ಅಂಕಣ

ಮೀಸಲಾತಿ, ಜಾತಿ ಆಧಾರಿತ ಅಧಿಕಾರ ಇವೆಲ್ಲಾ ಯಾರ ಉನ್ನತಿಗೆ?

Miracle of democracy ಎಂದು ಪಿ.ವಿ ನರಸಿಂಹರಾವ್‍ರವರಿಂದ ಹೊಗಳಿಸಿಕೊಂಡ ರಾಜಕಾರಣಿ ಎಂದರೆ ಅದು ನಮ್ಮ ಮಾಯಾವತಿ. ದಲಿತ ಸಮಾಜವನ್ನು ಪ್ರತಿನಿಧಿಸುತ್ತಿದ್ದ ಈಕೆ ಕಾನ್ಸಿರಾಮ್‍ರವರ ಪಕ್ಕಾ ಶಿಷ್ಯೆ ಕೂಡ. ತನ್ನ ಸಂಘರ್ಷ‍ಯುಕ್ತ ಮಾತಿನ ಮೋಡಿ, ಸಂಘಟನಾ ಚಾತುರ್ಯತೆಯಿಂದ ಒಂದು ಕಾಲದಲ್ಲಿ ಉತ್ತರ ಪ್ರದೇಶದಾದ್ಯಂತ ಮನೆಮಾತಾಗಿದ್ದ ಈಕೆ ಅಲ್ಲಿನ ಸಮಾಜದ ಕೆಳಸ್ತರವನ್ನಂತೂ ಬಣ್ಣದ ಮಾತುಗಳಿಂದಲೇ ಯಶಸ್ವಿಯಾಗಿ ಮರುಳು ಮಾಡಿದ್ದರು! ಎಲ್ಲಿಯವರೆಗೆ ಎಂದರೆ ದಲಿತರ ಕಷ್ಟ ಕೋಟಲೆಗಳೆಲ್ಲಾ ಪರಿಹಾರ ಕಾಣಬೇಕಾದರೆ, ಅವರೆಲ್ಲಾ ಉದ್ಧಾರವಾಗಬೇಕಾದರೆ ಮಾಯಾವತಿಗೆ ಅಧಿಕಾರ ದೊರೆಯಲೇಬೇಕು ಎಂದು ಜನರಾಡುವಂತಾಗಿತ್ತು! ಆದ್ದರಿಂದಲೇ ಈಕೆ ವೇದಿಕೆ ಏರಿ ಮಾತನಾಡಿದಾಗಲೆಲ್ಲಾ ಅಲ್ಲಿ Behanji thum sangharsh karo, hum thumhare saath hai ಎಂಬ ಧ್ವನಿ ಜಯಕಾರವಾಗಿ ಕೇಳಿಬರುತ್ತಿದ್ದುದು. ಪರಿಣಾಮ 1995ರಲ್ಲಿ ಮಾಯಾವತಿಗೆ ಅನಾಮತ್ತಾಗಿ ಮುಖ್ಯಮಂತ್ರಿಗಾದಿಯೂ ದೊರೆಯಿತು. ದಲಿತ ವರ್ಗದಿಂದ ಮುಖ್ಯಮಂತ್ರಿಯಾದ ಮೊದಲ ವ್ಯಕ್ತಿ ಎಂಬ ದಾಖಲೆಯೂ ಈ ದೇಶದಲ್ಲಿ ಬರೆಯಲ್ಪಟ್ಟಿತ್ತು!

