ಅಂಕಣ

ಮೈಸೂರು ದಸರಾ ಅವ್ಯವಸ್ಥೆಯ ಆಗರ.

“ನಮ್ಮ ಪರಂಪರೆ,ನಮ್ಮ ಹೆಮ್ಮೆ” ನಮ್ಮ ಬದುಕಿನ ಜೊತೆ ಅವಿನಾಭಾವ ಸಂಬಂಧವನ್ನ ಹೊಂದಿರುವ ಪರಂಪರೆಗಳು ಬಾಲ್ಯದಿಂದಲೂ ನಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದೆ. ಸಂಸ್ಕಾರ,ಸಂಸ್ಕೃತಿಗಳು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾದಾಗ ಮಾತ್ರ ನಮ್ಮೊಳಗಿನ ಸುಪ್ತ ಮನಸ್ಸಿನ ನಿಯಂತ್ರಣ ಸಾಧ್ಯ.ಆದರೆ ಈಗ ಸಂಸ್ಕಾರ,ಸಂಸ್ಕೃತಿ ಎಂದರೆ ವೈದಿಕಶಾಹಿ ಎಂಬ ನೇರ ಆರೋಪ ವಿಚಾರವಂತರು ಮತ್ತು ಬುದ್ಧಿಜೀವಿಗಳದ್ದು. ಆದರೆ ಕ್ಷಣ ಯೋಚಿಸಿ ಭಾರತವೆಂದರೆ ಕೇವಲ ಜಾತ್ಯಾತೀತ ರಾಷ್ಟ್ರ ಮಾತ್ರವಲ್ಲ ಇದು ಅವಿಚ್ಛಿನ್ನ ಸಂಸ್ಕೃತಿಗಳ ತವರೂರು. ಧ್ಯಾನ,ಯೋಗ,ಪ್ರಾಣಾಯಾಮ ಇವೆಲ್ಲ ನಮ್ಮ ಪರಂಪರೆಯ ಮೂಲ ಮತ್ತು ಸಂಸ್ಕೃತಿಯ ಸಾರವಾಗಿದೆ.

 “ಮೈಸೂರು” ಅಂದಾಗ ನೆನಪಾಗುವುದು ದಸರಾ, ಜಂಬೂ ಸವಾರಿ ಮತ್ತು ವಿಶ್ವವನ್ನೇ ಸೆಳೆಯುವ ತಾಕತ್ತು ಹೊಂದಿರುವ ಅದ್ಭುತ ಸಂಸ್ಕೃತಿ. ವಿಜಯನಗರ ಸಾಮ್ರಾಜ್ಯದ ಅರಸರು ೧೫ ನೇ ಶತಮಾನದಲ್ಲಿ ಪ್ರಾರಂಭಿಸಿದ ಈ ದಸರಾ ನಿರಂತರವಾಗಿ ನಡೆಯುತ್ತಲೇ ಇದೆ.ವಿಜಯ ನಗರ ಸಾಮ್ರಾಜ್ಯದ ನಂತರ ಯದುವಂಶದ ಅರಸರು ಈ ಸುಂದರ ಪರಂಪರೆಯನ್ನು ಮುಂದುವರೆಸಿದರು. ಸುಂದರ ಮೈಸೂರಿನ ನಿರ್ಮಾಣ ಮಾಡುವಲ್ಲಿ ಯದುವಂಶದ ರಾಜರ ಕೊಡುಗೆ ತುಂಬ ಇದೆ. ವ್ಯವಸ್ಥಿತ ರಸ್ತೆಗಳು,ರಸ್ತೆ ಪಕ್ಕ ಬೆಳೆದು ನಿಂತ ಮರಗಳು,ಜನರು ಸುಲಲಿತವಾಗಿ ನಡೆಯಲು ಪುಟ್ ಪಾತ್ ಗಳು ಹೀಗೆ ಆಗಿನ ಕಾಲದಲ್ಲೆ ಸುಂದರ ಮೈಸೂರಿನ ನಿರ್ಮಾಣ ಮಾಡಿದ್ದರು ಯದುವಂಶದ ಅರಸರುಗಳು. ಸರಕಾರಗಳು ಬಂದವು ಹೋದವು ಆದರೆ ದಸರಾ ನಡೆಯುತ್ತಲೇ ಇದೆ. ಈಗಾಗಲೆ ೪೦೪ ದಸರಾ ಉತ್ಸವ ಮುಗಿದು ಈ ಭಾರಿ ೪೦೫ನೇ ಉತ್ಸವದ ಆಚರಣೆ ನಡೆಯುತ್ತಿದೆ. ರಾಜ ಮನೆತನ ನಡೆಸುವ ಆಚಾರ ವಿಚಾರಗಳನ್ನ ಗಮನಿಸಿದರೆ ಮೈ ರೋಮಾಂಚನಗೊಳ್ಳುವುದರಲ್ಲಿ ಅನುಮಾನವಿಲ್ಲ. ಈಗಲೂ ನಡೆಯುವ ರಾಜನ ದರ್ಬಾರ್, ಚಾಮುಂಡೀ ಪೂಜೆ,ಆಯುಧ ಪೂಜೆ,ಜಂಬೂ ಸವಾರಿ ಹೀಗೆ ಎಲ್ಲವೂ ಸುಂದರವೆ ಸರಿ. ಇದು ಕರ್ನಾಟಕದ ಹೆಮ್ಮೆ ಎನ್ನುವುದರಲ್ಲಿ ಅನುಮಾನವಿಲ್ಲ. ನಾಡ ಹಬ್ಬವನ್ನು ಕಣ್ತುಂಬಿಕೊಳ್ಳುವುದೇ ಒಂದು ಸುಮಧುರ ಕ್ಷಣ..

 ಹಾಗಾದರೆ ಮೈಸೂರು ಅಷ್ಟೊಂದು ಅಭಿವೃದ್ಧಿ ಹೊಂದಿದೆಯೇ? ಯಾವ ಜಿಲ್ಲೆಗೂ ಇರದ ಸೌಭಾಗ್ಯ ಮೈಸೂರಿಗಿದೆ ಅದು ಏನು ಗೊತ್ತಾ? ರಾಜ್ಯದಲ್ಲಿ ಯಾವುದೇ ಸರಕಾರ ಇದ್ದರೂ ಪ್ರತೀ ವರ್ಷ ಮೈಸೂರು ದಸರಾಕ್ಕೆ ಪ್ರತ್ಯೇಕ ದಸರಾ ಪ್ಯಾಕೇಜ್ ಇದ್ದೇ ಇರುತ್ತದೆ. ಆದರೆ ಇದು ಎಷ್ಟು ವ್ಯವಸ್ಥಿತವಾಗಿ ವಿನಿಯೋಗವಾಗಿದೆಯೋ ದೇವನೇ ಬಲ್ಲ. ನಾನು ಗಮನಿಸಿದ ಹಾಗೆ ಮೈಸೂರು ಅಷ್ಟೊಂದು ಅಭಿವೃದ್ಧಿ ಆಗಲೇ ಇಲ್ಲ…ಸ್ನೇಹಿತರೇ ಇದು ವಿಪರ್ಯಾಸವಲ್ಲವೇ? ಅದೆಷ್ಟೋ ರಸ್ತೆಗಳು ೫ ವರ್ಷದಿಂದಲೂ ಹಾಗೇ ಇದೆ. ಸರಕಾರ ಯಾವುದಾದರೇನು ನಾವು ಮೇಯುತ್ತಲೇ ಇರುತ್ತೇವೆ ಎಂದು ಅದೆಷ್ಟೋ ಜನ ಅಧಿಕಾರಿಗಳು ಹೆಮ್ಮೆಯಿಂದ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರೆ ನೀವೇ ಲೆಕ್ಕ ಹಾಕಿ ಅವರೆಷ್ಟು ಭ್ರಷ್ಟರು ಎಂಬುದನ್ನು. ಬೇರೆ ಯಾವ ನಗರಕ್ಕೂ ಈ ಥರದ  ಪ್ರತ್ಯೇಕ ಪ್ಯಾಕೇಜ್ ಅನ್ನು ಸರ್ಕಾರ ನೀಡಲ್ಲ ಆದರೆ ಈ ಭಾಗ್ಯ ಹೊಂದಿರುವ ಮೈಸೂರು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೈಗೆ ಸಿಲುಕಿ ನಲುಗಿ ಹೋಗುತ್ತಿದೆ ಅಂದರೆ ಆಶ್ಚರ್ಯ ಪಡಬೇಕಿಲ್ಲ.

