ಅಂಕಣ

ಭಾವೈಕ್ಯತೆಗೆ ಇಲ್ಲಿ ಮಾರಕವಾಗಿರುವುದಾದರೂ ಏನು!?

ಒಂದೆರಡು ವರುಷಗಳ ಹಿಂದೆ ಭೋಪಾಲಿನಲ್ಲಿ ನಡೆದ ಮೂರು ದಿನಗಳ ಆರ್ ಎಸ್ ಎಸ್ ಸಮಾವೇಶ ನೆನಪಿರಬಹುದು. ಅಲ್ಲಿ ಕೊನೆಯ ದಿನ ಸಂಘದ ಕಾರ್ಯಕರ್ತರು ಶಿಸ್ತಿನ ಪಥ ಸಂಚಲನನಡೆಸುತ್ತಾ ಮುಂದುವರೆಯುತ್ತಿದ್ದಾಗ ದಾರಿಯುದ್ದಕ್ಕೂ ಪುಷ್ಪವೃಷ್ಟಿಗೈದು ಸ್ವಾಗತ ಕೋರಿದ್ದು ಅಲ್ಲಿನ ಮುಸಲ್ಮಾನ ಸಮುದಾಯದವರು! ಅಂದೊಮ್ಮೆ ಮಂಗಳೂರಿನಲ್ಲಿ ನಡೆದ ಹಿಂದೂಸಮಾಜೋತ್ಸವದಲ್ಲೂ ಕುಡಿಯಲು ಪಾನೀಯವನ್ನು ನೀಡಿ ಜಾತ್ಯಾತೀತೆಗೊಂದು ನಿಜವಾದ ಗೌರವ ಅರ್ಪಿಸಿದ್ದು ಅಲ್ಲಿನ ಒಂದು ವರ್ಗದ ಮುಸಲ್ಮಾನರೇ! ಅದೇ ರೀತಿ ಮೊನ್ನೆ-ಮೊನ್ನೆ ನಡೆದಗಣೇಶೋತ್ಸವದ ಕಾರ್ಯಕ್ರಮಗಳಲ್ಲೂ ಅದೆಷ್ಟೋ ಮುಸಲ್ಮಾನರು ಹಿಂದೂಗಳ ಜತೆಗೂಡಿ ಸಂತಸದಿಂದ ಪಾಲ್ಗೊಂಡು ಸಂಭ್ರಮಿಸಿದ್ದೂ ವರದಿಯಾಗಿದೆ. ಹಾಗೆನೇ… ಹಲವೆಡೆಗಳಲ್ಲಿಮುಸಲ್ಮಾನರನ್ನು ಸಮ್ಮಾನಿಸುತ್ತಾ, ಇಫ್ತಾರ್ ಕೂಟಗಳನ್ನು ನಡೆಸುತ್ತಾ ಅವರ ಹಬ್ಬ ಹರಿದಿನಗಳಿಗೆ ಶುಭಾಶಯಗಳನ್ನು ಕೋರುತ್ತಾ ಅವರ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕರಿಸುವ ಹಿಂದೂಗಳನಿದರ್ಶನಗಳು ಕೂಡ ನಮ್ಮಲ್ಲಿ ಸಾಕಷ್ಟು ಸಿಗುತ್ತವೆ. ಕೋಮುವಾದಿಗಳ ಕಣ್ಣಿಗೆ ಇವುಗಳು ಅದ್ಹೇಗೆ ಕಾಣುತ್ತವೆಯೋ ಗೊತ್ತಿಲ್ಲ ಆದರೆ ನಮ್ಮಂತಹ ಜನಸಾಮಾನ್ಯರಿಗೆ ಮಾತ್ರ ‘ಅಯ್ಯೋ ಎಲ್ಲಾ ಕಡೆಯೂಹೀಗೆಯೇ ಇರಬಾರದೇ’ ಎನ್ನಿಸುವಷ್ಟು ಈ ಸುದ್ದಿ ಮುದವನ್ನು ನೀಡುತ್ತದೆ ಎಂಬುದು ಮಾತ್ರ ಸುಳ್ಳಲ್ಲ.

