ನನ್ನ ಬಳಿ ಸ್ಯಾಂಸಂಗ್ ಮೊಬೈಲ್ ಇದೆ. ಏಳು ವರ್ಷದ ಹಿಂದೆ ಕೊಂಡಾಗ ಅದರ ಬೆಲೆ ಏಳ್ನೂರು ರೂಪಾಯಿ! ಈಗ ಅದನ್ನು ಕೊಟ್ಟು ಅದರ ಮೇಲೆ ನಾನೇ ಏಳ್ನೂರರ ಭಕ್ಷೀಸು ಕೊಟ್ಟರೂ ಕೊಳ್ಳುವವರು ಯಾರೂ ಇರಲಿಕ್ಕಿಲ್ಲ! ಗೆಳೆಯರ ಗುಂಪಿನಲ್ಲಿ,ಪಾರ್ಟಿಗಳಲ್ಲಿ, ಬಸ್ಸು-ರೈಲುಗಳ ನೂಕುನುಗ್ಗಲುಗಳಲ್ಲಿ, ವಿಮಾನಕಟ್ಟೆಯ ಲೌಂಜುಗಳಲ್ಲಿ ನಾನದನ್ನು ಹೊರತೆಗೆದು ಕೈಯಲ್ಲಿ ಹಿಡಿದಾಗ ಸುತ್ತಲಿನವರು ಮಾನಸಿಕವಾಗಿ ಒಂದಡಿ ದೂರ ಹಾರಿಬಿಟ್ಟಿರುತ್ತಾರೆ. ಎಷ್ಟೋ ಜನ ಮೌನವಾಗಿ ಸಹಾನುಭೂತಿತೋರಿಸುತ್ತಾರೆ. ಕೆಲವರು ನಖಶಿಖಾಂತ ನನ್ನನ್ನು ಸ್ಕ್ಯಾನ್ ಮಾಡಿ ನನ್ನ ಬ್ಯಾಂಕ್ ಬ್ಯಾಲೆನ್ಸನ್ನು ಜರಡಿ ಹಿಡಿದರೆ ಎಷ್ಟು ಚಿಲ್ಲರೆ ಸಿಗಬಹುದು ಎಂದು ಲೆಕ್ಕ ಹಾಕುತ್ತಾರೆ. ಲೆಕ್ಕ ಮಾಡಿ ಅಕ್ಕಿ ಕಾಳು ಬೇಯಲಿಡುವ ಜಿಪುಣಾಗ್ರೇಸರ ಇರಬಹುದು ಎನ್ನುವುದು ಇನ್ನುಕೆಲವರ ಅನ್ನಿಸಿಕೆ. ಇವರೆಲ್ಲರ ದಿಟ್ಟಿಯ ಈಟಿಗಳು ನನ್ನನ್ನು ಚುಚ್ಚಿ ಸಾಯಿಸಿದರೂ ಅದು ಹೇಗೋ ನಾನೂ ನನ್ನ ಪ್ರೀತಿಯ ಬಡಪಾಯಿ ಮೊಬೈಲೂ ಇನ್ನೂ ವಿಚ್ಛೇದನಕ್ಕೆ ಅರ್ಜಿ ಹಾಕದೆ ಸಹಬಾಳ್ವೆ ಮಾಡುತ್ತಿದ್ದೇವೆ!
