ಅಂಕಣ

ಗದಾಯುದ್ಧ- ೯

ಸರೋವರದ ವರ್ಣನೆಯಲ್ಲಿ ರನ್ನನು ಹಿಂದೆ ಬಿದ್ದಿಲ್ಲ. ಪಂಪನ ವರ್ಣನೆಯನ್ನೂ ರನ್ನನ ವರ್ಣನೆಯನ್ನೂ ಈ ಕೆಳಗೆ ಬರೆಯುತ್ತೇನೆ.

ರನ್ನ,
ಗಗನಂ ಬಿಳ್ದುದೊ ಮೇಣ್ ನೆಲಕ್ಕೆ ನೆಲನೇಂ ಪುಟ್ಟಿತ್ತೊ ಮೇಣಿಲ್ಲಿ ಪ-
ನ್ನಗವೃಂದಾರಕರೆಂದುಮಿರ್ಪ ಬಿಲನೋ ಮೇಣಷ್ಟದಿಗ್ನಾಗ ರಾ-
ಜಿಗೆ ಮೆಯ್ಗರ್ಚಿಕೊಳಲ್ಕಜಂ ಸಮೆದ ತೋಯೋದ್ದೇಶಮೋ ಸಂದೆಯಂ
ಬಗೆಗಾದತ್ತೆನಿಸಿರ್ದುದೇಂ ಪಿರಿದೊ ವೈಶಂಪಾಯನಾಬ್ಜಾಕರಂ

ಅಂತು ಗಂಭೀರ ನೀರಾಕರಮಿರ್ಪಂತಿರ್ದ ಕಮಲಾಕರಮಂ ನೋಳ್ಪನಮಲ್ಲಿ

ಕುರುಪತಿ ನಿನ್ನ ಪೊಕ್ಕ ತೊರೆಗಳ್ ಮೊದಲಾಗಿರೆ ಬತ್ತಿದಪ್ಪುವೀ
ದೊರೆಯ ದುರಾತ್ಮನಂ ಖಳನನಾನೊಳಕೊಂಡೊಡೆ ಭೀಮನೀ ಸರೋ-
ವರಮುಮನೆಮ್ಮುಮಂ ಕದಡುಗುಂ ಪುಗದಿರ್ ತೊಲಗೆಂದು ಬಗ್ಗಿಪಂ-
ತಿರೆ ನೆಗಳ್ದತ್ತನೇಕ ಬಕ ಕೋಕ ಮರಾಳ ವಿಹಂಗಮಸ್ವನಂ

ಅಯ್ಯೋ ಕುರುಪತಿ, ನಿನ್ನನ್ನು ಹೊಂದಿದವರೆಲ್ಲ ಬತ್ತಿಹೋದರು, ಈಗ ಸರೋವರದಲ್ಲಿ ಮುಳುಗಿ ಇಲ್ಲೇ ಉಳಿದರೆ ಭೀಮಸೇನನು ಬಂದು ಸರೋವರವನ್ನು ಕದಡುತ್ತಾನೆ ಎಂದು ಕೊಕ್ಕರೆ, ಚಕ್ರವಾಕಗಳು ಬೊಬ್ಬಿಟ್ಟು ಹಾರಿದಂತಾಯಿತು ಎನ್ನುತ್ತಾನೆ ರನ್ನ. ಸುಂದರ ಪದ್ಯ.

ಪಂಪ, (ವಿಕ್ರಮಾರ್ಜುನ ವಿಜಯದಲ್ಲಿ)

ಇದು ಪಾತಾಳ ಬಿಲಕ್ಕೆ ಬಾಗಿಲಿದು ದಲ್ ಘೋರಾಂಧಕಾರಕ್ಕೆ ಮಾ-
ಡಿದ ಕೂಪಂ ಪೆರತಲ್ತಿದುಗ್ರ ಲಯ ಕಾಳಾಂಭೋಧರಚ್ಛಾಯೆ ತಾ-
ನೆ ದಲೆಂಬಂತಿರೆ ಕಾಚ ಮೇಚಕಚಯಚ್ಛಾಯಾಂಬುವಿಂ ಗುಣ್ಪಿನಿಂ
ಪುದಿದಿರ್ದತ್ತು ಸರೋವರಂ ಬಕ ಬಳಾಕಾನೀಕ ರಾವಾಕುಳಂ

