ಪ್ರಚಲಿತ

ಮತ್ತೊಮ್ಮೆ ಮನಸ್ಸುಗಳ ಒಡೆಯುವ ಮುನ್ನ…

ಪ್ಲೀಸ್.. ಎಲ್ಲರೂ ಅವರವರ ಅನ್ನ ದುಡಿದೆ ಉಣ್ಣುತ್ತಿದ್ದಾರೆ. ನೀವೂ ನಿಮ್ಮ ಅನ್ನ…ಕವನ…ಕಥೆ.. ಒಂದಿಷ್ಟು ಚೆಂದದ ಸಾಹಿತ್ಯ.. ಪ್ರೀತಿಯ ಮಾತು.. ಇತ್ಯಾದಿ ಮಾಡಿಕೊಂಡು ಇದ್ದು ನೋಡಿ, ಎಲ್ಲರೂ ತೆಪ್ಪಗಾಗತೊಡಗುತ್ತಾರೆ. ಎಲ್ಲರೂ ಕೆರೆಯುತ್ತಲೇ ಇದ್ದರೆ ಹುಣ್ಣು ವಾಸಿಯಾಗುವುದಾದರೂ ಹೇಗೆ..? ಕಡ್ಡಿ ಗೀರುವ ಮೊದಲೇ ಯೋಚಿಸಿ.. ಬಿದ್ದ ಬೆಂಕಿ ದಾವಾನಲವಾದಾಗ ಬಕೀಟು ನೀರು ಎಲ್ಲೂ ಸಾಲುವುದಿಲ್ಲ ಮತ್ತದಕ್ಕೆ ಬುದ್ಧಿಜೀವಿಗಳಾದ ನಾವು(?) ಕಾರಣರಾಗುವುದು ಬೇಡ.

ದೇಶವಾಸಿಗಳ ಮನಸ್ಸು ಒಡೆಯುವ ಸಿದ್ಧತೆಯಲ್ಲಿರುವವರೇ… ಅಸಹಿಷ್ಣುತೆ ಸೃಷ್ಟಿಸುತ್ತಿರುವವರೇ.. ನಿರಂತರವಾಗಿ ತಂತಮ್ಮ ಫೇಸ್ಬುಕ್ ಪುಟದ ಮೇಲೆ ಹಲವು ಬುದ್ಧಿ ಜೀವಿ, ಹಾಗಂತ ತಾವಂದುಕೊಂಡು, ಪ್ರಗತಿ ಪರ ಎನ್ನುವುದನ್ನು ತೋರಿಸಿಕೊಳ್ಳುತ್ತಿರುವ, ಆ ನೆಲೆಯಲ್ಲಿ ರಸ್ತೆಗಿಳಿಯುವ, ಪುರಭವನ ಮುಂದೆ ಟೆಂಟ್ ಹಾಕುವ ಮನಸ್ಥಿತಿಗಳೇ.. ದಯವಿಟ್ಟು ನಿಮ್ಮ ಇಂಥಾ ಗಿಮಿಕ್ಕುಗಳಿಂದ ಮತ್ತೊಮ್ಮೆ ಸಮಾಜ, ಕೊನೆಗೆ ದೇಶ ಒಡೆಯುವ ಕಾರ್ಯ ಮಾಡುವುದು ಬೇಡ… ಪ್ಲೀಸ್..

