ಪ್ರಚಲಿತ

ಛೆ! ಸ್ವಲ್ಪವಾದರೂ ಮನಃಸಾಕ್ಷಿ ಇರಬೇಕಾಗಿತ್ತು!

ಸಾಹಿತಿಗಳ ಪ್ರಶಸ್ತಿ ವಾಪಸಾತಿ ಪರ್ವ ದೇಶಾದ್ಯಂತ ಸುದ್ದಿ ಮಾಡುತ್ತಿದೆ. ಯಾರೋ ಒಬ್ಬರು ಆರಂಭಿಸಿದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕಾಗಿ ಸಾಹಿತಿಗಳೆಲ್ಲಾ ಬೀದಿಗೆ ಬಂದಿದ್ದಾರೆ. ವಾಸ್ತವದಲ್ಲಿ ಇವರ ನಿಜವಾದ ವೈಚಾರಿಕ ಗುಣಮಟ್ಟ ಈಗ ಜಗಜ್ಜಾಹೀರಾಗುತ್ತಿದೆ.
ಮತ್ತಿನ್ನೇನು? ಕಲ್ಬುರ್ಗಿ ಹತ್ಯೆಗೂ ಕೇಂದ್ರ ಸರಕಾರಕ್ಕೂ ಎಲ್ಲಿಯ ಸಂಬಂಧ? ಎಲ್ಲಿಯ ದಾದ್ರಿ, ಎಲ್ಲಿಯ ಮೋದಿ? ಒಂದಕ್ಕೊಂದು ಸಂಬಂಧವೇ ಇರದ ವಿಷಯಗಳಿಗೆಲ್ಲಾ ನಮ್ಮ ಸೋ ಕಾಲ್ಡ್ ವಿಚಾರವಾಧಿಗಳೆಲ್ಲಾ ಅನೈತಿಕ ಸಂಬಂಧವನ್ನು ಕಲ್ಪಿಸಿ ಪ್ರಶಸ್ತಿ ವಾಪಾಸ್ ಮಾಡುತ್ತಿದ್ದಾರಲ್ಲಾ? ಇದು ಬರೀ ವಿಚಾರವ್ಯಾಧಿಯಷ್ಟೇ!

“ಸಿಧ್ಧರಾಮಯ್ಯನವರು ಕಲ್ಬುರ್ಗಿ ಹತ್ಯೆ ಕುರಿತು ಮಾತನಾಡಿದ್ದು, ನರೇಂದ್ರ ಮೋದಿ ದಾದ್ರಿ ಪ್ರಕರಣದ ಕುರಿತು ಮಾತನಾಡಿದ್ದು ನಾವು ಮಾಡುತ್ತಿರುವ ಪ್ರಶಸ್ತಿ ವಾಪಾಸ್ ಚಳುವಳಿಂದಲೇ” ಎಂದಿದ್ದಾರೆ ಮೊನ್ನೆ ಪ್ರಶಸ್ತಿ ವಾಪಾಸ್ ಮಾಡಿರುವ ಸಾಹಿತಿ ಕುಂ.ವೀರಭದ್ರಪ್ಪನವರು. ಅರೆ! ಇವರುಗಳ ಬಾಯಿಬಿಡಿಸುವುದಷ್ಟೇ ನಿಮ್ಮ ಗುರಿಯಾ ಸಾರ್? ಕೊಲೆಗಾರರನ್ನು ಹಿಡಿಯದೇ ಬರೀ ಮಾತನಾಡಿದರೇನು ಬಂತು ಸಾರ್ಥಕ? ಅಷ್ಟಕ್ಕೂ ನೀವು ಪ್ರಶಸ್ತಿಗಳನ್ನು ವಾಪಾಸ್ ಮಾಡಿದ ಕಾರಣಕ್ಕೆ ಕೊಲೆಗಾರರನ್ನು ಹಿಡಿಯಲು