ಅಂಕಣ

ಗನ್ ಹಿಡಿಯುವ ಕೈಗೆ ಪೆನ್ ಕೊಡಿ

ಜಗತ್ತು ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕ್ಷೋಭೆಗೊಳಗಾಗಿದೆ.ಅದಕ್ಕೆ ಕಾರಣವೂ ಅನೇಕರಿಗೆ ತಿಳಿದೇ ಇದೆ.ಇಸ್ಲಾಮಿಕ್ ಭಯೋತ್ಪಾದನೆಯ ಕಪಿಮುಷ್ಟಿಗೆ ಸಿಲುಕಿ ಪ್ರಪಂಚ ನರಳುತ್ತಿದೆ.ಭಾರತವೂ ಇದಕ್ಕೆ ಹೊರತಲ್ಲ.ಧರ್ಮದ ಹೆಸರಿನಲ್ಲಿ ಅಮಾಯಕರ ಹತ್ಯೆ ಮಾಡುವುದಲ್ಲದೇ ಅದನ್ನವರು ಸಮರ್ಥಿಸಿಕೊಳ್ಳುತ್ತಾರೆ ಕೂಡಾ.ಭಾರತದಲ್ಲಿ ಅವರಿಗೆ ಕೆಲವು ಢೋಂಗಿ ವಿಚಾರವಾದಿಗಳ ಮತ್ತು ಬುದ್ಧಿಜೀವಿಗಳ ಬೆಂಬಲ ಬೇರೆ.ಇತ್ತೀಚೆಗಷ್ಟೇ ಐಸಿಸ್ ಉಗ್ರರು ಪ್ಯಾರಿಸ್ ನಲ್ಲಿ ಅಟ್ಟಹಾಸ ಮೆರೆದಿದ್ದಾರೆ.ಏಕೆ ಹೀಗಾಗುತ್ತಿದೆ?ಅವರೇಕೆ ಪಶುಗಳಿಗಿಂತಲೂ ಕೀಳು ಮಟ್ಟದಲ್ಲಿ ಅನಾಗರಿಕರಂತೆ ವರ್ತಿಸುತ್ತಿದ್ದಾರೆ?

ವಿದ್ಯಾಹೀನಂ ಪಶುಸಮಾನಂ ಎಂಬ ಮಾತಿದೆ.ಆದರೆ ಹಿಂಸೆಯೇ ತಾಂಡವವಾಡುತ್ತಿರುವ ಇಂದಿನ ಸಮಾಜದಲ್ಲಿ ವಿದ್ಯಾವಂತರೆನಿಸಿಕೊಂಡವರೂ ಸಹ ಕೆಲವು ಸಲ ಪ್ರಾಣಿಗಳಿಗಿಂತ ಕೀಳಾಗಿ ವರ್ತಿಸುತ್ತಾರಾದರೂ ಮನುಷ್ಯನ ಜೀವನವನ್ನು ರೂಪಿಸುವಲ್ಲಿ ಶಿಕ್ಷಣದ ಪಾತ್ರ ಬಹಳ ಪ್ರಮುಖವಾದುದು.ವಿದ್ಯೆ ಮಾನವನಿಗೆ ವಿನಯವನ್ನು ಕಲಿಸುತ್ತದೆ.ಶಾಂತಿ ಸಹಬಾಳ್ವೆಯಿಂದ ಬದುಕುವುದನ್ನು ಕಲಿಸುತ್ತದೆ.ಇಂದಿನ ದಿನಮಾನದಲ್ಲಿ ಹಿಂಸೆಗೆ ಪ್ರಮುಖ ಕಾರಣವಾಗಿರುವ ಭಯೋತ್ಪಾದನೆಯಲ್ಲಿ ತೊಡಗಿರುವ ಉಗ್ರರೆಲ್ಲರೂ ವಿದ್ಯಾವಂತರೇ,ಸುಶಿಕ್ಷಿತರೇ? ಎಂದು ನೋಡಿದಾಗ ಅವರ ಶಿಕ್ಷಣಿಕ ಮಟ್ಟವನ್ನು ನೋಡಿದರೆ ಗಾಬರಿಯಾಗುತ್ತದೆ.

