ಅಂಕಣ

ಮತ ಸಹಿಷ್ಣುತೆಗೆ ಮಾಧ್ಯಮಗಳು ಮನಸ್ಸು ಮಾಡಲಿ..

“ತೀವ್ರವಾಗಿ ಚರ್ಚೆಯಾಗುತ್ತಿರುವ” ಎಂದೇ ಆರಂಭಿಸಲಾಗುತ್ತಿರುವ ಪ್ರಶಸ್ತಿ ಹಿಂದಿರುಗಿಸುವ ಅಪ್ರಭುದ್ಧ ನಡೆಗಳಿಗೆ ಮತ್ತು ಸಾಹಿತಿಗಳಿಗೆ ತಗುಲಿರುವ ಈ ಅವಸರದಲ್ಲಿ ಸುದ್ದಿಯಾಗುವ ತೆವಲಿಗೆಮಾಧ್ಯಮಗಳು ಮಣೆಹಾಕುವುದನ್ನು ನಿಲ್ಲಿಸಬೇಕಿತ್ತು. ಯಾವುದಕ್ಕೆ ಎಷ್ಟು ಪ್ರಾಶಸ್ತ್ಯ ಕೊಡಬೇಕು ಅಥವಾ ಕೊಡಬಾರದು ಎನ್ನುವುದನ್ನು ಸ್ವಯಂ ನಿರ್ಧರಿಸುವ ಮೂಲಕ, ಕೆಲವು ಪತ್ರಿಕೆಗಳು ಹೇಗೆಉದ್ದೇಶಪೂರ್ವಕವಾಗಿ ನಿರ್ದಿಷ್ಟ ಸುದ್ದಿಯನ್ನು ಹತ್ತಿಕ್ಕುತ್ತವೆಯೋ ಹಾಗೆ ಪ್ರಮುಖ ಪತ್ರಿಕೆಗಳು ಇಂಥ ಅಸಂಬದ್ಧವನ್ನು ಸುದ್ದಿಯಾಗುವುದನ್ನೆ ನಿಲ್ಲಿಸಿದ್ದರೆ ಬಹುಶ: ಪರಿಸ್ಥಿತಿ ಇಲ್ಲಿಗೆ ಹೋಗುತ್ತಿರಲಿಲ್ಲ.ಅಷ್ಟೇಕೆ ಯಾವ ವರದಿಗಾರನೂ ಯಾವ ಸಾಹಿತಿ(?)ಯನ್ನೂ ” ಪ್ರಶಸ್ತಿ ಜೊತೆ ಬಂದಿರುವ ಹಣವನ್ನು ಚೆಕ್ ಮೂಲಕ ಯಾಕೆ ಹಿಂದಿರುಗಿಸುತ್ತಿದ್ದೀರಿ..? ಟ್ರಜರಿ ಅಥವಾ ಸರಕಾರದ ಅಕಾಡೆಮಿಅಕೌಂಟಿಗೆ ನೇರ ಜಮೆ ಮಾಡಬಹುದಿತ್ತಲ್ಲ. ಮಾಡುತ್ತೇನೆ ಎನ್ನುವುದಾದರೆ ಯಾವಾಗ, ಎಲ್ಲಿ, ಹೇಗೆ ಮಾಡುತ್ತೀರಿ.?.”ಎಂದು ಮರುಪ್ರಶ್ನೆ ಮಾಡಿಯೇ ಇಲ್ಲ.

