ಅಂಕಣ

ಕನ್ನಡ ಎನೆ ಅವಮಾನವದೇತಕೆ…?

“ಅಮ್ಮಾ..ಐನೂರು ಅಂದರೆ ಎಷ್ಟು?” ಎಂದು ೩ನೇ ತರಗತಿಯ ಮಗುವೊಂದು ಅಮ್ಮನ ಬಳಿ ಕೇಳುತ್ತಿತ್ತು.

“ಐನೂರು ಅಂದರೆ ಫೈವ್ ಹಂಡ್ರೆಡ್ ಪುಟ್ಟ” ಎಂಬುದು ಅಮ್ಮನ ಉತ್ತರವಾಗಿತ್ತು.

ಹಾಗೆಯೇ ಇತ್ತ ತಿರುಗಿ, ತನ್ನ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ಸಂಬಂಧಿಯ ಬಳಿ ಮಾತು ಮುಂದುವರಿಸುತ್ತಾ ಆ ಮಹಾನ್ ತಾಯಿ ಹೀಗೆಂದಳು : “…ನಮ್ ಮಗನ ಶಾಲೆಯಲ್ಲಿ ಐ.ಸಿ.ಎಸ್.ಇ. ಸಿಲೇಬಸ್ ಅಲ್ವಾ, ಹಾಗಾಗಿ ಅವನಿಗೆ ಕನ್ನಡ ಬರೋದೇ ಇಲ್ಲ”.

ಹೀಗೆನ್ನುವಾಗ ಆ ಇಂಗ್ಲಿಷ್ ತಾಯಿಯ ಮುಖದಲ್ಲಿನ ಹೆಮ್ಮೆ ನೋಡಬೇಕು. ಏನನ್ನೋ ಸಾಧಿಸಿದ ಸಂತೋಷ ಅವಳ ಮುಖದಲ್ಲಿ ತೇಲಾಡುತ್ತಿತ್ತು. ಆದರೆ ಹುಟ್ಟಿದಾಗಿನಿಂದ ನಮಗೇ ಅರಿವಿಲ್ಲದಂತೆ ನಮ್ಮ ಮನದ ಎಲ್ಲ ಭಾವತರಂಗಗಳಿಗೆ ದನಿಯಾಗಿರುವ ಕನ್ನಡ ತಾಯಿಯ ಮೊಗದಲ್ಲಿನ ವಿಷಾದ ಮಾತ್ರ ಆಕೆಗೆ ಕಾಣಿಸಲೇ ಇಲ್ಲ. ಇವೆಲ್ಲದಕ್ಕೂ ನಾನೊಬ್ಬ ಮೂಕ ಪ್ರೇಕ್ಷಕನಾಗಿದ್ದೆ. ನಿಜ. ಇಂದು ನಮ್ಮ ಮಾತೃಭಾಷೆಯ ಪರಿಸ್ಥಿತಿ ಇದು. ಪುಟ್ಟ ಕಂದಮ್ಮಗಳ ತೊದಲುನುಡಿಗಳು ಕೂಡ ಇಂಗ್ಲೀಷಿನಲ್ಲಿ ಕೇಳಿಬರುತ್ತಿದೆ. ಅಂದಮೇಲೆ ಕನ್ನಡದ ಅಸ್ತಿತ್ವ ಎಷ್ಟರ ಮಟ್ಟಿಗಿದೆ ಎಂದು ನಾವು ಊಹಿಸಬಹುದು.

ಇಂದಿನ ಈ ಪರಿಸ್ಥಿತಿಗೆ ಪೋಷಕರು ಮುಖ್ಯ ಕಾರಣವಾಗಿ ನನಗೆ ಕಾಣುತ್ತಾರೆ. ಆಧುನಿಕ ಪೊಷಕರಿಗೆ ತಮ್ಮ ಮಗ/ಮಗಳು ಕನ್ನಡದಲ್ಲಿ ಮಾತಾಡಿದರೆ ಅವಮಾನ ಎಂಬಷ್ಟರ ಮಟ್ಟಿಗಿನ ಕೀಳರಿಮೆ ನಮ್ಮ ಕನ್ನಡದ ಮೇಲೇಕೋ ನಾ ಕಾಣೆ. ಮಕ್ಕಳ ಭವಿಷ್ಯದ ಬಗೆಗಿನ ಕಾಳಜಿ ಖಂಡಿತ ಎಲ್ಲ ತಾಯಿ-ತಂದೆಯರಿಗೂ ಇದ್ದೆ ಇರುತ್ತದೆ. ಹಾಗೆಂದು ನಮ್ಮತನವನ್ನು ಕಳೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಅಲ್ಲವೇ? ನನ್ನ ಪ್ರಕಾರ ಭಾಷೆ ಒಂದು ಸಂಸ್ಕೃತಿಯ ಅವಿಭಾಜ್ಯ ಅಂಗ. ಕೆಲವೊಮ್ಮೆ ಭಾಷೆಯಿಂದಲೇ ಒಂದು ಸಂಸ್ಕೃತಿ ಅಥವಾ ಪ್ರದೇಶ ಗುರುತಿಸಲ್ಪಡುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಭಾಷೆ, ಸಂಸ್ಕೃತಿಯ ಬಗೆಗೆ ಅರಿವು ಮೂಡಿಸುವುದು ಎಲ್ಲರ ಆದ್ಯ ಕರ್ತವ್ಯ. “ನಾವು ಇಂಗ್ಲಿಷಿನಲ್ಲೇ ಸಂಸ್ಕೃತಿಯ ಕುರಿತ ಅರಿವು ಮೂಡಿಸುತ್ತೇವೆ” ಎಂದು ನೀವು ಹೇಳಬಹುದು. ಆದರೆ ನನ್ನ ಪ್ರಕಾರ ಪ್ರತಿ ಸಂಸ್ಕೃತಿಯೊಂದಿಗೆ ಅಲ್ಲಿನ ಭಾಷೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ಪ್ರಾದೇಶಿಕತೆಯ ಸೊಗಡನ್ನು ಅಲ್ಲಿನ ಪ್ರಾದೇಶಿಕ ಭಾಷೆ ಬಿಂಬಿಸುವಷ್ಟು ಸುಂದರವಾಗಿ ಇನ್ಯಾವುದೊ ಪರಕೀಯ ಭಾಷೆ ವರ್ಣಿಸಲಾರದು. ವರ್ಣಿಸಿದರೂ ಅದು ಪ್ರಭಾವಶಾಲಿಯಾಗಲಾರದು. ಭಾಷೆ ನಮ್ಮತನವನ್ನು ಪ್ರತಿನಿಧಿಸುವ ಅಂಶಗಳೊಂದಿಗೆ ಆತ್ಮೀಯತೆಯನ್ನು ಬೆಳೆಸುತ್ತದೆ. ನಮ್ಮ ಕಲೆ, ಸಾಹಿತ್ಯ, ಹಾಗೂ ಸಂಸ್ಕೃತಿಯ ಕುರಿತು ಅಭಿಮಾನ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಜಾಗತಿಕ ಮಟ್ಟದಲ್ಲಿ ಭಾರತ ಇತರ ದೇಶಗಳಿಗಿಂತ ಭಿನ್ನವಾಗಿ ಕಂಗೊಳಿಸುವುದೇ ನಮ್ಮಲ್ಲಿರುವ ವೈವಿಧ್ಯಮಯವಾದ ಪ್ರಾದೇಶಿಕ ಭಾಷೆ ಹಾಗೂ ಸಂಸ್ಕೃತಿಗಳ ಸಮ್ಮಿಲನದಿಂದ. ಆ ವೈವಿಧ್ಯತೆಯನ್ನು ಉಳಿಸಿ ಬೆಳೆಸಬೇಕಾದದ್ದು ಅಲ್ಲಿ ವಾಸಿಸುವ ಜನರ ಆದ್ಯ ಕರ್ತವ್ಯ. ಬೇರೆ ಭಾಷೆಗಳ ಅಧ್ಯಯನ ತಪ್ಪಲ್ಲ. ಒಂದು ರೀತಿಯಲ್ಲಿ ಅದು ಅವಶ್ಯ. ಅದರಿಂದ ಬೇರೆ ಬೇರೆ ಭಾಗಗಳ, ಅಲ್ಲಿನ ಜನರ ಸ್ವಭಾವಗಳ, ಬದುಕಿನ ರೀತಿಗಳ ಕುರಿತ ಪರಿಚಯವಾಗುತ್ತದೆ. ಆದರೆ ಆ ಅಧ್ಯಯನ ಅಲ್ಲಿರುವ ಒಳ್ಳೆಯ ಅಂಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ನಮ್ಮನ್ನು ನಾವು ಅಭಿವೃದ್ಧಿಯ ಪಥದತ್ತ ಕರೆದೊಯ್ಯುವಲ್ಲಿ ಸಹಕರಿಸಬೇಕೇ ಹೊರತು, ನಮ್ಮತನಗಳೇ ಕಳೆದು ನಾವೇ ಅವರಂತಾಗಬಾರದು. ಯಾವುದೋ ಒಂದು ರಾಜ್ಯ/ರಾಷ್ಟ್ರವನ್ನು ಇನ್ನೊಂದು ರಾಜ್ಯ/ರಾಷ್ಟ್ರ ಆಕ್ರಮಿಸಿ ಆಡಳಿತವನ್ನು ಕೈಗೆತ್ತಿಕೊಂಡಾಗ ಮಾತ್ರ ಅದು ಪರಕೀಯತೆಯಲ್ಲ. ನಾವು ನಮ್ಮತನವನ್ನು ಕಳೆದುಕೊಂಡು, ಹೀಯಾಳಿಸಿಕೊಂಡು ಅಥವಾ ಕೀಳರಿಮೆ ಬೆಳೆಸಿಕೊಂಡು ಇನ್ನೊಂದು ಸಂಸ್ಕೃತಿಯ ಅಥವಾ ಭಾಷೆಯ ಅಂಧಾಭಿಮಾನಿಗಳಾಗುವುದೂ ಕೂಡ ಒಂದು ರೀತಿ ಪರಕೀಯರ ದಾಸ್ಯಕ್ಕೆ ಒಳಗಾದಂತೆ. ಇಂದಿನ ಪೀಳಿಗೆ ಹಾಗೊಂದು ದಾಸ್ಯದ ಅಡಿಯಾಳಾಗುವತ್ತ ಹೆಜ್ಜೆ ಹಾಕುತ್ತಿದೆಯೇ ಎಂಬ ಆತಂಕ ನನ್ನನ್ನು ಕಾಡುತ್ತಿದೆ.

