ಅಂಕಣ

ಶಾಸ್ತ್ರೀಜಿ ಸಾವಿನ ರಹಸ್ಯವೂ ಬಯಲಾಗಲಿ

ಅವರದ್ದೂ ಗಾಂಧೀಜಿಯವರದ್ದೂ ಹುಟ್ಟಿದ ಹಬ್ಬ ಒಂದೇ ದಿನ.ಅವರು ಗಾಂಧೀಜಿಯ ಅನುಯಾಯಿಯಾಗಿದ್ದೂ ಗಾಂಧೀಜಿಯ ಎಲ್ಲ ಸಿದ್ಧಾಂತಗಳನ್ನು ಸುಮ್ಮನೇ ಕಣ್ಣುಮುಚ್ಚಿ ಒಪ್ಪಲಿಲ್ಲ.ಎಲ್ಲ ಸಮಯದಲ್ಲೂ ಶಾಂತಿಮಂತ್ರ ಪಠಿಸಲಿಲ್ಲ. ಗಾಂಧೀಜಿಯಂತೆ ಅತ್ಯಂತ ಸರಳವಾಗೇ ಬದುಕಿದರು.ಬದುಕಿದ್ದಷ್ಟು ದಿನವೂ ತಮ್ಮನ್ನು ರಾಷ್ಟ್ರಸೇವೆಯಲ್ಲಿಯೇ ತೊಡಗಿಸಿಕೊಂಡವರು.ಯಾರ ವಿರೋಧವನ್ನೂ ಕಟ್ಟಿಕೊಂಡವರಲ್ಲ.ತಾವು ಸ್ವಾಭಿಮಾನಿಯಾಗಿದ್ದಲ್ಲದೇ ಎಲ್ಲ ಭಾರತೀಯರನ್ನೂ ಸ್ವಾಭಿಮಾನಿಗಳಾಗಿ ಬದುಕಲು ಪ್ರೇರೇಪಿಸಿದವರು.ಕೊನೆಗೆ ದುರಂತ ಅಂತ್ಯ ಕಂಡರು.

ಗಾಂಧಿ ಜಯಂತಿಯಂದೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆ ಧೀಮಂತ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ.ಆದರೆ ಗಾಂಧಿ ಜಯಂತಿಯಂದು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ.ರಾಜಕಾರಣಿಯೊಬ್ಬ ಹೀಗೂ ಬದುಕಬಹುದು ಎಂದು ತೋರಿಸಿಕೊಟ್ಟಿದ್ದ ದೇಶದ ಎರಡನೇ ಪ್ರಧಾನಿ ಇಂದಿನ ರಾಜಕೀಯ ನಾಯಕರುಗಳಿಗೆ ನೆನಪಾಗುವುದೇ ಇಲ್ಲ.ಆದರೆ ಗಾಂಧಿ ಸ್ಮರಣೆಯಲ್ಲಿಯೇ ಮುಳುಗಿ ದೇಶವಾಸಿಗಳಾದ ನಾವು ಇಂದೂ ಕೂಡಾ ಶಾಸ್ತ್ರಿಗಳನ್ನು ನೆನಪು ಮಾಡಿಕೊಳ್ಳದಿದ್ದರೆ,ಅವರ ಸಿದ್ಧಾಂತಗಳ ಬಗ್ಗೆ ಚಿಂತಿಸಿ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸಲಾರದು.

