ಅಂಕಣ

ಜಗಕಂಡ ಅಪ್ರತಿಮ ಅಭಿಯಂತರ-ವಿಶ್ವೇಶ್ವರ

ಮೈಸೂರು ಸಂಸ್ಥಾನದ ಅಧೀನದಲ್ಲಿದ್ದ ಭದ್ರಾವತಿ ಸಕ್ಕರೆ ಕಾರ್ಖಾನೆ ಆವಾಗ ನಷ್ಟದಲ್ಲಿತ್ತು. ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಕಾರ್ಖಾನೆ ಅದಾಗಿತ್ತು. ಕಾರ್ಖಾನೆಯನ್ನು ಮೇಲೆತ್ತಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ. ಕಡೆಗೆ ಮತ್ತೆ ವಿಶ್ವೇಶ್ವರಯ್ಯ ನವರೇ ಬರಬೇಕಾಯಿತು.  ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರು ಬಂದ ಮತ್ತೆ ಕಾರ್ಖಾನೆ ಪುನಃಶ್ಚೇತನಗೊಂಡಿತು. ಅವರ ಈ ಕೆಲಸಕ್ಕೆ ಸಂಬಳ ಅಥವಾ ಗೌರವ ಧನ ಕೊಡಲು ಮಹಾರಾಜರು ಮರೆತಿದ್ದರು. ಮತ್ತೆ ಮಂತ್ರಿಗಳ ಮೂಲಕ ನೆನಪಿಸಿಕೊಂಡ ಮಹಾರಾಜರು ವಿಶ್ವೇಶ್ವರಯ್ಯ ರವರನ್ನು ಕರೆದು ಗೌರವ ಧನ ನೀಡಿದರು.   ಆದರೆ ವಿಶ್ವೇಶ್ವರಯ್ಯರವರು ಅದನ್ನು ಸ್ವೀಕರಿಸಲು  ನಿರಾಕರಿಸಿ, ಅಲ್ಲಿನ ಕೆಲಸಗಾರರಲ್ಲಿ ಸ್ಕಿಲ್’ನ ಕೊರತೆಯಿರುವ ಕಾರಣ ಮುಂದಿನ ದಿನಗಳಲ್ಲಿ ಕಾರ್ಖಾನೆಯಲ್ಲಿ ಈ  ಥರಾ ಆಗುವುದು ಬೇಡ, ಅದಕ್ಕಾಗಿ ಒಂದು ಉತ್ತಮ ಶಿಕ್ಷಣ ನೀಡುವ ಕಾಲೇಜು ತೆರೆಯಿರಿ ಎಂದು ಮಹಾರಾಜರಿಗೆ ಸಲಹೆ ಮಾಡಿದರು. ಅವರ ಸಲಹೆಯನ್ನು ಸ್ವೀಕರಿಸಿದ ಅರಮನೆ ಆಡಳಿತ ಮಂಡಳಿ ಈ ಕಾಲೇಜಿಗೆ ವಿಶ್ವೇಶ್ವರಯ್ಯ ರವರ ಹೆಸರನ್ನೇ ಇಡಲು ನಿರ್ಧರಿಸಿತು. ಆದರೆ ವಿಶ್ವೇಶ್ವರಯ್ಯ ನವರು ಅದನ್ನು ನಯವಾಗಿ ತಿರಸ್ಕರಿಸಿ ಮಹರಾಜರ ಹೆಸರನ್ನೇ ಇಡುವಂತೆ ಸೂಚಿದರು. ಅದುವೇ ಇವತ್ತು ಬೆಂಗಳೂರಿನ ಕೇಂದ್ರ ಭಾಗದಲ್ಲಿ ಸ್ಥಾಪಿಸಲಾಗಿರುವ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು.