ಇದೇನೋ ಸರಿ, ಆದರೆ ವಿಚಾರ ಅದಲ್ಲ, ಬದಲಾಗಿ ದೀನರ, ದಲಿತರ ಉದ್ಧಾರದ ಜಪಗೈಯುತ್ತಲೇ ಅಧಿಕಾರಕ್ಕೇರಿದ ಈ ಮಾಯಾವತಿಯಿಂದ ಉತ್ತರಪ್ರದೇಶದ ದಲಿತರ, ಹಿಂದುಳಿದವರ್ಗದವರ ಸಾಮಾಜಿಕ ಸ್ಥಿತಿಗತಿಯಲ್ಲಿ ಬದಲಾವಣೆಗಳೇನಾದರೂ ಖಂಡಿವೆಯೇ!? ಅವರ ಆರ್ಥಿಕ ಪರಿಸ್ಥಿತಿಯೇನಾದರೂ ಏಳ್ಗೆಯನ್ನು ಕಂಡಿವೆಯೇ!? ಖಂಡಿತಾ ಇಲ್ಲ! ಬಹುಷಃ ಮಾಯಾವತಿ ಅಧಿಕಾರದಲ್ಲಿದ್ದಾಗ ಒಂದಷ್ಟು ಮೂಗಿಗೆ ಬೆಣ್ಣೆ ಸವರುವ ಕೆಲಸಗಳು ಅಲ್ಲಿ ನಡೆದಿರಬಹುದಷ್ಟೇ! ಆದರೆ ಅಸಮಾನತೆಯನ್ನು ಹೋಗಲಾಡಿಸುವ, ದೀನ ದಲಿತರ ಮುಖ್ಯವಾಹಿನಿಗೆ ಕರೆತರುವ ಶಾಶ್ವತ ಪ್ರಯತ್ನಗಳಂತು ಅಲ್ಲಿ ನಡೆದೇ ಇಲ್ಲ. ಆಕೆ ಅಲ್ಲಿ ಮಾಡಿದ್ದಿಷ್ಟೇ… ವರ್ಗ ವರ್ಗಗಳನ್ನು ಸಂತೃಪ್ತಿಗೊಳಿಸುವ ಸಲುವಾಗಿ ನಾನಾ ಕಡೆಗಳಲ್ಲಿ ಬುದ್ಧ, ನಾರಾಯಣಗುರು, ಜ್ಯೋತಿರಾವ್‍ ಫುಲ್‍, ರಾಜಕೀಯ ಗುರು ಕಾನ್ಸಿರಾಮ್‍, ಅಂಬೇಡ್ಕರ್‍ ಮಾತ್ರವಲ್ಲದೆ ಸ್ವತಃ ಆಕೆಯದ್ದೇ ಮೂರ್ತಿಗಳನ್ನು ಹಾಗೂ ಕೆಲವೊಂದು ಸ್ಮಾರಕಗಳನ್ನು ಪ್ರತಿಷ್ಟಾಪಿಸಿದ್ದು! ಇನ್ನು ಪಕ್ಷದ ಹೆಗ್ಗುರತಾಗಿ ಕಂಡಕಂಡಲ್ಲೆಲ್ಲಾ ಆನೆಯ ಆಳೆತ್ತರದ ಮೂರ್ತಿಗಳನ್ನು ಸ್ಥಾಪಿಸಿ ಅದಕ್ಕೆ ಸರಕಾರಿ ರಕ್ಷಣೆಯನ್ನು ಒದಗಿಸಿದ್ದು!! ಹೇಳಿ ಇಂತಹ ಮೂರ್ತಿಗಳಿಂದ ಹಿಂದುಳಿದ ವರ್ಗಗಳ ಜನರ ಜೀವನಕ್ಕಾದ ಶಾಶ್ವತ ಪ್ರಯೋಜನಗಳೇನು!? ಅಷ್ಟಕ್ಕೂ ಈ ಮಹತ್ಕಾರ್ಯಕ್ಕಾಗಿ ಈಕೆಯ ಸರಕಾರ ಅಂದು ಖರ್ಚು ಮಾಡಿದ್ದು ಬರೋಬ್ಬರಿ 2500 ಕೋಟಿ ರೂಪಾಯಿಗಳಷ್ಟು! ಸಾರ್ವಜನಿಕ ಹಣವನ್ನು ಈ ರೀತಿ ಪೋಲು ಮಾಡುವ ಬದಲು ಕನಿಷ್ಟ ಪಕ್ಷ ಪ್ರತೀ ದಲಿತ ಕುಟುಂಬಗಳಿಗೆ ಹಂಚುತ್ತಿದ್ದರೂ ಒಂದರ್ಧದಷ್ಟಾದರೂ ದಲಿತರು ಇಂದು ನೆಮ್ಮದಿಯ ಜೀವನಕ್ಕೆ ಮರಳುತ್ತಿದ್ದರು ಅಲ್ಲವೇ!?

