ಪ್ರಚಲಿತ

ಎತ್ತಿನಹೊಳೆ ಯೋಜನೆ: ವಿರೋಧಿಸುವುದಕ್ಕೂ ಕಾರಣಗಳಿವೆ!

ಒಂದೆಡೆ ಕಳಸಾ ಬಂಡೂರಿ ಯೋಜನೆ. ಇನ್ನೊಂದೆಡೆ ಎತ್ತಿನಹೊಳೆ ನದಿ ತಿರುವು ಯೋಜನೆ.  ಒಂದರಲ್ಲಿ ಉತ್ತರಕರ್ನಾಟಕದ ಜನರ ಆಕ್ರೋಶವಾದರೆ ಇನ್ನೊಂದರಲ್ಲಿ ಕರಾವಳಿಗರ ಆಕ್ರೋಶ. ವಿಚಿತ್ರವೆಂದರೆ  ಅತ್ಯವಶ್ಯಕವಾಗಿರುವ ಕಳಸಾ ಬಂಡೂರಿ ವಿಚಾರದಲ್ಲಿ ಅಂಗೈ ಅಗಲದ ಗೋವಾದ ರಾಜಕಾರಣದ  ಮುಂದೆ ನಮ್ಮ ಸರಕಾರ ಕುಬ್ಜವಾಗಿ ಕೂತಿದ್ದರೆ  ಸಂಶಯಾಸ್ಪದವಾಗಿರುವ ಎತ್ತಿನಹೊಳೆಯ ವಿಚಾರದಲ್ಲಿ ಮಾತ್ರ ಅನಾವಶ್ಯಕ ಪೌರುಷದ ಪ್ರದರ್ಶನ ನೀಡುತ್ತಿದೆ! ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಕಳಸಾ ಬಂಡೂರಿ ಯೋಜನೆಯೇನಾದರೂ ಜಾರಿಯಾದರೆ ಅದರಿಂದ ರಾಜ್ಯಕ್ಕೆ ಲಾಭವಲ್ಲದೆ ಯಾವ ವಿಧದ ನಷ್ಟವೂ ಇಲ್ಲ. ಆದರೆ ಅದೇ ಎತ್ತಿನಹೊಳೆ ಯೋಜನೆ ಯೇನಾದರು ಕಾರ್ಯರೂಪಕ್ಕೆ ಬಂತು ಎಂದಾದರೆ ಅದರಿಂದ ರಾಜ್ಯವು ಗಳಿಸುವುದಕ್ಕಿಂತಲೂ ಕಳೆದುಕೊಳ್ಳುವುದೇ ಅಧಿಕ! ಕರಾವಳಿಗರ ಭಾವನೆಗಳಿಗೆ ಬೆಲೆ ನೀಡದೆ ಅತ್ತ ಬಯಲು ಸೀಮೆಗೂ ಸರಿಯಾಗಿ ನೀರು ದೊರೆಯದೆ ಎಲ್ಲಾ ರೀತಿಯಲ್ಲೂ  ವಂಚನೆಗೈದಂತಾಗಲಿದೆ ಇಲ್ಲಿ! ಮೇಲಾಗಿ ಇದು ಸುಪ್ತವಾಗಿರುವ ಕರಾವಳಿಗರ ಪ್ರತ್ಯೇಕತೆಯ ಕೂಗಿಗೂ ಭವಿಷ್ಯದಲ್ಲಿ ಒಂದಷ್ಟು ಪುಷ್ಠಿ ನೀಡುವ ಸಾಧ್ಯತೆಯೂ ಇದೆ! ಮೇಲಾಗಿ ಇಲ್ಲಿ ಸಿಗುವ ನೀರಿನ ಬಗ್ಗೆಯೇ ದೊಡ್ಡ ಮಟ್ಟದ ಸಂಶಯವಿರುವುದರಿಂದ ಪೂರ್ಣ ಯೋಜನೆಯೇ ಅಂತಿಮವಾಗಿ ವಿಫಲವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ!
