ಪ್ರಚಲಿತ

ಬಿಹಾರ : ಒಂದು ಚುನಾವಣೆ, ಹಲವು ಪಾಠಗಳು

ಬಿಹಾರ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಅಲ್ಲಿನ ಆರ್ ಜೆ ಡಿ, ಜೆಡಿಯು ನಾಯಕರಿಗಿಂತಲೂ ನಮ್ಮ ರಾಜ್ಯದ ಬುದ್ಧಿಜೀವಿಗಳು ಹೆಚ್ಚು ಖುಷಿ ಪಟ್ಟರು. ಒಂದು ಬುದ್ಧಿಜೀವಿ, ಬೆಳಗ್ಗೆ ಒಂಬತ್ತು ಗಂಟೆಗೆ ಟಿವಿಯಲ್ಲಿ “ಬಿಜೆಪಿ ಮುನ್ನಡೆ” ಎನ್ನುವುದನ್ನು ಓದಿ ಕಕ್ಕಾಬಿಕ್ಕಿಯಾಗಿ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಮಂಚದ ಮೇಲೆ ಉರುಳಾಡಿದರಂತೆ. ಹತ್ತೂವರೆಯ ಹೊತ್ತಿಗೆ ಪರಿಸ್ಥಿತಿ ಬದಲಾಗಿತ್ತು. ಬಿಜೆಪಿಯ ಬದಲು ಮಹಾಮೈತ್ರಿ ಮುನ್ನಡೆ ಸಾಧಿಸಿತ್ತು. ಅಂಥ ಮಹದಾನಂದದ ಸುದ್ದಿ ನೋಡಿ ಬುದ್ಧಿಜೀವಿಯ ಕಾಲು ನೆಲದಲ್ಲಿ ನಿಲ್ಲಲಿಲ್ಲ. ಫೇಸ್ಬುಕ್ಕಿನಲ್ಲಿ ಮೇಲಿಂದ ಮೇಲೆ ಪೋಸ್ಟುಗಳನ್ನು ಬರೆದು ಪ್ರವಾಹ ಎಬ್ಬಿಸಿಬಿಟ್ಟರು. ಆದರೆ, ಒಂಬತ್ತು ಗಂಟೆಗೆ ಬಿಜೆಪಿ ಮುಂದಿದ್ದನ್ನು ಕಂಡು ನಿರಾಶರಾಗಿ “ನನ್ನನ್ನು ಮುಗಿಸಲು ಸಾಧ್ಯವಿಲ್ಲ. ಯಾವ ಸವಾಲುಗಳಿಗೂ ನಾನು ಎದೆಗುಂದುವುದಿಲ್ಲ. ಯಾಕೆಂದರೆ ನಾನು ನೂರು ಬಾರಿ ಗೆದ್ದವನಲ್ಲ; ಸಾವಿರ ಸಲ ಸೋತವನು” ಎಂಬ ಚೆಗುವಾರನ ಹೇಳಿಕೆಯನ್ನು ತಾನು ಹಂಚಿಕೊಂಡಿದ್ದನ್ನು ಅಳಿಸಿಹಾಕಲು ಮರೆತರು. ಇನ್ನೊಂದು ಬುದ್ಧಿಜೀವಿ ಮೀನಿನ ಮಾರುಕಟ್ಟೆಗೆ ಹೋಗಿ ಒಂದೆರಡು ಕೆಜಿ ಕಾಣೆ ಮೀನು ತಂದು ಅಡುಗೆ ಮಾಡಿ ಚಪ್ಪರಿಸಿದರಂತೆ. ಬುದ್ಧಿಜೀವಿಗಳ ಸಂಭ್ರಮಾಚರಣೆಯಲ್ಲಿ ತಿನ್ನುವುದರ ಪ್ರಸ್ತಾಪ ಇರುವುದು ಸಹಜವೇ. “ಹಸಿವೆಯ ಬಗ್ಗೆ ನಿಮಗೇನು ಗೊತ್ತು?” ಎಂದು ಇವರು ಆಗಾಗ ಬಲಪಂಥೀಯರನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇರುತ್ತಾರಲ್ಲ!

