ಅಂಕಣ

ಹೊಸತನದ “ ವಿಜಯ “

ಬದಲಾವಣೆಯ ಪರ್ವಕಾಲದಲ್ಲಿ ನಾವಿದ್ದೇವೆ.. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಈ ಕಾಲಮಾನದ ಜೊತೆ ಹೆಜ್ಜೆ ಹಾಕಲೇಬೇಕು. ಇಲ್ಲದಿದ್ದಲ್ಲಿ ನಿಂತ ನೀರಂತಾಗಿ ಬದುಕಬೇಕಾಗುತ್ತದೆ. ನಮ್ಮದೋ ಆಡಂಬರದ ಜೀವನ, ೨೩ ವರ್ಷಕ್ಕೆ ಎರಡು ಪದವಿ ಪಡೆದುಲೋಕಕ್ಕೆ ಐಡೆಂಟಿಟಿ ಕಾರ್ಡ ಮಾಡಿ ಹಂಚಿದರೆ ‘ಸಾಧನೆ’ ಎಂದುಕೊಂಡು ಬದುಕುತ್ತಿರುವ ನಾವುಗಳು ಬುದ್ಧಿವಂತರಾ ಅಥವಾ ಐಡೆಂಟಿಟಿ ಕಾರ್ಡಿನ ಮೇಲಿನ ಪದವಿಗಳ ಗಳಿಕೆಗಾಗಿ ಮಾತ್ರ ಬದುಕುತ್ತಿರುವ ಅತೀ ದಡ್ಡ ಮನುಷ್ಯರುಗಳಾ? ನಮಗಾಗಿ ನಾವುಬದುಕುತ್ತಿದ್ದೇವೆಯೇ? ಈ ಥರದ ಪ್ರಶ್ನೆಗಳು ಸುಳಿದಾಗ ಅದ್ಯಾವುದೋ ಭಾವ ನಮ್ಮನ್ನ ಸುತ್ತುವರಿಯುತ್ತದೆ ಮತ್ತು ಬಂಧಿಯಾಗಿಸುತ್ತದೆ.

ಕನಸುಗಳು ಇನ್ನೇನು ನಮ್ಮೊಳಗೆ ಜ್ವಲಿಸಲು ಶುರುವಾಗುತ್ತಿದೆ ಅನ್ನುವಾಗ ಜವಾಬ್ದಾರಿಯ ನೊಗ ಹೊರುವ ಸಮಯ ಬಂದುಬಿಡುತ್ತದೆ. ಅವಶ್ಯಕತೆ ಮತ್ತು ಅನಿವಾರ್ಯತೆ ಅದಮ್ಯ ಉತ್ಸಾಹವನ್ನಡಗಿಸಿಬಿಡುತ್ತದೆ. ಅಪ್ಪ ದುಡಿಯುವುದನ್ನ ನೋಡುತ್ತಲೇಇರಬೇಕಾದ ಪರಿಸ್ಥಿತಿಯನ್ನ ಮೀರಿ ನಿಲ್ಲುವ ಕಾಲವನ್ನು ನಾವೇ ಸೃಷ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಾಗ ನಾವು ನಮ್ಮ ಕನಸುಗಳನ್ನೆಲ್ಲ ಎಲ್ಲೋ ಅಡಗಿಸಿಟ್ಟುಕೊಳ್ಳಬೇಕಾಗುತ್ತದೆ.. ಆದರೆ ಆ ಸಮಯವನ್ನ ಮೀರಿ ನಿಂತರೆ ಸಾಧಕನಾಗಬಹುದು.ಹಾಗಾದರೆ ಈ ಜೀವನ ಒಂದು ಪದವಿ ಪಡೆದು ಕೆಲಸ ಪಡೆದಾಗ ಮುಗಿದುಹೋಯಿತೆ..?? ಅಲ್ಲೊಬ್ಬ ಬೀದಿಯಲ್ಲಿ ತರಕಾರಿ ಮಾರುತ್ತಿದ್ದಾನಲ್ಲ ಅವನೂ ಕನಸುಗಳನ್ನ ಹೊತ್ತುಕೊಂಡೇ ಜೀವಿಸುತ್ತಿದ್ದಾನೆ, ಅದೇ ರಸ್ತೆಯ ಇನ್ನೊಂದು ಬದಿಯಲ್ಲಿ ಮಗುವಿಗೆಜೋಗುಳ ಹಾಡುತ್ತ ಹೂ ಕಟ್ಟುತ್ತಿದ್ದಾಳಲ್ಲ ಆ ತಾಯಿ ಅವಳು ಕೂಡ ಚಂದದ ಕನಸಿನೊಂದಿಗೆ ಜೀವಿಸುತ್ತಿದ್ದಾಳೆ, ಅದೆಲ್ಲಿಂದಲೋ ಸೈಡ್ ಸ್ಟಾಂಡ್ ಇಲ್ಲದ ಸೈಕಲ್ ಮೇಲೆ ಬಂದು ಪೇಪರ್ ಎಸೆದು ಹೋದನಲ್ಲ ಆ ಹುಡುಗ ಅವನೂ ಕನಸಿನೊಂದಿಗೆಜೀವಿಸುತ್ತಿದ್ದಾನೆ, ಟೀ ಮಾರುವ ಹುಡುಗ, ದಿನ ಬೆಳಗಾದರೆ ಎಲ್ಲರ ಮನೆಯ ಕಸ ಎತ್ತುವ ಆ ತಾಯಿ,ಹಾದಿಯಲ್ಲಿ ಬಿದ್ದ ಕಸವನ್ನ ಚೂರೂ ಬಿಡದೇ ಹೆಕ್ಕುವ ಆ ಮುನ್ಸಿಪಾಲ್ಟಿಯ ಯುವಕ ಹೀಗೇ ಎಲ್ಲರು ಅವರದೇ ಆದ ಕನಸಿನೊಂದಿಗೆ ಜೀವಿಸುತ್ತಿದ್ದಾರೆ.. ನಮ್ಮಬದುಕೂ ನಾಳೆ ಬದಲಾಗುತ್ತದೆ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಜೀವಿಸುತ್ತಿದ್ದಾರೆ.. ಆ ಮಹತ್ವಾಕಾಂಕ್ಷೆಯೊಂದೇ ಸಮಾಧಾನ ಮಾಡುವುದು..ಒಂದೊತ್ತಿನ ಊಟಕ್ಕೆ ಪರಿತಪಿಸುತ್ತಿರುವ ಅದೆಷ್ಟೋ ಜೀವಗಳು, ಎಲ್ಲ ಇದ್ದೂ ತಾವೇ ಹುಟ್ಟಿಸಿದ ಮಕ್ಕಳಿಂದಹೊರ ತಳ್ಳಲ್ಪಟ್ಟ ಹಿರಿಯ ಜೀವಗಳು ಹೀಗೆ ಎಲ್ಲವೂ ವಿಚಿತ್ರ.ಇದೆಲ್ಲ ಮನುಷ್ಯ ನಿರ್ಮಿಸಿದ ಪ್ರಸ್ತುತ. ಅಹಂಕಾರ ಮತ್ತು ಆಸೆಯ ತುತ್ತತುದಿಯಲ್ಲಿ ಮೆರೆಯುತ್ತಿರುವ ಮನುಷ್ಯನ ವಿಕಾರ ರೂಪ. ಪದವಿ, ಸನ್ಮಾನ, ಪ್ರಶಸ್ತಿ  ಇವೆಲ್ಲವನ್ನ ಒಂದರ ಮೇಲೊಂದುಪಡೆದು ಹುಟ್ಟಿಸಿದ ತಂದೆ ತಾಯಿಯನ್ನ ವೃದ್ಧಾಶ್ರಮದಲ್ಲಿ ಬಿಟ್ಟರೆ ಆ ಸಾಧನೆಗೆ ಏನಾದರೂ ಮರ್ಯಾದೆ ಇದೆಯಾ? ಖಂಡಿತಾ ಇಲ್ಲ.

ಕನಸುಗಳ ಅರಸಿ ಅರ್ಧಕ್ಕೆ ಕಾಲೇಜ್ ಶಿಕ್ಷಣ ನಿಲ್ಲಿಸಿದ ಬಿಲ್ ಗೇಟ್ಸ್ ಇವತ್ತು ಜಗತ್ತಿನಲ್ಲಿ ಅತಿ ಹೆಚ್ಚು ಹಣ ಹೊಂದಿರುವ ಮನುಷ್ಯ. ಏನಾದರೂ ಮಾಡಬೇಕೆಂದು ಹೊರಟು ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಿ ಕಾರ್ ನಿಲ್ಲಿಸುವ ಶೆಡ್ ನಲ್ಲಿ Apple ಕಂಪನಿಯನ್ನಶುರುಮಾಡಿದ ಸ್ಟೀವ್ ಜಾಬ್ಸ್ ಹೊಸ ಜನರೇಶನ್ ನ ಟೆಕ್ನಾಲಜಿಯ ಕರ್ತೃ, ಹೊಟ್ಟೆಪಾಡಿಗಾಗಿ ಪೆಪರ್ ಹಾಕುವ ಕೆಲಸ ಮಾಡುತ್ತಿದ್ದ ವಾರೆನ್ ಬಫೆಟ್ ಇವತ್ತು ಬರ್ಕಶೈರ್ ಹಾಥ್ ವೇ ಎಂಬ ಜಗತ್ತಿನ ದೊಡ್ಡ ಇನ್ವೆಸ್ಟಮೆಂಟ್ ಸಂಸ್ಥೆಯ ಯಜಮಾನ ಮತ್ತುಇನ್ವೆಸ್ಟಮೆಂಟ್ ಗುರು. ಅವರ್ಯಾರಿಗೂ ಹೆಸರು, ಗೌರವ ಕೇವಲ ಪದವಿಯಿಂದ ಬರಲಿಲ್ಲ. ಬದಲಾಗಿ ಹೊಸತು