ಸಹಾಯವಾಗುತ್ತದೆ ಎಂದು ನಂಬುತ್ತೀರಾ ನೀವು? ಅಥವಾ ಮುಂದೆ ಪೋಲೀಸರು ಕೊಲೆಗಾರರನ್ನು ಹಿಡಿದಾಗ “ಇದು ನಾವು ಮಾಡಿದ ಪ್ರಶಸ್ತಿ ವಾಪಾಸ್ ಚಳುವಳಿಯಿಂದಲೇ ಸಾಧ್ಯವಾಗಿದ್ದು” ಎಂದು ಕ್ರೆಡಿಟ್ಟು ತೆಗೆದುಕೊಳ್ಳುವ ಸ್ಕೀಮಾ ನಿಮ್ಮದು? ಅಮೇಲೆ ವಾಪಾಸ್ ಮಾಡಿರುವ ಪ್ರಶಸ್ತಿಗಳನ್ನು ವಾಪಾಸ್ ಪಡೆದುಕೊಳ್ಳುವ ಐಡಿಯಾ ಏನಾದ್ರೂ ಇದೆಯಾ? ಚಳುವಳಿಯ ಮೂಲಕ ಬಳುವಳಿ ಪಡೆದುಕೊಳ್ಳುವ ನಿಮ್ಮದು ಅದೆಂತಹಾ ವೈಚಾರಿಕತೇರಿ?

ಕರ್ನಾಟಕದಲ್ಲಿ ಕೊಲೆ ಆದರೆ ಅದಕ್ಕೆ ಅಲ್ಲಿನ ರಾಜ್ಯ ಸರ್ಕಾರದ ಅಡಿಯಲ್ಲಿರುವ ಗೃಹ ಇಲಾಖೆ, ಮುಖ್ಯಮಂತ್ರಿ, ಸಚಿವರು ಕಾರಣರಾಗಿರುತ್ತಾರೆ. ಎಲ್ಲೋ ಉತ್ತರ ಪ್ರದೇಶದಲ್ಲಿ ದೌರ್ಜನ್ಯ ಆದರೆ ಅದಕ್ಕೆ ಅಲ್ಲಿನ ಸರಕಾರವೇ ಹೊಣೆ ಆಗಿರುತ್ತದೆ ಎಂಬುವ ವಿಷಯ ಕಾಮನ್ ಸೆನ್ಸ್ ಇರುವ ಯಾವನಿಗಾದರೂ ತಿಳಿದಿರುತ್ತದೆ. ಮತ್ತೆ ನರೇಂದ್ರ ಮೋದಿ ಬಾಯಿ ಬಿಡುವ ಪ್ರಶ್ನೆಯೆಲ್ಲಿಂದ ಬಂತು ಇದರಲ್ಲಿ? ಹೆಚ್ಚೆಂದರೆ ಆಯಾ ರಾಜ್ಯ ಸರಕಾರಗಳಿಂದ ಮೋದಿ ವರದಿ ಕೇಳಬಹುದಷ್ಟೇ. ಅದು ಬಿಟ್ಟು ಕೊಲೆ ಆರೋಪಿಯನ್ನು ಮೋದಿಯೇ ಪತ್ತೆಹಚ್ಚಬೇಕಾ? ಕಳೆದು ಹೋದ ಎಮ್ಮೆಯನ್ನು ಹುಡುಕಲು ಇಡೀ ಪೋಲೀಸ್ ಇಲಾಖೆಯನ್ನೇ ಛೂ ಬಿಟ್ಟ ಆಜಂ ಖಾನನಂತೆ ಕೇಂದ್ರದ ಎಲ್ಲಾ ಭದ್ರತಾ ಸಿಬ್ಬಂದಿಗಳನ್ನು ಮೋದಿ ಛೂ ಬಿಡಬೇಕಾ? ಇಂತಹಾ ಅತೀ ಸಾಮಾನ್ಯ ವಿಷಯಗಳೂ ಸಾಹಿತಿಗಳಿಗೆ ತಿಳಿಯುವುದಿಲ್ಲವೇ?

ನಾಚಿಕೆಯಾಗಬೇಕು ನಿಮಗಳಿಗೆ ಮತ್ತು ನಿಮ್ಮ ಸಿದ್ಧರಾಮಯ್ಯನವರ ಸರಕಾರಕ್ಕೆ. ಅಧಿಕಾರಕ್ಕೆ ಬಂದು ಒಂದು ದಿನ ಸರಿಯಾಗಿ ನೆಮ್ಮದಿಯ ಆಡಳಿತ ನೀಡಿಲ್ಲ. ಜನಸಾಮಾನ್ಯರಿಗೆ ಸುರಕ್ಷತೆಯ ಅಭಯ ನೀಡಿಲ್ಲ. ಇಬ್ಬರು ಮಾಡಿದರೆ ಅದು ಹೇಗೆ ಗ್ಯಾಂಗ್’ರೇಪ್ ಆಗುತ್ತದೆ ಎಂದು ಕೇಳುವ ಸರ್ಕಾರದ, ನಮ್ಮನ್ನು ಕಾಯುವ ಪೋಲೀಸರ ಹಿತ ಕಾಯಲಾಗದ ಗೃಹ ಇಲಾಖೆಯ ಆಳ್ವಿಕೆಯಲ್ಲಿ ನಾವಿದ್ದೇವೆ. ಬೆಂಗಳೂರಿನಂತಹ ಬೆಂಗಳೂರಿನಲ್ಲೇ ಹಾಡುಹಗಲೇ ಸರಗಳ್ಳರ ಹಾವಳಿ, ಮಕ್ಕಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೋಮು ದ್ವೇಷಕ್ಕಾಗಿ ಇಲ್ಲಿ ನಡೆಯುತ್ತಿರುವ ಕೊಲೆಗಳೆಲ್ಲಾ ಲೆಕ್ಕಕ್ಕೇ ಇಲ್ಲ. ಇದೆಲ್ಲದರ ಕುರಿತಾಗಿ ನೀವೆಂದಾದರೂ ಬಾಯಿ ಬಿಟ್ಟಿದ್ದೀರಾ? ಸಿದ್ಧರಾಮಯ್ಯನವರನ್ನು ಹೊಣೆ ಮಾಡಿದ್ದೀರಾ? ಮಲ್ಲಿಕಾರ್ಜುನ ಬಂಡೆಯವರನ್ನು ಹತ್ಯೆಗೈದಾಗ, ಸಮಯಕ್ಕೆ ತಕ್ಕ ಸೂಕ್ತ ತನಿಖೆಯನ್ನು ಸರ್ಕಾರ ಕೈಗೊಳ್ಳದೇ ಇದ್ದಾಗ ನೀವೆಂದಾದರೂ ಪ್ರಶಸ್ತಿ ಹಿಂದಿರುಗಿಸಿದ್ದೀರಾ? ಬರೀ ವೈಚಾರಿಕ ಅಥವಾ ಸಾಹಿತ್ಯದ ದೃಷ್ಟಿಕೋನದಿಂದ ನೋಡಬೇಡಿ. ಮಾನವೀಯ ದೃಷ್ಟಿಕೋನದಲ್ಲೂ ನೋಡಿ. ಬಂಡೆಯ ಸಾವಿನ ಕುರಿತು ಈಗ ಮಾಡುತ್ತಿರುವಂತೆ ಪ್ರತಿಭಟಿಸದಿದ್ದದ್ದಕ್ಕೆ ನಿಮ್ಮ ಮನಸ್ಸು ವಿಷಾಧಿಸದೆ ಇರದು. ಬಿಡಿ, ನಿನ್ನೆ ತಾನೆ, ಎಸ್ಸೈ ಜಗದೀಶ್ ಎಂಬುವವರನ್ನು ಕಳ್ಳರು ಇರಿದು ಕೊಂದರು. ನಿಮ್ಮಲ್ಲಿ ಎಷ್ಟು ಜನ ಇದಕ್ಕಾಗಿ ಮಿಡಿಯುವವರಿದ್ದೀರಿ? ಕೊಲೆಗಾರರನ್ನು ಶೀಘ್ರ ಹಿಡಿಯುವ ಸಲುವಾಗಿ, ಸರಕಾರದ ಮೇಲೆ ಒತ್ತಡ ತರುವುದಕ್ಕಾಗಿ ಎಷ್ಟು ಜನ ಪ್ರಶಸ್ತಿಗಳನ್ನು ಹಿಂಪಡೆಯುವವರಿದ್ದೀರಿ? ತಪ್ಪಿಯೂ ನೀವು ಆ ಕೆಲಸ ಮಾಡುವುದಿಲ್ಲ ಎಂದು ನಮಗೆ ಚೆನ್ನಾಗಿ ಗೊತ್ತಿದೆ. ನೀವು ಈ ಕಾರಣಕ್ಕಾಗಿ ಪ್ರಶಸ್ತಿಗಳನ್ನು ಹಿಂಪಡೆಯದಿದ್ದರೂ ಪರವಾಗಿಲ್ಲ. ಆದರೆ ಇದಕ್ಕೂ ಮೋದಿಯನ್ನು ಹೊಣೆ ಮಾಡಬೇಡಿ. ಜಗದೀಶ್’ಗೆ ನಲುವತ್ತು ಭಾರಿ ಅಪರಿಚಿತ ಮಹಿಳೆಯಿಂದ ಕರೆ ಬಂದಿತ್ತೆಂದು ಷರಾ ಬರೆದು ಬಿಡಬೇಡಿ ಪ್ಲೀಸ್!

ಸಾಹಿತ್ಯ ಲೋಕದಲ್ಲಿ ಆಗುತ್ತಿರುವ ದಬ್ಬಾಳಿಕೆಯನ್ನೇ ತೆಗೆದುಕೊಳ್ಳೋಣ. ದೇವರ ದಾಸಿಮಯ್ಯ ಅಲ್ಲ ಜೇಡರ ದಾಸಿಮಯ್ಯ ಆಗಬೇಕೆಂದು ಸಂಶೋಧನೆ ನಡೆಸಿ ತನ್ನ ಅಭಿಪ್ರಾಯ ಮಂಡಿಸಿದ ಹಿರಿಯ ಸಂಶೋಧಕ ಚಿದಾನಂದ ಮೂರ್ತಿಯವರನ್ನು ಹೇಗೆ ಸಭೆಯಿಂದ ಹೊರದಬ್ಬಲಾಯಿತು? ಅಭಿಪ್ರಾಯ ಸ್ವಾತಂತ್ರ್ಯಕ್ಕೆ ತುಂಬಾನೇ ಬೆಲೆಕೊಡುವ ಸನ್ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಆ ಹಿರಿಜೀವವನ್ನು ಹೊರದಬ್ಬಲಾಯಿತೆಂಬುದು ನಿಮಗೆಲ್ಲಾ ತಿಳಿದಿರಲಿ. ಇದೆಲ್ಲ ಸಾಹಿತ್ಯ ಲೋಕದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯೆಂದು ಅನಿಸುವುದಿಲ್ಲವೇ ನಿಮಗೆ? ಚಿದಾನಂದ ಮೂರ್ತಿಗಳಿಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಸ್ವಾತಂತ್ರ್ಯವಿಲ್ಲವೇ ಹಾಗಾದರೆ? ಮಾಸ್ಟರ್ ಹಿರಣ್ಣಯ್ಯನವರನ್ನು ಈ ಕಾಂಗ್ರೆಸ್ಸ್’ನವರು ನಡೆಸಿಕೊಂಡ ರೀತಿಯಂತು ನಮಗೆಲ್ಲಾ ಗೊತ್ತೇ ಇದೆ. ಇದರ ಬಗ್ಗೆ ಸೌಜನ್ಯಕ್ಕೂ ವಿಷಾಧ ವ್ಯಕ್ತಪಡಿಸದ ಮುಖ್ಯಮಂತ್ರಿಗಳ ವಿರುಧ್ಧ ಪ್ರತಿಭಟಿಸಿ ಪ್ರಶಸ್ತಿ ವಾಪಾಸ್ ಮಾಡಬೇಕೆಂದು ನಿಮಗ್ಯಾರಿಗೂ ಅನಿಸಲಿಲ್ಲವೇ?