ಇರಲಿ, ವಿಷಯಕ್ಕೆ ಬರೋಣ. ಬಿಹಾರದ ಅಸೆಂಬ್ಲಿ ಚುನಾವಣೆಯಲ್ಲಿ ಮಹಾಗಠಬಂಧನ ಭರ್ಜರಿಯಾಗಿ ಗೆದ್ದಿದೆ. ಅಗತ್ಯವಿದ್ದದ್ದಕ್ಕಿಂತ ಒಂದಿಪ್ಪತ್ತು ಪ್ರತಿಶತ ಹೆಚ್ಚು ಓಟುಗಳನ್ನೇ ಗಳಿಸಿದೆ. ಆದರೆ ಇಲ್ಲಿ ನಿಜವಾಗಿಯೂ ಗೆದ್ದವರು ಯಾರು? ಲಾಲೂ ಪ್ರಸಾದ್ ಯಾದವರ ಆರ್ ಜೆ ಡಿ ಪಕ್ಷ  2010ರಲ್ಲಿ 22 ಸೀಟುಗಳಿಗೆ ತೃಪ್ತಿ ಪಟ್ಟಿದ್ದರೆ, 2015ರ ಚುನಾವಣೆಯಲ್ಲಿ 80 ಸೀಟು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಕಳೆದ ಚುನಾವಣೆಯಲ್ಲಿ 115 ಸೀಟು ಗಳಿಸಿದ್ದ ನಿತೀಶ್ ಕುಮಾರರ  ಜೆಡಿಯು, ಈ ಸಲ ಪಡೆದದ್ದು ಕೇವಲ 71 ಸೀಟುಗಳನ್ನು. ಅಂದರೆ ಅದರ ಮೂರನೇ ಒಂದರಷ್ಟು ಸೀಟುಗಳು ಕೈಬಿಟ್ಟುಹೋದವು. ಆಡಳಿತ ಪಕ್ಷವಾಗಿದ್ದ  ಜೆಡಿಯು ಎರಡನೇ ಸ್ಥಾನಕ್ಕೆ ಕುಸಿಯಿತು. 91 ಸೀಟು ಗಳಿಸಿದ್ದ ಬಿಜೆಪಿ ಈ ಬಾರಿ ಪಡೆದದ್ದು 53 ಸೀಟುಗಳನ್ನು. ಅಂದರೆ ಅದರ ವರ್ಚಸ್ಸೂ ಕುಗ್ಗಿದೆ ಎಂದಾಯಿತು. ಕಳೆದ ಸಲ ಕೇವಲ ನಾಲ್ಕು ಸೀಟುಗಳಿಗೆ ಸೀಮಿತವಾಗಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ 27 ಸೀಟುಗಳನ್ನು ಗಳಿಸಿದೆ. ಹಾಗಾಗಿ ಇಲ್ಲಿ ಗೆದ್ದವರು ಖಂಡಿತವಾಗಿಯೂ ನಿತೀಶ್ ಕುಮಾರ್ ಅಲ್ಲ; ಬದಲು ಲಾಲೂ ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ಎಂದೇ ಹೇಳಬೇಕಾಗುತ್ತದೆ. ಲಾಲೂ ತನ್ನ ಇಬ್ಬರು ಮಕ್ಕಳನ್ನೂ ಈ ಚುನಾವಣೆಯಲ್ಲಿ ಗೆಲ್ಲಿಸಿ, ತನ್ನ ವಂಶಾಡಳಿತಕ್ಕೂ ಬುನಾದಿ ಹಾಕಿದ್ದಾರೆ ಎನ್ನಬಹುದು.

ಒಂದು ಕಾಲದಲ್ಲಿ ಹಾವು ಮುಂಗುಸಿಯಂತಿದ್ದ ನಿತೀಶ್ ಮತ್ತು ಲಾಲೂ ಭಾಯಿ ಭಾಯಿಯಾಗಿ ಚುನಾವಣಾ ಕಣಕ್ಕೆ ಇಳಿದು ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತನ್ನು ಸತ್ಯ ಮಾಡಿದರು. ಮಹಾಗಠಬಂಧನ ರಚಿಸುವ ಮೂಲಕ ಇಬ್ಬರೂ ತಮ್ಮ ಚಾಣಾಕ್ಷತನ ಮೆರೆದರು. ನಿತೀಶ್ ಅವರಿಗೆ ಈ ಬಾರಿ ತನಗೆ ಖಚಿತ ಬಹುಮತ ಬರುವುದಿಲ್ಲ ಎನ್ನುವುದು ಮೊದಲೇ ಗೊತ್ತಾಗಿತ್ತು. ಕಳೆದ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಲಾಲೂ ಅವರಿಗೂ ತನ್ನ ಪಕ್ಷವನ್ನು ಅಧಿಕಾರ ಹಿಡಿಯಲು ಬೇಕಾದಷ್ಟು ಸೀಟುಗಳ ಸಂಖ್ಯೆಗೆ ಎತ್ತುವುದು ಸಾಧ್ಯವಿಲ್ಲ ಎನ್ನುವುದು ಖಚಿತವಿತ್ತು. ಹೀಗೆ ಇಬ್ಬರು ಥರ್ಡ್ ಕ್ಲಾಸ್ ಪಾಸ್ ಮಾರ್ಕ್ ಪಡೆವವರು ಒಟ್ಟಾಗಿ ಕೂತು ಪರೀಕ್ಷೆ ಬರೆಯುವ ನಿರ್ಣಯ ತೆಗೆದುಕೊಂಡರು. ಇಡೀ ಪುಸ್ತಕವನ್ನು ಓದಿ ಜೀರ್ಣಿಸಿಕೊಳ್ಳುವುದು ಕಷ್ಟವಾದ್ದರಿಂದ ಅರ್ಧರ್ಧ ಭಾಗಗಳನ್ನು ಹಂಚಿಕೊಂಡು ಓದಿದರು. ಅದೇನೇ ಇರಲಿ, ಇಬ್ಬರೂ ಜೊತೆಯಾಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆ ಎನ್ನುವುದು ಮುಖ್ಯ. ಚುನಾವಣೆಯನ್ನು ಬೇರೆಬೇರೆಯಾಗಿ ಎದುರಿಸಿದ್ದರೂ ಫಲಿತಾಂಶ ಬಂದಮೇಲೆ ಇವರಿಬ್ಬರೂ ಕೈಜೋಡಿಸುವ ಸಾಧ್ಯತೆ ಇದ್ದೇ ಇತ್ತಾದ್ದರಿಂದ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿರುವ ಬಿಜೆಪಿಯವರು ಕೈ ಹಿಸುಕಿಕೊಳ್ಳಬೇಕಾಗಿಲ್ಲ.