ನೀವು ಇಲ್ಲಿಯವರೆಗೆ ಶೇರ್ ಮಾಡಿರುವ ಮತ್ತು ಪೋಸ್ಟ್ ಮಾಡಿರುವ ಎಲ್ಲಾ ಸ್ಟೇಟಸ್ಗಳೂ ಕೇವಲ ಸಮಾಜ ಮತ್ತು ಪ್ರಬುದ್ಧ ಮನಸ್ಥಿತಿಯನ್ನು ಒಡೆಯುವುದನ್ನೇ ಮಾಡುತ್ತಿವೆಯೇ ವಿನ: ಕೂಡಿಸುವಿಕೆಯನ್ನಲ್ಲ. ನೀವು ಹೇಳಿಕೆ ನೀಡಿ ಅದಕ್ಕಿಷ್ಟು ನೂರು ಲೈಕು ಒತ್ತಿಸಿಕೊಂಡು ಸುಮ್ಮನಾಗುತ್ತಿರಿ. ಆದರೆ ನಿಮ್ಮ ಹೇಳಿಕೆಯ ಕೆಳಗೆ ಚರ್ಚೆಗಿಳಿಯುವ ಜನರು ಬದ್ಧ ವೈರಿಗಳಾಗುತ್ತಿದ್ದಾರೆ. ಕಡಿಯುವ ಬಡಿಯುವ ಮಾತುಗಳು ನಡೆಯುತ್ತಿವೆ. ನೀವು ಅದನ್ನೆಲ್ಲಾ ನಿವಾರಿಸುವುದಕ್ಕೆ ಏನಾದರೂ ಸಲಹೆಗಳನ್ನು ಕೊಡುವಿರಾ..? ಇಲ್ಲ. ನಿಮಗೆ ಅರ್ಜೆಟಿಗೊಂದು ಹೇಳಿಕೆ ಒಗಾಯಿಸಬೇಕು, ಮತ್ತದು ಸುಲಭದಲ್ಲಿ ಜನಾನುರಾಗಿಯಾಗಬೇಕು. ಅದಕ್ಕಾಗಿ ಅದು ಹಿಂದುತ್ವ ವಿರೋಧಿಯಾಗಿರಬೇಕು. ಎಡಪಂಥೀಯದ್ದಿರಬೇಕು ಅಷ್ಟೆ. ಆದರೆ ಅದರ ನಂತರದಲ್ಲಿ ಸಾಮಾಜಿಕವಾಗಿ ಬಡಿದಾಡಿಕೊಳ್ಳುವ ಮನಸ್ಥಿತಿಯನ್ನು ಉರಿಯಲು ಬಿಟ್ಟು, ನಿಮ್ಮ ಹೇಳಿಕೆಯ ಕೆಳಗೆ ವಿನಾಕಾರಣವಾಗಿ ವಿರೋಧಿಗಳಾಗುವವರು ಹೊರಗೂ ಶತ್ರಗಳಾಗುತ್ತಾರೆನ್ನುವುದರ ಕಡೆಗೆ ನಿಮ್ಮ ಗಮನವಿಲ್ಲ. ನೀವು ಇನ್ನೊಂದು ಸ್ಟೇಟಸ್ಸಿಗೆ ತಡಕಾಡುತ್ತೀರಿ. ಕಳೆದೆಲ್ಲಾ ನಿಮ್ಮ ನಿಮ್ಮ ಸ್ಟೇಟಸ್ ನೋಡಿಕೊಳ್ಳಿ. ನಾನೇನು ಅವರನ್ನು ಬಡಿದಾಡಿಕೊಳ್ಳಿ ಎಂದಿದ್ದೇನಾ..? ಎನ್ನುವ ಪ್ರಶ್ನೆ ಬೇಡ. ಪ್ಲೀಸ್.. ಕಾರಣ ನಿಮ್ಮಂಥವರು ಒಂದು ಹೇಳಿಕೆ ಒಗಾಯಿಸುವಾಗ ಅದಕ್ಕೊಂದು ಬದ್ಧತೆ ಇರಬೇಕು. ಸೂಕ್ಷ್ಮವಾಗಿ ಕೂತು ನೀವೇ ನೋಡಿ. ಹೇಗೆ ಸ್ವಾಸ್ಥ್ಯ ಹಾಳಾಗುವುದಕ್ಕೆ ಕಾರಣವಾಗುತ್ತೀರಿ ಎಂದು. ಕಾರಣ ಸ್ಥಾನಮಾನ, ಮಾತುಗಾರಿಕೆ, ಸಮಾಜದಲ್ಲಿ ಒಂದಿಷ್ಟು ಗುರುತಿಸಿಕೊಂಡಿರುವ ಮಟ್ಟ ಇವೆಲ್ಲ ಒಂದೆಡೆ ಮೇಳೈಸಿದಂಥಾ ನಿಮ್ಮಂಥ ಲೇಖಕ/ಕಿಯ(?)ರು ಏನಾದರೂ ಹೇಳಿಕೆ ಒಗಾಯಿಸುತ್ತಿದ್ದರೆ ಅದಕ್ಕೆಲ್ಲ ಸುಲಭಕ್ಕೆ ಬಲ ಬರುತ್ತದೆ.

