ಪ್ರಚಲಿತ

ಜಗತ್ತು ಈಗ ಬೆತ್ತಲಾಗ್ತಾ ಇದೆ!

ಅವರ ಬರವಣಿಗೆಯನ್ನು ಇಷ್ಟ ಪಟ್ಟ ಸಾವಿರಾರು ಜನರಲ್ಲಿ ನಾನೂ ಒಬ್ಬ. ನಾನೂ ಅವರಂತೆ ಆಗಬೇಕು ಅಂತಂದುಕೊಂಡಿದ್ದ ಹಲವರಲ್ಲಿ ನಾನೂ ಒಬ್ಬ. ಏಳು ವರ್ಷಗಳ ಹಿಂದೆ ನನ್ನ ಕಾಲೇಜಿಗೆ ಅತಿಥಿಯಾಗಿ ಬಂದಿದ್ದಾಗ ಕ್ಯೂ ನಿಂತು ಆಟೋಗ್ರಾಫ್ ಪಡೆದುಕೊಂಡಿದ್ದೆ. ಪತ್ರಿಕೋದ್ಯಮಕ್ಕೆ ಸ್ಟಾರ್ ಗಿರಿ ತಂದುಕೊಟ್ಟಿದ್ದೇ ಅವರೆಂದರೆ ತಪ್ಪಾಗಲಾರದು.   ಅವರು ಮೈಸೂರಿನಲ್ಲಿ ಚುನಾವಣೆಗೆ ನಿಲ್ಲುತ್ತಾರಂತೆ ಅನ್ನೋ ಸುದ್ದಿ ಬರೋವಾಗ ಎಕ್ಸೈಟ್ ಆದ ಸಾವಿರಾರು ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಛೆ! ಇನ್ನು ಇವರು ಅಂಕಣ ಬರೆಯೋದಿಲ್ಲವಂತೆ ಅನ್ನೋ ಬೇಸರ ಆದ್ರೂ ನನ್ನಿಷ್ಟದ  ರಾಜಕೀಯಕ್ಕೆ ಬರುತ್ತಾರೆ, ಅದೂ ಮೋದಿಯವರು ಪ್ರಧಾನಿಯಾಗುವ ಕಾಲಘಟ್ಟದಲ್ಲಿ… ಅಂತ ಬಹಳವಾಗೇ ಖುಷಿ ಪಟ್ಟಿದ್ದೆ. ಅವರು ಯಾರು ಗೊತ್ತಾಯ್ತಲ್ಲಾ? ತನ್ನ ಬೆಂಕಿಯಂತಹ ಬರಹಗಳಿಂದ ಕರ್ನಾಟಕದ ಮನೆಮಾತಾಗಿದ್ದ ಪ್ರತಾಪ್ ಸಿಂಹ! ವಿಪರ್ಯಾಸವೆಂದರೆ ಅವರ ಇತ್ತೀಚೆಗಿನ ಹೇಳಿಕೆಯಿಂದ ನಿರಾಸೆಗೊಳಗಾಗಿರುವ ನೂರಾರು ಮಂದಿಯಲ್ಲಿ ನಾನೂ ಒಬ್ಬ!

