ಅಂಕಣ

ಮಾಧ್ಯಮ ಮಿತ್ರರಿಗೆ ಬಹಿರಂಗ ಪತ್ರ

ಮಾಧ್ಯಮ ಮಿತ್ರರೇ, ನಮಸ್ಕಾರ.

ಮೊನ್ನೆ ಸೆಪ್ಟೆಂಬರ್ 19ನೇ ತಾರೀಖಿನಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಪ್ರಶಸ್ತಿಪಟ್ಟಿ ಬಿಡುಗಡೆ ಮಾಡಿದ ದಿನದಿಂದಲೂ ಆಗುತ್ತಿರುವ ಬೆಳವಣಿಗೆಗಳನ್ನು ನೀವು ನೋಡುತ್ತಿದ್ದೀರಿ. ಪಟ್ಟಿಯಲ್ಲಿರುವ ಕೆಲವು ಹೆಸರುಗಳು ಆಕ್ಷೇಪಾರ್ಹವಾಗಿವೆ ಎಂದು ಹಲವು ಕನ್ನಡಿಗರು ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ವೆಬ್ ಪತ್ರಿಕೆಗಳು ಸರಣಿ ಲೇಖನಗಳನ್ನು ಪ್ರಕಟಿಸಿದವು. ಸಾಹಿತ್ಯ ಅಕಾಡೆಮಿ ಪ್ರಶಸ್ತಿಪಟ್ಟಿಯನ್ನು ಪುನರ್ ಪರಿಶೀಲಿಸಬೇಕು ಎಂದು ಚೇಂಜ್.ಆರ್ಗ್ ಎಂಬ ವೆಬ್ಸೈಟಿನಲ್ಲಿ ಪೆಟಿಶನ್ (ಸಹಿಸಂಗ್ರಹ ಅಭಿಯಾನ) ಆರಂಭಿಸಲಾಗಿದೆ. ಇದಕ್ಕೆ ಇದುವರೆಗೆ 11,300 ಜನ ಸಹಿ ಹಾಕಿದ್ದಾರೆ. ಪ್ರಶಸ್ತಿಗಳನ್ನು ವಿರೋಧಿಸುತ್ತಿರುವವರು ಕೆಲವೊಂದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:

ಪ್ರಶಸ್ತಿ ಪಟ್ಟಿಯಿಂದ ಕೆ.ಎಸ್.ಭಗವಾನ್’ರನ್ನು ಕೈಬಿಡಬೇಕು. ಅವರು ಈಗಾಗಲೇ ರಾಮಾಯಣ, ಮಹಾಭಾರತದಂತಹ ಪ್ರಾಚೀನ ಕಾವ್ಯಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ. ಭಗವಾನರ ಕೆಲವು ಹೇಳಿಕೆಗಳು ತೀರಾ ಅವಾಚ್ಯವಾಗಿವೆ. ಇಂಥ ಸಾಮಾಜಿಕ ಪ್ರಜ್ಞೆ ಇಲ್ಲದ ವ್ಯಕ್ತಿಗಳಿಗೆ ಪ್ರಶಸ್ತಿ ಸಿಕ್ಕಿದರೆ, ಮುಂದೆ ಪ್ರಶಸ್ತಿಗಾಗಿಯೇ ದೇವತೆಗಳನ್ನು, ಗ್ರಂಥಗಳನ್ನು ತೆಗಳುವ, ಹೀಯಾಳಿಸುವ ಒಂದು ವಿಕೃತಗುಂಪು ಬೆಳೆಯಬಹುದು. ಮೈಸೂರಿನಲ್ಲಿ ನಡೆದ ಒಂದು ಸಮಾರಂಭದಲ್ಲಿ ಈ ವ್ಯಕ್ತಿ ಭಗವದ್ಗೀತೆಯನ್ನು ಸುಡುವುದಕ್ಕೆ ಮುಂದೆ ಬಂದಿದ್ದರು. ಪುಸ್ತಕಗಳನ್ನು ಸುಡುವ ವ್ಯಕ್ತಿಗೆ ಸಾಹಿತ್ಯ ಪ್ರಶಸ್ತಿ ಕೊಡುವುದಕ್ಕಿಂತ ದೊಡ್ಡ ಅಪಹಾಸ್ಯ ಇಲ್ಲ. ಇನ್ನು, ಈ ಕಾರ್ಯಕ್ರಮದ ಸಂಬಂಧ ಭಗವಾನ್ ಮೇಲೆ ಪೋಲೀಸ್ ಕೇಸು ದಾಖಲಾಗಿತ್ತು. ಬಂಧನ ತಪ್ಪಿಸಿಕೊಳ್ಳಲು ಭಗವಾನ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಒಟ್ಟು ಎಂಟು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತು. ಅಲ್ಲಿ ಹೇಳಿರುವ ಯಾವ ಷರತ್ತನ್ನೂ ಭಗವಾನ್ ಆ ನಂತರ ಪಾಲಿಸಿಲ್ಲ. ಮಾತ್ರವಲ್ಲ; ಮತ್ತೆಮತ್ತೆ ರಾಜ್ಯದ ಹಲವು ಕಡೆಗಳಲ್ಲಿ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವ ತೆವಲು ಪ್ರದರ್ಶಿಸಿದ್ದಾರೆ. ಇದು ಅತ್ಯಂತ ಸ್ಪಷ್ಟ ನ್ಯಾಯಾಂಗ ನಿಂದನೆಯಾಗಿದ್ದರೂ ಪೋಲೀಸರು ಯಾವ ಕ್ರಮಕ್ಕೂ ಮುಂದಾಗಿಲ್ಲ. ಭಗವಾನ್’ಗೆ ಜೀವ ಬೆದರಿಕೆ ಇದೆ ಎಂಬ ಕಾರಣ ಮುಂದೊಡ್ಡಿ ಸರಕಾರದ ದುಡ್ಡಿನಲ್ಲಿ ಭದ್ರತೆ ಒದಗಿಸಲಾಗಿದೆ. ಮೂವತ್ತೈದಕ್ಕೂ ಅಧಿಕ ಕೇಸುಗಳಲ್ಲಿ ಬೇಕಾಗಿರುವ ಒಂದು ಪ್ರಮುಖ ಆರೋಪಿಯನ್ನು ಗನ್ ಮ್ಯಾನ್ ಸಹಿತ ರಕ್ಷಣೆ ಒದಗಿಸಿ ಸರಕಾರ ಸಾಕುವುದನ್ನು ಕರ್ನಾಟಕದ ಜನ ಹಿಂದೆಂದೂ ಕಂಡಿರಲಿಲ್ಲ. “ಬಂಧನಕ್ಕೊಳಗಾದವರಿಗೆ ಪ್ರಶಸ್ತಿ ಕೊಡುವುದಿಲ್ಲ” ಎಂದು ಅಕಾಡೆಮಿಯ ಅಧ್ಯಕ್ಷರು ಹೇಳಿರುವುದಕ್ಕೂ ಬಂಧನ ತಪ್ಪಿಸಿಕೊಳ್ಳಲು ಹತ್ತು ಹಲವು ತಂತ್ರಗಳನ್ನು ಭಗವಾನ್ ಹೆಣೆಯುತ್ತಿರುವುದಕ್ಕೂ ಸಂಬಂಧ ಸ್ಪಷ್ಟವಾಗಿದೆ ಎಂದು ಯಾರಿಗೆ ಬೇಕಾದರೂ ಅರ್ಥವಾಗುತ್ತದೆ.

ಇಷ್ಟೆಲ್ಲ ರಾಮಾಯಣಗಳು ನಡೆದರೂ ನಮ್ಮ ಮಾಧ್ಯಮಗಳು ಯಾಕೆ ಈ ಬಗ್ಗೆ ಮೌನವಾಗಿವೆ ಎನ್ನುವುದು ರಾಜ್ಯದ ಜನರ ಪ್ರಶ್ನೆಯಾಗಿದೆ. ಅಕಾಡೆಮಿ ಪ್ರಶಸ್ತಿಗಳ ಬಗ್ಗೆ ಅತ್ಯಂತ ದೊಡ್ಡ ದನಿಯಲ್ಲಿ ಅಪಸ್ವರ ಎದ್ದಿದ್ದರೂ ಮಾಧ್ಯಮಗಳು ಯಾಕೆ ಬೆಕ್ಕಿನ ನಿದ್ದೆ ಮಾಡುತ್ತಿವೆ? ಜಾಲತಾಣಗಳಲ್ಲಿ ಕಾವು ಪಡೆದಿರುವ ಹೋರಾಟ, ಆಂದೋಲನಗಳೆಲ್ಲ ಅಮೆರಿಕದಲ್ಲೋ ಆಸ್ಟ್ರೇಲಿಯದಲ್ಲೋ ನಡೆಯುತ್ತಿರುವುದಲ್ಲ; ನಮ್ಮದೇ ಕರ್ನಾಟಕದಲ್ಲಿ ಜರುಗುತ್ತಿರುವ ವಿದ್ಯಮಾನ ಎನ್ನುವುದು ಮಾಧ್ಯಮಗಳಿಗೆ ಗೊತ್ತಿಲ್ಲವೆ? ಅಥವಾ ಇವರೆಲ್ಲರೂ ಸರಕಾರದ ಕಾಣದ ಕೈಗಳ ಹಿಡಿತಕ್ಕೆ ಸಿಕ್ಕಿ ಹೀಗೆ ಮೌನವಾಗಿದ್ದಾರೆಯೇ? ಮಾಧ್ಯಮ ಕೇಳಲೇಬೇಕಿದ್ದ ಐದು ಪ್ರಶ್ನೆಗಳು ಇವು:

(1) ಭಗವಾನ್’ರಿಗೆ ಪ್ರಶಸ್ತಿ ಕೊಟ್ಟಿರುವುದು ಎಷ್ಟು ಸರಿ? ಈ ಪ್ರಶ್ನೆಯನ್ನು ಎತ್ತಿದವರನ್ನು ಅಕಾಡೆಮಿ ಅಧ್ಯಕ್ಷರಾದ ಮಾಲತಿ ಪಟ್ಟಣಶೆಟ್ಟಿ “ಅರೆಬೆಂದ ಮನಸ್ಥಿತಿಯವರು” ಎಂದರು. ಮತ್ತೂ ಮುಂದುವರಿದು, “ಈ ಪ್ರಶಸ್ತಿಯನ್ನು ನಾವು ಕೊಟ್ಟೇಕೊಡುತ್ತೇವೆ. ಜನರ ವಿರೋಧ ಲೆಕ್ಕಿಸುವುದಿಲ್ಲ” ಎಂಬ ದಾಷ್ಟ್ರ್ಯದ ಹೇಳಿಕೆಯನ್ನೂ ಕೊಟ್ಟರು. ಇದು ಪ್ರಜಾಪ್ರಭುತ್ವ ವಿರೋಧಿ ಅಲ್ಲವೆ? ಪ್ರಜೆಗಳ ವಿರೋಧವನ್ನು ಲೆಕ್ಕಿಸದೆ ತನಗೆ ಬೇಕಾದವರಿಗೆಲ್ಲ ಪ್ರಶಸ್ತಿ ಕೊಡುವುದಾದರೆ, ಸಾಹಿತ್ಯ ಅಕಾಡೆಮಿ ಸರಕಾರದ ಅನುದಾನ ಬಳಸಿಕೊಂಡು ಪುಸ್ತಕ ಪ್ರಕಟಿಸುವುದು, ಅದರ ಕನ್ನಡ ಭವನ ಕಟ್ಟಡದ ನಿರ್ವಹಣೆ, ಅಧ್ಯಕ್ಷರು ಮತ್ತು ಸದಸ್ಯರಿಗೆ ಸಂಬಳ, ಕಾರ್ಮಿಕರ ವೇತನ – ಇವಕ್ಕೆಲ್ಲ ರಾಜ್ಯದ ಜನರ ತೆರಿಗೆ ದುಡ್ಡು ಪೋಲಾಗಬೇಕು ಯಾಕೆ? ಅಕಾಡೆಮಿ ಒಂದು ಸ್ವಾಯತ್ತ ಸಂಸ್ಥೆ; ಯಾರ ಹಣಕಾಸಿನ ನೆರವೂ ಬೇಡ ಎನ್ನುವುದಾದರೆ ಅವರು ಯಾರಿಗೆ ಬೇಕಾದರೂ ಪ್ರಶಸ್ತಿ ಕೊಟ್ಟುಕೊಳ್ಳಲಿ. ಆದರೆ ಸರಕಾರದ (ಮತ್ತು ಕನ್ನಡ – ಸಂಸ್ಕೃತಿ ಸಚಿವಾಲಯದ) ಅಧೀನ ಸಂಸ್ಥೆಯಾಗಿದ್ದೂ ಜನಾಭಿಪ್ರಾಯವನ್ನು ತಿರಸ್ಕರಿಸುವ ಉಡಾಫೆ ಸರಿಯೆ?