ಆದರೆ ನಿಮ್ಮ ಹೇಳಿಕೆಯ ಕೆಳಗೆ ಇರುವ ಪರ-ವಿರೋಧಿಗಳು ಯಾರಿಗಾದರೂ ನೇರ ಪರಿಚಯದವರಾ..? ನೆಂಟರಾ…? ಹಳೆಯ ಪರಿಚಯ ಅಥವಾ ನೆರೆಹೊರೆಯವರಾ..? ಏನೂ ಅಲ್ಲ. ಸುಮ್ಮನೆ ನಿಮ್ಮ ನಿಮ್ಮ ಹೇಳಿಕೆಯ ಆಧಾರದ ಮೇಲೆ ವೈರಿಗಳಾಗುತ್ತಾರಲ್ಲ. ಅವರ ಬದುಕಿನಲ್ಲಿ ಬೇಕೇ ಇಲ್ಲದ, ಬೇಡದಿರುವ ಕಾರಣಕ್ಕೆ ಹೊಡೆದಾಟಕ್ಕಿಳಿಸುತ್ತಿರಲ್ಲ, ತಿಂದುಂಡಲ್ಲದ ಕಾರಣಕ್ಕೆ ಒಬ್ಬರನ್ನೊಬ್ಬರು ಬ್ಲಾಕ್ ಮಾಡಿಕೊಳ್ಳುವ ಹಂತಕ್ಕೆ ಒಯ್ಯುತ್ತಿದ್ದೀರಲ್ಲ, ನಿಮ್ಮ ನಿಮ್ಮ ಮನೆಯ ಮಕ್ಕಳನ್ನು ಇಂಥಾ ಜಗಳಕ್ಕೆ ಬಿಡುತ್ತೀರಾ..? ( ಖಂಡಿತಾ ಇಲ್ಲ. ಇವ್ರೆಲ್ಲಾ ಏನಿದ್ದರೂ ಸಭ್ಯಸ್ಥ ಸಮಾಜದ ನಾಗರಿಕರಾಗಬೇಕು.) ಉಳಿದವರು ಅಪರಿಚಿತರೇನಾದರೇನು..? ಬೇಕೆ ಇಂತಹಾ ಕೆಲಸ. ಅವರು ಯಾವತ್ತೂ ಮತ್ತೆ ಒಂದಾಗುವುದಿಲ್ಲ. ನೀವು ಮಾತ್ರ ಇಬ್ಬರಲ್ಲಿ ಯಾರೊಬ್ಬರು ಬಂದರೂ ಅವರೊಂದಿಗೆ ಫೋಟೊಗೆ ನಿಂತು ಪೋಸು ಕೊಡುತ್ತೀರಿ. ಅದು ಪೋಲಿಸ್ ಕಂಪ್ಲೆಂಟೆ ಇರಲಿ.. ಸಮಾಜದ ಇನ್ನಾವುದೆ ಘಟನೆ ಇರಲಿ. ಜೊತೆಗೆ ಇಂಥದ್ದಕ್ಕಾಗೇ ಕಾಯ್ದಿರುವ ಪತ್ರಿಕಾ ಧರ್ಮ ಮರೆತ “ಬಾಂಧವರು” ನಿಮ್ಮ ಸಂದರ್ಶನ ಪ್ರಕಟಿಸಲು ಕಾದಿರುತ್ತಾರೆ. ಒಂದಷ್ಟು ಸಾವಿರ ಲೆಕ್ಕದಲ್ಲಿ ಬೀದಿಗಿಳಿದಿರುವ ಕೆಲವು ಪತ್ರಿಕೆಗಳಿಗೂ ಪುಟ ಫಿಲ್ಲರ್. ಲೇಖನಗಳು ಸುಲಭಕ್ಕೆ ಪುಟ ತುಂಬಿಸುತ್ತವೆ. ಇದರಿಂದ ಯಾರ ಹೊಟ್ಟೆ ತುಂಬಿದೆ..? ಯಾರ ಉದ್ಧಾರವಾಗಿದೆ..? ಯಾರ ಮನೆ ದೀಪ ನೀವು ಉರಿಸಿದ್ದೀರಿ..? ಒಮ್ಮೆಯಾದರೂ ಕೃಷಿಯ ಪರವಾಗಿ, ದ.ಕ.ಮಣ್ಣಲ್ಲಿ ಮಣ್ಣಾಗಿ ಹೋದ ಸೌಜನ್ಯಳ ಪರವಾಗಿ, ಇದೇ ವರ್ಷ ತೀರಿ ಹೋದ ಆರುನೂರು ಚಿಲ್ರೆ ರೈತರ ಪರವಾಗಿ, ಇದೇ ರಾಜ್ಯದಲ್ಲಿ ಅಮಾನುಷವಾಗಿ ಕೊಲೆಯಾದ ಪ್ರಶಾಂತನ ಪರವಾಗಿ, ಮುಗ್ಧ ವೈದ್ಯ ಚಿತ್ತರಂಜನ್ ಪರವಾಗಿ, ಊಹೂ ಇಂಥಾ ಯಾವುದೇ ಜನರ ಪರವಾಗಿ ನಿಮ್ಮ ಬಾಯಲ್ಲಿ ಮಾತು ಹೊರಡುವುದಿಲ್ಲ. ಅದೇ ಪ್ರಧಾನಿಯ ಯಾರೋ ತುಂಡು ಮಾಡಿದ ವಿಡಿಯೋ ಅದ್ಯಾವ ಅರ್ಜೆಂಟಿನಲ್ಲಿ ಶೇರ್ ಮಾಡುತ್ತಿರೆಂದರೆ ಜನಕ್ಕೆ ಸತ್ಯ ಗೊತ್ತಾಗುವ ಮೊದಲೆ ನೀವು ಸಾಬೀತಾಗಬೇಕಿರುತ್ತಲ್ಲ..
(ಮೋದಿ ಮತ್ತು ಝುಕರ್ ಬರ್ಗ್ ವಿಡಿಯೊ ಮತ್ತು ಮಹಿಳೆಯರ ಉ.ಪ್ರ. ಬೆತ್ತಲೆ ಪ್ರಕರಣ.. ಇವೆಲ್ಲದರ ಪೂರ್ತಿ ಮಾಹಿತಿ ಬಂದ ಮೇಲೆ ತಿದ್ದುಪಡಿ ಎಲ್ಲ ಇಲ್ಲ. ನೀವು ಹೊಸ ತಡಕಾಡುವಿಕೆಯಲ್ಲಿಳಿದಿರುತ್ತೀರಿ.)
ನಿಮಗೆ ಯಾವುದೇ ಮಾಹಿತಿ ಸ್ಪಷ್ಟವಾಗಿರುವುದೇ ಇಲ್ಲ. ಇಂಥಾ ವಿಷಯದಲ್ಲಿ ಬರೀ ಜನರ ಸಹನೆಯನ್ನು ಮಾತ್ರ ಕ್ಯಾಶ್ ಮಾಡಿಕೊಳ್ಳುತ್ತಿದ್ದೀರಿ. ಅಸಹನೆ ಹೆಚ್ಚಲು ಕಾರಣವಾಗುತ್ತಿದ್ದೀರಿ. ಬೆಂಗಳೂರಿನ ವೇದಿಕೆಗಳಿಗೆ ಆತುಕೊಳ್ಳುವ ಬದಲು ಒಮ್ಮೆ ಜನೇವರಿ 26 ಮತ್ತು ಅಗಸ್ಟ 15 ಇವೆರಡೂ ದಿನ ಶ್ರೀನಗರದಲ್ಲಿ ನಿಲ್ಲುವ ತಾಕತ್ತು ನಿಮಗಿದೆಯಾ..? ( ನಾನು ಈ ಎರಡೂ ದಿನಗಳಂದೂ ಲಾಲ ಚೌಕದಲ್ಲಿ ನಿಂತು ಈ ದೇಶದ ದುಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ. )