ಸದ್ಯ ನಮ್ಮನ್ನು ಕಾಡುತ್ತಿರುವ ಭೀಕರ ಸಮಸ್ಯೆಯ ವಿಷಯಕ್ಕೆ ಬರುತ್ತೇನೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಐನೂರಕ್ಕಿಂತಲೂ ಮಿಗಿಲಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಭಾರಿ. ಇನ್ನೂ ಮಾಡುತ್ತಲೇ ಇದ್ದಾರೆ ಬಹುಷಃ ಸಿದ್ಧರಾಮಯ್ಯ ಸರಕಾರದ ಸಾರ್ವಕಾಲಿಕ ದಾಖಲೆಯಿದು ಎಂದರೆ ತಪ್ಪಾಗಲಾರದು. ಮೇ, ಜೂನಿನಲ್ಲೇ ಆರಂಭವಾದ ಈ ಆತ್ಮಹತ್ಯಾ ಸರಣಿಗಳನ್ನು ತಡೆಯುವುದಕ್ಕೆ ನಮ್ಮ ಸರಕಾರ ಕೈಗೊಂಡಿರುವ ಕ್ರಮಗಳಾದರೂ ಏನು? ನಿಮ್ಮ ಜೊತೆ ನಾವಿದ್ದೇವೆ, ಪರಿಹಾರ ಕೊಡುತ್ತೇವೆ ಎನ್ನುವಂತಹ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದು ಬಿಟ್ಟರೆ ಬೇರೇನೂ ಇಲ್ಲ. ರೈತರ ಆತ್ಮಹತ್ಯೆಯ ವಿಷಯಗಳು ನಿತ್ಯವೂ ಮಾಧ್ಯಮಗಳಲ್ಲಿ ಬಂದು ಅದು ದೇಶಾದ್ಯಂತ ಸುದ್ಧಿಯಾಗುವವರೆಗೂ ನಮ್ಮ ಸರ್ಕಾರ ಮಲಗಿತ್ತು. ಮುಖ್ಯಮಂತ್ರಿಯಾದಿಯಾಗಿ ಯಾವ ಸಚಿವರುಗಳೂ ಅತ್ತ ಮುಖ ಮಾಡಿ ಮಲಗಲಿಲ್ಲ. ಊರು ಸೂರೆ ಹೋದ ಬಳಿಕ ಕೋಟೆ ಬಾಗಿಲು ಹಾಕಿದಂತೆ ಈಗ ರಾಹುಲ್ ಗಾಂಧಿ ಕೈಯಲ್ಲಿ ಪ್ಯಾಕೇಜು ಕೊಡಿಸಿದ ಕೂಡಲೇ ಅದೆಷ್ಟು ಆತ್ಮಹತ್ಯೆಗಳು ನಿಲ್ಲುತ್ತವೆಯೋ ಗೊತ್ತಿಲ್ಲ. ಆದರೆ ಇದೇ ಕೆಲಸವನ್ನು ಮೊದಲೇ ಮಾಡಿರುತ್ತಿದ್ದರೆ ಹಲವರ ಜೀವ ಉಳಿಯುತ್ತಿತ್ತು. ಆದರೆ ಸಿದ್ಧರಾಮಯ್ಯನವರ ಸರಕಾರದಿಂದ ಅಂತಹಾ ಕೆಲಸವಾಗಲಿಲ್ಲ. ನನ್ನ ಪ್ರಶ್ನೆಯೇನೆಂದರೆ, ಕನಿಷ್ಟ ಪಕ್ಷ ಸಾಹಿತ್ಯ ಲೋಕದವರಿಂದಲೂ ಸರ್ಕಾರವನ್ನೆಚ್ಚರಿಸುವ ಕೆಲಸವಾಗಲಿಲ್ಲ. ಸರ್ಕಾರದ ನಿಧಾನ ನಡೆಯನ್ನು ಪ್ರತಿಭಟಿಸಿ ಯಾವೊಬ್ಬ ಸಾಹಿತಿಯೂ ಪ್ರಶಸ್ತಿಯನ್ನು ಹಿಂದಿರುಗಿಸಲಿಲ್ಲ. ಸರಕಾರದ ಮೇಲೆ ಯಾರೂ ಒತ್ತಡ ತರಲಿಲ್ಲ. ಯಾಕೆ? ನಿಮ್ಮ ಕ್ಷೇತ್ರದವರ ಮೇಲೆ ದಾಳಿಯಾದ್ರೆ ಮಾತ್ರ ನೀವು ಮಾತನಾಡುವುದಾ? ನನ್ನ ತಿಳುವಳಿಕೆಯ ಪ್ರಕಾರ ಸಾಹಿತ್ಯ ಎಲ್ಲೆ ಮೀರಿದ್ದು. ದೇಶ ಭಾಷೆ ಜಾತಿಗಳ ನಿರ್ಬಂಧವಿಲ್ಲದೆ ಜನರ ಸಮಸ್ಯೆಗಳ ಪ್ರತಿಬಿಂಬವಾಗಬೇಕು ಸಾಹಿತ್ಯ. ಆದರೆ ನೀವುಗಳು ಯಾಕೆ ಸಾಹಿತ್ಯವನ್ನು ನಿಮ್ಮ ಸಾಹಿತ್ಯ ವಲಯಕ್ಕೇ ಸೀಮಿತಗೊಳಿಸುತ್ತಿದ್ದೀರಿ? ಬಂಡೆ, ಜಗದೀಶರಂತಹ ಅಧಿಕಾರಿಗಳ ಕೊಲೆ, ಅತ್ಯಾಚಾರ ಸರಣಿಗಳು, ನಿಮ್ಮ ಕಣ್ಣೆದುರೇ ಸಂಭವಿಸಿದ ನೂರಾರು ರೈತರ ಆತ್ಮಹತ್ಯೆಗಳಿಗೆ ಮಿಡಿಯದ ಆ ಪ್ರಶಸ್ತಿಗಳು ಇದ್ದರೆಷ್ಟು ಹೋದರೆಷ್ಟು? ಛೇ, ಸ್ವಲ್ಪವಾದರೂ ಮನಃಸಾಕ್ಷಿಯಿರಬೇಕಾಗಿತ್ತು ನಿಮಗೆಲ್ಲಾ!.

