ಅಂಕಣ

ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು!

ಕೇಸ್ ೧: ದೆಹಲಿಯಲ್ಲಿ ರೇಪ್ ಎಂಬುದು ಎಷ್ಟು ಕಾಮನ್ ಆಗಿದೆಯೋ ಆ ರೇಪ್’ಗಳು ದೊಡ್ದ ಸುದ್ದಿ ಮಾಡುವುದೂ ಅಷ್ಟೇ ಕಾಮನ್. ಇತ್ತೀಚೆಗೆ UBER ಟ್ಯಾಕ್ಸಿ ಚಾಲಕನೊಬ್ಬ ತನ್ನನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿಯೊಬ್ಬಳು ದೂರು ನೀಡಿದ್ದಳು. ಪೋಲೀಸರು ಆ ಚಾಲಕನ ಅಹವಾಲನ್ನೂ ಕೇಳದೆ ಅವನನ್ನು ತಿಹಾರ್ ಜೈಲಿಗೆ ತಳ್ಳಿದ್ದರು. ಟಿವಿ ಚಾನಲ್’ಗಳು ಹಿಗ್ಗಾಮುಗ್ಗ ವರದಿ ಮಾಡಿದವು. ಕಡೆಗೆ ತನಿಖೆ ನಡೆದು, ‘೫೦೦ ರೂ ಬಾಡಿಗೆ ಕೇಳಿದ್ದಕ್ಕೆ ಆತನ ಮೇಲೆ ಯುವತಿ ಸುಳ್ಳು ಅತ್ಯಾಚಾರದ ದೂರನ್ನು ದಾಖಲಿಸಿದ್ದಳು’ ಎಂದು ಸಾಬೀತಾಯಿತು. ದುರಾದೃಷ್ಟವೆಂದರೆ ಅತ್ಯಾಚಾರದ ಆರೋಪವನ್ನು ಹಿಡಿದು ಗಂಟೆಗಟ್ಟಲೆ ಕೊರೆದಿದ್ದ ಚಾನಲ್’ಗಳು ಆತನ ತಪ್ಪೇನೂ ಇಲ್ಲ ಎಂಬುದನ್ನು ಅಷ್ಟಾಗಿ ತೋರಿಸಲೇ ಇಲ್ಲ.

ಕೇಸ್೨: ಹೋದ ವರ್ಷ ಹರಿಯಾಣಾದಲ್ಲಿ ನಡೆದ ಘಟನೆ ಕೇಳಿಯೇ ಇರುತ್ತೀರಿ. ಬಸ್ಸಿನಲ್ಲಿ ಚುಡಾಯಿಸಿದರೆಂಬ ಕಾರಣಕ್ಕೆ ಸಹೋದರಿಯರು ಯುವಕರಿಬ್ಬರಿಗೆ ಬಸ್ಸಿನಲ್ಲಿಯೇ ಥಳಿಸಿದರು ಎಂದು ದೇಶಾದ್ಯಂತ ಸುದ್ದಿಯಾಗಿತ್ತು. ಉಫ಼್.. ನಮ್ಮ ಚಾನಲ್’ಗಳ ಅಬ್ಬರ ಎಷ್ಟಿತ್ತೆಂದರೆ ಅಲ್ಲಿನ ಮುಖ್ಯಮಂತ್ರಿಗಳು ಬರೀ ಟಿವಿ ವರದಿಯನ್ನು ನೋಡಿ ಆ ಸಹೋದರಿಯರಿಬ್ಬರಿಗೆ ಶೌರ್ಯ ಪ್ರಶಸ್ತಿ ಘೋಷಿಸಿಬಿಟ್ಟರು. ಹುಡುಗಿಯರೆಂದರೆ ಹೀಗಿರಬೇಕೆಂಬ ಮಟ್ಟಿಗೆ ಅವರಿಬ್ಬರು ದೇಶಾದ್ಯಂತ ಮಹಿಳೆಯರಿಗೆ ಮಾದರಿಯಾಗಿಬಿಟ್ಟರು. ಆದರೆ ಎಲ್ಲವೂ ಒಂದು ದಿನ ಮಾತ್ರ. ಮರುದಿನವೇ ಸತ್ಯ ಹೊರಬಿತ್ತು. ಅಸಲಿಗೆ ಹಿರಿಯ ನಾಗರೀಕರಿಗೆ ಮೀಸಲಿಟ್ಟಿದ್ದ ಸೀಟಿನಲ್ಲಿ ಕುಳಿತಿದ್ದ ಈ ವೀರ ನಾರಿಯರನ್ನು ಯುವಕರು ಅವರಿಗೆ ಸೀಟು ಬಿಟ್ಟುಕೊಡುವಂತೆ ವಿನಂತಿಸಿಕೊಂಡಿದ್ದರು. ಇದರಿಂದ ಕೆರಳಿದ ಆ ವೀರ ನಾರಿಯರು ಜಗಳ ತೆಗೆದು ಆ ಯುವಕರಿಗೆ ಥಳಿಸಿದ್ದರು. ಆ ಪ್ರಕರಣದಲ್ಲೂ ಅಷ್ಟೇ ಯುವಕರ ತಪ್ಪಿಲ್ಲ ಎಂಬುದನ್ನು ಯಾವ ಚಾನಲ್’ಗಳೂ ತೋರಿಸಲಿಲ್ಲ,.