ಎಲ್ಲಾ ಮುಸ್ಲಿಮರೂ ಭಯೋತ್ಪಾದಕರಲ್ಲ,ಆದರೆ ಭಯೋತ್ಪಾದಕರೆಲ್ಲರೂ ಯಾಕೆ ಮುಸ್ಲಿಮರೇ ಆಗಿರುತ್ತಾರೆ ಎಂಬುದಕ್ಕೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ.ಹೆಚ್ಚಿನ ಭಯೋತ್ಪಾದಕರು ಅವಿದ್ಯಾವಂತರಾಗಿರುತ್ತಾರೆ.ನಿರುದ್ಯೋಗಿಗಳಾಗಿರುತ್ತಾರೆ.ಇಂಥವರನ್ನು ಮೂಲಭೂತವಾದಿಗಳು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಾರೆ.ಜಿಹಾದಿ ಶಿಕ್ಷಣದ ಮೂಲಕ ಹಿಂಸೆಯ ಮತಾಂಧತೆಯನ್ನು ಅವರ ತಲೆಯಲ್ಲಿ ತುಂಬಿ,ಸ್ವರ್ಗದ ಆಸೆ ತೋರಿಸಿ ಭಯೋತ್ಪಾದನೆಗೆ ಧುಮುಕುವಂತೆ ಮಾಡುತ್ತಾರೆ.ಅಂಥ ಭಯೋತ್ಪಾದಕರು ಸಾಂಪ್ರದಾಯಿಕ ಶಾಲಾ ಶಿಕ್ಷಣ ಪಡೆಯದೇ ಇರುವುದರಿಂದ ಬಹುತೇಕ ಸಂದರ್ಭಗಳಲ್ಲಿ ತಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬುದನ್ನು ಕೂಡಾ ವಿವೇಚಿಸುವ ಬುದ್ಧಿ ಅವರಲ್ಲಿರುವುದಿಲ್ಲ.

ಅತೀ ಸುಲಭವಾಗಿ ದೊರೆಯಬಹುದಾದ ಸಾಂಪ್ರದಾಯಿಕ ಶಾಲಾ ಶಿಕ್ಷಣ ಎಲ್ಲರಿಗೂ ಸಿಗುವಂತಾದರೆ ಜಗತ್ತಿನಲ್ಲಿ ಶಾಂತಿ ನೆಲೆಸುವುದು ಅಸಾಧ್ಯದ ಸಂಗತಿಯೇನಲ್ಲ.ಜಗತ್ತಿನಲ್ಲಿ ಅತೀ ಹೆಚ್ಚು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು ಮುಸ್ಲಿಮರು.ಇತರರಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಸಾಕ್ಷರತಾ ಪ್ರಮಾಣ ಜಗತ್ತಿನಾದ್ಯಂತ ಕಡಿಮೆಯಿದೆ.2013ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ಸಾಕ್ಷರತಾ ಪ್ರಮಾಣ ಶೇಕಡಾ 75ರಷ್ಟಿದ್ದರೆ ಮುಸ್ಲಿಮರಲ್ಲಿ ಶೇಕಡಾ 65ರಷ್ಟಿದೆ.ಜಗತ್ತಿನ ಇತರ ಇಸ್ಲಾಮಿಕ್ ರಾಷ್ಟ್ರಗಳತ್ತ ಗಮನ ಹರಿಸುವುದಾದರೆ ಪಾಕಿಸ್ತಾನದಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ 60ರಷ್ಟಿದೆ.ಅಫಘಾನಿಸ್ತಾನದಲ್ಲಿ ಕೇವಲ 47%,ನೈಜೀರಿಯಾದಲ್ಲಿ 60%,ಇರಾಕ್ ನಲ್ಲಿ 72% ಇದೆ.ಅಂದರೆ ಯಾವೆಲ್ಲಾ ರಾಷ್ಟ್ರಗಳು ಭಯೋತ್ಪಾದನೆಯಿಂದಾಗಿ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿವೆಯೋ ಅಲ್ಲೆಲ್ಲಾ ಸಾಕ್ಷರತಾ ಪ್ರಮಾಣ ಬಹಳ ಕಡಿಮೆಯಿದೆ.ವಿದ್ಯೆ ಇಲ್ಲದಿದ್ದರೆ ಮಾಡಲು ಒಳ್ಳೆಯ ಕೆಲಸವಿಲ್ಲ.ಜಗತ್ತಿನ ಒಳಿತಿಗೆ,ಬೆಳವಣಿಗೆಗೆ ಅವರಿಂದ ಏನೂ ಕೊಡುಗೆ ಕೊಡಲು ಸಾಧ್ಯವಿಲ್ಲ.ಹಾಗಾಗಿ ಕೇವಲ ಮದ್ರಸಾಗಳಲ್ಲಿ ಜಿಹಾದಿ ಶಿಕ್ಷಣ ಪಡೆದ ಅವರುಗಳು ಭಯೋತ್ಪಾದಕರಾಗದೇ ಇನ್ನೇನಾಗಬೇಕು?

