ಅಂಕಣ

ನಮ್ಮ ಪ್ರಧಾನಿ, ನಮ್ಮ ಹೆಮ್ಮೆ

“ಅಗರ್ ಆಪ್ ಕೆ ದಿಲ್ ಮೇ ಸಮಾಜ್ ಕೆ ಲಿಯೇ ಔರ್ ದೇಶ್ ಕೆ ಲಿಯೇ ಕುಚ್ ಕರನೇ ಕಿ ಆಗ್ ಹೈ ತೊ ನಿಕಲ್ ಪಡಿಯೇ ದೊಸ್ತೋ ರಾಸ್ತಾ ಅಪ್ನೆ ಆಪ್ ಮಿಲ್ ಜಾಯೆಗಾ, ಆಪ್ ಕೊ ಆಪ್ ಪರ್ ಭರೋಸ ಹೋನಾ ಚಾಹಿಯೇ… ಲೇನಾ,ಪಾನಾ ಔರ್ ಬನ್ನಾ ಯೇ ಕ್ವಾಬ್ ಲೇಕೆ ಚಲೋಗೇ ತೊ ಕ್ವಾಬ್ ಕ್ವಾಬ್ ಹೀ ರೆಹ್ ಜಾಯೆಗಾ ಲೇಕಿನ್ ದೇನೇಕಿ ಮಿಜಾಹ್ ಸೇ ನಿಕ್ಲೋಗೆ ತೋ ದುನಿಯಾ ಆಪ್ ಕಿ ಚರಣ್ ಚೂಮನೇ ಲಗಜಾಯೆಗಿ ” ಈ ಮಾತುಗಳು ನನ್ನಲ್ಲೇನೋ ಭರವಸೆಯನ್ನು ತುಂಬಿತ್ತು,ನನ್ನ ಮೇಲಿನ ವಿಶ್ವಾಸ ನೂರ್ಮಡಿಯಷ್ಟು ಬೆಳೆದು ನಿಂತಿತ್ತು, ಕೇವಲ ಭಾಷಣ ಮಾಡುವ ಮನುಷ್ಯನಲ್ಲ ಈತ ಅದೇನೋ ಶಕ್ತಿಯನ್ನು, ಭರವಸೆಯನ್ನು ಹೊತ್ತುಕೊಂಡು ಬಂದಿದ್ದಾನೆ..ನಾನೂ ಎಲ್ಲವನ್ನೂ ಮೀರಿ ಶ್ರೇಷ್ಠ ಭಾರತದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂಬ ಚಿಂತನೆ ಥಟ್ಟನೆ ನನ್ನೊಳಗೆ ಹುಟ್ಟಿಕೊಂಡಿತ್ತು…ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ ಆದರೆ ಇವೆರಡನ್ನೂ ಮೀರಿ ನಿಲ್ಲುವ ಯೋಚನೆಯೊಂದಿಗೆ ಬದುಕುತ್ತಿದ್ದರೂ ಭಾರತೀಯ ಜನತಾ ಪಾರ್ಟಿ ಎಂಬ ಬಲಪಂಥೀಯ ಪಕ್ಷದ ಪರ ನಿಲ್ಲಲೇ ಬೇಕಾಯಿತು ಅದು ಕೇವಲ “ನರೇಂದ್ರ” ಎಂಬ ನನ್ನ ನಾಯಕನಿಗೋಸ್ಕರ..ಆಗ ನನ್ನ ವಿಚಾರಗಳಿಗೆ ಜೀವ ತುಂಬಿದ್ದು ” ನಮೋ ಬ್ರಿಗೇಡ್ “..ಪಕ್ಷ ಬಿ‌ಜೆ‌ಪಿ ಅಲ್ಲ ಆದರೆ ನಾವು ಕಾಣಬೇಕೆಂದಿರುವ ಆ ನಾಯಕತ್ವವನ್ನು ನಾವು ಕಾಣುತ್ತಿದ್ದುದು ಅದೇ ನರೇಂದ್ರನಲ್ಲಿ ಮಾತ್ರವಾಗಿತ್ತು..ನರೇಂದ್ರನೆದುರು ಹಾರಾಡಿ ಮೆರೆದ ಅನೇಕ ಬಿಜೆಪಿಯ ನಾಯಕರು ನಗಣ್ಯರಾಗಿದ್ದರು..ಅಟಲ್’ಜಿ ಅಂದು ತುಂಬಿದ್ದ ಭರವಸೆ ಮತ್ತೆ ಇನ್ನೊಬ್ಬ ತುಂಬಿದ್ದ..

ಅಂತೂ ಗೆದ್ದೆವು..ನರೇಂದ್ರ ಕೇವಲ ನನ್ನನ್ನು ಮಾತ್ರ ಸೆಳೆದಿರಲಿಲ್ಲ ಅದೆಷ್ಟೋ ಬಿಸಿರಕ್ತದ ಯುವಕ ಯುವತಿಯರನ್ನು ಹಾಗೂ ಇಡೀ ಭಾರತವನ್ನು ಗೆದ್ದಿದ್ದ..ಮೇ 26,2014 ರಂದು ನರೇಂದ್ರ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ ನಂಗೇ ಗೊತ್ತಿಲ್ಲದೇ ನನ್ನ ಕಣ್ಣಂಚು ಒದ್ದೆಯಾಗಿತ್ತು ..” ದೊಸ್ತೋ ಮೇ ಬಚ್ಪನ್ ಮೆ ರೈಲ್ ಕಿ ಡಬ್ಬಿ ಮೇ ಚಾಯ್ ಬೇಚ್ ತಾ ಥಾ ” ಎಂದು ನರೇಂದ್ರ ಅಂದು ಆಡಿದ್ದ ಮಾತು ನೆನಪಾಗುತ್ತಿತ್ತು..ಸಂಸತ್ತು ಎಂಬ ಸಾಮಾನ್ಯರ ದೇವಾಲಯಕ್ಕೆ ತಲೆ ಬಾಗಿ ನಮಸ್ಕರಿಸಿ ಮೊದಲ ಬಾರಿಗೆ ಹೆಜ್ಜೆ ಇಟ್ಟ ನರೇಂದ್ರ ಅಸಾಮಾನ್ಯ ಅನ್ನಿಸುತ್ತಿತ್ತು, ಆಗಸ್ಟ್ 15 ರಂದು ಅಖಂಡ ಭಾರತದ ಪರಿಕಲ್ಪನೆಯ ಚಿತ್ರಣವನ್ನು ಬಿಚ್ಚಿಡುತ್ತಾ ಹೋದ ನರೇಂದ್ರ ಮತ್ತೆ ಮತ್ತೆ ನನ್ನನ್ನು ಆವರಿಸುತ್ತಿದ್ದ, ಅಂದು ವೀಸಾ ಕೊಡದ ಅಮೆರಿಕ ಕೆಂಪು ಹಾಸಿನ ಸ್ವಾಗತ ಮಾಡುತ್ತಿದ್ದರೆ ನಾನು ಗರ್ವದಿಂದ ಮೆರೆದಾಡುತ್ತಿದ್ದೆ, ಮಾಡಿಸ್ಸನ್ ಸ್ಕ್ವೇರ್ ನಲ್ಲಿ ‘ಮೋದಿ…ಮೋದಿ …. ಮೋದಿ ‘ ಎಂಬ ಉದ್ಘೋಷ ಕೇಳುತ್ತಿದ್ದರೆ ಅಬ್ಬಾ! ಅನ್ನಿಸುತ್ತಿತ್ತು…ನರೇಂದ್ರ ಎಂಬ ಅಸಾಮಾನ್ಯ ನಾಯಕ ನಾನು ಹಿಂದೂ ರಾಷ್ಟ್ರೀಯವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೆ ಕೋಮುವಾದಿ ಎಂದು ಅನ್ನಿಸಲೇ ಇಲ್ಲ.. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತದ ನಾಯಕನೊಬ್ಬ ತನ್ನ ವಿಚಾರಧಾರೆಗಳನ್ನು ಎದೆಯುಬ್ಬಿಸಿ ಹೇಳುತ್ತಿದ್ದಾರೆ ಪ್ರತಿಯೊಬ್ಬ ಭಾರತೀಯನ ಮನಸ್ಸು ತುಂಬಿ ಬಂದಿತ್ತು..ತಾನೇ ಕಸ ಗುಡಿಸಲು ಕಸಬರಿಗೆ ಹಿಡಿದು ಬೀದಿಗಿಳಿದಿದ್ದಲ್ಲದೆ ಅದೆಷ್ಟೋ ಸಮಾಜದ ಪ್ರಮುಖರನ್ನೂ ಕಸ ಗುಡಿಸಲು ಪ್ರೇರೇಪಿಸಿದ ನರೇಂದ್ರ ಭಾರತದ ಅಧ್ಬುತ ಭವಿಷ್ಯದ ಪರಿಕಲ್ಪನೆಯಿಂದ ಮುಂದಡಿಯಿಟ್ಟಿದ್ದಾನೆ ಎಂಬುದು ಸ್ಪಷ್ಟವಾಗಿತ್ತು..ಹೌದು ನನ್ನ ಪ್ರಧಾನಿ ನನ್ನ ಭಾರತದ ಹೆಮ್ಮೆ……

ಸೋತು ನೆಲಕಚ್ಚುತ್ತಿದ್ದ ಭಾರತದ ಅಧಮ್ಯ ಚಿಂತನೆಗಳಿಗೆ ಜೀವ ತುಂಬುವ ಮಾತನ್ನಾಡಿ, ದೇಶಸೇವೆಯ ಅಮೃತ ಕಾರ್ಯಕ್ಕೆ ಅದೆಷ್ಟೋ ಕೋಟಿ ಯುವಕರ ಅನುವುಗೊಳಿಸಿದ ನರೇಂದ್ರ ಹುಸಿ ಭಾಷಣವನ್ನು ಮಾಡಲಿಲ್ಲ ಬದಲಾಗಿ ವಿಪರೀತವಾಗಿ ಭರವಸೆಯನ್ನ ನಮ್ಮಲ್ಲಿ ತುಂಬಿದ. ಈತ ಮಾತಾಡುತ್ತಿದ್ದರೆ ಇದು ನಾನು ಮಾತಾಡಬೇಕೆಂದಿದ್ದೆ ಎಂದು ನಮಗೆಲ್ಲ ಅನ್ನಿಸುತ್ತಿದೆ ಅಂದರೆ ಸಾಮಾನ್ಯನೊಬ್ಬನ ಮನದಾಳದ ಮಾತನ್ನ ಸಾಮಾನ್ಯನೊಬ್ಬ ಮಾತ್ರ ಹೊರಹಾಕಬಲ್ಲ ಅಲ್ಲವೇ? ಅದನ್ನೇ ಮೋದಿ ಮಾಡುತ್ತಿರುವುದು..

ಸದ್ಯಕ್ಕೆ ಎಲ್ಲೆಡೆ ಸುದ್ದಿ ಮಾಡುತ್ತಿರುವ ವಿಚಾರವೆಂದರೆ ಮೋದಿ ಅವರ ವಿದೇಶ ಪ್ರವಾಸ. ಮೋದಿಯನ್ನು ವಿರೋಧಿಸುವುದೇ ತಮ್ಮ ಕಾಯಕ ಎಂದುಕೊಂಡಿರುವ ಅದೆಷ್ಟೋ ಬುಜೀ ಗಳು ಮತ್ತು 60 ವರ್ಷ ದೇಶದ ಮಹೋನ್ನತಿಯನ್ನು ಮಾಡಿ ಈಗ ಮೋದಿಗೆ ಮಾಡಲು ಕೆಲಸವೇ ಇಲ್ಲ ಎನ್ನುತ್ತಿರುವ ದೇಶದ ಆಸ್ತಿ ಕಾಂಗ್ರೆಸ್ ನ ಅನೇಕ ಪಂಡಿತರು ಈಗ ಮೋದಿಯವರ ವಿದೇಶಿ ಪ್ರವಾಸವನ್ನು ವಾಚಾಮಗೋಚಾರವಾಗಿ ಹುರುಳಿಲ್ಲದೇ ತೆಗಳುತ್ತಿದ್ದರೆ ಭವಿಷ್ಯದ ವಿಶ್ವಗುರು ಭಾರತದ ಪರಿಕಲ್ಪನೆಯನ್ನು ಇಟ್ಟುಕೊಂಡಿರುವ ಮೋದಿ ಒಂದು ಮಾತನ್ನೂ ಆಡುತ್ತಿಲ್ಲ. ಇವರನ್ನೆಲ್ಲ ನೋಡಿದರೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಸ್ನೇಹಿತರೇ ಮೋದಿ ವಂಶಪಾರಂಪರ್ಯ ರಾಜಕಾರಣದ ಕೂಸಲ್ಲ,ಸಂಸದರಿಗೆ ನೀಡುತ್ತಿರುವ ಸಂಬಳ ಸಾಲುತ್ತಿಲ್ಲ ಎನ್ನುವ ಅತೀ ಬುದ್ದಿವಂತ ಸಂಸದನೂ ಅಲ್ಲ. ಬದಲಾಗಿ ಮೋದಿ ಸಾಮಾನ್ಯ ಪ್ರಧಾನಿ. ಮೋದಿ ದೇಶ ಸುತ್ತಿ ದೇಶದ ಬೊಕ್ಕಸವನ್ನು ಬರಿದು ಮಾಡುತ್ತಿದ್ದಾರೆ,ಬಣ್ಣ ಬಣ್ಣದ ಸೂಟ್ ಧರಿಸಿ ದೇಶದ ರೈತರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಕಾಂಗ್ರೆಸ್ ನ ಯುವರಾಜನ ಮಾತುಗಳನ್ನು ಒಪ್ಪಿಕೊಳ್ಳುವ ಮೊದಲು ಮೋದಿಯ ವಿದೇಶಾಂಗ ನೀತಿಯ ಮೇಲೆ ಒಂದು ಕಣ್ಣು ಹಾಯಿಸೋಣ.