ಜಮೆ ಮಾಡಿದವರೂ ವಾಪಸ್ಸು ತೆಗೆದುಕೊಳ್ಳಲಾಗದ ಹಾಗೆ ಡಿ.ಡಿ.(ಇದಕ್ಕೆ ಅಷ್ಟು ಹಣ ಕೈಯಿಂದ ಮೊದಲೇ ಸಂದಾಯ ಮಾಡಬೇಕಾಗುತ್ತಲ್ಲ)ಯಾಕೆ ಮಾಡಿಕೊಡುತ್ತಿಲ್ಲ..? ಕಾರಣ ಹಾಗೆ ನೇರಜಮೆಏನಾದರೂ ಮಾಡಿದರೆ ದೇವರಾಣೆ ಆ ಹಣ ವಾಪಸ್ಸು ಬರುವುದಿಲ್ಲ ಇದು ಸಾಹಿತಿ(?)ಗಳಿಗೂ ಗೊತ್ತು. ಅದೇ ಚೆಕ್ ಮೂಲಕ ಹಿಂದಿರುಗಿಸಿದರೆ ಮೊತ್ತ ತಮ್ಮಲ್ಲೇ ಇರುತ್ತದೆ. ಕಾರಣ ಯಾವ ಅಕಾಡೆಮಿಅಥವಾ ಸಂಸ್ಥೆಯೂ ಈ ಹಣವನ್ನು ನಗದಾಗಿಸಿಕೊಳ್ಳುವ ಕೆಲಸಕ್ಕೆ ಮುಂದಾಗುವುದಿಲ್ಲ. ಅಲ್ಲಿಗೆ ಮತ್ತೊಮ್ಮೆ ಪ್ರಶಸ್ತಿ ಪಡೆದಾಗ ಸಿಗದಿದ್ದ ಮನ್ನಣೆ, ಹೆಸರು, ಖ್ಯಾತಿ(?) ಎಲ್ಲ ಇನ್ನೊಮ್ಮೆ ಪುಕ್ಕಟೆಯಾಗಿಲಭ್ಯ. ಅಸಲಿಗೆ ಇವತ್ತು ಲಭ್ಯವಾಗುತ್ತಿರುವಷ್ಟು ಟಿ.ಆರ್.ಪಿ., ಪ್ರಶಸ್ತಿ ಸಿಕ್ಕಾಗಲೂ ಲಭ್ಯವಾಗಿರಲಿಲ್ಲವೇನೋ..? ಈಗ ಇನ್ನೂಮ್ಮೆ ಏನೂ ಮಾಡದಿದ್ದರೂ, ಏನೂ ಬರೆಯದಿದ್ದರೂ ಬರಹದಲ್ಲಿ, ಮುದ್ರಣಮಾಧ್ಯಮದಲ್ಲಿ ಜೀವಂತವಾಗಿರದಿದ್ದರೂ ಅದ್ಭುತ ಸುದ್ದಿಗೆ ಗ್ರಾಸ. ಅಷ್ಟಕ್ಕೂ ಹೀಗೆ ಹಿಂದಿರುಗಿಸಿದವರೆಲ್ಲರೂ ಮತ್ತು ಯಾರೂ ಘನಾತಿ ಘನ ಪ್ರಶಸ್ತಿಗಳನ್ನೇನೂ ಹಿಂದಿರುಗಿಸಿಲ್ಲ. ಇವತ್ತಿನ ಲೆಕ್ಕಕ್ಕೆಜುಜುಬಿ ಎನ್ನಬಹುದಾದ ಕೆಲವು ಸಾವಿರ ಎನ್ನಬಹುದಾದ ನಿರಾಕರಣೆ (ಅದೂ ಚೆಕ್ ರೂಪದಲ್ಲಿ) ಹೊರತು ಪಡಿಸಿದರೆ “ಕುಂವಿ”ಯವರ 50 ಸಾವಿರವೇ ದೊಡ್ಡ ಮೊತ್ತ. ಅದೂ ಚೆಕ್. ಅವರೂಕೊಡುತ್ತೇನೆ ಎನ್ನುತ್ತಾ “ನೃಪತುಂಗ”ವನ್ನು ಕಂತಿನಲ್ಲಿ ಹಿಂದಿರುಗಿಸುವ ಲೆಕ್ಕಾಚಾರದ ಆಟಕ್ಕಿಳಿದಿದ್ದಾರಾ..? (ನೆನಪಿರಲಿ ಈ ಚೆಕ್ ಗಳು ನಗದಾಗದಿದ್ದರೆ ತಾವಾಗಿಯೇ ಮೂರು ಮಾಸಕ್ಕೆ ತಮ್ಮಮಹತ್ವ ಕಳೆದುಕೊಳುತ್ತವೆ. ಆಮೇಲೆ ಅಕಾಡೆಮಿ ಬೇಕೂ ಎಂದರೂ ಈ ಕಾಗದಗಳ ತುಂಡಿನಿಂದ ನಯಾ ಪೈಸೆ ಉತ್ಪನ್ನವಾಗುವುದಿಲ್ಲ. ಹೆಂಗಿದೆ ವರಸೆ..? )

ಅದರ ಬದಲಾಗಿ ಇವತ್ತು ಸಾಮಾನ್ಯಕ್ಕಿಂತ ತದ್ವಿರುದ್ದ ಮಾಡಿದಲ್ಲಿ ಫೇಸ್ಬುಕ್ ಸಂವಹನ ಮಾಧ್ಯಮದಲ್ಲಿ ನಿಮಿಷಕ್ಕೊಮ್ಮೆ ಅದರ ಬಗ್ಗೆ ಚರ್ಚೆಯಾಗುತ್ತದೆ. ಹುಸಿ ಬೆಂಬಲದ ನೂರಿನ್ನೂರು ಲೈಕುಗಳುಒಳಗೊಳಗೇ ಆತ್ಮರತಿಗೂ, ಸ್ವಯಂಖುಶಿಗೂ ನೀರೆರೆಯುತ್ತದೆ. ಇಲ್ಲಿ ತಮ್ಮ ಹೆಸರು ಮತ್ತು ಸುದ್ದಿ ಪ್ರಕಟಿಸಿಕೊಳ್ಳಲೇ ಇವತ್ತು ಟೌನ್ ಹಾಲ್ ಎದುರಿಗೆ ಒಂದೂವರೆ ಡಜನ್ ಜನರನ್ನು ಕಲೆಹಾಕಿಕೊಂಡುಅದರದ್ದೊಂದು ಫೋಟೊ ಹಿಡಿಸಿಕೊಂಡು,(ಅದಕ್ಕೂ ಪರಿಚಯದ ನಾಲ್ಕಾರು ಪತ್ರಕರ್ತರು ಹೇಗಿದ್ದರೂ ಸಿಗುತ್ತಾರೆ) ಅದೂ ಸಾಲದೆಂಬಂತೆ ಒಂದು ಪುಟಗೋಸಿ ಪೋಲಿಸ್ ಕಂಪ್ಲೆಂಟ್ ಕೂಡಾಪ್ರಚಾರವಾಗಬೇಕೆನ್ನುವ ಹುಚ್ಚಿಗೆ ಚಿತ್ರನಟಿಯನ್ನು, ಒಂದಿಷ್ಟು ದಂಡನ್ನೆ ಕರೆದೊಯ್ಯುತ್ತಿರುವ ಮನಸ್ಥಿತಿಗಳಿರುವಾಗ, ಪ್ರಶಸ್ತಿ ಮಾತ್ರ ವಾಪಸಾತಿ ಮಾಡುವುದರ ಹಿಂದಿರುವ ದರ್ದು ಅರಿವಾಗದೇ..?