ನೆಹರೂ ನಿಧನಾನಂತರ ಅಂದಿನ ಕಾಂಗ್ರೆಸ್ಸಿಗರಿಗೆ ಬೇರೆ ಯಾವುದೇ ಆಯ್ಕೆ ಇಲ್ಲದಿದ್ದರಿಂದ ಲಾಲ್ ಬಹದ್ದೂರ್ ಶಾಸ್ತ್ರಿಗಳನ್ನು ಪ್ರಧಾನಿಯಾಗಿ ಆರಿಸುವ ಅನಿವಾರ್ಯತೆ ಎದುರಾಯಿತು.ಪ್ರಧಾನಿಯಾದ ಬಳಿಕ ಅವರ ಅಧಿಕಾರದ ದಾರಿಗೆ ಹೂವಿನ ನೆಲಹಾಸನ್ನೇನೂ ಹಾಕಿರಲಿಲ್ಲ.ಹೆಜ್ಜೆ ಹೆಜ್ಜೆಗೂ ಅವರಿಗೆ ಸಂಕಷ್ಟಗಳು ಎದುರಾದವು.ದೇಶದಲ್ಲಿ ಭೀಕರ ಕ್ಷಾಮ ಆವರಿಸಿತು.ಅಂಥ ಸಮಯದಲ್ಲೇ ಪಾಕಿಸ್ಥಾನ ದಾಳಿ ಮಾಡಿತು.ಪಾಕ್ ಮೇಲಿನ ಯುದ್ಧ ನಿಲ್ಲಿಸದಿದ್ದರೆ ಗೋಧಿಯ ರಫ್ತನ್ನು ನಿಲ್ಲಿಸುತ್ತೇನೆಂದು ಅಮೇರಿಕ ಬೆದರಿಕೆ ಒಡ್ಡಿತು.ಆದರೆ ಈ ಎಲ್ಲ ಸಮಸ್ಯೆಗಳನ್ನು ಶಾಸ್ತ್ರೀಜಿ ದಿಟ್ಟತನದಿಂದಲೇ ಎದುರಿಸಿದರು.

ಪಾಕ್ ದಾಳಿ ಮಾಡಿದ್ದ ಸಮಯದಲ್ಲಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಿಂತುಕೊಂಡು ದೇಶವಾಸಿಗಳ ಬಳಿ ಸೋಮವಾರ ಒಂದು ಹೊತ್ತಿನ ಊಟ ತ್ಯಜಿಸಿ,ಆ ಹಣವನ್ನು ಸೇನೆಗೆ ದೇಣಿಗೆ ನೀಡಬೇಕು.ನಮ್ಮ ಸೈನಿಕರು ದೇಶಕ್ಕಾಗಿ ಕಷ್ಟಪಡುತ್ತಿರುವಾಗ ನಾವು ಹೊಟ್ಟೆ ತುಂಬಾ ಊಟ ಮಾಡಿಕೊಂಡು ಆರಾಮವಾಗಿರುವುದು ನೈತಿಕವಾಗಿ ಸರಿಯಲ್ಲ ಎಂದಾಗ ಇಡೀ ದೇಶ ಪ್ರಧಾನಿಯ ಮಾತಿಗೆ ಬೆಲೆಕೊಟ್ಟು ‘ಶಾಸ್ತ್ರಿ ಸೋಮವಾರ’ವನ್ನು ಆಚರಿಸಿತು.ಪಾಕ್ ದಾಳಿ ಮಾಡಿದಾಗ ಯಾರೊಬ್ಬರ ಬಳಿಯೂ ಸಹಾಯಕ್ಕಾಗಿ ಅಂಗಾಲಾಚಲಿಲ್ಲ.ಬಂದೂಕಿಗೆ ಬಂದೂಕಿನಿಂದಲೇ ಉತ್ತರಕೊಡಿ ಎಂದು ಸೇನೆಗೆ ಸೂಚಿಸಿದರು.

