ಕನ್ನಡದಲ್ಲಿರುವ ವೆಬ್ ತಾಣಗಳನ್ನು ಹೀಗೆ ಸುಮ್ಮನೆ ತಡಕಾಡುತ್ತಿದ್ದೆ, ಹಾಗೇ ಕಣ್ಣಿಗೆ ಬಿದ್ದ ಬರಹವೊಂದು ನನ್ನ ಗಮನ ಸೆಳೆಯಿತು. ‘ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ’ ಎಂಬ ಶೀರ್ಷಿಕೆಯಲ್ಲಿದ್ದ ಪತ್ರ, ಪ್ರಸ್ತುತ ವಿದ್ಯಮಾನಗಳ ಕುರಿತು ಆಸಕ್ತಿಯಿರುವ ನನ್ನ ಕುತೂಹಲವನ್ನು ಸಹಜವಾಗಿಯೇ ಕೆರಳಿಸಿತು, ಓದಿ ನೋಡಿದಾಗ ಕುತೂಹಲವೆಲ್ಲಾ ಮಾಯವಾಗಿ ಆಶ್ಚರ್ಯ, ದ್ವಂದ್ವ ಮೂಡಿತು. ಒಟ್ಟಿನಲ್ಲಿ ಫೀಲಿಂಗ್ ಮಿಕ್ಸ್’ಡ್ ಸ್ಟೇಟಸಿನಲ್ಲಿದ್ದೆ ನಾನು.
ಪತ್ರದ ಸಾರಾಂಶವಿಷ್ಟೇ, “ಮೋಹನ್ ಆಳ್ವರು ಕೋಮುವಾದಿ, ವಿ.ಎಚ್.ಪಿ ಜತೆಗೆ ಗುರುತಿಸಿಕೊಂಡಿದ್ದಾರೆ, ಆದ್ದರಿಂದ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನುಡಿಸಿರಿಯಲ್ಲಿ ಹೆಸರಾಂತ ಪ್ರಗತಿಪರರಾದ ಬಂಜೆಗೆರೆ ಮತ್ತು ಕುಂವೀ ಭಾಗವಹಿಸಬಾರದು” ಎಂಬುದು ಅವರ ಅಭಿಮಾನಿಗಳ ಒತ್ತಾಸೆಯಾಗಿತ್ತು. ಅದಕ್ಕವರು ಹಲವು ಕಾರಣಗಳನ್ನೂ ನೀಡಿದ್ದಾರೆ.
ಅದರಲ್ಲಿ ಬಹುಮುಖ್ಯ ಕಾರಣ ಆಳ್ವರು ಕೋಮುವಾದಿ, ಅವರು ವಿಶ್ವ ಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿಯತಿಯ ಅಧ್ಯಕ್ಷರಾಗಿದ್ದಾರೆ ಎಂಬುದು. ಇದಕ್ಕೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಅದ್ಯಾವ ದೃಷ್ಟಿಯಲ್ಲಿ ಆಳ್ವರು ಕೋಮುವಾದಿಯಾಗಿ ಕಾಣುತ್ತಾರೆ? ವಿ.ಎಚ್.ಪಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ಮಾತ್ರಕ್ಕೆ ಅವರು ಕೋಮುವಾದಿಯಾದರೆ ಸಿದ್ಧರಾಮಯ್ಯನವರು ಇಫ್ತಾರ್ ಕೂಟಗಳಲ್ಲಿ ಮುಸ್ಲಿಮರ ಜತೆಗೆ ಕಾಣಿಸಿಕೊಳ್ಳುತ್ತಾರಲ್ಲ, ಅವರನ್ನು ಮುಸ್ಲಿಂ ಎನ್ನಲಾಗುತ್ತದೆಯೇ? ರಾಜ್ಯದಲ್ಲಿ ನಡೆದ ಕೋಮುಗಲಭೆಗಳ ಹಿಂದೆ ವಿ.ಚ್.