ಮೋದಿಯಂಥ ನಾಯಕ ಪ್ರಧಾನಿಯಾದಾಗ ” ರಿಪ್(RIP) ಇಂಡಿಯಾ” ಎಂದಿರಿ. ಅಂದರೇನು ದೇಶಕ್ಕೇ ಸೂತಕವೇ..? ಇದು ನಿಮ್ಮ ಆಯ್ಕೆ ಅಲ್ಲದಿರಬಹುದು. ಆದರೆ ಪ್ರಜಾಪ್ರಭುತ್ವದಡಿಯಲ್ಲಿ ಆತ ನಾಯಕ. 60 ವರ್ಷದಿಂದ ಈ ದೇಶವನ್ನು ಒಂದು ಕುಟುಂಬ ರಾಜಕಾರಣ ಆಳಿದೆ. ಈಗ ಹೊಸಬ ಏನು ಮಾಡುತ್ತಾನೆ ಕಾಯ್ದು ನೋಡುವ ಸಹನೆ ನಿಮಗಿಲ್ಲ ಅಥವಾ ಅರ್ಜೆಂಟು ಪ್ರಸಿದ್ಧಿಯ ತೆವಲಾ..? ಅಸಹಿಷ್ಣುತೆ ಎನ್ನುವ ಹೊಸ ಶಬ್ದಕ್ಕೆ ಆತುಕೊಂಡ್ರಿ. ಇದೇ ಹಳೆಯ ಸರಕಾರದ ಅವಧಿಯ ಕಲಿದ್ದಲು ಹಗರಣದ ಬಗ್ಗೆ ನಿಮ್ಮಲ್ಲಿ ಚಿತ್ಕಾರವಿಲ್ಲ. ಬದಲು ಲೆಕ್ಕ ಮಾಡಲಾಗದಷ್ಟು ಹಣವನ್ನು ಮೋದಿ ಖಜಾನೆ ತುಂಬಿಸುತ್ತಿದ್ದರೆ ಅದಕ್ಕೂ ನಿಮ್ಮಲ್ಲಿ ಮಾಹಿತಿ ಇಲ್ಲ. ಸಿಖ್ ಕಗ್ಗೊಲೆಯ ಬಗ್ಗೆ ಕರುಣೆ ಇಲ್ಲ. ಅಷ್ಟ್ಯಾಕೆ ಸಾಲು ಸಾಲು ಮಾನಭಂಗದ ಬಗ್ಗೆ ಚಕಾರವಿಲ್ಲ. ಪ್ರತಿ ಬಾರಿ ನಿಮಗೆ ದೇಶವ್ಯಾಪಿ ಮೋದಿಯವರ ಸರ್ಕಾರವನ್ನು ಹೀಗೆಳೆಯುವ ಅವಕಾಶವನ್ನು ಹುಡುಕುತ್ತಿದ್ದಿರೇ ವಿನ: ಆಯಾ ರಾಜ್ಯದ ಜವಾಬ್ದಾರಿ ನಿಮಗೆ ಕಾಣುವುದೇ ಇಲ್ಲ. ಕಲಬುರ್ಗಿ ಹತ್ಯೆ ಇರಬಹುದು, ಅಖ್ಲಾಕ್ನ ಹತ್ಯೆ ಇರಬಹುದು ಆದರೆ ಅವೆರಡೂ ಮಾನವೀಯತೆ ವಿರೋಧೀ ಕೃತ್ಯಗಳೆ. ನೀವು ಮಾತ್ರ ಅವಕ್ಕೆ ಪರೋಕ್ಷವಾಗಿ ಕೇಂದ್ರದ ಕಡೆಗೆ ಬೆರಳು ತೋರಿಸುವ ನಿಲುಮೆ ಒಗಾಯಿಸುತ್ತೀರಿ. ಅವೆರಡಕ್ಕೂ ಕೇಂದ್ರಕ್ಕೂ ಸಂಬಂಧವೇ ಇಲ್ಲ. ರಾಜ್ಯ ಸರಕಾರದ ವ್ಯಾಪ್ತಿಯಲ್ಲೇ ಇವೆಲ್ಲಾ ಬರುವಂತಹವು. ಇದರ ಬಗ್ಗೆ ರಾಜ್ಯ ಸರಕಾರವನ್ನು ಒತ್ತಾಯಿಸುವ ಹುಕಿ ನಿಮಗಿಲ್ಲ. ಅಸಹಿಷ್ಣುತೆ ಯಾರ ಸೃಷ್ಟಿ? ಖಂಡಿತವಾಗಿ ನಿಮ್ಮಂಥವರ ಉತ್ಪತ್ತಿ ಅಲ್ಲದೆ ಇನ್ನೇನು..? ಎರಡು ರಾಜ್ಯದಲ್ಲಿ ನಾಯಕರ ದುಸ್ಥಿತಿಯಿಂದಾಗಿ ಪ್ರಧಾನಿಯ ಪಕ್ಷ ಸೋತರೆ ನಿಮ್ಮ ವಾಲ್’ಗಳ ಮೇಲೆ ವಿಜೃಂಭಿಸುವ ನೀವು, ಅದಕ್ಕೂ ಮೊದಲು ಆರೆಂಟು ರಾಜ್ಯದಲ್ಲಿ ಇದೇ ನಾಯಕ ಸರಕಾರದ ಅಧಿಕಾರ ಹಿಡಿದದ್ದು ನಿಮ್ಮ ಜಾಣ ಮರೆವು.