ಇದಕ್ಕೆ ಅಪ್ಪಟ ಉದಾ. ಎಂದರೆ ಮೊನ್ನೆ ರೂಪಲಕ್ಷ್ಮಿ ಎಂಬ ಮಹಿಳೆ ಕೊಟ್ಟ ದೂರಿಗೆ ಎರಡು ಸಾಲಿನ ಸುದ್ದಿಯೂ, ಅದೇ ನಟಿಯೊಬ್ಬಳ ಗುಂಪು ಕೊಟ್ಟ ದೂರಿಗೆ ದೊಡ್ಡ ಚಿತ್ರ ಸಮೇತ ಸುದ್ದಿಯೂಪ್ರಕಟವಾದ ಅಪಸವ್ಯವೇ ಸಾಕ್ಷಿ. ಎರಡರ ತಿರುಳೂ ತೀರ ಸ್ಪಷ್ಠ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಮೇಲಿನ ಅವಹೇಳನ ಮತ್ತು ಕೀಳು ಅಭಿವ್ಯಕ್ತಿ ಕುರಿತು. ಹಾಗಿದ್ದರೆ ಇಲ್ಲಿ ರೂಪಲಕ್ಷ್ಮಿಯ ಅವಹೇಳನ ಚಿಕ್ಕದು, ಇನ್ನೊಬ್ಬರದ್ದು ದೊಡ್ಡದು ಎಂದೇ. ಮಹಿಳೆಯರ ಮರ್ಯಾದೆ ಎಂದರೆ ಎಲ್ಲ ಒಂದೇ ಅಲ್ಲವೇ…? ಆದರೆ ಎರಡಕ್ಕೂ ಸಿಕ್ಕ ಪ್ರಚಾರದ ವಿಭಿನ್ನತೆ ಅದ್ಭುತ. ಏನು ಮಾಡೋಣ.ಕಾರಣ ರೂಪಲಕ್ಷ್ಮಿಯದ್ದು ನೇರ ಬರಹ. ಅದೇ ಇನ್ನೊಬ್ಬರು ದೂರುದಾರರದ್ದು ಪ್ರಗತಿಪರ ನಿಲುವು. ಸಾಕಲ್ಲ. ಹೀಗಾದಾಗ ಎಂಥೆಂಥವರೂ ಪ್ರಶಸ್ತಿ ಹಿಂದಿರುಗಿಸುವ ಅಸಂಬದ್ಧಕ್ಕೆ ಇಳಿಯದೇ ಏನುಮಾಡಿಯಾರು..? ( ಹುಡುಗಿ ಸೌಜನ್ಯ ಅತ್ಯಾಚಾರ / ಕೊಲೆ ನಡೆದಾಗ ಈ ಪ್ರಶಸ್ತಿ ಪುರಸ್ಕೃತರು ಎಲ್ಲಿದ್ದರು..?) ಇದೇ ಕಾರಣಕ್ಕೇನೆ ನಟಿ ಶ್ವೇತಾ ಪಂಡಿತಳನ್ನೂ ವಿನಾಕಾರಣ ತಡುವಿಕೊಳ್ಳಲಾಯಿತು.ಕಾರಣ ನಮ್ಮ ನಿಮ್ಮಂಥವರನ್ನು ತಡುವಿದರೆ ಯಾರು ಸುದ್ದಿ ಮಾಡುತ್ತಾರೆ..? ಅದರಲ್ಲೂ ಶ್ವೇತಾಳಿಗೆ ನೆಗೆಟೀವ್ ಸುದ್ದಿ ಕೊಟ್ಟು ಪ್ಯಾನೆಲ್ ಡಿಸ್ಕಷನ್ನೇ ನಡೆಯಿತು. ಶ್ವೇತಾಳಿಗಿಂತಲೂ ಘನವಾಗಿ ಫೇಸ್ಬುಕ್ಕಿನಲ್ಲಿ ಅಬ್ಬರಿಸುವ ಅಸಾಮಿಗಳಿಗಿವತ್ತು ಕ್ಯಾರೇ ಅಂದಿಲ್ಲ. ಇವಳಿಗ್ಯಾಕೆ..? ಯಾರು ಉತ್ತರಿಸುವರು..?