1965ರಲ್ಲಿ ಪಾಕಿಸ್ಥಾನ ದಾಳಿ ಮಾಡಿದಾಗ ಅತ್ಯಂತ ದಿಟ್ಟ ನಿರ್ಧಾರಗಳನ್ನು ಕೈಗೊಂಡ ಶಾಸ್ತ್ರೀಜಿ ಪಾಕಿಸ್ಥಾನೀಯರು ಶ್ರೀನಗರಕ್ಕೆ ಬರುವುದಕ್ಕೂ ಮೊದಲೇ ನಮ್ಮ ಸೈನ್ಯ ಲಾಹೋರ್ ತಲುಪಬೇಕು ಎಂದು ಅಂದಿನ ಸೇನಾ ದಂಡನಾಯಕ ಜೆ.ಎನ್.ಚೌಧರಿಯವರಿಗೆ ಆದೇಶಿಸಿದರು.ಲಭ್ಯವಿದ್ದ ಸೀಮಿತ ಸಂಖ್ಯೆಯ ಸೈನಿಕರು,ಶಸ್ತ್ರಾಸ್ತ್ರಗಳೊಂದಿಗೆ ಅತ್ಯಂತ ಚಾಣಾಕ್ಷತನದಿಂದ ಭಾರತೀಯ ಸೇನೆ ಲಾಹೋರ್’ಗೆ ಲಗ್ಗೆ ಇಟ್ಟಿತು.ಭಾರತದ ಈ ನಡೆಗೆ ಜಗತ್ತೇ ಹುಬ್ಬೇರಿಸಿತು.ಪಾಕ್ ಕಂಗಾಲಾಗಿ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುವಂತೆ ವಿಶ್ವಸಂಸ್ಥೆಯನ್ನು ಅಂಗಾಲಾಚಿತು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇನ್ನೂ ಎರಡು ದಶಕಗಳೂ ಕಳೆದಿರದ ಸಮಯದಲ್ಲಿ,ಇನ್ನೂ ಆಂತರಿಕವಾಗಿ ದುರ್ಬಲವಾಗೇ ಇದ್ದಂಥ ಸಮಯದಲ್ಲಿ ಶತ್ರು ರಾಷ್ಟ್ರ ದಾಳಿ ಮಾಡಿದಾಗ ಅಂತಾರಾಷ್ಟ್ರ‍ೀಯ ಗಡಿರೇಖೆಯನ್ನು ದಾಟಿ ಶತ್ರುಗಳನ್ನು ಸೆದೆಬಡಿಯಿರಿ ಎಂದು ಸೈನ್ಯಕ್ಕೆ ಆದೇಶ ಕೊಡುವುದು ಸುಲಭದ ಮಾತಾಗಿರಲಿಲ್ಲ.ಆದರೆ ಶಾಸ್ತ್ರಿಯವರ ಇಚ್ಛಾಶಕ್ತಿಗೆ ಅದು ದೊಡ್ಡ ಸವಾಲು ಅಂತ ಅನ್ನಿಸಲೇ ಇಲ್ಲ.ಲಾಹೋರ್ ತಲುಪಿದ ಭಾರತೀಯ ಸೇನೆ ಸತತವಾಗಿ ಭಾರತ ವಿರೋಧಿ ಸುದ್ದಿಗಳನ್ನು ಪಸರಿಸಿ ಜನರನ್ನು ಪ್ರಚೋದಿಸುತ್ತಿದ್ದ ಲಾಹೋರ್ ಆಕಾಶವಾಣಿ ಕೇಂದ್ರವನ್ನೇ ಧ್ವಂಸಗೈದಿತು.ಶಾಸ್ತ್ರಿಯಂಥ ಪ್ರಬಲ ನಾಯಕ ಮಾತ್ರ ಸೇನೆಗೆ ಹಾಗೆ ಮಾಡಲು ಅನುಮತಿ ಕೊಡಲು ಸಾಧ್ಯ.ಅಂದಿನ ಆ ಸಾಧನೆ ಭಾರತೀಯ ಸೇನೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಯಿತು.ಶಾಸ್ತ್ರೀಜಿ ಮನಸ್ಸು ಮಾಡಿದ್ದರೆ ಲಾಹೋರ್ ನಗರವನ್ನು ಪೂರ್ಣ ಧ್ವಂಸ ಮಾಡಿ ಎಂದು ಸೇನೆಗೆ ಆದೇಶಿಸಬಹುದಾಗಿತ್ತು.ಆದರೆ ಅಲ್ಲಿನ ಅಮಾಯಕ ಪಾಕ್ ಪ್ರಜೆಗಳನ್ನು ಗಮನದಲ್ಲಿಟ್ಟುಕೊಂಡ ಶಾಸ್ತ್ರೀಜಿ ಅಲ್ಲಿನ ಸಾಮಾನ್ಯ ನಾಗರೀಕರಿಗೆ ಯಾವ ಹಾನಿಯುಂಟಾಗಲೂ ಬಿಡಲಿಲ್ಲ.ಕೇವಲ ಪಾಕ್’ಗೆ ನಮ್ಮ ಬಲಪ್ರದರ್ಶನ ತೋರಿಸಿ ಬುದ್ಧಿ ಕಲಿಸುವುದಷ್ಟೇ ಅವರ ಉದ್ದೇಶವಾಗಿತ್ತು.ಇದು ಅವರ ಅಪ್ರತಿಮ ಯುದ್ಧನೀತಿಗೆ ಒಂದು ನಿದರ್ಶನ.