ನಮ್ಮ ದೇಶ – ಭಾಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸಿ, ಅವರಲ್ಲಿ ಅಭಿಮಾನದ ಚಿಗುರೊಡೆಸಬೇಕಾದ ಅವರ ಹಿರಿಪೀಳಿಗೆಯೇ ಅವರನ್ನು ಎಲ್ಲ ಸ್ವಂತಿಕೆಗಳಿಂದ ದೂರ ತಳ್ಳುತ್ತಿದೆ. ವಿದ್ಯೆಯ ಜೊತೆ ಸಂಗೀತ, ಕಂಪ್ಯೂಟರ್, ಕರಾಟೆ, ಈಜು, ಹೀಗೆ ಪಟ್ಟಿಮಾಡಲಾಗದಷ್ಟು ಕೆ.ಜಿ.-ಕೆ.ಜಿ. ವಿದ್ಯೆಗಳನ್ನು ಎಲ್.ಕೆ.ಜಿ. ಯಿಂದಲೇ ಕಲಿಸುತ್ತೇವೆ ಎನ್ನುವ ವಿದ್ಯಾಸಂಸ್ಥೆಗಳು ತಮಗೆ ನೆಲೆ ನೀಡಿರುವ ನಾಡಿನ ನಾಡಭಾಷೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದಂತೆ ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನ್ನ ಪ್ರಶ್ನೆ. ನಾನು ಅವರ ತರಗತಿಗಳಿಗೆ ಹೋಗಿಲ್ಲ. ಆ ವ್ಯವಸ್ಥೆಯ ಭಾಗವೂ ಕೂಡ ನಾನಲ್ಲ. ಆದರೆ ನನ್ನನ್ನು ಈ ಬರವಣಿಗೆಗೆ ಪ್ರೇರೇಪಿಸಿದ್ದು ಅಲ್ಲಿ ಓದುವ ಹಲವು ಪುಟ್ಟ ಮಕ್ಕಳ ಜೊತೆಗೆ ಮಾತನಾಡುವಾಗ ಆದ ಅನುಭವಗಳು. ಈ ಲೇಖನದ ಮೊದಲಲ್ಲಿರುವ ಸಂಭಾಷಣೆ ಇದಕ್ಕೊಂದು ಉದಾಹರಣೆ. ‘ಕನ್ನಡ’ ಎಂಬ ಶಬ್ದ ಕೇಳುತ್ತಲೇ ಆ ಮಕ್ಕಳ ಮುಖದಲ್ಲಿ ಕಾಣುವ ಉದಾಸೀನತೆ, ಹಾಗೂ ತಾತ್ಸಾರಭಾವ ನಿಜಕ್ಕೂ ಬೇಸರ ತರಿಸುತ್ತದೆ. ಈ ಪರಿಸ್ಥಿತಿಗೆ ಕಾರಣ ಯಾರು? ಮಕ್ಕಳನ್ನಂತೂ ಖಂಡಿತಾ ಹೊಣೆಗಾರರಾಗಿಸಲು ಸಾಧ್ಯವಿಲ್ಲ. ಅಂದಮೇಲೆ ಅವರ ಸುತ್ತಲಿರುವ, ಅವರನ್ನು ಬೆಳೆಸುತ್ತಿರುವ, ಅವರ ಉಜ್ವಲ ಭವಿಷ್ಯ ರೂಪಿಸುತ್ತಿರುವ ಸುಶಿಕ್ಷಿತ ಪೋಶಕರು ಹಾಗೂ ವಿದ್ಯಾಸಂಸ್ಥೆಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಓದಿಸುವುದು, ಲಕ್ಷಗಟ್ಟಲೆ ಫೀಸು ಕಟ್ಟುವುದು, ಮಕ್ಕಳಿಗೆ ಕನ್ನಡವೇ ಬರುವುದಿಲ್ಲ ಎನ್ನುವುದು ಪೋಷಕರ ಪ್ರತಿಷ್ಠೆಯ ಪ್ರದರ್ಶನಕ್ಕೆ ಕಾರಣವಾಗಿರುವುದು ಅತ್ಯಂತ ಬಾಲಿಶ ಹಾಗೂ ವಿಪರ್ಯಾಸ ಎನಿಸುತ್ತದೆ. ಮಕ್ಕಳಿಗೆ ವಿದ್ಯೆ ಕಲಿಸುವುದು ಅವರ ಜ್ಞಾನಸಂಪಾದನೆಗಾಗಿ ಹಾಗೂ ಅವರ ನೈತಿಕ ಮೌಲ್ಯಗಳ ಔನ್ನತ್ಯಕ್ಕಾಗಿಯೋ ಅಥವಾ ತಮ್ಮ ಪ್ರತಿಷ್ಠೆಗೋ ಎಂಬ ಪ್ರಶ್ನೆಯನ್ನು ಪೋಷಕರು ತಮ್ಮನ್ನು ತಾವೇ ಒಮ್ಮೆ ಕೇಳಿಕೊಳ್ಳಬೇಕು. ಕೆಲವೊಮ್ಮೆ ಈ ಪೋಷಕರ ಪ್ರತಿಷ್ಟೆಯ ಪ್ರದರ್ಶನದಿಂದ ಪ್ರಭಾವಿತರಾದ ಕೆಲವು ಮುಗ್ಧ ಮನಸುಗಳು ತಾವೇನೋ ಬೇರೆಯವರಿಗಿಂತ ಮೇಲ್ದರ್ಜೆಯಲ್ಲಿದ್ದೇವೆ ಎಂಬ ಹುಚ್ಚು ಭ್ರಮೆಗೊಳಗಾಗುವ ಸಂದರ್ಭಗಳೂ ಇವೆ. ತಮ್ಮ ಇಂತಹ ನಡವಳಿಕೆಗಳ ಮೂಲಕ ಎಳೆ ಮನಸ್ಸುಗಳ ನಡುವೆಯೂ ಅಂತರ ಸೃಷ್ಟಿಸುವ ಬಲಿತ ಮನಸ್ಸುಗಳಿಗೆ ಏನು ಹೇಳಬೇಕೋ ತಿಳಿಯದು. ಹಾಗೆಂದು ಎಲ್ಲ ಪೋಷಕರೂ, ಸಂಸ್ಥೆಗಳೂ ಒಂದೇ ರೀತಿ ಇರುತ್ತಾರೆ ಎಂದು ನಾನು ಹೇಳುವುದಿಲ್ಲ. ಕೇವಲ ಜ್ಞಾನಸಂಪಾದನೆಯತ್ತ ತಮ್ಮ ಮಕ್ಕಳನ್ನು ನಡೆಸುತ್ತಾ ಭಾಷೆ ಸಂಸ್ಕೃತಿಗಳ ಬಗೆಗೆ ಅಭಿಮಾನ ಹುಟ್ಟುಹಾಕುವವರ ಉದಾಹರಣೆಗಳೂ ಇವೆ. ಆದರೆ ಅಂತಹವರ ಸಂಖ್ಯೆ ತೀರ ವಿರಳ ಎಂಬುದು ವಿಷಾದ.

