ಅಂಕಣ

ಪ್ರತಾಪ್ ಸಿಂಹರೇ, ನಿಮ್ಮ ಉದ್ದೇಶ ಶುದ್ಧಿಯ ಮೇಲೂ ಪ್ರಶ್ನೆಗಳೇಳಬಾರದಲ್ಲವೇ?

ವೇತನ ಹೆಚ್ಚಳ ಕುರಿತಾಗಿ ತಮ್ಮ ಮೇಲೆ ಬಂದಿದ್ದ ಟೀಕೆಗಳಿಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಬೇಸರವೆಂದರೆ  ಈ ಭಾರಿ ಇನ್ನೂ ಬಾಲಿಶವಾಗಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಜನರ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ “ವೈಯಕ್ತಿಕ ಬದುಕನ್ನೇ ಕಳೆದುಕೊಂಡು ಜನಸೇವೆ ಮಾಡುತ್ತಿದ್ದೇನೆ” ಎಂಬರ್ಥದ ಮಾತುಗಳನ್ನಾಡಿದ್ದಾರೆ. ಸಂಸದರು ಮನುಷ್ಯರೇ ಆಗಿರುವುದರಿಂದ ಅವರಿಗೂ  ಇತರರಂತೆ ಕುಟುಂಬ, ಸಂಸಾರ ಎಂಬುದಿರುತ್ತದೆ. ಸಾರ್ವಜನಿಕ ಜೀವನದ ಜೊತೆ ಆ ಜೀವನವನ್ನೂ ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಆದರೆ ಅದನ್ನು ಹೇಳಿಕೊಳ್ಳುವುದು ಎಷ್ಟು ಸರಿ? ತಪ್ಪಿಯೂ ಆ ಮಾತು ಬರಬಾರದಿತ್ತು. ಬಹುಶಃ ಜನರ ಸಿಂಪಥಿ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ  ಅಂತಹ ಮಾತುಗಳನ್ನಾಡುವವರು ರಾಜಕೀಯಕ್ಕೆ ಹೇಳಿದವರಲ್ಲ.

ಮದುವೆ-ಮುಂಜಿಗಳಿಗೆ ಹೋಗಿ ಹೂಗುಚ್ಚ ಕೊಡುವುದಕ್ಕೂ 250-300 ರೂ ಬೇಕೆಂದು ಹೇಳಿದ್ದಾರೆ. ಈ ಸಂಪ್ರದಾಯವೆಲ್ಲ ಆ ತಾಕತ್ತಿರುವವರು ಇಟ್ಟುಕೊಳ್ಳಲಿ. ಬೊಕ್ಕೆ ಕೊಡದೇ ಬರೇ ಶುಭ ಹಾರೈಕೆಯನ್ನಷ್ಟೇ ಮಾಡಿದರೂ ಪ್ರತಾಪರು ಕಳೆದುಕೊಳ್ಳುವಂತದ್ದೇನೂ ಇಲ್ಲ.  ವೋಟು ಹಾಕುವಾಗ ಜನ ಇವರು ಯಾರದ್ದೆಲ್ಲ ಹೆಣಕ್ಕೆ ಹಾರ ಹಾಕಿದ್ದಾರೆ ಎಂಬುದನ್ನು ನೋಡುವುದಿಲ್ಲ.  ಅಲ್ಟಿಮೇಟ್ಲಿ ಜನ ನೋಡುವುದು ಅವರು ಮಾಡಿರುವ ಕೆಲಸವನ್ನಷ್ಟೇ ಹೊರತು, ಬೊಕ್ಕೆ ಕೊಟ್ಟಿದ್ದಾರಾ, ಕಾಫಿ ಕೊಟ್ಟಿದ್ದಾರಾ ಎಂಬುದನ್ನಲ್ಲ.

ದೇವರು ಅಂತಹಾ ಸ್ಥಾನವನ್ನು ಕೊಟ್ಟರೆ ಖಂಡಿತವಾಗಿಯೂ ಜನರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತಹಾ ವ್ಯವಸ್ಥೆ ಸೃಷ್ಟಿಸುತ್ತೇನೆ ಎಂದಿದ್ದಾರೆ.  ಸ್ವಾಮೀ, ನಿಮ್ಮನ್ನು ಪ್ರಧಾನಮಂತ್ರಿ ಮಾಡಿದರೆ ಮಾತ್ರ ಅಂತಹಾ ವ್ಯವಸ್ಥೆ ಸೃಷ್ಟಿಸಲು ಸಾಧ್ಯವಾ? ಸಂಸದನಾಗಿಯೂ ಸ್ವಲ್ಪ ಸಮಯ ಅದಕ್ಕೆ ಮೀಸಲಿಟ್ಟರೂ, ಸ್ವಲ್ಪ ಅದರತ್ತ ಕಾಳಜಿ ತೋರಿಸಿದರೂ ಅದು  ಸಾಧ್ಯವಿದೆ ಎಂದು ಅನಿಸುವುದಿಲ್ಲವಾ? ಅಷ್ಟಕ್ಕೂ ಸರ್ಕಾರೀ ಶಾಲೆಗೆ ಸೇರಿಸಲೇ ಬಾರದೆನ್ನುವಂತಹ ಪರಿಸ್ಥಿತಿಯಂತೂ ಖಂಡಿತಾ ಇಲ್ಲ. ಯಾಕೆ, ನಮ್ಮಲ್ಲಿ ಯಾರೂ ಸರ್ಕಾರೀ ಶಾಲೆಗೆ ಹೋಗಿ ಇಂಜಿನಿಯರ್, ಡಾಕ್ಟರ್’ಗಳು ಆಗಲಿಲ್ಲವೇ? ಅಲ್ಲಾ ಅಗುವುದಿಲ್ಲವೇ? ನಮ್ಮ ರಾಜ್ಯದಲ್ಲೇ ಅದೆಷ್ಟೋ  ಹಳ್ಳಿಯ ಜನರು ಈಗಲೂ ಅವಲಂಭಿಸಿರುವುದು ಸರ್ಕಾರೀ ಶಾಲೆಯನ್ನೇ. ಅವರಲ್ಲದೆಷ್ಟು ಜನ ಉನ್ನತ ವ್ಯಾಸಂಗವನ್ನು ಮಾಡಿ ಅಮೇರಿಕಾ ಸೇರಿಲ್ಲ? ನಮ್ಮನ್ನಾಳುವವರು ತಮ್ಮ ಮಕ್ಕಳನ್ನು ಸರ್ಕಾರೀ ಶಾಲೆಗಳಿಗೆ ಸೇರಿಸಿ, ಅಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಿ ಜನಸಾಮಾನ್ಯರಿಗೆ ಮಾದರಿಯಾಗಬೇಕು. ಅದು ಬಿಟ್ಟು ಜನಪ್ರತಿನಿಧಿಗಳಾದ ಇವರೇ ಸರ್ಕಾರೀ ಶಾಲೆಗಳ ಕುರಿತು ಇಂತಹಾ ಮಾತುಗಳನ್ನಾಡಿದರೆ ಹೇಗೆ ?