ಹೌದು. ಸಂಸದರಿಗೆ ಸಿಗುತ್ತಿರುವ ಸಂಬಳ ಐವತ್ತು ಸಾವಿರ ಏನಕ್ಕೂ ಸಾಲದು, ಕನಿಷ್ಟವೆಂದರೂ ಮೂರು ಲಕ್ಷ ವೇತನ ನೀಡಬೇಕೆಂದು ಹೇಳಿದ್ದಾರೆ ಮಿ.ಸಿಂಹ. ಖಂಡಿತವಾಗಿಯೂ ಇವತ್ತಿನ ಕಾಲದಲ್ಲಿ ಪ್ರಾಮಾಣಿಕರು, ಜನಸಾಮಾನ್ಯರು ರಾಜಕೀಯಕ್ಕೆ ಬರಬೇಕು. ಆವಾಗ ಮಾತ್ರ ಪ್ರಜಾಪ್ರಭುತ್ವಕ್ಕೊಂದು ಅರ್ಥ ಬರುತ್ತದೆ. ಈ ಸಾಮಾನ್ಯರು ಆಯ್ಕೆಯಾಗಿ ಬಂದರೆ ಅವರಿಗೆ ಉತ್ತಮ ವೇತನ, ಭತ್ಯೆಯನ್ನು ನೀಡಲೇಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಉದ್ದೇಶ ಶುದ್ಧವಿರಬೇಕು ಅಷ್ಟೇ.

ಪ್ರತಾಪ್ ನೀಡಿರುವ ಕಾರಣಗಳನ್ನು ನೋಡಿ.  ಈಗ ಸಿಗುತ್ತಿರುವ ಐವತ್ತು ಸಾವಿರದಲ್ಲಿ ಪ್ರಾಮಾಣಿಕ ಸಂಸದನಿಗೆ ಜೀವನ ನಿರ್ವಹಿಸಲು ಸಾಧ್ಯವಿಲ್ಲ ಅಂದಿದ್ದಾರೆ. ಭ್ರಷ್ಟಾಚಾರವಿನ್ನೂ ತಾಂಡವವಾಡುತ್ತಲೇ ಇದೆಯಾದುದರಿಂದ ಅವರ ಮಾತನ್ನು ಒಪ್ಪಲೂಬಹುದು. ಆದರೆ ನಿಜವಾಗಿಯೂ ನಮ್ಮ ಸಂಸದರಿಗೆ ಸಿಗುತ್ತಿರುವುದು ಬರೇ ಐವತ್ತೇ ಸಾವಿರಾನಾ? ಒಂದು ವೇಳೆ ವೇತನ ಜಾಸ್ತಿ ಮಾಡದಿದ್ದರೆ ಅಡ್ಡದಾರಿ ಹಿಡಿಯಬೇಕಾಗುತ್ತದೆ ಎಂಬುದಕ್ಕೆ ಇದು ಅವರು ನೀಡುವ ಸಮರ್ಥನೇನಾ?  ಬೆತ್ತಲೆ ಜಗತ್ತಿನಲ್ಲಿ ಅವರು ಹಿಂದೆ ಹಲವು ರಾಜಕಾರಣಿಗಳ ಬಗ್ಗೆ ಬರೆದಿದ್ದಾರೆ. ಅವರು ಕೂಡಾ ವೇತನ ಕಡಿಮೆಯಿದ್ದೇ ಅಂಥಾ ದಾರಿ ಹಿಡಿದಿದ್ದಾಗಿರಬಹುದಲ್ಲವೇ? ಸಂಸದ ಅಥವಾ ಶಾಸಕರ ಬಳಿ ಜನ ದೇವಸ್ಥಾನಕ್ಕೆ ದೇಣಿಗೆ, ಅನಾರೋಗ್ಯ ಅದು ಇದು ಎಂದೆಲ್ಲಾ ಜನ ಬರುತ್ತಾರೆ. ಅದನ್ನೆಲ್ಲಾ ಪ್ರಧಾನ ಮಂತ್ರಿ ಪರಿಹಾರ ನಿಧಿ, ಮುಖ್ಯಮಂತ್ರಿ ಪರಿಹಾರ ನಿಧಿಯನ್ನು ಉಪಯೋಗಿಸಿಕೊಂಡು ಯಾರಿಗೂ ನೋವಾಗದಂತೆ ನಿಭಾಯಿಸುವುದರಲ್ಲಿ ಆಯ್ಕೆಯಾದವರ ಜಾಣ್ಮೆಯಿದೆ. ಒಬ್ಬ ಜನಪ್ರತಿನಿಧಿಗೆ ಯಾವೆಲ್ಲಾ ವಿಷಯಗಳಲ್ಲಿ ಖರ್ಚುಗಳಿರುತ್ತವೆ ಎಂಬುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ.  ಸರ್ಕಾರ ಆದಕ್ಕೆ ತಕ್ಕಂತೆ ವೇತನ, ಭತ್ಯೆ ಇತಾದಿ ನೀಡ್ತಾಯಿದೆ. ಆದು ಕಡಿಮೆಯಾಗಲೂಬಹುದು. ಕೆಲವರಿಗೆ ಅಷ್ಟರಲ್ಲಿ ತಮ್ಮ Requirement meet ಆಗಲು ಸಾಧ್ಯವಿಲ್ಲ ಎಂಬ ಅರಿವೂ ನನಗಿದೆ, ಇಲ್ಲವೆಂದಲ್ಲ.

