ಮತ್ತೊಬ್ಬ ನಿಷ್ಟ ಪೋಲಿಸ್ ಅಧಿಕಾರಿ ಜಗದೀಶ್ ಮೌನವಾಗಿದ್ದಾರೆ. ನಮ್ಮ ವ್ಯವಸ್ಥೆಯ ಕರಾಳ ಮುಖ ಅವರನ್ನು ಮೃತ್ಯು ಕೂಪಕ್ಕೆ ನೂಕಿದಾಗ ಕರ್ನಾಟಕಕ್ಕೆ ಕರ್ನಾಟಕವೇ ಮೌನವಾಗಿತ್ತು ಮೊನ್ನೆ. ಪೋಲೀಸರಂತಹ ಪೋಲೀಸರನ್ನೇ ಅಧೀರರನ್ನಾಗಿ ಮಾಡಿತ್ತು ಈ ಘಟನೆ. ಹಂತಕರ ಬೆನ್ನಟ್ಟಿದ ನಿಪುಣ ಪೋಲೀಸರ ತಂಡ, ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದಾ ಆರಕ್ಷಕರನ್ನು ಬೇಜಾವಾಬ್ದಾರಿಯಿಂದ ಬೈಯುವ ನಮಗೆ, ಕೈಕಟ್ಟಿ ಹಾಕುವ ಪರಿಸ್ಥಿತಿಯೊಂದು ಇಲ್ಲದಿದ್ದರೆ ತಾವು ಎಂತಹಾ ಕಳ್ಳ, ಕೊಲೆಗಾರರನ್ನೂ ಹಿಡಿಯಲು ಸಮರ್ಥರು ಎಂದು ತೋರಿಸಿ ಕೊಟ್ಟಿದ್ದಾರೆ ಈ ತಂಡ. ಮೊದಲಿಗೆ ಈ ತಂಡವನ್ನು ಮನಸಾರೆ ಅಭಿನಂದಿಸುತ್ತಾ , ತಂಡದಲ್ಲಿದ್ದ ಅಧಿಕಾರಿಯೊಬ್ಬರು ಮಾತಿನಲ್ಲೇ ಪೋಲೀಸ್ ಜೀವನ, ಈ ಹಂತಕರ ಜಾಡು ಕಂಡು ಹಿಡಿಯುವ ಹಾದಿ ಹೇಗಿತ್ತು ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅದೇನೂ ತಿಳಿಯದೇ ಆರಕ್ಷಕರ ಬಗ್ಗೆ ನಾವು ಸುಮ್ಮನೇ ಮಾತನಾಡುವುದು ಕಡಿಮೆಯಾಗಲಿ ಎಂಬ ಉದ್ದೇಶದಿಂದ ಈ ಪ್ರಯತ್ನವನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಇವರು ಸತ್ಯನಾರಾಯಣ, ಸದ್ಯಕ್ಕೆ ಚಿಕ್ಕಬಳ್ಳಾಪುರದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರದುರ್ಗದ ಹಿರಿಯೂರು ಇವರ ಹುಟ್ಟೂರು, ಲಿಟರೇಚರ್’ನಲ್ಲಿ ಎಂ.ಎ ಮಾಡಿ, ನಿಷ್ಟೆ ವಿಶ್ವಾಸ, ಹುಮ್ಮಸ್ಸು ಎಲ್ಲವನ್ನೂ ತುಂಬಿಕೊಂಡ ಯುವಕ ೨೦೦೩ರಲ್ಲಿ ಸಬ್’ಇನ್ಸ್ಪೆಕ್ಟರ್ ಆಗಿ ತಮ್ಮ ಕನಸಿನ ಜೀವನವನ್ನು ಆರಂಭಿಸುತ್ತಾರೆ. ಬೆಂಗಳೂರು ಸಿಟಿಯಲ್ಲಿ ಬ್ಯಾಟರಾಯನಪುರ, ಜಯನಗರ, ಕೆಂಗೇರಿ, ಅಲ್ಲದೇ ಕೋಲಾರ, ಬಿಡದಿ ಹೀಗೆ ಹಲವೆಡೆ ಸೇವೆ ಸಲ್ಲಿಸುತ್ತಾ ಸಾಗಿದೆ ಇವರ ಜೀವನ. ಪೋಲೀಸ್ ವೃತ್ತಿ ಎಂದ ಕೂಡಲೇ ೨೪ ಗಂಟೆ ಕ್ರೈಂ ಹಿಂದೆ ಅಥವಾ ಯಾವುದೇ ಕ್ರಿಯಾಶೀಲತ್ವವೇ ಇಲ್ಲದೇ ತಮ್ಮ ಜೀವನ ಸಾಗಿಸುತ್ತಿರುತ್ತಾರೆ ಎಂದು ನಿಮ್ಮ ಊಹೆಯಾಗಿದ್ದರೆ ಅದು ತಪ್ಪು, ಸತ್ಯನಾರಾಯಣ ಇವರು ಬರವಣಿಗೆ ಮತ್ತು ಫೋಟೋಗ್ರಾಫಿಯನ್ನು ತಮ್ಮ ಜೀವಾಳದಂತೆ ಮುಂದುವರಿಸಿಕೊಂಡೇ ಬರುತ್ತಿದ್ದಾರೆ, ಉತ್ತಮ ಬರವಣಿಗೆ ಇವರ ಜೊತೆಯಾಗಿದೆ. ಪೋಲೀಸ್ ಅಧಿಕಾರಿಯ ಮಗಳನ್ನು ಮದುವೆಯಾದ ಇವರು ತಮ್ಮೆಲ್ಲಾ ಕೆಲಸದಲ್ಲಿ ಸದಾ ಬೆಂಬಲವಾಗಿರುವ ಪತ್ನಿಗೆ ಸದಾ ಋಣಿ ಎನ್ನಲು ಮರೆಯಲಿಲ್ಲ, ನಾಲ್ಕು ವರ್ಷದ ಮಗನನ್ನು ಹೊಂದಿರುವ ಇವರದ್ದು ಸಂತೃಪ್ತ ಕುಟುಂಬ.
ಇವರ ವೃತ್ತಿ ಜೀವನ ಅಷ್ಟೊಂದು ಸುಲಭವಲ್ಲ, ರಿಸ್ಕಿ ಎನ್ನುವುದು ನಮ್ಮ ಭಾವನೆಯಾದರೆ, ಅವರದ್ದು ಇದಕ್ಕೆ ತದ್ವಿರುದ್ಧ ಭಾವನೆ. ಅವರಂದಿದ್ದು “ಹಾಗೇನಿಲ್ಲ, ನಮ್ಮದು ಅಂತಾ ರಿಸ್ಕ್ ಕೆಲಸವೇನಲ್ಲ ಕೆಲವೊಮ್ಮೆ ಅಹಿತಕರ ಘಟನೆ ನಡೆಯತ್ತೆ, ಆದರೆ ಇದೆಲ್ಲಾ ನಮ್ಗೆ ಅಭ್ಯಾಸ ಆಗಿದೆ” ಎಂದು. ಅಬ್ಬಾ ಮೈ ಜುಂ ಅನ್ಸ್ತು,.
ವಿಷಯಕ್ಕೆ ಬರೋಣ… “ಜಗದೀಶ್ ಅವರ ಬಳಿ ಇದ್ದ ಗನ್’ಅಲ್ಲಿ ಬುಲೆಟ್ಸ್ ಇರಲಿಲ್ಲ, ಅವರು ಅಲ್ಲೇ ಪಕ್ಕದಲ್ಲಿ ಇದ್ದ ಮೋರಿಗೆ ಬಿದ್ದಾಗ ಅವರ ಮೇಲೆ ಹಂತಕರು ಡ್ರ್ಯಾಗರ್ ಇರಿದರು”, ಇವೆಲ್ಲಾ ನಾವು ಮಾಧ್ಯಮದಲ್ಲಿ ಓದಿದ ಮಾಹಿತಿ. ಆದರೆ ಅಲ್ಲಿ ನಡೆದಿದ್ದೇ ಬೇರೆ ಎಂದರೆ ನೀವು ನಂಬಲೇಬೇಕು. ಅದನ್ನು ಕಣ್ಣಾರೆ ಕಂಡವರೂ ಇದ್ದಾರೆ. ಅಲ್ಲಿ ನಿಜವಾಗಿ ಆಗಿದ್ದೇನೆಂದರೆ, ಹರೀಶ್ ಬಾಬು ಮತ್ತೆ ಮಧುವನ್ನು ಹಿಡಿಯಲು ಓಡಿಸಿಕೊಂಡು ಹೋದ ಜಗದೀಶ್ ಅವರ ಕೈಗೆ ಮಧು ಸಿಕ್ಕಿದ್ದಾನೆ. ಒಂದು ಕೈಯಲ್ಲಿ ಅವನನ್ನು ಹಿಡಿದುಕೊಂಡಿದ್ದೂ ಆಗಿದೆ, ಮಧು ತಪ್ಪಿಸಿಕೊಳ್ಳಲು ಮತ್ತೊಂದು ಕೈಯನ್ನು ಹಿಡಿದುಕೊಂಡು ಜಗದೀಶ್ ಅವರ ಜೊತೆ ಕೊಸರಾಟ ನಡೆಸುತ್ತಿದ್ದಾಗ ಹಿಂತಿರುಗಿ ಓಡಿ ಬಂದ ಹರೀಶ್ ಬಾಬು ಡ್ಯ್ರಾಗರ್’ನಿಂದ ನೇರವಾಗಿ ಇರಿದಿದ್ದಾನೆ, ಆಗ ಅವರು ಅಲ್ಲೇ ಇದ್ದ ಮೋರಿಗೆ ಬಿದ್ದಿದ್ದಾರೆ ಹೊರತು ಬುಲೆಟ್ ಇಲ್ಲದೇ ಆಗಲಿ ಅವರ ಬೇಜವಾಬ್ದಾರಿಯಿಂದಾಗಲೀ ಅಲ್ಲ.
ಹಾಗೆ ಮಾತನಾಡುತ್ತಾ ಸತ್ಯನಾರಾಯಣ ಅವರು ಹೇಳುತ್ತಾರೆ, “ಕಳ್ಳರಲ್ಲಿ ಅವು ಯಾವುದೇ ನಟೋರಿಯಸ್ ಕಳ್ಳನೇ ಆಗಿರಲಿ, ಮನೆ ಕಳ್ಳನಾಗಲಿ,ಡಕಾಯಿತನೇ ಆಗಲಿ ಡ್ರ್ಯಾಗರ್ ಅಂತಹಾ ಸೆಲ್ಫ್ ಡಿಫೆನ್ಸ್ ಆಯುಧಗಳನ್ನು ಎಲ್ಲರೂ ಇಟ್ಟುಕೊಂಡಿರುತ್ತಾರೆ. ಆದರೆ ಎಲ್ಲರೂ ಸಾಯಿಸುವ ಉದ್ದೇಶ ಹೊಂದಿರುವುದಿಲ್ಲ, ಆದರೆ ತಪ್ಪಿಸಿಕೊಳ್ಳುವ ದಾರಿ ಕಾಣದೇ ಇದ್ದಾಗ ಇರಿಯುವುದು ನಿಶ್ಚಯವಾಗಿರುತ್ತದೆ, ಅಲ್ಲದೇ ಇಂತಹಾ ಇನ್ವೆಸ್ಟಿಗೇಶನ್’ಗೆ ಹೊರಟಾಗ ನಾವೂ ಅಷ್ಟೇ ಬಹಳ ಎಚ್ಚರಿಕೆಯಿಂದ ಪ್ಲಾನ್ ಮಾಡಿಕೊಂಡೇ ಹೊರಡುತ್ತೇವೆ. ಅಲ್ಲಿ ಪ್ರತಿಯೊಂದು ವ್ಯವಸ್ಥಿತವಾಗಿಯೇ ನಡೆಯುತ್ತದೆ.ಪೋಲೀಸೊಬ್ಬನ ಶಕ್ತಿ, ಯುಕ್ತಿಯನ್ನು ಮೀರಿದ ಕ್ಷಣಗಳಿಗೆ ಕೆಲವೊಮ್ಮೆ ನಾವು ಸಾಕ್ಷಿಯಾಗುತ್ತೇವೆ ಅದಕ್ಕೆ ಪೋಲೀಸರ ಮೇಲೆ ದೂರು ಹಾಕುವುದು ಉಚಿತವಲ್ಲ.”