ಎರಡು ಮೂರು ದಶಕದ ಹಿಂದಿನ, (ಆಗಿನ ಕಾಲಘಟ್ಟದಲ್ಲಿ ಹಿಂದೂ/ಮುಸ್ಲಿಂ/ದಲಿತ ಮತ್ತು ಇತರೆ ಯಾವುದೇ ಇರಲಿ ಹೊಂದಾಣಿಕೆಯ ಮತ್ತು ಮನಸ್ಥಿತಿಗಳಿಗೆ ಇಂಥಾ ಅಸಹನೆ ಇರಲೇ ಇಲ್ಲ. ಯಾರಿಗೂ ಯಾವ ಅವಮಾನ ಎನ್ನಿಸುತ್ತಲೂ ಇರಲಿಲ್ಲ. ಎಲ್ಲ ಒಟ್ಟಿಗಿದ್ದವರೇ ಆಗಿದ್ದರು. ಈಗಲೂ ನಾನು ನೂರು ಉದಾ. ಕೊಡುತ್ತೇನೆ. ಯಾರಿಗೂ ಯಾವ ಸಂಕಟವೂ ಆಗಿರಲಿಲ್ಲ ಎಂದು) ಅಂಥಾ ಕಥೆಗಳನ್ನು ಪದೇ ಪದೇ ಪ್ರಸ್ತಾಪಿಸುತ್ತಾ “ಆಗ ನಾವು ಹಾಗೆ ಮಾಡಿದ್ದೇವೆ ” ಎನ್ನುವ ಮೂಲಕ ಆಗ ಆಗದ ಸಂಕಟವನ್ನು ಈಗ ನೀವು ಉರಿಯಾಗಿಸುತ್ತಿದ್ದೀರಿ ಎನ್ನಿಸುವುದಿಲ್ಲವೇ..? ಬೇಕೇ ಹಳೆಯ ಕಥೆ ಕೆದಕಿ ನಿಮ್ಮನ್ನು ಶೋಷಿಸಿದ್ದೇವೆ ಎನ್ನುವ ಮೂಲಕ ಹೌದು ಎನ್ನಿಸಿ ಬೆಂಕಿ ಹತ್ತಿಸುವ ಹೊಸ ನಾಟಕದ ಪ್ರದರ್ಶನ. ಥತ್ ನಿಮ್ಮ ಮಾನಸಿಕ ದಿವಾಳಿತನಕ್ಕೆ ಹೇಸಿಗೆಯಾಗುತ್ತಿದೆ.
(ನಾನೂ ಅದೇ ಕಾಲದಲ್ಲಿ ಅದಕ್ಕಿಂತಲೂ ಹೆಚ್ಚಿನ ಆಚರಣೆಗಳಿದ್ದ ಹಳ್ಳಿಯಿಂದ ಬೆಳೆದಿದ್ದೇನೆ. ಆದರೆ ಯಾವತ್ತೂ ಎಲ್ಲೂ ಯಾರಿಗೂ ಆಗಲೂ, ಈಗಲೂ ಹಾಗೆ ಎನ್ನಿಸುತ್ತಿಲ್ಲ. ಅನಗತ್ಯ ಇಂಥಾ ಸ್ಟೇಟಸ್ಗಳಿಂದ ಇಲ್ಲದ ಉರಿಯನ್ನು ಹತ್ತಿಸಿ ಅದರಲ್ಲಿ ನಮ್ಮ ಮೈ ಕಾಯಿಸಿಕೊಳ್ಳುವ ಕೆಲಸಕ್ಕಿಳಿಯುತ್ತೀರಲ್ಲ.. ನಿಮ್ಮದು ಅದ್ಯಾವ ಸೀಮೆ ಸಾಮಾಜಿಕ ಬದ್ಧತೆ ರೀ..)