ಕೇಸ್೩: ಇದು ನಮಗೆ ಬಹಳ Familiar Case. ಆಗಷ್ಟೇ ವಿವಾಹ ನಿಷಿತಾರ್ಥ ಮಾಡಿಕೊಂಡಿದ್ದ, ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಮಗ ಕಾರ್ತಿಕ್ ತನ್ನನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ನಂತರ ಮದುವೆಯೂ ಆಗಿದ್ದ ಎಂದು ಯುವತಿಯೊಬ್ಬಳು ದೂರು ನೀಡಿದ್ದಳು. ಮೋದಿಗೆ ಮುಜುಗರ ಮಾಡಲು ಬಕಪಕ್ಷಿಗಳಂತೆ ಕಾಯುತ್ತಿದ್ದ ಮಾಧ್ಯಮಗಳು ಇದನ್ನು ತಮ್ಮ ಸ್ವಂತ ಮಸಾಲೆಯನ್ನೂ ಸೇರಿಸಿ, ನಡು ನಡುವೆ ಆಕೆಯ ಮೊಸಳೆ ಕಣ್ಣೀರನ್ನೂ ತೋರಿಸಿ ೨೪*೭ ಪ್ರಸಾರ ಮಾಡಿದ್ದವು. ಈಗೇನಾಯಿತು ಎಂದು ಈಗಷ್ಟೇ ನಮಗೆ ಗೊತ್ತಾಗಿದೆ.