ಆದರೆ ಪ್ರತಾಪ್ ಸಿಂಹ ನೀಡಿರುವ ಕಾರಣಗಳು ಬಾಲಿಶವಾಗಿವೆ ಅಂತ ನನ್ನ ಅನಿಸಿಕೆ. ಕಛೇರಿಗೆ ದಿನಕ್ಕೆ ಮುನ್ನೂರು ಜನ ಬರ್ತಾರೆ. ಅವರಿಗೆಲ್ಲಾ ಕಾಫಿ ನೀಡುವುದಕ್ಕಾಗಿಯೇ ದಿನಕ್ಕೆ ೨೫೦೦ ಖರ್ಚಾಗುತ್ತದೆ ಅಂತಿದ್ದಾರೆ ನಮ್ಮ ಎಂಪಿ ಸಾಹೇಬರು.  ಅಲ್ಲಾ, ಬಂದವರಿಗೆಲ್ಲಾ ಕಾಫಿ ಕೊಡಲೇಬೇಕೆಂದು ಹೇಳಿದವರು ಯಾರು? ಮೋದಿ ಏನಾದ್ರು ಆಥರಾ ಆರ್ಡರ್ ಮಾಡಿದ್ದಾರಾ?  ಕೆಲವು ಅಭಿಮಾನಿ ದೇವರುಗಳು ಇದನ್ನು ಅತಿಥಿ ಸತ್ಕಾರ ಅಂತಿದ್ದಾರೆ, ಸರ್ಕಾರಿ ಖರ್ಚಿನಲ್ಲಿ ಅತಿಥಿ ಸತ್ಕಾರ ಮಾಡಬೇಕಾದ ಅವಶ್ಯಕತೆ ಇದ್ಯಾ? ಕಛೇರಿಗೆ ಬಂದವರಿಗೆ ಕನಿಷ್ಟ ಕಾಫಿಯನ್ನೂ ಕೋಡೋದಿಲ್ಲ ಅಂತ ಜನ ಹೇಳ್ತಾರಂತೆ. ಜನ ಸಾವಿರ ಹೇಳ್ತಾರ್ರೀ, ಅದಲ್ಲೆವನ್ನೂ ಕೇಳಿಕೊಂಡು ಕೂರೋಕಾಗುತ್ತಾ? ದೇಶಕ್ಕಾಗಿ ಒಂದು ಹೊತ್ತಿನ ಉಪವಾಸ ಮಾಡಿ ಎಂದ ಶಾಸ್ತ್ರೀಜಿ ಬಗ್ಗೆ ಲೇಖನ ಬರೆದು ಶಾಭಾಶ್’ಗಿರಿ ಪಡೆದುಕೊಳ್ಳುವವರಿಗೆ ಜನರನ್ನು ಕನ್ವೆನ್ಸ್ ಮಾಡಲು ಸಾಧ್ಯವಿಲ್ಲವೇ? ಅಷ್ಟೂ ಮಿತವ್ಯಯ ಸಾಧ್ಯವಿಲ್ಲವೆಂದರೆ ಹೇಗೆ ಸಾರ್? ಶಾಸ್ತ್ರೀಜಿ ಥರಾ ಅನಗತ್ಯ ಸರ್ಕಾರಿ ಸೌಲಭ್ಯಗಳನ್ನೆಲ್ಲಾ ತ್ಯಜಿಸಿ ಸರಳ ಜೀವನ ಮಾಡಬೇಕೆಂದು ಹೇಳುತ್ತಿರುವುದಲ್ಲ ನಾನು. ಆದರೆ  ಕಾಫಿಯಂತಹಾ ಕೆಲವು ವಿಷಯಗಳಲ್ಲಿ ಮಿತವ್ಯಯ ಖಂಡಿತಾ ಸಾಧ್ಯ.

