ಅಂಕಣ

ಕೊಳಲಿನ ಕುಸುರಿಯಂಗಳ

ಕಲಾವಿದ.. ಕಲ್ಪನೆಗೆ ಕುಂಚ ಹಚ್ಚಿ, ಮುದ ನೀಡಿ ಮನಗೆದ್ದು ಮನಸೇರೊ ಜೊತೆಗಾರ… ನಾದದ ನಾನಾ ರೀತಿಯನ್ನು ರಾಗದ ಜೊತೆ ಸೇರಿಸಿ, ಭಾವನೆಯ ಭಂಗಿ ಬೆರೆಸಿ, ಸ್ವರ ತರಂಗದ ಅಮಲಿನಲ್ಲಿ ತೇಲಿಸುವವನು ಕೊಳಲುಗಾರ.. ಹೀಗೆ ಕಲೆ ಹತ್ತು ಹಲವು ರೀತಿಯಲ್ಲಿದ್ದರೂ ಕಲಾವಿದನೆಂದರೆ ಆತ ತನ್ನಲ್ಲಿರುವ ಕಲೆಯಿಂದ ಮನಗೆಲ್ಲುವವನೇ.. ಪ್ರತಿ ಕಲಾವಿದ ತನ್ನ ಕಲೆಯಿಂದ ಖುಷಿಪಡಿಸಿ, ಕಲಾಲೋಕಕ್ಕೆ ಕೊಡುಗೆ ನೀಡಿ ಒಬ್ಬ ಶ್ರೇಷ್ಠ ಕಲಾವಿದನಾಗುತ್ತಾನೆ… ಆದರೆ ಆತನ ಕಲೆಗೆ ಕಾಣದ ಕೈ ಕುಸುರಿಯೊಂದು ಕೆಲಸ ಮಾಡುತ್ತಲೇ ಇರುತ್ತದೆ, ಕಾಡ ಮಲ್ಲಿಗೆಯ ಕಂಪು ಕಾಣದೇನೋ ಜಗಕೆ, ಅಲ್ಲವೇ..?? ಆದರೆ ಆ ಕಾಣದ ಕೈನಲ್ಲಿ ಕುಸುರಿ ಮಾಡೋ ಕಲೆಗಾರನೂ ಕಲಾವಿದನೇ…

ಬಹುಶಃ ನಮ್ಮಲ್ಲಿ ಯಾರೂ ಕೂಡ ಕೊಳಲಿನ ನಾದಕ್ಕೆ ಮನಸೋಲದವರಿಲ್ಲ. ಹರಿಪ್ರಸಾದ್ ಚೌರಾಸಿಯಾ, ಪ್ರವೀಣ್ ಗೋಡ್ಖಿಂಡಿ ಹೀಗೆ ಕೊಳಲು ಮಾಂತ್ರಿಕರ ಹೆಸರು ಹೇಳುತ್ತಾ ಹೋಗಬಹುದು. ಗೋಡ್ಖಿಂಡಿ ಅವರ ಬಾನ್ಸುರಿ – ಕೊಳಲು ನಾದದ ಮೂಲಕ ನಾದಮಯ ಲೋಕವನ್ನು ಅನುಭವಿಸದವರು ಬಹಳ ಕಡಿಮೆ ಎನ್ನಬಹುದು. ಆದರೆ ನೀವೆಂದಾದರೂ ಕೊಳಲಿನ ಆನಂದಮಯ ಲೋಕ ಅನುಭವಿಸುವುದರ ಜೊತೆಗೆ ಅದರ ಹಿಂದಿನ ಕಥೆ ಅದು ಎಲ್ಲಿ ಯಾರ ಕೈಯಲ್ಲಿ ಇಷ್ಟೊಂದು ಸುಂದರ ನಾದವನ್ನು ನಮಗೆ ಉಣಿಸಲು ಹುಟ್ಟಿರಬಹುದು ಎಂದು ಯೋಚಿಸಿದ್ದೀರಾ?? ಇಂತದ್ದೊಂದು ಪ್ರಶ್ನೆ ಮೊನ್ನೆ ಗೋಡ್ಖಿಂಡಿ ಅವರ ಕೊಳಲ ನಾದ ಕೇಳುತ್ತಿರುವಾಗ ಹುಟ್ಟಿತು. ಗೋಡ್ಖಿಂಡಿಯವರ ಕೊಳಲಿನ ನಾದದ ಹಿಂದೆ ಇರುವವರು ಯಾರೆಂದು ತಿಳಿದುಕೊಳ್ಳುವ ಕುತೂಹಲ ಈ ಲೇಖನಕ್ಕೆ ನಾಂದಿಯಾಯಿತು…