ನಾವು ದುಡಿದು ಉಣ್ಣುವ ಜೀವಿ ಎನ್ನುವ ಹಲವರ ನಿಲುಮೆ ನೋಡಿದರೆ ಬೇರೆಯವರು ಪುಕ್ಕಟೆ ಉಣ್ಣುತ್ತಾರೆ ಎಂದೆ..? “ಯಾರು ಹೇಗೆ” ಅವರವರ ಅನ್ನವನ್ನು ದುಡಿಯುತ್ತಿದ್ದಾರೆ ಎಂದು ಪ್ರತಿಯೊಬ್ಬರೂ ಗಮನಿಸುತ್ತಲೇ ಇದ್ದಾರೆ. ಪ್ರತಿಯೊಬ್ಬರ ಚಲನವಲನ ಮೇಲೆ ಇವತ್ತು ಜನಗಳ ನಿಗಾ ಇದೆ. ಯಾರೂ ಪುಕ್ಕಟೆ ಕೂಳು ತಿನ್ನುತ್ತಿಲ್ಲ. ಅವರ ಮಟ್ಟಿಗೆ ನಿಯತ್ತಿನ ಅನ್ನ ತಿನ್ನುವವರು ಪದೇ ಪದೇ ಕೂಳಿನ ವಿಷಯ ಎತ್ತಿ ವಿಷಯಾಂತರ ಮಾಡಲಾರರು. ನಿಮಗೆ ಅಷ್ಟು ಅಸಹಿಷ್ಣುತೆ ಇಲ್ಲಿ ಕಾಣುತ್ತಿದೆ ಅಂತಾದರೆ, ನಿಮಗೆ ಜಗತ್ತಿನ ಯಾವ ದೇಶದಲ್ಲಿ ನೀವು ಪಡೆಯುತ್ತಿರುವಂತಹ ಸ್ವಾತಂತ್ರ ಇವತ್ತು ನೀಡಲಾಗಿದೆ ತಿಳಿಸುತ್ತೀರಾ..? ಅಥವಾ ಇದಕ್ಕಿಂತ ದೊಡ್ಡ ಸ್ವಾತಂತ್ರ್ಯ ಮತ್ತು ನಿಮ್ಮ ಅಭಿವ್ಯಕ್ತಿಯನ್ನು ರಕ್ಷಿಸುತ್ತಿರುವ ದೇಶದ ಬಗ್ಗೆ ತಿಳಿಸಿ.

ದೂರ ಯಾವುದೋ ರಾಜ್ಯದ ಹತ್ಯೆಗೆ (ನಿಮಗೆ ಇವುಗಳ ಬಗ್ಗೆ ಸ್ಪಷ್ಠ ಮಾಹಿತಿ ಇಲ್ಲದಿದ್ದಾಗಲೂ) ತತ್’ಕ್ಷಣಕ್ಕೆ ಸ್ಪಂದಿಸುವ ನಿಮಗೆ ನಮ್ಮದೇ ರಾಜ್ಯದ ಮಂತ್ರಿಯೋರ್ವ ಮನೆಯಲ್ಲೇ ಲಂಚದ ಕಥೆಗೆ ಸಿಕ್ಕಿಕೊಂಡು ಆರೋಪ ಎದುರಿಸುತ್ತಿದ್ದರೇ ನೀವು ಕವನ ಬರೆದುಕೊಂಡು ಸೆಲ್ಫಿ ಹಾಕಿಕೊಳ್ಳುತ್ತೀರಿ. ಅದು ನಿಮಗೆ ವಿಷಯವಲ್ಲ. ಆದರೆ ಅಲ್ಲೆಲ್ಲೋ ಪರಮಾಣು ಸ್ಥಾವರದ ಬಗ್ಗೆ ವಿರೋಧವಿದ್ದುದನ್ನು ಇಲ್ಲಿ ಶೇರ್ ಮಾಡಿ ಬೆಂಕಿ ಬಿದ್ದಂತಾಡುವುದು ಮುಖ್ಯ ವಿಷಯ. ಅಸಲಿಗೆ ನಿಮಗಷ್ಟೆ ಅಲ್ಲ ಕನ್ನಡ ಯಾವೊಬ್ಬ ವಿಜ್ಞಾನ ಲೇಖಕ(?)ನೂ ಇವತ್ತಿಗೂ ಪರಮಣು ಸ್ಥಾವರದ ಬಗ್ಗೆ ಸರಿಯಾಗಿ ಅಭ್ಯಸಿಸಲೇ ಇಲ್ಲ. ಬರೀ ನೆಗೆಟಿವ್ ಬರೆಯುವುದರಲ್ಲೇ ಟಿ.ಆರ್.ಪಿ. ಗಿಟ್ಟಿಸಿದರು. ನನ್ನೊಂದಿಗೆ ಚರ್ಚೆಗಿಳಿಯುತ್ತಾರಾ..? ನಮ್ಮ ಹೆಮ್ಮೆಯ ಸಂಶೊಧನೆಗಳ ಬಗ್ಗೆ ನಾನು ಮಾತಾಡುತ್ತೇನೆ. ನಿಮಗೆ ಆ ಮಾಹಿತಿಗಳಿವೆಯಾ..? ನಾನು ಸಿದ್ಧ ಪೂರೈಸಲು. ಯೋಚನೆ ದೂರದೃಷ್ಟಿಯದ್ದಿರಲಿ.