ಈ ಮೂರೂ ಕೇಸುಗಳನ್ನು ಗಮನಿಸಿ. ಮೂರರಲ್ಲೂ ಹಣ ಅಥವಾ ಪ್ರಚಾರಕ್ಕಾಗಿ ಮಾಡಿದ ಷಡ್ಯಂತ್ರವೇ ಎದ್ದು ಕಾಣುತ್ತಿದೆ. ಮೊದಲನೇಯದರಲ್ಲಿ, ಹೆಂಡತಿ ಮಕ್ಕಳನ್ನು ಹೊಂದಿದ್ದ ಅವನ ಸಂಸಾರಕ್ಕೆ ಅಂತಹಾ ಒಂದು ಆರೋಪ ಬಂದಾಗ ಹೇಗನಿಸಿರಬೇಡ? ಟ್ಯಾಕ್ಸಿ ಚಾಲನೆಯನ್ನೇ ಜೀವನಾಧಾರ ಮಾಡಿಕೊಂಡಿದ್ದ ಅವ ಜೈಲಿಗೆ ತಳ್ಳಲ್ಪಟ್ಟಿದ್ದಾಗ ಅದೆಷ್ಟು ವ್ಯಥೆ ಪಟ್ಟಿರಬೇಕು? ಮಾಡಿಯೇ ಇಲ್ಲದೆ ತಪ್ಪಿಗೆ ಆತ ಅದೆಷ್ಟು ಒದೆ ತಿಂದಿರಬೇಕು? ಬರೀ ಐನೂರು ರೂಪಾಯಿಗೆ ಅತ್ಯಾಚಾರದ ಆರೋಪವಾ? ಬಹುಷಃ ಇಂತಹ ಆರೋಪ ಮಾಡುತ್ತೇನೆಂದು ಬೆದರಿಸಿದ್ದರೂ ಆತ ‘ನೀನೂ ಬೇಡ, ನಿನ್ನ ಹಣವೂ ಬೇಡ’ ಎಂದು ಕೈ ಮುಗಿಯುತ್ತಿದ್ದನೇನೋ?. ಪಾಪ, ಕಿರುಕುಳ ನೀಡಿದ್ದಾನೆಂಬ ಬೆಪ ಇಟ್ಟುಕೊಂಡು ಇಡೀ ದಿನ TRP ಗಿಟ್ಟಿಸಿಕೊಂಡ ಚಾನಲ್‘ಗಳು ಸುಮ್ಮಸುಮ್ಮನೆ ಮಾನಸಿಕ ಕಿರುಕುಳ ನೀಡಿದವು. ಮೂರನೆಯದರಲ್ಲಿ ಆ ವೀರ ನಾರಿಯರು ಯುವಕರಿಗೆ ಬೆಲ್ಟಿನಲ್ಲಿ ಬಾರಿಸುತ್ತಿರುವ ವಿಡಿಯೋ ದೇಶಾದ್ಯಂತ ಹರಿದಾಡಿತ್ತು. ಅದನ್ನು ನೋಡಿ ಎಲ್ಲರೂ ‘ಹಾಗೆಯೇ ಆಗಬೇಕು ಇಂತವರಿಗೆ’ ಅಂತ ಕೈ ಕೈ ಹಿಸುಕಿಕೊಂಡರೇ ಹೊರತೂ ಯಾರೂ ಕೂಡಾ ಆ ಘಟನೆಯ ಇನ್ನೊಂದು ಮುಖವನ್ನು ನೋಡಲೇ ಇಲ್ಲ. ಇವುಗಳನ್ನೆಲ್ಲಾ ನೋಡಿ ಯಾರಾದರೂ ನಿಜವಾಗಿಯೂ ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುವ ಮನಸ್ಸು ಮಾಡಿಯಾರೇ?