ಮತ್ತೊಂದು ಕಾರಣ, ಹೆಂಡತಿಯ ಕಾಲಿನ ಚಿಕಿತ್ಸೆಗೂ ಸರ್ಕಾರೀ ಸೌಲಭ್ಯ ಸಾಲಲ್ಲ ಎಂಬುದು. ಸರ್ಕಾರ ಕೊಡುವ ೧೦೦೦೦ದಲ್ಲಿ ಜೈಪುರ ಕಾಲೂ ಸಿಗದಿರುವುದರಿಂದ ನಾನು ಸುಮ್ಮನಾದೆ ಎಂದು  ಹೇಳಿದ್ದಾರೆ. ಸಂಸದರು ಸರ್ಕಾರದ ಸವಲತ್ತು ಸಿಕ್ಕಿದರೆ ಮಾತ್ರ ಕಾಲು ಹಾಕಿಸುವುದಾ ಹಾಗಾದರೆ? ಅಷ್ಟಿದ್ದಿದ್ದರೆ ೧.೩ಲಕ್ಷ ಸಂಬಳವಿದ್ದಾಗಲೇ ಮಾಡಿಸಬಹುದಿತ್ತಲ್ಲಾ? ಇವತ್ತು ನಮ್ಮ ದೇಶದಲ್ಲಿ ನಾನ್ನೂರು, ಐನೂರು ರೂ ಮಾಸಾಶನ ಪಡೆಯುತ್ತಿರುವ ಕೋಟ್ಯಾಂತರ ಅಂಗವಿಕಲರಿದ್ದಾರೆ, ವಿಧವೆಯರಿದ್ದಾರೆ, ಹಿರಿಯ ನಾಗರೀಕರಿದ್ದಾರೆ. ಅವರೆಲ್ಲರೂ ತಮಗೆ ಸಿಗುತ್ತಿರುವ ಮಾಸಾಶನವನ್ನು ನಾನ್ನೂರರಿಂದ ನಾಲ್ಕು ಸಾವಿರ ಮಾಡಿ ಎಂದು ಒತ್ತಾಯಿಸಿದರೆ ಸರ್ಕಾರಕ್ಕೆ ಅದನ್ನು ಭರಿಸಲು ಸಾಧ್ಯವಿದೆಯೇ? ಪ್ರತಾಪ್ ಅದರ ಬಗ್ಗೆ ಮಾತನಾಡಿದಿದ್ದರೆ ಅವರ ಮೇಲಿನ ಗೌರವ ಹೆಚ್ಚುತ್ತಿತ್ತು.

