“ಬರೀ ಗುಡ್ದಗಾಡು ಜನರ ದೇಶವಂತೆ, ಅಡಗಿಕೊಂಡು ವಿಷ ಬಾಣಗಳನ್ನು ಬಿಡುತ್ತಾರಂತೆ, ಹುಷಾರು ಮಾರಾಯ್ತೀ..” ಎಂದು ತುಂಬಾ ಜನ ಭೂತಾನಿಗೆ ಹೊಗಬೇಕೆಂದಿದ್ದೇನೆ ಎಂದು ನಾನು ಅಧಿಕೃತವಾಗಿ ಪ್ರಕಟಿಸಿದಾಗ ಬುದ್ದಿವಾದ ಹೇಳಿದ್ದರು. ಭೂತಾನಿನ ಇತಿಹಾಸದಲ್ಲಿ, ಹಿಂದೊಮ್ಮೆ ಪರರ ಧಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜನರು ಇಂಥಹಾ ಯುದ್ಧ ತಂತ್ರಗಳನ್ನು ಉಪಯೋಗಿಸುತ್ತಿದ್ದುದು ಸುಳ್ಳಲ್ಲ. ಆದರೆ ಈಗ ಪರಿಸ್ಥಿತಿ ಬದಲಾಯಿಸಿದೆ.ಭೂತಾನೀಯರು ನಿಧಾನವಾಗಿ ಹೊರ ಪ್ರಪಂಚಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಜೊತೆ ಜೊತೆಗೇ ತಮ್ಮ ಉತ್ಕೃಷ್ಟ ಸಂಸ್ಕೃತಿ, ಪರಂಪರೆ ಹಾಗೂ ಹೇರಳವಾದ ನೈಸರ್ಗಿಕ ಸಂಪತ್ತಿನಿಂದ ಜಗತ್ತಿನ ಇತರ ಭಾಗಗಳ ಜನರನ್ನು ಆಕರ್ಷಿಸುತ್ತಿರುವುದಂತೂ ಸುಳ್ಳಲ್ಲ. ಭೂತಾನಿನಲ್ಲಿ ಇಂದಿಗೂ ರಾಜಾಢಳಿತ ಜಾರಿಯಲ್ಲಿದೆ. ರಾಜಮನೆತನದ ೫ನೆಯ ರಾಜ ೨೦೦೮ನೆಯ ಇಸವಿಯಿಂದ ರಾಜ್ಯಭಾರ ಮಾಡುತ್ತಿದ್ದಾನೆ.
ಭೂತಾನಿನೊಳಕ್ಕೆ ಪ್ರವೆಶ ಹಾಗೂ ಸಾರಿಗೆ ವ್ಯವಸ್ಥೆ: ಭೂತಾನ್ ಪ್ರವೇಶಿಸಲು ಭಾರತೀಯರಿಗೆ ಹಾಗೂ ಬಾಂಗ್ಲಾದೇಶೀಯರಿಗೆ ವೀಸಾ ಬೇಕಿಲ್ಲ. ಇಮಿಗ್ರೇಷನ್ ಆಫೀಸಿನಿಂದ ಅನುಮತಿ ಪತ್ರ ಪಡೆದು ಸಂಚರಿಸಬಹುದು. ಪಶ್ಚಿಮ ಬಂಗಾಳದ ಜೈಗೊನ್ ಎಂಬ ಪಟ್ಟಣ ಭಾರತ ಮತ್ತು ಭೂತಾನನ್ನು ಬೇರ್ಪಡಿಸುತ್ತದೆ. ಜೈಗೊನಿಂದ ಭೂತಾನಿನ ಗಡಿ ಪ್ರದೆಶವಾದ ಫುಲ್ಷೆಲೊಂಗ್ ಇಮಿಗ್ರಷನ್ ಆಫೀಸಿನಿಂದ ಅನುಮತಿ ಪತ್ರ ಪಡೆದು ಪ್ರವೇಶಿಸಬಹುದು. ಜೈಗೊನಿಗೆ ಹತ್ತಿರದ ವಿಮಾನ ನಿಲ್ದಾಣ ಭಾಗ್ದೊಗ್ರದಲ್ಲಿದೆ. ಭೂತಾನಿನ ಪಾರೊ ನಗರದಲ್ಲಿ ಕೂಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಭೂತಾನಿನಲ್ಲಿ ಸಾರ್ವಜನಿಕ ರಸ್ತೆ ಸಾರಿಗೆ ವ್ಯವಸ್ಥೆ ಅಷ್ಟಾಗಿ ಅಭಿವೃದ್ಧಿ ಹೊಂದಿಲ್ಲ. ಹೆಚ್ಚಿನ ಭಾಗಗಳಿಗೆ ಸಂಚರಿಸಲು ದಿನಕ್ಕೆ ೧ ಅಥವಾ ೨ ಕ್ಕಿಂತಾ ಹೆಚ್ಚು ಬಸ್ಸುಗಳನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಟ್ಯಾಕ್ಸಿ ಗೊತ್ತು ಮಾಡಿಕೊಂಡು ಪ್ರಯಾಣಿಸುವುದು ಅನಿವಾರ್ಯ.