 ಈಗ ಈ ಬಾರಿಯ ದಸರಾದ ಕಥೆ ಹೇಳುತ್ತೇನೆ ಕೇಳಿ..ನಮ್ಮ ರಾಜ್ಯದ ಮುಖ್ಯಮಂತ್ರಿಗಳ ತವರೂರಾದ ಮೈಸೂರಿನಲ್ಲಿ ಈ ಬಾರಿ ದಸರಾ ಎಂಬ ನಮ್ಮ ನಾಡಹಬ್ಬದ ಆಚರಣೆ ತೀರಾ ಮಂಕಾಗಿ ನಡೆಯುತ್ತಿದೆ. ಸರ್ಕಾರ ೪ ಕೋಟಿಯನ್ನು ಈ ಬಾರಿ ಮೈಸೂರು ದಸರಾಕ್ಕೆ ಬಿಡುಗಡೆ ಮಾಡಿದೆ ಆದರೆ ದಸರಾ ಹೇಗಿದೆ ಗೊತ್ತಾ? ‘ಕಾಮಾಗಾರಿ ಪ್ರಗತಿಯಲ್ಲಿದೆ’ ಎಂಬ ನಾಮಫಲಕ ಹಾಕಿ ಎಲ್ಲೆಂದರಲ್ಲಿ ರಸ್ತೆಗಳನ್ನು ಬಂದ್ ಮಾಡಿರುವುದು, ಕಾಂಕ್ರಿಟ್ ರಸ್ತೆ ಮಾಡುತ್ತೇವೆಂದು ಕಿತ್ತು ಹಾಕಿರುವ ರಸ್ತೆಗಳು, ಹೊಂಡಗಳಿಂದಲೇ ತುಂಬಿಹೋಗಿರುವ ಸರಿ ಮಾಡಿದ್ದೇವೆ ಎಂದು ಹೇಳಿಕೊಂಡಿರುವ ರಸ್ತೆಗಳು,ಮಾಡಬೇಕಾದ ಸಮಯದಲ್ಲಿ ಮಾಡದೇ ಈಗ ಮಾಡುತ್ತಿರುವ ಅದೆಷ್ಟೋ ಪುಟ್ ಪಾತ್ ಗಳು,ಡಾಂಬರ್ ರಸ್ತೆ ಮೇಲೆ ಬಿದ್ದಿರುವ ಮಣ್ಣುಗಳು ಒಟ್ಟಿನಲ್ಲಿ ಇದು ನೂರಕ್ಕೆ ನೂರು “ಧೂಳ್ ದಸರಾ”.

 ಸರ್ಕಾರ ಈ ಬಾರಿ ನಾವು ಸರಳ ದಸರಾ ಮಾಡುತ್ತೇವೆ ಎಂದು ಹೇಳಿಕೊಂಡಿದೆ. ಅಂದರೆ ಅದರರ್ಥ ಇಷ್ಟೊಂದು ಕೆಟ್ಟದಾಗಿ ದಸರಾ ಮಾಡುತ್ತೇವೆ ಎಂಬುದಾಗಿದೆ ಎಂದು ಈಗ ಅರ್ಥ ಆಗುತ್ತಿದೆ. ಸರಳ ದಸರಾ ಮಾಡುತ್ತೇವೆ ಎಂದು ಪ್ರತೀವರ್ಷ ಯಾವುದೇ ಸರ್ಕಾರ ಇದ್ದರು ಹೇಳಲು ಕಾರಣ ಸಿಗುತ್ತಿದೆ. ಪ್ರತೀ ವರ್ಷ “ಬರಗಾಲ” ಎಂಬ ಕಾರಣ ನೀಡಿ ದಸರಾವನ್ನ ಕಡೆಗಣಿಸುತ್ತಿದ್ದ ಸರ್ಕಾರ ಈ ಬಾರಿ ಅನ್ನದಾತನ ಸಾವಿನ ಕಾರಣವನ್ನೂ ಸರಳ ದಸರಾದ ಆಚರಣೆ ಮಾಡಲು ಕಾರಣವನ್ನಾಗಿ ಬಳಸಿಕೊಂಡಿದೆ. ಸಾಯುತ್ತಿರುವ ರೈತರಿಗೆ ಆತ್ಮಸ್ತೈರ್ಯ ನೀಡುವ ಒಂದು ಕೆಲಸವನ್ನಾದರೂ ಈ ಸರ್ಕಾರ ಇಲ್ಲಿಯವರೆಗೆ ಮಾಡಿತೆ? ಹೌದು ರಾಜ್ಯವಿಡೀ ಸೂತಕದ ಛಾಯೆ ಆವರಿಸಿದೆ, ಸರಳವಾಗಿಯೇ ದಸರಾವನ್ನ ಆಚರಿಸೋಣ. ಕೋಟಿ ಕೋಟಿ ನೀಡಿ ಪರಭಾಷಾ ಕಲಾವಿದರನ್ನ ಕರೆಸಿ ಮಾಡುವ ಯುವ ದಸರಾವನ್ನು ನಿಲ್ಲಿಸಿದ್ದೀರಿ ಇದು ನಿಜಕ್ಕೂ ಪ್ರಶಂಸನೀಯ ಆದರೆ ಅದೇ ನೀವೇ ಘೋಷಿಸಿದ ೪ ಕೋಟಿಯಲ್ಲಿ ಚಂದದ ಸುವ್ಯವಸ್ಥಿತ ದಸರಾ ನಡೆಸಬಹುದಿತ್ತಲ್ಲವೇ ಮಾನ್ಯ ಮುಖ್ಯ ಮಂತ್ರಿಗಳೇ? ರಾಜ್ಯದ ಅನ್ನದಾತ ಸಾಲದ ಹೊರೆಯನ್ನು ಹೊರಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಅಂದರೆ ಅದರರ್ಥ ಆಳುವವರ ನಿರಂಕುಶ ಧೋರಣೆಯ ಪ್ರತಿಫಲನ ಅಲ್ಲವೆ? ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಿಸಿ ಎಷ್ಟು ದಿನವಾಯಿತು ಎಷ್ಟು ಜನರಿಗೆ ನೀಡಿದಿರಿ? ಬಿಬಿಎಂಪಿ ಚುನಾವಣೆಯ ಸಂದರ್ಭದಲ್ಲಿ ಎರಡು ದಿನಕ್ಕೊಮ್ಮೆ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುತ್ತಿದ್ದರಲ್ಲ ಮುಖ್ಯಮಂತ್ರಿಗಳೇ ಬನ್ನಿ ನಿಮ್ಮ ಮೈಸೂರು ನಗರವನ್ನೊಮ್ಮೆ ಪ್ರದಕ್ಷಿಣೆ ಮಾಡಿ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಮ್ಮ ಜಿಲ್ಲೆ ಶಿವಮೊಗ್ಗ ನಗರವನ್ನ ಚಂದವಾಗಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಅಂದರೆ ಅದು ಅತಿಶಯೋಕ್ತಿಯಲ್ಲ. ಮೈಸೂರಿನ ಎಲ್ಲ ಸರ್ಕಾರೀ ಆಡಳಿತ ಕೆಂದ್ರಗಳಲ್ಲಿ ಏನಾದರು ಕೆಲಸವಾಗಬೇಕೆಂದರೆ “ಚಿಕ್ಕೋರು” ನಮ್ಮನ್ನ ಕಳಿಸಿದ್ದಾರೆ ಎಂದರೆ ಸಾಕು ಅವರಿಗೆ ಮೊದಲ ಆದ್ಯತೆ ಹಾಗಾದರೆ ಯಾರು ಆ “ಚಿಕ್ಕೋರು”? ಅಂದು ನಿಮ್ಮ ಅನುಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಜನತಾ ದರ್ಶನ ಮಾಡಿದರಲ್ಲ ಅವರೇ ಅಲ್ಲವೇ? ಬಿಡಿ ನೀವು ಸಂಸ್ಕಾರ ಸಂಸ್ಕೃತಿ ಅಂದರೆ ವೈದಿಕಶಾಹಿ ಎಂದು ನಂಬಿದ್ದೀರಿರಬೇಕು. ಮೈಸೂರು ದಸರವನ್ನು ಕೂಡ ಅದೇ ವಿಭಾಗಕ್ಕೆ ಸೇರಿಸಿಕೊಂಡಿದ್ದೀರೇನೋ. ಯಾರಿಗೆ ಗೊತ್ತು?ನಿಮ್ಮ ಮಾಧ್ಯಮ ಸಲಹೆಗಾರರೇ ಬಲ್ಲರು..