ಇವನೇನೋ ಸಮಸ್ಯೆಯೇ ಅಲ್ಲದ ಸಮಸ್ಯೆಯನ್ನು ಇಲ್ಲಸಲ್ಲದ ವಿಚಾರಗಳಿಂದ ವೈಭವೀಕರಿಸಿ ಹೇಳುತ್ತಿದ್ದಾನೆ ಎಂದು ಕೆಲವರಿಗೆ ಅನಿಸಬಹುದು. ಆದರೆ, ಇವೆಲ್ಲವನ್ನೂ ಬರೆದಿರುವುದು ನನ್ನ ಸುತ್ತಮುತ್ತ ನಡೆದ ಕೆಲವು ನೈಜ ದೃಷ್ಟಾಂತಗಳಿಂದ ಪ್ರೇರೆಪಿತನಾಗಿಯೇ ಹೊರತು ಕಲ್ಪನೆಗಳಿಂದಲ್ಲ. ಇಂತಹ ದೃಷ್ಟಾಂತಗಳು ಒಬ್ಬ ಕನ್ನಡ ಸಾಹಿತ್ಯ ಹಾಗೂ ಭಾಷಾ ಪ್ರೇಮಿಯಾಗಿ ಸಹಜವಾಗಿಯೇ ನನಗೆ ನೋವನ್ನುಂಟುಮಾಡಿದವು. ಅದರ ಫಲಶ್ರುತಿತಯೇ ಈ ಲೇಖನ. ಇಲ್ಲಿ ಯಾರನ್ನೂ ವಿರೋಧಿಸುವ ಅಥವಾ ನೋಯಿಸುವ ಉದ್ದೇಶ ನನ್ನದಲ್ಲ. ನಾನಿಲ್ಲಿ ಮುಂದಿಟ್ಟಿರುವ ಪ್ರಶ್ನೆಗಳನ್ನು ಪೋಷಕರು ಹಾಗೂ ವಿದ್ಯಾಸಂಸ್ಥೆಗಳು ತಮ್ಮನ್ನು ತಾವೇ ಕೇಳಿಕೊಂಡರೆ ಬಹುಷಃ ಅವರುಗಳಿಗೇ ಮನವರಿಕೆಯಾಗಬಹುದೇನೋ.

ನಮ್ಮ ಕನ್ನಡ ಯಾವ ಭಾಷೆಗಳಿಗೇನು ಕಡಿಮೆ ಇಲ್ಲ. ಕನ್ನಡ ಸಾಹಿತ್ಯದ ಸೊಬಗು ಅದನ್ನು ಪ್ರೀತಿಸಿ ಅಧ್ಯಯನ ಮಾಡಿದವರಿಗಷ್ಟೇ ಗೊತ್ತು. ಏಳು ಜ್ಞಾನಪೀಠಗಳನ್ನು ಪಡೆದ ಸಾಹಿತಿಗಳ ಭಾಷೆ ಇದು. ‘ಮಹಾಭಾರತ’ದಂತಹ ಮಹಾನ್ ಗ್ರಂಥಕ್ಕೆ ಹೊಸ ಭಾಷ್ಯ ಬರೆದ ಕುಮಾರವ್ಯಾಸನ ಭಾಷೆ ಕನ್ನಡ. ಅದೇ ಮಹಾಭಾರತವನ್ನು ಸಿಂಹಾವಲೋಕನದ ಶೈಲಿಯಲ್ಲಿ ಬರೆದ ‘ಗದಾಯುದ್ಧ’ ಎಂಬ ಸಾಹಿತ್ಯ ಕೃತಿ ನೀಡಿದ ರನ್ನನ ಭಾಷೆ ಕನ್ನಡ . ‘ಮುದ್ದಣ-ಮನೋರಮೆಯರ’ ಸಲ್ಲಾಪದ ಮುದ ಇನ್ನೆಲ್ಲಿಯಾದರೂ ನಮಗೆ ಸಿಗಲು ಸಾಧ್ಯವೇ? “ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ…ಓ ನನ್ನ ಚೇತನ, ಆಗು ನೀ ಅನಿಕೇತನ” ಎಂದ ಕುವೆಂಪು ನುಡಿಗಳಿಗೆ ದನಿಯಾದ ಭಾಷೆ ಕನ್ನಡ. ಬೇಂದ್ರೆಯವರ ‘ನಾಕುತಂತಿ’ಯ ಮಿಡಿತ ನಮ್ಮ ಕನ್ನಡ. ಕಾರಂತರ ‘ಮೂಕಜ್ಜಿಯ ಕನಸುಗಳ’ ಕನ್ನಡಿಯಾದ ಭಾಷೆ ಕನ್ನಡ. ‘ಮಂಕುತಿಮ್ಮನ ಕಗ್ಗ’ದ ಮೂಲಕ ಸಾಹಿತ್ಯ ಸಗ್ಗ ಧರೆಗಿಳಿಸಿದ ಡಿ.ವಿ.ಜಿ.ಯವರು ಬಳಸಿದ ಪದಗಳ ಸುಗ್ಗಿ ಕನ್ನಡ. ಈ ನಿತ್ಯಹರಿದ್ವರ್ಣದ ನಾಡಿನ ‘ನಿತ್ಯೋತ್ಸವ’ವನ್ನು ಬಣ್ಣಿಸಿದ ನಿಸಾರ್ ಅಹಮದ್ ಅವರ ವರ್ಣನೆಗಳನ್ನು ಪ್ರತಿನಿಧಿಸಿದ ಭಾಷೆ ಕನ್ನಡ. ಜಯಂತ್ ಕಾಯ್ಕಿಣಿಯವರಿಂದ ‘ನೀಲಿ ಮಳೆ’ ಬರಿಸಿದ ಭಾಷೆ ಕನ್ನಡ. ಹಂಸಲೇಖ ಹಂಪಿಯ ಕಲ್ಲು ಕಲ್ಲುಗಳಲ್ಲಿ ಕೇಳಿದ ನುಡಿ ಕನ್ನಡ. ಹೀಗೆ, ಬರೆದು ಪಟ್ಟಿ ಮಾಡಲಾಗದಷ್ಟು ಸಾಹಿತಿ ಹಾಗೂ ಸಾಹಿತ್ಯ ಶ್ರೀಮಂತಿಕೆಯನ್ನು ಹೊಂದಿರುವ ಭಾಷೆ ನಮ್ಮದು. ಅಂತಹ ಭಾಷೆಯನ್ನು ಪ್ರೀತಿಸದೆ ಇರಲು ನನ್ನಿಂದಂತೂ ಸಾಧ್ಯವಿಲ್ಲ. ನನಗಂತೂ ಕನ್ನಡದ ರಸಋಷಿ ಹೇಳುವಂತೆ “ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು”. ಆದರೆ ನಮ್ಮ ಇಂದಿನ ಸುಶಿಕ್ಷಿತ ಸಮಾಜಕ್ಕೆ “ಕನ್ನಡ ಎನೆ ಅವಮಾನವದೇತಕೋ?” ನಾನಂತೂ ಅರಿಯೆ.