ಹಾಗಿದ್ದರೂ ಯಾಕಿಷ್ಟು ಆತುರ!? ಏನಿದು ಎತ್ತಿನಹೊಳೆ ಯೋಜನೆ? ವೈರುಧ್ಯವೇಕೆ?
ಸರಕಾರದ ಪ್ರಕಾರ ಅಥವಾ ಯೋಜನಾ ಅನುಷ್ಠಾನುಕಾರರ ಪ್ರಕಾರ ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುದಕ್ಕಾಗಿ ಪೂರ್ವದ (ಸಕಲೇಶಪುರ) ಎತ್ತಿನ ಹೊಳೆಯಿಂದ ಒಟ್ಟು 24ಟಿಎಂಸಿ ನೀರನ್ನು ಎತ್ತಿ ವಿದ್ಯುತ್ ಶಕ್ತಿ ಸಾಧನಗಳ ಮೂಲಕ ಘಟ್ಟದ ಆ ಕಡೆಗೆ ಹಾಯಿಸುವ ಒಂದು ಸಾಮಾನ್ಯ ಯೋಜನೆಯಾಗಿದೆ ಇದು. ಅಂದರೆ ಕರ್ನಾಟಕದ ಇನ್ನೊಂದು ಭಾಗದ ಜನರ ನೀರಿನ ದಾಹವನ್ನು ನಿವಾರಿಸುವ ಸಲುವಾಗಿ ಇರುವ ಉತ್ತಮ ಯೋಜನೆ ಇದು ಎಂದರ್ಥ. ಇಷ್ಟೇ ಹಾಗಿದ್ದರೆ ಇದನ್ನು ವಿರೋಧಿಸುವ ಯಾವೊಂದು ಪ್ರಮೇಯವೂ ಇಲ್ಲಿ ಇರದು. ಆದರೆ ಇರುವ ವಿಚಾರವೇ ಬೇರೆ! ಅದೇನೆಂದರೆ, ಮೇಲ್ನೋಟಕ್ಕೆ ಇದು ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ  ಎಂದೆನ್ನುತ್ತದೆಯಾದರೂ ಯೋಜನೆಯ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಮಧುಗಿರಿ, ಪಾವಗಡ, ಕೊವಟೆಗೆರೆ ಮುಂತಾದ ಪ್ರದೇಶಗಳಿಗೆ (ಒಟ್ಟು 72 ತಾಲೂಕುಗಳಿಗೆ ) ನೀರು ಪೂರೈಸುವ ದೊಡ್ಡ ಯೋಚನೆಯನ್ನು ಹೊಂದಿದೆ! ಮಾತ್ರವಲ್ಲದೆ ಟಿ.ಜಿ.ಹಳ್ಳಿ ಹಾಗೂ ಹೆಸರಗತ್ತೆ ಎಂಬೆರಡು ಜಲಾಶಯಗಳನ್ನು ಭರ್ತಿಗೊಳಿಸುವಿಕೆ ಹಾಗೂ ದೇವನಹಳ್ಳಿ ಕೈಗಾರಿಕಾ ವಲಯಕ್ಕೆ ನೀರು ಪೂರೈಸುವಿಕೆಯಂತಹ ಬಹುವಿಧದ ಆಶಯಗಳನ್ನೂ ಒಳಗೊಂಡಿದೆ! ಇದರ ಜೊತೆಗೆ ಪೂರ್ವಕ್ಕೆ ಹರಿಯು ಕೆಲವು ನದಿಗಳಾದ ಅರ್ಕಾವತಿ, ಪಾಲಾರ್, ಜಯಮಂಗಳ, ಕೇಶಾವತಿ, ಉತ್ತರ ಪಿಣಾಕಿನಿ, ದಕ್ಷಿಣ ಪಿಣಾಕಿನಿ, ಚಿತ್ರಾವತಿ ಹಾಗೂ ಪಾಪನಾಶಿನಿ ನದಿಗಳನ್ನು ಪುನರ್ ಹರಿಸುವ (ಜೀವ ತುಂಬುವ) ಉದ್ದೇಶವೂ ಇದೆಯಂತೆ! ಇಲ್ಲಿ ಕೊರೆಯುವ ಪ್ರಶ್ನೆಯೇನೆಂದರೆ ಇಷ್ಟೊಂದು ದೊಡ್ಡ ಮಟ್ಟದ ‘ಯೋಚನೆ’ಯ ಸಾಕಾರಕ್ಕೆ ಯೋಜನೆಯಲ್ಲಿ ಹೇಳುತ್ತಿರುವ ಕೇವಲ 24ಟಿಂಎಂಸಿ ನೀರು ಸಾಕಾಗುವುದೇ ಎಂದು!? ಹಾಗೇನೆ ಎಲ್ಲಾ ಈಡೇರಿಸುತ್ತಾ ಹೋದರೆ ಕಟ್ಟಕಡೆಯ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಉಳಿಯುವ ನೀರಿನ ಪ್ರಮಾಣವೆಷ್ಟು!? ಖಂಡಿತಾ ಇವುಗಳಿಗೆ ಸ್ಪಷ್ಟ ಉತ್ತರ ಸರಕಾರದ ಬಳಿ ಇಲ್ಲ! ಅಸಲಿಗೆ ಯೋಜನಾ ವರದಿಯೇ ಹೇಳುವ ಹಾಗೆ 24ಟಿಎಂಸಿ ನೀರಲ್ಲಿ ಅತ್ತ ಹಾಯಿಸುವ ನೀರಿನ ಪ್ರಮಾಣದ ಸಾಧ್ಯತೆ ಕೇವಲ ಶೇಕಡಾ 50 ಮಾತ್ರ! ಇನ್ನು ಈ ಯೋಜನೆಗೆ ವಿದ್ಯುತ್ ಶಕ್ತಿ ಅವಶ್ಯಕತೆಯಿರುವುದರಿಂದ ಮೊದಲೇ ಕತ್ತಲೆಯಲ್ಲಿರುವ ಕರ್ನಾಟಕದಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ಯಂತ್ರಗಳ ತಿರುಗುವಿಕೆಗೆ ವಿದ್ಯುತ್ಶಕ್ತಿಯಾದರೂ ಎಲ್ಲಿಂದ ಬರಬೇಕು!? ಆದ್ದರಿಂದಲೇ ಇವತ್ತು ಕೋಲಾರ-ಚಿಕ್ಕಬಳ್ಳಾಪುರದ ಜನತೆ ಕೂಡ ಎಲ್ಲವನ್ನೂ ಅಳೆದು ತೂಗಿ ಅಂತಿಮವಾಗಿ ತಮಗೆ ದೊರೆಯಲಿರುವುದು ಎಳ್ಳಷ್ಟೂ ಸಾಕಾಗದ ಕೇವಲ 2.82ಟಿಎಂಸಿ ನೀರು ಮಾತ್ರ, ಇದು ನೀರಲ್ಲ ಬರೀ ಚೆಂಬು ನೀಡುವ ಯೋಜನೆ  ಎಂದೆನ್ನುತ್ತಾ ಬೀದಿಗೆ ಇಳಿದಿರುವುದು! ಇನ್ನೊಂದು ಹಾಸ್ಯಾಸ್ಪದ ವಿಚಾರವೇನೆಂದರೆ ಈ ವರೆಗೆ ಎತ್ತಿನಹೊಳೆಗೆ ಲಗ್ಗೆ ಇಟ್ಟು ಅಧ್ಯಯನ ನಡೆಸಿರುವ ಅದ್ಯಾವ ಅಧ್ಯಯನಕಾರರೂ ಕೂಡ ಎತ್ತಿನಹೊಳೆಯಲ್ಲಿ ಅಷ್ಟೊಂದು ಪ್ರಮಾಣದ ನೀರಿನ ಲಭ್ಯತೆಯ ಬಗ್ಗೆ ಮಾತೇ ಆಡಿಲ್ಲ! ಅದರಲ್ಲೂ ಕೇಂದ್ರ ಸರಕಾರದ ಅರಣ್ಯ ಹಾಗೂ ಪರಿಸರ ಇಲಾಖೆಯು ಹೊರತಂದಿರುವ ಅಧ್ಯಯನ ವರದಿಯ ಪ್ರಕಾರ ಎತ್ತಿನಹೊಳೆಯಲ್ಲಿ ಲಭ್ಯವಿರುವ ನೀರು ಕೇವಲ 9.5ಟಿಎಂಸಿ ಮಾತ್ರ! (ನೀರಿನ ಲಭ್ಯತೆ, ಮಳೆಯ ಪ್ರಮಾಣ ಇತ್ಯಾದಿ ವಿಚಾರದಲ್ಲಿ ಕರ್ನಾಟಕ ನೇತ್ರಾವತಿ ನಿಗಮ ಲಿಮಿಟೆಡ್ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಯನ್ಸ್’ನ ಲೆಕ್ಕಾಚಾರಗಳಿಗೆ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಬೇರೆ ಮಾತು!) ಹಾಗಾದರೆ ಯೋಜನೆ ಬಯಸುವ 24ಟಿಎಂಸಿ ನೀರು ಎಲ್ಲಿಂದ ಬರಬೇಕು!? ಆದ್ದರಿಂದಲೇ ಎತ್ತಿನಹೊಳೆ ಯೋಜನೆಯ ಹಿಂದೆ  ಕಾಡುಮನೆ ಹೊಳೆ, ಕೇರಿಹೊಳೆ, ಹೊಂಗದಹಳ್ಳ ಮುಂತಾದ ಇನ್ನಿತರ ಜಲಮೂಲಗಳಿಗೂ ಅಣೆಕಟ್ಟು ಕಟ್ಟಿ (ಒಟ್ಟು ಎರಡು ಹಂತಗಳಲ್ಲಿ ಎಂಟು ಅಣೆಕಟ್ಟು ಕಟ್ಟಲಾಗುವುದು) ನೀರೆತ್ತುವ ಒಂದು ವ್ಯವಸ್ಥಿತ ಯೋಚನೆ ಇದರ ಹಿಂದೆ ಅಡಗಿದೆ ಎಂಬ ಮಾತು ಕೇಳಿಬರುತ್ತಿರುವುದು! ಆದ್ದರಿಂದಲೇ ಇದು ಕಾರ್ಯಗತಗೊಂಡರೆ ನೇತ್ರಾವತಿ ಇಂಗುತ್ತದೆ ಎನ್ನವ ಮಾತು ಸತ್ಯಕ್ಕೆ ಹತ್ತಿರವಾಗುವುದು.  ಒಟ್ಟಿನಲ್ಲಿ ಈ ಉದ್ದೇಶಿತ ಯೋಜನೆಯ ಮೂಲಕ ನೇತ್ರಾವತಿಯ ಬಹುಪಾಲು ನೀರನ್ನು ಕಬಳಿಸುವ ಸ್ಪಷ್ಟ ಯೋಚನೆಯೊಂದಿದೆಯಾದ್ದರಿಂದ ವಾಸ್ತವದಲ್ಲಿ ಇದು ಕೇವಲ ಎತ್ತಿನಹೊಳೆ ಯೋಜನೆಯಾಗದೆ ನೇತ್ರಾವತಿ ನದಿ ತಿರುವು ಯೋಜನೆ ಎಂದೇ ನಾವು ಅರ್ಥೈಸಿಕೊಳ್ಳಬೇಕು. ನೆನಪಿಡಬೇಕಾದ ಮತ್ತೂ ಒಂದು ವಿಚಾರವೇನೆಂದರೆ ಇಂದು ಕೋಲಾರ ಹಾಗೂ ಚಿಕ್ಕಬಳ್ಳಾಪುರಗಳು ಇಲ್ಲಿ ಕೇವಲ ತೋರಿಕೆಯ ಹೆಸರುಗಳಷ್ಟೇ! ಈ ಯೋಜನೆಯು ನಿಜವಾಗಿಯೂ ಸಂಪ್ರೀತಗೊಳಿಸಲಿರುವುದು ಬೆಂಗಳೂರಿನ ಕೈಗಾರಿಕಾ ವಲಯವನ್ನ! ಯಾಕೆಂದರೆ ಎತ್ತಿನ ಹೊಳೆಯೋಜನೆಯಿಂದ ಮೊದಲ ಫಲಾನುಭವಿಯಾಗಲಿರುವ ಹೆಸರುಗತ್ತೆ ಹಾಗೂ ಟಿ.ಜಿ.ಹಳ್ಳಿ ಜಲಾಶಯಗಳೆರಡೂ ಬೆಂಗಳೂರ ಕೈಗಾರಿಕಾ ವಲಯದ ಉಪಯೋಗಕ್ಕೆ ಇರುವಂತವುಗಳು!!
ಇವಿಷ್ಟು ಯೋಜನೆಯ ಒಂದು ಚಿತ್ರಣವಾದರೆ ಇನ್ನು ಒಂದು ವೇಳೆ ಈ ಯೋಜನೆಯು ಯಶಸ್ವಿಯಾಗಿ ಕಾರ್ಯಗತಗೊಂಡರೆ ಬಳಿಕದ ಬಾಧಕಗಳೇನು?
ಯೋಜನಾ ವಿರೋಧಿಗಳು ಹೇಳುವ ಹಾಗೆ ಒಂದು ವೇಳೆ ಈ ಯೋಜನೆಯ ಕಾರ್ಯಗತವಾದರೆ ನೇತ್ರಾವತಿಯ ಹರಿವು ಅಕ್ಷರಶಃ ಕುಂಟಿತಗೊಳ್ಳಲಿದೆ. ಪರಿಣಾಮ ಅದನ್ನೇ ನಂಬಿ ಜೀವನ ತೇಯುತ್ತಿರುವ  ಕರಾವಳಿ ಜನರ ಮುಖ್ಯವಾಗಿ ಬಂಟ್ವಾಳ ಹಾಗೂ ಮಂಗಳೂರಿನ ಜನರ ಜೀವನ ಸಂಕಷ್ಟಕ್ಕೊಳಗಾಗಲಿದೆ. ಅಂದರೆ  ಬೇಸಿಗೆ ಕಾಲದಲ್ಲಿ  ಕರಾವಳಿಯಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.   ಅಷ್ಟೇ ಅಲ್ಲದೆ ನೇತ್ರಾವತಿಯ ಇಕ್ಕೆಲಗಳಲ್ಲಿ ನೇತ್ರಾವತಿ ನದಿ ನೀರನ್ನೇ ನಂಬಿ ವಾಸಿಸುತ್ತಿರುವ 10ಲಕ್ಷಕ್ಕೂ ಅಧಿಕ ರೈತ ಕುಟುಂಬಗಳಿವೆ ಎಂಬುದು ಮನಗಾಣಬೇಕಾದ ಇನ್ನೊಂದು ಸತ್ಯ. ನೀರಿಲ್ಲದೆ ಹೋದರೆ ಇವರ ಕೃಷಿ ಜೀವನಕ್ಕೆ ಪರಿಹಾರವೇನು? ಹಾಗಾದರೆ ಇಲ್ಲಿನ ಪ್ರಮುಖ ಕೃಷಿಯಾದ ಅಕ್ಕಿ, ಅಡಿಕೆ, ತೆಂಗು, ತರಕಾರಿಗಳನ್ನು ಹಾಗೇ ಒಣಗಲು ಬಿಟ್ಟು ಇಲ್ಲಿನ ರೈತರನ್ನು ಸಂಕಷ್ಟದ ಕೂಪಕ್ಕೆ ತಳ್ಳಿ ಸಾವಿರಾರು ಕೋಟಿ ರೂಗಳನ್ನು  