ಮೋದಿಯ ವಿದೇಶಾಂಗ ಸಿದ್ದಾಂತ ಜೀವ ತಳೆದ ದಿನ ಮೇ 26 2014. ಪ್ರಧಾನಿಯಾದ ನಂತರ ಇಲ್ಲಿಯವರೆಗೂ ಮೋದಿ 28 ದೇಶಗಳ ಭೇಟಿಯನ್ನು ಯಶಸ್ವಿಯಾಗಿ ಮಾಡಿದ್ದಾರೆ.ವಿದೇಶಾಂಗ ಮಂತ್ರಿಯಾಗಿ ಪ್ರಧಾನಿ ಮೋದಿ ಸುಷ್ಮಾ ಸ್ವರಾಜ್ ಅವರನ್ನು ನೇಮಿಸುತ್ತಿದ್ದಂತೆ ಅನೇಕ ಟೀಕೆಗಳು ಕೇಳಿ ಬಂದವು. ಆದರೆ ಮೋದಿ ಎಲ್ಲವನ್ನೂ ವಿಚಾರ ಮಾಡಿಯೇ ಸುಷ್ಮಾರನ್ನು ಆ ಜಾಗಕ್ಕೆ ಕೂರಿಸಿದರು. ಚುನಾವಣೆಗೂ ಮುಂಚೆ ಮೋದಿಯನ್ನು ವಿರೋಧಿಸುತ್ತಿದ್ದ ಸುಷ್ಮಾ ಮೋದಿಯ ಸಂಪುಟದಲ್ಲಿ ಮಹತ್ವದ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಮೋದಿ ಎಂಬ ಅಸಾಮಾನ್ಯ ರಾಜಕೀಯ ಪಟುವಿನ ತಂತ್ರ ಯಾರಿಗೂ ತಿಳಿಯಲಿಲ್ಲ. ಇಂದಿರಾ ಗಾಂಧಿಯವರ ನಂತರ ನೇಮಕಗೊಂಡ ಎರಡನೇಯ ಮಹಿಳಾ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಆಗಿದ್ದರು. ಮೋದಿಯ ಮೊದಲ ತಂತ್ರ ಅಕ್ಕಪಕ್ಕದ ರಾಷ್ಟ್ರಗಳನ್ನು ಗೌರವಿಸುವುದಾಗಿತ್ತು. ಅದಲ್ಲದೆ ದಕ್ಷಿಣ ಏಷ್ಯ ಮತ್ತು ಆಗ್ನೇಯ ಏಷ್ಯ ರಾಷ್ಟ್ರಗಳ ಜೊತೆಗೆ ಸಂಬ೦ಧ ವೃದ್ಧಿಯಾಗುವಂತೆ ಮಾಡುವುದು ಮೋದಿಯ ಮೊದಲ ಆದ್ಯತೆಯಾಗಿತ್ತು. ಅದರಂತೆಯೇ ಪ್ರಧಾನಿಯಾದ ಮೊದಲ 100 ದಿನಗಳಲ್ಲಿ ಮೋದಿ ಭೂತಾನ್,ನೇಪಾಲ್ , ಜಪಾನ್ ,ಅಮೆರಿಕ,ಮಯನ್ಮಾರ್,ಆಸ್ಟ್ರೇಲಿಯಾ ಮತ್ತು ಫಿಜಿ ರಾಷ್ಟ್ರಗಳನ್ನು ಭೇಟಿಮಾಡಿದರು.ಇದಲ್ಲದೆ ಸ್ವತಃ ಸುಷ್ಮಾ ಸ್ವರಾಜ್ ಬಾ೦ಗ್ಲಾದೇಶ, ಭೂತಾನ್, ನೇಪಾಲ್, ಮಯನ್ಮಾರ್, ಸಿಂಗಾಪುರ್, ವಿಯೆಟ್ನಾಮ್, ಮನಾಮ, ಬಹ್ರೈನ್, ಅಫ್ಗಾನಿಸ್ತಾನ್, ತಜ್ಕಿಸ್ತಾನ್, ಯುಕೆ, ಮಾರಿಷಸ್, ಮಾಲ್ಡೀವ್ಸ್, ಯು ಎ ಇ, ದಕ್ಷಿಣ ಕೊರಿಯಾ ಹೀಗೆ ಅನೇಕ ದೇಶಗಳ ಭೇಟಿಯನ್ನು ಮಾಡಿದರು ಮತ್ತು ಎಲ್ಲ ದೇಶಗಳ ಜೊತೆ ಉತ್ತಮವಾದ ರಾಜತಾಂತ್ರಿಕ ಸಂಬಂಧಗಳನ್ನು ನಿರಂತರವಾಗಿ ಕಾಯ್ದುಕೊಂಡರು.