ಬಿಹಾರ ಚುನಾವಣೆಯಲ್ಲಿ ಶೇಕಡಾವಾರು ಓಟುಗಳನ್ನು ಲೆಕ್ಕ ಹಾಕಿದರೆ ಬಿಜೆಪಿ ಮುಂದಿದೆ. ಮತ ಹಾಕಿದ ಒಟ್ಟು ಜನಸಂಖ್ಯೆಯ 25.1% ಜನ ಬಿಜೆಪಿಯ ಪರವಾಗಿ ತಮ್ಮ ನಿರ್ಣಯ ಕೊಟ್ಟಿದ್ದಾರೆ. ಆರ್ಜೆಡಿ, ಜೆಡಿಯು ಕ್ರಮವಾಗಿ 18.1%, 16.6% ಓಟುಗಳನ್ನು ಪಡೆದಿವೆ. ಕಾಂಗ್ರೆಸ್ ಪಡೆದ ಒಟ್ಟು ಮತಗಳು ಕೇವಲ 6.3%. ಆದರೆ, ಈ ಲೆಕ್ಕಗಳನ್ನು ಇಟ್ಟುಕೊಂಡು ಪ್ರಯೋಜನ ಇಲ್ಲ. ಚುನಾವಣೆಯಲ್ಲಿ ಯಾರು ಹೆಚ್ಚು ಜನರ ಓಟು ಪಡೆದರು ಎನ್ನುವುದಕ್ಕಿಂತಲೂ ಯಾವ ಪಕ್ಷ ಹೆಚ್ಚು ಸೀಟುಗಳನ್ನು ಗೆದ್ದಿತು ಎನ್ನುವುದಷ್ಟೇ ಪರಿಗಣಿಸಲ್ಪಡುವ ಅಂಶ ತಾನೆ? ಬೇಕಾದರೆ ಇಂತ ಅಂಕಿಅಂಶಗಳನ್ನು ಟಿವಿ ಚರ್ಚೆಗಳಲ್ಲಿ ಭಾಗವಹಿಸುವವರು ತಮ್ಮನ್ನು ಸಮರ್ಥಿಸಿಕೊಳ್ಳಲು ಬಳಸಬಹುದು ಅಷ್ಟೆ. ಚುನಾವಣೆ ಮುಗಿದಿದೆ. ಮಹಾಗಠಬಂಧನ ಸ್ಪಷ್ಟ ಬಹುಮತ ದಾಖಲಿಸಿದೆ. ಇನ್ನೆರಡು ದಿನಗಳಲ್ಲಿ ಅಧಿಕಾರವನ್ನೂ ಹಿಡಿಯಲಿದೆ; ಗದ್ದುಗೆಯನ್ನೂ ಏರಲಿದೆ. ಅಷ್ಟು ಮಾತ್ರ ಮುಖ್ಯ.

ಬಿಜೆಪಿ ಸೋಲಿಗೆ ಕಾರಣ ಏನು? ಬಹುಶಃ ಈ ವಿಷಯ ಮುಂದಿನ ಆತ್ಮಾವಲೋಕನ ಸಭೆಗಳಲ್ಲಿ ಚರ್ಚೆಗೆ ಬರಬಹುದು. ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಅನುಭವಿಸುತ್ತಿರುವ ಎರಡನೇ ಅಸೆಂಬ್ಲಿ ಸೋಲು ಇದು. ದೆಹಲಿ ಮತ್ತು ಬಿಹಾರ – ಈ ಎರಡೂ ಕಡೆಗಳಲ್ಲೂ ಬಿಜೆಪಿಗೆ ಮೋದಿಯೇ ಟ್ರಂಪ್ ಕಾರ್ಡ್ ಆಗಿದ್ದರು ಎನ್ನುವುದನ್ನು ಗಮನಿಸಬೇಕು. ರಾಜಕೀಯದಲ್ಲಿ ಏನೇನೂ ಅನುಭವ ಇಲ್ಲದಿದ್ದ ಕಿರಣ್ ಬೇಡಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತೋರಿಸಿ ದೆಹಲಿಯಲ್ಲಿ ಸೋತರೆ, ಬಿಹಾರದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಬಿಜೆಪಿ ಮಣ್ಣುಮುಕ್ಕಿತು! ಬಿಹಾರದಂಥ ರಾಜ್ಯಗಳಲ್ಲಿ ಅಭಿವೃದ್ಧಿಯ ಮಾತು ಮುಖ್ಯವಾಗುವುದಿಲ್ಲ ಎನ್ನುವುದನ್ನು ಬಿಜೆಪಿ ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನ್ನುವುದು ಆಶ್ಚರ್ಯಕರ. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಡ ಮುಂತಾದ ರಾಜ್ಯಗಳಲ್ಲಿ ಉಳಿದೆಲ್ಲ ವಿಷಯಗಳಿಗಿಂತಲೂ ರಾಜ್ಯಮಟ್ಟದ ನಾಯಕ ಯಾರು ಎನ್ನುವುದೇ ಮುಖ್ಯ ಚುನಾವಣಾ ವಿಷಯವಾಗುತ್ತದೆ. ಅಭಿವೃದ್ಧಿಯ ಕನಸನ್ನು ಇಲ್ಲಿಯ ಜನ ಕಾಣುವುದೇ ಇಲ್ಲವಾದ್ದರಿಂದ ತಮ್ಮ ರಾಜ್ಯ ಹಿಂದುಳಿದಿರುವುದು ದೊಡ್ಡ ಕೊರತೆ ಎಂದು ಇವರು ಭಾವಿಸುವುದಿಲ್ಲ. ಲಾಲೂ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಅವರು ಬನಿಯನ್ ಹಾಕಿಕೊಂಡು ಓಡಾಡುವುದು, ಹಟ್ಟಿಯಲ್ಲಿ ಹಾಲು ಕರೆಯುವುದು – ಮುಂತಾದ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ತಮ್ಮ ಮುಖ್ಯಮಂತ್ರಿಯೂ ತಮ್ಮಂತೆಯೇ ಇದ್ದಾನೆ ಎಂದು ಜನ ಅದನ್ನು ಮ್ಯಾಟರ್ ಆಫ್ ಪ್ರೈಡ್ ಎಂದು ಭಾವಿಸುತ್ತಿದ್ದರು. 