ಪಿ ಕೈವಾಡವಿದೆಯೆಂಬ ಕಾರಣಕ್ಕೆ, ಆ ವಿ.ಚ್.ಪಿ ಜೊತೆಗೆ ಆಳ್ವರಿದ್ದಾರೆ ಎಂಬ ಕಾರಣಕ್ಕೆ ಕುಂವೀ ಮತ್ತು ಬಂಜಗೆರೆಯವರು ನುಡಿಸಿರಿಯಲ್ಲಿ ಪಾಲ್ಗೊಳ್ಳಬಾರದೆನ್ನುವುದಾದರೆ ಇತ್ತೀಚೆಗೆ ಟಿಪ್ಪುವಿನ ಹೆಸರಿನಲ್ಲಿ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆದ ಕೋಮುಗಲಭೆಯಲ್ಲಿ ನಾಲ್ಕು ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಕಾರಣವೊಡ್ಡಿ ಸರ್ಕಾರೀ ಕೃಪಾಪೋಷಿತ ಕಾರ್ಯಕ್ರಮಗಳನ್ನೂ ಬಹಿಷ್ಕರಿಸುತ್ತೀರಾ ? ಆ ನಿಷ್ಠೆ, ಧೈರ್ಯ ಇದೆಯಾ?
ಅಭಿವ್ಯಕ್ತಿ ಸ್ವಾತಂತ್ಯ್ರದ ಹೆಸರಿನಲ್ಲಿ ನಡೆಯುತ್ತಿರುವ ಚಳುವಳಿಯನ್ನೂ ಉಲ್ಲೇಖಿಸಿದ್ದಾರೆ ಮಹನೀಯರು. ಆಳ್ವರು ಕುಂವೀಗೆ ಮತ್ತು ಬಂಜಗೆರೆಯವರಿಬ್ಬರಿಗೂ ತಮ್ಮ ವಿಚಾರವನ್ನು ನುಡಿಸಿರಿಯಲ್ಲಿ ಮಂಡಿಸುವ ಅವಕಾಶವನ್ನು ನೀಡಿದ್ದರು. ಇಬ್ಬರೂ ಕೂಡ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ತಮ್ಮ ಪ್ರಗತಿಪರ ವಿಚಾರವಾದವನ್ನು ಸೋ ಕಾಲ್ಡ್ ಕೋಮುವಾದಿಗಳ ನೆಲದಲ್ಲೇ ಮಂಡಿಸಬಹುದಿತ್ತು. ಊಹೂ… ಅದಕ್ಕೆ ಅಭಿಮಾನಿ ದೇವರುಗಳೇ ಅಡ್ಡಗಾಲಿಟ್ಟರು. ಆದರೆ ಆಳ್ವರು ನಿಜವಾಗಿಯೂ ಕೋಮುವಾದಿಯಾಗಿದ್ದರೆ ಭಿನ್ನ ಅಭಿಪ್ರಾಯವನ್ನು ಹೊಂದಿರುವವರು ಎಂಬುದು ಗೊತ್ತಿದ್ದೂ ಇವರಿಗೆಲ್ಲಾ ಅಂತಹಾ ಸುವರ್ಣಾವಕಾಶವನ್ನು ಕೊಡುತ್ತಿದ್ದರೇ? ಆಳ್ವರು ವಿ.ಎಚ್.ಪಿ ಜತೆ ಗುರುತಿಸಿಕೊಂಡಿದ್ದಾರೆ ಎಂಬುದನ್ನು ನಿಮಗೆಲ್ಲಾ ಸಹಿಸಲು ಸಾಧ್ಯವಾಗುತ್ತಿಲ್ಲಾ ಎಂದಾದರೆ ಬಹುಸಂಖ್ಯಾತ ಜನರ ಭಾವನೆಗಳ ಮೇಲೆ ನಿರಂತರ ದಬ್ಬಾಳಿಕೆಯಾಗುತ್ತಿದೆ. ನಾವು ಸಹಿಸಿಕೊಳ್ಳುವುದು ಹೇಗೆ? ಅಸಹಿಷ್ಣುತೆ ಇರುವುದು ಯಾರಲ್ಲಿ? ಕೃತಕ ಅಸಹಿಷ್ಣುತೆಯನ್ನು ಸೃಷ್ಟಿ ಮಾಡುತ್ತಿರುವುದು ಯಾರು?
