ಅಂಕಣ

ಅಮ್ಮಾ ನೀನೇಕೆ ಹೀಗೆ ಮಾಡಿದೆ?

ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾ ನಭವತಿ(ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಎಂದಿಗೂ ಹುಟ್ಟಲಾರಳು) ಎಂಬ ಮಾತನ್ನು ಆದಿ ಶಂಕರಾಚಾರ್ಯರು ಭಾರತದಲ್ಲಿ ಮಾತ್ರ ಹೇಳಲು ಸಾಧ್ಯವಾಯಿತು.ಸನ್ಯಾಸಿಗಳು ಎಲ್ಲವನ್ನೂ ತೊರೆದವರಾದರೂ ಶಂಕರರಿಗೆ ತಮ್ಮ ತಾಯಿಯ ಮೇಲಿನ ವ್ಯಾಮೋಹವನ್ನು ತೊರೆಯಲಾಗಲೇ ಇಲ್ಲ. ಶಂಕರರನ್ನು ಮೊಸಳೆ ಕಚ್ಚಿ ಹಿಡಿದು ಸನ್ಯಾಸಿಯಾದರೆ ಮಾತ್ರ ಜೀವದಾನ ಮಾಡುತ್ತೇನೆ ಎಂದಾಗ ಅವರ ತಾಯಿ ಆರ್ಯಾಂಬೆ ಮಗ ಜೀವಂತವಾಗಿದ್ದರೆ ಅಷ್ಟೇ ಸಾಕು, ಎಲ್ಲಾದರೂ ಇರಲಿ ಎಂದು ಶಂಕರರಿಗೆ ಸನ್ಯಾಸಿಯಾಗಲು ಒಪ್ಪಿಗೆ ನೀಡಿದರು. ಮಗ ಬದುಕಿರುವಾಗಲೇ ಸನ್ಯಾಸಿಯಾಗಲು ಆತನ ಶ್ರಾದ್ಧವನ್ನು ಅವನೇ ಮಾಡಿಕೊಳ್ಳುವುದನ್ನು ಯಾವ ತಾಯಿ ತಾನೇ ಸಹಿಸಿಯಾಳು. ಅದಕ್ಕೇ ಶಂಕರರು ಅವರ ತಾಯಿಗೆ ನೀನು ನೆನೆಸಿಕೊಂಡಾಗೆಲ್ಲ ನಿನ್ನ ಹತ್ತಿರ ಬರುತ್ತೇನೆ ಎಂದಿದ್ದು. ಇಂಥ ಭಾವನಾತ್ಮಕ ಸಂಬಂಧಗಳನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ. ಅಂದು ಶಂಕರರ ಒಂದು ಮಾತಿನಿಂದ ಭಾರತ ಜಗತ್ತಿಗೆ ತಾಯ್ತನದ ಹೊಸ ವ್ಯಾಖ್ಯಾನವನ್ನೇ ತಿಳಿಸಿಕೊಟ್ಟಿತು.

ಮಹಾಭಾರತದ ಕುಂತಿಯೂ ಅಷ್ಟೇ.ಮದುವೆಯಾಗದೇ ಮಗುವನ್ನು ಹೆತ್ತಾಗ ಆ ಮಗುವನ್ನು ಒಲ್ಲದ ಮನಸ್ಸಿನಿಂದಲೇ ಆಕೆ ದೂರ ಮಾಡಬೇಕಾಯಿತು.ಆದರೆ ಮಗುವನ್ನು ಕೊಲ್ಲಲಿಲ್ಲ.ಎಲ್ಲಾದರೂ ಬದುಕಿಕೊಳ್ಳಲಿ ಎಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಟ್ಟಳು.ಕೊನೆಗೆ ಆ ಮಗ ಕರ್ಣನಾದ.ಮುಂದೆ ಕೌರವರ ಪಾಳಯದಲ್ಲಿರುವ,ದುರ್ಯೋಧನನಿಗೆ ಅತ್ಯಂತ ಆಪ್ತನಾದ ಕರ್ಣ ತನ್ನ ಮಗನೇ ಎಂದು ಗೊತ್ತಾದಾಗ ಕುಂತಿಗೆ ಧರ್ಮಸಂಕಟವಾಯಿತು.ಯುದ್ಧದ ಹಿಂದಿನ ದಿನ ಕರ್ಣನ ಬಳಿ ಹೋಗಿ ತನ್ನ ಐವರು ಪಾಂಡವ ಮಕ್ಕಳ ಪ್ರಾಣ ಬಿಕ್ಷೆ ಬೇಡುತ್ತಾಳೆ.ಮಗನ ಬಳಿಯೇ ತಾಯಿ ತನ್ನ ಇತರ ಮಕ್ಕಳ ಪ್ರಾಣ ಭಿಕ್ಷೆ ಬೇಡುವಂಥ ಆ ಸನ್ನಿವೇಶ ಹೇಗಿದ್ದಿರಬಹುದು?ಕರ್ಣ ಯುದ್ಧದಲ್ಲಿ ಸಾಯುವುದನ್ನು ನಿಸ್ಸಹಾಯಕಳಾಗಿ ನೋಡುತ್ತಾ ಕುಂತಿ ಮೂಕರೋದನ ಮಾಡಿದಳು.ಎಲ್ಲ ಕಾಲದಲ್ಲೂ ತಾಯಿ ಮಕ್ಕಳ ಒಳ್ಳೆಯದನ್ನು,ಅವರ ಅಭಿವೃದ್ಧಿಯನ್ನು ಬಯಸಿದವಳೇ.