“ಕಲಿಯೋಕೆ ಕೋಟಿ ಭಾಷೆ, ಆಡೊಕೆ ಒಂದೇ ಭಾಷೆ; ಕನ್ನಡ…ಕನ್ನಡ…”.
ಬಹುಶಃ ನನ್ನ ಲೇಖನದ ಉದ್ದೇಶಕ್ಕೆ ಅತ್ಯಂತ ಸೂಕ್ತವಾದ ಸಾಲುಗಳು ಇವು. ಕನ್ನಡ ಎಂದ ಕೂಡಲೆ ಕನ್ನಡಿಗರ ಮನದಲ್ಲಿ ಮೂಡುವ ಇನ್ನೊಂದು ರೂಪ, ನೆನಪಾಗುವ ಇನ್ನೊಂದು ಹೆಸರು ಡಾ|ರಾಜ್ ಈ ಮೇಲಿನ ಸಾಲುಗಳಿಗೆ ದನಿಯಾಗಿರುವುದು ಅದಕ್ಕೆ ಇನ್ನಷ್ಟು ಔನ್ನತ್ಯವನ್ನು ತಂದುಕೊಡುತ್ತದೆ. ಗೆಳೆಯರೇ, ಒಟ್ಟಾರೆಯಾಗಿ ನಾನು ಹೇಳಹೊರಟಿರುವುದು ಇದನ್ನೇ. ನಾನು ಇಂಗ್ಲಿಷ್ ಭಾಷೆಯ ವಿರೋಧಿ ಖಂಡಿತಾ ಅಲ್ಲ. ನನಗೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ನ ಮಹತ್ವದ ಅರಿವು ಚೆನ್ನಾಗೆ ಇದೆ. ಆದರೆ ನಾನು ಪ್ರತಿಪಾದಿಸುವುದು ಇಷ್ಟು. ಇಂಗ್ಲಿಷ್ ಅವಶ್ಯಕತೆಯ ಅಥವಾ ವ್ಯಾವಹಾರಿಕ ಭಾಷೆಯಷ್ಟೆ ಆಗಿರಲಿ, ಭಾವಗಳಿಗೂ ಇಂಗ್ಲಿಷ್ ನ ಬಣ್ಣ ಬರದೆ ಇರಲಿ ಎಂಬುದಷ್ಟೆ ನನ್ನ ಹಂಬಲ. ಎಲ್ಲ ಭಾಷೆಗಳನ್ನು ಅಭ್ಯಸಿಸಿ ಅಭ್ಯಂತರವಿಲ್ಲ. ಆದರೆ ಅವುಗಳ ಬಳಕೆ ಅವಶ್ಯಕತೆ ಇದ್ದಲ್ಲಿ ಮಾತ್ರ ಆಗಲಿ. ನಮ್ಮ ಭಾಷೆಯನ್ನು ಅವನತಿಗೆ ತಳ್ಳುವಷ್ಟರ ಮಟ್ಟಿಗೆ ಪರಭಾಷಾ ಮೋಹ ಬೇಡ ಎಂಬುದಷ್ಟೇ ನನ್ನ ಆಶಯ. ಇಲ್ಲವಾದಲ್ಲಿ ಮಾತೃಭಾಷೆಯ ಆತ್ಮೀಯತೆಯನ್ನು ಮರೆತು ಪರಕೀಯತೆಯ ಮೋಹಕ್ಕೆ ಸಿಲುಕಿ, ದಾಸ್ಯದ ಕರಿನೆರಳಲ್ಲಿ ಕಳೆದುಹೋಗಿ, ಮುಂದೊಂದು ದಿನ ಮತ್ತೆ ಸ್ವಂತಿಕೆಯ ಬೆಳಕಿಗಾಗಿ ಹಾತೊರೆಯುವಾಗ ನಮ್ಮದೇ ಭಾಷೆಯ ಅಧ್ಯಯನಕ್ಕೆ ನಾವೇ ನಿಘಂಟಿನ ಮೊರೆ ಹೋಗಬೇಕಾದೀತು.

Facebook ಕಾಮೆಂಟ್ಸ್

ಲೇಖಕರ ಕುರಿತು

Anoop Gunaga

ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ.
ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!