ಭಾರತದಲ್ಲಿನ ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ಇನ್ನಷ್ಟು ಅಂಶಗಳನ್ನು ನೋಡೋಣ.ಭಾರತದ ಮುಸ್ಲಿಮರಲ್ಲೂ ಸಾಕ್ಷರತಾ ಪ್ರಮಾಣ ಕಡಿಮೆಯಿದೆ.ಪ್ರತಿ 25 ಮಂದಿ ಮುಸ್ಲಿಮರಿಗೆ ಒಬ್ಬ ಪದವೀಧರನಿದ್ದಾನೆ.ಭಾರತೀಯ ಸೇನೆಯಲ್ಲಿ ಕೇವಲ ಶೇಕಡಾ ಮೂರರಷ್ಟು,ಸರ್ಕಾರಿ ನೌಕರಿಯಲ್ಲಿ ಕೇವಲ ಶೇಕಡಾ 7ರಷ್ಟು,ರೈಲ್ವೆ ಇಲಾಖೆಯಲ್ಲಿ ಶೇಕಡಾ 5ರಷ್ಟು,ಬ್ಯಾಂಕ್ ಗಳಲ್ಲಿ ಶೇಕಡಾ 4ರಷ್ಟು,ನ್ಯಾಯಾಂಗ ವ್ಯವಸ್ಥೆಯಲ್ಲಿ ಶೇಕಡಾ 8ರಷ್ಟು ಮತ್ತು ನಾಗರೀಕ ಸೇವೆಯಂಥ ಅತ್ಯುನ್ನತ ಹುದ್ದೆಯಲ್ಲಿ ಶೇಕಡಾ 1.9ರಷ್ಟು ಮುಸ್ಲಿಮರಿದ್ದಾರೆ.ಹಾಗಾಗಿ ಶಿಕ್ಷಣವೊಂದೇ ಅವರ ಪಾಲಿಗೆ ಭವಿಷ್ಯದಲ್ಲಿ ಭಾಗ್ಯದ ಬೆಳಕಾಗಬಹುದು.