ಇತ್ತೀಚೆಗೆ ಬಿಡುಗಡೆಯಾದ ‘ಬಾಹುಬಲಿ’ ಎಂಬ ತೆಲುಗು ಸಿನಿಮಾದಲ್ಲೂ ಶಿವಗಾಮಿ ಎಂಬ ಪಾತ್ರಧಾರಿ ಪುಟ್ಟ ಮಗುವನ್ನು,ಮುಂದೆ ಮಾಹಿಷ್ಮತಿ ಸಾಮ್ರಾಜ್ಯಾಧೀಶ್ವರನಾಗಿ ಮೆರೆಯಬೇಕಾದ ಶಿವುಡುವನ್ನು ರಕ್ಷಿಸಲು ಪ್ರವಾಹದಲ್ಲೂ ಜಗ್ಗದೇ ಒಂದೇ ಕೈಯಲ್ಲಿ ಮಗುವನ್ನು ಎತ್ತಿ ಹಿಡಿದು ನಡೆಯುತ್ತಾಳೆ.ತಾನು ಪ್ರಾಣತ್ಯಾಗ ಮಾಡಿದರೂ ಮಗು ಜಲಸಮಾಧಿಯಾಗದಂತೆ ತಡೆಯುತ್ತಾಳೆ.ಅಷ್ಟಕ್ಕೂ ಆ ಮಗು ಅವಳದ್ದಾಗಿರಲಿಲ್ಲ.ಆದರೂ ಅದಕ್ಕೆ ತಾಯಿಯ ಪ್ರೀತಿ ತೋರಿ ಅದನ್ನು ರಕ್ಷಿಸುತ್ತಾಳೆ.ಬೇರೆಯವರ ಮಗುವಿಗೂ ತಾಯಿಯಾಗಿ,ಆ ಮಗುವಿಗಾಗಿ ಪ್ರಾಣ ತ್ಯಜಿಸುವುದನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ.

ಭಾರತದಲ್ಲಿ ಎಲ್ಲ ಕಾಲಕ್ಕೂ ಎಲ್ಲ ತಾಯಂದಿರೂ ಮಾತೃತ್ವದ ಹಿರಿಮೆಯನ್ನು ಎತ್ತಿ ಹಿಡಿದವರೇ.ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಬ್ರಿಟಿಷರೊಂದಿಗೆ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ,ಶಿವಾಜಿಯನ್ನು ಹಿಂದೂ ಧರ್ಮರಕ್ಷಕನಾಗುವಂಥೆ ಕ್ಷಾತ್ರತೇಜ ತುಂಬಿ ಬೆಳೆಸಿದ ಜೀಜಾಬಾಯಿ,ಕೃಷ್ಣದೇವಾರಾಯ ಮಗುವಾಗಿದ್ದಾಗ ಆತನನ್ನು ಬೆಳೆಸಿ ವಿಜಯನಗರದ ಅರಸನನ್ನಾಗಿ ಮಾಡಿದ ಆತನ ಸಾಕು ತಾಯಿ,ದೇಶಕ್ಕೆ ಲಕ್ಷಾಂತರ ವೀರ ಸೈನಿಕರನ್ನು ಕೊಟ್ಟ ವೀರ ತಾಯಂದಿರು ಎಲ್ಲರೂ ಮಹಾಮಾತೆಯರೇ.

ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಘಟನೆಗಳನ್ನು ಗಮನಿಸಿದಾಗ ಭಾರತದಲ್ಲಿ ತಾಯ್ತನದ ಮಹತ್ವ,ಮಾತೃತ್ವದ ಹಿರಿಮೆ ಕಡಿಮೆಯಾಗುತ್ತಿದೆಯೇನೋ ಎನಿಸುತ್ತಿದೆ.ತಾಯಿಯೂ ಕ್ರೂರಿಯಾಗುತ್ತಿದ್ದಾಳೆ.ಮಕ್ಕಳನ್ನು ತಾಯಿಯೇ ಕೊಂದಂಥ ಘಟನೆಗಳನ್ನು ನಾವು ಕೇಳುತ್ತಿದ್ದೇವೆ.ಶಂಕರಾಚಾರ್ಯರ ಮಾತು ಸುಳ್ಳಾಗುತ್ತದೇನೋ ಎಂಬ ಭಯ ಶುರುವಾಗಿದೆ.ವಿದೇಶಗಳಲ್ಲಿ ತಾಯಿ ಮಕ್ಕಳ ಸಂಬಂಧ ವ್ಯಾವಹಾರಿಕವಾಗಿ ಹಲವು ವರ್ಷಗಳೇ ಕಳೆದಿದ್ದರೂ ಭಾರತದಲ್ಲಿ ಮೊನ್ನೆ ಮೊನ್ನೆಯವರೆಗೂ ಎಲ್ಲ ತಾಯಂದಿರೂ ಮಹಾಮಾತೆಯರೇ ಆಗಿದ್ದರು.

ಬದಲಾಗುತ್ತಿರುವ ಕಾಲಘಟ್ಟದಲ್ಲಿ,ನಗರೀಕರಣಗೊಳ್ಳುತ್ತಿರುವ ಸಂಸ್ಕೃತಿಯಲ್ಲಿ ತಾಯಂದಿರ ಪಾತ್ರವೂ ಬದಲಾಗುತ್ತಿದೆ. ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿದ್ದರಂತೂ ಬಹುತೇಕ ಕಡೆ ಮಕ್ಕಳು ಅಪ್ಪ ಅಮ್ಮನಿದ್ದೂ ಅನಾಥವಾಗೇ ಬೆಳೆಯುತ್ತಿರುವಂತೆ ಭಾಸವಾಗುತ್ತದೆ.ಇಂಥ ವಾತಾವರಣದಲ್ಲಿ ಹೆಣ್ಣು ಮಗುವೊಂದು ಬೆಳೆದರೆ,ಅದಕ್ಕೆ ಸರಿಯಾದ ತಾಯಿಯ ಪ್ರೀತಿ ಸಿಗದಿದ್ದರೆ ಮುಂದೆ ಅದು ಬೆಳೆದು ದೊಡ್ಡದಾಗಿ ಅಮ್ಮನಾದಾಗ ಅದಕ್ಕೆ ತಾಯ್ತನದ ಮಹತ್ವವೇ ಗೊತ್ತಿರುವುದಿಲ್ಲ.

ತುಂಬ ಆತಂಕಕ್ಕೀಡು ಮಾಡುತ್ತಿರುವ ಸಂಗತಿ ಎಂದರೆ ಎಂದಿನ ದಿನಗಳಲ್ಲಿ ಕೆಲವು ತಾಯಂದಿರೇ ತಮ್ಮ ಮಕ್ಕಳ ಬದುಕಿಗೆ ಮುಳ್ಳಾಗುತ್ತಿರುವುದು.ಕೆಲವೊಮ್ಮೆ ಮಕ್ಕಳು ಸಣ್ಣ ತಪ್ಪು ಮಾಡಿದಾಗ,ತಾಯಂದಿರ ಯಾವುದೋ ಕೆಲಸಗಳಿಗೆ ಮಗು ಅಡ್ಡಿಪಡಿಸಿದಾಗ,ಯೌವ್ವನಕ್ಕೆ ಬಂದಾಗ ಮಗಳು ಯಾರನ್ನೋ ಪ್ರೀತಿಸಿದಳೆಂದು,ತಮ್ಮ ಆಸ್ತಿ,ಅಂತಸ್ತಿಗೆ ತಕ್ಕಂತೆ ಮಕ್ಕಳು ನಡೆದುಕೊಳ್ಳುತ್ತಿಲ್ಲವೆಂದು,ಇನ್ನು ಕೆಲವೊಮ್ಮೆ ಆಸ್ತಿಯ ಆಸೆಗಾಗಿ ಮಕ್ಕಳನ್ನು ಬಲಿ ಕೊಡುತ್ತಿರುವುದರಲ್ಲಿ ತಾಯಿಯೂ ಭಾಗಿಯಾಗುತ್ತಿರುವುದು ಬಹಳ ಗಂಭೀರವಾದ ವಿಷಯ.ಅನೇಕ ಸಂದರ್ಭಗಳಲ್ಲಿ ಯಾವ ತಪ್ಪನ್ನೂ ಮಾಡಿರದ ಅಥವಾ ಕ್ಷಮಿಸಲರ್ಹವಾದ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ್ದಕ್ಕೇ ಮಕ್ಕಳು ತಾಯಿಯಿಂದಲೇ ನಮ್ಮ ದೇಶದಲ್ಲಿ ಬಲಿಯಾಗುತ್ತಿದ್ದಾರೆ.