ಸಿಂಹರಿಗೆ ನೆನಪಿದೆಯಾ? ಹಿಂದೊಮ್ಮೆ  ರಾಜ್ಯ ಬಿಜೆಪಿಯ ಅಧ್ಯಕ್ಷರ ಆಯ್ಕೆಯ ಕುರಿತಾಗಿ ಬರೆಯುವಾಗ ಸದ್ಯ ರಾಜ್ಯದ ನಂ 1 ಸಂಸದರಾಗಿರುವವರ  ಕುರಿತಾಗಿ ಕೋಲೆ ಬಸವನಂತ ವ್ಯಕ್ತಿ ಎಂದು ಹೀಯಾಳಿಸಿ ಬರೆದು ಅವರು ಅಧ್ಯಕ್ಷರಾಗಲು ಯೋಗ್ಯರಲ್ಲ ಎಂದು ಹೇಳಿದ್ದಿರಿ.  ಹೀಗೆ ನಿಮಗೆ ಸಂಬಂಧವೇ ಪಡದ ಪಕ್ಷವೊಂದರ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಪುಂಖಾನುಪುಂಖವಾಗಿ ಬೋಧನೆ ಮಾಡಿದ ನಿಮಗೆ ಯಾರೂ ಬೋಧನೆ ಮಾಡಬಾರದು ಎಂದರೆ ಹೇಗೆ ಸರ್? ನೀವು ಯಾರನ್ನು, ವ್ಯಕ್ತಿತ್ವವೇ ಇಲ್ಲದ ಕೋಲೆಬಸವನಂತ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ  ಮಾಡಬೇಡಿ ಎಂದು ಭೋಧನೆ ಮಾಡಿದ್ದರೋ, ಆ ವ್ಯಕ್ತಿ ಇವತ್ತು ದಿನಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ನಿಮ್ಮನ್ನೂ ಮೀರಿಸಿ  ನಂ.1 ಸ್ಥಾನ(ನಮ್ಮ ಸಂಸದರೆಂಬ ಹೆಮ್ಮೆಯಿದೆ ನನಗೆ) ಗಳಿಸಿದ್ದಾರೆ. ನಿಮಗೇಕೆ ನಂ.1 ಸ್ಥಾನ ಸಿಗಲಿಲ್ಲ? ಅದಕ್ಕೂ ಹಣಕಾಸಿನ ತೊಂದರೆಯಾಯಿತೇ? ನಿಮಗೆಲ್ಲಿ ಅರ್ಥವಾದೀತು ಜನಪ್ರತಿನಿಧಿಗಳ ಸಮಸ್ಯೆ ಎಂದು ನಮ್ಮನ್ನು ನೀವು ಪತ್ರಕರ್ತರಾಗಿದ್ದಾಗ ರಾಜಕಾರಣಿಗಳನ್ನು ಟೀಕಿಸಿ ಬರೆಯುತ್ತಿದ್ದಿರಲ್ಲಾ, ಅವೆಲ್ಲವನ್ನೂ ರಾಜಕಾರಣಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡೇ ಬರೆಯುತ್ತಿದ್ದಿದ್ದಾ?  RAGS TO RICHES ವಾಕ್ಯಗಳಿಗೆ ತಕ್ಕಂತಿರುವ   ರೆಡ್ಡಿ, ರಾಮುಲು  ಹುಟ್ಟುವಾಗಲೇ ಹಣ ಪಡೆದುಕೊಂಡು ಹುಟ್ಟಿರಲಿಲ್ಲ, ಅವರಿಗೆ ಹಣ ಮಾಡುವ ಶಾರ್ಟ್ ಕಟ್ ಗೊತ್ತಿತ್ತು ಎಂದು ಬರೆದಿದ್ದಿರಲ್ಲಾ, ಅವರ ಜೊತೆಗೇನೇ ಪ್ರಚಾರ ಮಾಡಿದ ನಿಮ್ಮ ಮೇಲೂ ಪ್ರಶ್ನೆಗಳು ಬರುವುದು ಸಹಜವಲ್ಲವೇ? ದೇವರಾಣೆಗೂ ನಿಮ್ಮ ಪ್ರಾಮಾಣಿಕತೆಯ ಕುರಿತು ಪಶ್ನಿಸುತ್ತಿಲ್ಲ ನಾನು, ಆದರೆ ಕುಲಗೆಟ್ಟು ಹೋಗಿರುವ ರಾಜಕಾರಣಿಗಳಿಂದಾಗಿ ಪ್ರಶ್ನೆಗಳೇಳುವುದು ಸಾಮಾನ್ಯ ಎಂಬುದನ್ನು ಒಪ್ಪಿಕೊಳ್ಳಿ. “ನಿಮ್ಮ ಉದ್ದೇಶಶುದ್ಧಿಯ ಮೇಲೆ ಪ್ರಶ್ನೆಗಳೇಳಬಾರದಲ್ಲವೇ” ಎಂಬ ಲೇಖನದಲ್ಲಿ ಪೇಜಾವರ ಶ್ರೀಗಳಿಗೆ ಬೋಧನೆ ಮಾಡಿದ್ದೀರಿ. 1.76ಲಕ್ಷ  ನಷ್ಟ ಉಂಟುಮಾಡಿರುವ  2ಜಿ ಹಗರಣದಲ್ಲಿ ಸಿಲುಕಿಕೊಂಡಿರುವ ರಾಡಿಯಾರಿಂದ ದಿಲ್ಲಿಯಲ್ಲಿ ಮಠ ಕಟ್ಟುವುದಕ್ಕಾಗಿ ಸಹಾಯ ಪಡೆದುಕೊಳ್ಳುವುದು ಸರೀನಾ ಎಂದು ಕೇಳಿದ್ದಿರಲ್ಲವೇ, ಸಾವಿರಾರು ಕೋಟಿ ನಷ್ಟವುಂಟುಮಾಡಿದ ರಾಮುಲು ಸಹಾಯವನ್ನು(ಪ್ರಚಾರ ಮಾತ್ರ) ಪಡೆಯುವುದು ನಿಮಗೆ ಸರಿ ಕಂಡಿತೇ? ಬಿಜೆಪಿಯಿಂದ ಹಿಡಿದು ಅರೆಸ್ಸೆಸ್ಸಿನವರಿಗೂ, ಅತ್ಯಂತ ಹಿರಿಯ ಸಂತ ಪೇಜಾವರ ಶ್ರೀಗಳಿಗೂ  ಬೋಧನೆ ಮಾಡಿದ ನಿಮ್ಮನ್ನು ಯಾರೂ ಪ್ರಶ್ನಿಸಬಾರದು ಎಂದರೆ ಅದನ್ನು ಒಪ್ಪಲಾದೀತೇ? ನೀವು  ಮಾಡಿದ್ದೂ ದೇಶಪ್ರೇಮ, ಪ್ರಾಮಾಣಿಕತೆಯ ಭೋಧನೆಗಳೇ, ನಾವು ಮಾಡುತ್ತಿರುವುದೂ ಅದನ್ನೇ, ವ್ಯತ್ಯಾಸವೇನೆಂದರೆ ನೀವು ಪತ್ರಿಕೆಯಲ್ಲಿ ಮಾಡುತ್ತಿದ್ದದು, ನಾವು ಫೇಸ್’ಬುಕ್’ನಲ್ಲಿ ಮಾಡುತ್ತಿದ್ದೇವೆ.

ಪ್ರತಾಪ್’ರನ್ನು ಪ್ರಶ್ನಿಸಿದವರನ್ನವರು ಬೂತ್’ಗೆ ಬಂದು ಮತದಾನ ಮಾಡಲು ಸೋಮಾರಿತನ ಪ್ರದರ್ಶಿಸುವ, ಮತದಾನಕ್ಕೆ ಆನ್’ಲೈನ್ ವೋಟಿಂಗ್ ಬೇಕೆಂದು ಪ್ರತಿಪಾದಿಸುತ್ತಾ ಜನಪ್ರತಿನಿಧಿಗಳಿಗೆ ಬೋಧನೆ ಮಾಡುವ ಫೇಸ್’ಬುಕ್ ಪಂಡಿತರು ಎಂದು ಹೇಳಿದ್ದಾರೆ. ಮತದಾನ ಮಾಡದೇ ಬೇಜವಾಬ್ದಾರಿಯುತವಾಗಿ ಮಾತನಾಡುವವರಿಗೆ ನಾನೇನೂ  ಹೇಳುವುದಿಲ್ಲ. ಅವರಿಗೆ ಮಾತನಾಡುವ ಹಕ್ಕೂ ಇಲ್ಲ. ಅದ್ರೆ ಆನ್’ಲೈನ್ ವೋಟಿಂಗ್’ಗೆ ಪ್ರತಿಪಾದಿಸುವುದರಲ್ಲಿ ತಪ್ಪೇನಿದೆ? ನರೇಂದ್ರ ಮೋದಿಯವರೇ ಡಿಜಟಲೀಕರಣದಲ್ಲಿ ಉತ್ಸಾಹ ತೋರುತ್ತಿರುವಾಗ ಆನ್’ಲೈನ್ ವೋಟಿಂಗ್ ಬೇಕೆಂದು ಪ್ರತಿಪಾದಿಸುವುದರಲ್ಲಿ ತಪ್ಪೇನೂ ಇಲ್ಲ.  ಆನ್ಲೈನ್ ವೋಟಿಂಗ್ ಬೇಕೆಂದು ಹೇಳಿದ್ದು ಇಲ್ಲೇ ಊರಲ್ಲಿರುವ ಯುವಕರುಗಳಲ್ಲ. ಎಲ್ಲೋ ಅಮೇರಿಕಾ, ಯೂರೋಪಿನಲ್ಲಿ ಕೆಲಸದಲ್ಲಿರುವ ಭಾರತೀಯರೆಂಬುದು ನೆನಪಿರಲಿ. ಇವರು ಚುನಾವಣೆಗೆ ನಿಂತಾಗ ಹಳ್ಳಿ ಜನ ಇವರ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿದ್ದು  ಇದೇ ಫೇಸ್’ಬುಕ್ ಪಂಡಿತರ ಮೂಲಕವೇ ಎಂಬುದೂ ಮರೆಯದಿರಲಿ.  ಅಷ್ಟಕ್ಕೂ ಜನ ನರೇಂದ್ರ ಮೋದಿಗಾಗಿ ವೋಟು ಕೊಟ್ಟಿದ್ದೇ ವಿನಃ ವೈಯಕ್ತಿಕವಾಗಿ ಇವರಿಗೆ ಅಲ್ಲ..