ಪ್ರಧಾನಿಯಂಥ ಅತ್ಯುನ್ನತ ಹುದ್ದೆಯಲ್ಲಿದ್ದರೂ ಅತ್ಯಂತ ಸರಳವಾಗಿ ಬದುಕಿದರು.ಸದಾ ಕಚ್ಚೆ ಪಂಚೆ,ಜುಬ್ಬಾ ಧರಿಸಿ ತಲೆಗೆ ಗಾಂಧಿ ಟೋಪಿ ಧರಿಸುತ್ತಿದ್ದರು.ವಿದೇಶಗಳಿಗೆ ಭೇಟಿ ನೀಡುವಾಗಲೂ ಸೂಟು-ಬೂಟು ಧರಿಸಲಿಲ್ಲ.ಶಾಸ್ತ್ರೀಜಿಯವರು ಪ್ರಧಾನಿಯಾಗಿದ್ದಾಗ ಅವರ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರು.ಪ್ರಧಾನಿಯ ಮಕ್ಕಳಾದರೂ ನಡೆದುಕೊಂಡೇ ಶಾಲೆಗೆ ಬರುತ್ತಿದ್ದರು.ಒಂದು ಸಲ ಆ ಮಕ್ಕಳು ಶಾಸ್ತ್ರೀಜಿಯವರ ಬಳಿ ಅವರಿಗೆ ಸರ್ಕಾರದಿಂದ ಒದಗಿಸಲಾಗಿದ್ದ ಕಾರಿನಲ್ಲಿ ತಮ್ಮನ್ನು ದಿನವೂ ಶಾಲೆಗೆ ಕಳಿಸುವಂತೆ ಕೇಳಿಕೊಂಡಾಗ ಶಾಸ್ತ್ರಿ “ಸರ್ಕಾರದ ಕಾರನ್ನು ನಾನು ನನ್ನ ಸ್ವಂತ ಉಪಯೋಗಕ್ಕೆ ಬಳಸಲಾರೆ.ಹಾಗಂತ ನಮ್ಮ ಕುಟುಂಬಕ್ಕಾಗಿ ಇನ್ನೊಂದು ಕಾರು ಖರೀದಿಸುವಷ್ಟು ನಮ್ಮ ಆರ್ಥಿಕ ಸ್ಥಿತಿ ಈಗ ಉತ್ತಮವಾಗಿಲ್ಲ.ಮುಂದೆ ನಾವು ಆರ್ಥಿಕವಾಗಿ ಸುಧಾರಿಸಿದ ಮೇಲೆ ನಮಗಾಗಿ ಒಂದು ಕಾರು ಕೊಳ್ಳೋಣ” ಎಂದರಂತೆ.

ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ,ಕಟ್ಟಾ ಹಿಂದೂವಾದಿಯಾಗಿದ್ದರೂ ಶಾಸ್ತ್ರೀಜಿ ಯಾರ ಮೇಲೂ ತಮ್ಮ ಸಿದ್ಧಾಂತಗಳನ್ನು ಬಲವಂತವಾಗಿ ಹೇರಲಿಲ್ಲ.ಪ್ರಧಾನಿಯಾಗಿದ್ದಾಗ ಎಲ್ಲ ಮತ,ಧರ್ಮ,ಜಾತಿಗಳನ್ನು ಮೀರಿ ಸಂವಿಧಾನ ಹೇಳಿರುವಂತೆ ಧರ್ಮನಿರಪೇಕ್ಷತೆಯ ರಾಜಕಾರಣ ನಡೆಸಿದರು.ಅವರ ಆಡಳಿತದಲ್ಲಿ ಆ ಕಾಲದಲ್ಲೇ ಭಾರತ ವಿಶ್ವಗುರುವಾಗುವ ಲಕ್ಷಣಗಳು ಗೋಚರಿಸಿದ್ದವು.ನೆರೆ ರಾಷ್ಟ್ರ ಶ್ರೀಲಂಕಾವನ್ನು ನಮ್ಮ ಸಹೋದರ ರಾಷ್ಟ್ರವೆಂದು ಪರಿಗಣಿಸಿ ಅದರೊಂದಿಗೆ ಅತ್ಯುತ್ತಮ ವಿದೇಶಾಂಗ ವ್ಯವಹಾರಕ್ಕೆ ನಾಂದಿ ಹಾಡಿದ್ದೇ ಶಾಸ್ತ್ರೀಜಿ.ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಅವರ ಕೊಡುಗೆಯನ್ನು ಮರೆಯುವಂತಿಲ್ಲ.