1992 ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರು ಲುಕ್ ಈಸ್ಟ್ ಪಾಲಿಸೀ ಯನ್ನು ಪ್ರಾರಂಭ ಮಾಡಿದ್ದರು ಅದರ ಮೂಲಾರ್ಥ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಗೊಳಿಸುವುದಾಗಿತ್ತು. ಆದರೆ ನಮ್ಮ ದುರಾದೃಷ್ಟಕ್ಕೆ ಅದು ನಂತರದ ದಿನಗಳಲ್ಲಿ ಮುಂದುವರಿಯಲೇ ಇಲ್ಲ. ಆದರೆ ಮೋದಿ ಪ್ರಧಾನಿಯಾದ 100 ದಿನಗಳ ಒಳಗೆ ಈ ನೀತಿಯನ್ನು ಪುನರುತ್ಥಾನಗೊಳಿಸುವ ಕೆಲಸ ಮಾಡಿದರು.ಇದಕ್ಕೆ ಪೂರಕ ಎಂಬಂತೆ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್,ಚೈನ ಅಧ್ಯಕ್ಷ ಜಿಂಪಿಂಗ್ ಮತ್ತು ವಿಯೆಟ್ನಾಮ್ ನ ಪ್ರಧಾನಿ ಹೀಗೆ ಅನೇಕ ಪ್ರಮುಖರು ಭಾರತಕ್ಕೆ ಭೇಟಿ ನೀಡುವಂತೆ ಮಾಡಿದರು .ಇದಲ್ಲದೆ Neighbourhood First ಎಂಬ ಮೋದಿಯವರ ನೀತಿ ಈಗ ಬಹಳ ಚೆನ್ನಾಗಿ ಕೆಲಸ ಮಾಡಲು ಶುರು ಮಾಡಿದೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಬೇಕಾದ ದಿನವೇ ಭಾರತದ ಅಕ್ಕಪಕ್ಕದ ಎಲ್ಲ ರಾಷ್ಟ್ರದ ಪ್ರಮುಖರನ್ನು ಆಹ್ವಾನ ಮಾಡಿದ್ದ ಮೋದಿ ಭಾರತದಲ್ಲೊಂದು ಮಿನಿ SAARC ಸಮ್ಮೇಳನವನ್ನೇ ಮಾಡಿದ್ದರು. ಪ್ರಮುಖವಾಗಿ ಮೋದಿ ಚೀನಾಕ್ಕೆ ಬಹುದೊಡ್ಡ ಏಟೊಂದನ್ನು ನೀಡಿದರು ಅದನ್ನು ಅರಗಿಸಿಕೊಳ್ಳುವುದು ಚೀನಾಕ್ಕೆ ಅಷ್ಟು ಸುಲಭವಾಗಿರಲಿಲ್ಲ,ಅನಿವಾರ್ಯವಾಗಿ ಚೀನಾ ಭಾರತದ ಸ್ನೇಹ ಚಾಚಲೇ ಬೇಕಾಯಿತು. ಹಿಂದೂ ಮಹಾ ಸಾಗರದಲ್ಲಿರುವ ಅನೇಕ ದ್ವೀಪವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೈನಾ Maritime Silk Road Project ಒಂದನ್ನು ಅರಂಭಿಸಿತ್ತು. ಆದರೆ ಅದಾಗಲೇ ಭಾರತ ಹಿಂದೂ ಮಹಾಸಾಗರದ ಅಕ್ಕಪಕ್ಕ ಇರುವ ಅನೇಕ ರಾಷ್ಟ್ರಗಳನ್ನು ಭೇಟಿ ಮಾಡಿ ಅನೇಕ ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿತು.ಮೌಸಮ್ ಪ್ರಾಜೆಕ್ಟ್ ಎಂಬ ಅತಿದೊಡ್ಡ ಪ್ರಾಜೆಕ್ಟ್ ಒಂದರ ನೀಲನಕ್ಷೆಯನ್ನ ತಯಾರು ಮಾಡಿ ಚೀನಾದ ಎದೆಯಲ್ಲಿ ನಡುಕ ಹುಟ್ಟಿಸಿದರು ಮೋದಿ. ಮೋದಿಯವರ ಫಿಜಿ ದ್ವೀಪದ ಭೇಟಿ ತುಂಬಾ ಆಶ್ಚರ್ಯವಾಗಿತ್ತು. ಆದರೆ ಅದು ತುಂಬಾ ಅವಶ್ಯವಾಗಿತ್ತು. ಅಲ್ಲಿ ಮೋದಿ 14 ದ್ವೀಪ ರಾಷ್ಟ್ರಗಳ ಪ್ರಮುಖರನ್ನು ಭೇಟಿ ಮಾಡಿ “ Forum For India – Pacific Island Cooperation ( FIPIC ) “ ಎಂಬ ಫೋರಂ ಒಂದನ್ನು ಸ್ಥಾಪಿಸಿದರು ಮತ್ತು ಪೆಸಿಫಿಕ್ ದ್ವೀಪದ ಎಲ್ಲ ರಾಷ್ಟ್ರಗಳ ಜೊತೆ ಭಾರತ ಯಾವತ್ತೂ ಇದೆ ಎಂಬ ಬೆಂಬಲವನ್ನು ನೀಡಿದರು.ಒಂದು ಬಿಲಿಯನ್ ಡಾಲರ್ ನ ಒಪ್ಪಂದವನ್ನು ಮೋದಿ ಅಲ್ಲಿ ಮಾಡಿದ್ದರು. ಮೋದಿ 19 November 2015 ರಂದು ಫಿಜಿ ಭೇಟಿ ಮಾಡಿದ್ದರೆ ಅದಾದ ಎರಡು ದಿನದಲ್ಲಿ ಚೀನಾದ ಪ್ರಧಾನಿ ಫಿಜಿಯನ್ನು ಭೇಟಿ ಮಾಡುತ್ತಾರೆ ಅಂದರೆ ಮೋದಿಯವರ ಆ ಭೇಟಿ ಅದೆಷ್ಟು ಪ್ರಮುಖವಾದದ್ದು ಒಮ್ಮೆ ಯೋಚಿಸಿ. ಮೋದಿ ಪಶ್ಚಿಮ ಏಷ್ಯಾ ರಾಷ್ಟ್ರಗಳೊಡಗಿನ ಸಂಬಂಧವನ್ನು ವೃದ್ದಿಸುವ ಕೆಲಸವನ್ನೂ ಮರೆಯಲಿಲ್ಲ. ಭಾರತಕ್ಕೆ ಮೂರನೇ ಎರಡರಷ್ಟು ತೈಲವನ್ನು ಪೂರೈಸುವ ಗಲ್ಫ್ ರಾಷ್ಟ್ರಗಳೊಡನೆಯೂ ಮೋದಿ ಉತ್ತಮವಾದ ರಾಜತಾಂತ್ರಿಕ ಒಪ್ಪಂದವನ್ನು ಮಾಡಿದರು. ಇದಲ್ಲದೆ ಪ್ರಮುಖವಾಗಿ ಭಯೋತ್ಪಾದನೆಯ ವಿರುದ್ದ ಗಲ್ಫ್ ರಾಷ್ಟ್ರಗಳ ಬೆಂಬಲವನ್ನು ಪಡೆದು ಆ ನಿಟ್ಟಿನಲ್ಲಿ ಮುನ್ನುಗ್ಗುವ ಪ್ರಯತ್ನವನ್ನೂ ಮಾಡಿದರು ಮೋದಿ.