“ಈ ಹರೀಶ್ ಬಾಬು ಸುಮಾರು ಇಪ್ಪತ್ತು ವರ್ಷದಿಂದ ಕಳ್ಳತನದ ಹಿಂದಿದ್ದಾನೆ, ಹಲವು ಕೇಸ್’ಗಳು ಇವನ ಮೇಲಿವೆ. ಹಾಗಿದ್ದರೆ, ಇವರನ್ನು ಹಿಡಿದಿಲ್ಲವೇ ಎನ್ನುವ ಪ್ರಶ್ನೆಗೆ, ಹಿಡಿಯುವುದು ದೊಡ್ಡ ವಿಷಯವಲ್ಲ, ಹಾಕುವ ಕೇಸ್ ೩೯೭. ಅದು ಮುಂದೆ ನ್ಯಾಯಾಲಯದಲ್ಲಿ ಪ್ರೂವ್ ಆಗಲ್ಲ. ಮತ್ತೆ ಆತ ತನ್ನ ಕಾರ್ಯ ಮುಂದುವರಿಸುತ್ತಾನೆ.ಅದಕ್ಕೆ ನಾನು ಆಗಲೇ ಹೇಳಿದ್ದು ಎಲ್ಲದಕ್ಕೂ ಕಾರಣ ಆರಕ್ಷಕರಲ್ಲ ಎಂದು. ಅಲ್ಲದೇ ಈ ಹರೀಶ್ ಬಾಬುಗೆ ಮಾರಣಾಂತಿಕ ಕಾಯಿಲೆ ಬೇರೆ ಇತ್ತು. ಇದ್ದಷ್ಟು ದಿನ ಬಿಂದಾಸ್ ಜೀವನ ಎನ್ನುವ ಮನಸ್ಥಿತಿ ಇರುತ್ತದೆ, ಯಾವುದಕ್ಕೂ ಒಂದು ವೇಳೆ ಪೋಲೀಸ್ ಅತಿಥಿಯಾದರೂ ಆತನಿಗೆ ಭಯವಿರುವುದಿಲ್ಲ.”
ಇಷ್ಟು ಕೇಳಿದ ನನಗನಿಸಿದ್ದು – ಇದು ನಮ್ಮ ವ್ಯವಸ್ಥೆಯ ವೈಫಲ್ಯ ಇಲ್ವಾ?? ಆರಕ್ಷಕರು ಇಷ್ಟೆಲ್ಲಾ ಮಾಡಿ, ಕಳ್ಳರನ್ನು ಹಿಡಿದಾಗಲೂ ಅದೂ ೫೦-೧೦೦ ಕೇಸ್ ಇರುವಾತ ಸುಲಭದಲ್ಲಿ ಕೋರ್ಟ್ ಅಲ್ಲಿ ಪ್ರೂವ್ ಆಗದೇ ಮತ್ತೆ ಪುನಃ ದಂಧೆಗೆ ಇಳಿಯುತ್ತಾರೆ ಎಂದರೆ ಪಾಪ ಪೋಲೀಸರಾದರೂ ಏನು ಮಾಡಿಯಾರು? ವ್ಯವಸ್ಥೆಯ ವೈಫಲ್ಯವೇ ಸರಿ!
ಜಗದೀಶ್ ಅವರನ್ನು ಹತ್ಯೆಮಾಡಿದವರನ್ನು ಹಿಡಿಯಲು ಇನ್ನಿಲ್ಲದಂತೆ ಒತ್ತಡವಿತ್ತು. ಜನಸಾಮಾನ್ಯರನ್ನಲ್ಲ, ಪೋಲೀಸರನ್ನೇ ಈ ಮಟ್ಟಿಗೆ ಕೊಲ್ಲುತ್ತಾರೆಂದರೆ ಎಲ್ಲಿದೆ ನಮ್ಮ ಪೋಲೀಸ್ ಇಲಾಖೆ ಎಂದು ಜನ ಮಾತನಾಡಿಕೊಳ್ಳುತ್ತಿರುವಾಗ ಹಂತಕರನ್ನು ಆದಷ್ಟು ಬೇಗೆ ಹಿಡಿಯುವುದು ಪೋಲೀಸ್ ಇಲಾಖೆಗೆ ಅನಿವಾರ್ಯವಾಗಿತ್ತು. ಇಂತಹಾ ಸಮಯದಲ್ಲಿ ಹಂತಕರನ್ನು ಹಿಡಿಯುವುದಕ್ಕಾಗಿ ಸ್ಪೆಶಲ್ ಟೀಮ್ ಒಂದು ತಯಾರಾಗುತ್ತದೆ. ಐಜಿಪಿ ಚಕ್ರವರ್ತಿ ಅವರ ನೇತೃತ್ವದಲ್ಲಿ, ಸುಮಾರು ಇಪ್ಪತ್ತು ಜನರ ಟೀಮ್ ರೆಡಿಯಾಗುತ್ತದೆ. ಸತ್ಯನಾರಾಯಣ ಅವರೂ ಈ ಟೀಮ್ ಮೆಂಬರ್ ಆಗಿ ಆಯ್ಕೆಯಾಗುತ್ತಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ಬನೋತ್, ಚಂದ್ರಗುಪ್ತ ರಾಮನಗರ ಎಸ್ಪಿ, ಕಾರ್ತಿಕ್ ರೆಡ್ಡಿ ತುಮಕೂರು ಎಸ್ಪಿ,ಬಾಳೆಗೌಡ ಸಿಪಿಐ, ಪರಮೇಶ್ ಮಲ್ಲೇಶ್ ಕಿಶೋರ್ ಕುಮಾರ್ ಗಿರೀಶ್ ನಾಯಕ್, ಸಬ್ ಇನ್ಸ್ಪೆಕ್ಟರ್’ಗಳಾದ ಮಾರುತಿ, ಕುಮಾರ್, ಸುನೀಲ್,ನವೀನ್, ಜಗದೀಶ್, ಅವಿನಾಶ್ ಇವರೆಲ್ಲ ಇದೇ ಟೀಮ್’ನಲ್ಲಿದ್ದ ಇನ್ನು ಹಲವರು. ಮೊನ್ನೆ ಪೇಪರ್ ಅಲ್ಲಿ ಓದಿದ್ರಾ? ಮೊಬೈಲ್ ನೆಟ್’ವರ್ಕ್ ಟ್ರೇಸ್ ಮಾಡಿ ಹಿಡಿದಿದ್ದಾರೆ ಎಂದು. ಅಸಲಿಗೆ ಇವರ ನಿಜವಾದ ಸ್ಟ್ರಾಟಜಿ ಇದ್ದದೇ ಬೇರೆ. ಅಫ್’ಕೋರ್ಸ್ ಕಳ್ಳರು ಕೊಲೆಗಾರರು ಪೋಲೀಸರು ತಮ್ಮ ಹಿಂದೆ ಬಿದ್ದಿದ್ದಾರೆ ಎಂದು ಗೊತ್ತಾದಾಗ ನಂಬರ್ ಬದಲಿಸುವುದು, ಅಂತದ್ದನ್ನೆಲ್ಲಾ ಮಾಡಿಯೇ ಮಾಡುತ್ತಾರೆ. ಆದರೆ ಪೋಲೀಸರೂ ಅದೊಂದೇ ತಂತ್ರದ ಮೊರೆ ಹೋಗದೆ ಬೇರೆ ಬೇರೆ ವಿದ್ಯೆಗಳನ್ನು ಪ್ರಯೋಗಿಸುತ್ತಾರೆ. ಇಲ್ಲಿ ಅವರು ಪ್ರಯೋಗಿಸಿದ್ದೂ ಅದೇ. ವಾಹನ ಕಳ್ಳರು, ತಾವು ಕದ್ದ ಮಾಲನ್ನೆಲ್ಲಾ ಒಂದೆಡೆ ಮಾರುತ್ತಾರೆ. ಕರ್ನಾಟಕದಲ್ಲಿ ಕಳವಾದ ಮಾಲುಗಳನ್ನು ಇಲ್ಲೇ ಮಾರಾಟ ಮಾಡುವುದಿಲ್ಲ. ಅವರದ್ದೇ ಆದ ನಂಬಿಕಸ್ತರ ನಿಶ್ಚಿತ ನೆಟ್ವರ್ಕ್ ಮಾಡಿಕೊಂಡು ಡೀಲ್ ಮಾಡಿಕೊಳ್ಳುತ್ತಾರೆ. ಅದೇ ರೀತಿ , ಈ ಹರೀಶ್ ಬಾಬು ತಂಡ ಆಂಧ್ರದ ಒಂದು ಊರಿನಲ್ಲಿ ತನ್ನ ಮಾಲುಗಳನ್ನು ಮಾರುತ್ತಿದ್ದರು. ಪೋಲೀಸರಿಗೆ ಅದು ಗೊತ್ತಿಲ್ಲದ ವಿಷಯವೇನಲ್ಲ, ಈ ತಂಡದವರು ಕದ್ದ ಮಾಲುಗಳನ್ನು ಕೊಂಡು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲಕನ ಹಿಂದೆ ಬಿದ್ದ ಇವರು, ಆತನ ಮೂಲಕ ಈ ಹಂತಕರ ತಂಡ ಎತ್ತ ಸಾಗುತ್ತಿದೆ ಎಂದು ತಿಳಿದುಕೊಂಡು ತಮ್ಮ ಕಾರ್ಯ ಚುರುಕುಗೊಳಿಸಿ, ಹಂತಕರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೇಗೆ ಕಳ್ಳರು ಚಾಲಾಕಿತನದಿಂದ ನೆಟ್ವರ್ಕ್ ರಚಿಸಿಕೊಂಡು ವ್ಯವಹರಿಸುತ್ತಿದ್ದರೋ ಹಾಗೇನೇ ಪೋಲೀಸರೂ ತಮ್ಮ ಚಾಲಾಕಿತನದಿಂದಲೇ ಆ ನೆಟ್ವರ್ಕನ್ನು ಭೇದಿಸಿದರು. ಜೊತೆಗೇ ತಮ್ಮ ಸಹೋದ್ಯೋಗಿಯಾಗಿದ್ದ ಪ್ರಾಮಾಣಿಕನ ಹತ್ಯೆ ಮಾಡಿದವರನ್ನು ಹಿಡಿದ ತೃಪ್ತಿಯೊಂದಿಗೆ ವಾಪಾಸ್ ಬಂದರು.
ಇವೆಲ್ಲಾ ಜಗದೀಶ್ ಹತ್ಯೆಯ ಹಿಂದಿನ ವಿಷಯವಾಯಿತು. ಪೋಲೀಸ್ ಜೀವನದ ಹಲವು ವಿಷಯಗಳು, ಸಾರ್ವಜನಿಕರೊಂದಿಗಿನ ಅವರ ಒಡನಾಟ ಹೀಗೆ ಹಲವು ವಿಷಯಗಳ ಕುರಿತು ಹೀಗೆ ಮಾತನಾಡುತ್ತಾರೆ ಸತ್ಯನಾರಾಯಣ ಇವರು. ಇಂದು ಸಮಾಜ ಬಹಳಷ್ಟು ಬದಲಾಗಿದೆ, ಮೊದಲಿನಂತೆ ಜನ ಕ್ರಿಮಿನಲ್ಸ್’ಗೆ ಹೆದರಿ ಸಾಕ್ಷಿ ಹೇಳಲು, ವಿಷಯ ತಿಳಿಸಲು ಭಯ ಪಡುತ್ತಿಲ್ಲ, ನಮಗೆ ಏನಿದ್ದರೂ ಸಹಾಯ ಮಾಡಬೇಕಾಗಿರುವುದು ಜನ ಸಾಮಾನ್ಯರು.ಅಂತಹಾ ಕೆಲಸವನ್ನು ಇಂದು ಎಲ್ಲರೂ ಮಾಡುತ್ತಿದ್ದಾರೆ, ಜನ ಮಿಂಗಲ್ ಆಗ್ತಿದ್ದಾರೆ, ಅಲ್ಲದೇ ಫೇಸ್’ಬುಕ್ , ಟ್ವಿಟರ್’ನಂತಹ ಸಾಮಾಜಿಕ ಜಾಲತಾಣಗಳು ನಮ್ಮನ್ನು ಜನರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡುತ್ತಿದೆ. ಸಾಮಾನ್ಯರೆಲ್ಲಾ ನಮಗೆ ಇದೇ ರೀತಿ ಸಹಕರಿಸುತ್ತಾ ಸಾಗಿದರೆ,ನಮ್ಮ ಹಾದಿಯೂ ಸುಗಮ ಮಾತ್ರವಲ್ಲದೇ ಅದೆಷ್ಟೋ ಪಾತಕ ಲೋಕವನ್ನೇ ಇಲ್ಲವಾಗಿಸಬಹುದು ಎಂದು. ಜೊತೆಗೇ, ಕ್ರೈಂ ರೇಟ್ ಇಂದು ಏರುತ್ತಿದೆ,ರೇಪ್ ಎಲ್ಲೆಲ್ಲೂ ತಾಂಡವವಾಡುತ್ತಿದೆ ಅದನ್ನು ಇಲ್ಲವಾಗಿಸುವುದು ಸಾಧ್ಯವೇ ಇಲ್ವಾ ಎಂದಾಗ ಅವರು ಹೇಳಿದ್ದಿಷ್ಟೇ, ಸೋಷಿಯಲ್ ಮತ್ತೆ ಡೊಮೆಸ್ಟಿಕ್ ಎಂದು ಎರಡು ಬಗೆಯ ಕ್ರೈಂ ಇರತ್ತೆ, ಸೋಷಿಯಲ್ ಕ್ರೈಂ ಆದರೆ ಪೂರ್ತಿ ಅದರ ಜವಾಬ್ದಾರಿ ನಮ್ಮ ಮೇಲೆ. ಆದರೆ ಡೊಮೆಸ್ಟಿಕ್ ಎಂದರೆ, ಪುಟ್ಟ ಮಗುವನ್ನು ರೇಪ್ ಮಾಡುವುದು, ಮತ್ತೆಲ್ಲೋ ತಂದೆ ಮಗಳನ್ನು ರೇಪ್ ಮಾಡುವುದು, ಇನ್ನೆಲ್ಲೋ ಲೈಂಗಿಕ ಶೋಷಣೆ ಇದೆಲ್ಲಾ ಮನೆಗಳ ಒಳಗೆ ನಡೆಯುವಂತದ್ದು. ಇದಕ್ಕೆಲ್ಲಾ ನಮ್ಮಗಳಲ್ಲಿ ಅವಾರ್’ನೆಸ್ ಕ್ರಿಯೇಟ್ ಆಗಬೇಕು. ಸಂಬಂಧಗಳಿಗಿರುವ ಬೆಲೆಗಳನ್ನು ಪ್ರತಿಯೊಬ್ಬನ ಮನದಲ್ಲೂ ಮೂಡಬೇಕು, ನಮ್ಮ ವಾತಾವರಣ ಸರಿಯಾದಂತೇ ಇಂತಹಾ ಅವಸವ್ಯಗಳೆಲ್ಲಾ ತಾನಾಗಿಯೇ ಕಡಿಮೆಯಾಗುತ್ತಾ ಹೋಗುತ್ತದೆ. ಅಟೋಮೆಟಿಕ್ ಆಗಿ ಕ್ರೈಂ ರೇಟ್ ಕೆಳಗಿಳಿಯುತ್ತದೆ.
ಹೌದಲ್ವಾ? ನಮ್ಮಲ್ಲಿ ಜನ ಸಾಮಾನ್ಯರಲ್ಲಿ ಸಂಬಂಧಗಳ ಬೆಲೆ ಅರ್ಥವಾಗಬೇಕು, ಪ್ರತಿ ಮನುಷ್ಯನಿಗೂ ತನ್ನದೇ ಆದ ಜೀವನವಿದೆ, ಆತನಿಗೆ ಬದುಕುವ ಹಕ್ಕಿದೆ, ಸರಿಯಾದ ದಾರಿಯಲ್ಲಿ ನಡೆದರೆ ಜೀವನವೇನೂ ಕಷ್ಟದ ಹಾದಿಯಲ್ಲ ಎನ್ನುವುದರ ಅರಿವು ನಮ್ಮಲ್ಲಿ ಮೂಡಬೇಕು ತನ್ನಿಂತಾನೇ ಪಾತಕ ಪ್ರಪಂಚ ಸಣ್ಣದಾಗುತ್ತಾ ಹೋಗುತ್ತದೆ.