ಮಾಡುವ ಛಲ ಬದುಕ ಬದಲಾಯಿಸಿತ್ತು. ಅರುಣಿಮಾ ಸಿನ್ಹಾ ಏಷ್ಯಾದ ಎಲ್ಲ ಖಂಡಗಳ ಎತ್ತರದ ಪ್ರದೇಶಗಳ ತುತ್ತ ತಿದಿಯಲ್ಲಿ ನಿಂತು ವಂದೇಮಾತರಂ ಅಂದಳಲ್ಲ ಆ ಅತ್ಮಸ್ಥೈರ್ಯ ನಮ್ಮಲ್ಲಿದೆಯೇ? ನಾನು ನನ್ನದು ಎನ್ನುವ ಈ ಚೌಕಟ್ಟನ್ನು ಮೀರಿ ನಿಲ್ಲಲು ಸಾಧ್ಯವಾಗಲೇ ಇಲ್ಲವಾ? ಬದುಕು ಕೇವಲ ಸಂಬಳದ ಇನ್ಕ್ರೀಮೆಂಟ್ ಅಲ್ಲ.. ಸತ್ಯ ನಡೆಲ್ಲ, ಸುಂದರ್ ಪಿಚ್ವೈ,ಇಂದ್ರಾ ನೂಯಿ, ಶಂತನೂನಾರಾಯಣ್, ವಿಕ್ರಮ್ ಪಂಡಿತ್ ಹೀಗೇ ಅನೇಕರು ಹಿಂದುಸ್ಥಾನದ ಹೆಸರನ್ನ ವಿಶ್ವದಲ್ಲಿ ಅಜರಾಮರಗೊಳಿಸುತ್ತಿದ್ದಾರಲ್ಲ ಇವರು ಹೊಸತು ಮಾಡುವ ಹಂಬಲದೊಂದಿಗೆ ಜೀವಿಸಿದರು.ಈಗ ಭಾರತದಲ್ಲೇ ಇದ್ದುಕೊಂಡು ಹೊಸದೊಂದು ಸಂಚಲನ ಮೂಡಿಸಿದಯುವಕನೋರ್ವನ ಕಥನವನ್ನ ತಿಳಿಯೋಣ.ನೀವೆಷ್ಟು ಜನ ಇವನ ಕಥೆಯ ಬಲ್ಲಿರೋ ತಿಳಿಯೇ. ಆದರೆ ಈತ ಹೊಸತನಕ್ಕೆ ಭಾರತವನ್ನು ಅನುವುಗೊಳಿಸಿದ.ಆತನೇ ವಿಜಯ ಶೇಖರ್ ಶರ್ಮಾ.”ಅಹಂ ಬ್ರಹ್ಮಾಸ್ಮಿ – I am the Creator” ಎಂದುಹೆಮ್ಮೆಯಿಂದ ಹೇಳುವ ಈತ ಸಾಧನೆಯ ತುತ್ತ ತುದಿಯಲ್ಲಿ ನಿಂತು ತನ್ನ ಬದುಕಿನ ಸಾಹಸಗಾಥೆಯನ್ನ ತೆರೆದಿಡುತ್ತಾ ಹೋದರೆ ಆಶ್ಚರ್ಯ ಮತ್ತು ಖುಷಿ ನಿಮಗಾಗುವುದರಲ್ಲಿ ಅನುಮಾನವಿಲ್ಲ.

2013 ರಿಂದ 2015ರ ಅವಧಿಯಲ್ಲಿ ಒಂದು ಕಂಪನಿ ಭಾರತದ ಯುವಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು . ಚೈನಾದ ಬಿಲಿಯನೈರ್ ಜಾಕ್ ಮಾ ಮತ್ತು ಭಾರತದ ರತನ್ ಟಾಟ ಆ ಕಂಪನಿಯಲ್ಲಿ ಹಣ ತೊಡಗಿಸಲು ತುದಿಗಾಲಲ್ಲಿ ನಿಂತಿದ್ದರು ಅಂದರೆ ನೀವೇಲೆಕ್ಕ ಹಾಕಿ ಆ ಕಂಪನಿಯ ಮೌಲ್ಯವನ್ನ. ನಮ್ಮ ರತನ್ ಟಾಟ ಸುಮ್ಮನೆ ಎಲ್ಲದರಲ್ಲೂ ಇನ್ವೆಸ್ಟ್ಮೆಂಟ್ ಮಾಡುವವರಲ್ಲ. ಆದರೆ ಅದೇ ರತನ ಟಾಟ ಈ ಕಂಪನಿಯಲ್ಲಿ ಹಣ  ತೊಡಗಿಸಲು ಮುಂದಾಗಿದ್ದರು,ಅದಕ್ಕಿಂತಲೂ ಮುಖ್ಯವಾಗಿ ಚೈನಾದ ಈ-ಕಾಮರ್ಸ್ದೈತ್ಯ ಅಲಿಬಾಬಾ.ಕಾಂ ನ ಜಾಕ್ ಮಾ ಭಾರತದ ಈ ಕಂಪನಿಯಲ್ಲಿ ಹಣ ತೊಡಗಿಸುವ ಇರಾದೆ ವ್ಯಕ್ತಪಡಿಸಿದ್ದರು. ಹೌದು ಆ ಬಿಲಿಯನ್ ಡಾಲರ್ ಕಂಪನಿ ಯಾವುದು ಗೊತ್ತ ?? ಅದೇ One97 Communications, ಬಹುಶ ನಿಮಗೆ ಈ ಕಂಪನಿಯ ಬಗ್ಗೆತಿಳಿದಿರಲಿಕ್ಕಿಲ್ಲ ಆದರೆ “PayTM”ಈ ಮೊಬೈಲ್ ಆಪ್ ಬಗ್ಗೆ ನೀವು ಕೇಳಿರದೇ ಇರಲಿಕ್ಕಿಲ್ಲ.  PayTM ಇದೆಯಲ್ಲ ಅದು One97 Communications ಕಂಪನಿಯ ಅಂಗಸಂಸ್ತೆಯಾಗಿದೆ. ಮೊಬೈಲ್ ರಿಚಾರ್ಜ್,ಟಿವಿ ರಿಚಾರ್ಜ್,ಹೊಸ ಹೊಸ ಗ್ರಹಉಪಯೋಗಿ ವಸ್ತುಗಳ ಖರೀದಿಗೆ ಮತ್ತು ಆದಾಯ ತೆರಿಗೆಯ ಸಲ್ಲಿಕೆಗೂ ಈ ಮೊಬೈಲ್ ಆಪ್ ಉಪಯೋಗಿ.ಈ ಕಂಪನಿಯ ಬೆಳವಣಿಗೆ ಇದೆಯಲ್ಲ ಅದು ನಮ್ಮ ದೇಶದ ಅನೇಕ ಬಿಸಿನೆಸ್ ಮೆನ್ ಗಳ ನಿದ್ದೆಗೆಡಿಸಿತ್ತು. ಕೇವಲ ಐದು ವರ್ಷದಲ್ಲಿ ಬಿಲಿಯನ್ ಡಾಲರ್ಕಂಪನಿಯನ್ನು ಕಟ್ಟುವುದು ಸುಲಭದ ಮಾತಲ್ಲ. ಹೊಸತಾಗಿ ಶುರುವಾದ ಈ ಕಂಪನಿ ಇಂದು ಬಿಲಿಯನ್ ಡಾಲರ್ ಕಂಪನಿಯಾಗಿ ಹೊರಹೊಮ್ಮಿದೆ ಅದರ ಹಿಂದೆ ಇರುವ  ತಲೆಯೇ ವಿಜಯ್ ಶೇಖರ್ ಶರ್ಮ. ಹೊಸತು ಮಾಡಬೇಕೆಂಬ ಹಂಬಲ ಈ ಹುಡುಗನಬದುಕನ್ನ ಬದಲಾಯಿಸಿತ್ತು .

ಆಲಿಘರ್ ನ ಮದ್ಯಮ ವರ್ಗದ ಮನೆಯಲ್ಲಿ ಜನಿಸಿದ ವಿಜಯ್ ಎರಡು  ಜನ ಅಕ್ಕಂದಿರ ಮುದ್ದಿನ ತಮ್ಮ ಮತ್ತು ಒಬ್ಬ ತಮ್ಮನಿಗೆ ಪ್ರೀತಿಯ ಅಣ್ಣನಾಗಿದ್ದ. ವಿಜಯ್ ನ ಅಪ್ಪ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು.ಮಧ್ಯಮವರ್ಗದ ಈ ಹುಡುಗನಿಗೆ ಶಾಲೆಗೆಹೋಗುವುದೆಂದರೆ ಬಲು ಇಷ್ಟವಾಗಿತ್ತು ಮತ್ತು ಎಲ್ಲ ಶಿಕ್ಷಕರ ಮುದ್ದಿನ ವಿಧ್ಯಾರ್ಥಿಯಾಗಿದ್ದ ವಿಜಯ್. ಶಾಲೆಯಲ್ಲಿ ಯಾವತ್ತೂ ವಿಜಯ್ ತರಗತಿಗೆ ಪ್ರಥಮನಾಗಿರುತ್ತಿದ್ದ. ಅತಿ ಬುದ್ದಿವಂತ ಹುಡುಗನಾಗಿದ್ದ ವಿಜಯ್ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಹನ್ನೆರಡನೆತರಗತಿಯನ್ನ ಮುಗಿಸಿದ್ದ ಮತ್ತು ಇಂಜಿನೀರಿಂಗ್ ಪದವಿ ಮಾಡಲು ಡೆಲ್ಲಿಯ ಉಪಕುಲಪತಿಯವರ ಒಪ್ಪಿಗೆಯನ್ನು ಪಡೆದು ಡೆಲ್ಲಿಯೆಂಬ ಮಹಾನಗರಿಯತ್ತ ಪ್ರಯಾಣ ಬಳಸಿದ್ದ. ಶಾಲೆಯಲ್ಲಿ ವಿದ್ಯಾಭ್ಯಾಸದಲ್ಲಿ ಯಾವತ್ತೂ ಮುಂದೆ ಇರುತ್ತಿದ್ದ ವಿಜಯ್ ತನ್ನಹದಿನಾಲ್ಕನೇ ವಯಸ್ಸಿನಲ್ಲಿಯೇ ಇಂಜಿನೀಯರಿಂಗ್ ಪದವಿ ಮಾಡಲು ಹೊರಡುತ್ತಾನೆ ಅಂದರೆ ಆತನ ಬುದ್ದಿಮತ್ತೆ ನಿಜವಾಗಲೂ ಅದ್ಭುತವೆ ಸರಿ. ಆದರೆ ಅಂದಿಗೆ ವಿಜಯ್ ಗೆ ಒಂದು ಪದವಿ ಮತ್ತು ಒಂದು ಹತ್ತು ಸಾವಿರ ರೂಪಾಯಿ ಸಂಬಳದ  ಕೆಲಸ ಸಿಕ್ಕರೆಸಾಕಿತ್ತು. ಮಧ್ಯಮ ವರ್ಗದ  ಆ ಕುಟುಂಬ ಅಪ್ಪನ ಸರ್ಕಾರಿ ನೌಕರಿ ಮೇಲೆ ನಿಂತಿತ್ತು, ಸಂಸಾರಕ್ಕೆ ಆದಾಯದ ಅವಶ್ಯಕತೆ ತುಂಬಾ ಇತ್ತು. ಅಪ್ಪನಿಗೆ ಮಗನ ಬುದ್ದಿಮತ್ತೆಯನ್ನು ನೋಡಿ ಖುಷಿಯೊಂದು ಕಡೆ ಆದರೆ ಮಗನು ಕುಟುಂಬದ ಕಷ್ಟಕ್ಕೆ ಬೇಗಸ್ಪಂದಿಸುವಂತಾಗಲಿ ಎಂಬ ಅನಿವಾರ್ಯತೆಯ ಚಿಂತೆ ಮತ್ತು ಅವಶ್ಯಕತೆಯ ಭಾವ ಸುಳಿಯುತ್ತಿತ್ತು.ಶಾಲೆಯಲ್ಲಿ ಮೊದಲ ಬೆಂಚಿನ ವಿದ್ಯಾರ್ಥಿಯಾಗಿದ್ದ ವಿಜಯ್ ಪ್ರಾರಂಭದಲ್ಲಿ ಡೆಲ್ಲಿಯ ಇಂಜಿನೀರಿಂಗ್ ಕಾಲೇಜ್ ನಲ್ಲೂ ಮೊದಲ ಬೆಂಚಿನಲ್ಲೇ ಕೂರುತ್ತಿದ್ದ ಆದರೆವಿಜಯ್ ಗೆ  ಇಂಗ್ಲಿಷ್ ಕಬ್ಬಿಣದ ಕಡಲೆಯಂತಾಗಿತ್ತು. ಮುಂದೆ ಕೂರುತ್ತಿದ್ದರಿಂದ ಪ್ರಾಧ್ಯಾಪಕರೆಲ್ಲ ವಿಜಯ್ ನನ್ನೇ ಪ್ರಶ್ನಿಸುತ್ತಿದ್ದರು ಆಗ ತಡವರಿಸುತ್ತಿದ್ದ ವಿಜಯ್’ಗೆ ಅವಮಾನ ಕಾಯಂ ಆಗತೊಡಗಿತು,ಮೊದಲ ಬೆಂಚ್’ನ ಸಹವಾಸವನ್ನು ಬಿಡಬೇಕಾದ ಸ್ಥಿತಿನಿರ್ಮಾಣವಾಗಿಬಿಟ್ಟಿತ್ತು, ತಾರೆ ಜಮೀನ್ ಪರ್ ಸಿನಿಮಾದಲ್ಲಿ ಅಕ್ಷರಗಳು ಹಾರಾಡುತ್ತಿದ್ದವಲ್ಲ ಹಾಗೆ  ನನಗೆ ಇಂಗ್ಲಿಷ್ ಅಕ್ಷರಗಳು ಹಾರಾಡುತ್ತಿದ್ದಂತೆ ಭಾಸವಾಗುತ್ತಿತ್ತು ಎಂದು ವಿಜಯ್ ಒಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಗೊತ್ತಿದ್ದೋ ಗೊತ್ತಿಲ್ಲದೆಯೋವಿಜಯ್ ನ  ಬದುಕು ಆದ್ಯವುದೋ ಅನಿವಾರ್ಯತೆಯ ಸುಳಿಗೆ ಸಿಲುಕಿ ನಲುಗುತ್ತಿತ್ತು. ಡೆಲ್ಲಿಯ ಲೋಕಲ್ ಬಸ್ ನಲ್ಲಿ ದಿನವೂ ಕಾಲೇಜ್ ಗೆ ಪ್ರಯಾಣ ಮಾಡುವುದು ಅನಿವಾರ್ಯವಾಗಿತ್ತು. ಕಾಲಿ ಜೇಬು ಮತ್ತು ಹಸಿದ ಹೊಟ್ಟೆ ಬದುಕಿನ ಕರಾಳತೆಯ ಪ್ರದರ್ಶನಮಾಡಿತ್ತು.