ಮಗಳ ಶಿಕ್ಷಣಕ್ಕೆ  ವರ್ಷಕ್ಕೆ ತೊಂಬತ್ತು ಸಾವಿರ ಬೇಕಾಗುತ್ತದೆ ಎಂದು ಹೇಳುತ್ತಾರೆ. ಇದೂ ಕೂಡಾ ಅವರ ವೈಯಕ್ತಿಕ ವಿಷಯವೇ. ಎಲ್ಲಾ ಪೋಷಕರಿಗೂ ಅವರವರ ಮಕ್ಕಳಿಗೆ ಉತ್ತಮ ಶಾಲೆಗಳಲ್ಲಿ ಶಿಕ್ಷಣ ಕೊಡಿಸಬೇಕೆಂಬ ಆಸೆಗಳಿರುತ್ತವೆ. ಇದು ಪ್ರತಾಪ್ ಮಾತ್ರ ಅಲ್ಲ ಎಲ್ಲಾ ಪೋಷಕರಿಗೂ ಇರುತ್ತದೆ.ಆದರೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವ ಹಲವಾರು ಕನ್ನಡದ ಸಾಹಿತಿಗಳನ್ನು ಟೀಕಿಸಿ ಬೆತ್ತಲೆ ಜಗತ್ತಿನಲ್ಲಿ ಪ್ರತಾಪ ಸಿಂಹ ಬರೆದಿದ್ದನ್ನು ಓದಿದ್ದೇನೆ. ಯಾಕೆ, ಆ ಸಾಹಿತಿಗಳಿಗೂ ತಮ್ಮ ಮಕ್ಕಳ ಭವಿಷ್ಯದ ಕುರಿತಾಗಿ ಕನಸುಗಳಿರುವುದಿಲ್ಲವೇ?  ಅವರ ನಡೆಯನ್ನು ಟೀಕಿಸುತ್ತಿದ್ದ ಪ್ರತಾಪ್ ಸಿಂಹ ಈಗ ತನ್ನ ವಿಷಯದಲ್ಲಿ ಅಂತಹಾ ಹೈಫೈ ಶಾಲೆಗೆ ಸೇರಿಸಿದ್ದೇಕೆ? ಮೈಸೂರಿನಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ಕೊಡುವ ಶಾಲೆಗಳೇ ಇಲ್ವಾ? ಸರ್ಕಾರೀ ಶಾಲೆಗಳಿಲ್ವಾ? ಅಥವಾ ಸರ್ಕಾರೀ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗ್ತಾ ಇಲ್ವಾ? ಸರ್ಕಾರೀ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗ್ತಾ ಇಲ್ಲ ಅಂದ್ರೆ ಅಲ್ಲಿನ ಗುಣಮಟ್ಟ ಹೆಚ್ಚುವಂತೆ ಮಾಡುವುದು ಸಂಸದರ ಜವಾಬ್ದಾರಿಯಾಗಲಿ.  ಆ ಮೂಲಕ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ. ಬಿಡಿ, ಇವರು ತನ್ನ ಮಗಳನ್ನು ಯಾವ ಶಾಲೆಗಾದರೂ ಸೇರಿಸಿಕೊಳ್ಳಲಿ. ಆದರೆ ಅದನ್ನೂ ವೇತನ ಹೆಚ್ಚಳಕ್ಕೊಂದು ನೆಪ ಮಾಡಿಕೊಂಡರಲ್ಲ ಅಲ್ಲೇ ಇರುವುದು ನನ್ನ ಆಕ್ಷೇಪ.