ಏಳು ವರ್ಷದ ಹಿಂದೆ, ಮೊಬೈಲು ಇನ್ನೂ ಜಗತ್ತಿನ ಐಷಾರಾಮಿ ಸಂಗತಿಯಾಗಿದ್ದಾಗ, ಹಿಂದುಮುಂದು ನೋಡದೆ ಇಪ್ಪತ್ತು ಸಾವಿರ ತೆತ್ತು ಒಂದು ಬೆಲೆಬಾಳುವ ಜಂಗಮವಾಣಿಯನ್ನು ಕೊಂಡುಬಿಟ್ಟಿದ್ದೆ! ಕೊಂಡ ಒಂದೇ ವಾರದಲ್ಲಿ ಅದು ಕಾಣೆಯಾಗಿಬಿಟ್ಟಿತ್ತು. ಆಗನಾನು ಮಾಡಿದ ಸಂಶೋಧನೆಯಲ್ಲಿ ತಿಳಿದುಬಂದ ಕೆಲ ವಿಚಾರಗಳು ನನ್ನನ್ನು ಬೆಚ್ಚಿಬೀಳಿಸಿದವು. 2007ರಲ್ಲೇ ಬೆಂಗಳೂರು ನಗರದಲ್ಲಿ ಮೊಬೈಲು ಕಳ್ಳತನ ಮುನ್ನೂರು ಕೋಟಿ ರೂಪಾಯಿಗಳ ವಹಿವಾಟಾಗಿತ್ತು! ‘ಪೋ-ಕೆಟ್ಟು’ ಮನಿ ಸಿಗದ ಹತಾಶ ಕಾಲೇಜುಹುಡುಗರು ಮತ್ತು ಸಂಸಾರಭಾರ ತೂಗಿಸಲು ಹೇಗಾದರೂ ದುಡ್ಡು ಸಂಪಾದನೆ ಮಾಡಬೇಕಾದ ಅನಿವಾರ್ಯತೆಗೆ ಸಿಕ್ಕಿಕೊಂಡ ಒಂದು ವರ್ಗದ ಹೆಂಗಸರು ಇದರಲ್ಲಿ ಮುಖ್ಯವಾಗಿ ತೊಡಗಿಕೊಂಡಿದ್ದರು. ಕಳೆದುಹೋದರೆ ಹುಡುಕಲು ಅನುಕೂಲವಾಗಲಿ ಎಂದುಪ್ರತಿ ಮೊಬೈಲಿಗೂ ಐಎಮ್ಐಇ ಎಂಬ ವಿಶೇಷ ಗುರುತಿನ ಸಂಖ್ಯೆ ಇರುತ್ತದೆ. ಇದನ್ನು ಆಯಾಯ ಮೊಬೈಲು ಕಂಪೆನಿಗಳಿಗೆ ಕಳಿಸಿದರೆ, ಅವು ಈ ಜಂಗಮವಾಣಿ ಇನ್ನೂ ಬಳಕೆಯಲ್ಲಿದೆಯೇ ಇಲ್ಲವೇ, ಇದ್ದರೆ ಎಲ್ಲಿದೆ ಎನ್ನುವುದನ್ನು ತಿಳಿಸುತ್ತವೆ. ಕಳೆದುಹೋದನನ್ನ ಮೊಬೈಲನ್ನು ಮೂರು ತಿಂಗಳ ಕಾಲ ಒಬ್ಬ ಕಾಲೇಜು ಹುಡುಗ ಭರ್ಜರಿಯಾಗಿ ಬಳಕೆ ಮಾಡುತ್ತಿದ್ದರೂ (ಇದು ನನಗೆ ತಿಳಿದದ್ದು ಅದು ಮರಳಿ ಸಿಕ್ಕಿದ ಮೇಲೆ. ಅವನ ಮೆಸೇಜುಬಾಕ್ಸು ಮತ್ತು ಕಾಲ್ಲಿಸ್ಟ್ ನೋಡಿ.) ಸೇವಾಕಂಪೆನಿಗಳು ಮಾತ್ರ ಈ ಮೊಬೈಲುಬಳಕೆಯಲ್ಲಿಲ್ಲ ಎಂಬ ಒಂದು ಸಾಲಿನ ರೆಡಿಮೇಡ್ ಸಂದೇಶವನ್ನು