ಹೋಗಲಿ ಕರ್ನಾಟಕದ ಮಟ್ಟಿಗೇ ಮಾತಾಡುವುದಾದರೆ, ಹೀಗೆ ಮಾತಿಗೊಮ್ಮೆ ಇವತ್ತು ಟೌನ್ ಹಾಲ್ ಎದುರಿಗೆ ಕೂರುತ್ತೇನೆ, ಅಲ್ಲಿ ಮಾಂಸ ತಿನ್ನುತ್ತೇನೆ, ಅಲ್ಲಿ ದಾದ್ರಿ ಪ್ರಕರಣ ವಿರೋಧಿಸುತ್ತೇನೆಎನ್ನುತ್ತಾ ಕೂರುವವರ ಸಣ್ಣ ಪುಟ್ಟ ದಂಡುಗಳಿಗೆ ಇರುವ ಏಕೈಕ ಅಜೆಂಡಾ ಅಲ್ಲಿ ಕೂತರೆ ಮರುದಿನ ಪತ್ರಿಕೆಯಲ್ಲಿ, ಪರಿಚಯ ಇದ್ದರೆ ಟಿ.ವಿ. ಪ್ಯಾನೆಲ್ ಎಲ್ಲಾ ಕಡೆಗೆ ಚರ್ಚೆಗೂ ಬರುತ್ತದೆ. ಅದೇ ತಮ್ಮಪಾಡಿಗೆ ತಾವು ಹೋಗಿ ಯಾವುದೋ ರೈತನಿಗೋ, ಮಕ್ಕಳಿಗೋ ಹಣ ನೀಡಿದರೆ, ದ.ಕ. ಹುಡುಗಿಯ ರೇಪಿಗೆ ಪ್ರತಿಕ್ರಿಯಿಸಿದರೆ, ಪ್ರಶಾಂತನ ಮರಣಕ್ಕೆ ಅನುರಣಿಸಿದರೆ, ( ದಾದ್ರಿಯಲ್ಲಿ 45 ಲಕ್ಷರೂಪಾಯಿ ಪರಿಹಾರ ಕೊಟ್ಟರೂ ಸಾಕಾಗಿಲ್ಲ. ಇಲ್ಲಿ ನಯಾ ಪೈಸೆಯೂ ಬರಕತ್ತಾಗಿಲ್ಲ) ಮೊನ್ನೆ ಮೊನ್ನೆ ನಡೆದ ಹಸುಳೆಯ ಮೇಲಿನ ಅತ್ಯಾಚಾರಕ್ಕೆ ವಿರೋಧಿಸಿ ಕೂತರೇ ಯಾವ ವರದಿಗಾರನೂ ಸೊಪ್ಪುಹಾಕುತ್ತಿಲ್ಲ. (ಕಾರಣ ಇದು ಹಿಂದೂ ಮತ್ತು ಬಹುಸಂಖ್ಯಾತ ವರ್ಗಗಳ ಪರ ಹೋರಾಟವಾಗುತ್ತದೆ)

ಇಂಥವರ ಬರವಣಿಗೆಯಲ್ಲೂ ನೋಡಿ. ಎರಡ್ಮೂರು ದಶಕಗಳ ಹಿಂದಿನ ಕಥೆಯನ್ನು ಬರೆದುಕೊಳ್ಳುತ್ತಾ, ಆಗೆಲ್ಲಾ ನಾವು ಅನ್ಯಾಯ ಮಾಡಿದ್ದೇವೆ ಅದಕ್ಕೀಗ ಸಹಿಸಿಕೊಳ್ಳೊಣ ಎಂದು ತಿದಿಯೊತ್ತುತ್ತಿದ್ದಾರೆ.