ಅಂಕಣ

ಬದುಕೆನ್ನುವ ಸವಾಲು ಮತ್ತು ಅವಳು…

ಆಕೆಯ ಮಾತುಗಳನ್ನು ಕೇಳುತ್ತಾ ಹೋದಂತೆ ಕಣ್ಣ್ಮುಂದೆ ಮಲಾಲಳ ಹೆಣ ತೇಲುತ್ತಿತ್ತು. ಅದೆಷ್ಟೋ ತಲೆಮಾರುಗಳಿಂದ ಎಷ್ಟೊಂದು ಮಲಾಲಗಳನ್ನು ಬರ್ಬರವಾಗಿ ಕೊಂದಿದ್ದೇವೆ?! ಅವಳಿಗೀಗ ಐವತ್ತು ವರ್ಷ ವಯಸ್ಸು. ಆಗಿನ ದಿನಗಳಲ್ಲಿ ಹಳ್ಳಿಯೊಂದರಲ್ಲಿ ಮೂರು ಹೆಣ್ಣು ಒಬ್ಬ ಗಂಡು ಮಗನಿದ್ದ ಕುಟುಂಬದ ಎರಡನೆಯ ಮಗಳಿವಳು. ಹೆಣ್ಣುಮಕ್ಕಳು ಅಕ್ಷರವನ್ನು ಕಲಿತರೆ ಭಗವಂತನವಕೃಪೆಗೆ ಪಾತ್ರವಾದಂತೆಂದು ನಂಬಿದ್ದ ತಾಯಿ. ಯಾವುದನ್ನೂ ಬಲವಾಗಿ ವಿರೋಧಿಸುವ ಸಾಮರ್ಥ್ಯವಿಲ್ಲದ ಆದರೂ ಈ ಮಗಳನ್ನು ಹೆಚ್ಚೇ ಇಷ್ಟ ಪಡುವ ಅಪ್ಪ. ನಂಬಿಕೆಗಳಂತೆ, ಸಂಪ್ರದಾಯದಂತೆ ಇವಳನ್ನೂ ಮದ್ರಸಾಕ್ಕೆ ಸೇರಿಸಲಾಗಿತ್ತು. ಎಂಟನೆ ವಯಸ್ಸಿನವಳು ಬುರ್ಖ ತೊಡುವುದರ ವಿರುದ್ಧ ಮಾತನಾಡುತ್ತಾಳೆ. ಗುರುಗಳಿಗೆ ‘ನಿಮ್ಮ ಅಂಗಾಂಗಳಂತೆ ನನ್ನದೂ ಕೂಡ ಅಲ್ಲವೇ ?’ ಎಂದು ಪ್ರಶ್ನಿಸುತ್ತಾಳೆ. ಇನ್ನೆಂದೂ ಪ್ರಶ್ನೆಗಳನ್ನು ಕೇಳಬಾರದೆನ್ನುವ ತಾಕೀತು ಮಾಡಿಸಿಕೊಳ್ಳುತ್ತಾಳೆ. ಇವಳೊಳಗಿದ್ದ ನಿಜಾರ್ಥದ ದೇವರು ಎಲ್ಲವನ್ನೂ ಮತ್ತೊಬ್ಬರು ಹೇಳಿಕೊಟ್ಟಂತೆ ನಂಬುವುದನ್ನಾಗಲೀ ಪಾಲಿಸುವುದನ್ನಾಗಲೀ ವಿರೊಧಿಸುತ್ತಿತ್ತು. ಒಂಭತ್ತನೇ ವಯಸ್ಸಿಗೆ ಪ್ರವಾದಿ ಮೊಹಮ್ಮದರ ಮದುವೆಯ ಬಗ್ಗೆ ಪ್ರಶ್ನಿಸಿದ ಹುಡುಗಿಯನ್ನು ಹೊಡೆದು ಬಾಯಿಮುಚ್ಚಿಸಲಾಯಿತು. ಮುಂದೆ ಮದ್ರಸಾಗಳಲ್ಲಿ, ಸುತ್ತಮುತ್ತಲಿನ ಶಾಲೆಗಳಲ್ಲಿ ಅವಳಿಗೆ ಪ್ರವೇಶವನ್ನು ನಿಷೇಧಿಸಲಾಯಿತು. ಬೆಂಗಳೂರಿನ ಹೊರವಲಯಕ್ಕೆ ಬಂದು ನೆಲೆಯೂರಿದರು ಅಪ್ಪ ಅಮ್ಮ. ಅಕ್ಷರಗಳನ್ನು ನೋಡಿದರೇ ಹೃತ್ಬಡಿತದ ಪಲ್ಲಟಕ್ಕೊಳಗಾಗುವಷ್ಟು ಧಾರ್ಮಿಕ ವ್ಯಕ್ತಿಯಾಗಿದ್ದ ಹೆಂಡತಿಯ ದುಂಬಾಲು ಬಿದ್ದು ಅಂತೂ ಅಪ್ಪ ಇವಳನ್ನು ಶಾಲೆಗೆ ಸೇರಿಸಿದ. ಸದಾ ಕಾಲ ತಾನು ತನ್ನ ಪುಸ್ತಕಗಳು ಎನ್ನುವಂತಿದ್ದ ಈ ಹುಡುಗಿಗೆ ಅಕ್ಷರಗಳೇ ಸ್ನೇಹಿತರು, ನಾಳಿನ ಕನಸುಗಳು. ಊರಿನ ಕಡೆಗೆ ಹೋದಾಗಲೆಲ್ಲಾ ಸಿಗುವ ಅಪರೂಪದ ಹಣ್ಣುಗಳನ್ನು ತಂದುಶಾಲೆಯಲ್ಲಿ ಮಾರಾಟ ಮಾಡಿ ಬಂದ ಪುಡಿಗಾಸಿನಲ್ಲಿ ಅಮ್ಮನ ಕಣ್ಣ್ತಪ್ಪಿಸಿ ಚಂದಮಾಮ ಕೊಂಡು ಓದುತ್ತಿದ್ದಳು. ಯಾವುದೋ ಜನ್ಮದ ಸುಕೃತವೇ ಇರಬೇಕು ಪಿಯುಸಿವರೆಗೂ ವಿದ್ಯಾಭ್ಯಾಸ ನಡೆದೇ ಹೋಯಿತು. ಈಗವಳಿಗೆ ಖಗೋಳದ ಕಡೆಗೆ ಒಲವು, ಆಸಕ್ತಿ. ಇವಳ ಬೆನ್ನಿಗೆ ನಿಂತಿದ್ದ ಅಪ್ಪನನ್ನು ಅಷ್ಟರಲ್ಲಿ ಖಾಯಿಲೆ ಮೆತ್ತಗೆ ಮಾಡಿತ್ತು. ಅತ್ತೂ ಕರೆದು ಅಂತೂ ಅಮ್ಮ ಇವಳ ವಿದ್ಯಾಭ್ಯಾಸವನ್ನು ನಿಲ್ಲಿಸುವುದರಲ್ಲಿ ಯಶಸ್ವಿಯಾಗಿಯೇ ಬಿಟ್ಟಳು.

ಖಗೋಳ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂದು ಕನಸಿದ್ದ ಹಸಿ ಯೌವನದ ಹುಡುಗಿಯನ್ನು ಕಟ್ಟಾ ಮೂಲಭೂತವಾದಿಯೊಬ್ಬನೊಂದಿಗೆ ವಿವಾಹ ಎನ್ನುವ ಹೆಸರಿನಲ್ಲಿ ಕಟ್ಟಿದ್ದೂ ಆಯಿತು. ಅವನ ಕಾಮದ ಹಸಿವನ್ನು ತೀರಿಸುತ್ತಿದ್ದ ಇವಳಲ್ಲಿ ಅಕ್ಷರದ ಹಸಿವು ಹೆಚ್ಚುತ್ತಲೇ ಇತ್ತು. ಆದರೆ ಇವಳ ಕುಟುಂಬದ ಹೊಣೆ ಹೊರುತ್ತೇನೆಂದು ಮಾತುಕೊಟ್ಟು ಮದುವೆಯಾದ ಗಂಡನಿಗೆ ಇವಳು ಓದುವುದಿಲ್ಲ ಎನ್ನುವ ಭಾಷೆಯಿತ್ತಿದ್ದಳು. ನಮಾಜಿನ ಬಗ್ಗೆ ಒಲವೂ ಇಲ್ಲದ ನಂಬಿಕೆಯೂ ಇಲ್ಲದ ಹುಡುಗಿಗೆ ಈಗ ಬುರ್ಖ ತೊಟ್ಟು ಪ್ರಾರ್ಥನೆ ಮಾಡಲೇಬೇಕೆಂಬ ನಿಯಮ ಹೇರಲಾಗಿತ್ತು. ವಿರೋಧಿಸುವಾಗ ಬೀಳುತ್ತಿದ್ದ ಏಟುಗಳಿಂದ ತಪ್ಪಿಸಿಕೊಳ್ಳಲು ಅವಳು ಕಂಡುಕೊಂಡ ದಾರಿ ನಮಾಜಿನ ಟೈಂಗೆ ಸರಿಯಾಗಿ ಕೋಣೆಯ ಕದವಿಕ್ಕಿ , ಕೂಡಿಟ್ಟ ಪುಡಿಗಾಸಿನಲ್ಲಿ ತಂದು ಮುಚ್ಚಿಟ್ಟುಕೊಂಡಿದ್ದ, ಕುವೆಂಪು ಅವರ ‘ಶೂದ್ರ ತಪಸ್ವಿ’ ಪುಸ್ತಕ ಓದುವುದು. ಮದುವೆಯಾದ ಹದಿಮೂರೇ ದಿನಕ್ಕೆ ಅರಾಬಿಕ್ ಭಾಷೆ ಕಲಿತ ಪಾದರಸದಂಥಾ ಹುಡುಗಿ, ಅಕ್ಷರಗಳ ಸಹವಾಸದಿಂದ ದೂರಾಗಿ, ಅತ್ತಿಗೆ ನಾದಿನಿಯರ, ಅತ್ತೆ ಮಾವಂದಿರ ಸೇವೆ ಮಾಡುವ ಆಳಾಗಿದ್ದಳು. ಮರಳು ಗಾಡಿನ ದೇಶವೊಂದರಲ್ಲಿ ಕೆಲಸದಲ್ಲಿದ್ದು ಕುಟುಂಬಕ್ಕಾಗಿ ಹಣ ಕಳಿಸುತ್ತಿದ್ದ ಗಂಡ ವರ್ಷಕ್ಕೊಮ್ಮೆ ಬಂದು ಇವಳೊಡನೆ ಮಲಗಿ ಹೋಗುತ್ತಿದ್ದ. ಅವಳೇ ಹೇಳಿದಂತೆ ಶಾಲೆಗಳಲ್ಲಿ ಇರುವ ವ್ಯಾಯಾಮದ ಪೀರಿಯಡ್’ಗಳಂತೆ ಮುಗಿದು ಹೋಗುತ್ತಿತ್ತು ಆ ಸಂದರ್ಭಗಳು. ಉಳಿದೆಲ್ಲಾ ಸಮಯದಲ್ಲೂ ಅವನಿಂದ ಧರ್ಮ ಬೋಧನೆಯಾಗುತ್ತಿತ್ತು. ಗರ್ಭಿಣಿಯಾದಳು. ವರ್ಷಕ್ಕೊಮ್ಮೆ ಭೇಟಿಯಾಗುವ ಗಂಡನ ಹೆಂಡತಿ ಈಗ ಮುದ್ದಾದ ಗಂಡು ಮಗುವಿನ ತಾಯಿ. ತಾಯ್ತನವೂ ಅಕ್ಷರದ ಹಸಿವನ್ನು ನೀಗಿಸದಾಯಿತು. ಕಣ್ಣೀರಿನ ಲೆಕ್ಕವೂ ಬತ್ತಿಹೋಗಿತ್ತು. ಎರಡೇ ವರ್ಷಗಳಲ್ಲಿ ಹೆಣ್ಣು ಮಗು ಹುಟ್ಟಿತು. ನಮಾಜು ಮಾಡದೆ, ಬುರ್ಖ ತೊಡದೆ, ಓದುವ ಆಸೆ ಹೊತ್ತ ಇವಳು ಧರ್ಮಭ್ರಷ್ಟೆ ಎನಿಸಿದ್ದಳು. ಅದಕ್ಕೇ ಆಸ್ಪತ್ರೆಯಿಂದ ಹೊರಬರಲು ಕಟ್ಟಬೇಕಿದ್ದ ಹಣವನ್ನು ಗಂಡ ಕೊಡಲು ನಿರಾಕರಿಸಿದ. ಕೈಯಲ್ಲಿದ್ದ ಒಂದೇ ಚಿನ್ನದ ಬಳೆ0ಯನ್ನು ಅಲ್ಲಿನ ನರ್ಸ್ ಕೈಗಿತ್ತು ಮಗುವಿನೊಡನೆ ಅಂತೂ ಅದೇ ಮನೆ ಸೇರಿದಳಿವಳು. ಸರಿಕಾಣದ್ದನ್ನು ಪ್ರಶ್ನಿಸುವ, ಅನ್ಯಾಯವನ್ನು ವಿರೋಧಿಸುವ ಇವಳ ಮನಸ್ಸು ಒಳಗೇ ಕೊರಗುತ್ತಿತ್ತು, ಮರುಗುತ್ತಿತ್ತು. ಗಂಟಲಿನಿಂದ ಧ್ವನಿ ಹೊರಬರಲು ಧರ್ಮದ ಒತ್ತಡವಿತ್ತು. ಹೆಳವ ಬದುಕು ಇವಳೆದುರೇ ತೆವಳುತ್ತಿತ್ತು.

ಕುಟುಂಬದ ಪ್ರೀತಿ ದೊರಕದ್ದಿದ್ದೇರೇನಂತೆ ನಾನಿನ್ನ ಪ್ರೀತಿಸುತ್ತೇನೆ ಎಂದು ಬಂದಡರಿತು ಸ್ತನ ಕ್ಯಾನ್ಸರ್. ಧರ್ಮ ಪಾಲನೆ ಮಾಡದಿರುವುದರಿಂದಲೇ ಹೀಗಾಗಿದೆ ಎಂದು ಗಂಡ, ಮತ್ತೆಲ್ಲರ ಉಪದೇಶಗಳಾಯಿತು. ಅದ್ಯಾವ ಮನುಷ್ಯತ್ವ ಅವನನ್ನು ಹೊಕ್ಕಿತ್ತೋ ಅಂತೂ ಗಂಡನೆನಿಸಿಕೊಂಡವನು ಇವಳೊಡನೆ ಸಂಸಾರ ಮಾಡುತ್ತಲೇ ಇದ್ದನು. ಸ್ತನ ಊನೆಯಾಗಿದ್ದರೂ ಗಂಡ ನಿನ್ನೊಡನೆ ಸಂಸಾರ ಮಾಡುತ್ತಿದ್ದಾನೆ. ಅವನಿಗೆ ಕೃತಜ್ಞೆಯಾಗಿರು ಎಂದವರಿಗೆ ಇವಳು ಕೇಳಿಬಿಟ್ಟಿದ್ದಳು ಸ್ತನಗಳು ಮಾತ್ರ ನನ್ನ ಅಸ್ತಿತ್ವವನ್ನು ಹೇಳುವುದಾದರೆ ಹೆಣ್ಣು ನಾಯಿಗೆ ಆರೆಂಟು ಸ್ತನಗಳಿವೆ ಹಾಗಾದರೆ ಅವನ್ಯಾಕೆ ಅದರೊಡನೆ ಮಲಗೋಲ್ಲ. ಈ ಗೊಂದಲ, ಕಳವಳ, ಕಷ್ಟಗಳಲ್ಲೇ ಅವಳ ಮಗಳು ಮತ್ತೆಲ್ಲಾ ಮಕ್ಕಳಿಗಿಂತ ವಿಭಿನ್ನವೆನ್ನುವ ಅರಿವಾಯಿತು. ವಯಸ್ಸಿಗೆ ತಕ್ಕ ಬುದ್ಧಿ ಬೆಳೆಯಿತು. ಆದರೆ ಅಂಗಾಂಗಳು ತಮಗಿಷ್ಟ ಬಂದ ದಿಕ್ಕಿನಲ್ಲಿ ಬೆಳೆದು ನಿಂತವು. ಮಾತು ಬಾರದಾಯಿತು. ದೇಹಕ್ಕೂ ಬುದ್ಧಿಗೂ ಹೊಂದಾಣಿಕೆಯಿಲ್ಲದ ಹುಡುಗಿ ಸಂಪೂರ್ಣವಾಗಿ ಅವಲಂಬಿತಳಾದಳು. ಇವಳು ಧರ್ಮಾಚರಣೆಗಳನ್ನು ಮಾಡದ್ದರಿಂದಲೇ ಹೀಗೆ ದೇವರೇ ಕಲಿಸುತ್ತಿರುವ ಪಾಠವೆನ್ನುವ ಕುಹಕಗಳ ನಡುವೆಯೂ ಇವಳ ಅಕ್ಷರ ಹಸಿವು ಇಂಗಲಿಲ್ಲ. ಮಗಳು ಸರಿ ಹೋಗುತ್ತಾಳೆ ಎಂದು ಬರೆದುಕೊಟ್ಟರೆ ಮಾತ್ರ ಅವಳ ಚಿಕಿತ್ಸೆಗಾಗಿ ಹಣ ಕೊಡುತ್ತೇನೆಂದು ಪಟ್ಟು ಹಿಡಿದ ಗಂಡ. ಗುಟ್ಟುಗುಟ್ಟಾಗಿ ಹಣ ಹೊಂದಿಸಲು ಹೈರಾಣಾದ ಇವಳು. ಆದರೂ ಮಕ್ಕಳನ್ನು ಇಂದಿಗೂ ಕಾಪಾಡುತ್ತಿರುವ ತಾಯಿ.

ದೂರದ ದೇಶದಿಂದ ತನ್ನಿಷ್ಟ ಬಂದಾಗ ಗಂಜಿಗಾಗುವಷ್ಟು ಹಣ ಕಳಿಸುವ, ದೇಹಕ್ಕಾಗಿ, ಧರ್ಮಪಾಲನೆಗಾಗಿ ಇವಳನ್ನು ಪೀಡಿಸುವ ನಿಂದಿಸುವ ದಂಡಿಸುವ, ಇಲ್ಲಿಗೆ ಬಂದಾಗ ಮಾನಸಿಕ ಅಸ್ವಸ್ಥನಂತೆ ಆಡಿ ಎಲ್ಲರ ಕರುಣೆಗೆ ಪಾತ್ರನಾಗುವ ಗಂಡ, ಬೆಳೆದು ನಿಂತು ಉದ್ಯೋಗಕ್ಕಾಗಿ ಅರಸುತ್ತಿರುವ ಮಗ, ವೀಲ್’ಚೇರ್ ಬಿಟ್ಟಿರಲಾದರ ಮಗಳು, ದೂರಾದ ನೆಂಟರು ಇಷ್ಟರು, ಇವರ ನಡುವೆಯೂ ಗುಟ್ಟಾಗಿ ದೂರಶಿಕ್ಷಣದಲ್ಲಿ ಎಂ.ಎ ಪದವಿ ಗಳಿಸಿಕೊಂಡ ಇವಳು. ವಯಸ್ಸಾದ ಗಂಡ ಈಗಿವಳೊಡನೆಯೆ ವಾಸಕ್ಕೆ ಬರಲಿದ್ದಾನೆ. ಅದಕ್ಕವಳ ವಿರೋಧವೇನಿಲ್ಲ. ನನಗೆ ಬುರ್ಖ ಹಾಕುವುದಕ್ಕೆ, ನಮಾಜು ಮಾಡುವುದಕ್ಕೆ ಅವನೊತ್ತಡ ಇರಬಾರದು. ಪುಸ್ತಕದೋದಿಗೆ ಅವನಡ್ಡಿಯಾಗಬಾರದು. ಮಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳ ಬಾರದು. ಅವನೊಡನೆ ಮಲಗುವುದು ನನ್ನಿಂದಾಗುವುದೇಯಿಲ್ಲ. ಇದಕ್ಕೇನಾದರು ಕಾನೂನು ಸಹಾಯ ಮಾಡಿ ಎಂದು ಕೇಳುತ್ತಾ ನನ್ನ ಮುಂದೆ ಕುಳಿತ್ತಿದ್ದಳು. ಅವಕಾಶವಿದ್ದಿದ್ದರೆ ಆಕಾಶವನ್ನು ಸಾಧಿಸಬಲ್ಲವಳಾಗಿದ್ದ ಈ ಹೆಣ್ಣನ್ನು ನೋಡುತ್ತಿದ್ದೇನೆ. ಎಲ್ಲಾ ಧರ್ಮಗಳಲ್ಲೂ, ಮನೆಗಳಲ್ಲೂ ಇಂತಹ ಎಷ್ಟು ಜನ ಮಲಾಲಗಳನ್ನು ಕೊಂದಿದ್ದೇವೆ ನಾವು ?? ಕ್ಷಮೆ ಕೇಳಬೇಕೆನಿಸುತ್ತಿದೆ. ಆದರೆ ಯಾರನ್ನು ?! ಧರ್ಮ ಯಾವುದಾದರೇನು? ಕಟ್ಟುಪಾಡುಗಳ ವಿಧಾನ ಬೇರೆಯಾದರೇನು ? ಹೆಣ್ಣುಗಳ ಹಪಹಪಿಕೆ ಮಾತ್ರ ಒಂದೇ ತೆರನಾದದ್ದು, ಧರ್ಮಾತೀತವಾದದ್ದು ಎಂದುಕೊಳ್ಳುತ್ತಾ ನಿಮ್ಮ ಮುಂದೆ ನಿರ್ಲಿಪ್ತಳಾಗಿ ಇವಳ ಕಥೆಯ ಒಂದಿನಿತನ್ನು ಹಂಚಿಕೊಳ್ಳುವಾಗ ಅವಳ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇನೆ. ಅಷ್ಟರಲ್ಲೇ ಅವಳ ವಯಸ್ಸಿಗೆ ಬಂದ ಮಗಳು ನನ್ನ ಕೈ ಜಗ್ಗುತ್ತಾ, ಕಿಟಕಿಯಿಂದಾಚೆ ನೋಡುತ್ತಾ, ತನ್ನದೇ ಭಾಷೆಯಲ್ಲಿ ಹೇಳುತ್ತಿದ್ದಾಳೆ “Get up tomorrow has happenned

Facebook ಕಾಮೆಂಟ್ಸ್

ಲೇಖಕರ ಕುರಿತು

Anjali Ramanna

ವಕೀಲೀ ವೃತ್ತಿಯ ಜೊತೆಗೆ ಮಹಿಳೆ ಹಾಗೂ ಮಕ್ಕಳಿಗೆ ಉತ್ತಮ ಹಾದಿಯೊಂದನ್ನು ಕಲ್ಪಿಸಲು ‘ಅಸ್ತಿತ್ವ’ ಎನ್ನುವ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಇವರು, ಗಗನ ಸಾಕ್ಷಿ – ಜೀನ್ಸ್ ಟಾಕ್ – ಲೀಗಲಿ ಯುವರ್ಸ್ ಅಂಕಣಕಾರರು. ಆಕಾಶವಾಣಿ ಕಲಾವಿದೆಯಾದ ಇವರು ೧೭೦ ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿರುವುದಲ್ಲದೇ ಹಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಯು.ಎನ್.ಓ ದಲ್ಲಿ ಆಗ್ನೇಯ ಏಷ್ಯಾದ ಮಹಿಳೆಯರ ಕುರಿತಾಗಿ ಅಧ್ಯಯನ ನಡೆಸಿ ಡಾಕ್ಯುಮೆಂಟರಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ವೀಡಿಯೋ ಡಾಕ್ಯುಮೆಂಟರಿ ಪ್ರಸ್ತುತ ಪಡಿಸಿರುವ ಇವರು, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಐದು ಪುಸ್ತಕಗಳ ಕರ್ತೃ, ಜೀವನ ಕೌಶಲ್ಯ ತರಬೇತಿ ನಡೆಸುವ ಅಂಜಲಿ ಅವರು ಹಲವು ವಿಶ್ವವಿದ್ಯಾನಿಲಯಗಳಿಗೆ ಅತಿಥಿ ಉಪನ್ಯಾಸಕರೂ ಹೌದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!