ಕೆಲವು ಉದಾಹರಣೆಗಳನ್ನು ನೋಡುವುದಾದರೆ ಇಂದ್ರಾಣಿ ಮುಖರ್ಜಿ ಮತ್ತು ಶೀನಾ ಬೋರಾ ಪ್ರಕರಣ.ಇಲ್ಲಿ ಒಬ್ಬ ಹುಡುಗನನ್ನು ಪ್ರೀತಿಸಿದಳು ಎಂಬ ಏಕೈಕ ಕಾರಣಕ್ಕೆ ಶೀನಾ ಬೋರಾ ತನ್ನ ತಾಯಿ ಇಂದ್ರಾಣಿಯಿಂದಲೇ ಬಲಿಯಾದಳು.ಇಂದ್ರಾಣಿಗೆ ಶೀನಾ ಜನಿಸಿದ್ದೂ ಸಾಂಪ್ರದಾಯಿಕ ದಾಂಪತ್ಯದಿಂದಲ್ಲ. ಲಿವಿಂಗ್ ಟುಗೆದರ್ ಸಂಬಂಧದಿಂದ.ಅಲ್ಲದೇ ಎಲ್ಲರ ಬಳಿಯೂ ಶೀನಾ ತನ್ನ ಸಹೋದರಿ ಎಂದೇ ಇಂದ್ರಾಣಿ ಹೇಳಿಕೊಂಡು ಬಂದಿದ್ದಳು.ತಾನೇ ಜನ್ಮವಿತ್ತ ಮಗಳನ್ನು ತನ್ನ ಸಹೋದರಿ ಎಂದು ಕರೆಯಲು ಯಾವ ತಾಯಿಗಾದರೂ ಮನಸ್ಸು ಬರುತ್ತದೆಯೇ?ಈ ಕೊಲೆಯ ಹಿಂದೆ ಆಸ್ತಿ ಪಡೆಯುವ ಸಂಚೂ ಇದೆ ಎಂಬ ಮಾತೂ ಇದೆ.ಏನೇ ಆದರೂ ಮಗಳನ್ನೇ ತಾಯಿ ಕೊಲ್ಲುವ ಹಂತಕ್ಕೆ ಹೋಗುತ್ತಾಳೆಂದರೆ ನಮ್ಮಲ್ಲಿ ತಾಯ್ತನ ಎತ್ತ ಕಡೆ ಸಾಗುತ್ತಿದೆ ಎಂದು ನಾವು ಆಲೋಚಿಸಬೇಕು?ಶೀನಾ ಬೋರಾಳ ಆತ್ಮ ಈಗ ಕೇಳುತ್ತಿರಬಹುದು ‘ಅಮ್ಮಾ ನೀನೇಕೆ ಹೀಗೆ ಮಾಡಿದೆ?’