ಒಟ್ಟಾರೆ ಸಾಮಾಜಿಕ ಹಿತಾಸಕ್ತಿಗೆ ವಿರುದ್ಧ ಬರೆಯುವ ಮತ್ತು ಪ್ರಚುರ ಪಡಿಸುವ ನೀವು ನಿಜವಾಗಿಯೂ ಮಾನವೀಯತೆಯ ವಿರೋಧಿ ಅನ್ನಿಸುವುದಿಲ್ಲವೇ..? ನಿಮ್ಮ ಮಾತುಗಳಿಂದ ಬರಹಗಳಿಂದ ಸಾಮಾಜಿಕ ಅಸಹಿಷ್ಣುತೆ ಹೆಚ್ಚುತ್ತಿದೆಯೇ ವಿನ: ಎಲ್ಲೂ ಅದನ್ನು ಕಡಿಮೆ ಮಾಡುವ ಗೋಜಿಗೆ ಹೋಗಿದ್ದು ಕಾಣಿಸುತ್ತಿಲ್ಲ. ವೈಯಕ್ತಿಕವಾಗಿ ನಿಮಗೆ ಬೆಳೆಯುವ ಅಗತ್ಯತೆಗೆ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದೀರಿ ಎಂದೇ ನನ್ನ ಅನಿಸಿಕೆ. ಅದರ ಬದಲಿಗೆ ಒಪ್ಪವಾಗಿ ಕವನ ಅಥವಾ ಮಾಹಿತಿಯ ವಿಷಯಗಳನ್ನು ಹಂಚಿಕೊಳ್ಳಿ. ಚೆಂದದ ಮಾಹಿತಿ ಕೊಡಿ. ಬೇಕೆ ಇಂತಾ ಬೆಂಕಿ ಹಚ್ಚುವ ಕೆಲಸ. ದಿನ ಬೆಳಗಾದರೆ ಇದೆ ಚರ್ಚೆ.. ಯಾಕೆ ಸಮಾಜ ಮತ್ತು ದೇಶ ಕೊನೆಗೆ ಎಲ್ಲಾ ಬದುಕು ಮತ್ತೊಮ್ಮೆ ಇಬ್ಭಾಗ ಆಗಬೇಕೆ..?

ಹಬ್ಬಕ್ಕೊಮ್ಮೆ ಪಟಾಕಿ ಹೊಡೆದರೆ ಪ್ರಾಣಿ ಸಾಯುತ್ತವೆ ಎನ್ನುತ್ತಾ ಉದ್ದೇಶ ಪೂರ್ವಕವಾಗಿ ಕೆರಳಿಸುವ ಜನರಿಗೆ, ಜಗತ್ತೇ ಒಪ್ಪಿಕೊಂಡಿರುವ ಗೋವಿನ ಮೇಲೆ ಕರುಣೆ ಇಲ್ಲ.. ಅದಕ್ಕಿಂತಲೂ ದಿನಂಪ್ರತಿ ಬೆಳಿಗ್ಗೆ ಸಂಜೆ ಮಕ್ಕಳು ಓದಲು ತೊಂದರೆಯಾಗುತ್ತಿದ್ದರೂ ಕಿರುಚಿಸುವ ಮೈಕುಗಳ ಬಗ್ಗೆ ಖಬರಿಲ್ಲ. ಗಣೇಶ್ ಹಬ್ಬಕ್ಕೆ ಪೆಂಡಾಲು ಮೈಕು ಬಗ್ಗೆ ಉದ್ದುದ್ದ ಬರಕೊಳ್ತೀರಲ್ಲ..ಇದಲ್ವಾ ಡಬ್ಬಲ್ ಸ್ಟಾಂಡರ್ಡ್..? ಅಥವಾ ಅಗ್ಗದ ಜನಪ್ರಿಯತೆಯ ಪಾಠ ಹೇಳ್ಕೊಡ್ತಿದೀರಾ..? ಅಲ್ಲಿ ಬಿಹಾರದಲ್ಲಿ ಆಗುವ ಫಲಿತಾಂಶ ಇಲ್ಲಿ ಖುಷಿಯ ಉನ್ಮಾದ.. ಅದೇ ಇಲ್ಲಿನ ಮಂತ್ರಿಯೊಬ್ಬನ ಭ್ರಷ್ಟ ಆರೋಪಕ್ಕೆ ಒತ್ತಾಯಿಸುವ ಕನಿಷ್ಟ ನಿಜಾಯಿತಿ ಇಲ್ಲದ್ದು ಯಾವ ಸ್ಟಾಂಡರ್ಡ್..?

ನೆನಪಿರಲಿ ಯಾವ ದೇಶವೂ ನೀಡದ ಸ್ವಾತಂತ್ರ್ಯ ಮತ್ತು ಸವಲತ್ತುಗಳನ್ನು ಈ ದೇಶ ಮತ್ತು ಇಲ್ಲಿನ ಸಂಸ್ಕೃತಿ ನೀಡಿದೆ. ಅದರ ದುರುಪಯೋಗ ಮಾಡುತ್ತಾ ಮಾತಿಗೊಮ್ಮೆ ಪುರೋಹಿತ ಶಾಹಿ, ವೈದಿಕ ಶಾಹಿ, ದಬ್ಬಾಳಿಕೆ ಎನ್ನುತ್ತಾ ಅರಿಯದ ಮನಸ್ಸುಗಳನ್ನು ಬಳಸಿಕೊಂಡು ಶೋಷಣೆ ಮಾಡುತ್ತಿದ್ದೀರಲ್ಲಾ ನಿಮ್ಮದು ನಿಜವಾದ ಶೋಷಣೆ.

