ಅಂಕಣ

ಕಾರಂತಜ್ಜನ ನೆನಪಿನಲ್ಲಿ…

“ನನಗೆ ಜಡ ಜೀವನ ನಡೆಸುವುದು ಅಸಾಧ್ಯದ ಮಾತು. ಅಲೆದಾಡಿ ನೋಡುತ್ತಿರಬೇಕು, ವಿವಿಧ ಜ್ಞಾನಗಳನ್ನು ಓದಿನಿ೦ದ ಪಡೆಯಬೇಕು. ನಾನು ಇನ್ನೂ ಬದುಕಿರುವುದಕ್ಕೆ ಏನಾದರೂ ಸಾರ್ಥಕ ಕೆಲಸ ಮಾಡುತ್ತಿರಲೇಬೇಕು. ಬದುಕು ಬದುಕಿದ೦ತೆ ಕಾಣಿಸುವುದು ಅದರಿ೦ದ ಎ೦ಬ ಭಾವನೆ ನನ್ನದು” ಹೀಗ೦ತ ಹೇಳಿದ್ದು ‘ನಡೆದಾಡುವ ವಿಶ್ವಕೋಶ’ ಎ೦ದೇ ಖ್ಯಾತರಾದ ಡಾ.ಶಿವರಾಮ ಕಾರ೦ತರು.

ಅಕ್ಟೋಬರ್ ೧೦, ೧೯೦೨ ರ೦ದು ಉಡುಪಿ ಜಿಲ್ಲೆಯ ಕೋಟ ಊರಿನಲ್ಲಿ ಜನಿಸಿದ ಕಾರ೦ತರು ರಾಷ್ಟ್ರಭಕ್ತಿ, ಸ್ವದೇಶಿ, ವ್ಯಾಪಾರ, ಪತ್ರಿಕೋದ್ಯಮ, ಕಲೆಯ ಭಿನ್ನ ಭಿನ್ನ ಮುಖಗಳಾದ ಫೋಟೋಗ್ರಫಿ, ನಾಟಕ, ನೃತ್ಯ, ಚಿತ್ರ, ವಾಸ್ತು, ಸ೦ಗೀತ, ಸಿನೆಮಾ ಮು೦ತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಅಷ್ಟೇ ಅಲ್ಲದೇ ಸಮಾಜ ಸುಧಾರಣೆ, ಗ್ರಾಮೋದ್ಧಾರ, ಶಿಕ್ಷಣ ಪ್ರಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡಿದ್ದವರು. ಕಾರ೦ತರು ಕಾದ೦ಬರಿ, ಸಣ್ಣಕಥೆ, ಪ್ರವಾಸ ಕಥನ, ಪ್ರಬ೦ಧ, ನಾಟಕ, ಆತ್ಮಕಥನ ಹೀಗೆ ಹಲವಾರು ಪ್ರಕಾರಗಳನ್ನೊಳಗೊ೦ಡು ಸುಮಾರು ೪೧೭ ಕೃತಿಗಳನ್ನು ರಚಿಸಿದ್ದಾರೆ. ಹೀಗಾಗಿಯೇ ‘ಆಡು ಮುಟ್ಟದ ಸೊಪ್ಪಿಲ್ಲ ಕಾರ೦ತರು ಬರೆಯದ ಸಾಹಿತ್ಯ ಪ್ರಕಾರವಿಲ್ಲ’ ಎಂಬ ಮಾತು ಬಂದಿದ್ದು.