900 ಕೋಟಿ ರುಪಾಯಿಯ ಮೇವನ್ನು ನುಂಗಿ ನೀರುಕುಡಿದಿರುವ ಈ ನಾಯಕ ಈಗಲೂ ಬಗೆಬಗೆಯ ವಿಚಿತ್ರ ಹಾವಭಾವಗಳನ್ನು ಪ್ರದರ್ಶಿಸುತ್ತ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದಾನೆಂದರೆ ಬಿಹಾರದ ಜನ ಯಾರನ್ನು ನಾಯಕನಾಗಿ ಒಪ್ಪಿಕೊಳ್ಳುತ್ತಾರೆ ಎನ್ನುವುದನ್ನು ತಿಳಿಯಬಹುದು. ಈಗಂತೂ ಲಾಲೂ, ನಿತೀಶ್ ಕುಮಾರ್ಗಿಂತಲೂ ಹೆಚ್ಚು ಸೀಟುಗಳನ್ನು ಪಡೆದಿರುವುದರಿಂದ, ಅವರು ಹೇಳಿದ ಷರತ್ತುಗಳಿಗೆಲ್ಲ ನಿತೀಶ್ ಒಪ್ಪಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ನಿತೀಶ್ ಪಟ್ಟುಹಿಡಿದರೆ ಮತ್ತು ಅದಕ್ಕೆ ಆರ್ ಜೆ ಡಿ ಆಕ್ಷೇಪ ವ್ಯಕ್ತಪಡಿಸಿದರೆ, ಬಿಹಾರ ಗೊಂದಲದ ಗೂಡಾಗಬಹುದು. ಚುನಾವಣೆಯ ನಂತರ ಸಂಭವಿಸಬಹುದಾದ ಈ ಸಮಸ್ಯೆಯನ್ನು ಜನರಿಗೆ ವಿವರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎನ್ನಬಹುದು.

ಎರಡನೆಯದಾಗಿ, ಬಿಹಾರದ ಜನತೆಗೆ ನಿತೀಶ್ ಮತ್ತು ಲಾಲೂ ಮೇಲಿರುವ ವಿಶ್ವಾಸವನ್ನು ಅಲುಗಾಡಿಸಲು ಪ್ರಧಾನಿ ಮೋದಿಗೆ ಸಾಧ್ಯವಾಗಿಲ್ಲ. ತನ್ನ ಹಲವು ಚುನಾವಣಾ ರ್ಯಾಲಿಗಳಲ್ಲಿ ಮೋದಿ ಅಲ್ಲಿನ ಲೋಕಲ್ ನಾಯಕರನ್ನು ಹೀನಾಯವಾಗಿ ಆಡಿಕೊಂಡರು ಎಂಬ ಮಾತುಗಳಿವೆ. ಅದು ನಿಜವೇ ಆಗಿದ್ದರೆ ಬಿಹಾರದ ಜನ ಅದಕ್ಕೆ ತಕ್ಕ ಮುಯ್ಯಿ ತೀರಿಸಿಕೊಂಡಿರಬಹುದು. ಅಲ್ಲದೆ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ, ಬಿಹಾರದಲ್ಲಿ ಬಿಜೆಪಿ ಸೋತರೆ ಪಾಕಿಸ್ತಾನದಲ್ಲಿ ಪಟಾಕಿ ಸಿಡಿಯುತ್ತದೆ ಎಂಬ ಮಾತುಗಳನ್ನಾಡಿದರು. ತಮ್ಮ ರಾಜ್ಯವನ್ನು ಪಾಕಿಸ್ತಾನಕ್ಕೆ ಹೋಲಿಸುವುದನ್ನು ಬಿಹಾರಿಗಳು ಖಂಡಿತಾ ಇಷ್ಟಪಟ್ಟಿರಲಾರರು. ಮೋದಿ ಮತ್ತು ಅಮಿತ್ – ಈ ಇಬ್ಬರು ನಾಯಕರೂ ಬಿಹಾರದ ರಾಜ್ಯಮಟ್ಟದ ನಾಯಕರನ್ನು ಪೂರ್ಣಪ್ರಮಾಣದಲ್ಲಿ ನಂಬಲಿಲ್ಲ ಎನ್ನುವುದು ಸತ್ಯ. ಕನಿಷ್ಠ ಎರಡು ವರ್ಷಗಳ ಹಿಂದಿನಿಂದ ಅಲ್ಲಿನ ರಾಜ್ಯ ನಾಯಕರನ್ನು ಬೆಳೆಸಿದ್ದರೆ ಇಂದು ಬಿಜೆಪಿ ಇಂಥ ಸೋಲನ್ನು ಉಣ್ಣಬೇಕಿರಲಿಲ್ಲ. ಮಾಧ್ಯಮಗಳು ಬಿಹಾರದ ಚುನಾವಣೆಯನ್ನು ನಿತೀಶ್ ಮತ್ತು ಮೋದಿಯ ನಡುವಿನ ಯುದ್ಧ ಎಂದು ಬಿಂಬಿಸಿದಾಗಲೂ ಅದನ್ನು ಬಿಜೆಪಿ ನಾಯಕರು ಆಕ್ಷೇಪಿಸಲಿಲ್ಲ. ಬದಲಿಗೆ ಅದು ತಮ್ಮ ಪರವಾಗಿರುವ ಮಾತು ಎಂದೇ ಭ್ರಮಿಸಿದರು. ಒಂದು ರಾಜ್ಯ ಸರಕಾರದ ಜೊತೆ ಪ್ರಧಾನಿ ಚುನಾವಣೆಯಲ್ಲಿ ಹೋರಾಡಬೇಕಾಗಿ ಬಂದಿದೆ ಎನ್ನುವುದು ಒಳ್ಳೆಯ ಸೂಚನೆಯಂತೂ ಅಲ್ಲ.