ಧರ್ಮ, ಸಂಸ್ಕೃತಿ ಮತ್ತು ಉಡುಗೆ ತೊಡುಗೆ: ಬಹುಪಾಲು ಭೂತಾನೀಯರು ಬೌದ್ಧಧರ್ಮೀಯರು.ಹಾಗಂತ ಟಿಬೆಟಿನ ದಲೈಲಾಮ ಅನುಕರಿಸುವ ತತ್ವಗಳಿಗೂ ಭೂತಾನೀಯರು ಅನುಕರಿಸುವ ತತ್ವಗಳಿಗೂ ಅಜಗಜಾಂತರ ವ್ಯತ್ಯಾಸವಂತೆ. ಇತ್ತೀಚೆಗೆ ಕೆಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೂ ಇಲ್ಲಿ ಚರ್ಚುಗಳನ್ನು ನಿರ್ಮಿಸುವುದು ಕಾನೂನುಬಾಹಿರ.ಭೂತಾನಿನ ಪ್ರತೀ ಕಟ್ಟಡಗಳೂ ನೋಡಲು ಸೊಗಸು. ಭುದ್ಧಿಸ್ಟ್ ಆರ್ಕಿಟೆಕ್ಚರುಗಳಲ್ಲಿ ನಿರ್ಮಿಸಿರುವ ಝಾಂಗ್, ಮೊನಾಸ್ಟ್ರಿ, ಲಖಾಂಗ್ ಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಕಟ್ಟಡಗಳು ಹೆಚ್ಚಾಗಿ ಮಣ್ಣು ಮತ್ತು ಪೈನ್ ಮರಗಳಿಂದ ನಿರ್ಮಿಸಲ್ಪಟ್ಟಿದ್ದು ಪ್ರತೀ ಮನೆಗಳಲ್ಲೂ, ಅಂಗಡಿಗಳಲ್ಲೂ ರಾಜ-ರಾಣಿಯರ, ರಾಜ ಮನೆತನದವರ ಫೋಟೊಗಳು ರಾರಾಜಿಸುತ್ತವೆ. ಭೂತಾನೀಯರು ಕರಕುಶಲ ಕಲೆಗಳಲ್ಲಿ ಎತ್ತಿದ ಕೈ. ಹಾಗೆಂದೇ ಇಲ್ಲಿನ ಅಂಗಡಿಗಳಲ್ಲಿ ಕೈಯಿಂದ ತಯಾರಿಸಿದ ನಾನಾ ರೀತಿಯ ಒಡವೆಗಳು, ಬಟ್ಟೆಗಳು, ವರ್ಣಚಿತ್ರಗಳು, ಬ್ಯಾಗುಗಳು ಇತ್ಯಾದಿ ವಸ್ತುಗಳು ಕಾಣಲು ಸಿಗುತ್ತವೆ. ಭೂತಾನಿನ ರಾಜಧಾನಿ ಥಿಂಫುವಿನಲ್ಲಿ ಹ್ಯಾಂಡ್ ಕ್ರಾಫ್ಟ್ ಮಾರ್ಕೆಟ್ ಕೂಡ ಇದೆ.