ಮೋದಿ ಪ್ರಧಾನಿಯಾದ ನಂತರ ಮೊದಲ ಭೇಟಿ ಮಾಡಿದ್ದು ಭೂತಾನ್’ಗೆ. ಮಾಹಿತಿ ತಂತ್ರಜ್ಞಾನದಲ್ಲಿ ಮತ್ತು ಡಿಜಿಟಲ್ ಸೇವೆಯಲ್ಲಿ ಭಾರತ ಭೂತಾನ್’ಗೆ ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ಮೋದಿ ನೀಡಿದ್ದಲ್ಲದೆ ಅಲ್ಲಿ ಅನೇಕ ಜಲವಿದ್ಯುತ್ ಯೋಜನೆಗಳಿಗೆ ಒಪ್ಪಂದ ಮಾಡಿಕೊಂಡರು. ಭಾರತಕ್ಕೆ ಅವಶ್ಯವಿರುವ ವಿದ್ಯುತ್ ಅನ್ನು ಭೂತಾನ್’ನಿಂದ ಪಡೆಯುವ ಸಲುವಾಗಿ ಮತ್ತು ಪ್ರಮುಖವಾಗಿ ಚೈನಾ ಮತ್ತು ಭೂತಾನ್’ನ ಸಂಬಂಧವನ್ನು ಗಮನಿಸುವ ಸಲುವಾಗಿ ಮೋದಿ ಭೂತಾನ್ ಭೇಟಿ ಮಾಡಿದ್ದರು. ಚೀನಾದ ಎದೆಯಲ್ಲಿ ಬಿಸಿತುಪ್ಪವನ್ನು ಸುರಿದಿದ್ದರು ಮೋದಿ. ಭೂತಾನ್’ನ ಭೇಟಿಯ ನಂತರ ಮೋದಿ ಬ್ರಜಿಲ್ ಭೇಟಿಯನ್ನು ಮಾಡಿದರು.ಕೃಷಿ ಮತ್ತು ಹೈನುಗಾರಿಕೆಯಲ್ಲಿ ಬ್ರಜಿಲ್’ನೊಂದಿಗೆ ಮಹತ್ವದ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.ಇದಲ್ಲದೆ ರಕ್ಷಣಾ ಕ್ಷೇತ್ರ,ಬಾಹ್ಯಾಕಾಶ ಸಂಶೋಧನೆ ಮತ್ತು ಪರಿಸರ ಸಂರಕ್ಷಣಾ ವಿಭಾಗದಲ್ಲಿ ಬ್ರಜಿಲ್ ನೊಂದಿಗೆ ಭಾರತ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿತು.ನಂತರದ ಮೋದಿ ಭೇಟಿ ನೇಪಾಳ,ಮೋದಿ ನೇಪಾಳಕ್ಕೆ ಸುಮಾರು ಒಂದು ಬಿಲಿಯನ್ ಅಮೆರಿಕನ್ ಡಾಲರ್’ನಷ್ಟು ಹಣದ ಸಹಾಯವನ್ನು ಘೋಷಿಸಿದರು ಮತ್ತು ಪ್ರಮುಖವಾದ ಜಲವಿದ್ಯುತ್ ಯೋಜನೆಯೊಂದಕ್ಕೆ ಒಪ್ಪಂದವನ್ನು ಮಾಡಿಕೊಂಡರು. ಭಾರತಕ್ಕೆ ವಿದ್ಯುತ್ ಪೂರೈಸಿ ನೇಪಾಳ ಅಭಿವೃದ್ಧಿ ಹೊಂದಲಿ ಎಂಬ ಮಾತನ್ನು ಮೋದಿ ನುಡಿದರು. ಹದಿನೇಳು ವರ್ಷಗಳ ನಂತರದ ಭಾರತದ ಪ್ರಧಾನಿಯೊಬ್ಬರ ಭೇಟಿ ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ನೇಪಾಳ ಭೇಟಿಯ ನಂತರ ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರ ವರೆಗೆ ಮೋದಿಯವರು ಮಹತ್ವದ ಜಪಾನ್ ಭೇಟಿ ಮಾಡಿದರು. ಐದು ದಿನಗಳ ಆ ಭೇಟಿ ಭಾರತಕ್ಕೆ ಭವಿಷ್ಯದಲ್ಲಿ ತುಂಬಾ ಸಹಾಯವಾಗುವುದರಲ್ಲಿ ಅನುಮಾನವಿಲ್ಲ. ಭಾರತೀಯ ನೌಕಾ ನೆಲೆಗೆ ಯೂ‌ಎಸ್-2 ಎಂಬ ಭೂಜಲಚರ ವಿಮಾನವನ್ನು ಜಪಾನ್ ನೀಡಿತು, ಮತ್ತು ಪ್ರಮುಖವಾಗಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಾಗರಿಕ ಪರಮಾಣು ಒಪ್ಪಂದ ಮತ್ತೆ ಜೀವ ಪಡೆದುಕೊಂಡಿತು ಮತ್ತು ಯಶಸ್ವಿಯಾಯಿತು.