(2) ಪ್ರಶಸ್ತಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟ. ಕರ್ನಾಟಕ ಸರಕಾರದ ಒಬ್ಬ ಪ್ರಮುಖ ವ್ಯಕ್ತಿಯನ್ನು ಭಗವಾನ್ ಪ್ರಶಸ್ತಿ ಘೋಷಣೆಗೆ ಕೆಲವು ದಿನಗಳಿರುವಾಗ ಭೇಟಿಯಾಗಿದ್ದರು ಮತ್ತು ಈ ಭೇಟಿಯಲ್ಲೇ ಅತ್ಯಂತ ಮಹತ್ವದ ನಿರ್ಣಯಗಳು ತೆಗೆದುಕೊಳ್ಳಲ್ಪಟ್ಟವು ಎನ್ನುವುದು ಪ್ರಬಲ ಊಹೆಯಾಗಿದೆ. ಪ್ರಶಸ್ತಿಗೆ ಇಟ್ಟಿದ್ದ ಮಾನದಂಡಗಳು ಏನು ಎಂದು ಜನ ಕೇಳತೊಡಗಿದ ಮೇಲೆ, ಅಕಾಡೆಮಿ ಅಧ್ಯಕ್ಷರು ತರಾತುರಿಯಲ್ಲಿ ಅಕ್ಟೋಬರ್ 1ರಂದು ಸಭೆ ಕರೆದು ಮಾನದಂಡಗಳನ್ನೇ ತಿದ್ದಿದರು ಎಂಬ ಆರೋಪ ಕೂಡ ಕೇಳಿ ಬಂದಿದೆ. ಇವಕ್ಕೆಲ್ಲ ಕನ್ನಡಿ ಹಿಡಿಯುವುದು ಮಾಧ್ಯಮದ ಜವಾಬ್ದಾರಿ ಅಲ್ಲವೆ? ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಶಸ್ತಿಗಳಿಗಾಗಿ ಲಾಬಿ, ಅವ್ಯವಹಾರಗಳು ನಡೆಯುತ್ತಿದ್ದರೂ ಯಾವೊಂದು ಪತ್ರಿಕೆ/ಚಾನೆಲ್ ಕೂಡ ತುಟಿಬಿಚ್ಚದಿರುವುದರ ರಹಸ್ಯ ಏನು?

(3) ಭಗವಾನ್ ಈಗಾಗಲೇ ಹಲವು ಕೇಸುಗಳಲ್ಲಿ ಬೇಕಾದ ಆರೋಪಿ. ಆದರೂ ಸರಕಾರವಾಗಲೀ ಪೋಲೀಸ್ ಇಲಾಖೆಯಾಗಲೀ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಒಂದು ಪ್ರಮುಖ ಕೇಸು ಫೆಬ್ರವರಿಯಲ್ಲೇ ದಾಖಲಾಗಿದ್ದರೂ ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಬದಲಿಗೆ ದೂರುದಾರರಿಗೇ ನೋಟೀಸ್ ಜಾರಿಮಾಡಲಾಗಿದೆ! ನ್ಯಾಯಾಂಗ ನಿಂದನೆಯಂಥ ಗುರುತರ ತಪ್ಪು ಮಾಡಿದ ಮೇಲೂ ಆರೋಪಿಯನ್ನು ಸರಕಾರ ಸಾಕುತ್ತಿದೆ. ಹಾಗಾದರೆ ಇದನ್ನು ಪ್ರಜಾಪ್ರಭುತ್ವ, ಸಾಂವಿಧಾನಿಕ ಪ್ರಭುತ್ವ ಎಂದು ಕರೆಯುವುದು ಹೇಗೆ?

(4) ಭಗವಾನ್’ರಿಗೆ ಪ್ರಶಸ್ತಿ ಕೊಡುವುದು ಸೂಕ್ತವಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಕರೆ ಮಾಡಿ ಹೇಳಿದ ವ್ಯಕ್ತಿಯನ್ನು ” ಭಗವಾನ್’ರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ” ಎಂಬ ಕಾರಣ ಕೊಟ್ಟು ಪೋಲೀಸರು ಬಂಧಿಸಿದರು. ಮಾತ್ರವಲ್ಲ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರೆಸಿ ಪೋಲೀಸ್ ಸತ್ಕಾರ ಮಾಡಿ, ಕೈಯಲ್ಲಿ ಒಂದು ರುಪಾಯಿಯೂ ಇಲ್ಲದ ದೈನೇಸಿ  ಸ್ಥಿತಿಯಲ್ಲಿ ಹುಬ್ಬಳ್ಳಿಗೆ ವಾಪಸ್ ಕಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಬೇಕಿದ್ದ ಈ ವಿಷಯವನ್ನು ನಮ್ಮ ಮಾಧ್ಯಮಗಳಾಗಲೀ ಮಾನವ ಹಕ್ಕು ಆಯೋಗವಾಗಲೀ ಏನೇನೂ ಪರಿಗಣಿಸದೆ ಇರುವುದಕ್ಕೆ ಏನು ಕಾರಣ?