ಚೆಲ್ಲುತ್ತಾ ಇನ್ನೆಲ್ಲಿಯದ್ದೋ ಜನರ ಜೀವನ ಬೆಳಗಿಸುತ್ತೇವೆ ಎನ್ನುವುದನ್ನು ಇಲ್ಲಿನ ಜನ ಒಪ್ಪಬೇಕೆ!? ಬಯಲು ಸೀಮೆಯ ನೀರಿನ ದಾಹವನ್ನು ಪರಿಹರಿಸುವುದು ಸರಕಾರದ ಕರ್ತವ್ಯವೆಂಬುದೇನೋ ನಿಜವೇ. ಆದರೆ ಕೇವಲ 24 ಟಿಎಂಸಿ ನೀರನ್ನು ಹರಿಸಲು 12000 ಕೋಟಿಯಷ್ಟು ಹಣವನ್ನು ತೆತ್ತು ಯೋಜನೆ ರೂಪಿಸುವದಕ್ಕಿಂತ ಇದೇ ತಂತ್ರಜ್ಞಾನ ವಿಜ್ಞಾನವನ್ನು ಬಳಸುತ್ತಾ ಇನ್ಯಾವುದಾದರು ಮಾರ್ಗದ ಮೂಲಕ ಬಯಲು ಸೀಮೆಯನ್ನು ಹಸಿರುಗೊಳಿಸುವ ಕಾರ್ಯಕ್ಕೆ ಇಳಿಯಬಹುದಿತ್ತಲ್ಲ!?  (ಅಷ್ಟಕ್ಕೂ 12000 ಕೋಟಿ ರೂ ಎಂಬುದು 2012-13ನೇ ಸಾಲಿನ ಲೆಕ್ಕಾಚಾರ! ಇನ್ನು ಯೋಜನೆ ಪೂರ್ಣಗೊಂಡಾಗ ಈ ಖರ್ಚಿನ ಪಟ್ಟಿ ಅದೆಷ್ಟಿರಬಹುದು ಊಹಿಸಿ!)
ಇನ್ನು ಈ ಯೋಜನೆಯಿಂದ ಆಗಬಹುದಾದ ಇನ್ನಿತರ ತೊಂದರೆಗಳತ್ತ ಒಮ್ಮೆ ಚಿತ್ತ ಹಾಯಿಸೋಣ. ನೇತ್ರಾವತಿಯ ವಿಚಾರದಲ್ಲಿ ಜಿ.ಎಸ್.ಪರಮಶಿವಯ್ಯ ವರದಿ ಹೇಳುವಂತೆ ಇದು ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಬಳಸುವ ಯೋಜನೆಯಂತೆ. ನೇತ್ರಾವತಿಯಿಂದ ಕರಾವಳಿಗೆ  ಕುಡಿಯುವ ನೀರಿನ ಉಪಯೋಗವಷ್ಟೇ ಎಂದು ಅರಿತರೆ ಈ ಮಾತನ್ನು ಒಪ್ಪಬಹುದು. ಆದರೆ ಯಾವುದನ್ನು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎನ್ನುತ್ತಿದ್ದಾರೆಯೋ ಅದು ನಿಜವಾಗಿಯುವ ಸಮುದ್ರ ಸೇರಬೇಕಾದುದ್ದೇ!  