎರಡು ವರ್ಷದಲ್ಲಿ ಮುಗಿಸಿದ್ದಕ್ಕಾಗಿ ರಾಯರಿಗೆ ನೈಟ್ಹುಡ್ ಬಿರುದು ಕೊಡಲಾಯಿತು. ಹೆಸರಿನ ಹಿಂದೆ ಸರ್ ಎಂಬ ಉಪಾಧಿ ಸೇರಿಕೊಂಡಿತು. ಅದಾದ ಮೇಲೆ ರಾಯರನ್ನು ಬ್ರಿಟಿಷ್ ಸರಕಾರ ಸಿಂಧ್ ಪ್ರಾಂತ್ಯಕ್ಕೆ ಕರೆಸಿಕೊಂಡಿತು. ಅಲ್ಲಿನ ನಗರ-ಹಳ್ಳಿಗಳಿಗೆ ನದಿನೀರಿನ ಹಂಚಿಕೆಯನ್ನು ಯಾವ ರೀತಿಯಲ್ಲಿ ಮಾಡಬೇಕೆಂಬುದಕ್ಕೆ ಅಧ್ಯಯನ ಮಾಡಿ ವರದಿ ನೀಡಬೇಕೆಂದು ಕೇಳಿಕೊಂಡಿತು. ನರಸಿಂಗ ರಾಯರು ಅದನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿ ವರದಿ ಒಪ್ಪಿಸಿದರು. ಗಣಿತದಲ್ಲಿ ಅಪ್ರತಿಮ ಪಂಡಿತರಾಗಿದ್ದ ಅವರು ಸುಮಾರು ಇಪ್ಪತ್ತು-ಮೂವತ್ತು ವರ್ಷಗಳ ಎಲ್ಲಾ ಅಂಕಿಅಂಶಗಳನ್ನು ಒಟ್ಟುಹಾಕಿ ಆಳವಾದ ಅಧ್ಯಯನ ಮಾಡಿಬರೆದ ಆ ವರದಿಯ ಆಧಾರದಲ್ಲೇ ಇಂದಿಗೂ ಭಾರತ-ಪಾಕಿಸ್ತಾನಗಳ ನಡುವೆ ನೀರಿನ ಹಂಚಿಕೆ ನಡೆಯುತ್ತಿದೆ. ಸದಾ ಬೆಂಕಿಯುಗುಳುವ ದೇಶಗಳ ಮಧ್ಯೆ ಕಳೆದ ಎಪ್ಪತ್ತು ವರ್ಷಗಳಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಮಸ್ಯೆ ಉದ್ಭವವಾಗಿಲ್ಲವೆಂದರೆ ಅದಕ್ಕೆ ಕಾರಣ ನರಸಿಂಗರಾಯರ ದೂರದೃಷ್ಟಿಯೇ ಎನ್ನಬೇಕು.

ನದಿ ನೀರಿನ ವರದಿ ಕೊಟ್ಟ ಮೇಲೆ ಸರಕಾರ ಅವರನ್ನು ಮತ್ತೆ ಕಲ್ಕತ್ತಕ್ಕೆ ಕರೆಸಿ ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಾಧೀಶರನ್ನಾಗಿ ನೇಮಿಸಿತು. 1944ರಲ್ಲಿ ಅವರು ಆ ಹುದ್ದೆಯಿಂದ ನಿವೃತ್ತರಾದೊಡನೆ ಜಮ್ಮು ಮತ್ತು ಕಾಶ್ಮೀರದ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು! 1946ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ತನ್ನ ಸೇವಾವಧಿಯಲ್ಲಿ ಸುಮಾರು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ ಅವರಿಗಿಂತ ಸೂಕ್ತವ್ಯಕ್ತಿ ಬೇರಾರಿದ್ದಾರು? ನರಸಿಂಗ ರಾಯರು ಸರಕಾರ ಕೇಳಿಕೊಂಡಂತೆ ಸಂವಿಧಾನದ ಕರಡು ಸಿದ್ಧಪಡಿಸಿದರು. ಇದರಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟುಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿಕೊಂಡಿತು. ರಾಯರು ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು; ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡುಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳೂ ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ 395ಕ್ಕೇರಿತು. ತನ್ನ ಈ ಕರ್ತವ್ಯವನ್ನು ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆ ಪಡೆಯದೆ ಉಚಿತವಾಗಿ ನಡೆಸಿಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ. ಸಂವಿಧಾನವನ್ನು ಬರೆದವರೇ ಅಂಬೇಡ್ಕರ್ ಎಂಬ ತಪ್ಪುಕಲ್ಪನೆ ಈಗ ಬೆಳೆದುಬಂದಿದೆ. ಬಹುಶಃ ಕಾಲಕಾಲಕ್ಕೆ ಜನರನ್ನು ಜಾತಿಯಾಧಾರದ ಮೇಲೆ ಓಲೈಸಿಕೊಂಡುಬಂದ ರಾಜಕೀಯ ಪಕ್ಷಗಳೇ ಈ ಮಿಥ್ಯಾಚರಿತ್ರೆಗೆ ನೇರ ಹೊಣೆ ಎನ್ನಬಹುದು. ಸಂವಿಧಾನ ಆಂಗೀಕೃತವಾದ ಸುವರ್ಣ ಮಹೋತ್ಸವದ ಸಂದರ್ಭದಲ್ಲೂ ಅದರ ಮೂಲಕರಡನ್ನು ತಯಾರಿಸಿಕೊಟ್ಟ ಮೇಧಾವಿ ಯಾರಿಗೂ ನೆನಪಾಗಿಲ್ಲವೆಂದರೆ ಅದು ಈ ಗಣರಾಜ್ಯದ ದುರಂತ.