ಇಲ್ಲಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆ “ಕೀರಾ” ಹಾಗೂ ಪುರುಷರು “ಘೋ” ಎಂಬ ಉಡುಗೆ ತೊಡುತ್ತಾರೆ. ಭೂತಾನೀಯರು ಬಟ್ಟೆಗಳನ್ನು ಮರದಿಂದ ತಯಾರಿಸಿದ “ಪಂಕ್ಥಾ” ಎಂಬ ಯಂತ್ರದಿಂದ ಕೈಯಲ್ಲಿ ನೇಯುತ್ತಾರೆ. ನೇಕಾರ ಕಾಯಕ ಸಾಮಾನ್ಯವಾಗಿ ತಾಯಿಯಿಂದ ಮಗಳಿಗೆ ಪರಂಪರಾಗತವಾಗಿ ಬರುತ್ತದೆ. ಹಿಂದೆಲ್ಲಾ ಪೂರ್ವ ಭೂತಾನೀ ಹೆಂಗಸರಿಗೆ ಮಾತ್ರ ಈ ಕಾಯಕ ಗೊತ್ತಿತ್ತಂತೆ. ಪಶ್ಚಿಮ ಭೂತಾನೀಯರು ಬೇಸಾಯ ಮಾಡುವುದು, ಗುಡ್ಡಗಾಡು ಭೂತಾನೀಯರು ಯಾಕ್ ಚೀಸ್ ಮತ್ತು ಉಣ್ಣೆ ತಯಾರಿಸುವುದು ಹಾಗೂ ಪೂರ್ವ ಭೂತಾನೀಯರು ಬಟ್ಟೆ ನೇಯುವುದು, ಎಲ್ಲರೂ ತಮ್ಮಲ್ಲಿ ಹೆರಳವಾಗಿ ಸಿಗುವ ಒಂದು ವಸ್ತುವಿಗೆ ಪರ್ಯಾಯವಾಗಿ ಇನ್ನೊಂದನ್ನು ಕೊಟ್ಟು ಪಡೆಯುವ ಪದ್ಧತಿ ಸಾಮಾನ್ಯವಾಗಿತ್ತು. ಈಗ ಭೂತಾನಿನ ಪ್ರಮುಖ ಪಟ್ಟಣಗಳಲ್ಲಿ ನೇಕಾರರಿಗೆ ಕೆಲಸ ಒದಗಿಸಿ ಬಟ್ಟೆ ತಯಾರಿಸಿ ಮಾರಾಟ ಮಾಡುವ ಮಳಿಗೆಗಳು ತಲೆಯೆತ್ತಿವೆ. ಕೊಟ್ಟು ಪಡೆಯುವ ಪರ್ಯಾಯ ಪದ್ಧತಿ ಮರೆಯಾಗಿದೆ.
ನಾನು ಪಾರೋವಿನ ಬಟ್ಟೆ ತಯಾರಿಸುವ ಮಳಿಗೆಯೊಂದಕ್ಕೆ ಭೇಟಿ ನೀಡಿದ್ದೆ. ಒಂದು ಘೋ ಅಥವಾ ಕೀರಾ ತಯಾರಿಸಲು ೪ ರಿಂದ ೫ ತಿಂಗಳು ಹಿಡಿಯುತ್ತದೆಯಂತೆ. ಬಟ್ಟೆ ತಯಾರಿಸುವ ನೂಲನ್ನು ಭಾರತದ ವಾರಣಾಸಿಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಥಿ0ಫುವಿನ ಟೆಕ್ಸ್ ಟೈಲ್ ಮ್ಯುಸಿಯುಮ್ ಎಂಬಲ್ಲಿ ರಾಜಮನೆತನದವರಿಗೆ ಮಾತ್ರಾ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ರಾಜಮನೆತನದವರ ಒಂದು ಬಟ್ಟೆ ನೇಯಲು ಏನಿಲ್ಲವೆಂದರೂ ೧೫ ತಿಂಗಳುಗಳು ಬೇಕಾಗುತ್ತದೆಯಂತೆ.