ಯಾಕೆಂದರೆ, ಒಂದು ವೇಳೇ ಸಮುದ್ರಕ್ಕೆ ಸೇರುವ ಸಿಹಿನೀರಿನ (ನದಿ ನೀರು) ಪ್ರಮಾಣ ಕಡಿಮೆಯಾದರೆ  ಸಮುದ್ರದ ತಾಪಮಾನದಲ್ಲಿ ಏರಿಳಿತವಾಗಲಿದೆ ಹಾಗು ನದಿ ನೀರಿನ ಮೂಲಕ ಜಲಚರಗಳಿಗೆ ದೊರೆಯುತ್ತಿದ್ದ ಆಹಾರದ ಅಂಶವು ಕೂಡ ಗಣನೀಯವಾಗಿ ಕುಸಿಯಲಿದೆ ಎಂಬುದು ಅಧ್ಯಯನ ಸತ್ಯ ವಿಚಾರಗಳು. ಇದು  ಜಲಚರಗಳನ್ನು  ಒಂದಾ ವಿನಾಶದ ಅಂಚಿಗೆ ದೂಡಬಹುದು ಇಲ್ಲ ಅವುಗಳನ್ನು ಸ್ಥಳತೊರೆಯುವಂತೆ ಪ್ರೇರೇಪಿಸಬಹುದು. ಹೀಗಾದಾಗ ಇಲ್ಲಿನ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳು ಕೂಡ ಸಂಕಷ್ಟಕ್ಕೆ ಬೀಳಲಿದೆ. ಹಾಗೇನೇ, ಕೃಶವಾಗಿ ಹರಿಯುವ ನೇತ್ರಾವತಿ ಸಮುದ್ರಕ್ಕೆ ನೂಕುವ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಿದರೆ ಸಮುದ್ರದ ಉಪ್ಪುನೀರು ನದಿ ಸೇರುವ ಅಪಾಯವೂ ಇದೆ ಎನ್ನುತ್ತದೆ ಅಧ್ಯಯನ. ಇನ್ನು ಈ ಯೋಜನೆಯ ಅನುಷ್ಟಾನಕ್ಕೆ ಪಶ್ಚಿಮಘಟ್ಟವನ್ನು ಸೀಳಬೇಕಾಗುವುದರಿಂದ ಅಲ್ಲಿ ಆಗಬಹುದಾದ ಪಾಕೃತಿಕ ತೊಂದರೆಗಳನ್ನು ಊಹಿಸುವುದೂ ತೀರಾ ಕಷ್ಟ! ಎದ್ದುನಿಲ್ಲುವ ಅಳೆತ್ತರದ ಅಣೆಕಟ್ಟುಗಳು, ವಿದ್ಯತ್ ಸರಬರಾಜು ಸಾಧನಗಳು, ತಂತ್ರಜ್ಞಾನಗಳೆಲ್ಲಾ ಸೇರಿ ಪಶ್ಚಿಮ ಘಟ್ಟದ ಒಟ್ಟು ಚಿತ್ರಣವನ್ನೇ ಬುಡಮೇಲುಗೊಳಿಸಲಿದೆ ಎಂಬುದು ಸಷ್ಟ. ಇದು ಇಲ್ಲಿರುವ ಹಲವಾರು ಪ್ರಬೇಧದ ಜೀವಚರಗಳ ನಾಶಕ್ಕೆ ಕಾರಣವಾಗಲಿದೆ.  ಅಲೆತ್ತರದ ಮರಗಳೂ ಧರೆಗುರಳಲಿವೆ. ಇನ್ನು ನಿರ್ಮಾಣವಾಗಲಿರುವ ಜಲಾಶಯಗಳಿಂದ ಮುಳುಗಡೆಯಾಗಲಿರುವ ಹತ್ತಕ್ಕೂ ಅಧಿಕ ಹಳ್ಳಿಗಳ ಜನರ ಗತಿಯೇನು ಎಂದರೆ ಮೌನವಷ್ಟೇ ಉತ್ತರ! ಇದೇ ಕಾರಣಕ್ಕಾಗಿ ಇಂದು ಕರಾವಳಿಗರು ಮಾತ್ರವೇ ಅಲ್ಲದೆ ದೇಶಾದ್ಯಂತ ಪರಿಸರ ತಜ್ಞರೆಲ್ಲಾ ನದಿ ತಿರುವು ಯೋಜನೆಗಳಿಗೆ ಅಸಮ್ಮತಿ ಸೂಚಿಸುತ್ತಿರುವುದು.