ವೇತನ ಹೆಚ್ಚಳ ಮಾಡದಿದ್ರೆ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿದಂತೆ ಎಂದು ಅವಲತ್ತುಕೊಳ್ಳುತ್ತಿದ್ದಾರೆ ಕೆಲವರು. ಇದಂತೂ ತೀರಾ ಬಾಲಿಶ. ಸಾಮಾನ್ಯರಲ್ಲಿ ಸಾಮನ್ಯರಾಗಿದ್ದುಕೊಂಡು, ಸರ್ಕಾರ ನೀಡುವ ಸವಲತ್ತಿನಲ್ಲೇ ಜೀವನ ಮಾಡುವ ಜನಪ್ರತಿನಿಧಿಗಳ ಉದಾಹರಣೆಯೂ ನಮ್ಮ ಬಳಿ ಇದೆ.  ಮತ್ತು, ರಾಜಕಾರಣಿಗಳಲ್ಲಿ ಮಾತ್ರ ಭ್ರಷ್ಟಾಚಾರವಿರುವುದಾ? ಅವರ ವೇತನ ಹೆಚ್ಚಳ ಮಾಡಿದ್ರೆ ಭ್ರಷ್ಟಾಚಾರ ನಿಲ್ಲುತ್ತಾ? ಎಂಬಿತ್ಯಾದಿ ಪ್ರಶ್ನೆಗಳೂ ಏಳುತ್ತಿವೆ. ಸರ್ಕಾರೀ ನೌಕರರಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರವಿದೆ. ಅಲ್ಲಿರುವ ಭೃಷ್ಟಾಚಾರವನ್ನು ಕಡಿಮೆ ಮಾಡುವುದಕ್ಕಾಗಿ, ಅವರೂ ಕೂಡಾ ಪ್ರಾಮಾಣಿಕ ಜೀವನ ನಡೆಸುವುದಕ್ಕಾಗಿ ಅವರ ವೇತನವನ್ನು ಜಾಸ್ತಿ ಮಾಡೋಣವೇ ಹಾಗಾದ್ರೆ? ಸರ್ಕಾರೀ ಸಂಬಳವನ್ನು ಜಾಸ್ತಿ ಮಾಡಿ ಅವರನ್ನು ಸಂತೃಪ್ತಿಗೊಳಿಸಲು ಸಾಧ್ಯವಿದೆಯೇ?

ಕೆಲವರು ಹೀಗೂ ಹೇಳುತ್ತಿದ್ದಾರೆ. “ಮುಖ್ಯಮಂತ್ರಿಗಳು ದಿಂಬು ಹಾಸಿಗೆಗೆ ಹದಿನಾಲ್ಕು ಲಕ್ಷ ಪೋಲು ಮಾಡಿದರೆ ಯಾರೂ ಮಾತನಾಡುವುದಿಲ್ಲ, ಸಂಸದನೊಬ್ಬ ತನ್ನ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಹೇಳಿಕೊಂಡರೆ ಎಲ್ಲರೂ ಉರಿದು ಬೀಳುತ್ತಾರೆ”.  ಇದಕ್ಕೆ ನಾನು ಅಂತರ್ಜಾಲದಲ್ಲಿ ನೋಡಿದ ಉತ್ತರವನ್ನೇ ಇಲ್ಲಿ ಹೇಳುತ್ತೇನೆ. ಅದೇನೆಂದರೆ ನಮಗೆ ನಿರೀಕ್ಷೆಯಿದ್ದಲ್ಲಿ ಮಾತ್ರ ನಿರಾಸೆಯಾಗುತ್ತದೆ. ನಿರೀಕ್ಷೆಯೇ ಇಲ್ಲದ ಕಡೆ ನಿರಾಸೆಯೆಲ್ಲಿಂದ ಬಂತು? ಪ್ರತಾಪ್ ಮೇಲೆ ನಮಗೆ  ಆಗಾಧ  ನಿರೀಕ್ಷೆಯಿರೋದ್ರಿಂದಲೇ ಅವರ ಹೇಳಿಕೆಯಿಂದ ನಿರಾಸೆಯಾಗಿದೆ. ಮತ್ತೆ ಕೆಲವರು, “ಪ್ರತಾಪ್ ಇದನ್ನೆಲ್ಲಾ ನೇರವಾಗಿ ಹೇಳಬಾರದಿತ್ತು, ಒಳಗಿಂದೊಳಗೇ ಹಣ ಹೊಡೆಯಬೇಕಾಗಿತ್ತು” ಎನ್ನುವಂತಹ ಬೇಜವಾಬ್ದಾರಿ ಮಾತನ್ನೂ ಆಡಿದ್ದಾರೆ. ಇನ್ನು ೧.