ಅಂಕಣ

ಸಾಹಿತ್ಯ ಅಕಾಡೆಮಿಯೋ ತುಘಲಕ್ ದರ್ಬಾರೋ?

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ವರ್ಷದ ಪ್ರಶಸ್ತಿ ಪಟ್ಟಿ ಸಾಕಷ್ಟು ವಿವಾದಗಳನ್ನು ಹುಟ್ಟಿಸಿರುವುದು ಎಲ್ಲರಿಗೂ ಗೊತ್ತಿದೆ. ಪಟ್ಟಿಯಲ್ಲಿ ಈಗಾಗಲೇ ವಿವಾದಮೂರ್ತಿಯಾಗಿರುವ ಪ್ರೊ. ಕೆ. ಎಸ್. ಭಗವಾನ್ ಮತ್ತು ಕೆಲವೊಂದು ನಕ್ಸಲೈಟ್ಗಳು ಇರುವುದು ಹಲವರ ಹುಬ್ಬೇರಿಸಿದೆ. ಈ ಬಗ್ಗೆ ನಾವು ಅಕಾಡೆಮಿಗೆ ಕೆಲವೊಂದು ಪ್ರಶ್ನೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದೆವು. ಅಕಾಡೆಮಿಯ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ ನಮ್ಮ ಪ್ರಶ್ನೆಗಳಿಗೆ ಉತ್ತರ ಕಳಿಸಿದ್ದಾರೆ. ಆದರೆ, ಈ ಉತ್ತರಗಳು ನಮ್ಮ ಸಮಸ್ಯೆಗಳನ್ನು ಶಮನ ಮಾಡುವ ಬದಲು ಇನ್ನಷ್ಟು ಸಂಶಯಗಳನ್ನು ಹುಟ್ಟು ಹಾಕಿವೆ ಎನ್ನುವುದೊಂದು ಸ್ವಾರಸ್ಯದ ಸಂಗತಿ.

2013 ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ನಿರ್ಣಾಯಕರು ಯಾರು? ಅವರುಗಳನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗಿದೆ? ಎಂಬುದು ನಮ್ಮ ಪ್ರಶ್ನೆಯಾಗಿತ್ತು. ಇದಕ್ಕೆ ರಿಜಿಸ್ಟ್ರಾರ್ ಉತ್ತರ ಹೀಗಿದೆ: “2013ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪ್ರತ್ಯೇಕ ನಿರ್ಣಾಯಕರು ಇರುವುದಿಲ್ಲ. ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರು ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿಗಳನ್ನು ನಿರ್ಣಯಿಸುತ್ತಾರೆ. ಅಕಾಡೆಮಿಯು ಯಾವುದೇ ನಿರ್ಣಾಯಕರನ್ನು ಆಯ್ಕೆ ಮಾಡುವುದಿಲ್ಲ.” ಮುಂದುವರಿದು, ಬೇರೊಂದು ಪ್ರಶ್ನೆಗೆ ಉತ್ತರಿಸುವಾಗ ಇದೇ ವ್ಯಕ್ತಿ, “ಗೌರವ ಪ್ರಶಸ್ತಿಯ ನಿರ್ಧಾರಕ್ಕೆ ಮೊದಲು ಸುಮಾರು 50ಕ್ಕಿಂತ ಹೆಚ್ಚು ಜನ ಲೇಖಕರಿಂದ ಸಲಹೆಗಳನ್ನು ಪಡೆದು ಒಂದು ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಅನಂತರ ಈ ಪಟ್ಟಿಯನ್ನು ಆಧರಿಸಿ ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆ ನಡೆಸಿ ಐವರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯ ಸಂದರ್ಭದಲ್ಲಿ ಪಟ್ಟಿಯಲ್ಲಿ ಇಲ್ಲದ ಲೇಖಕರನ್ನು ಸರ್ವ ಸದಸ್ಯರ ಸಭೆಯು ಸೂಚಿಸುವ ಅಧಿಕಾರವನ್ನು ಹೊಂದಿರುತ್ತದೆ.” ಎಂದು ಉತ್ತರಿಸುತ್ತಾರೆ. ಇದು ಗೊಂದಲಕ್ಕೆ ಎಡೆ ಮಾಡುವಂತಿದೆ. ಪ್ರಶಸ್ತಿಗಳನ್ನು ನಿರ್ಣಯಿಸುವವರು ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರೇ ಎಂದು ಒಮ್ಮೆ ಹೇಳಿದ ಮೇಲೆ, “ನಾವು 50ಕ್ಕಿಂತಲೂ ಹೆಚ್ಚು ಜನರನ್ನು ಸಂಪರ್ಕಿಸುತ್ತೇವೆ” ಎನ್ನುವುದಕ್ಕೆ ಅರ್ಥ ಇದೆಯೆ? ಈ 50 ಜನರನ್ನು ಯಾವ ಆಧಾರದ ಮೇಲೆ ಆರಿಸಲಾಗುತ್ತದೆ? ಅವರಲ್ಲಿ, ಪ್ರಶಸ್ತಿಗೆ ಅರ್ಹರಾದ ಸಾಹಿತಿಗಳ ಪಟ್ಟಿ ಕೊಡಿರೆಂದು ಕೇಳಲಾಗುತ್ತದೆಯೆ ಅಥವಾ ಅಕಾಡೆಮಿ ಈಗಾಗಲೇ ಆರಿಸಿರುವ ಒಂದು ಪಟ್ಟಿಯನ್ನು ಕಳಿಸಿ, ಅದನ್ನು ಅನುಮೋದಿಸಲು ಕೋರಲಾಗುತ್ತದೆಯೆ? ಸರಿ, ಅಕಾಡೆಮಿ ಯಾವುದೋ ಒಂದು ಮಾನದಂಡ ಇಟ್ಟುಕೊಂಡು 50 ಹಿರಿಯ ಲೇಖಕರ ಪಟ್ಟಿ ತಯಾರಿಸಿತು; ತಮಗೆ ಅರ್ಹರೆನಿಸಿದ ವ್ಯಕ್ತಿಗಳನ್ನು ಸೂಚಿಸುವ ಸ್ವಾತಂತ್ರ್ಯವನ್ನು ಅವರಿಗೆ ಕೊಟ್ಟಿತೆಂದೇ ಭಾವಿಸೋಣ. ಆದರೆ, ಅವರೆಲ್ಲರಿಂದ ಪಟ್ಟಿ ತರಿಸಿಕೊಂಡ ಮೇಲೆ, ಅವರ್ಯಾರೂ ಸೂಚಿಸದ ಹೆಸರನ್ನೂ ಪ್ರಶಸ್ತಿಗಾಗಿ ಅಂತಿಮಗೊಳಿಸುವ ಹಕ್ಕನ್ನು ಅಕಾಡೆಮಿ ಉಳಿಸಿಕೊಂಡಿದೆ ಎಂದರೆ ಅದರ ಅರ್ಥ ಏನು? ಭಗವಾನ್’ನ೦ತಹ ವ್ಯಕ್ತಿಗಳಿಗೆ ಪ್ರಶಸ್ತಿ ಕೊಡಿಸಲಿಕ್ಕೆಂದೇ ಅಕಾಡೆಮಿ ಇಂಥ ಅನುಕೂಲಸಿಂಧು ಮಾನದಂಡಗಳನ್ನು ತನ್ನ ಸಂವಿಧಾನದಲ್ಲಿ ಸೇರಿಸಿಕೊಂಡಿದೆ ಎಂಬ ಅರ್ಥ ಬರುವುದಿಲ್ಲವೆ? 50ಕ್ಕಿಂತ ಹೆಚ್ಚು ಜನ ಒಬ್ಬ ವ್ಯಕ್ತಿಯ ಹೆಸರನ್ನು ಸೂಚಿಸಿಲ್ಲ ಎಂದರೆ, ಅವರು ಅದ್ಯಾವುದೋ ಕಾರಣಕ್ಕಾಗಿಯೇ ಆ ನಿರ್ದಿಷ್ಟ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಹಾಗಿರುವಾಗ, ಅಷ್ಟೂ ಜನ ತ್ಯಜಿಸಿದ ಹೆಸರನ್ನು ಮತ್ತೆ ಅಕಾಡೆಮಿ ಕೈಗೆತ್ತಿಕೊಳ್ಳುತ್ತದೆ ಎಂದರೆ ಅಕಾಡೆಮಿ ಅಷ್ಟೂ ಜನ ಹಿರಿಯರಿಗೆ ಅಗೌರವ ಸೂಚಿಸುತ್ತಿದೆ ಎಂದೇ ಅರ್ಥ.

ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿ ವಿವಾದ ಎದ್ದ ಮೇಲೆ ಅಕಾಡೆಮಿ ಅಧ್ಯಕ್ಷರು “ನಾವು ಕರ್ನಾಟಕದ ಇಪ್ಪತ್ತೈದು ಹಿರಿಯರಿಂದ ಸಲಹೆ ಕೇಳಿ ಪಟ್ಟಿ ತಯಾರಿಸಿದ್ದೇವೆ” ಎಂದರು. ಆದರೆ, ಅವರ ಅಕಾಡೆಮಿಯ ಸಂವಿಧಾನ “50ಕ್ಕಿಂತ ಹೆಚ್ಚು ಜನರಲ್ಲಿ ಅಭಿಪ್ರಾಯ ಕೇಳಬೇಕು” ಎನ್ನುತ್ತಿದೆ! ಹಾಗಾದರೆ ಅಧ್ಯಕ್ಷರು ಸುಳ್ಳು ಹೇಳಿದರೆ? ಅವರ ಮಾತು ನಿಜವೇ ಆಗಿದ್ದರೆ (ಅಂದರೆ, ಕೇವಲ 25 ಜನರನ್ನು ಮಾತ್ರ ಸಂಪಕರ್ಕಿಸಿ ಅಭಿಪ್ರಾಯ ದಾಖಲಿಸಿಕೊಂಡಿದ್ದರೆ) ಅದು ಅಕಾಡೆಮಿ ಸಂವಿಧಾನಕ್ಕೆ ವಿರುದ್ಧವಾದ ನಡೆಯಾಗುತ್ತದೆ. ಇದನ್ನು ಅಧ್ಯಕ್ಷರು ಹೇಗೆ  ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದು ಕುತೂಹಲಕರ ಸಂಗತಿ. ಒಂದು ವಿಷಾದದ ವಿಚಾರವೆಂದರೆ ಸ್ಥಾಪನೆಯಾಗಿ 55 ವರ್ಷಗಳೇ ಕಳೆದುಹೋದರೂ ಈ ಸಾಹಿತ್ಯ ಅಕಾಡೆಮಿಗೆ ಪ್ರತಿವರ್ಷ ಕೊಡಮಾಡುವ ಪ್ರಶಸ್ತಿಗಳ ಬಗ್ಗೆ ಸ್ಪಷ್ಟವಾದ ನಿಯಮಸೂಚಿ ಇನ್ನೂ ಇಲ್ಲ! ಇದೊಂದು ರೀತಿಯಲ್ಲಿ ಸಿಲೆಬಸ್ ಗೊತ್ತಿಲ್ಲದೆ ಪರೀಕ್ಷೆ ಬರೆದ ಹಾಗಿನ ಪರಿಸ್ಥಿತಿ. ಅಕಾಡೆಮಿಯ ಗೌರವ ಪ್ರಶಸ್ತಿ ಪಡೆಯುವವರು ಎಂಥವರಿರಬೇಕು, ಎಷ್ಟು ಸಾಹಿತ್ಯ ಕೃಷಿ ಮಾಡಿರಬೇಕು ಇತ್ಯಾದಿ ಯಾವ ಮಾನಕಗಳೂ ಇಲ್ಲ. “ಸಾಹಿತ್ಯಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರಬೇಕು” ಎನ್ನುವುದೊಂದೇ ಇವರ ಒಂದು ಸಾಲಿನ ಮಾನದಂಡ! ಸ್ಥಾಪನೆಯಾಗಿ ಅರ್ಧ ಶತಮಾನವೇ ಕಳೆದುಹೋದರೂ ಈ ಸಂಸ್ಥೆಯಲ್ಲಿ ಪ್ರಶಸ್ತಿಗಳ ಮಾನದಂಡದ ಬಗ್ಗೆ ಒಂದು ಪುಟದಷ್ಟೂ ಮಾಹಿತಿ ಇಲ್ಲ ಎಂದರೆ ಆಶ್ಚರ್ಯವಾಗುವುದಿಲ್ಲವೆ?