ಹೌದು, ಈ ರಾಷ್ಟ್ರದ ಮಣ್ಣಲ್ಲಿ ಹುಟ್ಟಿ ಬೆಳೆದಿರುವ ‘ಭಾರತೀಯ’ನಿಗೆ ನಿಜವಾಗಿಯೂ ಅಭಿರುಚಿ ಇರುವುದು ‘ಸರ್ವೇ ಜನೋ ಸುಖಿನೋ ಭವಂತು’ ಎಂಬ ತತ್ವದ ಮೇಲೆಯಷ್ಟೇ. ಇದೇ ನೈಜಭಾರತೀಯನ ಅಂತಃಸತ್ವ. ಅದು ಯಾವುದೇ ಧರ್ಮವಿರಲಿ, ಆರಾಧನ ಪದ್ಧತಿ ಇರಲಿ ಪರಸ್ಪರ ಪ್ರೀತಿಯಿಂದ, ಗೌರವದಿಂದ ಬಾಳಬೇಕನ್ನುವುದು ಇಲ್ಲಿರುವ ಬಹುತೇಕರ ಅಭಿಪ್ರಾಯವೆಂಬುದರಲ್ಲಿಎರಡು ಮಾತಿಲ್ಲ. ಇದೇ ಕಾರಣಕ್ಕಾಗಿ ಅದೆಷ್ಟೋ ಹಳ್ಳಿಗಳಲ್ಲಿ ಇವತ್ತಿಗೂ ಕೂಡ ಧರ್ಮದ ಪರಿವೇ ಇಲ್ಲದೆ ಪರಸ್ಪರ ಸಹಾಯ ಮಾಡುತ್ತಾ, ಮದುವೆ ಮುಂಜಿಗಳಲ್ಲಿ  ಒಂದಾಗುತ್ತಾ ಸಂಭ್ರಮಿಸುವಸಾವಿರಾರು ಕುಟುಂಬಗಳಿವೆ. ಅವರೆಲ್ಲರಿಗೆ ಹೊರಗಿನ ಕಪಟ ಜಾತ್ಯಾತೀತತೆಯಾಗಲಿ, ಕೋಮು ಸಂಘರ್ಷವಾಗಲಿ ತಟ್ಟಿಯೇ ಇಲ್ಲವೆನ್ನಬೇಕು! ಹಾಗೆನೇ ‘ಕೂಡು ಕಳೆಯುವಿಕೆಯ’ ಆರ್ಥಿಕವ್ಯವಹಾರದಲ್ಲಂತೂ ಹಿಂದೂ ಮುಸಲ್ಮಾನರ ಬಾಂಧವ್ಯ ತೀರಾ ಹಳೆಯದು. ಅದೆಷ್ಟೋ ಕೋಮುಸಂಘರ್ಷಗಳು ನಡೆದರೂ, ಮನಸ್ಸು ಘಾಸಿಗೊಂಡರೂ ಒಂದೆಡೆಯಲ್ಲಿ ಈ ರೀತಿಯ ಸಹಬಾಳ್ವೆಯಜೀವನ ಗಟ್ಟಿಯಾಗಿ ಉಸಿರಾಡುತ್ತಲೇ ಇರುವುದು ಈ ಮಣ್ಣಿನ ಗುಣವೆನ್ನಬೇಕಷ್ಟೆ. ಯೋಚಿಸಿ, ಒಂದುವೇಳೆ ಭಾರತದಾದ್ಯಂತ ಇಂತಹ ಸನ್ನಿವೇಶಗಳು ನಡೆಯುತ್ತಾ ಹೋದರೆ, ಪರಸ್ಪರಸಹೋದರತೆಯಿಂದ ಬದುಕಿದರೆ, ಏಕತೆ ಮೆರೆದರೆ ಪ್ರಪಂಚದ ಅದ್ಯಾವ ಶಕ್ತಿ ಭಾರತವನ್ನು ಅದುರಿಸಿತು!? ಖಂಡಿತ ಆವಾಗ ನಮ್ಮೀ ರಾಷ್ಟ್ರ ಏಕಮೇವ ಅದ್ವಿತೀಯರಾಷ್ಟ್ರ ಎಂದೆನ್ನಿಸಿಕೊಳ್ಳುವುದು ದಿಟ.ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ರೀತಿಯ ಧನಾತ್ಮಕತೆಯನ್ನು ಸರ್ವವ್ಯಾಪಿಯಾಗಿ ನಿರೀಕ್ಷಿಸಬಹುದು ಎಂದು ನಿಮಗನ್ನಿಸುತ್ತಿದೆಯೇ? ಎಲ್ಲೋ ಒಂದೆರಡು ಕಡೆ ನಡೆಯಬಹುದಾದ ಇಂತಹ ನಿಜವಾದಜಾತ್ಯಾತೀತತೆಯ ಆಚರಣೆಗಳನ್ನು ದೇಶಾದ್ಯಂತ ನಡೆಯಲಿ ಎಂದು ನಾವು ಆಶಿಸಬಹುದೇ ಹೊರತು ನಿರೀಕ್ಷಿಸಿದರೆ ಅದು ದೊಡ್ಡ ಮೂರ್ಖತನವಾಗಬಹುದೇನೋ!?

ನೆನಪಿರಲಿ, ಐಕ್ಯವಾಗಿದ್ದ ಭಾರತೀಯರನ್ನು ಒಡೆದ ಕೀರ್ತಿ ನಮ್ಮನ್ನಾಳಿದ ಬ್ರಿಟೀಷರಿಗೆ ಸಲ್ಲುತ್ತದೆ! ಹಿಂದೂಗಳ ವಿರುಧ್ದ ಮುಸಲ್ಮಾನರನ್ನು, ಮುಸಲ್ಮಾನರ ವಿರುದ್ಧ ಹಿಂದೂಗಳನ್ನು ಸೈದ್ಧಾಂತಿಕವಾಗಿಎತ್ತಿಕಟ್ಟುತ್ತಾ ತಮ್ಮ ಅಧಿಕಾರವನ್ನು ಸುಭದ್ರಗೊಳಿಸಿದವರು ಅವರು. ಅಲ್ಲಿಯತನಕ ಚೆನ್ನಾಗಿಯೇ ಬಾಳುತ್ತಿದ್ದ ಭಾರತೀಯರು ಯಾವಾಗ ತಮ್ಮ ಧರ್ಮದ ವಿಚಾರವನ್ನು ಸಾಮಾಜಿಕವಾಗಿ ಮೈಮೇಲೆಎಳೆದುಕೊಂಡರೊ ಅಲ್ಲಿಂದಲೇ ಸಾಮಾಜಿಕ ಬದುಕನ್ನು ಕೂಡ ಛಿದ್ರಗೊಳಿಸುತ್ತಾ ಸಾಗಿದರು.ಇಂದು  ಪ್ರಮುಖ ವಿಷಯವಾಗಿ ಬೆಳೆದಿರುವ ‘ಕೋಮು ಸಂಘರ್ಷಕ್ಕೆ’ಕಾರಣವಾಗಿರುವ ಗೋಹತ್ಯೆಯವಿಚಾರ ಕೂಡ ಒಂದು ಪ್ರಮುಖ ಧಾರ್ಮಿಕ ವಿಚಾರವಾಗಿ ಮಾರ್ಪಟ್ಟಿದ್ದು ಕೂಡ ಆ ಬಳಿಕವೇ! ಬ್ರಿಟೀಷರೇನೋ ತಮ್ಮ ಕಾರ್ಯಸಾಧುಗೊಳ್ಳಲು ಇಷ್ಟೆಲ್ಲಾ ಮಾಡಿದರು. ಆದರೆ ಸ್ವತಂತ್ರ ಪಡೆದಭಾರತದಲ್ಲೂ ಯಾಕೆ ಇನ್ನೂ ‘ವಿಭಜನೆಯ’ ರಾಜಕಾರಣ ನಡೆಯುತ್ತಿದೆ? ಅದೇಕೆ ಇಂದು ಕೂಡ ನಮ್ಮಲ್ಲಿ ರಾಷ್ಟ್ರ ಕಟ್ಟುವ, ಏಕತೆಯನ್ನು ಎತ್ತಿಹಿಡಿಯುವ ಕಾರ್ಯ ನಡೆಯುತ್ತಿಲ್ಲ?

ಕಾರಣ ಸ್ವಾರ್ಥ ರಾಜಕಾರಣ!

ಭಾರತೀಯರಲ್ಲಿ ಪರಧರ್ಮ ಸಹಿಷ್ಣುತೆ ಎಂಬುದು ರಕ್ತಗತವಾಗಿರುವ ವಿಚಾರ. ಆದ್ದರಿಂದಲೇ ಇಲ್ಲಿನ ಮೂಲನಿವಾಸಿಗಳಾದ  ಹಿಂದೂಗಳು ಬಹುಸಂಖ್ಯೆಯಲ್ಲಿದ್ದರೂ ‘ಜಾತ್ಯಾತೀತತೆ’ ಎಂಬ ತತ್ವವನ್ನುಬಲು ಸುಲಭವಾಗಿ ಒಪ್ಪಿಕೊಂಡು ಆ ಮೂಲಕ  ಅನ್ಯಧರ್ಮೀಯನಿಗೆ ಗೌರವಯುತವಾಗಿ ಬದುಕುವ ಒಂದು ಸಾಂವಿಧಾನಿಕ ಅವಕಾಶವನ್ನು ಕಲ್ಪಿಸಿಕೊಟ್ಟರು. ಆದ್ದರಿಂದಲೇ ಅಂದು ಅಖಂಡ  ಹಿಂದೂಸ್ಥಾನವು  ಭಾರತ- ಪಾಕಿಸ್ಥಾನಗಳೆಂದು ಇಬ್ಭಾಗವಾದಾಗ, ಪಾಕಿಸ್ಥಾನದಿಂದ ರಾಶಿ ರಾಶಿ ಹಿಂದೂಗಳು ಮನೆ ಮಠ ಎಲ್ಲಾ ಕಳೆದುಕೊಂಡು, ದೌರ್ಜನ್ಯಕ್ಕೊಳಪಟ್ಟು ಭಾರತಕ್ಕೆ ವಲಸೆ ಬರುತ್ತಿದ್ದರೂನಮ್ಮವರು ಇಲ್ಲಿನ ಮುಸಲ್ಮಾನರನ್ನು ದ್ವೇಷಿಸದೇ ಹೋದರು. ಅವರಿಗೂ ಇಲ್ಲಿ ಭದ್ರ ನೆಲೆ ನೀಡಿ ಪ್ರೀತಿಯಿಂದಲೇ ಉಳಿಸಿಕೊಂಡರು. ಇದೇ ಗುಣ ಇಲ್ಲಿರುವ ಅನ್ಯಧರ್ಮೀಯನಲ್ಲೂ ಒಂದಷ್ಟುಉಳಿದಿದೆಯೆಂದಾದರೆ ಅದು ಈ ಮಣ್ಣಿನಗುಣ. ಕೋಮುವಾದ, ಮೂಲಭೂತವಾದಗಳ ಪ್ರತಿಫಲವಾಗಿರುವ ಭಯೋತ್ಪಾದನೆಯಿಂದ ಸಾವಿರ ಪೆಟ್ಟು ತಿಂದರೂ ಎಲ್ಲೋ ಒಂದು ಕಡೆ ಭ್ರಾತೃತ್ವತೆಯಜೀವ ಉಳಿದುಕೊಂಡಿರುವುದು ಇದೇ ಕಾರಣಕ್ಕೆ.