೩ ಲಕ್ಷದ ನೌಕರಿ ಬಿಟ್ಟು ಯಾಕೆ ಕಡಿಮೆ ಸಂಬಳದ ಈ ರಾಜಕೀಯಕ್ಕೆ ಬಂದ್ರಿ  ಅಥವಾ ಬರುವ ಮೊದಲೇ ಇದನ್ನೆಲ್ಲಾ ಆಲೋಚಿಸಬೇಕಿತ್ತು ಎನ್ನುವಂತಹ ಬೇಜವಾಬ್ದಾರಿ ಪ್ರಶ್ನೆಗಳನ್ನು ನಾನು ಕೇಳುವುದಿಲ್ಲ. ಪ್ರತಾಪ್ ಅವರ ನಡೆಯನ್ನು ನಾನು ಮಾತ್ರ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮಂದಿ ಪ್ರಶ್ನಿಸಿದ್ದಾರೆ. ಅವರು ಭಾರೀ ತಪ್ಪು ಮಾಡಿದ್ದಾರಂತಲ್ಲ. ಆದರೆ ಪ್ರತಾಪ್ ಬರಹಗಳಿಗೂ, ಅವರ ನಿಜ ಜೀವನಕ್ಕೂ ಸಂಬಂಧವೆ ಇಲ್ಲ ಎನ್ನುವಂತಹಾ ಮಾತು ವ್ಯಕ್ತವಾಗಿವೆ. ಅವರ ಬರಹಗಳಿಗೂ, ಜೀವನಕ್ಕೂ ಸಂಬಂಧವೇ ಇಲ್ಲ ಎಂಬುದು ಮೈನಿಂಗ್ ಮಾಫಿಯಾದಲ್ಲಿ ರೆಡ್ಡಿ ರಾಮುಲುವನ್ನು ಬೈದು ಕಡೆಗೆ ಚುನಾವಣಾ ಪ್ರಚಾರದಲ್ಲಿ ರಾಮುಲು ಜೊತೆ ಕೈ ಜೋಡಿಸಿದಾಗಲೇ ಜಗಜ್ಜಾಹೀರಾಗಿತ್ತು.  ಪ್ರತಾಪ್ ಜಗತ್ತು ಈಗ ಮತ್ತೆ  ಬೆತ್ತಲಾಗ್ತಾ ಇದೆ!

ಒಂದಂತೂ ಬಹಳ ಸ್ಪಷ್ಟವಾಗಿ ಹೇಳುತ್ತೇನೆ. ನನಗೆ ತಿಳಿದ ಮಟ್ಟಿಗೆ ಪ್ರತಾಪ್ ಸಿಂಹ ಸಂಸದರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಬಡವರ ಸಮಸ್ಯೆಗಳಿಗೆ ದನಿಯಾಗುತ್ತಿದ್ದಾರೆ. ಅವರಂತಹ ಸಂಸದರಿಗೆ ಉತ್ತಮ ವೇತನ ನೀಡಬೇಕಾದ ಅವಶ್ಯಕತೆಯಿದೆ.   ಪ್ರತಾಪ್ ಸಿಂಹರಂತಹ Young and Energetic,ವಿದ್ಯಾವಂತ ಸಾಮಾನ್ಯ ಯುವಕನನ್ನು ರಾಜಕೀಯದಲ್ಲಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ.  ಪ್ರತಾಪ್ ಸಿಂಹ ವೇತನ ಹೆಚ್ಚಿಸಬೇಕೆಂದು ಪ್ರಾಮಾಣಿಕವಾಗಿ ಹೇಳಿರುವುದು ತಪ್ಪಲ್ಲ. ಆದರೆ ಕಾರಣಗಳು ಬಾಲಿಶವಾಗಿರದೆ ನೈಜವಾಗಿರಬೇಕಾಗಿರುವುದೂ ಅಷ್ಟೇ ಮುಖ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!