ಇರಲಿ ಈ ಮೇಲಿನದ್ದು ಒಂದು ಉದಾಹರಣೆಯಷ್ಟೇ. ಮಾಯಾವತಿಯೆಂದಲ್ಲ ದೇಶದ ಬಹುತೇಕ ಎಲ್ಲಾ ನಾಯಕರುಗಳ ಕತೆಯೂ ಇಂತಹುದೇ. ದಲಿತೋದ್ಧಾರ, ಸಮಾನತೆ, ಜಾತ್ಯಾತೀತತೆ ಎನ್ನುತ್ತಲೇ ವರ್ಗ ವರ್ಗಗಳನ್ನು ಧ್ರುವೀಕರಣಗೊಳಿಸುತ್ತಾ ಮತಗಳನ್ನು ಎನ್‍ಕ್ಯಾಶ್‍ಗೊಳಿಸುವ ರಾಜಕಾರಣಿಗಳು ಆ ಬಳಿಕ ಮಾಡುತ್ತಿರುವುದು ತನ್ನೋದ್ಧಾರವನ್ನೇ ಹೊರತು ಅನ್ಯರ ಉದ್ಧಾರವನ್ನಂತೂ ಖಂಡಿತಾ ಅಲ್ಲ! ವಿಪರ್ಯಾಸವೆಂದರೆ ನಾವುಗಳೆಲ್ಲಾ ಇಂತವರ ಆಸೆ ಆಮಿಷಗಳಿಗೆ ಮತ್ತೆ ಮತ್ತೆ ಮರುಳಾಗುತ್ತಾ ಅದೇ ನಾಯಕನ ಹಿಂದೆ ನಿಂತು ಜಯಕಾರ ಹಾಕುತ್ತಿರುತ್ತೇವೆ! ನಮ್ಮ ಉದ್ಧಾರಕ್ಕೆ ಸ್ವಜಾತಿಯ ನಾಯಕನೇ ರಾಜಕಾರಣಿಯಾಗಬೇಕೆಂದು ಬಯಸುತ್ತೇವೆ!

ಇದೀಗ ಕರ್ನಾಟಕದ ಪರಿಸ್ಥಿತಿಯನ್ನೊಮ್ಮೆ ಗಮನೀಸೋಣ. ಇಲ್ಲಿ ಕೂಡ ನಡೆದಿರುವುದು, ನಡೆಯುತ್ತಿರುವುದು ಕೂಡ ಇಂತಹುದೇ ರಾಜಕಾರಣ! ಹಿಂದೂ ಮತಗಳು ಧ್ರುವೀಕರಣಗೊಂಡು ಬಿಜೆಪಿಯತ್ತ ವಾಲುತ್ತಿದೆ ಎಂದು ಅರಿತ ಇಲ್ಲಿನ ರಾಜಕೀಯ ನಾಯಕರುಗಳು ತಮ್ಮ ಬೇಳೆ ಬೇಯಿಸುವುದಕ್ಕೋಸ್ಕರ ‘ಅಲ್ಪಸಂಖ್ಯಾತ’, ‘ಹಿಂದುಳಿದ ವರ್ಗ’, ಹಾಗೂ ‘ದಲಿತ’ ಎಂಬ ಮೂರು ವರ್ಗಗಳನ್ನು ಒಂದಾಗಿಸಿ ‘ಅಹಿಂದ’ವನ್ನು ಹುಟ್ಟು ಹಾಕಿದರು. ಅಹಿಂದದ ಮುಂದೆ ನಿಂತು ಭಾಷಣ ಬಿಗಿಯುವ ನಾಯಕರಿಗೆ ಅಧಿಕಾರ ನೀಡಿದರೆ ಈ ಮೂರು ವರ್ಗಗಳ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ, ಸಾಮಾಜಿಕ ಸ್ಥಾನಮಾನಗಳು ಏರುಗತಿಗೆ ಬರುತ್ತೆ ಎಂದು ಜನರನ್ನು