ಇನ್ನೊಂದು ತಮಾಷೆ ನೋಡಿ: “ಬಂಧನಕ್ಕೊಳಗಾಗಿರುವವರಿಗೆ ನಾವು ಪ್ರಶಸ್ತಿ ಕೊಡುವುದಿಲ್ಲ” ಎಂದು ಅಕಾಡೆಮಿಯ ಅಧ್ಯಕ್ಷರು ಹೇಳುತ್ತಾರೆ. ಆದರೆ (1) 2013ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಾಗಿ ಪಟ್ಟಿ ಮಾಡಿದವರ ಅಪರಾಧಿ ಹಿನ್ನೆಲೆ ಮತ್ತಿತರ ವಿವರಗಳನ್ನು, ಪೋಲೀಸ್ ದಾಖಲೆಗಳನ್ನು ಗೃಹಖಾತೆಯಿಂದ ಪಡೆದಿದ್ದೀರ? (2) “2013ನೇ ಸಾಲಿನ ಕರ್ನಾಟಕ  ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಾಗಿ ಪಟ್ಟಿ ಮಾಡಿದವರ ಚಾರಿತ್ರ್ಯ ವಿವಾದಗಳ ಬಗ್ಗೆ ತನಿಖೆ ನಡೆಸಿದ್ದೀರಾ? (3) 2013ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಾಗಿ ಪಟ್ಟಿ ಮಾಡಿದವರ ಕೃತಿಗಳ ಬಗ್ಗೆ ವಿವಾದಗಳು, ವ್ಯಾಜ್ಯಗಳು, ಸರ್ಕಾರಿ ತನಿಖೆಗಳು ನಡೆದಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ/ನ್ಯಾಯಾಲಯದಿಂದ ವಿವರಗಳನ್ನು ಪಡೆದಿದ್ದೀರ? – ಎಂಬ ಮೂರೂ ಪ್ರಶ್ನೆಗಳಿಗೂ ಅಕಾಡೆಮಿಯ ರಿಜಿಸ್ಟ್ರಾರ್ “ಇಲ್ಲ, ಆ ಪರಿಪಾಠ ಇರುವುದಿಲ್ಲ” ಎಂದು ಉತ್ತರಿಸಿದ್ದಾರೆ! ಪ್ರಶಸ್ತಿ ವಿಜೇತರ ಅಪರಾಧೀ ಹಿನ್ನೆಲೆಯನ್ನು ವಿಚಾರಿಸುವ ಪರಿಪಾಠವೇ ಇಲ್ಲವೆಂದ ಮೇಲೆ, ಅಧ್ಯಕ್ಷರು ಅದ್ಯಾವ ನಿಯಮಾವಳಿ ಪ್ರಕಾರ “ಬಂಧನಕ್ಕೊಳಗಾದವರಿಗೆ ಪ್ರಶಸ್ತಿ ಕೊಡುವುದಿಲ್ಲ” ಎಂದು ಹೇಳಿದರು? ಅಕಾಡೆಮಿಯ ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಇಬ್ಬರೂ ಎರಡು ವಿಭಿನ್ನ ನಿಯಮಾವಳಿಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬ ಅನುಮಾನ ಬರುವಂತಿದೆ.

ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಸದ್ಯಕ್ಕೆ ಎದ್ದಿರುವ ವಿವಾದಗಳಿಗೆ ತೆರೆ ಎಳೆಯಬೇಕಾದರೆ ಕನ್ನಡಿಗರ ಮನಸ್ಸಿನಲ್ಲಿ ಎದ್ದಿರುವ ಈ ಪ್ರಶ್ನೆಗಳನ್ನು ಪರಿಹರಿಸಬೇಕಾಗುತ್ತದೆ:

  1. ಪ್ರಶಸ್ತಿ ಕೊಡಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಯಾವ ಮಾನದಂಡಗಳ ಪಟ್ಟಿಯನ್ನೂ ಇಟ್ಟುಕೊಂಡಿಲ್ಲ ಎಂದ ಮೇಲೆ ಈ ಪ್ರಶಸ್ತಿಗಳನ್ನು ಕೊಡುವುದರ ಔಚಿತ್ಯವಾದರೂ ಏನು? ಸಾಹಿತ್ಯ ಅಕಾಡೆಮಿ ಒಂದು ಖಾಸಗಿ ಸಂಸ್ಥೆಯಾಗಿದ್ದರೆ ನಾವು ಈ ಪ್ರಶ್ನೆಯನ್ನು ಎತ್ತುತ್ತಿರಲಿಲ್ಲ. ಆದರೆ, ಸರಕಾರದ ಕಡೆಯಿಂದ ಲಕ್ಷಾಂತರ ರುಪಾಯಿಗಳನ್ನು ಅನುದಾನ, ವೇತನ, ಖರ್ಚು-ವೆಚ್ಚಗಳ ರೂಪದಲ್ಲಿ ಪಡೆದು ನಂತರ ಪ್ರಶಸ್ತಿಗಳ ವಿಷಯದಲ್ಲಿ ಬೇಜಾವಾಬ್ದಾರಿಯಿಂದ ವರ್ತಿಸಲು ಅಕಾಡೆಮಿಗೆ ಖಂಡಿತವಾಗಿಯೂ ಹಕ್ಕಿಲ್ಲ. ಮಾನದಂಡಗಳೇ ಇಲ್ಲದೆ ಪ್ರಶಸ್ತಿ ಕೊಡುತ್ತೇನೆ ಎಂಬ ಉಡಾಫೆ ಅದಕ್ಕಿದ್ದರೆ, ತನ್ನ ಸ್ವಂತ ಖರ್ಚಿ೦ದ ಯಾರಿಗೆ ಬೇಕಾದರೂ ಕೊಟ್ಟುಕೊಳ್ಳಲಿ.