ಕಳಿಸಿ ಕೈತೊಳೆದುಕೊಂಡುಬಿಡುತ್ತಿದ್ದವು. ಪೋಲೀಸರು ಇಂತಹ ಕೇಸುಗಳನ್ನು ಹೇಗೆ ಹ್ಯಾಂಡಲ್ ಮಾಡುವುದೆಂದು ತಿಳಿಯದೆ ಹತಾಶರಾಗಿ ಕೈಚೆಲ್ಲಿ ಕೂತುಬಿಟ್ಟಿದ್ದರು. ಮೂರು ತಿಂಗಳ ಕಾಲನಾನೂ ಪೋಲೀಸ್ ನಾಯಿಯಂತೆ ನಿರಂತರ ತನಿಖೆ ಮಾಡಿದ ಮೇಲೆ ಕಳ್ಳ ಸಿಕ್ಕಿಬಿದ್ದಾಗ, ಸಾರ್! ನಮ್ಮ ಸ್ಟೇಶನ್ನ ಚರಿತ್ರೆಯಲ್ಲೇ ಕಳೆದುಹೋದ ಮೊಬೈಲನ್ನು ಮರಳಿಪಡೆದ ಮೊದಲಿಗ ನೀವು! ಎಂದು ಪೋಲೀಸರು ಕುಣಿದಿದ್ದರು! ತಮಾಷೆಯೆಂದರೆ, ಕಳ್ಳ -ಒಬ್ಬ ಇಂಜಿನಿಯರ್ ವಿದ್ಯಾರ್ಥಿ. ತಂದೆ ಕೇಂದ್ರ ಸರಕಾರದ ಯಾವುದೋ ಇಲಾಖೆಯಲ್ಲಿ ಹಿರಿಯ ಅಧಿಕಾರಿ. ಅವರ ಕುಟುಂಬದ ಅರ್ಧಕ್ಕರ್ಧ ಸದಸ್ಯರು ಅಮೆರಿಕವಾಸಿಗಳು!
ಬುದ್ಧನಿಗೆ ಬೋಧಿವೃಕ್ಷದ ಅಡಿಯಲ್ಲಿ ಆದ ಜ್ಞಾನೋದಯ ನನಗೆ ಈ ಘಟನೆಯಿಂದ ಪೋಲೀಸ್ ಠಾಣೆಯಲ್ಲಿ ಆಯಿತು ಅನ್ನಬಹುದು. ಮೂರು ತಿಂಗಳು ಒದ್ದಾಡಿ ಗುದ್ದಾಡಿ ಮರಳಿ ಪಡೆದ ಈ ಬಿಂಕದ ಸಿಂಗಾರಿ ಮೊಬೈಲನ್ನು ಕೈಯಲ್ಲಿ ಹಿಡಿದ ಗಳಿಗೆ, ಯಾವುದೋವೈರಾಗ್ಯ ನನ್ನನ್ನು ಆವರಿಸಿಬಿಟ್ಟಿತು! ಸಮುದ್ರಕ್ಕೆ ಸೇತುವೆ ಕಟ್ಟಿ, ಲಂಕೆಗೆ ನುಗ್ಗಿ ಘನಘೋರವಾಗಿ ಹೋರಾಡಿ ರಾವಣನ ಕೈಯಲ್ಲಿದ್ದ ಸೀತೆಯನ್ನು ಎತ್ತಿತಂದ ಮೇಲೆ ಅಕಾರಣ ಅವಳನ್ನು ತ್ಯಜಿಸಿದ ರಾಮಚಂದ್ರನ ಹಾಗೆ ನಾನೂ ನನ್ನ ಐಷಾರಾಮಿ ಮೊಬೈಲನ್ನುಬದಿಗಿಟ್ಟು, ಆಗಷ್ಟೇ ಕೊಂಡಿದ್ದ ಬಡ ಮೊಬೈಲನ್ನು ಉಳಿಸಿಕೊಂಡೆ! ಅಂದಿನಿಂದ ಇಂದಿನವರೆಗೂ, ಕಳೆದು ಸಿಕ್ಕಿದ ಆ ಧನಿಕ ಆಧುನಿಕ ಮೊಬೈಲು ನನ್ನ ಜೊತೆಗೇ ಇದೆ, ಎಲ್ಲೋ ಮುಚ್ಚಿದ ಕಪಾಟಿನಲ್ಲಿ!