ನಂಬಿಸಿಬಿಟ್ಟರು. ಪರಿಣಾಮ ಅಧಿಕಾರವೂ ದೊರೆಯಿತು. ಇನ್ನು ಅಧಿಕಾರ ನೀಡಿದ ಋಣಕ್ಕಾಗಿ ಹಾಗೂ ಸಿಕ್ಕಿರುವ ಅಧಿಕಾರವನ್ನು ಭದ್ರಗೊಳಿಸುವ ಸಲುವಾಗಿ ಈ ವರ್ಗಗಳನ್ನೆಲ್ಲಾ ಮತ್ತಷ್ಟು ಮರುಳುಗೊಳಿಸಬೇಕಲ್ಲವೇ? ಅದಕ್ಕೆ ಸುರುವಾಯಿತು ನೋಡಿ ಆಮಿಷದ ರಾಜಕಾರಣ! ನೋಡು ನೋಡುತ್ತಿದ್ದಂತೆ ಜಾತಿ ಆಧಾರೀತ, ವರ್ಗ ಆಧಾರಿತ ಪ್ಯಾಕೇಜ್‍ಗಳು ಒಂದರ ಹಿಂದೆ ಒಂದರಂತೆ ಬರಲಾರಂಭಿಸಿದವು! ಅಧಿಕಾರ ಬಂದ ಕೂಡಲೇ ಅಲ್ಪಸಂಖ್ಯಾತ ವರ್ಗದ ಹಿತರಕ್ಷಣೆಗಾಗಿ ಎಂದೆನ್ನುತ್ತಾ ಅದೇ ವರ್ಗದ ಗೃಹಮಂತ್ರಿಯ ಆಯ್ಕೆ, (ಹಾಗಾದರೆ ಇನ್ನುಳಿದವರ ಹಿತರಕ್ಷಣೆ ಯಾರಿಂದ!?) ದಲಿತರು ನೀಡುವ ಹಾಲಿಗೆ ಪ್ರತ್ಯೇಕ ಬೆಲೆ, ಅಹಿಂದ ಮಕ್ಕಳಿಗಷ್ಟೇ ಶಾಲಾ ಪ್ರವಾಸ, ಅಹಿಂದ ಸಾಹಿತಿಗಳಿಗೆ ಮಾತ್ರ ‘ಅಕ್ಕ’ ಸಮ್ಮೇಳನ, ಅಹಿಂದ ವಿದ್ಯಾರ್ಥಿಗಳಿಗೆ ಟ್ಯಾಬ್‍, ಕಂಪ್ಯೂಟರಗಳು, ಮುಸಲ್ಮಾನರಿಗಾಗಿ ಶಾದೀ ಭಾಗ್ಯ ಇತ್ಯಾದಿ ಇತ್ಯಾದಿಯಾಗಿ ತರಹೇವಾರಿ ಬೆಣ್ಣೆ ಸವರುವ ಕೆಲಸಗಳೆಲ್ಲವೂ ನಡೆದವು!! ಸರಕಾರದ ಇಂತಹ ಹುಚ್ಚು ನಡೆಗಳು ಸಮಾನತೆ, ಜಾತ್ಯಾತೀತತೆ ಎನ್ನುವ ನಮ್ಮ ರಾಷ್ಟ್ರದ ಮೂಲ ಆಶಯಗಳಿಗೆ ಕೊಡಲಿ ಇಡುತ್ತಿವೆ ಎಂಬುದನ್ನು ಕೂಡ ಮರೆತು ಬಿಡಲಾಯಿತು ನೋಡಿ! ಇರಲಿ, ಇಂತಹ ಸರಕಾರಿ ಪ್ಯಾಕೇಜುಗಳಿಂದ ದಲಿತರು ಇಲ್ಲವೇ ಸಮಾಜದ ಕೆಳಸ್ತರದವರು ತಮ್ಮ ಸಾಮಾಜಿಕ ಸ್ಥಾನಮಾನದಲ್ಲಿ ಏನಾದರೂ ಬದಲಾವಣೆಗಳನ್ನು ಕಂಡರೆ!? ಶಾಶ್ವತ ನೆಮ್ಮದಿಯನ್ನು ಕಂಡರೇ!? ಯೋಚಿಸಬೇಕಿದೆ!!