ಭೂತಾನೀಯರಲ್ಲಿ ಬಹುಪಾಲು ವಿವಾಹಗಳು ಪ್ರೇಮ ವಿವಾಹವಾಗಿದ್ದು, ಸ್ತ್ರೀಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿದೆ. ಮದುವೆಯಾದ ನಂತರ ಗಂಡು ಹೆಣ್ಣಿನ ಮನೆಗೆ ಬಂದು ವಾಸಿಸುವುದು ಸರ್ವೇ ಸಾಮಾನ್ಯ. ಇವರಲ್ಲಿ ಮದುವೆ ಎಂಬುದು ಗಂಡು ಮತ್ತು ಹೆಣ್ಣು ಒಬ್ಬರಿಗೊಬ್ಬರು ಇಷ್ಟಪಟ್ಟು ಒಟ್ಟಿಗೇ ವಾಸಿಸುವ ಕುಟುಂಬ ವ್ಯವಸ್ಥೆಯೇ ಹೊರತೂ ಅದಕ್ಕೆಂದೇ ಅಬ್ಬರದ ಸಮಾರಂಭ ಬೇಕೇಬೇಕೆಂದೇನೂ ಕಡ್ಡಾಯವಿಲ್ಲ. ಸಮಾಜದ ಪ್ರತಿಷ್ಟಿತ ಮನೆತನದವರು ಅಬ್ಬರದ ಸಮಾರಂಭಗಳನ್ನೇರ್ಪಡಿಸಿಕೊಳ್ಳುತ್ತಾರಷ್ಟೇ. ಇತ್ತೀಚೆಗೆ ಕೆಲವು ಸಾಮಾನ್ಯ ಜನರೂ ಕೂಡಾ “ಥೈದೆ” ಎಂದು ಕರೆಯಲ್ಪಡುವ ಮದುವೆ ಸಮಾರಂಭಗಳನ್ನು ಮಾಡುತ್ತಾರೆ. ವಧುವಿಗೆ “ವಿಗೃ” ಎಂದು ಕರೆಯಲ್ಪಡುವ ಆಭರಣವನ್ನು ತೊಡಿಸಲಾಗುತ್ತದೆ. ಇದನ್ನು ಆಕೆ ಪ್ರತೀ ದಿನ ಧರಿಸಬೇಕೆಂದೇನೂ ಕಡ್ಡಾಯವಿಲ್ಲ, ವಿಶೇಷ ಸಮಾರಂಭಗಳಲ್ಲಿ ಧರಿಸುವುದು ಕಡ್ಡಾಯ. ಭೂತಾನೀ ಸ್ತ್ರೀಯರು ಸರ್ವ ಸ್ವತಂತ್ರರು. ಮನೆಯ ಆದಾಯ ಹೆಂಗಸರ ದುಡಿಮೆಯಿಂದಲೇ ಹೆಚ್ಚಾಗಿ ಅವಲಂಭಿತವಾಗಿರುತ್ತದೆ. ಹಾಗಾಗಿ ಹೆಚ್ಚಿನ ಸ್ತ್ರೀಯರು ಹೊಟೆಲ್, ಅಂಗಡಿ ನಡೆಸುವುದು, ಟ್ಯಾಕ್ಸಿ ಚಲಾಯಿಸುವುದು, ಗದ್ದೆಯಲ್ಲಿ ದುಡಿಯುವುದು ಕಾಣಬಹುದು. ಹಾಗಂತ ಇಲ್ಲಿ ಬಹು ಪತ್ನಿತ್ವ ಪದ್ಧತಿ ಕೂಡಾ ಜಾರಿಯಲ್ಲಿದೆ. ಇಲ್ಲಿನ ೪ನೆಯ ದೊರೆಗೆ ನಾಲ್ವರು ಹೆಂಡಿರು(ನಾಲ್ವರೂ ಅಕ್ಕ ತಂಗಿಯರು), ೨ನೆಯ ಹೆಂಡತಿಯ ಮಗ ಈಗ ರಾಜ್ಯಭಾರ ಮಾಡುತ್ತಿದ್ದಾನೆ.