ಎಂಥಾ ಸಿಂಪಲ್ ಮನುಷ್ಯ ಅಂಥಾ ಅನ್ಸಲ್ವಾ? ಪಾಯಿಖಾನೆಯಿಂದ ಹಿಡಿದು ದೊಡ್ಡ ದೊಡ್ಡ ವಿಮಾನ ನಿಲ್ದಾಣಕ್ಕೂ ಗಾಂಧಿಗಳ ಹೆಸರಿಟ್ಟಿರುವವರ ನಾಡಿನಲ್ಲಿ ವಿಶ್ವೇಶ್ವರಯ್ಯ ನಂತವರೂ ಇದ್ದರು ಎಂದರೆ ಅವರೆಷ್ಟು ಸರಳ ಸಜ್ಜನಿಕೆಯ ವ್ಯಕ್ತಿ ಆಗಿದ್ದಿರಬಹುದು. ಹೌದು.. ಹುಡುಕುತ್ತಾ ಹೋದರೆ ಇಂತಹಾ ಹತ್ತಾರು ಉದಾಹರಣೆಗಳು ಸಿಗುತ್ತವೆ. ಅವರ ಜೀವನದ ಪ್ರತಿಯೊಂದು ಕಾಲ ಘಟ್ಟವೂ ನಮಗೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತದೆ.

ವಿಶ್ವೇಶ್ವರಯ್ಯ ನವರ ಬಾಲ್ಯದ ದಿನಗಳೆಂದೂ ಆರಾಮದಾಯಕವಾಗಿರಲಿಲ್ಲ. ಆದರೆ ಅದಕ್ಕೆಂದು ಮರುಗಿದವರಲ್ಲ ಅವರು. ಯಾಕೆಂದರೆ ಅವರೊಬ್ಬ ಪ್ರಚಂಡ ಹಾರ್ಡ್’ವರ್ಕರ್. ಶ್ರದ್ಧೆಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಗುರಿ ಸಾಧಿಸಬಹುದೆಂದು ನಂಬಿದ್ದವರು ಅವರು. ಅದರಂತೆಯೇ ನಡೆದ ಅವರು ಮುಂದೆ ಇಂಜಿನಿಯರ್ ಆದರು, ಮೈಸೂರು ಸಂಸ್ಥಾನದ ದಿವಾನರಾದರು, ಸಾವಿರಾರು ಜನರ ಬಾಳನ್ನು ಬೆಳಗಿ ಭಾರತ ರತ್ನರಾದರು.

ಈಗಲೇ ಹೇಳಿದಂತೆ ಅವರ ಶಾಲಾ ಜೀವನ ಹೂವಿನ ಹಾಸಿಗೆಯಾಗಿದ್ದಿರಲಿಲ್ಲ. ಮೆಟ್ರಿಕ್ ನಂತರ ಬೆಂಗಳೂರು ಸೆಂಟ್ರಲ್ ಕಾಲೇಜು ಸೇರಿಕೊಂಡಾಗಲಂತೂ ಬಹಳವಾಗಿಯೇ ಹಣಕಾಸಿನ ಅಭಾವವುಂಟಾಯಿತು. ಆದರೆ ಏನು ಮಾಡುವುದೆಂದು ಅಳುತ್ತಾ ಕೂರಲಿಲ್ಲ ಅವರು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣ ನೀಡದ ತಂದೆಯನ್ನು ದೂರಲಿಲ್ಲ. ಬದಲಾಗಿ ಅಲ್ಲಿಯೇ ಸ್ಥಳೀಯ ಮಕ್ಕಳಿಗೆ ಪಾಠ ಹೇಳಲು ಶುರು ಮಾಡಿದರು. ಬೆಂಗಳೂರಿನಲ್ಲಿ ಬಿಎ ಪಾಸು ಮಾಡಿದ ನಂತರ ಪುಣೆಯ ಸೈನ್ಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೇರಿಕೊಂಡರು. ಅಲ್ಲಿ ಅವರಿಗೆ ಸರ್ಕಾರದ ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದ ನಿರಾಯಾಸವಾಗಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿಕೊಂಡರು. ಅಲ್ಲಿಗೆ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಯೋಜನೆಗಳಲ್ಲಿ ಮಾಂತ್ರಿಕತೆ, ಕೆಲಸದಲ್ಲಿ ಅಪೂರ್ವ ತಾಂತ್ರಿಕತೆಯಿದ್ದ ಅಸಾಮಾನ್ಯ ವ್ಯಕ್ತಿಯೊಬ್ಬನ ಎಂಟ್ರಿಯಾಯ್ತು.