  2. ಅಕಾಡೆಮಿಯು 50ಕ್ಕೂ ಹೆಚ್ಚು ವ್ಯಕ್ತಿಗಳಿಂದ ಅಭಿಪ್ರಾಯ ಸಂಗ್ರಹಿಸುತ್ತದೆ ಎಂದು ರಿಜಿಸ್ಟ್ರಾರ್ ಹೇಳುತ್ತಾರೆ. 25 ಜನರಿಂದ ಅಭಿಪ್ರಾಯ ಪಡೆದಿದ್ದೇವೆ ಎಂದು ಅಧ್ಯಕ್ಷರು ಹೇಳುತ್ತಾರೆ. ಇವರಿಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ? ಈ ಎರಡು ಸಂಖ್ಯೆಗಳ ನಡುವೆ ಇಷ್ಟೊಂದು ಅಂತರ ಇರಲು ಕಾರಣವೇನು? ಅಧ್ಯಕ್ಷರು ಹೇಳಿದಂತೆ ಕೇವಲ 25 ಜನ ಮಾತ್ರ ಅಭಿಪ್ರಾಯ ದಾಖಲಿಸಿದ್ದರೆ ಅದು ಅಕಾಡೆಮಿಯ ನಿಯಮಾವಳಿಗಳ ಉಲ್ಲಂಘನೆಯಾಗುವುದಿಲ್ಲವೆ?
  3. 50ಕ್ಕೂ ಹೆಚ್ಚು ಜನ ಕೊಡುವ ಅಭಿಪ್ರಾಯಗಳನ್ನು ಕ್ರೋಢೀಕರಿಸಿ  ನಾವು ಅಂತಿಮ ನಿರ್ಣಯ ತೆಗೆದುಕೊಳ್ಳುತ್ತೇವೆ. ಆದರೆ ನಮ್ಮ ಸಭೆಯಲ್ಲಿ, ಈ 50 ಜನರೂ ಸೂಚಿಸದ ವ್ಯಕ್ತಿಯನ್ನೂ ಪ್ರಶಸ್ತಿಗೆ ಆಯ್ಕೆ ಮಾಡುವ ಅಧಿಕಾರ ನಮಗಿದೆ – ಎಂದು ರಿಜಿಸ್ಟ್ರಾರ್ ಹೇಳುತ್ತಾರೆ. ಹಾಗಾದರೆ, 50 ಜನರ ಅಭಿಪ್ರಾಯ ದಾಖಲಿಸಿಕೊಳ್ಳುವ ಕಾಟಾಚಾರ ಯಾಕೆ ಮಾಡಬೇಕು? ಇದಕ್ಕೆ ತಗಲುವ ಖರ್ಚು ಜನರ ತೆರಿಗೆ ದುಡ್ಡಿಂದಲೇ ಸಂದಾಯ ಆಗುತ್ತಿದೆಯಲ್ಲವೆ?
  4. ಈ ವರ್ಷ ನಿಜಕ್ಕೂ ಎಷ್ಟು ಜನ ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ? ಅವರಲ್ಲಿ ಎಷ್ಟು ಜನ ಭಗವಾನ್ ಹೆಸರು ಸೂಚಿಸಿದ್ದಾರೆ? ನಿಮ್ಮ ಅಕಾಡೆಮಿಯ ಸದಸ್ಯರ ಸಭೆಯಲ್ಲಿ ಎಷ್ಟು ಜನ ಭಗವಾನ್ ಹೆಸರು ಸೂಚಿಸಿದ್ದಾರೆ? ಈ ಪಟ್ಟಿಯನ್ನು ಅಧ್ಯಕ್ಷರು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದರೆ ಜನರು ತಲೆಗೊಂದರಂತೆ ಊಹೆ ಮಾಡಲು ಅನುವು ಮಾಡಿಕೊಟ್ಟಂತೆ ಆಗುತ್ತದೆ.