ಮೋಹನ್ ಆಳ್ವರನ್ನು ಟೀಕಿಸಲು ಈ ಪ್ರಗತಿಪರರೆಲ್ಲಾ ಯಾವ್ಯಾವ ಕಾರಣಗಳನ್ನು ಹುಡುಕಿದ್ದಾರೆ ನೋಡಿ. ಅನಂತ ಮೂರ್ತಿಯವರು ತೀರಿಕೊಂಡಾಗ ಅಳ್ವಾಸ್ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಿರಲಿಲ್ಲವಂತೆ. ನುಡಿಸಿರಿಯನ್ನು ಬಹಿಷ್ಕರಿಸುವುದಕ್ಕೆ ಅದೂ ಒಂದು ಕಾರಣಾನಾ? ಮತ್ತೊಂದು ಏನೆಂದ್ರೆ ಕಲ್ಬುರ್ಗಿಯವರನ್ನು ಕೊಂದಾಗ ಆಳ್ವರು ಕನಿಷ್ಠ ನೂರು ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿಲ್ಲವಂತೆ. ಅಯ್ಯಾ.. ಆಳ್ವರು ಕಲ್ಬುರ್ಗಿಯವರ ನೆನಪಿನಲ್ಲಿ “ನಾಡೋಜ ಡಾ. ಎಂ ಎಂ ಕಲ್ಬುರ್ಗಿ ನೆನಪು’ ಎಂಬ ವಿಚಾರಗೋಷ್ಠಿಯನ್ನೇ ಈ ಭಾರಿಯ ನುಡಿಸಿರಿಯಲ್ಲಿ ಏರ್ಪಡಿಸಿದ್ದಾರಲ್ಲಾ? ಎಷ್ಟು ಪ್ರತಿಭಟಿಸಿದರೂ ಪ್ರಯೋಜನಕ್ಕೆ ಬಾರದ ಸರಕಾರದ ವಿರುದ್ದ ಹತ್ತರಲ್ಲಿ ಹನ್ನೊಂದು ಎಂಬಂತೆ ನೂರು ಜನರನ್ನು ಸೇರಿಸಿ ಪ್ರತಿಭಟಿಸುವುದಕ್ಕಿಂತ, ಕಲ್ಬುರ್ಗಿಯವರ ಸಂಶೋದಧನೆಗಳನ್ನು ನವಪೀಳಿಗೆಯ ಸಾವಿರ ಜನರಿಗೆ ತಲುಪಿಸುವ ಕೆಲಸ ಒಳ್ಳೆಯದಲ್ಲವೇ? ಯಾವುದು ಅರ್ಥಪೂರ್ಣ ಹೇಳಿ?