ಅವರು ಮಂಜುನಾಥ ಹೆಗಡೆ, ಪ್ರಾಯ 65,  ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನೆಟ್ಟಗಾರು. ಸುಮಾರು 45-50 ವರ್ಷಗಳ ಹಿಂದಕ್ಕೆ ಹೋಗೋಣ, ಟೆಲಿಗ್ರಾಂ ಕೂಡಾ ಇವರಿಗೆ ತಲುಪುವಾಗ ಹಳತಾಗಿ ಬಿಡುವಂತ ಊರು. ಆಗ ಈಗಿನಂತೆ ಕ್ಷಣ ಮಾತ್ರದಲ್ಲಿ ಸುದ್ದಿ ವಿಶ್ವ ವ್ಯಾಪಿಯಾಗುತ್ತಿರಲಿಲ್ಲ. ಆದರೆ ಮಂಜುನಾಥ ಹೆಗಡೆಯವರಿಗೆ ಅದೆಲ್ಲಿತ್ತೋ ಆಸಕ್ತಿ, ಪನ್ನಲಾಲ್ ಘೋಷ್ ಶ್ರೇಷ್ಟ ಕಲಾವಿದರ ಬಗ್ಗೆ ನಿಮಗೆ ತಿಳಿದಿರಬಹುದು, ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತದಲ್ಲಿ ಕೊಳಲಿಗೆ ಪ್ರಮುಖಸ್ಥಾನ ಒದಗಿಸಿಕೊಟ್ಟವರು ಪನ್ನಾಲಾಲ್ ಘೋಷ್. ಬಾಯಿಯಲ್ಲಿ ಹಾಡುವಂತೆ, ವೀಣೆಯಲ್ಲಿ ನುಡಿಸಿದಂತೆ ಕೊಳಲನ್ನು ನುಡಿಸುತ್ತಿದ್ದವರು ಪನ್ನಾಲಾಲ್ ಘೋಷ್ ಒಬ್ಬರೇ. ಅವರಿಂದ ಪ್ರಭಾವಿತರಾದವರು ಮಂಜುನಾಥ ಹೆಗಡೆ, ಆಗೆಲ್ಲಾ ಸಂಗೀತದ ಬಗ್ಗೆ ಇವರಿದ್ದ ಊರಲ್ಲಿ ಹೆಚ್ಚಾಗಿ ಮಾಹಿತಿ ಇರಲಿಲ್ಲ, ಆದರೆ  ಕಲೆ ಎಂಬ ಸರಸ್ವತಿ ಒಲಿದು ಬಂದರೆ ಹೀಗೆಯೇ, ಶಿರಸಿಯಿಂದ ದೂರದ ಊರಾದ ಗದಗಕ್ಕೆ ಹೋಗಿ ಅಲ್ಲಿ ನಾರಾಯಣ ಥಗೆ ಎಂಬವರ ಬಳಿ ಕೊಳಲು ಅಭ್ಯಾಸಕ್ಕೆ ತೊಡಗಿದರು, ಬೇಕಾದ ಹಾಗೆ ಕೈಯ್ಯಲ್ಲಿ ಹಣವಿದೆ ಮಜಾ ಮಾಡುತ್ತಾ ಕಲಿಯಬಹುದು ಎನ್ನುವ ಸ್ಥಿತಿಯಾಗಿರಲಿಲ್ಲ ಅಂದು, ಅಲ್ಲಿ ಹೋಗಿ ಹೊಲಿಗೆಯನ್ನೂ ಕಲಿತುಕೊಂಡರು, ಆಸಕ್ತಿಯನ್ನು ಬಿಡದೆ ಕೊಳಲು ವಾದನವನ್ನೂ ಪಟ್ಟು ಬಿಡದೆ ಕಲಿತರು ಜೊತೆಗೆ ತಂದೆ ತಾಯಿಯ ಸಹಕಾರವೂ ಇತ್ತು. ರಕ್ತದಿಂದ ಬಂದಿದ್ದು ಎಂದು ಹೇಳಲು ಇವರ ಹಿಂದಿನವರಾರೂ ಈ ಕಲಾವಿದರಲ್ಲ.