ಈಗ ಆ ಹೈ ಪ್ರೊಫೈಲ್ ಕೇಸಿನತ್ತ ಬರೋಣ. ಬಹುಷಃ ಅವರಿಬ್ಬರಿಗೆ ಒಳ್ಳೆಯ ಗೆಳೆತನವಿದ್ದಿದ್ದರಬಹುದು. ಆಕೆಗೆ ಗೌಡರ ಪ್ರತಿಷ್ಟೆಯ ಮೇಲೆ ಕಣ್ಣಿತ್ತೋ ಅಥವಾ ಹಣದ ಮೇಲೆ ಕಣ್ಣಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾರ್ತಿಕ್’ಗೆ ನಿಶ್ಚಿತಾರ್ಥವಾದ ದಿನವೇ ರಂಪ ಎಬ್ಬಿಸಿದ್ದಳು ಆಕೆ. ಇದು ಹಣಕ್ಕಾಗಿ ಹೊಂಚು ಹಾಕಿ ಮಾಡಿದ ಸಂಚು ಎಂದು ಆಕೆಯ ವರ್ತನೇ ನೋಡಿಯೇ ನಮಗನಿಸಿತ್ತು. ಆದರೆ ನಮ್ಮ ದೇಶದ ಪ್ರಥಮ ನ್ಯಾಯಾಧೀಶರುಗಳಾದ ತಮ್ಮ ತಮ್ಮ ವಿಭಾಗೀಯ ಪೀಠಗಳಲ್ಲಿ(ಬೇರೆ ಬೇರೆ ಚಾನಲ್’ಗಳ ಸ್ಟುಡಿಯೋಗಳಲ್ಲಿ) ನ್ಯಾಯ ನಿರ್ಣಯಿಸಲು ಶುರುಹಚ್ಚಿಕೊಂಡವು. ಕೆಲವರಂತೂ ಮಗ ಮಾಡಿದ ತಪ್ಪಿಗೆ ಡಿವಿಯವರನ್ನು ಹೊಣೆ ಮಾಡಿ ಅವರೊಬ್ಬ ಕಳಂಕಿತ ಸಚಿವ, ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದವು. ಆದರೆ ಈಗೇನಾಯಿತು? ಅಲ್ಲಿ ಯಾವ ಅತ್ಯಾಚಾರ, ಮದುವೆಯೂ ಆಗಿಲ್ಲ ಎಂದು ನಿರ್ಧರಿಸಿದ ಪೋಲೀಸರು ಬರೀ ವಂಚನೆ ಪ್ರಕರಣವನ್ನು ಮಾತ್ರ ದಾಖಲಿಸಿಕೊಂಡಿದ್ದಾರೆ ಪೊಲೀಸರು. ಇದರಲ್ಲಿ ಕಾರ್ತಿಕ್’ದು ತಪ್ಪೇ ಇಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಎಲ್ಲಿಯ ವಂಚನೆ ಪ್ರಕರಣ ಮತ್ತು ಎಲ್ಲಿ ಅತ್ಯಾಚಾರದ ಆರೋಪ?

ಆಕೆ ದೂರು ಕೊಟ್ಟು ಸುಮ್ಮನೆ ಕೂರಲಿಲ್ಲ. ಎಷ್ಟು ಸಾಧ್ಯವೋ ಅಷ್ಟೂ ಚಾನಲ್’ಗಳ ಮುಂದೆಯೂ ಗೋಗರೆದಳು. ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದಳು. ಮಹಿಳಾ ಆಯೋಗವೂ ಆಕೆಗೆ ಬೆಂಬಲ ನೀಡಿತು. ಆದರೆ ಫಲಶ್ರುತಿಯೇನು? ಅವಕಾಶಗಳಿಲ್ಲದೆ ಸೊರಗಿದ್ದ ಈ ನಟಿಮಣಿಯ ನಾಜೂಕಾದ ಅಭಿನಯ ಕಂಡು ಗಾಂಧೀನಗರದ ಕೆಲವರು ಈಕೆಯನ್ನು ಹೀರೋಯಿನ್ ಮಾಡಿದರು. ಕೆಲಸವಿಲ್ಲದವರಿಗೆ ಮೀಸಲಾಗಿರುವ ಒಂದಷ್ಟು ರಿಯಾಲಿಟಿ ಶೋಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಳು. ಈ ಮಧ್ಯೆ ಹಣವೂ ಮಾಡಿಕೊಂಡಿರಬಹುದು. ಒಟ್ಟಿನಲ್ಲಿ ಈಕೆಯ ಪ್ರಸಿದ್ಧಿ ಎಲ್ಲಿವರೆಗೆ ತಲುಪಿತೆಂದರೆ ಬಿಗ್’ಬಾಸ್ ಸೀಸನ್೩ನಲ್ಲೂ ಅವಕಾಶ ಪಡೆದುಕೊಂಡಿದ್ದಾಳೆಂಬ ಸುದ್ದಿಯಿದೆ. ಆದರೆ ಆಕಡೆ ಕೇಂದ್ರದ ಪ್ರತಿಷ್ಠಿತ ಮಂತ್ರಿಯಾಗಿರುವ ಸದಾನಂದ ಗೌಡರ ಮನೆ ವಿಷಯ ಬೀದಿಗೆ ಬಂತು. ಅನಗತ್ಯವಾಗಿ ಮೋದಿಗೆ ಮುಜುಗರವುಂಟುಮಾಡಲಾಯ್ತು. ಈಗ ಪ್ರಕರಣ ತಿರುವು ಪಡೆದುಕೊಂಡಿದ್ದು, ಕಾರ್ತಿಕ್’ದು ಅಂತಹಾ ತಪ್ಪೇನಿಲ್ಲ ಅಂತ ಪೋಲೀಸರೇ ಹೇಳಿದ್ದಾರೆ. ಆದರೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಅಂದ ಹಾಗೆ ಡಿವಿಯವರಿಗೆ, ಆರೋಪಕ್ಕೆ ಹೋದ ಮಾನ ತಪ್ಪಿಲ್ಲ ಎಂದಾಗ ಬರತ್ತಾ?