2014ರ ಸೆಪ್ಟೆಂಬರ್ 27 ರಂದು ಮೋದಿ ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕಾಕ್ಕೆ ಹೊರಟರು. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ವೀಸಾ ನೀಡದ ಅಮೆರಿಕ ನರೇಂದ್ರ ಮೋದಿಯವರನ್ನು ಸ್ವತಃ ಆಹ್ವಾನಿಸಿತು. 69ನೇ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲೀ ಯಲ್ಲಿ ಮೋದಿ ತಮ್ಮ ಮೊದಲ ಭಾಷಣವನ್ನು ಮಾಡುತ್ತಿದ್ದರೆ ಭಾರತೀಯರೆಲ್ಲರ ಹೃದಯ ತುಂಬಿ ಬಂದಿತ್ತು.UN ವೇದಿಕೆಯಲ್ಲಿ ಮೋದಿ ವರ್ಷದ ಒಂದು ದಿನವನ್ನು ಯೋಗ ದಿನವನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನಿಟ್ಟು ಭಾರತದ ಪರಂಪರೆಯನ್ನು ವಿಶ್ವಕ್ಕೆ ಪಸರಿಸುವ ಕೆಲಸವನ್ನು ಮಾಡಿದ್ದರು. ಪರಿಣಾಮ ಯೂ‌ಎನ್ ಕೌನ್ಸಿಲ್ International Yoga Day ಯನ್ನು ಘೋಷಿಸುವುದಾಗಿ ಹೇಳಿತು,ಮತ್ತು ಡಿಸೆಂಬರ್ 11,2014ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿತು. ಅಲ್ಲಿಗೆ ಭಾರತದ ಅವಿಚ್ಚಿನ್ನ ಪರಂಪರೆಯೊಂದಕ್ಕೆ ಗೌರವ ನೀಡಬೇಕೆಂಬ ಮೋದಿಯವರ ಪ್ರಯತ್ನ ಯಶಸ್ವಿಯಾಯಿತು. ಅಮೆರಿಕಾದಿಂದ ಮರಳಿದ ಮೋದಿ ನವೆಂಬರ್ 11 ರಂದು ಮಯನ್ಮಾರ್’ನಲ್ಲಿ ನಡೆದ ಪೂರ್ವ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಶೃ೦ಗಸಭೆಗೆ ಭೇಟಿ ನೀಡಿದರು. ಇದಾದ ನಂತರ ಮೋದಿ ಮಹತ್ವದ ಆಸ್ಟ್ರೇಲಿಯಾ ಭೇಟಿಯನ್ನು ಕೈಗೊಂಡರು.ರಕ್ಷಣಾ ಕ್ಷೇತ್ರದಲ್ಲಿನ ಮಹತ್ವದ ಒಪ್ಪಂದವೊಂದು ಟೋನಿ ಅಬೋಟ್ ಮತ್ತು ನರೇಂದ್ರ ಮೋದಿ ಸರ್ಕಾರದ ನಡುವೆ ನಡೆಯಿತು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮೋದಿ “ಭಾಯಿಯೋ ಔರ್ ಬೇಹನೋ” ಎಂದು ಭಾಷಣ ಮಾಡಲು ಶುರು ಮಾಡಿದಾಗ ಅಂದು ಅಮೆರಿಕದಲ್ಲಿ ಭಾರತೀಯ ಪರಂಪರೆಯನ್ನು ವಿಶ್ವಕ್ಕೆ ಪಸರಿಸಿದ ವಿವೇಕಾನಂದರು ನೆನಪಾಗುತ್ತಿದ್ದರು. ಇದಾದ ನಂತರ ಚೀನಾದ ನಿದ್ದೆಗೆಡಸಲು ನವೆಂಬರ್ 19 ರಂದು ಫಿಜಿ ರಾಷ್ಟ್ರವನ್ನು ಮೋದಿ ಭೇಟಿ ಮಾಡುತ್ತಾರೆ. 33 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಫಿಜಿಯನ್ನು ಭೇಟಿ ಮಾಡಿದ್ದರು.ಮುಂದೆ ಮೋದಿ ಮಾರಿಷಸ್’ನ ರಾಷ್ಟ್ರೀಯ ದಿನಕ್ಕೆ ಮುಖ್ಯ ಅತಿಥಿಯಾಗಿ ಹೊರಡುತ್ತಾರೆ. ಇದಲ್ಲದೆ ಮೋದಿ ಶ್ರೀಲಂಕದೊಂದಿಗಿನ ರಾಜತಾಂತ್ರಿಕ ಸಂಬಂಧದ ವೃದ್ದಿಗಾಗಿ ತೆರಳುತ್ತಾರೆ. ಅಲ್ಲಿನ ಹೊಸ ಪ್ರಧಾನಿಯಾದ ಮೈತ್ರಿಪಾಲ ಸಿರಿಸೇನೆಯವರು 2015ರ ಫೆಬ್ರವರಿಯಲ್ಲಿ ಭಾರತ ಭೇಟಿ ಮಾಡಿದ ಕೆಲವೇ ದಿನದಲ್ಲಿ ಮೋದಿ ಶ್ರೀಲಂಕಾಕ್ಕೆ ತೆರಳುತ್ತಾರೆ ಮತ್ತು ಚೀನಾದ ಪರ ಎಂಬಂತಿದ್ದ ಹಿಂದಿನ ಪ್ರಧಾನಿ ಮಹೇಂದ್ರ ರಾಜಪಕ್ಸೆಯ ಆಡಳಿತ ಕೊನೆಯಾಗುತ್ತಿದ್ದಂತೆ ಸಿರಿಸೇನೆ ಭಾರತದ ಪರ ಎಂಬಂತೆ ಬಿಂಬಿಸಿ ಚೀನಾವನ್ನು ಮತ್ತೆ ನಡುಗಿಸುವ ಪ್ರಯತ್ನ ಫಲಕಾರಿಯಾಗುವಂತೆ ಮಾಡಿದರು ಮತ್ತು ಮಹತ್ವದ ಪರಮಾಣು ಒಪ್ಪಂದವೊಂದು ಶ್ರೀಲಂಕಾ ಮತ್ತು ಭಾರತದ ನಡುವೆ ಏರ್ಪಟ್ಟಿತು. ಮೇಕ್ ಇನ್ ಇಂಡಿಯ ಪ್ರಾಜೆಕ್ಟ್ ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮೋದಿ ಏಪ್ರಿಲ್ 9ರಂದು ಫ್ರಾನ್ಸ್ ಗೆ ತೆರಳುತ್ತಾರೆ ಮತ್ತು ಆಹಾರ ತಂತ್ರಜ್ಞಾನ, ನಾಗರಿಕ ಪರಮಾಣು ಮತ್ತು ರಕ್ಷಣಾ ವಿಭಾಗದಲ್ಲಿ ಫ್ರಾನ್ಸ್ ಭಾರತದಲ್ಲಿ ಹೂಡಿಕೆ ಮಾಡಲು ಒಪ್ಪಿಕೊಳ್ಳುವಂತೆ ಮಾಡಿದರು. ಫ್ರಾನ್ಸ್’ನಿಂದ ಮೋದಿ ನೇರವಾಗಿ ಮೇಕ್ ಇನ್ ಇಂಡಿಯ ಪ್ರಾಜೆಕ್ಟ್ ನ ನೀಲ ನಕ್ಷೆ ಹಿಡಿದು ಹೊರಟಿದ್ದು ಜರ್ಮನಿಗೆ. ಜರ್ಮನಿಯ ಬರ್ಲಿನ್’ಗೆ ತೆರಳಿದ ಮೋದಿ ಅಲ್ಲಿನ ಅನೇಕ ಉದ್ದಿಮೇದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು ಅಲ್ಲಿಯ ಚಾನ್ಸಲರ್ ಏಂಜೇಲ ಮಾರ್ಕೆಲ್ ರೊಡನೆ ಅಂದು ನಡೆಸಿದ್ದರ ಮಾತುಕತೆಯ ಪರಿಣಾಮವೇ ಅಕ್ಟೋಬರ್ 6 2015 ರಂದು ಅವರ ಬೆಂಗಳೂರು ಭೇಟಿ. ಅಂದು ಮೊರ್ಕೆಲ್ ಒಂದು ಮಾತನ್ನಾಡಿದ್ದರು ಅದು ” ಭಾರತದ ಜನರು ಕೆಲಸದ ನಿರೀಕ್ಷೆಯಲ್ಲಿದ್ದಾರೆ, ಜರ್ಮನಿಗೆ ಕೆಲಸ ಮಾಡಲು ಜನರು ಬೇಕಾಗಿದ್ದಾರೆ ಅಲ್ಲಿಗೆ ಎರಡೂ ದೇಶದ ಅವಶ್ಯಕತೆಗಳು ಪೂರ್ಣಗೊಂಡವು”ಎಂದು. ಅಂದು ಮೋದಿ ಮಾಡಿದ್ದ ಜರ್ಮನಿಯ ಪ್ರವಾಸದ ಫಲವೇ ಇದು. ಇವೆಲ್ಲವನ್ನೂ ಮಾಡಿದ ಮೋದಿ ಚೀನಾದ ಕಡೆ ಮುಖ ಮಾಡಿಯೂ ನಿಂತಿರಲಿಲ್ಲ ಆದರೆ ಸರಿಯಾದ ಸಮಯಕ್ಕಾಗಿ ಕಾದು ಮೋದಿ ಚೈನ ಪ್ರವಾಸವನ್ನು ಮಾಡಿದರು ಮತ್ತು ಎರಡು ದೇಶಗಳ ನಡುವೆ ಆರ್ಥಿಕ ವಿಚಾರಗಳ ಬಗ್ಗೆ ಮಹತ್ವದ ಒಪ್ಪಂದಗಳು ಏರ್ಪಟ್ಟವು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಕ್ಕದ ಬಾಂಗ್ಲಾದೇಶಕ್ಕೆ ಮೋದಿಯವರ ಭೇಟಿ ಬಹಳ ಪ್ರಮುಖವಾದದ್ದಾಗಿತ್ತು, ಕಾರಣ ಎರಡು ರಾಷ್ಟ್ರಗಳು ಅಂದು ಭೂಮಿ ಹಂಚಿಕೆಯಲ್ಲಾಗಿದ್ದ ಎಡವಟ್ಟುಗಳನ್ನು ಸರಿಮಾಡಿಕೊಳ್ಳುವ ಮಹತ್ವದ ಒಪ್ಪಂದ ಯಶಸ್ವಿಯಾಗಿ ನೆರವೇರಿತು. ಅಜಿತ್ ಧೋವಲ್ ಎಂಬ ಚಾಣಾಕ್ಷನ ತಲೆ ಇಲ್ಲಿ ಕೆಲಸ ಮಾಡಿತ್ತು. ನಂತರ ಮೋದಿ ಮಧ್ಯ ಏಷ್ಯಾ ರಾಷ್ಟ್ರಗಳನ್ನು ಭೇಟಿ ಮಾಡಿದರು. ಮೋದಿ ರಷ್ಯಾದಲ್ಲಿ ನಡೆದ 7 ನೇ BRICS ಶೃ೦ಗಸಭೆಯಲ್ಲಿ ಭಾಗವಹಿಸಿದ್ದರು. ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಎರಡು ರಾಷ್ಟ್ರಗಳ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿತ್ತು. Mil-Mi17 ಮತ್ತು Kamov ka – 226 ಎಂಬ ಎರಡು ಹೆಲಿಕಾಫ್ಟರ್ ಗಳ ಉತ್ಪಾದನೆಯನ್ನು ಮೋದಿಯವರ ಮೇಕ್ ಇನ್ ಇಂಡಿಯ ಪ್ರಾಜೆಕ್ಟ್ ಅಡಿಯಲ್ಲಿ ರಷ್ಯಾದ ತಂತ್ರಜ್ಞಾನ ಬಳಸಿ ತಯಾರು ಮಾಡುವ ಈ ಒಪ್ಪಂದ ಭಾರತದ ಪಾಲಿಗೆ ವರದಾನವೇ ಸರಿ. ಇನ್ನೂ ಅನೇಕ ರಾಷ್ಟಗಳ ಭೇಟಿಯನ್ನು ಮಾಡಿರುವ ಮೋದಿ ಒಂದು ದೊಡ್ಡ ಕನಸನ್ನು ಕಟ್ಟಿಕೊಂಡು ಭವಿಷ್ಯದ ವಿಶ್ವಗುರು ಭಾರತದ ಕಲ್ಪನೆಯೊಂದಿಗೆ ಸಾಗುತ್ತಿದ್ದಾರೆ. ಆಗಸ್ಟ್ 16 ರಂದು ಮೋದಿ ಯುಎಇ ಯನ್ನು ಭೇಟಿ ಮಾಡಿ ಅಲ್ಲಿನ ಲಕ್ಷಾಂತರ ಭಾರತೀಯರ ಮನ ಗೆದ್ದಿದ್ದಲ್ಲದೆ ಅನೇಕ ಹೂಡಿಕೆಗಳ ಮಹಾಪೂರವೇ ಹರಿದು ಬರುವಂತೆ ಮಾಡಿದರು. 