ಆದರೆ ಕಲೆಯನ್ನು ಇವರು ಬಿಡಲಿಲ್ಲ, ಅಲ್ಲಾ ಕಲೆಯೇ ಇವರನ್ನು ಬಿಡಲಿಲ್ಲವೇನೋ…

ಸರಿ, ಅಲ್ಲಿ ಒಂದು ವರ್ಷ ಕೊಳಲು ಕಲಿತು ಮರಳಿ ಗೂಡಿಗೆ ಎಂಬಂತೆ ತಮ್ಮ ಊರಿಗೆ ತೆರಳಿದರು. ಆದರೆ ಕೊಳಲು ನುಡಿಸಲು ಕಲಿತಾಗಲೇ ಇವರಿಗೆ ನುಡಿಸುವವರ ಕಷ್ಟದ ಅರಿವಾಗಿದ್ದು. ಕೊಳಲಿನ ರಚನೆ ಸರಿಯಾಗಿಲ್ಲದೆ, ಅತಿಯಾಗಿ ಶ್ವಾಸ ಹಾಕಿ, ಒತ್ತಡದಿಂದ ಕೊಳಲು ನುಡಿಸುವಂತಾಗುತ್ತಿತ್ತು. ಇಂಪಾದ ನಾದ ಹೊಮ್ಮಿಸಲು ಕಲಾವಿದರು ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಆಗ ಹೆಗಡೆಯವರ ಗುರುಗಳ ಗುರುಗಳಾದ ವಿಠಲ್ ಸಾ ಕಬಾಡಿ (ಭೀಮ್’ಸೇನ್ ಜೋಷಿ ಅವರ ಸಮಕಾಲೀನರು) ಎಂಬ ಶ್ರೇಷ್ಟ ಕಲಾವಿದರು ಇವರಿಗೆ ಹೇಳಿದರಂತೆ, ಏನಾದರೂ ಸರಿ ಹೆಗಡೆಯವರೇ ನೀವು ಕೊಳಲು ತಯಾರಿಸಲೇ ಬೇಕು, ಈ ಮುಂಬೈ ಅಲ್ಲಿ ಎಲ್ಲಾ ಕೊಳಲು ಸಿಗತ್ತೆ, ಆದರೆ ಅದನ್ನು ನುಡಿಸುವ ಕಷ್ಟ ಯಾರಿಗೂ ಬೇಡ ಎಂದು. ಅಲ್ಲಿಂದ ನೋಡಿ ಇವರಿಗೆ ಕೊಳಲು ತಯಾರಿಸುವತ್ತ ಮನವಾಲಿತು. ಕಲಿತದ್ದು ಕೊಳಲು ನುಡಿಸಲು, ಆದರೆ ಕಲಿತ ವಾದ್ಯವನ್ನೇ ಸೃಷ್ಟಿಸುವ ಮನಸ್ಸು. ಅಲ್ಲಿಂದ ಮತ್ತೆ ಅದರ ಪರಿಕರಗಳನ್ನು ಸಂಗ್ರಹಿಸಿದರು, ಅದಕ್ಕಾಗಿ ಅಲೆದಾಡಿದರು. ಯಾರಿಂದಲೂ ಇದರ ತರಬೇತಿ ಪಡೆಯದೆ, ನುಡಿಸುವುದನ್ನು ಮಾತ್ರ ಕಲಿತ ಇವರು, ಶೃತಿ ಸ್ವರ ಜ್ಞಾನದ ಆಧಾರದಲ್ಲಿ ಕೊಳಲು ತಯಾರಿಸಿಯೇ ಬಿಟ್ಟರು.

ಇದೆಲ್ಲಾ ಸರಿ, ಕೊಳಲು ತಯಾರಾಯಿತು, ಆದರೆ ಮುಂದೇನು? ತಯಾರಿಸಿದ ಕೊಳಲು ಸರಿ ಆಗಿದೆಯೋ ಇಲ್ಲವೋ? ಶೃತಿ ಸರಿಯಾಗಿ ನುಡಿಯುತ್ತದೋ ಇಲ್ಲವೋ? ಪ್ರಶ್ನೆಗಳು ಹಲವು… ತಮ್ಮ ಊರಿನಲ್ಲೇ ಒಬ್ಬರಿಗೆ ಕೊಳಲು ತೋರಿಸಿದರು ಅವರಿಗೆ ಅದು ಖುಷಿಯೂ ಆಯಿತು. ಆದರೆ ಇವರ ಪ್ರಥಮ ಕೊಳಲು, ಶ್ರೇಷ್ಟ ಕಲಾವಿದರೊಬ್ಬರ ಕೈ ಸೇರಿ ನಾದ ಹೊಮ್ಮಿಸಿದ್ದು ಹೀಗೆ ನೋಡಿ – ವೆಂಕಟೇಶ್ ಗೋಡ್ಕಿಂಡಿ (ಪ್ರವೀಣ್ ಗೋಡ್ಕಿಂಡಿ ಅವರ ತಂದೆ) ಹೈದರಾಬಾದ್ ಆಕಾಶವಾಣಿಯಲ್ಲಿ ಇದ್ದ ಕಾಲ, ಅಲ್ಲಿಗೆ ಹೆಗಡೆಯವರು ತಮ್ಮ ಕೊಳಲನ್ನು ಪಾರ್ಸೆಲ್ ಮೂಲಕ ಕಳುಹಿಸಿದರು, ನಿಜವಾದ ಕಲಾವಿದ ಮಾತ್ರ ಕಲಾವಿದನನ್ನು ಗುರುತಿಸೋಕೆ ಸಾಧ್ಯ, ಅದಕ್ಕೊಂದು ಸಹೃದಯ ಬೇಕು ಅನ್ನೋದು ಇದಕ್ಕೇ ನೋಡಿ… ವೆಂಕಟೇಶ್ ಗೋಡ್ಕಿಂಡಿ ಅವರು ಅದನ್ನು ಇಷ್ಟ ಪಡದೇ ಇರೋಕೆ ಕಾರಣವೇ  ಇರಲಿಲ್ಲ. ಅಷ್ಟು ಶೃತಿ ಲಯ ಬದ್ಧವಾದ ಕೊಳಲನ್ನು ಬಿಡುವುದಾದರೂ ಹೇಗೆ ಹೇಳಿ? ಹೆಗಡೆಯವರನ್ನು ಕರೆಸಿಕೊಂಡರು, ಮತ್ತೆ ಮುಂದೆ?? ಮುಂದೇನು, ವೆಂಕಟೇಶ್ ಗೋಡ್ಕಿಂಡಿ ಅವರಿಂದ ಹಿಡಿದು ಅವರ ಮೊಮ್ಮಗನಾದ ಷಡ್ಜ ಗೋಡ್ಕಿಂಡಿ ಕೂಡಾ ನುಡಿಸುತ್ತಿರುವುದು ಮಂಜುನಾಥ ಹೆಗಡೆ ಅವರ ಕೈಯಲ್ಲರಳುವ ಕೊಳಲನ್ನೇ ಅಂದರೆ ನೀವು ನಂಬಲೇ ಬೇಕು. ಗೋಡ್ಕಿಂಡಿ ಅವರ ಶಿಷ್ಯ ವರ್ಗವೂ ಅಷ್ಟೇ ಎಲ್ಲರೂ ಇವರಲ್ಲೇ ಕೊಳಲಿಗೆ ಮೊರೆ ಹೋಗುತ್ತಾರೆ.

ಹರಿಪ್ರಸಾದ್ ಚೌರಾಸಿಯಾ ಅವರ ಬಳಿಯೂ ಇವರು ತಯಾರಿಸಿದ ಒಂದೆರಡು ಕೊಳಲುಗಳಿವೆ, ಅವರ ಶಿಷ್ಯರಾದ ಪ್ರಖ್ಯಾತ ಕಲಾವಿದರೂ ಆದ ಸಮೀರ್ ಅವರು ಇವರ ಬಳಿಯೇ ಕೊಳಲು ತೆಗೆದುಕೊಳ್ಳುವುದು. ಇವರ ಹಿಂದೆಯೂ ಒಂದು ಕಥೆ ಇದೆ ನೋಡಿ, ಚೌರಾಸಿಯಾ ಅವರ ಶಿಷ್ಯ ಸಮೀರ್ ರಾವ್ ಅವರ ಮೈಸೂರಿನಲ್ಲಿ ಕಛೇರಿ ಆಗ್ತಾ ಇತ್ತು, ಚೌರಾಸಿಯಾ ಅವರೂ ಇದ್ರು, ಕಛೇರಿಯೇನೋ ಮುಗೀತು, ಚೌರಾಸಿಯಾ ಅವರು ಸಮೀರ್ ಬಳಿ ಬಂದು, ಇದೆಲ್ಲಿದು ಕೊಳಲು, ನಂಗೆ ಬೇಕು ಅಂತ ತಗೊಂಡೇ ಹೋದ್ರು, ಈ ಕೊಳಲು ಮಾಡಿದ್ಯಾರು ಕೇಳಿ, ನಮ್ಮ ಮಂಜುನಾಥ ಹೆಗಡೆಯವರೇ.

