ಅಂಕಣ

ತುಳುನಾಡಿನ ನವರಾತ್ರಿ ಆಚರಣೆ

ಪಿಲಿ, ಕೊರಗೆ, ಕರಡಿ, ಸಿಮ್ಮ ನಲಿತೋಂತಲ್ಲಗೆ,
ಪುರು ಬಾಲೆ, ಜೆತ್ತಿನಲ್ಲೇ ಇತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್ಗೆ,
ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ,
ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು…..

(ಹುಲಿ, ಕೊರಗ,ಕರಡಿ, ಸಿಂಹ ಕುಣಿಯುತ್ತಿವೆ,
ಪುಟ್ಟ ಮಗು, ಮಲಗಿದ್ದಲ್ಲೇ ಇದ್ದ ಅಜ್ಜ ಎದ್ದು ನಡೆದರು,
ಚೆಂಡೆಯ ಸದ್ದಿಗೆ ಏದ್ದಿತ್ತು ಧೂಳು ಊರೇಲ್ಲಾ,
ಬಂತು ನವರಾತ್ರಿ ನಡೆಯುತ್ತಾ, ಕುಣಿಯುತ್ತಾ..)

ತುಳುನಾಡಿನಲ್ಲಿ ನವರಾತ್ರಿ, ದಸರಾ , ದುರ್ಗಾ ಪೂಜೆಯು ಚಿರಪರಿಚಿತವಾಗಿ ಮಾರ್ನೆಮಿಯೆಂಬ ಹೆಸರಿನಿಂದ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಾರ್ನೆಮಿ ಅಂದ ಕೂಡಲೇ ಈ ಭಾಗದ ಅಬಾಲರಿಂದ ವೃದ್ಧ ಜನರ ಮೈ ಪುಳಕಗೊಳ್ಳುತ್ತದೆ ಮನ ಆರಳುತ್ತದೆ .ಒಂಬತ್ತು ದಿನಗಳ ಕಾಲ ಭರಪೂರ ಭಯ, ಭಕ್ತಿಯ ಮನರಂಜನೆ. ದೇವರು, ಪ್ರಾಣಿ, ಜನಾಂಗಗಳಿಗೆ ವೇಷವನ್ನು ಅರ್ವಿಭಾವಗೊಳಿಸಿ ಆ ತೆರದಲ್ಲಿ ನಟನೆ, ಹಾಸ್ಯ, ಮಾತಿನ ರಂಗು ನೀಡಿ ದುರ್ಗೆಯರ ಅರಾಧನೆ ಶುರುವಿಡುತ್ತದೆ, ದಕ್ಷಿಣದ ಜಿಲ್ಲೆಗಳ ಪ್ರಸಿದ್ಧ ದೇವಾಲಯಗಳಾದ ಮಂಗಳಾದೇವಿ, ಕಟೀಲು, ಬಪ್ಪನಾಡು, ಮಂದಾರ್ತಿ, ಕೊಲ್ಲೂರು, ಬೆಳ್ಳಾರೆಯ ಜಲದುರ್ಗೆ, ಭಗವತಿ ಹೀಗೆ ಹಲವಾರು ಹಳ್ಳಿಗೊಂದರಂತೆ, ಸೀಮೆಗೊಂದರಂತೆ ದುರ್ಗೆಯರ ದೇವಾಲಯಗಳು ಕಂಡುಬರುತ್ತದೆ, ಈ ದಿನಗಳಲ್ಲಿ ಮನೆ ಮನೆಗಳಲ್ಲಿ ಪೂಜೆ ನಡೆಯದಿದ್ದರೂ ದೇವಿಯ ಅರಾಧನೆ ಮಾಡುವ ಮನೆಗಳಲ್ಲಿ ಮತ್ತು ಸಿರಿ ದರ್ಶನವಿರುವ ಮನೆಗಳಲ್ಲಿ ಮಾರ್ನೆಮಿಯ ವಿಶೇಷ ಪೂಜೆ ನಡೆಸುತ್ತಾರೆ. ತುಳುನಾಡಿನ ಯಕ್ಷಗಾನ ಪ್ರಸಂಗಗಳಲ್ಲಿ ದುರ್ಗೆಯರ ಲೀಲೆಗಳನ್ನು ಮನೋಜ್ಞವಾಗಿ ಹಲವಾರು ಕ್ಷೇತ್ರ ಮಹಾತ್ಮೆಗಳು ಕಣ್ಣಿಗೆ ಕಟ್ಟಿಕೊಡುತ್ತದೆ .