ಈಗಂತೂ ಸ್ಮಾರ್ಟ್ ಫೋನುಗಳ ಯುಗ, ಬಿಡಿ. ತರಗತಿಗಳಲ್ಲಿ ಯಾವುದೋ ಲೆಕ್ಕ ಕೊಟ್ಟು ಇದರ ಉತ್ತರ ಹೇಳಿ ಎಂದೊಡನೆ ನನ್ನ ವಿದ್ಯಾರ್ಥಿಗಳು ಅವರವರ ಜೇಬುಗಳಿಂದ ಬ್ಲ್ಯಾಕ್ಬೆರ್ರಿ, ಸ್ಯಾಂಸಂಗ್ ಗೆಲಾಕ್ಸಿ, ಆಪಲ್ ಮೊಬೈಲುಗಳನ್ನು ತೆಗೆಯುತ್ತಾರೆ.ಇದಕ್ಕಿಂತ ಕಡಿಮೆ ದರ್ಜೆಯ ಮೊಬೈಲುಗಳನ್ನು ನಾನಂತೂ ಅವರ ಕೈಯಲ್ಲಿ ನೋಡಿಲ್ಲ! ಅವರ ಮಧ್ಯೆ ನಾನು, ಪಿಜ್ಜಾ ಅಂಗಡಿಯಲ್ಲಿ ಹುಳಿ ಮೊಸರನ್ನ ತಿನ್ನುವವರಂತೆ, ನನ್ನ ಹಳೇ ಸೀರೆಯ ಬಡ ಅರ್ಧಾಂಗಿಯನ್ನು ಹಿಡಿಯಲೇ? ಛೆಛೆ! ನಾಚಿಕೆಗೇಡು! ಸರ್,ಕನಿಷ್ಠಪಕ್ಷ ಒಂದು ಟಚ್ಸ್ಕ್ರೀನ್ ಆದರೂ ಕೊಳ್ಳಬಾರದ? ಎಂದು ಸಹೋದ್ಯೋಗಿಗಳು ಛೇಡಿಸುತ್ತಾರೆ. ನಿಮ್ಮ ಫೋನಿನಲ್ಲಿ ವಾಟ್ಸಾಪ್ ಇಲ್ಲವಾ? ಎಂದು ಕೇಳಿದವರ ಮುಖಕ್ಕೆ ನನ್ನ ಮೊಬೈಲು ಹಿಡಿದರೆ ಅನಸ್ತೇಶಿಯ ಕುಡಿದವರಂತೆ ಮೂರ್ಛೆಯೇಹೋಗಿಬಿಡುತ್ತಾರೆ! ಹೋಗಲಿ, ಇದರಲ್ಲಿ ಕ್ಯಾಮರ ಕೂಡ ಇಲ್ಲವಾ? ಎನ್ನುವ ಪ್ರಶ್ನೆ ಕೇಳುವುದನ್ನು ನನ್ನ ಗೆಳೆಯರು ನಿಲ್ಲಿಸಿ ಮೂರ್ನಾಲ್ಕು ವರ್ಷವೇ ಆಗಿಹೋಯಿತು.
ಯಾವುದೇ ಹೋಟೇಲಿನಲ್ಲಿ ಕೂತ ಗ್ರಾಹಕರತ್ತ ಒಮ್ಮೆ ಕಣ್ಣಾಡಿಸಿ ನೋಡಿ. ಒಂದು ಟೇಬಲಿನ ಸುತ್ತ ಕೂತ ನಾಲ್ಕು ಗೆಳೆಯರಲ್ಲಿ ನಾಲ್ಕು ಜನವೂ ತಂತಮ್ಮ ಫೋನುಗಳಲ್ಲಿ ಮುಳುಗಿ ಹೋಗಿರುತ್ತಾರೆ! ಜೊತೆಗಿದ್ದಾಗ ಪರಸ್ಪರ ಎದುರಾಬದುರಾ ಮುಖನೋಡಿಕೊಂಡು ಮಾತಾಡಬಹುದು ಎನ್ನುವ ನೈಸರ್ಗಿಕ ಸಂಗತಿಯನ್ನು ನಾವು ಮರೆತು ಎಷ್ಟೋ ಕಾಲವಾಯಿತು! ಬೀದಿಯಲ್ಲಿ ನಡೆದುಹೋಗುವಾಗ, ಗೆಳೆಯರ ಜೊತೆ ಜೋಗಕ್ಕೆ ಪ್ರವಾಸ ಹೋದಾಗ, ಸಂಗಾತಿಯ ಜೊತೆ ಏಕಾಂತದಲ್ಲಿ ಅರ್ಧ ತಾಸುಕಳೆದಾಗ, ಮಕ್ಕಳನ್ನು ಕರೆದುಕೊಂಡು ಪಾರ್ಕಿಗೆ ಸುತ್ತಾಡಲು ಹೋದಾಗ – ನಮಗೆ ಕೈಯಲ್ಲಿ ಫೋನು ಬೇಕೇಬೇಕು! ನಮ್ಮ ಜೀವಿತದ ಎಷ್ಟು ವರ್ಷಗಳನ್ನು ಈ ಆಧುನಿಕ ತಂತ್ರಜ್ಞಾನಾಸುರ ತಿಂದು ಹಾಕುತ್ತದೆ, ಯೋಚಿಸಿದ್ದೇವೆಯೇ?