 ಹದಗೆಡುತ್ತಿರುವ ಮೈಸೂರು ದಸರಾವನ್ನ ನೋಡುತ್ತಿದ್ದರೆ ಬೇಸರವಾಗುತ್ತದೆ. ದೂರದಿಂದ ಬಂದ ಅದೆಷ್ಟೋ ಪ್ರವಾಸಿಗರು ಎಲ್ಲೆಂದರಲ್ಲಿ ಅಗೆದು ಹಾಕಿರುವ ರಸ್ತೆಗಳನ್ನು ಚರಂಡಿಗಳನ್ನು ನೋಡಿ ಹೋದರೆ ಮತ್ತೆ ಅವರು ಮುಂದಿನ ವರ್ಷ ಬರುತ್ತಾರೆಯೇ? ಮೈಸೂರು ದಸರಾದಲ್ಲಿ ಈ ಬಾರಿ ಪ್ರಮುಖ ಆಕರ್ಷಣೆ ಅಂದರೆ ಅದು ಫಲ ಪುಷ್ಪ ಪ್ರದರ್ಶನ ಮಾತ್ರ. ಆದರೆ ಆ ಅವ್ಯವಸ್ಥೆಯನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ೨೦ ರೂ ನೀಡಿ ಟಿಕೆಟ್ ಪಡೆದರೆ ಅದನ್ನ ನಮ್ಮೆದುರೇ ಹರಿದು ಬಿಸಾಕುತ್ತಾರೆ. ಒಳಗೆ ಹೊಗುವ ಮೊದಲು ನೀವು ಎಲ್ಲೆಂದರಲ್ಲಿ ಹರಿದುಹಾಕಿರುವ ಟಿಕೆಟ್ ನ ದೊಡ್ಡ ರಾಶಿಯನ್ನು ದಾಟಿ ಹೋಗಬೇಕು. ಮೋದಿಯವರ ಸ್ವಚ್ಛ ಭಾರತದ ಅನುಷ್ಠಾನದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ಮೈಸೂರು ಇದೇನಾ? ಪಾರ್ಕ ನ ಒಳಗೆ ಎಲ್ಲೆಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್ ಗಳು. ಜೊತೆಗೆ ನಿಮ್ಮನ್ನು ಆವರಿಸುವ ಅಭಿವೃದ್ಧಿಯ ಧೂಳು. ಇನ್ನು ವಸ್ತು ಪ್ರದರ್ಶನ ಎನ್ನೋ ಇನ್ನೊಂದು ಅವ್ಯವಸ್ಥೆಯ ಆಗರ. ರಾಜ್ಯ ಸಚಿವ ಸಂಪುಟದಲ್ಲಿನ ಪ್ರಮುಖ ಮೂರು ಸಚಿವರು ಮೈಸೂರು ಜಿಲ್ಲೆಯವರು. ಮೈಸೂರು ನಗರ ನಿವಾಸಿಗಳು ಅದಲ್ಲದೇ ನಮ್ಮ ನಾಡಿನ ದೊರೆ ಮೈಸೂರಿನವರು. ಇಷ್ಟಾದರೂ ಅವ್ಯವಸ್ಥೆಯಿಂದ ನಲುಗುತ್ತಿರುವ ದಸರಾ ನೋಡಿದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಗಮನಿಸಿದ ಹಾಗೆ ಈ ಬಾರಿ ಪ್ರವಾಸಿಗರ ಸಂಖ್ಯೆಯೂ ತುಂಬಾ ಇಳಿಮುಖವಾಗಿದೆ. ಬಂಕಿಗ್ ಹ್ಯಾಮ್ ಅರಮನೆಯ ನಂತರ ವಿಶ್ವದಲ್ಲೇ ಅತಿ ಹೆಚ್ಚು