ನರಸಿಂಗ ರಾಯರು, ಸಂವಿಧಾನದ ಕೆಲಸ ಮುಗಿಸಿದ ಮೇಲೆ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಬರ್ಮಾ ದೇಶ, ತನ್ನ ಸಂವಿಧಾನದ ಕರಡನ್ನು ಸಿದ್ಧಪಡಿಸಿಕೊಡಲು ರಾಯರನ್ನು ಕೇಳಿಕೊಂಡಿತು! ಆ ಕೆಲಸವನ್ನೂ ಪೂರೈಸಿಕೊಟ್ಟ ರಾಯರು, ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾಹೋಗಿ 1950ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ನ ಸದಸ್ಯ ರಾಷ್ಟ್ರವಾಗಲು ಚಿನ್ನದಂಥಾ ಅವಕಾಶ ಒದಗಿಬಂದಿತ್ತು. ಆದರೆ ಆ ಅದೃಷ್ಟವನ್ನು ನಮ್ಮ ದೇಶದ ಆಗಿನ ಪ್ರಧಾನಿ ಕೃಷ್ಣಾರ್ಪಣ ಮಾಡಿದ್ದರಿಂದ ಎಪ್ಪತ್ತು ವರ್ಷಗಳೇ ಕಳೆದರೂ ನಮಗೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. 1952ರಲ್ಲಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯಾಗುವ ಅವಕಾಶ ರಾಯರಿಗೆ ಕೂದಲೆಳೆಯಲ್ಲಿ ಕೈತಪ್ಪಿಹೋಯಿತು. ಆದರೇನಂತೆ, ಅವರು ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರು. ಆದರೆ, ಆ ಹುದ್ದೆಯಲ್ಲಿ ಬಹುಕಾಲ ಮುಂದುವರಿಯಲು ಅದೃಷ್ಟವಿರಲಿಲ್ಲವೋ ಏನೋ. 1953ರ ನವೆಂಬರ್ 30ರಂದು ಬೆನಗಲ್ ನರಸಿಂಗ ರಾಯರು ಜ್ಯೂರಿಕ್ನಲ್ಲಿ, ತನ್ನ 66ನೆಯ ವಯಸ್ಸಿನಲ್ಲಿ ನಿಧನರಾದರು. ನರಸಿಂಗರಾಯರ ಉಳಿದಿಬ್ಬರು ಸೋದರರೂ ಮಹಾರಥಿಗಳೇ. ಅವರ ಮೊದಲ ತಮ್ಮ ರಾಮರಾಯರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ಎರಡನೆ ತಮ್ಮ ಶಿವರಾಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾಮರ್ಿಕ ಹೋರಾಟಗಾರ; ಜೊತೆಗೆ ಸಂಸದನೂ ಆಗಿದ್ದವರು. ತನ್ನ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ವಿಚಿತ್ರ ಮತ್ತು ಅಪರೂಪದ ರಾಜಕಾರಣಿ ಅವರು.

ಕಾರ್ಕಳದ ಬೆನಗಲ್ಲಿನಂಥ ಒಂದು ಪುಟ್ಟ ಊರಿಂದ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ನ್ಯಾಯಾಲಯಗಳಂಥ ಎತ್ತರಗಳನ್ನು ಏರಿದ, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತದ ಸಂವಿಧಾನವನ್ನು ಬರೆಯುವಂಥ ಅವಕಾಶ ಪಡೆದ ಧೀಮಂತರು ನಮ್ಮ ದೇಶದಲ್ಲಿ ಹೆಚ್ಚಿಲ್ಲ. ಸಂಸತ್ತಿನ ಹೊರಗೆ ಅಂಬೇಡ್ಕರರ ಪಕ್ಕದಲ್ಲಿ ಹೆಗಲೆಣೆಯಾಗಿ ನಿಲ್ಲಬೇಕಿದ್ದ ಪ್ರತಿಮೆ ಬೆನಗಲ್ಲರದ್ದು. ಆದರೆ, ನಮ್ಮ ಊರಿನ, ಕನರ್ನಾಟಕದ ಈ ಮಹಾನ್ ವ್ಯಕ್ತಿಯನ್ನು ದೇಶಕ್ಕೆ ಮರುನೆನಪಿಸುವ ಕೆಲಸವನ್ನು ಯಾವ ಜನಪ್ರತಿನಿಧಿಯೂ ಇದುವರೆಗೆ ಮಾಡಿಲ್ಲ ಎನ್ನುವುದು ನಮ್ಮ ಅಭಿಮಾನಶೂನ್ಯತೆಯನ್ನು ಎತ್ತಿ ತೋರಿಸುವಂತಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!