ಮಾಧ್ಯಮಗಳೂ ಸಹ ಇಂತಹಾ ಪ್ರಕರಣಗಳಲ್ಲಿ ಹೇಸಿಗೆ ಹುಟ್ಟಿಸುವ ಕೆಲಸ ಮಾಡುತ್ತವೆ. ಲೈಂಗಿಕ ಕಿರುಕುಳ ಎನ್ನುವ ಪದ ಬಂದರೂ ಸಾಕು ತಕ್ಷಣ ಹುಡುಗರದ್ದೇ ತಪ್ಪು ಎನ್ನುವ ತೀರ್ಪು ನೀಡಿ ಬಿಡುತ್ತವೆ. ಘಟನೆಯ ಇನ್ನೊಂದು ಮುಖ ಹೀಗೂ ಆಗಿರಬಹುದೆಂದು ಸೌಜನ್ಯಕ್ಕೂ ಅವಲೋಕಿಸದೆ TRP ಬೇಳೆ ಬೇಯಿಸಿಕೊಳ್ಳುತ್ತವೆ. ಉತ್ತಮ ಸಮಾಜಕ್ಕಾಗಿ ಎನ್ನುವಂತಹ ಟ್ಯಾಗ್ ಲೈನ್’ಗಳನ್ನಿಟ್ಟಿಕೊಂಡೇ ಸಮಾಜವನ್ನು ಹಾಳುಗೆಡಹುವ ಇವುಗಳು ಕೆಲವೊಮ್ಮೆ ಸಾಕಪ್ಪಾ ಸಾಕು ಎನ್ನುವಷ್ಟು ವಾಕರಿಕೆ ತರಿಸುತ್ತಿವೆ. ಜವಾಬ್ದಾರಿಯುತ ಮಾಧ್ಯಮಗಳ್ಯಾವತ್ತೂ ಮಾಧ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ. ಒಂದು ವೇಳೆ ಸುಳ್ಳು ಸುದ್ದಿ ಬಿತ್ತರಿಸಿದರೂ ಸತ್ಯವೇನೆಂದು ತಿಳಿದ ಮೇಲೆ ಅದನ್ನೂ ಅಷ್ಟೇ ಮುತುವರ್ಜಿ ವಹಿಸಿ ಬಿತ್ತರಿಸಬೇಕು. ಇದೆರಡನ್ನೂ ನಮ್ಮ ಮಾಧ್ಯಮಗಳ ಮಾಡದಿರುವುದು ದುರದೃಷ್ಟಕರ.