ನನಗೆ ಎಲ್ಲಕ್ಕಿಂತಲೂ ಹೆಚ್ಚಿಗೆ ಹೇಸಿಗೆ ಹುಟ್ಟಿಸಿದ್ದು ಅಭಿಮಾನಿಗಳ ಒತ್ತಾಯದ ಮೇರೆಗೆ ಕುಂವೀ ಮತ್ತು ಬಂಜಗೆರೆಯವರು ನುಡಿಸಿರಿಯಿಂದ ಹಿಂದೆ ಸರಿಯುವ ಮೂಲಕ ತಮ್ಮ ವೈಚಾರಿಕ ಬಂಜೆತನವನ್ನು ಪ್ರದರ್ಶಿಸಿದ್ದು. ಅಭಿಮಾನಿಗಳಿಗಂತೂ ಬುದ್ಧಿಯಿಲ್ಲ, ಈ ಇಬ್ಬರು ವೈಚಾರಿಕರಿಗಾದರೂ ಬೇಡವಾ? ನುಡಿಸಿರಿಯಂತಹಾ ಪ್ರತಿಷ್ಟಿತ ಕಾರ್ಯಕ್ರಮಕ್ಕೂ ಇವರೆಲ್ಲ ಕೋಮು ಬಣ್ಣ ಬಳಿಯುತ್ತಿರುವುದೇಕೆ? ಎಂಬುದು ನನ್ನನ್ನು ಈಗಲೂ ಕಾಡುತ್ತಿದೆ. ಕುಂವೀಯವರು ಅಕಾಡೆಮಿ ಪ್ರಶಸ್ತಿಯನ್ನು ವಾಪಾಸ್ ಮಾಡಿದಾಗಲೇ ಮತ್ತು ಬಂಜಗೆರೆಯವರು ಗೋ ಮಾಂಸ ವಿಷಯದಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದಾಗಲೇ ಅವರಿಬ್ಬರ ವೈಚಾರಿಕ ದಿವಾಳಿತನ ನಮಗೆಲ್ಲಾ ಮನದಟ್ಟಾಗಿತ್ತು. ಈಗ ನುಡಿಸಿರಿಯಂತಹ ಅಕ್ಷರ ಜಾತ್ರೆಯಿಂದಲೂ ಹಿಂದೆ ಸರಿಯುವ ಮೂಲಕ ಸಂಪೂರ್ಣ ಬೆತ್ತಲಾಗಿದ್ದಾರೆ.
ಒಂದಂತೂ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಆಳ್ವರು ಶಿಕ್ಷಣ ವ್ಯಾಪಾರಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಸೂಕ್ತ ಮಾಹಿತಿಯಿಲ್ಲದೇ ಆ ಕುರಿತು ಕಾಮೆಂಟ್ ಮಾಡುವುದಿಲ್ಲ. ಆದರೆ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಆಳ್ವರು ಶಿಕ್ಷಣ ವ್ಯಾಪಾರಿಯೂ ಆಗಿರಬಹುದು, ಆದರೆ ಹಣ ತೆಗೆದುಕೊಂಡ ಮೇಲೂ ಅಷ್ಟೊಂದು ಗುಣಮಟ್ಟದ ಶಿಕ್ಷಣವನ್ನು ನೀಡುವವರು ಯಾರಿದ್ದಾರೆ ಹೇಳಿ? ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಮೂರೂ ವಲಯಗಳಲ್ಲಿ ರಾಷ್ಟ್ರಮಟ್ಟಕ್ಕೆ ಹೋದ ಶಿಕ್ಷಣ ಸಂಸ್ಥೆ ಆಳ್ವಾಸ್ ಬಿಟ್ಟರೆ ಮತ್ತೊಂದು ಇದೆಯಾ? ಎಲ್.ಕೆ.ಜಿ ಯಿಂದ ಹಿಡಿದು ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ನುಡಿಸಿರಿಯಲ್ಲಿ, ವಿರಾಸತ್ತಿನಲ್ಲಿ ತೊಡಗಿಸಿಕೊಂಡು ಅವರಲ್ಲಿ ಸಾಹಿತ್ಯ ಪ್ರೀತಿ ಮೂಡಿಸುತ್ತಿರುವ ಶಿಕ್ಷಣ ಸಂಸ್ಥೆ ಮತ್ತೊಂದು ಇದೆಯಾ? ಅಲ್ಲಾ, ದಿನದಿಂದ ದಿನ ಕಾಸ್ಟ್ಲಿಯಾಗುತ್ತಿರುವ ಜಗತ್ತಿನಲ್ಲಿ ಅಷ್ಟು ಸುಲಭವಾಗಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆಯಾ? ನೆನಪಿಡಿ. ಆಳ್ವರು ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉಚಿತ ಶಿಕ್ಷಣವನ್ನೂ ಕೊಡುತ್ತಿದ್ದಾರೆ. ಆ ಬಗ್ಗೆಯೂ ಮಾತನ್ನಾಡಿ.