ಹಾಗೆ ಮಾಡುವ ಮೂಲಕ ಆಗೆಲ್ಲ ಯಾವ ಸಮಾಜದ ಸಂವಹನದಲ್ಲೂ ಇಲ್ಲದ ಭಾವನೆಗಳನ್ನು, ನಿಮಗೆ ಹಿಂಗೆಲ್ಲಾ ಅನ್ಯಾಯ ಮಾಡಿದ್ವಿ ಎಂದು ಈಗ ನೆನಪಿಸಿ ಉದ್ದೇಶಪೂರ್ವಕವಾಗಿ ಕೆಣಕಿಕೆರಳಿಸುತ್ತಿದ್ದೇವೆ ಎನ್ನುವ ಕನಿಷ್ಠ ಸಾಮಾನ್ಯ ಜ್ಞಾನ/ಸೌಜನ್ಯ ಮತ್ತು ಸಾಮಾಜಿಕ ಕಾಳಜಿಯೂ ಬೇಡವೇ..? ಮಾತೆತ್ತಿದರೆ ಸಮಷ್ಠಿ ಪ್ರಜ್ಞೆ/ ಸಮಾಜವಾದ /ತಳಸ್ಪರ್ಶಿ ಸಂವೇದನೆ ಇದರ ಹೊರತಾಗಿಇನ್ನೇನಾದರೂ ಇದೆಯೇ..? ಇಷ್ಟಕ್ಕೂ ಇವುಗಳ ಡೆಫಿನಿಶನ್ನು ನನಗೆ ಗೊತ್ತಿಲ್ಲ ಇಲ್ಲಿವರೆಗೂ. ಅಸಲಿಗೆ ಆಗಿನ ಕಾಲದಲ್ಲಿ ಮತ್ತು ಈಗಲೂ ಇಂಥಾ ಯಾವ ಭಾವತೀರೇಕಕ್ಕೂ ಒಳಗಾಗದೇ ಎಲ್ಲಾಜಾತಿಯ ಜನರೊಂದಿಗೇ ಬೆರೆತು ಇವತ್ತಿಗೂ/ಇವತ್ತಿಗೂ ಅಂಥಾ ಸಂಬಂಧಗಳನ್ನೂ ಚೆನ್ನಾಗೇ ಉಳಿಸಿಕೊಂಡಿರುವ ನಾನು ಯಾವತ್ತೂ ಯಾರನ್ನೂ ಕೆದಕಿ ನೋಯಿಸಿ, ನೆನಪಿಸಿ ಆಮೇಲೆ ಕಣ್ಣೊರೆಸುವಅದನ್ನು ಬರೆದುಕೊಂಡು ಟಿ.ಆರ್.ಪಿ. ಏರಿಸಿಕೊಳ್ಳುವ ದರ್ದಿಗೆ ಇಳಿದಿಲ್ಲ. ಅಷ್ಟಕ್ಕೂ ಆಗಿನ ಕಾಲದಲ್ಲಿ ಹೀಗೆ ಇಂಥದ್ದೊಂದು ನಡವಳಿಕೆ ಮತ್ತು ಅದರಲ್ಲಿ ಅವಮಾನ ಎನ್ನುವಂತಹ ಯಾವ ಮನಸ್ಥಿತಿಎರಡೂ ಸಮುದಾಯದಲ್ಲೂ ಇರಲೇ ಇಲ್ಲ. ಈಗ ಕೆದರಿ ಇತಿಹಾಸದ ಪುಟಕ್ಕೆ ಬಣ್ಣ ಬಳಿಯುವ ಹುನ್ನಾರವೇಕೆ..?