ಇಂತದ್ದೇ ಘಟನೆ ಇನ್ನೊಂದಿದೆ ನೋಡಿ, ಹುಬ್ಬಳ್ಳಿಯಲ್ಲಿ ಸವಾಯಿ ಗಂಧರ್ವ ಕಾರ್ಯಕ್ರಮದಲ್ಲಿ ಚೌರಾಸಿಯಾ ಅವರ ಕಛೇರಿ ಇತ್ತು, ಅವರ ಕಾರ್ಯಕ್ರಮ ಮುಗಿದ ಬಳಿಕ ಹೆಗಡೆಯವರು ಅಲ್ಲಿಯೇ ಇದ್ದ ಕಾರಣ, ತಮ್ಮ ಬಳಿ ಇದ್ದ ಕೊಳಲನ್ನು ಅವರಿಗೆ ನೀಡಿದರು, ಅದರಿಂದ ಚೌರಾಸಿಯಾ ಅವರು ಎಷ್ಟು ಪ್ರಭಾವಿತರಾದ್ರು ಅಂದ್ರೆ ಮತ್ತೆ ಪುನಃ ಸ್ಟೇಜ್’ಗೆ ಹೋಗಿ, ತಂಬೂರ ಹಾಕಿ ಕೊಳಲು ನುಡಿಸಿಯೇ ಬಿಟ್ಟರು. ಈಗಲೂ ಚೌರಾಸಿಯಾ ಅವರ ಬಳಿ ಹೆಗಡೆಯವರು ತಯಾರಿಸಿದ ಕೊಳಲುಗಳಿವೆ. ಮೊನ್ನೆ ಮೊನ್ನೆಯಷ್ಟೇ, ಚೌರಾಸಿಯಾ ಅವರ ಗುರುಗಳಾದ ಬೋಲಾನಾಥ್ ಅವರ ಅಣ್ಣನ ಮಗ ರಾಜೇಂದ್ರ ಪ್ರಸನ್ನ ಶ್ರೇಷ್ಠ ಕಲಾವಿದರು ಇವರ ಮನೆಗೆ ಬಂದು ಹೆಗಡೆಯವರೇ ನಂಗೆ ಕೊಳಲು ಬೇಕು ಎಂದು ಪ್ರೀತಿಯಿಂದ ತೆಗೆದುಕೊಂಡು ಹೋಗಿದ್ದಾರೆ. ನಾನು ಹೀಗೆ ಪಟ್ಟಿ ಮಾಡ್ತಾ ಹೋದ್ರೆ, ಬಹುಶಃ ಎಲ್ಲಾ ಕೊಳಲು ವಾದಕರ ಹೆಸರದ್ದೇ ಒಂದು ಪಟ್ಟಿ ಮಾಡ್ಬೇಕು!

ಕೊಳಲು ತಯಾರಿಸುವುದು ನಾವಂದುಕೊಂಡಷ್ಟು ಸುಲಭದ ಕೆಲಸವಲ್ಲ. ಮೊದಲಿಗೆ ಬೇಕಾದ ಮೆಟೀರಿಯಲ್ ಸಂಗ್ರಹಿಸಬೇಕು. ಅದಕ್ಕಾಗಿ ಬಿದಿರಿನ ಜಾತಿಗೆ ಸೇರಿದ ವಾಟೆ ಬೇಕು, ಅದಕ್ಕಾಗಿ ಕಾಡಲ್ಲಿ ಅಲೆಯಬೇಕು, ಕೆಲವು ಕೊಳಲು ತಯಾರಿಸಬೇಕಾದಾಗ ದೂರದ ಅಸ್ಸಾಂಗೆ ಕೂಡಾ ಹೋಗಬೇಕಾಗುತ್ತದೆ, ಅಲ್ಲಿಂದ ಪರಿಕರಗಳನ್ನು ತರಿಸಿಕೊಳ್ಳಬೇಕಾಗುತ್ತದೆ. ಇನ್ನು ಪರಿಕರಗಳನ್ನು ಸಂಗ್ರಹಿಸಿದ ಮೇಲೆ ಅದನ್ನು ಬೇಕಾದಂತೆ ಅಣಿಗೊಳಿಸಿಕೊಳ್ಳಬೇಕು, ಶೃತಿ ಶುದ್ಧವಾಗಿ ಕೊಳಲು ತಯಾರಾಗಬೇಕು, ಮುಖ್ಯವಾಗಿ, ಅದು ಕೊಳಲು ನುಡಿಸುವವ ಮನಸ್ಸನ್ನು ಮುಟ್ಟಬೇಕು.  45 ವರ್ಷದ ಅನುಭವದಿಂದ ಕೊಳಲು ತಯಾರು ಮಾಡಲು ಎರಡು ಗಂಟೆ ಸಾಕಾಗುತ್ತದೆ, ಆದರೆ ಅದನ್ನು ಮತ್ತೆ ಶೃತಿ ಶುದ್ಧವಾಗಿಸಲು ಒಂದು ವಾರವೇ ಹಿಡಿಯುತ್ತದೆ. ಅದೊಂದು ತಪಸ್ಸಿನಂತೆ, ಇಂದು ತಯಾರಿಸಿದ ಕೊಳಲು, ನಾಳೆ ಅದರ ಶೃತಿಯೇ ತಪ್ಪಿರುತ್ತದೆ, ಮತ್ತೆ ಪುನಃ ಅದನ್ನು ಸರಿ ಮಾಡಬೇಕು, ಒಂದು ವಾರದ ತನಕ ಇದರ ಸ್ವರ ಶೃತಿ ಬದ್ಧ ಮಾಡುವ ಕೆಲಸವೇ ಆಗುತ್ತದೆ.