ಇಲ್ಲಿ ನವರಾತ್ರಿ ದಿನಗಳಲ್ಲಿ ದೇವರ ಹರಕೆ ರೂಪದಲ್ಲಿ ವೇಷ ಧರಿಸುವುದು ಸಾಮಾನ್ಯ ಇದು ಒಂದು ಪವಿತ್ರ ಕಾರ್ಯವೆಂದು 1ದಿನ, 3ದಿನ, 5 ದಿನ, 7 ದಿನ ವೇಷ ಧರಿಸಿ ಸೇವೆ ಮಾಡುವ ಹರಕೆ ಹೇಳಿಕೊಂಡು ವೇಷ ಧರಿಸಿ ಬೀದಿಗಿಳಿಯುತ್ತಾರೆ ಜನರ ಮನ ರಂಜಿಸುತ್ತಾರೆ ವೇಷ ಕಟ್ಟುವ ಮೊದಲು ಸ್ಥಳೀಯ ಗ್ರಾಮ ದೇವಾಸ್ಥಾನಕ್ಕೆ ಹೋಗಿ ವೃತ, ಶಾಸ್ತ್ರ ನಿಯಮ ಪಾಲಿಸಿ ವೇಷ ಕಟ್ಟಿ ಮನೆ ಮನೆಗೆ ತೆರಳಿ ಅದರ ಪಾವಿತ್ರ್ಯ ಕಾಪಾಡಿಕೊಂಡು ಮತ್ತೆ ವೇಷ ಕಳಚಿ ದೈವ-ದೇವರುಗಳಿಗೆ ಕಾಣಿಕೆಯನ್ನು ಹರಕೆ ರೂಪದಲ್ಲಿ ಹಾಕಿ ಧಾರ್ಮಿಕತೆಯ ಗಟ್ಟಿತನ, ಆಚರಣೆಯ ಭದ್ರತೆ, ಭಕ್ತಿಯ ಬದ್ಧತೆಯ ಅನಾವರಣವಾಗುತ್ತದೆ. ಪ್ರಮುಖವಾಗಿ ಹುಲಿ, ಸಿಂಹ, ಕರಡಿ, ವೃತ್ತಿಯನ್ನು ಬಿಂಬಿಸುವ ವೇಷ, ಬೇಟೆಗಾರ ಇತ್ಯಾದಿ…. ದುಷ್ಟರ ಸಂಹಾರಕ್ಕೆ ಬಹುರೂಪಗಳ ತಳೆದು ಧರೆಗಿಳಿದ ದುರ್ಗೆಯರಂತೆ ಈ ನಾಡಿಗೆ ಬಂದ ಮಾರಿಯನ್ನು, ದುಷ್ಟಶಕ್ತಿಗಳನ್ನು ಬಹುವೇಷಗಳ ಅಂತರ್ಯದಲ್ಲಿ ಅದುಮಿದ ಶಕ್ತಿಗೆ ಹೆದರಿ ತೊಲಗಲಿ ಎಂಬುವುದೆ ಮುಖ್ಯ ಉದ್ದೇಶ.

click here to make a personalised Navaratri greetings and send to your friends through WhatsApp.