ಪದವಿ ಮುಗಿಸುವಷ್ಟರಲ್ಲಿಯೇ ಮಹಾರಾಷ್ಟ್ರ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯಲ್ಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆದ ವಿಶ್ವೇಶ್ವರಯ್ಯ ನವರು ಮತ್ತೆ ಹಿಂದೆ ನೋಡಿದ್ದೆ ಇಲ್ಲ. ಅಲ್ಲಿ ಕೆಲಸಕ್ಕೆ ಸೇರುತ್ತಲೇ ಈ ಫ್ರೆಶರ್ ಇಂಜಿನಿಯರ್’ಗೆ  ಚಾಲೆಂಜಿಂಗ್ ಹೊಣೆಗಾರಿಕೆ ನೀಡಲಾಯಿತು.  ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಅವರ ಜಾಣ್ಮೆಗೆ ಮುಂಬೈ ಸರಕಾರ ಅವರನ್ನು ಪ್ರಶಂಶಿಸಿಸಿತು, ಮುಂಬೈಯ ಸಮಸ್ಯೆ ಪರಿಹರಿಸುವ ಹೊತ್ತಿಗೆ ಹೈದರಬಾದ್ ಅವರನ್ನು ಕರೆಸಿಕೊಂಡಿತು. ಹೈದರಾಬಾದ್ ಮೂಸಾ ಎಂಬ ನದಿ ದಂಡೆಯಲ್ಲಿದೆ. ಸಮಸ್ಯೆಯೇನೆಂದರೆ ಪ್ರತೀ ವರ್ಷ ಅಲ್ಲಿ ಪ್ರವಾಹ ಬಂದು ಇಡೀಯ ನಗರವನ್ನು ಎರಡಾಗಿ ಮಾಡುತ್ತಿತ್ತು. ಆ ನದಿ ಜನರು ಮನೆ ಮಠ ಕಳೆದುಕೊಳ್ಳುತ್ತಿದ್ದರು. ಆಕಳುಗಳು ನೀರು ಪಾಲಾಗುತ್ತಿದ್ದವು. ಯಾವ ಕ್ಷಣದಲ್ಲಿ ಪ್ರವಾಹ ಬರಬಹುದೆಂದು ತಿಳಿಯದೇ ಇದ್ದಿದ್ದರಿಂದ ಜನರು ಅಭದ್ರತೆಯ ಜೀವನ ನಡೆಸುತ್ತಿದ್ದರು. ಅಲ್ಲಿಗೆ ಬಂದ ವಿಶ್ವೇಶ್ವರಯ್ಯ ನವರು, ನದಿಯಲ್ಲಿ ಪ್ರವಾಹವುಂಟಾಗದಂತೆ ಮಾಡಲು ಯೋಜನೆ ರೂಪಿಸಿದರು. ತಮ್ಮ ಜಾಣ್ಮೆ ಮತ್ತು ಕಾರ್ಯದಕ್ಷತೆಯಿಂದ ಕೆಲಸವನ್ನು ಪೂರ್ಣಗೊಳಿಸಿದರು.. ಜನರ ಬಾಳಿಗೆ ಭದ್ರತೆ ಒದಗಿಸಿದ ಅವರನ್ನು ಹೈದರಾಬಾದಿಗರು ಕೊಂಡಾಡಿದರು, ಇನ್’ಫಾಕ್ಟ್ ದೇಶಕ್ಕೆ ದೇಶವೇ ಕೊಂಡಾಡಿತು.