ನುಡಿಸಿರಿ ಮತ್ತು ವಿರಾಸತ್… ಈ ಎರಡೂ ಅಕ್ಷರ ಜಾತ್ರೆಗಳಿಗೆ ಮತ್ತೊಂದು ಪರ್ಯಾಯವಿಲ್ಲ. ಅದಕ್ಕದೇ ಸಾಟಿ ಎನ್ನುವಂತೆ ನಡೆದು ಬರುತ್ತಿರುವ ಕಾರ್ಯಕ್ರಮ ಇವತ್ತು ದೇಶವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಆಳ್ವಾಸ್ ಎಂದರೆ ಸಾಕು ನುಡಿಸಿರಿಯೋ, ವಿರಾಸತ್ತೋ ಬಾಯಲ್ಲಿ ಬರುತ್ತದೆ. ಬಹುಶಃ ಖಾಸಗೀ ವ್ಯಕ್ತಿಯೊಬ್ಬರಿಂದ ಈ ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವ ಇಡೀ ದೇಶದಲ್ಲಿ ಮತ್ತೊಂದಿರಲಿಕ್ಕಿಲ್ಲ. ಅಂತಹಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲೂ ಪುಣ್ಯ ಮಾಡಿರಬೇಕು. ಅಂತವರಿಗೊಂದು ಸ್ಟಾಂಡರ್ಡ್ ಬೇಕು. ಅದಿಲ್ಲದವರು ಮಾತ್ರ ಪಾಲಿಗೆ ಬಂದ ಪಂಚಾಮೃತವನ್ನೂ ಕೈಯಾರೆ ಚೆಲ್ಲಿದ್ದಾರೆ. ಒಳ್ಳೆಯದೇ ಆಯಿತು ಬಿಡಿ.
ಆಗುವುದೆಲ್ಲ್ಲಾ ಒಳ್ಳೆಯದಕ್ಕೆ ಎಂದುಕೊಳ್ಳೋಣ. ಮೂಡಬಿದರೆಯಂತಹ ಸಾಹಿತ್ಯ ಪ್ರಿಯರ ಸ್ವಚ್ಚಂದ ಪರಿಸರದಲ್ಲಿದ್ದ ಕಳೆಗಳೆರಡು ತನ್ನಿಂತಾನೇ ಕಿತ್ತು ಹೋಗಿದೆ. ಅದೇ ಖುಷಿಗೆ ನುಡಿಸಿರಿಯನ್ನು ಹಿಂದೆಂದಿಗಿಂತಲೂ ವೈಭವೋಪೇತವಾಗಿ ಯಶಸ್ವೀಗೊಳಿಸೋಣ. ಆ ಮೂಲಕ ಅನಗತ್ಯ ವಿವಾದ ಸೃಷ್ಟಿಸಲು ಯತ್ನಿಸಿದ ವಿಕೃತ ಮನಸ್ಸುಗಳಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸೋಣ.
ಲಾಸ್ಟ್ ಪಂಚ್: ನುಡಿಸಿರಿಗೆ ಪರ್ಯಾಯವಾಗಿ ಮತ್ತೊಂದು ಸಮ್ಮೇಳನವನ್ನು ಮಾಡಲು ಹೊರಟಿದ್ದಾರಂತೆ ಕೆಲವರು . ಯಾರಾದರೂ ಅವರಿಗೆ ಹೇಳಿ ಅದು ಕಾಣೆ ಮೀನು, ಬಂಗುಡೆ ಮೀನನ್ನು ಆಯ್ಕೊಂಡು ತಿಂದಷ್ಟು ಸುಲಭವಲ್ಲ ಎಂದು!