ಹೆಗಡೆಯವರೇ ಹೇಳುವಂತೆ, ಕೊಳಲು ಮಾಡ ಹೊರಟ ಹಿಂದೆ ಇದ್ದ ಮುಖ್ಯ ಉದ್ದೇಶವಿದು – ನಮ್ಮ ಬೆರಳುಗಳ ನಡುವೆ ನಾಚುರಲ್ ಆಗಿ ಒಂದು ಅಂತರವಿರುತ್ತದೆ, ಆದರೆ ಕೊಳಲಿಗೂ ನಮ್ಮ ಬೆರಳುಗಳ ಅಂತರಕ್ಕೂ ಮ್ಯಾಚ್ ಆಗದೇ ಹೋದಾಗ ನುಡಿಸುವವನ ಸ್ಥಿತಿ ಬಹಳ ಶೋಚನೀಯ, ಆಗ ಆಗುತ್ತಿದ್ದುದೂ ಇದೇ. ಆತ ವಿಪರೀತ ಉಸಿರು ಹಾಕಿ, ಕಷ್ಟಪಟ್ಟು ಶೃತಿ ಸೇರಿಸಬೇಕು, ಜೊತೆಗೆ ಈ ಬೆರಳುಗಳ ಅಂತರದ ತೊಂದರೆ. ಆದರೆ ಇವರು ತಯಾರಿಸುತ್ತಿರುವ ಕೊಳಲುಗಳಲ್ಲಿ ಇದ್ಯಾವ ತೊಂದರೆಯೂ ಇಲ್ಲ. ಅದಕ್ಕೇ ನೋಡಿ ಕಲಾವಿದರಿಗೆಲ್ಲರಿಗೂ ಇವರು ಅಚ್ಚು ಮೆಚ್ಚು.

ಅವರ ಜೊತೆ ಮಾತನಾಡಿದ ನನಗೆ ನಿಜವಾಗಿಯೂ ಒಂದಿಷ್ಟು ಹೊತ್ತು ಕೂತುಕೊಂಡು ಯೋಚನೆ ಮಾಡುವಂತೆ ಮಾಡಿದ ಮೂರು ವಿಷಯಗಳನ್ನು ಇಲ್ಲಿ ಹೇಳದಿದ್ದರೆ ತಪ್ಪಾದೀತು,

ಮೊದಲನೆಯದಾಗಿ, ನೀವು ಇಷ್ಟು ವರ್ಷದಿಂದ ಕಲಾ ಸೇವೆ ಮಾಡ್ತಾ ಇದ್ದೀರಲ್ಲ, ಯಾರಾದ್ರೂ ನಿಮ್ಮನ್ನು ಗುರುತಿಸಿದ್ದು ಇದ್ಯಾ, ಪ್ರಶಸ್ತಿ ಬಂದಿದ್ಯಾ ಅಂದಾಗ ಅವರು ಹೇಳಿದ್ದಿಷ್ಟೇ: ನೋಡು, ನನಗೆ ಪ್ರಶಸ್ತಿ ಬೇಕಿಲ್ಲ, ಅದರ ಹಿಂದೆ ಹೋಗಿಯೂ ಇಲ್ಲ, ವರ್ಷದ ಹಿಂದೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಹೆಸರನ್ನು ನೀಡಿದ್ದರು, ನಾನು ಅದರ ಹಿಂದೆ ಹೋಗಿಲ್ಲ ನೋಡು ಆ ಪ್ರಶಸ್ತಿ ನಂಗೆ ಸಿಕ್ಕಿರಲಿಲ್ಲ. ಸುಮಾರು ವರ್ಷದ ಹಿಂದೆ ರಾಷ್ಟ್ರ ಪ್ರಶಸ್ತಿ ಬಂದಿತ್ತು, ಅದ್ಯಾವುದೋ ಫೇಕ್ ಕೇಸ್’ನಿಂದಾಗಿ ಅದು ಹಿಂದೆ ಹೋಗಿತ್ತು, ಆದರೆ ನಾನು ಮತ್ತೆ ಅದರ ಹಿಂದೆ ಹೋಗಲಿಲ್ಲ. ಇದಕ್ಕೆ ನನಗೆ ಸಂತೋಷವೇ ಇದೆ ನಾನೇ ಹಿಂದೆ ಬಿದ್ದು ಪ್ರಶಸ್ತಿ ತಗೋಳೋದ್ರಿಂದ ಕಲಾವಿದರು ನನ್ನ ಕೊಳಲನ್ನು ಗುರುತಿಸಿ ಮನೆಗೆ ಬಂದು ಹೆಗಡೇರೆ ನೀವು ಮಾಡಿದ ಕೊಳಲೇ ಬೇಕು ಅಂತ ತಗೊಂಡು ಹೋಗ್ತಾರಲ್ಲ ಅದರ ಆನಂದವೇ ದೊಡ್ಡದು ಅಂತ.