ದೇಶವ್ಯಾಪಿ ಸುದ್ದಿಯಾಗಿದ್ದರಿಂದ ಮೈಸೂರು ಸಂಸ್ಥಾನಕ್ಕೂ ವಿಶ್ವೇಶ್ವರಯ್ಯ ನವರ ವಿಷಯ ತಿಳಿಯಿತು. ತಕ್ಷಣವೇ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ ಅವರನ್ನು ನೇಮಿಸಲಾಯ್ತು. ಅದರೊಂದಿಗೆ ಅವರ ಬದುಕಿನ ಮತ್ತೊಂದು ಮಹತ್ವದ ಅಧ್ಯಾಯ ತೆರೆದುಕೊಂಡಿತು. ದಿವಾನ್ ವಿಶ್ವೇಶ್ವರಯ್ಯ ಎಂದಾಕ್ಷಣ ನೆನಪಿಗೆ ಬರುವುದು, ಕೆ.ಆರ್.ಎಸ್.. ಕೃಷ್ಣ ರಾಜ ಸಾಗರ. ಈ ಜಲಾಶಯವು ಆಗಿನ ಕಾಲಕ್ಕೆ ಏಷ್ಯಾದಲ್ಲಿ ಅತಿ ದೊಡ್ಡ ಅಣೆಕಟ್ಟಾಗಿತ್ತು. ಅದನ್ನು ಆದಿಯಿಂದ ಅಂತ್ಯದವರೆಗೂ ಬಹಳ ಮುತುವರ್ಜಿಯಿಂದ ನಿರ್ಮಿಸಿಕೊಟ್ಟವರು ಇವರೇ. ಅದರಲ್ಲಿ ಈ ಮೊದಲು ಅವರೇ ಕಂಡುಹಿಡಿದ ಜಗತ್ತಿನ ಮೊದಲ ಸ್ವಯಂಚಾಲಿತ ಕ್ರಸ್ಟ್ ಗೇಟ್’ಗಳನ್ನು ಅಳವಡಿಸಿ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದ್ದರು. ಜಲಾಶಯದ ಎತ್ತರಕ್ಕೆ ಸಂಬಂಧಿಸಿದಂತೆ ಸರ್ಕಾರದ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದ ಅವರನ್ನು ಜನರೂ ಸಹ ಗೇಲಿ ಮಾಡುತ್ತಿದ್ದರು. ಈ ಯೋಜನೆ ಕಾರ್ಯಸಾಧುವಲ್ಲ ಎಂದು ಅನುಮಾನಾಸ್ಪದವಾಗಿ ನೋಡುತ್ತಿದ್ದರು. ಆದರೆ ವಿಶ್ವೇಶ್ವರಯ್ಯನವರ ಯೋಜನೆಗಳೆಲ್ಲವೂ ಮಾಸ್ಟರ್ ಪೀಸ್. ಐವತ್ತು ನೂರು ವರ್ಷಗಳ ಭವಿಷ್ಯವನ್ನು ಊಹಿಸಿಕೊಂಡು ಅವರು ಹಾಕಿದ್ದ ಯೋಜನೆಗಳು ಸಾಮಾನ್ಯ ಜನರಿಗೆ ಅರ್ಥವಾಗಿರಲಿಲ್ಲ. ಕಡೆಗೆ ಜಲಾಶಯ ಉದ್ಘಾಟನೆಯಾಗಿ ಹಳ್ಳಿಗಳ ನಾಲೆಯಲ್ಲಿ ನೀರು ಹರಿಸಿ ಲಕ್ಷಾಂತರ ರೈತರ ಬದುಕನ್ನು ಹಸಿರಾಗಿಸಿದಾಗ ಹಿಂದೆ ಗೇಲಿ ಮಾಡಿದವರೇ ಮನಸಾರೆ ಕೊಂಡಾಡಿದರು. ಸರ್ವತ್ರ ಪ್ರಶಂಸೆಗೊಳಗಾದರು ಸರ್ ಎಂ.ವಿ.