ಆದರೆ…

ಸ್ವಾರ್ಥ ರಾಜಕಾರಣ ಅಧಿಕಾರದ ಲಾಬಿ ನಡೆಸಲು ಎಂದು ಪ್ರಾರಂಭಿಸಿತೋ ಅಂದಿನಿಂದ ಇಲ್ಲಿ ಇವೆಲ್ಲವುಗಳೂ ಪರದೆಯ ಹಿಂದೆ ಸರಿಯುತ್ತಿದೆ. ವರ್ಗ ವರ್ಗಗಳ ಮಧ್ಯೆ ಕಂದರವನ್ನು ಹೆಚ್ಚಿಸುತ್ತಾ ನಾಬೇರೆ ನೀ ಬೇರೆ ಎಂಬ ತಾರತಮ್ಯದ ಪಾಠವನ್ನು ಪರೋಕ್ಷವಾಗಿ ಹೇಳಿಕೊಡುತ್ತಿರುವುದು ಇಂದಿನ ನಮ್ಮರಾಜಕಾರಣವೇ! ಒಂದು ಕಾಲದಲ್ಲಿ ವಿಶ್ವಕ್ಕೇ ಭಾತೃತ್ವದ ಪಾಠ ಹೇಳಿಕೊಟ್ಟ ನಮ್ಮೊಳಗೆದಾಯಾದಿಗಳ ಮನೋಸ್ಥಿತಿ ನಿರ್ಮಿಸಿ ಆ ಮೂಲಕ ಅಧಿಕಾರ ಚಲಾಯಿಸುವ ಹೊಲಸು ರಾಜಕಾರಣಕ್ಕೆಇಂದು ವಿಶ್ವವೇ ನಮ್ಮನ್ನು ನೋಡಿ ನಗುತ್ತಿವೆ.ರಾಷ್ಟ್ರಪ್ರೇಮಕ್ಕಿಂತಲೂ ಧರ್ಮದ ಮೇಲಿನಪ್ರೇಮವೇ ಹತ್ತಿರವಾಗುತ್ತಿರುವುದು ಇವೆಲ್ಲ ಸಮಸ್ಯೆಗಳಿಗೆ ಒಂದು ಕಾರಣವಾದರೆ ಜೊತೆಗೆ ಹುಸಿ ಜಾತ್ಯಾತೀತತೆಯನ್ನೇ ಒಂದು ಬಂಡವಾಳವಾಗಿಸಿ ಅದರಿಂದ ಬೆಳೆ ತೆಗೆಯುವ ನಿರಂತರ ಪ್ರಯತ್ನನಮ್ಮ ರಾಜಕಾರಣದಲ್ಲೂ ನಡೆಯುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸಿದೆ. ಅದೇ ರೀತಿ ರಾಷ್ಟ್ರವನ್ನು ತನ್ನ ತೆಕ್ಕೆಗೆ ಒಳಪಡಿಸಬೇಕೆಂದೇ ಕಾರ್ಯಗತವಾಗಿರುವ ಅಂತರಾಷ್ಟ್ರೀಯಸಂಘಟನೆಗಳಿಗೂ ಕೊರತೆಯಿಲ್ಲ ಬಿಡಿ.ಇವೆಲ್ಲದರ ಫಲವೆ ಇಂದು ದಿನ ಬೆಳಗಾದರೆ ಸಮಸ್ಯೆಯ ರೂಪವಾಗಿ ಕಾಡುತ್ತಿರುವುದು. ತಮಾಷೆಯೆಂದರೆ ಇಲ್ಲಿ ಜನಸಾಮಾನ್ಯರೂ ಬಯಸುವುದು ಪರಧರ್ಮಸಹಿಷ್ಣತೆಗೆ ಅವಕಾಶವಿರುವ ಜಾತ್ಯಾತೀತತೆಯನ್ನು. ನಮ್ಮ ಆಡಳಿತವೂ ಪದೇ ಪದೇ ಉಪಯೋಗಿಸುವ ಶಬ್ದ ಕೂಡ ಜಾತ್ಯಾತೀತತೆ. ಆದರೆ ಈ ದೇಶದಲ್ಲಿ ದೊಡ್ಡ ಕೊರತೆಯಾಗಿರುವುದು ಕೂಡಅದೇ.!!