ಎರಡನೆಯದು, ನಿಮ್ಗೆ ಒಂದು ಕೊಳಲಿಗೆ ಸರಿ ಸುಮಾರು ಆರ್ಥಿಕವಾಗಿ ಎಷ್ಟು ಖರ್ಚಾಗುತ್ತೆ ಅಂದರೆ, ಅಯ್ಯೋ ಈ ದುಡ್ಡು ಯಾರಿಗೆ ಬೇಕು ಹೇಳು, ಟೈಮ್ ಇದೆಯಲ್ಲಾ ಅದು ಮುಖ್ಯ. ಹಣ ಇಲ್ಲದಿದ್ದರೂ ಸರಿ, ಆದರೆ ಈ ಶೃತಿ ಶುದ್ಧವಾದ ಕೊಳಲು ತಯಾರಿಸಲು ಬೇಕಾಗುವ ಸಮಯವೇ ನನಗೆ ಮುಖ್ಯ ಅಂತ. ಅಲ್ಲಿಗೆ ನಾನು ಮೌನಿಯಾದೆ. ಮಾತೇ ಇರಲಿಲ್ಲ ನನ್ನಲ್ಲಿ…

ಕೊನೆಯದು, ಅಳವಡಿಸಿಕೊಳ್ಳಲೇ ಬೇಕಾದ್ದು, ನಮ್ಮಲ್ಲಿ ಎಲ್ಲರಿಗೂ ಅನ್ವಯಿಸುವಂತದ್ದು, ಅದು ನಾವು ಯಾವುದೇ ವಿಭಾಗದಲ್ಲಿ ಕಲಿಯುತ್ತಿರಬಹುದು ಏನೇ ಕೆಲಸ ಮಾಡುತ್ತಿರಬಹುದು ಆದರೆ ಇವರು ಹೇಳಿದ ಈ ಮಾತು ಎಂದಿಗೂ ಸತ್ಯ : ಏನೇ ಮಾಡಿ ಅದರಲ್ಲಿ ಮಾಸ್ಟರ್ ಆಗಿ, ಅದು ಸಂಗೀತವೇ ಆಗಿರಬೇಕಿಲ್ಲ, ಕೃಷಿಯಾದರೂ ಅಷ್ಟೇ, ಇಂಜಿನಿಯರ್ ಆದರೂ ಅಷ್ಟೇ!  ಮಾಸ್ಟರ್ ಆದರೆ ಮಾತ್ರ ಅದಕ್ಕೆ ಬೆಲೆ ಅಂತ. ಒಂದು ಉದಾಹರಣೆ ಕೂಡಾ ಕೊಟ್ಟರು, ಭೀಮ್ ಸೇನ್ ಜೋಷಿ ಅವರು ಏಳು ವರ್ಷದಲ್ಲಿ ಮೂರು ರಾಗಗಳ ಅಧ್ಯಯನ ಮಾಡಿದ್ದೆ ಅಂತ ಒಮ್ಮೆ ಹೇಳಿದ್ರಂತೆ, ಜೋಷಿ ಅಂತಹಾ ಕಲಾವಿದರೊಬ್ಬರು ಈ ಮಾತು ಹೇಳಿದಾಗ ಅರ್ಥ ಮಾಡ್ಕೊಳ್ಳಿ ಸಂಗೀತ ಎನ್ನುವುದು ತಪಸ್ಸು. ಇವತ್ತು ವಾರಕ್ಕೊಂದು ರಾಗ, ಮತ್ತೊಂದಿಷ್ಟು ಕಲಿತು ಅವರೇನೋ ದೊಡ್ಡ ಸಂಗೀತಗಾರರಾಗಿಯೇ ಬಿಟ್ಟರು ಎನ್ನುವವರಿದ್ದಾರೆ ಆದರೆ ಸಂಗೀತ ಹಾಗಲ್ಲ, ಕಲಿತರೆ ಅದರಲ್ಲಿ ಮಾಸ್ಟರ್ ಆಗುವಷ್ಟು ಕಲಿಯಬೇಕು. ಹಾಗಿದ್ದರೆ ಮಾತ್ರ ನಿಜವಾದ ಅರ್ಥದಲ್ಲಿ ಕಲಾವಿದ ಆಗಬಹುದು ಎಂದು. ಇಲ್ಲ ಅಂದ್ರೆ ಜಾಕ್ ಆಫ್ ಆಲ್ ಮಾಸ್ಟರ್ ಆಫ್ ನನ್ ಆಗಿ ಬಿಡ್ತೇವೆ!