ಮೂರನೆಯದಾಗಿ ಈ ಚುನಾವಣೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಿಜೆಪಿ ಹಗುರವಾಗಿ ಪರಿಗಣಿಸಿತು. ಒಬ್ಬರು ಲಾಲೂ; ಇನ್ನೊಬ್ಬರು ಅಭಿಯಾನತಜ್ಞ ಪ್ರಶಾಂತ್ ಕಿಶೋರ್. ಲಾಲೂ ಬಹುಶಃ 75 ಸೀಟುಗಳನ್ನು ಗೆಲ್ಲುತ್ತಾರೆ ಎಂದು ಬಿಜೆಪಿಯ ಮೋದಿ, ಅಮಿತ್ ಶಾ, ರಾಜ್ಯನಾಯಕರು, ನಿತೀಶ್ ಕುಮಾರ್ ಮತ್ತು ಸ್ವತಃ ಲಾಲೂ ಭಾವಿಸಿದ್ದಿರಲಾರರು. ಆದರೆ ಕಳೆದ ಬಾರಿ ಕಂಡ ಹೀನಾಯ ಸೋಲನ್ನು ಮೆಟ್ಟಿನಿಲ್ಲುವ ಮತ್ತು ಈ ಬಾರಿಯ ಮೈತ್ರಿ ಸರಕಾರದಲ್ಲಿ ಪ್ರಬಲ ಭಾಗವಾಗುವ ಅನಿವಾರ್ಯತೆ ಲಾಲೂ ಅವರಿಗಿತ್ತು. ಅದಕ್ಕಾಗಿ ಅವರು ಹಗಲಿರುಳು ಕೆಲಸ ಮಾಡಿದ್ದಾರೆ ಎನ್ನುವುದೂ ಸತ್ಯ. ಲಾಲೂ ಒಬ್ಬ ಕುಸ್ತಿಪಟು. ಅವರು ಸುಲಭಕ್ಕೆ ಸೋಲೊಪ್ಪಿಕೊಳ್ಳುವವರಲ್ಲ. ಸಮೋಸಾದಲ್ಲಿ ಎಂದಿನವರೆಗೆ ಆಲೂ ಇರುತ್ತದೋ ಬಿಹಾರದಲ್ಲಿ ಅಲ್ಲಿಯವರೆಗೆ ನಾನೂ ಇರುತ್ತೇನೆ ಎಂದು ಹೇಳಬೇಕಾದರೆ ಆ ವ್ಯಕ್ತಿಗೆ ನಿಜವಾದ ಧಂ ಇರಬೇಕಾಗುತ್ತದೆ. ಲಾಲೂ ಕೇವಲ ಬಾಯ್ಮಾತಿಗೆ ಹಮ್ರಾ ಬಿಹಾರ್ ಎನ್ನುವುದಲ್ಲ; ಅವರಿಗೆ ನಿಜವಾಗಿಯೂ ಆ ರಾಜ್ಯದ ನಾಡಿಮಿಡಿತ ಗೊತ್ತಿದೆ. ಬಿಹಾರದ ಜನ ಯಾವ ಮಾತಿಗೆ ತಲೆದೂಗುತ್ತಾರೆ; ಯಾವುದನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ ಎನ್ನುವುದು ಲಾಲೂ ಮತ್ತು ನಿತೀಶ್ ಇಬ್ಬರಿಗೂ ಬಹಳ ಚೆನ್ನಾಗಿ ಗೊತ್ತು. ಹೊಸ ವೈದ್ಯನಿಗಿಂತ ಹಳೆ ರೋಗಿಯೇ ವಾಸಿ ಎನ್ನುವುದು ಬಿಹಾರದ ಜನತೆಯ ತೀಮರ್ಾನವಾಗಿದ್ದರಿಂದ ಅವರು ಮೋದಿಗಿಂತ ಹೆಚ್ಚಿನ ನಂಬಿಕೆಯನ್ನು ಲಾಲೂ ಮೇಲಿಟ್ಟರು ಎನ್ನಬಹುದು. ಇನ್ನು, ಬಿಜೆಪಿ ಗಂಭೀರವಾಗಿ ಪರಿಗಣಿಸದ ಇನ್ನೋವ ವ್ಯಕ್ತಿ ಪ್ರಶಾಂತ್ ಕಿಶೋರ್. 2012ರಲ್ಲಿ ಗುಜರಾತ್ ಚುನಾವಣೆಯಲ್ಲಿ ಮೋದಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿದವರು ಇವರೇ. 2014ರಲ್ಲಿ ದೇಶದ ಲೋಕಸಭೆ ಚುನಾವಣೆ ನಡೆದಾಗಲೂ ಪ್ರಶಾಂತ್ ಅವರೇ ಬಿಜೆಪಿಯ ಅಭಿಯಾನವನ್ನು ರೂಪಿಸಿದವರು. ಈ ವರ್ಷದ ಅಸೆಂಬ್ಲಿ ಚುನಾವಣೆಗೆ ನಿತೀಶ್ ಕುಮಾರ್ ಇದೇ ವ್ಯಕ್ತಿಯನ್ನು ತನ್ನ ಅಭಿಯಾನದ ಉಸ್ತುವಾರಿ ನೋಡಿಕೊಳ್ಳಲು ನೇಮಿಸಿದರು. ಒಂದು ಚುನಾವಣೆಯಲ್ಲಿ ಗೆದ್ದುಬರಲು ಅಭಿಯಾನ ಎಷ್ಟೊಂದು ಮುಖ್ಯ ಎನ್ನುವುದು ಮೋದಿಯವರಿಗೆ ಬಹಳ ಚೆನ್ನಾಗಿ ಗೊತ್ತು. ಮತ್ತು ಅವರ ಎರಡು ವಿಜಯಗಳನ್ನು ಕಣ್ಣಾರೆ ಕಂಡಿರುವ ನಿತೀಶರಿಗೂ ಅದು ಗೊತ್ತಾಗಿತ್ತು! ಕೋಲು ಕೊಟ್ಟು ಪೆಟ್ಟು ತಿಂದ ಸ್ಥಿತಿ ಈಗ ಬಿಜೆಪಿಯದ್ದಾಗಿದೆ. ತಮ್ಮಲ್ಲಿ ದುಡಿದು ತಜ್ಞನಾಗಿ ತಯಾರಾದ ವ್ಯಕ್ತಿಯನ್ನು ಅದು ಉಳಿಸಿಕೊಂಡಿದ್ದರೆ, ಅಷ್ಟರಮಟ್ಟಿಗಿನ ನಷ್ಟವನ್ನು ತಪ್ಪಿಸಬಹುದಾಗಿತ್ತು.