ಅಷ್ಟಕ್ಕೂ ದಶಕಾತಿದಶಕಗಳ ಹಳೆಯ ಕತೆ, ಕಂಡಕಂಡ ಬಹುಸಂಖ್ಯಾತರ ಮೇಲಿನ ದೌರ್ಜನ್ಯ ಹೊರತು ಪಡಿಸಿದ ಘಟನೆಗಳ ಜಾಗತಿಕ ಪೊಸ್ಟರ್ ಗಳನ್ನು ಫೇಸ್ಬುಕ್ ಗೋಡೆ ಮೇಲೆ ಶೇರ್ಮಾಡಿಕೊಳ್ಳುವುದರ ಹಿಂದೆ ಇನ್ಯಾವ ಘನ ಉದ್ದೇಶ ಇದೆ..? ಒಂದಿಷ್ಟು ಲೈಕು, ಕಮೆಂಟು, ಮತ್ತೊಮ್ಮೆ ಇವತ್ತು ಎಮ್ಮೆ, ಆಕಳುಗಳಿಂದ ಲಭ್ಯವಾಗದ ಟಾನಿಕ್ ಅನ್ನು ಆಗೀಗ ಟೌನ್`ಹಾಲಿ’ನಿಂದಪಡೆಯುವ ಉಮೇದಿ ಇದೆಲ್ಲದರ ಫಲ. ಒಂದಿಷ್ಟು ತಿಳುವಳಿಕೆ ನೀಡಬಹುದಾಗಿದ್ದ ವಿದ್ಯಾವಂತರಲ್ಲೂ ಹೆಚ್ಚುತ್ತಿರುವ ಅಸಹಿಷ್ಣುತೆ. ಅಷ್ಟೆ. ಇದಕ್ಕೆ ಕಾರಣ ಇಂಥವರೆಲ್ಲರಿಗೂ ಮನದಟ್ಟಾಗಿರುವಸುದ್ದಿಗಾಗಿಯೇ ಮಾಡಬೇಕಾದ/ ಮಾಡಬಾರದ ಕ್ರಿಯೆಗಳೊಂದಿಗಿನ ಅನುಸಂಧಾನ. ಅದಕ್ಕಾಗಿ ಇನ್ನು ಮೇಲೆ ಇವರನ್ನು ಮೆರೆಸುವ ಬದಲು ತುಂಬಾ ಲಾಜಿಕ್ ಆಗಿ ಅವರ ಕಾರ್ಯವನ್ನುಪೂರ್ತಿಗೊಳಿಸುವ ಮಿತಿಗೊಳಪಡಿಸಿ. ಹಣ ಯಾವಾಗ ಹಿಂದಿರುಗಿಸುತ್ತೀರಿ ಕೇಳಿ. ಪ್ರಶಸ್ತಿ ವಾಪಸ್ಸು ಕೊಡ್ತೀರಾ. ಸರಿ ಅದರ ದುಡ್ಡನ್ನು ಹಣದ ರೂಪದಲ್ಲಿ ತನ್ನಿ, ಸುದ್ದಿ ಮನೆ ಮಿತ್ರರೊಂದಿಗೇ ಹೋಗಿಇವತ್ತು ತೀರ ಹೈರಣಾಗಿರುವ ಕುಟುಂಬಗಳ ರೈತರಿಗೂ, ಆಸಿಡ್ ದಾಳಿಗೊಳಗಾಗುತ್ತಿರುವ ಹುಡುಗಿಯರ ಬದುಕು ಕಟ್ಟಲೂ, ರೇಪ್ ಗೆ ಒಳಗಾಗಿ ಬದುಕು ಕಳೆದುಕೊಳ್ಳುತ್ತಿರುವವರಿಗೂ, ದುಷ್ಕರ್ಮಿಗಳದಾಳಿಗೀಡಾದ ಮನೆಯವರ ಪುನರ್ ವಸತಿಗೂ ಬಳಸೋಣ ಎನ್ನಿ. ಅಷ್ಟೆ ವಾರ ತಿಂಗಳೊಪ್ಪತ್ತಿನಲ್ಲಿ ಈ ನಾಟಕದ ಕಾವು ಇಳಿಯದಿದ್ದರೆ ಕೇಳಿ. ಅದಕ್ಕಾಗಿ ಯಾವುದಕ್ಕೆ ಮಹತ್ವ ಕೊಡಬೇಕು ಬೇಡಎನ್ನುವುದನ್ನು ಆದಷ್ಟು ಸುದ್ದಿಮನೆಯೂ ಬದ್ಧತೆ ತೋರಿಸಿದರೆ ಇಲ್ಲೆ ಎಲ್ಲ ಮೊಟಕಬಹುದು ಅಲ್ಲವೇ..?

Facebook ಕಾಮೆಂಟ್ಸ್

ಲೇಖಕರ ಕುರಿತು

Santoshkumar Mehandale

ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!