ಜಾಹೀರಾತುಗಳನ್ನೇ ತೆಗೆದುಕೊಳ್ಳಿ. ಮೂರು ನಿಮಿಷದಲ್ಲಿ ಐದು ಕೆಲಸಗಳನ್ನು ಮಾಡಿಮುಗಿಸಬಹುದು ಎಂದು ಒಂದು ಮೊಬೈಲು ಕಂಪೆನಿ ಹೇಳುತ್ತದೆ. ನಮ್ಮದು ಅಷ್ಟೊಂದು ಧಾವಂತದ ಬದುಕೆ? ಅದೇ ಐದು ಕೆಲಸಗಳನ್ನು ಮಾಡಲು ಅರ್ಧಗಂಟೆತೆಗೆದುಕೊಂಡಿದ್ದರೆ ನಮ್ಮ ಜೀವನ ಮುಗಿದುಹೋಗುತ್ತಿತ್ತೆ? ಸಿಟ್ಟಾದ ಗೆಳತಿಯನ್ನು ಮೆಚ್ಚಿಸಲು ಹಾಡು ಅಪ್ಲೋಡ್ ಮಾಡುವ, ದುಬಾರಿ ಹೋಟೇಲಿಗೆ ಕರೆದೊಯ್ಯುವ ಮನುಷ್ಯ ಆಕೆಯ ಜೊತೆ ಅರೆತಾಸು ಏಕಾಂತದಲ್ಲಿ ಕೂತು ಮಾತಾಡಬೇಕು, ಭಾವನೆಗಳನ್ನುಹಂಚಿಕೊಳ್ಳಬೇಕು ಎಂದೇಕೆ ಬಯಸುವುದಿಲ್ಲ? ರೈಲಿನ ತಂಗಾಳಿಗೆ ಮೈಯೊಡ್ಡಿ ಸುಖವಾಗಿ ನಿದ್ದೆ ಮಾಡುವುದು ಕೂಡ ಅಪರಾಧ ಎನ್ನುವಂತೆ, ಹಾಗೆ ನಿದ್ದೆ ಹೋದವನ ಚಿತ್ರ ತೆಗೆದು ಫೇಸ್ಬುಕ್ಕಲ್ಲಿ ಹಾಕಿ ಗೇಲಿಮಾಡು ಎಂದು ಬೋಧಿಸುವ ತಂತ್ರಜ್ಞಾನಯುಗಕ್ಕೆನೀತಿಪಾಠ ಹೇಳುವವರು ಯಾರು!