ಬಾಲ್ಯದಿಂದಲೂ ತೀರಾ ಬಡತನದಲ್ಲೇ ಬೆಳೆದ,ಬಾಲಕನಾಗಿದ್ದಾಗ ನದಿ ದಾಟಲು ಅಂಬಿಗನಿಗೆ ಕೊಡಲು ಹಣವಿಲ್ಲವೆಂದು ಈಜಿಕೊಂಡೇ ಗಂಗಾನದಿಯನ್ನು ದಾಟಿದ,ಪ್ರಧಾನಿಯಾಗಿದ್ದರೂ ಶ್ರೀಸಾಮಾನ್ಯ ಪ್ರಜೆಯಂತೆ ಬದುಕಿದ,ಇತರರಿಗೆ ಉಪದೇಶಿಸುವ ಮೊದಲು ಅದನ್ನು ತಾವೇ ಮೊದಲು ಅಳವಡಿಸಿಕೊಳ್ಳುತ್ತಿದ್ದ ಶಾಸ್ತ್ರೀಜಿಯಂಥ ದೇಶ ಕಂಡ ಅಪರೂಪದ ರಾಜಕಾರಣಿ ಕೊನೆಗೆ ದುರಂತ ಅಂತ್ಯ ಕಂಡರು.

1966ರ ಜನವರಿ 10 ರಂದು ತಾಷ್ಕೆಂಟ್ ನಲ್ಲಿ ನಡೆದ ಭಾರತ-ಪಾಕ್ ರಕ್ಷಣಾ ಒಪ್ಪಂದದ ಸಭೆಯಲ್ಲಿ ಭಾಗವಹಿಸಲು ಶಾಸ್ತ್ರೀಜಿ ತೆರಳಿದರು.ಕದನ ವಿರಾಮ ಉಲ್ಲಂಘನೆ ಮಾಡಬಾರದು,ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡಿನ ದಾಳಿ ಮಾಡುವುದಿಲ್ಲ,ಭಯೋತ್ಪಾದನೆಯನ್ನು ಮಟ್ಟಹಾಕುತ್ತೇವೆ ಎಂದು ಪಾಕಿಸ್ಥಾನ ಮಾತು ಕೊಡುವವರೆಗೂ ಒಪ್ಪಂದಕ್ಕೆ ಸಹಿ ಹಾಕಲಾರೆ ಎಂದು ಪಾಕಿಸ್ಥಾನದ ಅಯೂಬ್ ಖಾನ್ ಮುಂದೆ ಪಟ್ಟುಹಿಡಿದು ಕುಳಿತುಬಿಟ್ಟರು.ಕೊನೆಗೇ ಅಯೂಬ್ ಮಾತು ಕೊಟ್ಟು ಒಪ್ಪಿದಾಗ ಒಪ್ಪಂದಕ್ಕೆ ಸಹಿ ಹಾಕಿ ಹೋಟೆಲ್ ರೂಮಿಗೆ ರಾತ್ರಿ ವಿಶ್ರಾಂತಿಗೆ ತೆರಳಿದರು.ಬೆಳಗಾಗುವಷ್ಟರಲ್ಲಿ ಶಾಸ್ತ್ರೀಜಿ ಹೆಣವಾಗಿದ್ದರು.ದೇಹವೆಲ್ಲ ನೀಲಿ ಬಣ್ಣಕ್ಕೆ ತಿರುಗಿತ್ತು.