ಪ್ರವಾಸಿಗರನ್ನ ಸೆಳೆದಿದ್ದು ಮೈಸೂರು ಅರಮನೆ. ಭಾರತದ ಎರಡನೇ ಸ್ವಚ್ಛ ನಗರ ಮೈಸೂರು ಎಂಬ ಪ್ರಶಂಸೆಗೆ ಭಾಜನವಾಗಿತ್ತು ಮೈಸೂರು. ಆದರೆ ಈಗ ಈ ದಸರಾದ ಸುಸಂದರ್ಭದಲ್ಲಿ ಮೈಸೂರನ್ನು ನೋಡಿದರೆ ನಿಮಗೆ ಮೂಡುವ ಪ್ರಶ್ನೆ “ಅದೇಗೆ ಮೈಸೂರಿಗೆ ಸ್ವಚ್ಛ ನಗರ ಎಂದು ಪ್ರಶಸ್ತಿ ನೀಡಿದರು?” ಎಂಬುದು. ಇದು ೪೦೫ನೇ ದಸರಾ ಹಬ್ಬದ ಸುಸಂದರ್ಭದಲ್ಲಿ ನಾ ಕಂಡ ಮೈಸೂರು..

 ಆಚರಣೆಯ ಹೆಸರಲ್ಲಿ ವೈಭೋಗ ಸರಿಯಲ್ಲ ಆದರೆ ವ್ಯವಸ್ಥಿತ ಸರಳ ಆಚರಣೆ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಇಲ್ಲಿ ವೈಭೋಗವಿಲ್ಲ ಸರಿ ಜೊತೆಗೆ ವ್ಯವಸ್ಥಿತವಾದ ಆಚರಣೆಯೂ ಇಲ್ಲ. ಪರಂಪರೆಯ ಸೆಲೆ ಬಿಟ್ಟು ಬದುಕುವ ಕಾಲ ನಮ್ಮೆದುರಿರುವಾಗ ನಮ್ಮ ಸಂಸ್ಕೃತಿಯ ರಕ್ಷಣೆ ನಮ್ಮ ಕೈಲಿದೆ. ಮುಂದೊಂದು ದಿನ ಸರ್ಕಾರ ದಸರಾವನ್ನು ಖಾಸಗೀ ಸಹಭಾಗಿತ್ವದಲ್ಲಿ ನಡೆಸುವ ಕಾಲ ಬಂದರೂ ಬರಬಹುದು. ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮೂರಿನ ಹೆಮ್ಮೆಯ ದಸರಾವನ್ನು ಚಂದವಾಗಿ ಆಚರಿಸುವ ಕಡೆ ಸ್ವಲ್ಪವಾದರೂ ಗಮನ ಕೊಡಿ. ದಸರಾ ಕೆವಲ ಹಬ್ಬವಲ್ಲ ಮೈಸೂರಿಗರ ಬದುಕು. ಅದೆಷ್ಟೋ ಜನ ದಸರಾದಿಂದ ಬದುಕನ್ನು ಚಂದಗಾಣಿಸಿಕೊಂಡಿದ್ದಾರೆ. ಸಾಮಾನ್ಯರದೆಷ್ಟೋ ಜನರ ಬದುಕು ದಸರಾ ಹಬ್ಬದಿಂದ ಹಸನಾಗುತ್ತದೆ ಇದಕ್ಕೆ ಜಾತಿ,ಧರ್ಮ,ಮತ ಮತ್ತು ಪಂಥಗಳ ಭೇದವಿಲ್ಲ…ಇಷ್ಟೆಲ್ಲದರ ನಡುವೆಯೂ ರಾಜಕುಟುಂಬ ದಸರಾವನ್ನು ಭರದಿಂದ ಆಚರಿಸುವ ತಯಾರಿ ನಡೆಸಿದೆ.

 ೪೦೫ ನೇ ದಸರಾಕ್ಕೆ ನಿಮಗೆಲ್ಲರಿಗೂ ಆದರದ ಸ್ವಾಗತವನ್ನು ಕೋರುತ್ತಾ..

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!