ಈ ವರದಕ್ಷಿಣೆ, ಅತ್ಯಾಚಾರದ ಅದೆಷ್ಟು ಸುಳ್ಳು ಕೇಸುಗಳು ದಾಖಲಾಗುತ್ತಿವೆಯೋ ದೇವರಿಗೇ ಗೊತ್ತು. ಅದರಿಂದ ನಮ್ಮ ಪೋಲೀಸರ ಮತ್ತು ಕೋರ್ಟಿನ ಅಮೂಲ್ಯವಾದ ಸಮಯ ಹಾಳು, ಜೊತೆಗೆ ಸುಳ್ಳು ಆರೋಪಕ್ಕೊಳಗಾದವರಿಗೆ ಮಾನಸಿಕ ಅಶಾಂತಿ. ಖಡಾಖಂಡಿತವಾಗಿ ಒಂದು ಮಾತು ಹೇಳುತ್ತೇನೆ, ಅತ್ಯಾಚಾರವೆಸಗುವ, ಲೈಂಗಿಕ ಕಿರುಕುಳ ನೀಡುವ ಪುರುಷರಿಗೆ ತ್ವರಿತಗತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು,ಎರಡು ಮಾತಿಲ್ಲ ಅದರಲ್ಲಿ. ಹಾಗೇನೇ ಸುಳ್ಳು ಆರೋಪ ಮಾಡುವವರಿಗೂ ಶಿಕ್ಷೆ ನೀಡಬೇಕಲ್ಲಾ? ಹೆಣ್ಣು ಎಂಬ ಕಾರಣಕ್ಕೆ ಅನುಕಂಪದಿಂದ ಎಚ್ಚರಿಕೆ ಕೊಟ್ಟು ಬಿಟ್ಟರಾಯಿತಾ? ಇದರಿಂದ ಬೇರೆಯವರಿಗೂ ದುರುದ್ದೇಶಪೂರಿತ ಸುಳ್ಳು ದೂರು ನೀಡಲು ಪ್ರೋತ್ಸಾಹಿಸಿದಂತಲ್ಲವೇ? ಈಗಂತೂ ಮಾನ್ಯ ಡಿವಿಯವರೇ ಕಾನೂನು ಸಚಿವರಾಗಿದ್ದಾರೆ. ತನ್ನ ಮಗನ ಮೇಲೇಯೇ ದಾಖಲಿಸಲಾದ ಸುಳ್ಳು ದೂರನ್ನು ನೋಡಿಯಾದರೂ ಅವರು ಸುಳ್ಳು ಕೇಸು ನೀಡುವವರಿಗೂ ಶಿಕ್ಷೆ ವಿಧಿಸುವಂತಹಾ ಕಾನೂನು ತರಲಿ ಎನ್ನುವುದು ನನ್ನ ಆಗ್ರಹ.

ನಮ್ಮ ನಡುವೆಯೇ ನಡೆಯುತ್ತಿರುವ ಇಂತಹಾ ಅಪಸವ್ಯಗಳನ್ನು ನೋಡುವಾಗ ಸಣ್ಣದರಲ್ಲಿ ಬಹಳ ಇಷ್ಟ ಪಟ್ಟ ಹಾಡೊಂದು ನೆನಪಾಗುತ್ತಿದೆ. “ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ನೋಡಿದಾಗ ನಿಜವು ತಿಳಿವುದು” ಎಂಬುದು ಇವತ್ತಿನ ಸಂದರ್ಭಕ್ಕೆ ಬಹಳವಾಗೇ ಅನ್ವಯವಾಗುತ್ತದೆ.. ಈ ಅತ್ಯಾಚಾರ ಮತ್ತು ಅತ್ಯಾಚಾರದ ಸುಳ್ಳು ಆರೋಪಗಳೆರಡರಿಂದಲೂ ಆಗುವುದು ಮಾನಭಂಗವೇ. ಅದರಲ್ಲೂ ಅತ್ಯಾಚಾರವಾಗಿದೆ ಎಂದು ಹೇಳುವ ಸುಳ್ಳು ಕೇಸುಗಳು ಯಾವ ಅತ್ಯಾಚಾರಕ್ಕೂ ಕಮ್ಮಿಯಿಲ್ಲದ್ದು. !

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!