ಅಪ್ಪ ಕೊಟ್ಟ ಹಣದಲ್ಲಿ ದಿನದ ಎರಡು ಹೊತ್ತು ಹತ್ತು ರೂಪಾಯಿಯ ಚಹಾ ಕುಡಿದು ಜೀವಿಸುತ್ತಿದ್ದ ವಿಜಯ್, ದಿನವೂ ಕಾಲೇಜ್ ಗೆ ಬಂದು ಇಂಗ್ಲಿಷ್ ಮಾಗಜೀನ್ ಗಳನ್ನು ಓದುತ್ತಾ ಇಂಗ್ಲಿಷ್ ಜ್ನಾನವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಆಗೆಲ್ಲವಿಜಯ್ ನನ್ನು ಸೆಳೆದ ವ್ಯಕ್ತಿಯೆಂದರೆ ಸಬೀರ್ ಭಾಟಿಯಾ.ಸಬೀರ್ ಭಾಟಿಯ 2009 ರಲ್ಲಿ Hotmail ಶುರುಮಾಡಿದ್ದ ವ್ಯಕ್ತಿ ಮುಂದೆ ಜಗತ್ತಿಗೆ ಈ-ಮೈಲ್ ನ ಮಹತ್ವವನ್ನು ಸಾರಿದ ಮತ್ತು ಕ್ರಾಂತಿ ಮಾಡಿದ ವ್ಯಕ್ತಿ. ಮೈಕ್ರೋಸಾಫ಼್ಟ್ ಕೂಡ ಸಬೀರ್ ನ Hotmailಅನ್ವೇಷಣೆಯನ್ನು ಕೊಂಡಾಡಿತ್ತು ಮತ್ತು ಬದಲಾದ ಕಾಲಘಟ್ಟದಲ್ಲಿ ಸಬೀರ್ ಮೈಕ್ರೋಸಾಫ್ಟ್ ಗೆ Hotmail ಮಾರಾಟ ಮಾಡಿ ಅಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ.  ವಿಜಯ್’ಗೆ ನಾನೂ ಕೂಡ ಸಬೀರ್ ನಂತೆ ಆಗಬೇಕೆಂಬ ಆಸೆಚಿಗುರೊಡೆಯತೊಡಗಿತ್ತು. ಕೇವಲ ಕನಸೊಂಡೆ ಕಾಣದೆ ಆ ನಿಟ್ಟಿನಲ್ಲಿ ಹೆಜ್ಜೆಯನ್ನೂ ಬಹುಬೇಗನೆ ಇಟ್ಟಿದ್ದ ವಿಜಯ್,ತನ್ನ ಮೂರನೇ ವರ್ಷದ  ಇಂಜಿನೀರಿಂಗ್’ನಲ್ಲಿ ಗೆಳೆಯ ಹರೀಂದರ್ ಠಕ್ಕರ್ ಜೊತೆ ಸೇರಿ ಒಂದು ಕಂಪನಿಯನ್ನು ಶುರು ಮಾಡಿಬಿಟ್ಟ ವಿಜಯ್.ಅಂತರ್ಜಾಲದ ಸರ್ಚ್ ಇಂಜಿನ್ ಒಂದನ್ನು ಗೆಳೆಯರಿಬ್ಬರು ಶುರುಮಾಡಿಬಿಟ್ಟರು. ಅದೇ Xs! Corporation.ಈ ಕಂಪನಿ ಗೆ ಸುಮಾರು Rs.20,000 ದಷ್ಟು ಹಣವನ್ನು ವೆಂಚರ್ ಕ್ಯಾಪಿಟಲಿಸ್ಟ್  ಸಂಸ್ಥೆಯೊಂದು ನೀಡಿತ್ತು.ಮುಂದೆ 1998 ರಲ್ಲಿ ವಿಜಯ್ ತನ್ನಕಾಲೇಜ್ ಅನ್ನು ಮುಗಿಸಿದ್ದ. 1999ರ ಫೆಬ್ರುವರಿಯಿಂದ ಮೇ ವರೆಗಿನ ಅವಧಿಯಲ್ಲಿ  Xs! Corporation ನ ಗಳಿಕೆ ಸುಮಾರು ಐವತ್ತು ಲಕ್ಷಕ್ಕೆ ತಲುಪಿತ್ತು. ಆದರೆ ಸಮಯ ಕೈ ಕೊಟ್ಟಿತ್ತು ಅನಿವಾರ್ಯವಾಗಿ ಈ ಕಂಪನಿಯನ್ನು ಮಾರಬೇಕಾದ ಪ್ರಸಂಗಬಂತು.1999 ರಲ್ಲಿ ವಿಜಯ್ ಕಂಪನಿಯನ್ನು Living Media India ಗೆ ಮಾರಾಟ ಮಾಡಿಬಿಟ್ಟರು. ಕಂಪನಿಯನ್ನು ಮಾರಿ ಒಂದಿಷ್ಟು ಹಣವನ್ನು ಪಡೆದ ವಿಜಯ್ ಅಮ್ಮನಿಗೊಂದು ಸೀರೆಯನ್ನು ತೆಗೆದುಕೊಂಡು ಹೋದ ಜೊತೆಗೆ ಮನೆಗೆ ಒಂದು ಹೊಸ ಕಲರ್ಟಿ‌ವಿಯನ್ನು ಕೊಂಡುಹೋದ.