ಯೌವ್ವನಕ್ಕೆ ಕಾಲಿಡುವ ಹೊತ್ತಿನಲ್ಲಿ ಮನೆಕೆಲಸದವನ ಮೇಲೆ ಉಂಟಾದ ಆಕರ್ಷಣೆಯನ್ನೇ ನಿಜವಾದ ಪ್ರೀತಿ-ಪ್ರೇಮ ಎಂದು ಭಾವಿಸಿ ಕೆಲಸದಾಳು ಹೇಮರಾಜ್ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಳು ಎಂಬ ಏಕೈಕ ಕಾರಣಕ್ಕೆ ತಮ್ಮ ಒಬ್ಬಳೇ ಮಗಳಾದ ಆರುಷಿ ತಲ್ವಾರ್’ಳನ್ನು ಅವಳ ಅಪ್ಪ-ಅಮ್ಮನೇ ಸೇರಿಕೊಂಡು ಕೊಲೆ ಮಾಡಿದ್ದರು.ಯೌವ್ವನ ಮೂಡುವ ಹೊತ್ತಿನಲ್ಲಿ ಮಗಳಿಗೆ ಕರೆದು ಕೂರಿಸಿಕೊಂಡು ಪ್ರೀತಿಯಿಂದ ಬುದ್ಧಿ ಹೇಳಬಹುದಿತ್ತು ಅವರು.ಆದರೆ ಕ್ಷಣದ ಕೋಪಕ್ಕೆ ಮಗಳನ್ನೇ ಬಲಿ ಕೊಟ್ಟರು.ಇಲ್ಲಿಯೂ ಅಷ್ಟೇ.ತಂದೆ ಸಿಟ್ಟಿಗೆದ್ದು ಕೊಲ್ಲಲು ಹೊರಟಿದ್ದರೂ ಆರುಷಿಯ ತಾಯಿ ಪತಿಯನ್ನು ತಡೆಯಬಹುದಿತ್ತು.ಆದರೆ ಹಾಗಾಗದೇ ತಾಯಿಯೂ ಸೇರಿಕೊಂಡು ಮಗಳನ್ನು ಹತ್ಯೆ ಮಾಡಿದಳು.ಆರುಷಿಯೂ ಕೊನೆಯುಸಿರೆಳೆಯುವುದಕ್ಕೆ ಮುಂಚೆ ಕೇಳಿರಬಹುದು ‘ಅಮ್ಮಾ ನೀನೇಕೆ ಹೀಗೆ ಮಾಡಿದೆ?’

ಇನ್ನು ನಮ್ಮ ದೇಶದಲ್ಲಿ ನಡೆಯುವ ಮರ್ಯಾದಾ ಹತ್ಯೆಗಳಿಗಂತೂ ಲೆಕ್ಕವೇ ಇಲ್ಲ.ಬೇರೆ ಜಾತಿಯ,ಧರ್ಮದವರನ್ನು ಮಕ್ಕಳು ಪ್ರೀತಿಸಿದರು ಎಂದು,ಮದುವೆಯಾಗಿ ಸಂಸಾರ ಮಾಡುತ್ತಿದ್ದಾರೆಂದು ಮಕ್ಕಳನ್ನು ತಂದೆ ತಾಯಿಯೇ ಸೇರಿಕೊಂಡು ಹತ್ಯೆ ಮಾಡಿದ ಪ್ರಕರಣಗಳೂ ಆಗಾಗ ದಾಖಲಾಗುತ್ತಲೇ ಇರುತ್ತದೆ.ಇಲ್ಲಿಯೂ ಅಷ್ಟೇ,ತಾಯಿ ಸಂಯಮ ತೋರಿ ಮಕ್ಕಳ ಪ್ರಾಣ ಉಳಿಸಬಹುದಿತ್ತು.ಪ್ರೀತಿಸುವುದು ಪ್ರಾಣಹರಣದ ಶಿಕ್ಷೆ ನೀಡುವಷ್ಟು ದೊಡ್ಡ ತಪ್ಪೇ ಎಂದು ಆ ತಾಯಂದಿರು ಆಲೋಚಿಸಬಹುದಿತ್ತು.ಹೆಣ್ಣು ಮನೆಯನ್ನು ಬೆಳಗುವ ಜ್ಯೋತಿ ಎನ್ನುತ್ತಾರೆ.ಆ ಜ್ಯೋತಿಗಿಂತಲೂ ಒಂದು ಸ್ಥಾನ ಮೇಲೆಯೇ ಇರುವ ಮನೆಯ ಯಜಮಾನತಿ,ತಾಯಿ ಮಕ್ಕಳನ್ನು ಕೊಲ್ಲುವ ಮೊದಲು ತಾನು ಮಾತೃತ್ವಕ್ಕೆ ಎಂಥ ಅವಮಾನ ಮಾಡುತ್ತಿದ್ದೇನೆ ಎಂದು ಆಲೋಚಿಸಿದ್ದರೆ ಮರ್ಯಾದಾ ಹತ್ಯೆಯ ಹೆಸರಲ್ಲಿ ಹಲವಾರು ಮುಗ್ಧ ಜೀವಗಳು ತಾಯಿಯ ಕೈಯಿಂದಲೇ ಕೊಲೆಯಾಗುತ್ತಿರಲಿಲ್ಲ.ಯಾರದ್ದೋ ಜೊತೆ ಅನೈತಿಕ ಸಂಬಂಧವಿರಿಸಿಕೊಂಡು ಆ ಸಂಬಂಧಕ್ಕೆ ಮಕ್ಕಳು ಅಡ್ಡಿ ಬಂದಾಗ ನಿಷ್ಕರುಣೆಯಿಂದ ಮಕ್ಕಳನ್ನು ಹತ್ಯೆ ಮಾಡಿದ ಘಟನೆಗಳೂ ನಮ್ಮ ದೇಶದಲ್ಲಿ ಘಟಿಸಿವೆ.