ಆಧುನಿಕ ಯುಗದ ನೂತನ ತಂತ್ರಜ್ಞಾನಗಳಿಗೆ ಬೆನ್ನುಹಾಕಿ ಬದುಕಬೇಕು ಎನ್ನುವುದು ಖಂಡಿತಾ ನನ್ನ ವಾದವಲ್ಲ. ಹಾಗೆ ನೋಡಿದರೆ, ನಾನು ಈ ಲೇಖನ ಬರೆಯಲು ಉಪಯೋಗಿಸುವ ಗಣಕ ಮತ್ತು ಅಂತರ್ಜಾಲ ಕೂಡ ಆಧುನಿಕ ಜಗತ್ತಿನ ಫಲಗಳೇ. ಆದರೆ,ಇದನ್ನು ಬಳಸುವಾಗ ನಮ್ಮ ನೈತಿಕತೆಗೆ ಮಸುಕು ಕವಿಯುತ್ತಿದೆಯಲ್ಲವೇ ಎನ್ನುವ ಆತಂಕ ಮಾತ್ರ ನನ್ನದು. ಏನಾದರಾಗಲಿ, ಹೊಚ್ಚಹೊಸ ಫೋನನ್ನೇ ಕೈಯಲ್ಲಿ ಹಿಡಿಯಬೇಕೆನ್ನುವ ಒತ್ತಡವನ್ನು ಇಂದಿನ ಮಕ್ಕಳಲ್ಲಿ, ಯುವಕರಲ್ಲಿ ಹುಟ್ಟಿಸುತ್ತಿರುವಬಂಡವಾಳಶಾಹಿ ಜಗತ್ತಿನ ತಂತ್ರಗಳನ್ನು ಕಂಡರೆ ದಿಗಿಲಾಗುತ್ತದೆ. ಮೊಬೈಲ್ಫೋನಿನ ಅಷ್ಟೂ ಫೀಚರ್ಗಳು, ಜಗತ್ತಿನಾದ್ಯಂತ ಸೃಷ್ಟಿಯಾಗುತ್ತಿರುವ ಲಕ್ಷಾಂತರ ಆಪ್ಗಳು ಗುರಿಯಾಗಿಸಿರುವುದು ಯುವಪಡೆಯನ್ನೇ. ಇಂತಹ ಆಪ್ಗಳಲ್ಲಿ ಎಷ್ಟು, ಯುವಕರನ್ನುಸರಿದಾರಿಯಲ್ಲಿ ನಡೆಸಲು ಪ್ರೇರೇಪಿಸುತ್ತಿವೆ? ಎಷ್ಟು ಆಪ್ಗಳು ಅವರಿಗೆ ಸರಳ ಜೀವನದ, ಪರಿಶ್ರಮಪಟ್ಟು ದುಡಿಯುವ, ಅಕ್ರಮ ಮಾರ್ಗದಿಂದ ದುಡ್ಡು ಸಂಪಾದಿಸದ ನೈತಿಕತೆಯ ಪಾಠ ಹೇಳಿಕೊಡುತ್ತಿವೆ? ಸ್ಮಾರ್ಟ್’ಫೋನನ್ನು ಗಾಳಿಯಲ್ಲಿ ಬೀಸಿದರೆ ಸಾಕು,ಸುತ್ತಲಿನ ಅಂಗಡಿಗಳ ಮಾಹಿತಿ ಸಿಗುತ್ತದೆ ಎನ್ನುವ ಮೂಲಕ ನಮ್ಮನ್ನು ವ್ಯಾಪಾರೀಜಗತ್ತಿಗೆ ನೂಕುವ ಕೆಲಸ ಆಗುತ್ತಿದೆ! ನಾವು ನೀವು ಮೊಬೈಲಿನಲ್ಲೇ ಬಳಸುವ ಫೇಸ್ಬುಕ್ಕು (ಮತ್ತು ಅಂತಹ ಅದೆಷ್ಟೋ ಇತರ ಸೇವೆಗಳು) ಅದೆಷ್ಟೊಂದು ಕೋಟಿಗಳನ್ನು ಕೋಟಿಭಾರತೀಯರಿಂದ (ಅಪರೋಕ್ಷವಾಗಿಯಾದರೂ) ಬಾಚಿ ಅಮೆರಿಕ ಸರಕಾರಕ್ಕೆ ತೆರಿಗೆಯ ರೂಪದಲ್ಲಿ ಕಟ್ಟುತ್ತಿದೆ ಯೋಚಿಸಿದ್ದೇವೆಯೇ? ಕೊಳ್ಳುಬಾಕ ಸಂಸ್ಕೃತಿಯ ಆಕ್ಟೋಪಸ್ ಕೈಗಳು ನಮ್ಮನ್ನು ಸ್ಮಾರ್ಟ್’ಫೋನಿನ ಹೆಸರಲ್ಲಿ ಹೇಗೆ ಆವರಿಸಿಕೊಳ್ಳುತ್ತಿವೆ ನೋಡಿ!ಮೊಬೈಲ್ ಕದಿಯುವ ಹುಡುಗರೂ ಈ ಕಬಂಧ ಬಾಹುಗಳಲ್ಲಿ ನರಳುತ್ತಿರುವ ನತದೃಷ್ಟರೇ.