ಮರಣೋತ್ತರ ಪರೀಕ್ಷೆಯಲ್ಲಿ ಶಾಸ್ತ್ರಿ ಹೃದಯಾಘಾತದಿಂದ ಮೃತಪಟ್ಟರೆಂದು ಘೋಷಿಸಲಾಯಿತು.ಅದನ್ನು ತೀವ್ರವಾಗಿ ವಿರೋಧಿಸಿದ ಶಾಸ್ತ್ರಿಯವರ ಪತ್ನಿ ಲಲಿತಾ ಶಾಸ್ತ್ರಿ ನಮ್ಮ ಯಜಮಾನರು ಮಿತಾಹಾರಿಗಳಾಗಿದ್ದವರು.ಯೋಗ,ಧ್ಯಾನ ಮಾಡುತ್ತ ಆರೋಗ್ಯವಂತರಾಗಿ ಬದುಕಿದವರು.ಅವರಿಗೆ ಎಂದೂ ಹೃದಯದ ಸಮಸ್ಯೆಯೇ ಇರಲಿಲ್ಲ.ನಮ್ಮ ಕುಟುಂಬದಲ್ಲೇ ಯಾರಿಗೂ ಹೃದಯದ ತೊಂದರೆ ಇರಲಿಲ್ಲ.ನನ್ನ ಗಂಡನನ್ನು ವಿಷವಿಕ್ಕಿ ಯಾರೋ ಕೊಲೆ ಮಾಡಿದ್ದಾರೆ.ದಯವಿಟ್ಟು ಅವರ ಕೊಲೆಯ ತನಿಖೆ ಗಂಭೀರವಾಗಿ ನಡೆಯಬೇಕು.ನನಗೆ ನ್ಯಾಯ ಸಿಗಬೇಕು.ದೇಶವಾಸಿಗಳಿಗೂ ಅವರ ಸಾವಿನ ರಹಸ್ಯ ಗೊತ್ತಾಗಬೇಕು ಎಂದು ಗೋಳಾಡಿದರು.

ಆದರೆ ಆ ಹೆಣ್ಣಿನ ಕೂಗು ಯಾರಿಗೂ ಕೇಳಲಿಲ್ಲ.ಇವತ್ತಿನವರೆಗೂ ಆ ರಾತ್ರಿ ತಾಷ್ಕೆಂಟ್ ನಲ್ಲಿ ಏನು ನಡೆಯಿತು ಎಂದು ಯಾರಿಗೂ ಗೊತ್ತಾಗಿಲ್ಲ.ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳಿಗೆ ಶಾಸ್ತ್ರೀಜಿ ಸಾವಿನ ತನಿಖೆ ಮಾಡುವ ಅವಕಾಶವಿದ್ದರೂ ಯಾರಿಗೂ ಶಾಸ್ತ್ರೀಜಿ ನೆನಪಾಗಲೇ ಇಲ್ಲ.ಮೋದಿ ಸರ್ಕಾರ ಅಧಿಕಾರಕ್ಕೆ ಬರುವಾಗ ನೇತಾಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ರಹಸ್ಯವನ್ನು ನಾವು ಬಹಿರಂಗಪಡಿಸುತ್ತೇವೆಂದು ಹೇಳಿತ್ತು.ಮೊನ್ನೆ ನೇತಾಜಿ ರಹಸ್ಯ ಬಯಲಿಗೆ ಸರ್ಕಾರ ಆಸಕ್ತಿ ತೋರಿದ್ದರೂ ಶಾಸ್ತ್ರೀಜಿಯ ಬಗ್ಗೆ ಮಾತೇ ಇಲ್ಲ.

ಭಾರತ ಕಂಡ ಅಪ್ರತಿಮ ಪ್ರಧಾನಿ,ಮಹಾನ್ ನಾಯಕನ ಸಾವಿನ ರಹಸ್ಯ ನಮಗೆ ಗೊತ್ತಾಗಬೇಕು.ಅವರ ಜನ್ಮದಿನವಾದ ಇಂದು ಶಾಸ್ತ್ರೀಜಿಯವರಿಗೆ ಗೌರವ ಸಲ್ಲಿಸುತ್ತಲೇ ಅವರ ಕುರಿತಾದ ರಹಸ್ಯದ ಬಿಡುಗಡೆಗೆ ಸರ್ಕಾರವನ್ನು ಒತ್ತಾಯಿಸೋಣ.ಜನಸಾಮಾನ್ಯರ ಪ್ರಧಾನಿ ಏನಾದರು ಎಂದು ಜಗತ್ತಿಗೆ ಗೊತ್ತಾಗಬೇಕು.ಅವರ ರಹಸ್ಯ ಇತಿಹಾಸದ ಕಾಲಗರ್ಭದಲ್ಲಿ ಹುದುಗಿಹೋಗದಿರಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!