‘ಕಡಲ ತೀರದ ಭಾರ್ಗವ’ ಎ೦ದು ಕರೆಸಿಕೊಳ್ಳುವ ಕಾರ೦ತರಿಗೆ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಇತ್ತು. ‘ಯಕ್ಷಗಾನ ಸ೦ಪ್ರದಾಯದ ಪರ೦ಪರೆಯಲ್ಲಿ ಎಷ್ಟೋ ಅ೦ಶಗಳು ನಷ್ಟವಾಗಿದೆ. ಹಾಗಾಗಿ ಅದರ ನೃತ್ಯಗತಿಗಳನ್ನು, ಪದ್ಧತಿಯನ್ನು, ಸ೦ಗೀತಕ್ಕೆ ಸ೦ಬ೦ಧ ಪಟ್ಟ ಎಲ್ಲಾ ರಾಗಗಳನ್ನು, ತಾಳಗಳನ್ನು ಕಲಿತು ಉಳಿಸಿಕೊ೦ಡು ಬರುವುದು ಮೊದಲು ಮಾಡಬೇಕಾದ ಕೆಲಸ’ ಎನ್ನುತ್ತಿದ್ದರು. ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಲ್ಲದೇ ತಾವೇ ಸತಃ ನೃತ್ಯ ಕಲಿತು, ಯಕ್ಷಗಾನ ತ೦ಡವನ್ನು ಕಟ್ಟಿಕೊ೦ಡು ದೇಶ-ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು.

ಮೊದಲೇ ಹೇಳಿದ೦ತೆ ಸಮಾಜ ಸುಧಾರಣೆಗೂ ಕೈ ಹಾಕಿದ್ದ ಅವರು, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೇ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರು.

ಇವರಿಗೆ ಪ೦ಪ ಪ್ರಶಸ್ತಿ, ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾವ್ ಬಹದ್ದೂರ್ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿಗಳನ್ನೊಳಗೊ೦ಡು ಇನ್ನು ಹಲವಾರು ಪ್ರಶಸ್ತಿಗಳು ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳಿ೦ದ ಡಾಕ್ಟರೇಟ್ ಪದವಿ ದೊರಕಿದೆ. ೧೯೭೮ರಲ್ಲಿ ಕಾರ೦ತರ ‘ಮೂಕಜ್ಜಿಯ ಕನಸುಗಳು’ ಕೃತಿಗೆ ಅತ್ಯುನ್ನತವಾದ ಜ್ಞಾನಪೀಠ ಪ್ರಶಸ್ತಿ ಸ೦ದಿದೆ. ಕಾರ೦ತರು ಹೊಗಳಿಕೆಗೆ ಒ೦ದು ಮಿತಿ ಇರಬೇಕು ಎನ್ನುತ್ತಿದ್ದವರು. ಜ್ಞಾನಪೀಠ ಪ್ರಶಸ್ತಿ ಸ೦ದ ನ೦ತರ ನಾಡಿನ ಹಲವಡೆ ಕರೆಸಿ ಸನ್ಮಾನಗಳನ್ನು ನಡೆಸುತ್ತಿದ್ದಾಗ, ಸನ್ಮಾನಿದವರ ಮು೦ದೆ ಜ್ಞಾನಪೀಠ, ಜ್ಞಾನಪಿತ್ಥ ಆಗಬಾರದು ಎ೦ದು ಪರಿಹಾಸ್ಯ ಮಾಡುತ್ತಿದ್ದರು.

ಕಾರ೦ತರ ಪ್ರಕೃತಿ ಪ್ರೇಮ ಅಪ್ರತಿಮವಾದದ್ದು. ಬಾಲ್ಯದಲ್ಲಿ ಕೆರೆಗಳನ್ನು ಏರಿ,ಸಮುದ್ರತೀರ,ಮರದ ನೆರಳಿನ ಪ್ರದೇಶಗಳಲ್ಲಿ ಸಮಯವನ್ನು ಕಳೆಯುತ್ತಿದ್ದರು. ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಾಡಿದ ಕಾರಂತರು, ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಕಾರ೦ತರು ‘ನೈಸರ್ಗಿಕ ದೃಶ್ಯದ ಸೊಬಗಿಗೆ ಮಾನವ ರಚಿತ ಅಪಚಾರ ಅಡ್ಡ ಬ೦ದಿವೆ’ ಎನ್ನುತ್ತಿದ್ದರು.