ಜಗತ್ತಿನಲ್ಲಿರುವ ಒಟ್ಟು ಮುಸ್ಲಿಮರಲ್ಲಿ ಶೇಕಡಾ 75ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.ಮುಸ್ಲಿಂ ಪ್ರಾಬಲ್ಯವುಳ್ಳ ರಾಷ್ಟ್ರಗಳಲ್ಲಿ ಅರೇಬಿಯಾ ಒಂದನ್ನು ಬಿಟ್ಟು ಬಹುತೇಕ ಎಲ್ಲಾ ರಾಷ್ಟ್ರಗಳು ಬಡತನದಲ್ಲಿ ಮುಳುಗಿ ಹೋಗಿವೆ.ಜಗತ್ತಿನ ಪ್ರಮುಖ ಇಸ್ಲಾಮಿಕ್ ರಾಷ್ಟ್ರಗಳಾದ ಅಫಘಾನಿಸ್ಥಾನ,ಪಾಕಿಸ್ಥಾನ,ನೈಜೀರಿಯಾ,ಸೋಮಾಲಿಯಾ,ಇರಾಕ್ ಇವೆಲ್ಲವೂ ಮುಸ್ಲಿಂ ಧರ್ಮಗುರುಗಳು ಇಲ್ಲವೆ ಬಂಡುಕೋರರು ಅಥವಾ ಭಯೋತ್ಪಾದಕ ಸಂಘಟನೆಗಳ ಮೂಲಕ ಆಳಲ್ಪಡುತ್ತಿವೆ.ಅಲ್ಲೆಲ್ಲಾ ಇಸ್ಲಾಮಿಕ್ ಮೂಲಭೂತವಾದಿಗಳದ್ದೇ ಸರ್ವಾಧಿಕಾರ.ಅಲ್ಲಿನ ಮಕ್ಕಳಿಗೆ ಸಾಂಪ್ರದಾಯಿಕ ಶಾಲಾ ಶಿಕ್ಷಣ ಗಗನ ಕುಸುಮ.ಮಗು ಹುಟ್ಟುತ್ತಲೇ ಗಂಡು ಮಗುವಾದರೆ ಅದರ ಕೈಗೆ ಬಂದೂಕು ಕೊಡುತ್ತಾರೆ,ಹೆಣ್ಣಾದರೆ ಮೈಯಿಡೀ ಬುರ್ಖಾ ತೊಡಿಸುತ್ತಾರೆ.ಎಲ್ಲೋ ಒಂದೊಂದು ಸಾಂಪ್ರದಾಯಿಕ ಶಾಲಾ ಶಿಕ್ಷಣ ನೀಡುವ ಶಾಲೆಗಳು ಹುಟ್ಟಿಕೊಂಡರೂ ಅವು ಮೂಲಭೂತವಾದಿಗಳ ಕೆಂಗಣ್ಣಿಗೆ ತುತ್ತಾಗಿ ಮುಚ್ಚಲ್ಪಡುತ್ತವೆ.ಹಾಗಾಗಿ ಎಳೆವೆಯಿಂದಲೇ ಮಾರಕಾಸ್ತ್ರಗಳ ಜೊತೆ ಆಟವಾಡುತ್ತಾ,ಮದ್ರಸಾಗಳಲ್ಲಿ ಮತಾಂಧತೆಯ ಜಿಹಾದಿ ಶಿಕ್ಷಣ ಪಡೆಯುತ್ತಾ ಬೆಳೆಯುವ ಮಕ್ಕಳು ಅವಿದ್ಯಾವಂತರಾಗಿ ನಿರುದ್ಯೋಗಿಗಳಾಗುತ್ತಾರೆ.ಕೊನೆಗೆ ಒಪ್ಪೊತ್ತಿನ ಊಟಕ್ಕೆ ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಾರೆ.ಆಗ ಅವರಿಗೆ ಎದುರಾಗುವ ಸುಲಭ ಮಾರ್ಗವೇ ಭಯೋತ್ಪಾದನೆ.ಅದರ ಬದಲು ಬಾಲ್ಯದಿಂದಲೇ ಗನ್ ಹಿಡಿಯುವ ಕೈಗೆ ಪೆನ್ ಸಿಕ್ಕಿದ್ದಿದ್ದರೆ ಜಗತ್ತು ಶಾಂತಿಯಿಂದಿರುತ್ತಿತ್ತು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುತ್ತಾರೆ.ಆದರೆ ಇಸ್ಲಾಮಿನಲ್ಲಿ ಹೆಣ್ಣುಮಕ್ಕಳ ಸ್ಥಿತಿ ಜಗತ್ತಿನಾದ್ಯಂತ ತೀರಾ ಶೋಚನೀಯವಾಗಿದೆ.ಕೇವಲ ಮಕ್ಕಳನ್ನು ಹೆರುವುದಕ್ಕಷ್ಟೇ ಅವರು ಸೀಮಿತರಾಗಿದ್ದಾರೆ.ಎಲ್ಲೋ ಒಂದಷ್ಟು ವಿದ್ಯಾವಂತ ಮುಸ್ಲಿಂ ತಂದೆ ತಾಯಿಯರು ತಮ್ಮ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸುತ್ತಾರೆ ಬಿಟ್ಟರೆ ಉಳಿದಂತೆ ತೀರಾ ಶ್ರೀಸಾಮಾನ್ಯ ಮುಸ್ಲಿಂ ಕುಟುಂಬದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟುಕದಂತಾಗಿದೆ.ಬೇರೆ ಎಲ್ಲದ್ದಕ್ಕೂ ಬೊಬ್ಬೆ ಹೊಡೆಯುವ ನಮ್ಮ ಮಹಿಳಾವಾದಿಗಳು ಈ ವಿಷಯದ ಬಗ್ಗೆ ಜಾಣ ಮೌನ ತಳೆದಿದ್ದಾರೆ.