ಹೌದು ಮಕ್ಕಳು ಹುಲಿ ಬಂದರೆ ಅದರ ಹಿಂದೆ ಒಂದಷ್ಟು ಹೆಜ್ಜೆ ನಡೆದು ಹುಲಿ ಕುಣಿತವನ್ನು ಹೆದರಿಕೆಯಿಂದಲೆ ನೋಡುವುದು ಸಾಮಾನ್ಯ, ಮತ್ತೆ ದುಡ್ಡು ತೆಗೆದುಕೊಳ್ಳುವಾಗ ಹುಲಿ ಮುಖವಾಡ ತೆಗೆದು ನಿಜ ಸ್ವರೂಪ ನೋಡಿ “ಉಂದು ನಮನ ಸುಂದರೆ” (ಓಹ್, ಇವರು ನಮ್ಮ ಸುಂದರ) ಯಾವಾಗಲೂ ನೋಡುವ ಮುಖ ಪರಿಚಯವಾದಾಗ ಹೆದರಿಕೆ ಘಟ್ಟ ಹತ್ತಿರುತ್ತದೆ. ಮತ್ತೆ ಕರಡಿ ಬ್ಯಾಂಡ್ ಸದ್ದು ಕೇಳಿದಾಗ ಮನೆಯೊಳಗೆ ಓಡಿ ಏಣಿಯ ಕೆಳಗೆ ಅವಿತುಕೊಳ್ಳುವುದು. ಮನೆಯಲ್ಲಿ ಸಿಕ್ಕಾಪಟ್ಟೆ ಹಠ ಮಾಡುವ ಮಕ್ಕಳು ಮತ್ತು ಸುಮ್ಮನೆ ಅಳುವ ಮಕ್ಕಳಿಗೆ ಈ ನವರಾತ್ರಿ ರಜೆಯಲ್ಲಿ ಸ್ವಲ್ಪ ವಿರಾಮ ವಿಶ್ರಾಂತಿ ಕಾರಣ ಜೋರು ಅತ್ತರೆ ವೇಷಕ್ಕೆ ಹಿಡಿದು ಕೊಡುತ್ತೇನೆಂದು ಮನೆಯ ಹಿರಿಯರು ಗದರಿಸುವುದು ಸಾಮಾನ್ಯ. ಇಂದು ಹಲವಾರು ಮನಮೋಹಕ ವೇಷಗಳು ಇಲ್ಲದಂತಾಗಿವೆ, ವೇಷಗಳ ಕೀಟಲೆ, ಕಿರುಚಾಟ ಅಧುನಿಕವಾಗುತ್ತಿದೆ. ಪಾವಿತ್ರ್ಯ ಉಳಿಸಿ ವೇಷ ಧರಿಸುತ್ತಿದ್ದ ಹಿರಿಯರು ಇಲ್ಲವಾಗಿದ್ದಾರೆ. ವರ್ಷದ ವೇಷ ಬಾರದಿದ್ದರೆ ಮಾರ್ನೆಮಿಗೆ ಸಾರ್ಥಕವಲ್ಲ ಎಂಬ ಭಾವನೆ ಮೂಡುತ್ತದೆ. ಧಾರ್ಮಿಕತೆ, ನಂಬಿಕೆ, ಮಣ್ಣಿನ ಪರಿಮಳ ಪಸರಿಸುವ ಇಂತಹ ಆಚರಣೆ ಒಂದಷ್ಟು ಅಧುನಿಕತೆಯ ರಂಗು ಪಡೆದು ಸಾಗುತ್ತಿರುವುದು ಸಂತಸದ ವಿಚಾರವೂ ಹೌದು. ಹಬ್ಬಗಳು ನಮ್ಮ ಜೀವನವನ್ನು ಪ್ರತಿಬಿಂಬಿಸುತ್ತದೆ, ಹಬ್ಬಗಳ ಆಚರಣೆ ನಿಲ್ಲದಿರಲಿ ಎನ್ನುವ ಸದಾಶಯದೊಂದಿಗೆ ಸರ್ವರಿಗೂ ನವರಾತ್ರಿ ಶುಭಾಶಯಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Bharatesha Alasandemajalu

ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು , ಚಿತ್ರ ಸೆರೆಹಿಡಿಯುವುದು, ಪುಟಾಣಿ ಮಕ್ಕಳೊಂದಿಗೆ ಆಡೋದು, ಪ್ರಾಯದವರೊಂದಿಗೆ ಹರಟೋದು, ಮತ್ತೆ ತಲೆ ತಿನ್ನೋದು ಇವೆಲ್ಲ ಅಂದ್ರೆ ತುಂಬಾ ಇಷ್ಟ... ಕುಡ್ಲದ ಪುತ್ತೂರಿನವ , ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು . ಯಾಕೋ ಓದಿದ ತಪ್ಪಿಗೆ ದೂರದ ಮಸ್ಕಟ್ ನಲ್ಲಿ ಯಾಂತ್ರಿಕ ತಂತ್ರಜ್ಞನಾಗಿ ನೌಕರಿ.... ಒಟ್ಟಾರೆ ಪಿರಿಪಿರಿ ಜನ !!

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!