ಮೈಸೂರ್ ಸ್ಯಾಂಡಲ್ ಸೋಪ್ ಕಾರ್ಖಾನೆ, ಭದ್ರಾವತಿ ಉಕ್ಕಿನ ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ದೇಶದ ಮೊದಲ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಲಕ್ಷಾಂತರ ಜನರು ಶಿಕ್ಷಣ, ಉದ್ಯೋಗ ಪಡೆದುಕೊಳ್ಳುವಂತೆ ಮಾಡಿದರು.

ಅವರದ್ದು ಅಪ್ಪಟ ಸ್ವಾಭಿಮಾನಿ ಬದುಕು. ಇದಕ್ಕೆ ಹಲವಾರು ಪುರಾವೆಗಳಿವೆ. ಹಿಂದೆಲ್ಲಾ ಮೈಸೂರು ದಸರಾದ ದರ್ಬಾರ್ ನಡೆಯುವಾಗ ಬ್ರಿಟಿಷರಿಗೆ ಆದ್ಯತೆ ನೀಡಲಾಗುತ್ತಿತ್ತು. ಎಷ್ಟೆಂದರೆ ಬ್ರಿಟಿಷರಿಗೆ ಕುಳಿತುಕೊಳ್ಳಲು ಕುರ್ಚಿ ಮತ್ತು ಉಳಿದವರು ನೆಲದ ಮೇಲೆ. ಅದರಿಂದ ಬೇಸತ್ತು ದಿವಾನರಾಗಿದ್ದ ಅವರು ಒಂದು ಬಾರಿ ದರ್ಬಾರನ್ನು ಬಹಿಷ್ಕರಿಸಿದರು, ಇದು  ಎಂತಹಾ ಪರಿಣಾಮ ಬೀರಿತೆಂದರೆ ಮುಂದಿನ ವರುಷದಿಂದ ಭಾರತೀಯರಿಗೂ ಆಸನದ ವ್ಯವಸ್ಥೆ ಮಾಡಲಾಗಿತ್ತು.

ಹೀಗೆ ನವ ಮೈಸೂರು ಅಥವಾ ಆಧುನಿಕ ಕರ್ನಾಟಕದ ನಿರ್ಮಾಣದಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡಿದವರು ವಿಶ್ವೇಶ್ವರಯ್ಯ ನವರು. ಒಬ್ಬ ವ್ಯಕ್ತಿ ಇಂಜಿನಿಯರ್ ಆಗಬಹುದು, ಶೈಕ್ಷಣಿಕ ತಜ್ಞ ಆಗಬಹುದು, ಒಬ್ಬ ಒಳ್ಳೆಯ ವಿಜ್ಞಾನಿಯೂ ಆಗಬಹುದು, ಒಳ್ಳೆಯ ಆಡಳಿತಗಾರ ಆಗಬಹುದು, ಇಲ್ಲಾ ಕನಸುಗಾರ ಆಗಬಹುದು. ಆದರೆ ಎಲ್ಲವೂ ಒಬ್ಬನೇ ಆಗಲು ಸಾಧ್ಯವೇ? ಸಾಧ್ಯ ಎಂಬುದನ್ನು ಮೊಟ್ಟ ಮೊದಲ ಬಾರಿಗೆ ತೋರಿಸಿಕೊಟ್ಟವರು ನಮ್ಮ ಸರ್ ಎಂ.ವಿ   ಅಂದ ಹಾಗೆ ಇವತ್ತು ಜಗಕಂಡ ಅಪ್ರತಿಮ ಅಭಿಯಂತರ ವಿಶ್ವೇಶ್ವರಯ್ಯ ನವರ ನೂರೈವತೈದನೇ ಜನ್ಮ ದಿನ.

ಕೋಟಿಗೊಬ್ಬ ಎನ್ನಬಹುದಾದ ಈ ವ್ಯಕ್ತಿಗೆ ಶತಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತಾ ಇತಿಶ್ರೀ ಹಾಡುತ್ತಿದ್ದೇನೆ.

Happy Engineers Day

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!