  5. ಬಂಧನಕ್ಕೊಳಗಾದವರನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ ಎಂದು ಅಧ್ಯಕ್ಷರು ಹೇಳಿದರೆ, ವ್ಯಕ್ತಿಗಳ ಅಪರಾಧ ಹಿನ್ನೆಲೆ ನೋಡುವ ಪರಿಪಾಠ ಇಲ್ಲ ಎಂದು ರಿಜಿಸ್ಟ್ರಾರ್ ಹೇಳುತ್ತಾರೆ! ಏಕೆ ಈ ಗೊಂದಲ? ಇರುವ ನಾಲ್ಕು ಸಾಲಿನ ನಿಯಮಾವಳಿ ಪಟ್ಟಿಯನ್ನೂ ಅಕಾಡೆಮಿಯ ಅತ್ಯುನ್ನತ ಅಧಿಕಾರಿಗಳಾದ ಇವರಿಬ್ಬರು ಓದಿಕೊಂಡಿಲ್ಲವೆ? “2013ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಕೊಡಲು ಅನರ್ಹಗೊಳಿಸುವ ಮಾರ್ಗಸೂಚಿಗಳು ಇವೆಯೆ? ಇದ್ದರೆ ತಿಳಿಸಿ.” ಎಂಬ ನಮ್ಮ ಪ್ರಶ್ನೆಗೆ ರಿಜಿಸ್ಟ್ರಾರ್ “ಇಲ್ಲ” ಎಂದು ಉತ್ತರಿಸಿದ್ದಾರೆ. ಅಂದರೆ, ಭಗವಾನ್ ಮೇಲಿನ ಆರೋಪ ಸಾಬೀತಾಗಿ ಆತ ಜೈಲು ಪಾಲಾದರೂ ನೀವು ಅವರಿಗೆ ಪ್ರಶಸ್ತಿ ಕೊಡುತ್ತೀರಾ?

ಒಟ್ಟಲ್ಲಿ, ಭಗವಾನ್ ಪ್ರಶಸ್ತಿಗೆ ಅರ್ಹರೇ ಅಲ್ಲವೇ ಎಂಬ ವಿಷಯದಿಂದ ಶುರುವಾಗಿರುವ ಈ ಇಡೀ ಪ್ರಕರಣದಲ್ಲಿ ಸಾಹಿತ್ಯ ಅಕಾಡೆಮಿಯೊಳಗಿನ ಅನೇಕ ಹುಳುಕುಗಳು ಒಂದೊಂದಾಗಿ ಹೊರಬರುತ್ತಿವೆ ಎನ್ನುವುದು ಸತ್ಯ. ಎಲ್ಲಕ್ಕಿಂತ ಮುಖ್ಯವಾಗಿ, ಅಕಾಡೆಮಿಯು ಅತ್ಯಂತ ಪ್ರತಿಷ್ಠಿತ ಎಂದು ಬಿಂಬಿಸಿರುವ ಗೌರವ ಪ್ರಶಸ್ತಿಗಳಿಗೆ ಆಯ್ಕೆಯಾಗಲು ಯಾವುದೇ ಪ್ರಮುಖ ಮಾನದಂಡಗಳಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ಕರ್ನಾಟಕದ ಹಲವು ಬುದ್ಧಿಜೀವಿಗಳು ಸರಕಾರವನ್ನು ಓಲೈಸುವುದನ್ನೇ ಪೂರ್ಣಾವಧಿ ಉದ್ಯೋಗ ಮಾಡಿಕೊಂಡಿರುವುದು ಏಕೆ ಎನ್ನುವುದಕ್ಕೆ ಇಲ್ಲಿ ಉತ್ತರ ಸಿಗುತ್ತದೆ. ಒಟ್ಟಲ್ಲಿ ನಮ್ಮ ಸರಕಾರದ ಕೈಕೆಳಗಿನ ಅಕಾಡೆಮಿಗಳು ಬುದ್ಧಿಜೀವಿಗಳ, ಅಪಾತ್ರರ ಗಂಜಿಕೇಂದ್ರಗಳಾಗುತ್ತಿವೆ ಎನ್ನುವುದು ಕನ್ನಡಿಗರೆಲ್ಲ ಶೋಕಿಸಬೇಕಾದ ವಿಚಾರ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!