ಭೂತಾನಿನ ಪ್ರತೀ ಮನೆಗಳಲ್ಲೂ “ಲೊಚೆ” ಎಂಬ ವಾರ್ಷಿಕ ಹಬ್ಬವಿರುತ್ತದೆ. ಆ ದಿನ ಮನೆಯವರೆಲ್ಲಾ ಉಪಸ್ಥಿತರಿದ್ದು, ಬೌದ್ಧ ಸನ್ಯಾಸಿ/ನಿಯರಿಂದ ನೆರವೇರುವ ಪೂಜೆಯಲ್ಲಿ ಭಾಗವಹಿಸುತ್ತಾರೆ. ನೆಂಟರು, ನೆರೆಹೊರೆಯವರನ್ನೆಲ್ಲಾ ಕರೆದು ವಿಶೇಷ ಭೋಜನ, ಮಧ್ಯ ಸೇವನೆ, ಹಾಡು ಕುಣಿತಗಳಲ್ಲಿ ಮೈಮರೆಯುತ್ತಾರೆ. ವರ್ಷಕ್ಕೊಮ್ಮೆ ಜಿಲ್ಲಾ ಉತ್ಸವ ಕೂಡಾ ನೆರವೇರುತ್ತದೆ. ನನಗೆ ಭುಮ್ತಾಂಗ್ ಉತ್ಸವ (ತಾಂಶಿಗ್ ಥಿಚು) ನೋಡಲು ಸಿಕ್ಕಿತ್ತು. ಭೂತಾನಿನ ಸಾಂಸ್ಕೃತಿಕ ವೈಭವಗಳನ್ನು ಕಣ್ಣಾರೆ ಕಾಣಬೇಕೆಂದಿದ್ದರೆ ಜಿಲ್ಲಾ ಉತ್ಸವಗಳನ್ನು ನೊಡಬೇಕು. ವಿವಿಧ ಬಗೆಯ ಸಂಗೀತ, ನೃತ್ಯ ಮತ್ತು ನಾಟಕ ಪ್ರದರ್ಶನಗಳ ಜೊತೆಗೆ ಕಡಿಮೆ ಬೆಲೆಗಳಿಗೆ ಕರಕುಶಲ ವಸ್ತುಗಳು ಮಾರಾಟಕ್ಕಿರುತ್ತವೆ.
ಭೂತಾನೀಯರಲ್ಲಿ ಮೃತ ದೇಹಗಳನ್ನು ಸುಡುವ ಸಂಪ್ರದಾಯವಿದೆ. ಮೃತರ ಮಕ್ಕಳು ಮೃತರ ಹೆಸರಿನಲ್ಲಿ ನೆಟ್ಟ ಪವಿತ್ರ ಪ್ರಾರ್ಥನಾ ದ್ವಜಗಳು ಕಾಣಲು ಸಿಗುತ್ತವೆ.
ಆಹಾರ ಪದ್ಧತಿ: ಭೂತಾನೀಯರ ಪ್ರಮುಖ ತರಕಾರಿ ಮೆಣಸು ಎಂದರೂ ತಪ್ಪಾಗಲಾರದು. ಇವರು ಮೆನಸಿನಕಾಯಿಯ ಜೊತೆಗೆ ಸ್ವಲ್ಪ ತರಕಾರಿ ಸೇರಿಸಿ ಅಡುಗೆ ತಯಾರಿಸುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಆದರೆ ಇದು ಬಿಲ್ಕುಲ್ ಸತ್ಯ. ಭೂತಾನೀ ಖಾದ್ಯಗಳು ತುಂಬಾ ಖಾರ. ಎಮದಾಚಿ (ಎಮ=ಮೆಣಸು, ದಾಚಿ=ಚೀಸ್), ಕೇವದಾಚಿ(ಕೇವ=ಆಲೂ), ಮಶ್ರೂಮ್ ದಾಚಿ ಇವರ ಮೆಚ್ಚಿನ ಸಸ್ಯಾಹಾರೀ ಖಾದ್ಯಗಳು (ಮಾಂಸಾಹಾರೀ ಖಾದ್ಯಗಳ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿಲ್ಲ). ಇವರು ಕೆಂಪಕ್ಕಿ ಅನ್ನದ ಜೊತೆ ಈ ಪದಾರ್ಥಗಳನ್ನು ಬಳಸುತ್ತಾರೆ. ಯಾಕ್ ಚೀಸ್ ಮತ್ತು ಉಪ್ಪು ಹಾಕಿ ತಯಾರಿಸುವ “ಸೂಜಾ” ಎಂಬ ಬಟರ್ ಟೀ ಕೂಡಾ ಇಲ್ಲಿನ ಪ್ರಸಿದ್ಧ ಪಾನೀಯ. ಸೂಜಾ ತಯಾರಿಸಲೆಂದೇ ವಿಷೇಶ ಟೀ ಎಲೆಗಳು ಸಿಗುತ್ತವೆಯೆಂದು ಹೊಟೆಲ್ ಮಾಲೀಕನೊಬ್ಬ ನನಗೆ ತೊರಿಸಿದ್ದ. ಡ್ರುಕ್ ೧೧೦೦೦ ಎಂಬ ಮಧ್ಯ ಕೂಡಾ ಅತೀ ಅಗ್ಗವಾಗಿ ಸಿಗುವ ಭೂತಾನಿನ ವಿಶೇಷ ಮಧ್ಯ.