ಹೀಗೆ ಗಮನಿಸುತ್ತಾ ಹೋದರೆ ಈ ಎತ್ತಿನಹೊಳೆ ಯೋಜನೆಯು ಹಲವಾರು ಬಾಧಕಗಳಿಂದ ಕೂಡಿವೆ. ಇಲ್ಲಿನ ಕರಾವಳಿಗರ ಆತಂಕಕ್ಕೆ ನೈಜ ಕಾರಣವೂ ಇದೆ.  ಎಲ್ಲಕ್ಕಿಂತ ಮಿಗಿಲಾಗಿ ಕೇವಲ ಅಲ್ಪ ಪ್ರಮಾಣದ ನೀರಿಗಾಗಿ ಅಪಾರ ಪ್ರಮಾಣದ ಹಣವನ್ನು ವ್ಯಯಿಸಿಕೊಂಡು ಬಯಲು ಸೀಮೆಗೆ ನೀರುಣಿಸುವ ಬದಲು ಕರೆಬಾವಿಗಳ ವೈಜ್ಞಾನಿಕ ಸಂರಕ್ಷಣೆ, ಹೂಳೆತ್ತುವಿಕೆ, ಮಳೆ ನೀರು ಕೊಯ್ಲು ಮುಂತಾದ ಇತರ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಕೊಂಡು ಬಯಲು ಸೀಮೆಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಯೋಚನೆಯನ್ನು ಸರಕಾರ ಮಾಡುತ್ತಿದ್ದರೆ ಇದ್ಯಾವ ಗಲಿಬಿಲಿ, ಆತಂಕ, ವಿರೋಧಗಳು ಇರುತ್ತಿರಲಿಲ್ಲ. ತರಾತುರಿಯಾಗಿ ವಿರೋಧವನ್ನೂ ಲೆಕ್ಕಿಸದೆ ವಿವಿಧ ನಿಯಮಗಳನ್ನು ಗಾಳಿಗೆ ತೂರುತ್ತಾ ಮುನ್ನುಗ್ಗುವ ಸರಕಾರದ ಪರಿಯನ್ನು ನೋಡಿದರೆ ಇದರ ಹಿಂದೆ ಅದ್ಯಾವುದೋ ಕಾಣದ ಕೈಗಳ ತಾಕತ್ತು ಇದರ ಹಿಂದೆ  ಇದೆಯೇನೋ ಎಂದೇ ಭಾಸವಾಗುತ್ತಿದೆ.  ಈ ಕಾರಣಗಳಿಂದಾಗಿಯೇ  ಇದೊಂದು ಜನೋಪಯೋಗಕ್ಕಾಗಿ ಕಾರ್ಯಗತಗೊಳ್ಳುವ ಯೋಜನೆಯೇ ಅಥವಾ ನೀರೆತ್ತುವ ಮೂಲಕ ‘ಹಣ ಎತ್ತುವ’ ಯೋಚನೆಯೇ ಎಂಬ ಪ್ರಶ್ನೆ ವಿರೋಧಿಗಳಲ್ಲಿ ಬಹುವಾಗಿ ಕಾಡುತ್ತಿರುವುದು!!

– ಪ್ರಸಾದ್ ಕುಮಾರ್, ಮಾರ್ನಬೈಲ್

kulal22@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!