(5) ಭಗವಾನ್ ಅಥವಾ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಟೋಬರ್ 5ರಂದು ಹಾಗೆ ಫೇಸ್’ಬುಕ್’ನ ಗೋಡೆಯಲ್ಲಿ ಪ್ರಶಸ್ತಿ ವಿರುದ್ಧ ಬರೆದುಕೊಂಡಿದ್ದ ಯುವಕನೊಬ್ಬನಿಗೆ ಸೈಬರ್ ಕ್ರೈಂ ವಿಭಾಗದ ಪೋಲೀಸರು ಕರೆ ಮಾಡಿ ತಮ್ಮ ಡಿಪಾರ್ಟ್’ಮೆಂಟ್ ಭಾಷೆಯಲ್ಲಿ ಮಾತಾಡಿ ವಿಚಾರಿಸಿಕೊಂಡಿದ್ದಾರೆ. ಅಂದರೆ, ಜಾಲತಾಣದಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳ ಹಿಂದೆ ಒಂದು ಗುಂಪು ಹದ್ದಿನ ಕಣ್ಣಿಟ್ಟಿದೆ; ಅವರನ್ನು ಹೇಗಾದರೂ ಯಾವ ಪ್ರಕರಣದಲ್ಲಾದರೂ ಸಿಕ್ಕಿಸಿ ಹಾಕಿ ಜೈಲಿನ ಹಾದಿ ತೋರಿಸಬೇಕು ಎಂದು ಕಾಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಒಂದೆಡೆ 35 ಕೇಸುಗಳಿದ್ದರೂ ಆರಾಮಾಗಿ ಸರಕಾರೀ ರಕ್ಷಣೆಯಲ್ಲಿ ತಿರುಗಾಡುತ್ತಿರುವ ಅಸ್ವಸ್ಥ ಮತ್ತು ಇನ್ನೊಂದೆಡೆ ಆತನ ವಿರುದ್ಧ ಬರೆದ/ಆಡಿದ ಒಂದೇ ವಾಕ್ಯಕ್ಕೆ ಜೈಲುಹಕ್ಕಿಗಳಾಗುತ್ತಿರುವ ಶ್ರೀಸಾಮಾನ್ಯರು! ಮತ್ತು ಇವುಗಳ ಮಧ್ಯೆ ಕೋಮಾ ಸ್ಥಿತಿಯಲ್ಲಿ ಮಲಗಿರುವ ಮಾಧ್ಯಮರಂಗ!

ಇವೆಲ್ಲ ಪ್ರಶ್ನೆಗಳು ಕಾಡುತ್ತಿರುವುದರಿಂದಲೇ ಕರ್ನಾಟಕದಂತಹ ಪ್ರಜ್ಞಾವಂತರು ಈಗ ಪ್ರಶ್ನೆ ಕೇಳಬೇಕಾಗಿದೆ. ಮಾಧ್ಯಮಮಿತ್ರರೇ, ನೀವು ನಿಜವಾಗಿಯೂ ಬದುಕಿದ್ದೀರಾ? ಯಾಕೆ ಈ ದಿವ್ಯಮೌನ? ಭಗವಾನ್’ರಂತಹ ವ್ಯಕ್ತಿಗೆ ಗೌರವ ಪ್ರಶಸ್ತಿ ಹೋಗುವುದಕ್ಕೆ ನಿಮ್ಮ ವಿರೋಧ ಇರಬೇಕೆಂದು ನಾವು ಬಯಸುತ್ತಿಲ್ಲ. ಆದರೆ ಕನಿಷ್ಠ ಪಕ್ಷ ಈಗ ರಾಜ್ಯದಲ್ಲಿ ನಡೆಯುತ್ತಿರುವ ಆಂದೋಲನವನ್ನು ಜನರಿಗೆ ತುಪಿಸುವ ಕೆಲಸವನ್ನಾದರೂ ಮಾಡಿ. ಒಂದು ಕೆಟ್ಟ ವ್ಯವಸ್ಥೆಯ ಭಾಗವಾಗಿ ಭ್ರಷ್ಟರೊಂದಿಗೆ ಕೈ ಕೊಳಕು ಮಾಡಿಕೊಳ್ಳಬೇಡಿ. ಇಂಥ ಸಂಕ್ರಮಣ ಕಾಲದಲ್ಲಿ ನೀವು ಮೌನವ್ರತಕ್ಕಿಳಿದರೆ ಕರ್ನಾಟಕದ ಜನತೆ ನಿಮ್ಮನ್ನು ಎಂದೆಂದೂ ಕ್ಷಮಿಸುವುದಿಲ್ಲ. ಆ ಎಚ್ಚರ ನಿಮಗಿರಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!