ಆ ಪಕ್ಷ ಈ ಪಕ್ಷವೆಂದಲ್ಲ. ಅಧಿಕಾರಕ್ಕಾಗಿ ಇವೆಲ್ಲವುಗಳು ಯೋಚಿಸುವುದು ಅದ್ಹೇಗೆ ವರ್ಗ ವರ್ಗಗಳನ್ನು ತನ್ನತೆಕ್ಕೆಗೆ ಬೀಳಿಸಬಹುದು ಎಂಬ ಲೆಕ್ಕಾಚಾರದಲ್ಲಿ. ಜಾತ್ಯಾತೀತತೆಯ ಹೆಸರೇಳಿಕೊಂಡುಮಸೀದಿ ಮದರಸಗಳಿಗೆ ಬರೋಬ್ಬರಿ ಹಣ ನೀಡುವುದು, ಮೊಹರಂ ತಿಂಗಳ ಇಫ್ತಾರ್ ಕೂಟದಲ್ಲಿ ಮುಸಲ್ಮಾನರೊಡನೆ ಸೇರಿ ಊಟ ಮಾಡುವುದು, ಟೋಪಿ ಧರಿಸಿ ನಮಾಜಿನಲ್ಲಿ ಪಾಲ್ಗೊಳ್ಳುವುದು,ಅಲ್ಪಸಂಖ್ಯಾತರನ್ನು ಬಂಧಿಸಬೇಡಿ ಎಂಬ ಕಟ್ಟಪ್ಪಣೆ ಹೊರಡಿಸುವುದು,  ಮುಂದಿನ ಜನ್ಮವೊಂದಿದ್ದರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದೆಲ್ಲಾ  ಹೇಳುವುದು ಇವತ್ತಿನ ರಾಜಕಾರಣಿಗಳ ‘ಜಾತ್ಯಾತೀತ’ನಡೆ! ಇದರೊಳಗೆ ನಿಜವಾದ ಜಾತ್ಯಾತೀತೆಯ ಕಾಳಜಿಯಾಗಲಿ, ಐಕ್ಯತೆಯ ಪಾಠವಾಗಲಿ ಜನಸಾಮಾನ್ಯನಿಗೆ ಗೋಚರವಾದೀತೆ!? ಇವೆಲ್ಲವುಗಳು ಆ ವರ್ಗದ ಜನರ ಮತ ಕೀಳುವ ಸಲುವಾಗಿನಡೆಸುವ ತೋರಿಕೆಯ ಆಚರಣೆಗಳಷ್ಟೇ. ಈ ರೀತಿಯ ರಾಜಕೀಯ ಗಿಮಿಕ್ ನಿ೦ದ ಒಂದಷ್ಟು ವರ್ಷ ರಾಜ್ಯಾಭಾರ ಮಾಡಬಹುದಾದರೂ ರಾಷ್ಟ್ರದ ಭವಿಷ್ಯವೇ ಅಧಃಪತನಗೊಳ್ಳಬಹುದು! ಯಾಕೆಂದರೆಒಂದು ವರ್ಗವನ್ನು ಸಂತುಷ್ಟಗೊಳಿಸುವ ಸಲುವಾಗಿ ಅತಿಯಾದ ಕೊಡುಗೆಗಳನ್ನು ನೀಡುತ್ತಾ ಹೋದರೆ ಇನ್ನೊಂದು ವರ್ಗವು ಕಿಡಿಯಾಗುತ್ತದೆ, ಅಸಹನೆಯಿಂದ ಕುದಿಯುತ್ತವೆ ಎಂಬುದು ಸಾಮಾನ್ಯವಿಚಾರ. ಈ ನೋವು-ಹತಾಶೆಗಳೇ ಜನರನ್ನು ಮತ್ತಷ್ಟು ಮೂಲಭೂತವಾದಿಗಳನ್ನಾಗಿಸಿಬಿಡಬಲ್ಲುದು! ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಪ್ರೇರೇಪಣೆಯಾಗಬಲ್ಲುದು.ಅಂತಿಮವಾಗಿ ಆತ ಸರಕಾರದ ಮೇಲಣ ತನ್ನ ಕ್ರೋಧವನ್ನುಅನ್ಯಧರ್ಮೀಯನ ಮೇಲೆ ತಿರುಗಿಸಬಹುದು! ಸದ್ಯ ಭಾರತೀಯ ಸಮಾಜದಲ್ಲಿ ನಡೆಯುತ್ತಿರುವುದು ಕೂಡ ಇದೇ ತಾನೆ?. ಅಂದರೆ ಇಲ್ಲಿರುವಕೋಮು ಧಗೆಗೆ ಮೂಲ ಕಾರಣ ಇಲ್ಲಿನ ರಾಜಕೀಯವೇ!

ರಾಷ್ಟ್ರ ನಿರ್ಮಾಣಕ್ಕೆ ಬೇಕಾಗಿರುವುದು ನಿಜವಾದ ಸಹಬಾಳ್ವೆ. ಪೂರಕ ರಾಜಕೀಯ ವಾತಾವರಣ.ಧರ್ಮದ  ನೆಲೆಗಟ್ಟಿನಲ್ಲಿ  ಸಮಾಜವನ್ನು ನೋಡದೆ ಎಲ್ಲರ ಏಳ್ಗೆಯೇ ಸರಕಾರದ ಗುರಿಯಾದರೆಜನರೊಳಗೆ ಮನೆ ಮಾಡಿರುವ ಬಹುಪಾಲು ಅಸಮಧಾನ ದೂರವಾದೀತು.ಅನ್ಯಧರ್ಮೀಯರ ಪರಸ್ಪರ ಬೆರೆಯುವಿಕೆಯನ್ನು ಯಾವ ಸಂಪ್ರದಾಯವಾದಿ ಕೂಡ ಇಲ್ಲಿ ವಿರೋಧಿಸಲಾರ. ಆದ್ಧರಿಂದಇಂತಹ ಚಟುವಟಿಕೆಗಳು ನಡೆಯುವಂತೆ ಸಮಾಜವನ್ನು ಪ್ರೋತ್ಸಾಹಿಸುವ ಕೆಲಸ ಎಲ್ಲಾ ಕಡೆಯಿಂದಲೂ ನಡೆಯುವಂತಾಗಬೇಕು. ಅದಾಗಲೇ ಹುಟ್ಟಿಕೊಂಡಿರುವ ‘ಸೌಹಾರ್ದ ವೇದಿಕೆ’ಗಳು ಈ ನಿಟ್ಟಿನಲ್ಲಿಕಾರ್ಯಪ್ರವೃತ್ತವಾದರೆ ಅತೀ ಉತ್ತಮ. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರ ಮೊದಲು ಬಳಿಕ ಧರ್ಮವೆಂಬ ವಿಚಾರ ಬಲಿಷ್ಠವಾದಲ್ಲಿ ಭಾರತವೊ೦ದು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವುದರಲ್ಲಿ ಸಂಶಯವೇಇಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!