ಆಧುನಿಕ ತಂತ್ರಜ್ಞಾನಯುಗ ನಮ್ಮ ಮಕ್ಕಳನ್ನೇ ತನ್ನ ಮೊದಲಬಲಿ ಎಂದು ತಿಳಿದಂತಿದೆ. ಕಲರ್ಪ್ರಿಂಟರಿನಿಂದ ಪ್ರಿಂಟ್ ತೆಗೆದ ಹಾಳೆಗಳನ್ನು ತೋರಿಸಿ ಪ್ರಾಜೆಕ್ಟ್ ಮುಗಿಸಬಹುದು, ಎ ಶ್ರೇಣಿ ಪಡೆಯಬಹುದು ಎನ್ನುವುದು ನಾವು ನಮ್ಮ ಮಕ್ಕಳಿಗೆಹೇಳಿಕೊಡುತ್ತಿರುವ ಪಾಠ! ನಾಟಕ ರಿಹರ್ಸಲ್ನಂತಹ ಸಮಷ್ಟಿಕ್ರಿಯೆಗಳನ್ನು ಕೂಡ ಮೊಬೈಲು ಮುಖಾಂತರ ಮಾಡಿ ಕೈತೊಳೆದುಕೊಳ್ಳಬಹುದು ಎನ್ನುವುದು ಈ ತಂತ್ರಜ್ಞಾನಯುಗದ ಪಾಠ! ಈ ರೇಸಿನಲ್ಲಿ ಹಿಂದುಳಿದವರನ್ನು ಅಣಕಿಸಿ, ಮೂದಲಿಸಿ, ಬಿಟ್ಟುಮುಂದೋಡಿಬಿಡುತ್ತೇನೆಂದು ಹೆದರಿಸಿ, ಬಲವಂತವಾಗಿ ತನ್ನ ಜೊತೆ ಎಳೆದುಕೊಂಡು ಹೋಗುತ್ತಿರುವ ತಂತ್ರಜ್ಞಾನದ ಬೀಸಿಗೆ ನನ್ನ ಕಾಲು ಎಂದು ಬುಡತಪ್ಪೀತೋ ಎನ್ನುವ ಭಯ ನನ್ನದು!
(ನಗು ಬರುತ್ತಿದೆ ಈಗ ನೆನೆದರೆ. ಈ ಲೇಖನವನ್ನು ಬರೆದು ಮೂರ್ನಾಲ್ಕು ವರ್ಷಗಳು ಕಳೆದವಿರಬೇಕು. ತಮಾಷೆಯೆಂದರೆ ಈಗ ನಾನೂ ಸ್ಮಾರ್ಟ್ ಫೋನ್ ಬಳಸುತ್ತಿದ್ದೇನೆ. ತಂತ್ರಜ್ಞಾನದ ಜೊತೆಗಿನ ಮುಷ್ಟಿಯುದ್ಧದಲ್ಲಿ ಕೈ ಮುರಿದುಕೊಂಡೆನೆ? ಸೋತೆನೆ?ಸುಸ್ತಾಗಿ ಶರಣಾದೆನೆ? ಎಂದು ಯೋಚಿಸುತ್ತಿರುವಾಗಲೇ, ಅದೋ ಅಲ್ಲಿ ಯಾವುದೋ ವಾಟ್ಸಾಪ್ ಮೆಸೇಜ್ ಬಂತು ನೋಡಿ!)