ಇನ್ನೂ ಕೆಲವು ಪ್ರಶ್ನೆಗಳಿವೆ. ದಾದ್ರಿಯಲ್ಲಿ ನಡೆದಂತಹ ಘಟನೆಗಳು ದೇಶದಲ್ಲಿ ಮೊದಲ ಭಾರಿಗೆ ನಡೆಯುತ್ತಿರುವುದಾ? ನರೇಂದ್ರ ಮೋದಿ ಬಂದ ನಂತರವೇ ಇದೆಲ್ಲಾ ಶುರುವಾಗಿದ್ದಾ? ಕಾಂಗ್ರೆಸ್ಸ್ ಸರಕಾರವಿದ್ದಾಗ ಒಮ್ಮೆಯೂ ಇಂತಹದ್ದು ನಡೆದೇ ಇಲ್ಲವೇ? ಅವಾಗೆಲ್ಲಾ ಪ್ರಧಾನಿಯನ್ನು ಹೊಣೆ ಮಾಡಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದೀರಾ? ಇದಕ್ಕೇನು ಹೇಳುತ್ತೀರಿ? “ಪ್ರತಿಭಟಿಸಬೇಕಿತ್ತು, ಆದರೆ ಕೆಲವರಷ್ಟೇ ಪ್ರತಿಭಟಿಸಿದರು” ಎಂದು ಹೇಳುತ್ತೀರಾ? ಈ ಮರ್ಯಾದಾ ಹತ್ಯೆ, ದಲಿತರಿಗೆ ಬಹಿಷ್ಕಾರ ಇವೆಲ್ಲಾ ಕಾಲಾದಿ ಕಾಲದಿಂದಲೂ ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಸ್ವಲ್ಪ ಮಟ್ಟಿಗೆ ನಮ್ಮ ರಾಜ್ಯದಲ್ಲೂ ಇದೆ. ಇದೊಂದು ಸಂಪ್ರದಾಯದಂತೆ ನಡೆದು ಬಂದಿದೆಯೇ ಹೊರತು, ಇದು ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದಾರೆಂದು ಭುಗಿಲೆದ್ದ ಜನರ ಆಕ್ರೋಶವಂತೂ ಖಂಡಿತಾ ಅಲ್ಲ. ಅಷ್ಟಕ್ಕೂ ಪೋಲೀಸರು ಆ ಕುಟುಂಬಗಳ ಮೇಲೆ ದೌರ್ಜನ್ಯವೆಸಗಲೇ ಇಲ್ಲ, ಆ ಕುಟುಂಬಗಳೇ ಬೆತ್ತಲಾಗಿದ್ದು ಎಂದು ರಾಷ್ಟ್ರೀಯ ಮಾಧ್ಯಮಗಳು ಸತ್ಯವನ್ನು ಬಯಲು ಮಾಡಿವೆಯಲ್ಲಾ? ಮತ್ತಿನ್ನೆಂತಹ ಪ್ರತಿಭಟನೆ ನಿಮ್ಮದು?

ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವವರನ್ನು ನಾವು ಕೇಳುತ್ತಿರುವ ಪ್ರಶ್ನೆಗಳಿವು. ನಾನೊಬ್ಬನೇ ಅಲ್ಲ, ಸಾವಿರಾರು ಜನ ಕೇಳುತ್ತಿದ್ದಾರೆ. “ಕೆಲವೊಂದು ಪ್ರಶ್ನೆಗಳಿಗೆ ನನಗೂ ಉತ್ತರಿಸುವುದು ಕಷ್ಟ” ಅಂತ ಮಾತ್ರ ಹೇಳಬೇಡಿ!

ಲಾಸ್ಟ್ ಪಂಚ್: ಅಗತ್ಯ ಬಿದ್ದರೆ ನೃಪತುಂಗ ಪ್ರಶಸ್ತಿಯನ್ನೂ, ಅದರೊಂದಿಗೆ ಸಿಕ್ಕಿದ ಏಳು ಲಕ್ಷ ರೂಗಳನ್ನೂ ಹಿಂದಿರಿಗಿಸುತ್ತೇನೆಂದು ಹೇಳಿದ್ದಾರಂತೆ ಕುಂ.ವೀರಭದ್ರಪ್ಪನವರು. ಅದು ನಿಜವೇ ಆಗಿದ್ದರೆ ಮೊದಲು ಆ ಕೆಲಸ ಮಾಡಲಿ. ಆದರೆ ಆ ಹಣವನ್ನು ಮಾತ್ರ ಯಾವುದಾದರೂ ರೈತ ಕುಟುಂಬಗಳಿಗೆ ನೀಡಲಿ. ಒಂದಷ್ಟು ಜೀವಗಳನ್ನುಳಿಸಿದ ಪುಣ್ಯವಾದರೂ ಸಿಕ್ಕೀತು. ಅನಗತ್ಯವಾಗಿ ಮೋದಿಯನ್ನು ಟೀಕಿಸುತ್ತಿರುವ ತಪ್ಪಿಗೆ ಪ್ರಾಯಶ್ಚಿತವೂ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!