ಇಷ್ಟೆಲ್ಲಾ ಮಾತನಾಡಿದ ಬಳಿಕ ನನಗನಿಸಿದ್ದು , ನಮಗಾಗಿ ಇಷ್ಟೆಲ್ಲಾ ಮಾಡುವ ಇವರಿಗೆ ಸವಲತ್ತುಗಳು ವ್ಯವಸ್ಥೆಗಳು ಇನ್ನೂ ಪೂರಕವಾಗಿರಬೇಕು.ಈಗ ನೋಡಿ, ಒಂದು ಸ್ಟೇಷನ್ ಎಂದರೆ ಅಲ್ಲಿ ಹೆಚ್ಚೆಂದರೆ ೧೫-೨೦ ಮಂದಿ ಇರುತ್ತಾರೆ, ಹಗಲು ಇಂತಹಾ ಇನ್ವೆಸ್ಟಿಗೇಷನ್’ಗೆ ಹೊರಟಾಗ ಪೋಲೀಸ್ ಸಿಬ್ಬಂದಿ ಹಲವೆಡೆ ಕಾರ್ಯ ನಿರತರಾಗಿರುತ್ತಾರೆ. ಈ ಕಾರ್ಯಕ್ಕೆ ಸಿಗುವುದು ೪-೫ ಮಂದಿ, ಈ ಪಾತಕ ಲೋಕದವರೋ ಹಲವು ಆಯುಧಗಳನ್ನು ಹಿಡಿದುಕೊಂಡೇ ಓಡಾಡುವವರು, ಅವರಿಗೆ ಈ ಆರಕ್ಷಕ ಮಂದಿ ಏನಾದರು ಮಾಡಿದರೆ, ಮಾನವ ಹಕ್ಕು ಉಲ್ಲಂಘನೆ ಎಂದು ಬೊಬ್ಬಿಡಲು ನಾವುಗಳು ರೆಡಿಯಾಗಿರುತ್ತೇವೆ. ಈ ನಿಟ್ಟಿನಲ್ಲಿ ನಾವೂ ಯೋಚಿಸಬೇಕು, ಮೊದಲನೆಯದಾಗಿ ಇವರಿಗೆ ಸಿಗುತ್ತಿರುವ ವ್ಯವಸ್ಥೆಗಳು ಪೂರಕವಾಗಬೇಕು, ಒಂದು ಇನ್ವೆಸ್ಟಿಗೇಷನ್’ಗೆ ಹೊರಟಾಗ ಜೊತೆಯಾಗಲು ಸಿಬ್ಬಂದಿಗಳು ಜಾಸ್ತಿಯಾಗಬೇಕು, ಜೊತೆಗೇ ಪೋಲೀಸರು ಏನೂ ಮಾಡುತ್ತಿಲ್ಲ ಎನ್ನುವ ಕೂಗಿನ ಬದಲು, ನಮ್ಮಿಂದಾಗುವ ಸಹಕಾರದ ಜೊತೆಗೇ, ನಮ್ಮ ಜೊತೆಗಿರುವವರ ಮನಸ್ಥಿತಿಯನ್ನು ತಿದ್ದುವ ಪ್ರಯತ್ನ ನಡೆಯಬೇಕು. ಏನಂತೀರಿ??
ಓಹ್ ಅಂದಹಾಗೆ ಮುಖ್ಯ ವಿಷಯ ಹೇಳೋದು ಮರೆತು ಹೋಯಿತು ನೋಡಿ, ಹಂತಕರನ್ನು ಹಿಡಿದ ಇವರಿಗೆ ಐದು ಲಕ್ಷ ಬಹುಮಾನವನ್ನು ಘೋಷಿಸಲಾಗಿದೆ, ಆದರೆ ಈ ಪೋಲೀಸರು ಅದನ್ನು ಜಗದೀಶ್ ಫ್ಯಾಮಿಲಿಗೆ ಕೊಡಲು ನಿರ್ಧರಿಸಿದ್ದಾರೆ. ಜಗದೀಶರನ್ನು ಮರಳಿ ಬದುಕಿಸಲು ಸಾಧ್ಯವಾಗದಿದ್ದರೂ ತಮ್ಮ ಕೆಲಸದ ಮೂಲಕ ಸಾರ್ಥಕತೆಯನ್ನು ಸಾಧಿಸಿದ್ದಾರೆ. ಗೆಳೆಯನ ಸಾವಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಮ್ಮ ನಡುವಿದ್ದೂ ಅಸಾಮಾನ್ಯರಾಗಿ ನಿಲ್ಲುವ, ನಮ್ಮ ಒಳ್ಳೆಯದಕ್ಕೆ ಸದಾ ದುಡಿಯುವ ಇವರಿಗೊಂದು ಹಾಟ್ಸ್ ಆಫ್!