ಮುಸ್ಲಿಂ ಸಮಾಜದಲ್ಲಿರುವ ಅಲ್ಪಸ್ವಲ್ಪ ಬುದ್ಧಿಜೀವಿಗಳು,ಸಾಹಿತಿಗಳು,ಬರಹಗಾರರು ಎಲ್ಲರೂ ತಮ್ಮ ಪಾಡಿಗೆ ತಾವು ಸಾಹಿತ್ಯಕೃಷಿ ಮಾಡುತ್ತಿರುತ್ತಾರೆಯೇ ಹೊರತು ತಮ್ಮದೇ ಧರ್ಮದಲ್ಲಿರುವ ಮೌಢ್ಯಗಳ ಬಗ್ಗೆ,ತಮ್ಮ ಜನರ ಸ್ಥಿತಿಗತಿಯ ಬಗ್ಗೆ, ಭಯೋತ್ಪಾದನೆಯ ಬಗ್ಗೆ ಧ್ವನಿಯೇ ಎತ್ತುವುದಿಲ್ಲ.ಒಂದೊಮ್ಮೆ ಯಾರಾದರೂ ಅಪ್ಪಿತಪ್ಪಿ ಮಾತನಾಡಿದರೂ ಮೂಲಭೂತವಾದಿ ಮುಸ್ಲಿಮರು ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಾರೆ.ಹಾಗಾಗಿಯೇ ತಸ್ಲೀಮಾ ನಸ್ರೀನ್,ಸಲ್ಮಾನ್ ರಶ್ದಿಯಂಥ ಬರಹಗಾರರು ದೇಶಾಂತರ ಹೋಗಬೇಕಾಯಿತು.ಇನ್ನಾದರೂ ಮುಸ್ಲಿಂ ಸಾಹಿತಿಗಳು,ಬುದ್ಧಿಜೀವಿಗಳು ಸ್ವಲ್ಪ ಎಚ್ಚೆತ್ತುಕೊಂಡು ತಮ್ಮ ಧರ್ಮದಲ್ಲಿರುವ ಅಂಧಕಾರವನ್ನು ತೊಡೆಯುವ ಸಲುವಾಗಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಲು ಪಣತೊಡಬೇಕು,ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಬೇಕು.ಗನ್ ಕೊಡುವ ಕೈಗೆ ಪೆನ್ ಕೊಡಿ ಎಂದು ತಮ್ಮ ಸಮಾಜದ ಧರ್ಮಭೀರುಗಳಿಗೆ ತಿಳಿಹೇಳುವ ಧೈರ್ಯ ಮಾಡಬೇಕು.

ವಿಶ್ವಸಂಸ್ಥೆಯ ಅಧೀನ ಸಂಸ್ಥೆಯಾದ ಯುನಿಸೆಫ್ ಜಗತ್ತಿನಾದ್ಯಂತ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದೆ.ಜಗತ್ತಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗುವಂತೆ ಮಾಡಲು ಶ್ರಮಿಸುತ್ತಿದೆ.ಆದರೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಯೂನಿಸೆಫ್ ನ ಚಟುವಟಿಕೆ ಅಷ್ಟೇನೂ ಪರಿಣಾಮಕಾರಿಯಾಗಿರುವಂತೆ ಕಾಣುವುದಿಲ್ಲ.ಬಹುತೇಕ ಇಸ್ಲಾಮಿಕ್ ರಾಷ್ಟ್ರಗಳಿಗೆ ಯೂನಿಸೆಫ್ ಕಾರ್ಯಕರ್ತರು ಹೋಗಲೇ ಹಿಂದೇಟು ಹಾಕುತ್ತಾರೆ.ಅಮೇರಿಕಾ ಸಹ ಸಶಸ್ತ್ರ ಯುದ್ಧದ ಮೂಲಕ ಭಯೋತ್ಪಾದನೆಯನ್ನು ಮಟ್ಟ ಹಾಕುತ್ತೇನೆಂದು ಹೇಳುತ್ತಿದೆ.ಅದರ ಬದಲು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಉತ್ತಮ ಶಾಲೆಗಳನ್ನು ಸ್ಥಾಪಿಸಿ ಅದಕ್ಕೆ ಸೂಕ್ತ ರಕ್ಷಣೆ ಕೊಟ್ಟು ಮುಸ್ಲಿಂ ಮಕ್ಕಳು ವಿದ್ಯೆ ಕಲಿಯುವಂತೆ ಮಾಡಿದರೆ ಕಡೇ ಪಕ್ಷ ಹೊಸ ಭಯೋತ್ಪಾದಕರು ಹುಟ್ಟುವುದಾದರೂ ಕಡಿಮೆಯಾಗುತ್ತದೆ.