34 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಯುಎಇಗೆ ಹೋದ ಸಂದರ್ಭ ಅದಾಗಿತ್ತು. ಆಹಾರ,ಕೃಷಿ,ರಕ್ಷಣಾ ವಿಭಾಗದಲ್ಲಿ ಮಾತ್ರವಲ್ಲದೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಎರಡೂ ರಾಷ್ಟ್ರಗಳ ನಡುವಿನ ಒಪ್ಪಂದಗಳು ಯಶಸ್ವಿಯಾಗಿ ನಡೆಯಿತು. ಮೋದಿಯವರ ಆಗಮನವನ್ನು ಪ್ರೀತಿಯಿಂದ ಒಪ್ಪಿದ ಅಲ್ಲಿನ ಯುವರಾಜ ದುಬೈ ನಲ್ಲಿ ಹಿಂದೂ ದೇವಸ್ಥಾನ ನಿರ್ಮಾಣ ಮಾಡಲು ಸ್ಥಳವನ್ನು ನೀಡಿ ಭಾರತಕ್ಕೆ ದೊಡ್ಡ ಗೌರವ ನೀಡುವ ಕೆಲಸ ಮಾಡಿದ್ದರು. ಇಷ್ಟೊಂದು ದೇಶಕ್ಕೆ ದುಡಿಯುವ ಮೋದಿಯ ಕನಸಿನ ಕೂಸು ಡಿಜಿಟಲ್ ಇಂಡಿಯಕ್ಕೆ ವಿಶ್ವದೆಲ್ಲೆಡೆ ಬೆಂಬಲ ದೊರೆಯುವ ದೊಡ್ಡ ಸೂಚನೆ ಸೆಪ್ಟೆಂಬರ್ 24 ರಂದು ಮೋದಿ ಅಮೆರಿಕ ಕ್ಕೆ ಹೋದಾಗ ಅಲ್ಲಿನ ಅತಿರಥ ಮಹಾರಥ ತಂತ್ರಜ್ಞಾನಿಗಳು ನೀಡಿದಾಗ ಖಾತ್ರಿಯಾಯಿತು. ಡಿಜಿಟಲ್ ಇಂಡಿಯ ಎಂಬ ವೇದಿಕೆಯಲ್ಲಿ ಗೂಗಲ್’ನ ಸುಂದರಂ ಪಿಚೈ,ಮೈಕ್ರೋಸಾಫ್ಟ್ ನ ಸತ್ಯ ನಡೆಲ್ಲ,ಆಪಲ್’ನ ಟಿಮ್ ಕುಕ್ ಕುಳಿತು ಮೋದಿ ಎಂಬ ನಾಯಕನ ಬಗ್ಗೆ ಮಾತಾಡುತ್ತಿದ್ದರೆ ಪ್ರತಿಯೊಬ್ಬ ಭಾರತೀಯನ ಮನಸ್ಸೂ ಅಭಿಮಾನದಿಂದ ತುಂಬಿ ಬರುತ್ತದೆ. ಗೂಗಲ್ ನ್ಯೂ ಸ್ಟಾರ್ಟ್ ಅಪ್’ಗಳಿಗೆ, ಆಪಲ್ ಹೊಸ ಪ್ರೊಡಕ್ಷನ್ ಗೆ,ಮೈಕ್ರೋಸಾಫ್ಟ್ ಕ್ಲೌಡ್ ಕಂಪ್ಯೂಟಿಂಗ್’ಗೆ ಬೆಂಬಲ ನೀಡುತ್ತಿದ್ದರೇ ವಿಶ್ವಗುರು ಭಾರತ ಎಂಬ ಕಲ್ಪನೆ ಸಾಕಾರಗೊಳ್ಳುತ್ತಿದೆಯಲ್ಲ ಹೆಮ್ಮೆ ಮತ್ತು ಖುಷಿ ಇನ್ನೊಂದು ಕಡೆ.

ಮೋದಿಯ ವಿದೇಶಾಂಗ ನೀತಿಯೇ ಇದು. ಸುಮ್ಮನೇ ದೇಶ ಸುತ್ತುತ್ತ ದೇಶದ ಬೊಕ್ಕಸ ಬರಿದು ಮಾಡುತ್ತಿದ್ದಾರೆ ಎನ್ನುವ ಅದೆಷ್ಟೋ ಮನಸ್ಸಿಗೆ ಇದು ಉತ್ತರ ಎಂದುಕೊಂಡಿದ್ದೇನೆ.ವಿಶ್ವ ಗೌರವಿಸುವ ನಾಯಕನನ್ನು ನಮ್ಮವರೇ ಒಪ್ಪಲು ತಯಾರಿಲ್ಲ ಅಂದರೆ ಅದು ವಿಪರ್ಯಾಸವೆ ಸರಿ. ಆದರೆ ನನ್ನ ಮನಸ್ಸಿನಲ್ಲಿ ಸಧ್ಯಕ್ಕೆ ಮೂಡುತ್ತಿರುವ ಭಾವ “ ನಮ್ಮ ಪ್ರಧಾನಿ ನಮ್ಮ ಹೆಮ್ಮೆ”. ವಿಶ್ವದ ಅದೆಷ್ಟೋ ರಾಷ್ಟ್ರಗಳ ಎದುರು ತಲೆ ತಗ್ಗಿಸಿ ನಿಲ್ಲಬೇಕಾದ ಪರಿಸ್ಥಿತಿಯ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಬದಲಾದ ಭಾರತದ ನಿರ್ಮಾಣ ಮಾಡುತ್ತಿರುವ ಮೋದಿ ನಮ್ಮ ಹೆಮ್ಮೆಯೇ ಸರಿ. ವಿಶ್ವಗುರು ಭಾರತವನ್ನು ನಾವೆಲ್ಲರೂ ಸೇರಿ ನಿರ್ಮಾಣ ಮಾಡೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!