ಕವನ ಬರೆಯೋದರಿಂದ, ಟೌನ್ ಹಾಲ್ ಮುಂದೆ ಕುಕ್ಕರಿಸಿ ಗಂಟಲು ಹರಿದುಕೊಳ್ಳುವುದರಿಂದ ದೇವರಾಣೆ ಬದಲಾವಣೆ ಸಾಧ್ಯವಿಲ್ಲ. ಅದು ಈ ಜನುಮಕ್ಕೆ ನಿಮ್ಮಿಂದ ಆಗಲ್ಲ. ಮೊದಲು ನೀವು ಬೆಂಕಿ ಹಚ್ಚೋ ಕೆಲಸ ಕೈ ಬಿಡಿ. ಪತ್ರಿಕೆ ಪುಟ ಅಲಂಕರಿಸೋ ಟಿ.ಆರ್.ಪಿ. ಬೇಕಿದ್ದಾಗ ಮಾತಾಡೊ, ಉತ್ತರ ಇಲ್ಲದಿದ್ದಾಗ ಹೊಸ ಸ್ಟೇಟಸ್ಗೆ ತಡಕಾಡೊ ಡಬ್ಬಲ್ ಸ್ಟಾಂಡ್ ಮೊದಲು ನಿಲ್ಲಿಸಿ. ದಮ್ಮಿದ್ದರೆ ಜನರನ್ನು ತಲುಪುವ ಕೆಲಸಕ್ಕೆ ಮುಂದಾಗಿ.

ಕುಲಗೆಟ್ಟಿರೋ ಬೆಂಗಳೂರಿನ ವ್ಯವಸ್ಥೆಗೆ ಮೊದಲು ಒಮ್ಮೆ ಪುರಭವನದ ಮುಂದೆ, ಭ್ರಷ್ಟ ಮಂತ್ರಿಗಳ ಕೈಬಿಡಲು, ಕನ್ನಡ ಕೊಲ್ಲುವ ಬರಹಗಳಿಗೆ ಸಿಕ್ಕುವ ಪ್ರಾಶಸ್ತ್ಯದ ವಿರುದ್ಧ ಹೋರಾಡಿ. ಅಷ್ಟು ಸಾಕು. ಅವರವರ ಊರ ಸಮಸ್ಯೆ ಅವರವರು ನೋಡಿಕೊಳ್ಳುತ್ತಾರೆ. ಎಲ್ಲಾ ಕಡೆನೂ ಕಡ್ಡಿ ಗೀರುವುದು ಬೇಡ. ನಿಮ್ಮಿಂದಾ ಇಂಥಾ ಬಾಹುಳ್ಯದಿಂದ ದೂರ ಇರುವ ಉ.ಕರ್ನಾಟಕದ ಎಷ್ಟೋ ಹಳ್ಳಿಗಳಲ್ಲಿ ಇವತ್ತು ನೀವು ನೀರಿಕ್ಷಿಸಿದ ಸ್ಥಿತಿ ಇಲ್ಲ. ತುಂಬಾ ಒಪ್ಪವಾಗೇ ಸಾಮರಸ್ಯದ ಸಂಸಾರಗಳಿವೆ. ತೀರ ಓದಿ ಮತ್ತು ಮುಂದುವರೆದ ಸ್ಥಳಗಳಾದ ಸಂವಹನ ಮುಂದುವರೆದ ಬೆಂಗಳೂರು / ಮಂಗಳೂರೆ ಇವತ್ತು ಹೆಚ್ಚು ಅಸ್ವಾಸ್ಥ್ಯಕ್ಕೆ ಬೆಲೆ ತೆರುತ್ತಿವೆ ಮತ್ತದಕ್ಕೆ ಕಾರಣ ನಿಮ್ಮಂಥವರು.

ಪ್ಲೀಸ್.. ಎಲ್ಲರೂ ಅವರವರ ಅನ್ನ ದುಡಿದೆ ಉಣ್ಣುತ್ತಿದ್ದಾರೆ. ನೀವೂ ನಿಮ್ಮ ಅನ್ನ .. ಕವನ. ಕಥೆ.. ಒಂದಿಷ್ಟು ಚೆಂದದ ಸಾಹಿತ್ಯ.. ಪ್ರೀತಿಯ ಮಾತು.. ಇತ್ಯಾದಿ ಮಾಡಿಕೊಂಡು ಇದ್ದು ನೋಡಿ. ಎಲ್ಲರೂ ತೆಪ್ಪಗಾಗತೊಡಗುತ್ತಾರೆ. ಎಲ್ಲರೂ ಕೆರೆಯುತ್ತಲೇ ಇದ್ದರೆ ಹುಣ್ಣು ವಾಸಿಯಾಗುವುದಾದರೂ ಹೇಗೆ..? ಕಡ್ಡಿ ಗೀರುವ ಮೊದಲೇ ಯೋಚಿಸಿ.. ಬಿದ್ದ ಬೆಂಕಿ ದಾವಾನಲವಾದಾಗ ಬಕೀಟು ನೀರು ಎಲ್ಲೂ ಸಾಲುವುದಿಲ್ಲ….
ನಿಮ್ಮ ಈ ಮನಸ್ಸು ಒಡೆಯೋ ಕೆಲಸದಿಂದ ಮತ್ತೊಮ್ಮೆ ದೇಶ ಒಡೆದೀತು ಎಚ್ಚರಿಕೆ

Facebook ಕಾಮೆಂಟ್ಸ್

ಲೇಖಕರ ಕುರಿತು

Santoshkumar Mehandale

ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!