ಇಸ್ಲಾಂ ಧರ್ಮದ ಶ್ರೀಸಾಮಾನ್ಯ ಜನರೂ ಸ್ವಲ್ಪ ಆಲೋಚಿಸಬೇಕು.ಮದ್ರಸಾ ಶಿಕ್ಷಣದ ಜೊತೆ ತಮ್ಮ ಮಕ್ಕಳಿಗೆ ಸಾಂಪ್ರದಾಯಿಕ ಶಾಲಾ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡಬೇಕು.ತಮಗಂತೂ ಹೇಗಿದ್ದರೂ ಮದ್ರಸಾ ಶಿಕ್ಷಣ ಬಿಟ್ಟರೆ ಬೇರೆ ವಿದ್ಯೆ ಸಿಗಲಿಲ್ಲ, ಕೊನೇ ಪಕ್ಷ ತಮ್ಮ ಮಕ್ಕಳಿಗಾದರೂ ಶಾಲಾ ಶಿಕ್ಷಣ ದೊರೆತು ವಿದ್ಯಾವಂತರಾಗಿ ಬದುಕುವಂತಾಗಲಿ ಎಂದು ಮುಸ್ಲಿಂ ತಂದೆ ತಾಯಿಗಳು ಯೋಚಿಸಬೇಕು.ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲೇಬೇಕು.ಭಾರತದ ಮುಸ್ಲಿಮರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು.ಕೈಯಲ್ಲಿ ಪೆನ್ ಹಿಡಿದು ವಿದ್ಯಾಂತರಾದ ನೂರು ಕೈಗಳು ಗನ್ ಹಿಡಿದ ಸಾವಿರ ಕೈಗಳನ್ನು ಮಣಿಸುವ ಶಕ್ತಿ ಪಡೆಯುತ್ತವೆ.ಮುಸ್ಲಿಮರೇ ಎಚ್ಚೆತ್ತುಕೊಳ್ಳಿ ಗನ್ ಹಿಡಿಯುವ ಕೈಗೆ ಪೆನ್ ಕೊಟ್ಟು ನೋಡಿ.ಕೆಲವೇ ವರ್ಷಗಳಲ್ಲಿ ಬದಲಾವಣೆ ಗೊತ್ತಾಗುತ್ತದೆ.ಇಲ್ಲವಾದಲ್ಲಿ ಧರ್ಮಾಂಧತೆಯ ಭಯೋತ್ಪಾದನೆಯಿಂದ ಜಗತ್ತು ನಾಶವಾಗುವ ದಿನಗಳು ದೂರವಿಲ್ಲ.

ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ.ನನಗೆ ಯಾವುದೇ ಧರ್ಮದ ಮೇಲಾಗಲಿ ಯಾರ ಮೇಲಾಗಲೀ ದ್ವೇಷವಿಲ್ಲ.ಒಳ್ಳೆಯತನ ಎಲ್ಲಿದ್ದರೂ ಗೌರವಿಸುತ್ತೇನೆ.ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೆ ಒಂದು ನಿರ್ಧಿಷ್ಟ ಧರ್ಮಕ್ಕೆ ಸೇರಿದವರೇ ಪ್ರಮುಖ ಕಾರಣವಾಗುತ್ತಿದ್ದಾರಲ್ಲ ಎಂಬ ಅಸಹನೆಯಿಂದ ಮೇಲಿನ ಮಾತುಗಳನ್ನು ಬರೆದೆ ಅಷ್ಟೇ.ಎಲ್ಲೆಡೆ ಶಾಂತಿ ನೆಲೆಸಲಿ ಎಂಬುದಷ್ಟೇ ಇದರ ಮೂಲ ಆಶಯ.

ಪೂರಕ ಅಂಕಿಅಂಶಗಳು: www.drjagadishkoppa.blogspot.com

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!