ಡಿ.ವಿ.ಜಿ.ಯವರು ಬರೆದ ಈ ಕೆಳಗಿನ ಸಾಲುಗಳು ಅಕ್ಷರಶಃ ಮಂಜುನಾಥ ಹೆಗಡೆಯವರಿಗೆ ಅನ್ವಯವಾಗುತ್ತದೆ ಎಂದರೆ ತಪ್ಪಾಗಲಾರದೇನೊ..

ವನಸುಮದೊಲೆನ್ನ ಜೀವನವು ವಿಕಸಿಸುವಂತೆ

ಮನವನನುಗೊಳಿಸು ಗುರುವೇ – ಹೇ ದೇವ

ಜನಕೆ ಸಂತಸವೀವ ಘನನು ನಾನೆಂದೆಂಬ

ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು..  ಮೌನದಿಂ ಬಿರಿದು ನಿಜ

ಸೌರಭವ ಸೂಸಿ ನಲವಿಂ. ತಾನೆಲೆಯ ಪಿಂತಿರ್ದು..

ದೀನತೆಯ ತೋರಿ ಅಭಿಮಾನವನು ತೊರೆದು ಕೃತ ಕೃತ್ಯತೆಯ ಪಡೆವಂತೆ..

ಪುಟ್ಟ ಹಳ್ಳಿಯಲ್ಲಿ ಜೀವನನ್ನು ಸಾಗಿಸುತ್ತಾ, ಎಲ್ಲಿಯೂ ತಾವು ಕೊಳಲು ತಯಾರಿಸುವುದರ ಬಗ್ಗೆ ಜಾಹೀರಾತು ನೀಡಿಕೊಳ್ಳದೆ, ತಾನು ಮಾಡುತ್ತಿರುವ ಕೊಳಲಿನಿಂದಲೇ ಜನರು ಆನಂದಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಬೀಗದೆ, ಪ್ರಶಸಿಗಳ ಹಿಂದೆ ಓಡದೆ, ಬಂದ ಪ್ರಶಸ್ತಿಯು ಕೈ ಸೇರದಿದ್ದಾಗಲೂ ಬೇಸರಿಸದೇ ತಮ್ಮ ಕಾರ್ಯದಲ್ಲಿ ತೊಡಗಿದ್ದಾರೆ… ಇವರದ್ದು ನಿತ್ಯ ಸೇವೆ, ಇವರ ಕಲಾಸೇವೆ ಇಂದಿಗೂ ನಡೆಯುತ್ತಿದೆ. ಕಲೆ ಎನ್ನುವುದನ್ನು ಮುಂದುವರಿಸುವುದಷ್ಟೇ ಇವರ ಇಷ್ಟ.

ವನಸುಮದೊಳು ಜೀವನವು ವಿಕಸಿಸುವಂತೆ, 45 ವರ್ಷಗಳಿಂದ, ಶಿರಸಿಯ ಕಾನನದಲ್ಲಿ  ಮೌನವಾಗಿ ಅರಳಿದ ಕೊಳಲಿನ ನಾದದ ಸುಶ್ರಾವ್ಯತೆ ಸಾಗರದಾಚೆಗೂ ತಲುಪಿ ಒಂದು ಸಾರ್ಥಕತೆಯನ್ನು ಪಡೆಯುತ್ತಿದೆ ಆದರೆ ಅದರ ತಿಳಿವು ನಮ್ಮಲ್ಲಿ ಹಲವರಿಗಿಲ್ಲ..

ಮುಂದೊಂದು ದಿನ ಕೊಳಲಿನ ನಾದ ಕೇಳಿದಾಗ ಮಂಜುನಾಥ ಹೆಗಡೆಯವರ ನೆನಪಾದರೆ, ಬರೆದ ಸಾರ್ಥಕತೆ ನನ್ನಲ್ಲಿ…

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!