ಒಬ್ಬ ನಾಯಕನಾದವನಿಗೆ ಜನ ಏನು ಹೇಳುತ್ತಾರೆ ಎಂಬುದನ್ನು ಕೇಳುವ ತಾಳ್ಮೆ ಬೇಕು.  ಅವರನ್ನು ಬೆಂಬಲಿಸುವವರೂ ಅಷ್ಟೇ ವಿವೇಚನೆಯಿಂದ ಬೆಂಬಲಿಸಬೇಕು. ಗೆದ್ದಾಗ ಮೆರವಣಿಗೆ ಮಾಡಿ ಸೋತಾಗ ಬಾಟಲಿ ಎಸೆಯುವ ಅಭಿಮಾನಿಗಳು ಒಂದು ಕಡೆ, ನಮ್ಮ ನಾಯಕ ಏನು ಮಾಡಿದರೂ ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ರೇಗಿ ಬರುವ ಅಭಿಮಾನಿಗಳು ಮತ್ತೊಂದು ಕಡೆ.. ನಮ್ಮ ದುರಾದೃಷ್ಟಕ್ಕೆ ಇಂತದ್ದೇ ಕಾಣಸಿಗುತ್ತಿದೆ ಇವತ್ತಿನ ಸಮಾಜದಲ್ಲಿ.

ಪ್ರತಾಪರ ಈ ನಡೆಯಿಂದ “ಪ್ರತಾಪ್ ಸಿಂಹರಿಂದ ಇದನ್ನು ನಾನು ನಿರೀಕ್ಷಿಸಿರಲಿಲ್ಲ” ಅನ್ನುವವರು ತುಂಬಾ ಕಾಣ್ತಾ ಇದ್ದಾರೆ. ಮೊದಲು ಪತ್ರಕರ್ತ ರಾಜಕಾರಣಿಯಾಗಿದ್ದರು, ಈಗ ಪಕ್ಕಾ ರಾಜಕಾರಣಿಯಾಗುತ್ತಿದ್ದಾರೆ ಎನ್ನುವಂತಹ ಮಾತುಗಳನ್ನು ನಾನು ಹೇಳುತ್ತಿಲ್ಲ, ಇಂಟರ್’ನೆಟ್ಟಿನಲ್ಲಿ ಹಲವರು ಹೇಳುತ್ತಿದ್ದಾರೆ. ಗಮನೀಯ ಅಂಶವೆಂದರೆ ಎಲ್ಲರೂ ಪ್ರತಾಪ್ ಬರಹಗಳ ಅಭಿಮಾನಿಗಳಾಗಿದ್ದವರೇ. ಪ್ರತಾಪರ ಬಗ್ಗೆ ನನಗೇನೂ ದ್ವೇಷವಿಲ್ಲ. ಮೇಲಾಗಿ ಅವರನ್ನಾರಿಸಿದ ಪಕ್ಷದ ಬೆಂಬಲಿಗನೇ ನಾನು. ಈಗಲೂ ನಾನು ಹೇಳುತ್ತಿರುವುದು, ಉದ್ದೇಶ ಶುದ್ಧವಿದ್ದರೆ ಸಂಸದರ ವೇತನ ಹೆಚ್ಚು ಮಾಡಲಿ ಎಂದೇ. ತನ್ನ ಬರಹಗಳಿಂದ ಲೋಕಕ್ಕೆಲ್ಲಾ ಬೋಧನೆ ಮಾಡಿದ ಪ್ರತಾಪ್ ಸಿಂಹರ ಉದ್ದೇಶ ಶುದ್ಧಿಯ ಮೇಲೆ ಪ್ರಶ್ನೆಗಳೇಳಬಾರದು ಎಂಬುದಷ್ಟೇ ನನ್ನ ಕಾಳಜಿ.

References:

  1. http://pratapsimha.com/bjp-3/
  2. http://pratapsimha.com/pejawar/
  3. http://pratapsimha.com/yeddishwa

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!