ಇದನ್ನ ನೋಡಿದ ಅಪ್ಪ ಅಮ್ಮ ತುಂಬಾ ಖುಷಿಪಟ್ಟರು. ಮನೆಯ ಸಾಲವನ್ನೆಲ್ಲ ತೀರಿಸಿದ ವಿಜಯ್ ತನ್ನ ಭವಿಷ್ಯಕ್ಕಾಗಿ ಎರಡು ಲಕ್ಷ ರೂಪಾಯಿಯನ್ನು ಇಟ್ಟುಕೊಂಡು ಹೊಸ ಕನಸ ಅರಸಿ ಹೊರಟ.

ವಿಜಯ್ ಮುಂದೆ ಸೃಷ್ಟಿಸಿದ್ದೆಲ್ಲಾ ಈಗ ಇತಿಹಾಸವೇ ಸರಿ. 2010 ರಲ್ಲಿ ಸ್ನೇಹಿತ ರಾಜೀವ್ ಶುಕ್ಲನೊಂದಿಗೆ ಸೇರಿ ವಿಜಯ್ One97 Communications ಎಂಬ ಕಂಪನಿಯನ್ನು ಪ್ರಾರಂಭ ಮಾಡಿದರು.ಸ್ಮಾರ್ಟ್ ಫೋನ್ ಗಳ ಮೂಲಕ ಜನರಿಗೆಮೌಲ್ಯವರ್ಧಿತ ಸೇವೆಯನ್ನು ನೀಡುವ ಉದ್ದೇಶವನ್ನು ಇಟ್ಟುಗೊಂದು ಈ ಕಂಪನಿಯನ್ನು ಶುರುಮಾಡಲಾಯಿತು.ಹಳೆ ಕಂಪನಿಯನ್ನು ಮಾರಿದಾಗ ಬಂದಿದ್ದ ಎರಡು ಲಕ್ಷ ರೂಪಾಯಿಗಳನ್ನೇ ಬಂಡವಾಳವನ್ನಾಗಿಟ್ಟುಕೊಂಡು ಮಿಕ್ಕಿದ ಹಣವನ್ನು ಸ್ನೇಹಿತರಾಜೀವನಿಂದ ಪಡೆದು ಹೊಸ ಕಂಪನಿಯನ್ನು ಪ್ರಾರಂಭ ಮಾಡಿದರು ವಿಜಯ್. ಮನೆಯಲ್ಲಿ ಮದುವೆ ಆಗು ಎಂಬ ಒತ್ತಡ,ಆದರೆ ವಿಜಯ್ ಗೆ ಹೆಣ್ಣು ಕೊಡುವವರೇ ಇರಲಿಲ್ಲ.ಹೊಸತನಕ್ಕೆ ಹಾತೊರೆಯುತಿದ್ದ ಮನಸ್ಸಿನ ಎದುರು ಎಲ್ಲವೂ ನಗಣ್ಯವಾಗಿತ್ತು. ಆದರೆ9/11 ನಲ್ಲಿ ಮುಂಬೈನಲ್ಲಿ ನಡೆದ ಉಗ್ರಗಾಮಿಗಳ ದಾಳಿಯಲ್ಲಿ ವಿಜಯ್ ನ ಸ್ನೇಹಿತ ರಾಜೀವ್ ಮೃತನಾಗಿದ್ದ,ಹೊಸ ಕನಸಿಗೆ ನೀರೆರೆಯುವ ಕೆಲಾಸ ಮಾಡುತ್ತಿದ್ದ ರಾಜೀವನನ್ನು  ಕಳೆದುಕೊಂಡು ಅಕ್ಷರಶ: ಸೋತಿದ್ದ ವಿಜಯ.ಆದರೆ ಆತ್ಮಸ್ತೈರ್ಯದ ಎದುರುಅಡೆತಡೆಗಳು ಏನೂ ಅನ್ನಿಸಲಿಲ್ಲ. ಎಲ್ಲವನ್ನೂ ಮೀರಿ PayTM ಎಂಬ ಮೊಬೈಲ್ ವಾಲೆಟ್ ಸೇವೆಯನ್ನು ಪ್ರಾರಂಭ ಮಾಡಿಯೇಬಿಟ್ಟ. ಬದಲಾಗುತ್ತಿರುವ ಕಾಲದಲ್ಲಿ ಸ್ಮಾರ್ಟ್ ಫೋನ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸುಟ್ಟಿದೆ ಎಂಬುದನ್ನೂ ಅರಿತವಿಜಯ್ ಅದನ್ನು ಯಶಸ್ವಿಯಾಗಿ ಉಪಯೋಗಿಸಿಕೊಂಡ.PayTM ವೆಬೀಟೆ ಅಥವಾ ಮೊಬೈಲ್ ಆಪ್ ಮೂಲಕ ಜನರು ಮೊಬೈಲ್ ರೀಚಾರ್ಜ್,ಟಿ‌ವಿ ರೀಚಾರ್ಜ್,ಹಣದ ವರ್ಗಾವಣೆ ಹೀಗೆ ಅನೇಕ ಸೇವೆಯನ್ನು ಪಡೆದುಕೊಳ್ಳಬಹುದಿತ್ತು. ಜನರ ಮನಸ್ಸನ್ನುಅರಿತ ವಿಜಯ್ ಭಾರತದಂತಹ ಯುವ ರಾಷ್ಟ್ರದಲ್ಲಿ ಹೊಸತನವೊಂದರ ಸೃಷ್ಟಿಯನ್ನು ಮಾಡಿದ್ದರು.

2010ರಲಿ ಶುರುವಾದ ಈ ಕಂಪನಿ ಇಂದು 70 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ವಿಜಯ್ ನ ಗುರಿಯೆಂದರೆ 2015 ರ ಕೊನೆಯಲ್ಲಿ ಕಂಪನಿ 100 ಮಿಲಿಯನ್ ಗ್ರಾಹಕರನ್ನು ಹೊಂದಬೇಕು ಮತ್ತು 2016-17 ರಲ್ಲಿ ಸುಮಾರು 10 ಬಿಲಿಯನ್ ಗ್ರಾಹಕರನ್ನುಹೊಂದುವುದಾಗಿದೆ. ಈಗಾಗಲೇ ಈ-ಕಾಮರ್ಸ್ ರಂಗಕ್ಕೆ ಧುಮುಕಿರುವ PayTM ಅಲ್ಲೂ ಯಶ ಕಾಣುವ ಲಕ್ಷಣಗಳು ಗೋಚರವಾಗುತ್ತಿದೆ. ಅಂದು ಡೆಲ್ಲಿ ಲೋಕಲ್ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ವಿಜಯ್ ಇಂದು ಐಶಾರಾಮಿ ಕಾರ್ ನಲ್ಲಿ ಓಡಾಡುತ್ತಾನೆ.ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಹುಡುಗನೋರ್ವ ಇಂದು ಬಿಲಿಯನ್ ಡಾಲರ್ ಕಂಪನಿಯ ಒಡೆಯ.ಒಂದೊತ್ತಿನ ಊಟಕ್ಕೆ ಪರಿತಪಿಸುತ್ತಿದ್ದ ಇಂಜಿನೀರಿಂಗ್ ವಿದ್ಯಾರ್ಥಿ ಇಂದು ಫೈವ್ ಸ್ಟಾರ್ ಹೊಟೇಲ್ ನಲ್ಲಿ ಮೂರೊತ್ತು ಊಟ ಮಾಡಬಲ್ಲ.ಬದಲಾವಣೆಗೆ ತನ್ನನ್ನು ಒಗ್ಗಿಸಿಕೊಂಡು ಹೊಸತನದ ಸೃಷ್ಟಿ ಮಾಡಿದ 37 ವರ್ಷದ ವಿಜಯ್ ಇವತ್ತು ಚೈನಾದ ಈ-ಕಾಮರ್ಸ್ ದೈತ್ಯ ಜಾಕ್ ಮಾ ಅವರ ಗಮನವನ್ನು ಸೆಳೆದಿದ್ದಾನೆ ಅಂದರೆ ಮೌಲ್ಯವರ್ಧಿತ ಸೇವೆಯ ವಿಭಾಗದಲ್ಲಿ  PayTM ಭವಿಷ್ಯದಲ್ಲಿಮಹತ್ವದ ಪಾತ್ರವನ್ನು ವಹಿಸುವುದರಲ್ಲಿ ಅನುಮಾನವೇ ಇಲ್ಲ.

ಹೊಸತನದ ಸೃಷ್ಟಿಯಲ್ಲಿ ಜಯಗಳಿಸಿ ವಿಜಯ್ ಶೇಖರ್ ಶರ್ಮ ನಮಗೆಲ್ಲ ಮಾದರಿಯಾಗಲಿ. ಹೊಸತು ಮಾಡುವ ಹಂಬಲ ಜೀವಂತವಾಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!