ಇಲ್ಲಿ ‘ಅಹಿಂದ’ ಹೋರಾಟದಿಂದ ಶಾಶ್ವತ ಸಮಾಧಾನವನ್ನು ರಾಜಕೀಯ ಲಾಭವನ್ನು ಪಡೆದವರು ಯಾರು ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ ತಾನೆ!? ತಮಾಷೆಯೆಂದರೆ ಇದೀಗ ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ! ಅಹಿಂದದ ಮೂಲಕ ಓರ್ವ ಬೆಳೆದು ಬಿಟ್ಟರೆ ಆಕಾಂಕ್ಷೆ ಇರುವ ಇನ್ನುಳಿದವರು ಏನು ಮಾಡುವುದು!? ಅದಕ್ಕೆ ನೋಡಿ ಜಾತಿ ಧ್ರುವೀಕರಣ ಮತ್ತೆ ಪ್ರಾರಂಭಗೊಂಡಿದೆ! ಪರಿಣಾಮ ದಲಿತರ ಉದ್ಧಾರಕ್ಕೆ ‘ಅಹಿಂದ’ ನಾಯಕನಲ್ಲ ಬದಲಾಗಿ ದಲಿತ ನಾಯಕನೇ ಬೇಕೆನ್ನುವ ವಿಚಾರವನ್ನು ವ್ಯವಸ್ಥಿತವಾಗಿ ಹರಿಯಬಿಡಲಾಗುತ್ತಿದೆ! ಅಂದರೆ, ಅಂದು ಯಾರು ‘ಅಹಿಂದವನ್ನು’ ಹಿಡಿದು ಬಿಜೆಪಿಗೆ ಸಡ್ಡು ಹೊಡೆಯುತ್ತಾ ಮೇಲೇರಿದರೋ ಅದೇ ರೀತಿ ಇಂದು ಇನ್ಯಾರೋ ಅಹಿಂದದ ಒಂದು ಭಾಗವಾಗಿರುವ ‘ದಲಿತ’ ವರ್ಗವನ್ನು ಹಿಡಿದು ‘ಅಹಿಂದಾ’ಕ್ಕೆ ಸಡ್ಡು ಹೊಡೆದು ಮೇಲೇರುವ ಪ್ರಯತ್ನದಲ್ಲಿದ್ದಾರೆ! ಸಿಗುವ ಸಭೆ ಸಮಾರಂಭಗಳಲ್ಲಿ ದಲಿತರ ಸ್ಥಿತಿ ಇನ್ನೂ ಶೋಚನೀಯವಾಗಿಯೇ ಇದೆ ಎಂದು ಕಣ್ಣೀರು ಹರಿಸುತ್ತಿದ್ದಾರೆ! ಹಾಗಾದರೆ ಇದರರ್ಥವೇನು? ಅಹಿಂದವನ್ನು ಪ್ರತಿನಿಧಿಸುವ ನಮ್ಮ ಮುಖ್ಯಮಂತ್ರಿಯಿಂದ ದಲಿತ ವರ್ಗಕ್ಕೆ ಅನ್ಯಾಯವಾಗಿದೆಯೇ? ಸವಲತ್ತುಗಳು ಸಿಕ್ಕಿಲ್ಲವೇ?