ಆದದ್ದು ಆಗಿಹೋಯಿತು. ಲಾಲೂ-ನಿತೀಶರ ನಡುವೆ ಒಡಕು ಮೂಡದೇ ಇದ್ದರೆ ಬಿಹಾರದಲ್ಲಿ ಮುಂದಿನ ಐದು ವರ್ಷಗಳವರೆಗೆ ಸ್ಥಿರಸಕರ್ಾರ ಇರುತ್ತದೆ. ಇದು ತನ್ನ ಜನಪ್ರಿಯತೆಯ ಪರೀಕ್ಷೆ ಎಂದು ಮೋದಿಯೂ ಭಾವಿಸಿರಬಹುದಾದ್ದರಿಂದ, ಅವರಿಗೂ ಈ ಚುನಾವಣಾ ಫಲಿತಾಂಶ ಕೆಟ್ಟಕನಸಾಗಿ ಕಾಡಲಿದೆ. ಮೋದಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆದರೂ ಜನಸಾಮಾನ್ಯರನ್ನು ತೀವ್ರವಾಗಿ ತಟ್ಟುವ ಜನಪ್ರಿಯ ಯೋಜನೆಗಳನ್ನು ಘೋಷಿಸಿಲ್ಲ ಎನ್ನುವ ಅಂಶವೂ ಈ ಚುನಾವಣೆಯಲ್ಲಿ ಕೆಲಸ ಮಾಡಿರಬಹುದು. ಅವರು ಸ್ವಚ್ಛಭಾರತ ಅಭಿಯಾನ ಆರಂಭಿಸಿದರು; ಜನಧನ ಯೋಜನೆ ರೂಪಿಸಿದರು; ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಿಡುವಂತೆ ಕೇಳಿಕೊಂಡರು. ಎಲ್ಲವೂ ಸರಿ. ಆದರೆ ಇದುವರೆಗೆ ಕಾಂಗ್ರೆಸ್ ಸರಕಾರಗಳು ಮಾಡಿದಂತೆ ತಕ್ಷಣದಲ್ಲಿ ಅನುಕೂಲವಾಗುವಂಥ, ಕೈಗೆ ಹಣ ಬರುವಂಥ “ಜನಪ್ರಿಯ” ಯೋಜನೆಗಳನ್ನು ಘೋಷಿಸಿಲ್ಲ. ಲೋಕಸಭೆ ಚುನಾವಣೆಗೆ ಮೊದಲು ಮೋದಿ ಕಪ್ಪುಹಣ ವಾಪಸ್ ತರುವ ಬಗ್ಗೆ ಆವೇಶಭರಿತರಾಗಿ ಮಾತಾಡಿದ್ದರು. ಅಷ್ಟೂ ಹಣವನ್ನು ವಾಪಸು ತಂದರೆ ಭಾರತದ ಪ್ರತಿಯೊಬ್ಬ ಪ್ರಜೆಯ ಅಕೌಂಟಿನಲ್ಲೂ ಹದಿನೈದು ಲಕ್ಷದಷ್ಟು ದುಡ್ಡು ಬರಲಿದೆ ಎಂದಿದ್ದರು. ಇದು ಆ ದುಡ್ಡಿನ ಮೌಲ್ಯದ ಅಗಾಧತೆಯನ್ನು ಸೂಚಿಸಲು ಬಳಸಿದ ಒಂದು ಉದಾಹರಣೆಯಾಗಿತ್ತೇ ವಿನಾ ಮೋದಿ ಎಂದೂ ಪ್ರತಿಯೊಬ್ಬರ ಅಕೌಂಟಿಗೆ ಹದಿನೈದು ಲಕ್ಷ ರುಪಾಯಿ ಹಾಕುತ್ತೇನೆಂದು ವಾಗ್ದಾನ ಮಾಡಿರಲಿಲ್ಲ. ಮತ್ತು ಅಂತಹ ವಾಗ್ದಾನವನ್ನು ಯಾವ ಪ್ರಧಾನಿಯೂ ನೆರವೇರಿಸಿಕೊಡುವುದೂ ಇಲ್ಲ. ಆದರೆ, ಜನರನ್ನು ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡಲು ಕಾಂಗ್ರೆಸ್ ಮತ್ತು ಮೈತ್ರಿಪಕ್ಷಗಳು ಈ ಮಾತುಗಳನ್ನು ಬಹಳ ಜಾಣ್ಮೆಯಿಂದ ಬಳಸಿಕೊಂಡವು. “ನೋಡಿ, ಮೋದಿ ಆಗ ಹಾಗೆ ಹೇಳಿದ್ದರು. ಈಗೇನಾದರೂ ನಿಮ್ಮ ಅಕೌಂಟಿಗೆ ಹದಿನೈದು ಲಕ್ಷ ಬಂದಿದೆಯೆ?” ಎಂದು ರಾಹುಲ್ ಗಾಂಧಿ ಹೋದಲ್ಲೆಲ್ಲ ಜನರನ್ನು ಪ್ರಶ್ನಿಸುತ್ತಿದ್ದರು. ಇದು ತುಂಬ ಕೀಳುಮಟ್ಟದ ಪ್ರಚಾರ ತಂತ್ರ. ಕಾಂಗ್ರೆಸ್ ಇಂಥ ಅಪ-ಪ್ರಚಾರಗಳ ಮೂಲಕವೇ ಇಷ್ಟು ದಶಕಗಳ ಚುನಾವಣೆಗಳನ್ನು ಗೆದ್ದುಕೊಂಡು ಬಂದಿದೆ. ಜನರನ್ನು ಹೇಗೆ ಭಾವನಾತ್ಮಕವಾಗಿ ರೈಲು ಹತ್ತಿಸಿ ಮೂರ್ಖರನ್ನಾಗಿಸಬೇಕು ಎನ್ನುವುದು ಅದಕ್ಕೆ ಚೆನ್ನಾಗಿ ತಿಳಿದಿದೆ. ಬಿಹಾರದ ಚುನಾವಣೆಯಲ್ಲಿ ರಾಹುಲ್ ಗಾಂಧಿ, ನಿತೀಶ್ ಕುಮಾರ್ ಮತ್ತು ಲಾಲೂ ಜನರಿಗೆ ಮೋದಿಯ ಬಗ್ಗೆ ದ್ವೇಷ ಹುಟ್ಟುವಂಥ ಮಾತುಗಳನ್ನು ಸಮರೋಪಾದಿಯಲ್ಲಿ ಆಡಿದರು. ಅವರನ್ನು ತಡೆಯುವಂಥ ಸಮರ್ಥರು ಅಲ್ಲಿನ ರಾಜ್ಯ ಬಿಜೆಪಿ ಪಾಳೆಯದಲ್ಲಿ ಇರಲಿಲ್ಲ ಎನ್ನುವುದು ನಗ್ನಸತ್ಯ.

ಬಿಹಾರದ ಚುನಾವಣೆ ಮುಗಿದಿದೆ. ಮುಂದೆ ಸಾಲುಸಾಲು ಅಸೆಂಬ್ಲಿ ಚುನಾವಣೆಗಳು ಕಾದಿವೆ. ಅಸ್ಸಾಂ, ತಮಿಳುನಾಡು ಚುನಾವಣೆಗಳು ಹತ್ತಿರದಲ್ಲಿವೆ. ಇನ್ನೆರಡೂವರೆ ವರ್ಷ ಕಳೆವಷ್ಟರಲ್ಲಿ ಕರ್ನಾಟಕ ಕೂಡ ಇನ್ನೊಂದು ಚುನಾವಣೆಗೆ ಸಿದ್ಧಗೊಳ್ಳುತ್ತದೆ. ಆದರೆ, ಈ ಎಲ್ಲ ಎಲೆಕ್ಷನ್ನುಗಳಲ್ಲಿ ಕಾದಾಡಲು ಬಿಜೆಪಿ ತಯಾರಾಗಿದೆಯೆ? ಬಿಜೆಪಿಯಲ್ಲಿ ಇನ್ನೂ, ಎಲ್ಲ ರಾಜ್ಯ ಚುನಾವಣೆಗಳ ಪ್ರಚಾರಕ್ಕೂ ಮೋದಿಯೇ ಹೋಗಬೇಕು ಎನ್ನುವ ಪರಿಸ್ಥಿತಿ ಇದೆ. ಗುಜರಾತ್, ಮಧ್ಯಪ್ರದೇಶ, ಗೋವಾ ಮುಂತಾದ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಸಶಕ್ತ ರಾಜ್ಯಘಟಕ ಇದೆ ಎನ್ನುವುದನ್ನು ಬಿಟ್ಟರೆ ಮಿಕ್ಕ ರಾಜ್ಯಗಳಲ್ಲಿ ಬಿಜೆಪಿ ಅಸ್ತಿತ್ವದಲ್ಲೇ ಇಲ್ಲ. ಉಳಿದ ರಾಜ್ಯಗಳ ವಿಷಯ ಬಿಡಿ; ನಮ್ಮ ಕನರ್ಾಟಕದಲ್ಲಿ ಈಗಿಂದೀಗ ಚುನಾವಣೆ ನಡೆದರೆ ಬಿಜೆಪಿ ಎಷ್ಟು ಸ್ಥಾನಗಳನ್ನು ಗಳಿಸಬಹುದು? ನರೇಂದ್ರ ಮೋದಿಯೇ ಪ್ರಚಾರಕ್ಕೆ ನಿಂತರೂ ಐವತ್ತು ಸೀಟುಗಳಿಗಿಂತ ಹೆಚ್ಚಿನದನ್ನು ಗೆಲ್ಲುವಷ್ಟು ಶಕ್ತಿ ಇಲ್ಲಿನ ಬಿಜೆಪಿಯಲ್ಲಿ ಉಳಿದಿಲ್ಲ. ಯಾಕೆಂದರೆ, ದೇಶದ ಪ್ರಧಾನಿ ಅದೆಷ್ಟೇ ಭರವಸೆಗಳನ್ನು ಕೊಟ್ಟರೂ ಅದೆಷ್ಟೇ ಪ್ಯಾಕೇಜುಗಳನ್ನು ರಾಜ್ಯದ ತಲೆಮೇಲೆ ಸುರಿದರೂ ಅವನ್ನು ಸಶಕ್ತವಾಗಿ ಬಳಸಿಕೊಳ್ಳುವ ಮತ್ತು ನಿರ್ವಹಿಸಿ ತೋರಬಲ್ಲ ರಾಜ್ಯನಾಯಕ ಬೇಕು ಎನ್ನುವುದು ಎಲ್ಲರಿಗೂ ಗೊತ್ತಿದೆ. ನಿದ್ದೆ ಮಾಡುವ ಮುಖ್ಯಮಂತ್ರಿ ಇದ್ದರೆ ದೇಶದ ಪ್ರಧಾನಿ ಅದೆಷ್ಟೇ ಸಬಲ, ಸಕ್ರಿಯನಾಗಿದ್ದರೂ ಪ್ರಯೋಜನ ಇಲ್ಲ. ಮುಖ್ಯಮಂತ್ರಿ ಅದಕ್ಷನಾಗಿದ್ದರೆ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾದೀತು ಎನ್ನುವುದನ್ನು ರಾಜ್ಯದ ಜನತೆ ಕಣ್ಣಾರೆ ಕಾಣುತ್ತಿದ್ದಾರೆ. ಹಾಗಾಗಿ, ಮುಖವೇ ಇಲ್ಲದ ಬಿಜೆಪಿ ಪಕ್ಷವನ್ನು ಅಪ್ಪಿಕೊಳ್ಳಲು ಕನ್ನಡಿಗರು ಸುತಾರಾಂ ಸಿದ್ಧರಿಲ್ಲ. ಕರ್ನಾಟಕದಲ್ಲಿ ಕಮಲವನ್ನು ಅರಳಿಸಬೇಕು ಎನ್ನುವ ಆಸೆ ಮೋದಿ ಮತ್ತು ಅಮಿತ್ ಶಾ ಅವರಿಗಿದ್ದರೆ (ರಾಜ್ಯನಾಯಕರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ!); ಅವರು ಈಗಿಂದೀಗ ಕಾರ್ಯಪ್ರವೃತ್ತರಾಗಬೇಕು. ಕರ್ನಾಟಕವನ್ನು ಮುಂದೆ ಮುನ್ನಡೆಸುವವರು ಯಾರು ಎನ್ನುವುದನ್ನು ಗುರುತಿಸಿ, ಅವರನ್ನು ಮುನ್ನೆಲೆಗೆ ತಂದು, ಹೆಚ್ಚು ಸ್ವಾತಂತ್ರ್ಯ ಕೊಡಬೇಕು. ಎಲ್ಲವನ್ನೂ ತಾವಿಬ್ಬರೇ ಮಾಡಬಲ್ಲೆವೆನ್ನುವ ಅತಿವಿಶ್ವಾಸವನ್ನು ಬಿಟ್ಟು ಉಳಿದವರಲ್ಲಿ ನಂಬಿಕೆ ಇಡಲು ಶುರುಮಾಡಬೇಕು. ರಾಜ್ಯದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಕಿವುಡ ಮತ್ತು ಮೂಕವಾಗಿ ಕೂತಿರುವ ಪಕ್ಷದ ನಾಯಕರ ಬೆನ್ನಿಗೆ ಚಾಟಿ ಬೀಸಿ ಎಬ್ಬಿಸಬೇಕು. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಇವರೇ ಎಂದು ಒಬ್ಬ ಸಮರ್ಥನನ್ನು ಮುಂದಿಟ್ಟುಕೊಂಡು ಮತ ಕೇಳಲು ಇಳಿಯಬೇಕು. ಇಲ್ಲವಾದರೆ, ನಾಯಕನನ್ನು ಆರಿಸಲಿಕ್ಕೂ ಸಮರ್ಥವಲ್ಲದ ಪಕ್ಷವನ್ನು ನಾವಾದರೂ ಯಾಕೆ ಆರಿಸಬೇಕು ಎಂಬ ಪ್ರಶ್ನೆ ಜನರಲ್ಲಿ ಬಂದೇ ಬರುತ್ತದೆ. ಇಷ್ಟು ಮಾಡಿದರಷ್ಟೇ ಬಿಜೆಪಿಗೆ ಕರ್ನಾಕದಲ್ಲಿ ಭವಿಷ್ಯ ಇದೆ. ಚುನಾವಣೆ ಘೋಷಣೆಯಾದ ಮೇಲೆ ಶಲ್ಯ ಕೊಡವಿಕೊಂಡು ಕೆಲಸ ಶುರು ಮಾಡುತ್ತೇವೆಂದರೆ, ಈ ಪಕ್ಷದ ಭವಿಷ್ಯವನ್ನು ಈಗಲೇ ಬರೆದಿಡಬಹುದು!

ಬಿಹಾರದಲ್ಲಿ ನಿತೀಶ್ ನಗುತ್ತಿದ್ದಾರೆ. ಲಾಲೂ ಉಲ್ಲಸಿತರಾಗಿದ್ದಾರೆ. ಬಿಜೆಪಿಯ ನಾಯಕರು ಚಿಂತಾಕ್ರಾಂತರಾಗಿದ್ದಾರೆ. ಆಗಿರುವುದೆಲ್ಲ ಒಳ್ಳೆಯದಕ್ಕೇ ನೋಡಿ! ಚೆನ್ನಾಗಿ ಆತ್ಮಾವಲೋಕನ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಸರಿಯಾದ ಹೆಜ್ಜೆಯಿಡುತ್ತ ಹೋಗಬಹುದು; ಗದ್ದುಗೆ ಗೆದ್ದವರೂ ಮುಗ್ಗರಿಸಿ ಬಿದ್ದವರೂ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!