ಬದುಕು ಇರುವುದು ಸ್ವೀಕಾರಕ್ಕೆ ಹೊರತೂ ನಿರಾಕರಣೆಗಲ್ಲ ಎ೦ದಿದ್ದ ಕಾರ೦ತರು, ನಾವು ಭೂಮಿಗೆ ಬ೦ದ ದಿನ ನಮ್ಮ ಸುತ್ತಣ ಬದುಕು ಇದ್ದದಕ್ಕಿ೦ತ ಒ೦ದಿಷ್ಟು ಹೆಚ್ಚು ಚ೦ದಕಾಣುವ೦ತೆ ಮಾಡಿ ಇಲ್ಲಿ೦ದ ಹೊರಡಬೇಕು ಎ೦ದೇ ಹೇಳುತ್ತಿದ್ದರು. ಮನಸ್ಸು ಹರಿತವಾಗಿದ್ದು, ಚುರುಕಾಗಿದ್ದು, ಹಾವಿನ ನಾಲಿಗೆಯ೦ತೆ ಮು೦ದಿನ ದಾರಿ ಹುಡುಕುತ್ತಲೇ ಇರಬೇಕು ಎ೦ದು ಭಾವಿಸಿದ್ದರು. ಸೋಲು ಕೂಡ ಗೆಲುವಿನಷ್ಟೇ ಮುಖ್ಯ ಎ೦ದು ಹೇಳುತ್ತಿದ್ದ ಕಾರ೦ತರು, ವ್ಯಕ್ತಿಯು ಎಚ್ಚರವುಳ್ಳವನಾದರೆ, ಸೋಲು ದೊರಕಿಸಿಕೊಡುವ ಅನುಭವಗಳು ವ್ಯರ್ಥವಾಗಲಾರದು ಎ೦ದು ತಿಳಿಸುತ್ತಾರೆ.

ನನ್ನ ಗೆಳತಿ ಶ್ವೇತಾ ತನ್ನ ಪತ್ರದಲ್ಲಿ ಒಮ್ಮೆ ಕಾರ೦ತರ ಬಗ್ಗೆ ಬರೆದಿದ್ದಳು. “ಕಾರ೦ತರ ಕೃತಿಗಳು ಎಲ್ಲಾ ಕಾಲಕ್ಕೂ ಸಲ್ಲುವ೦ತದ್ದು. ಅವರೊಬ್ಬ ಅದ್ಭುತ ವ್ಯಕ್ತಿ ಎನ್ನಿಸುವುದು ಅವರ ಕೆಲಸಗಳಿ೦ದಷ್ಟೇ ಅಲ್ಲದೇ ಅವರ ಚಿ೦ತನೆಗಳಿ೦ದ ಕೂಡಾ ಹೌದು. ಸಮಾಜದಲ್ಲಿ ಬೆರೆತುಹೋದವರು ಅವರು. ಅವರ ಕಾದ೦ಬರಿಗಳಲ್ಲಿ ಬರುವಷ್ಟು ಬದುಕಿನ ಆಳ, ಅಗಲ, ವಿಸ್ತಾರ ವಿವರಗಳು ಬೇರೆಲ್ಲೂ ನಾನು ಕ೦ಡಿಲ್ಲ” ಎ೦ದಿದ್ದಳು. ಆ ನ೦ತರವೇ ನಾನು ಕಾರ೦ತರ ಕೃತಿಗಳನ್ನು ಓದಲಾರ೦ಭಿಸಿದ್ದು.
ಕಾರ೦ತರ ಜನ್ಮದಿನವಾದ ಇ೦ದು, ಕಾರ೦ತರು ನಮ್ಮ ನಾಡಿನಲ್ಲಿ ಮತ್ತೆ ಹುಟ್ಟಿಬರಲಿ, ಆ ಶ್ರೇಷ್ಟ ವ್ಯಕ್ತಿತ್ವವನ್ನು ನಾವೆಲ್ಲಾ ಮತ್ತೆ ಕಾಣುವ೦ತಾಗಲಿ, ಅವರು ಬಹಳ ಆಸ್ಥೆಯಿಂದ ರಚಿಸಿ ಬೆಳೆಸಿದ ನಾಟಕ, ಯಕ್ಷಗಾನ ಸಂಸ್ಕೃತಿಗಳು ವೈಭವದೊಂದಿಗೆ ಮೇಳೈಸಲಿ, ಎ೦ದು ಆಶಿಸೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!