ದಲಿತರಿಗೊಂದು ಮುಖ್ಯಮಂತ್ರಿ, ಆ ಬಳಿಕ ಅಲ್ಪಸಂಖ್ಯಾತರ ಉದ್ಧಾರಕ್ಕೆ ಅಲ್ಪಸಂಖ್ಯಾತರಿಗೊಂದು ಮುಖ್ಯಮಂತ್ರಿ, ಒಕ್ಕಲಿಗ ಲಿಂಗಾಯತರಿಗೂ ಒಂದೊಂದು ಮುಖ್ಯಮಂತ್ರಿ ಎನ್ನುತ್ತಾ ವರ್ಗಗಳೆಲ್ಲಾ ತಮ್ಮ ತಮ್ಮ ಅಧಿಕಾರಕ್ಕಾಗಿ, ಮುಖ್ಯಮಂತ್ರಿ ಪದವಿಗಾಗಿ ಪಟ್ಟು ಹಿಡಿದು ಕೂತರೆ ಇಲ್ಲಿನ ಪರಿಸ್ಥಿತಿ ಏನಾದೀತು!? ಅಷ್ಟಕ್ಕೂ ದಲಿತವರ್ಗದಿಂದ ಓರ್ವ ಮುಖ್ಯಮಂತ್ರಿ ಬೆಳೆದು ನಿಂತರಷ್ಟೇ ಆ ವರ್ಗದ ಶ್ರೇಯೋಭಿವೃದ್ಧಿ ನಡೆದೇ ಬಿಡುತ್ತದೆ ಎನ್ನುವುದು ಸತ್ಯವೆಂದಾದರೆ ಇಷ್ಟೊತ್ತಿಗಾಗಲೇ ಉತ್ತರ ಪ್ರದೇಶದ ಎಲ್ಲಾ ದಲಿತರು ಶ್ರೀಮಂತರಾಗಬೇಕಿತ್ತು ಅಲ್ಲವೇ!? ಹೌದು, ಈ ಸತ್ಯವನ್ನು ನಾವೆಲ್ಲಾ ಅರಗಿಸಿಕೊಳ್ಳಬೇಕಿದೆ.

ಜಾತಿ ವ್ಯವಸ್ಥೆ ತೊಲಗಬೇಕು, ಸಮಾನತೆ ಮೇಳೈಸಬೇಕು ಎಂದು ಇಂದು ಓರ್ವ ರಾಜಕಾರಣಿ ಭಾಷಣ ಬಿಗಿಯುತ್ತಾನೆ ಎಂದಾದರೆ ಅದು ಖಂಡಿತಾ ಆತನ ಸ್ವ ಉದ್ಧಾರಕ್ಕೆ ಎಂಬುದನ್ನು ಪ್ರತೀಯೋರ್ವರೂ ಅರ್ಥೈಸಿಕೊಳ್ಳಬೇಕು! ಇಂದಿನ ರಾಜಕಾರಣಿಗಳ ಈ ನಿಟ್ಟಿನ ಹೆಜ್ಜೆಗಳೆಲ್ಲಾ ಜಾತೀಯತೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಬಲಗೊಳಿಸುತ್ತಲೇ ಸಾಗುತ್ತಿದೆ. ಒಂದೆಡೆ ಅಂಬೇಡ್ಕರವರನ್ನು ಎತ್ತಿ ಹಿಡಿದು ಪೂಜಿಸುವ ಇವರುಗಳು ಮೀಸಲಾತಿಯ ವಿಚಾರಕ್ಕೆ ಇಳಿಯುವಾಗ ಸ್ವತಃ ಅಂಬೇಡ್ಕರ್‍ ಆಶಯಗಳಿಗೂ ತಣ್ಣೀರೆರಚುವುದು ದೇಶ ಕಾಣುತ್ತಿರುವ ದೊಡ್ಡ ದುರಂತ! ಜಾತಿ ಸಂಘಟನೆಗಳು, ಜಾತಿ ಆಧಾರಿತ ಕಾರ್ಯಕ್ರಮಗಳು ಜಾಸ್ತಿಯಾದರೆ ಜಾತಿ ಅಸಮಾನತೆಗಳು ಕೊನೆಯಾಗುತ್ತದೆ ಎಂಬ ಭ್ರಮೆಯಲ್ಲಿದ್ದಂತಿದೆ ನಮ್ಮ ರಾಜಕಾರಣ! ಹೇಳಿ, ಜಾತೀಯಾಧಾರಿತ ಮೀಸಲಾತಿಯಿಂದ, ಅಧಿಕಾರದ ಹಂಚುವಿಕೆಯಿಂದ ಸಮಾನತೆ ಸೃಷ್ಟಿಯಾಗುತ್ತದೆ, ದೀನ ದಲಿತರ ಶ್ರೇಯೋಭಿವೃದ್ಧಿ ಸಾಧ್ಯವಾಗುತ್ತದೆ ಎಂದಾದರೆ ಈವರೆಗೆ ಆದ ಬದಲಾವಣೆಗಳೆಷ್ಟು!? ಅರ್ಹತೆಯ ಮಾನದಂಡವನ್ನು ಬದಿಗಿಟ್ಟು, ಜಾತೀಯ ಮಾನದಂಡದಲ್ಲಿ ಅಧಿಕಾರ ಅಂತಸ್ತುಗಳ ಮಣೆ ಹಾಕಬೇಕೆನ್ನುವುದು ನಿಜವಾಗಿಯೂ ಆರೋಗ್ಯಕರ ಚಿಂತನೆಯಲ್ಲ. ಒಂದರರ್ಥದಲ್ಲಿ ಇದು ಅಂತಹ ವರ್ಗಗಳಿಗೆ ಮಾಡುವ ಅಪಮಾನವೆಂದರೂ ಸರಿಯೇ! ಇಂದು ಮೀಸಲಾತಿಯನ್ನು ನೀಡಬೇಕೆನ್ನುವುದು, ದಲಿತ ವರ್ಗವನ್ನು ಪ್ರತಿನಿಧಿಸುವ ವ್ಯಕ್ತಿಗೆ ಅಧಿಕಾರದ ಮಣೆ ಹಾಕಬೇಕೆನ್ನುವುದು ಆ ವರ್ಗವನ್ನು ಮೇಲಕ್ಕೆತ್ತಬೇಕೆನ್ನುವ ಇರಾದೆಯಿಂದ ಅಲ್ಲವೇ ಅಲ್ಲ, ಬದಲಾಗಿ ಆ ಮೂಲಕ ಮತಗಳನ್ನು ಎನ್‍ಕ್ಯಾಶ್‍ ಮಾಡಿ ‘ಫಲ’ ತೆಗೆಯುವ ಮಹತ್ತರ ಯೋಚನೆಯಿಂದ. ಇದನ್ನು ದಲಿತರಾದಿಯಾಗಿ ಎಲ್ಲರೂ ಅರ್ಥೈಸಿಕೊಳ್ಳಬೇಕು.

ನೆನಪಿಡಿ, ರಾಜ್ಯ ರಾಜಕಾರಣದ ಇಂದಿನ ‘ದಲಿತ ಮುಖ್ಯಮಂತ್ರಿ’ ಬೇಕು ಎಂಬ ಸದ್ದಿಲ್ಲದ ಹೋರಾಟ ಕೂಡ ಇದೇ ನೆಲೆಗಟ್ಟಿನದ್ದು!

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!