ತಾಯಿಯಿಂದಲೇ ಮಕ್ಕಳು ಹತ್ಯೆಗೀಡಾಗುವುದಕ್ಕಿಂತ ದುರ್ಗತಿ ಮತ್ತೊಂದಿಲ್ಲ.ನಮ್ಮ ಪ್ರಜ್ಞಾವಂತ ಮಾತೃ ಸಮಾಜ ಎಚ್ಚೆತ್ತುಕೊಳ್ಳಬೇಕು.ಒಂದು ಜೀವವನ್ನು ಅದರಲ್ಲೂ ತಾವೇ ಜನ್ಮ ಕೊಟ್ಟ ಮಕ್ಕಳನ್ನು ಕೊಲ್ಲುವಂಥ ಕೆಲಸಕ್ಕೆ ತಾಯಂದಿರು ಎಂದೂ ಮುಂದಾಗಬಾರದು.ಆದರೂ ಸಮಾಧಾನದ ಸಂಗತಿ ಎಂದರೆ ತಾಯಿಯೇ ಮಕ್ಕಳನ್ನು ಕೊಂದಂಥ ಪ್ರಕರಣಗಳು ನಮ್ಮ ದೇಶದಲ್ಲಿ ಅಪರೂಪದಲ್ಲಿ ಅಪರೂಪವೆಂಬಂತೆ ವರದಿಯಾಗುತ್ತವೆ.ವಿದೇಶಗಳಂತಲ್ಲ.ಅಲ್ಲಿ ಎಲ್ಲೆ ಇಲ್ಲದ ಸ್ವೇಚ್ಛಾಚಾರದ ಮಧ್ಯೆ ಯಾವ ಸಂಬಂಧಗಳಿಗೂ ಬೆಲೆ ಇಲ್ಲ.ನಮ್ಮದು ಜಗತ್ತಿಗೇ ತಾಯ್ತನದ ಮಹತ್ವವನ್ನು ಹೇಳಿಕೊಟ್ಟ ದೇಶ ಎಂಬುದನ್ನು ಇಂದಿನ ತಾಯಂದಿರು ಮರೆಯಬಾರದು.ಶಂಕರಾಚಾರ್ಯರು ತಾಯಿಯ ಬಗ್ಗೆ ಆಡಿದ ಮಾತು ಸಾರ್ವಕಾಲಿಕ ಸತ್ಯವಾಗಬೇಕು.

ಇಂದಿನ ಯುವಕ-ಯುವತಿಯರೂ ಲಿವಿಂಗ್ ಟುಗೆದರ್’ನಂಥ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದುಕುವ ಮುನ್ನ ಸ್ವಲ್ಪ ಆಲೋಚಿಸಬೇಕು.ಯಾವತ್ತೂ ಮದುವೆ,ದಾಂಪತ್ಯ,ತಾಯ್ತನ ಎಲ್ಲವೂ ನೈತಿಕತೆಯ ನೆಲೆಗಟ್ಟಿನಡಿಯಲ್ಲಿಯೇ ಇರಬೇಕು.ಮಕ್ಕಳಿಗೆ ಒಳ್ಳೆಯದು ಮಾಡದಿದ್ದರೂ ಬೇಡ.ಕಡೇ ಪಕ್ಷ ಅವರ ಪ್ರಾಣ ತೆಗೆಯುವಂಥ ಕೆಲಸಕ್ಕೆ ಯಾವ ತಾಯಿಯೂ ಮುಂದಾಗದಿರಲಿ.ಅಮ್ಮಾ ನೀನೇಕೆ ಹೀಗೆ ಮಾಡಿದೆ ಎಂದು ಯಾವ ಮಕ್ಕಳೂ ಕೇಳುವಂತಾಗದಿರಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!