ಅದಟಿನ ವಿಕ್ರಮಾರ್ಜುನನ ಸಾಹಸಭೀಮನ ಕೋಪ ಪಾವಕಂ
ಪುದಿದಳುರ್ದಳ್ವುಕೊಳ್ಳದಿರದಿಲ್ಲಿಯಮೆಮ್ಮುಮನಿಲ್ಲಿ ಬಾಳ್ವಿರಂ
ಕದಡದಿರಿತ್ತ ಬಾರದಿರು ಸಾರದಿರೆಂಬವೊಲಾದುದೆತ್ತಮು-
ನ್ಮದಕಳಹಂಸಕೋಕನಿಕರಧ್ವನಿ ರುಂದ್ರಫಣೀಂದ್ರಕೇತುವಂ

ಈ ಎರಡೂ ಪದ್ಯಗಳನ್ನು ಓದಿದರೆ ರನ್ನನು ಎಷ್ಟು ಪಂಪನನ್ನು ಓದಿಕೊಂಡಿದ್ದಾನೆ ಮತ್ತು ಬಳಸಿಕೊಂಡಿದ್ದಾನೆ ಎಂದು ಅರಿವಾಗಬಹುದು. ಬಹಳ ಸುಲಭವಾಗಿದೆ, ಓದಬಹುದು.

ಇಂತಹ ಸರೋವರದಲ್ಲಿ ತನ್ನ ಮೈತೊಳೆದುಕೊಂಡು ಆಚಮನಕ್ರಿಯೆಗಳನ್ನು ಮಾಡಿ ಜಲದೇವತೆಗೆ ನಮಸ್ಕಾರ ಮಾಡಿ ಪರಮಯೋಗಿಯವೊಲ್ ಮಂತ್ರಪದಾಕ್ಷರಂಗಳಂ ಮಿನುಗುತುಮಿರ್ದಂ-

ಸ್ನಾನವನ್ನು ಮಾಡಿ ಜಲದೇವತೆಗೆ ನಮಸ್ಕಾರ ಮಾಡಿ, ಅಜ್ಜ ಭೀಷ್ಮನ ಉಪದೇಶದಂತೆ ಮಂತ್ರಗಳನ್ನು ಹೇಳಿಕೊಂಡು ಮುಳುಗಿದನು ಕೌರವ.
~
ಕತ್ತಿಯು ಒರೆಯೆಂದ ಹೊರಗೆ ಬಂದಂತೆ ಅದರ ಹರಿತದ ಬಗ್ಗೆ ಜಾಸ್ತಿ ತಿಳುವಳಿಕೆಯಾಗುತ್ತದೆ. ಅಂತೆಯೇ ರನ್ನನ ಗದಾಯುದ್ಧದಲ್ಲಿ ಓದುತ್ತಾ ಓದುತ್ತಾ ಅದೊಂದು ಅಚ್ಚರಿಯ ಅನೂಹ್ಯವಾದ ಪದಗಳ, ಪದ್ಯದ ಪ್ರಪಂಚವೆಂದು ಅರಿವಾಗುತ್ತದೆ. ಮುಂದೆ ಕತ್ತಿಯ ಹರಿತವಾದ ಭಾಗಗಳಿವೆ.

ಈ ಆಶ್ವಾಸಕ್ಕೆ “ಭೀಮಸೇನಾಡಂಬರಂ” ಎಂದು ಕರೆಯುತ್ತಾನೆ. ರನ್ನನ “ಅರಿಕೇಸರಿಯಾದ” ಭೀಮನು ಇಲ್ಲಿ ಮೆರೆಯುತ್ತಾನೆ. ಮುಂದಿನ ಭಾಗಗಳು ಹೆಚ್ಚಾಗಿ ಗೊತ್ತಿರುವಂತಹದ್ದು.

ಅನ್ನೆಗಮಿತ್ತಲ್, ಶಲ್ಯನ ವಧೆಯಾನಂತರ ಎಲ್ಲಾ ಕಡೆಯಲ್ಲೂ ಹುಡುಕಿಯೂ ದುರ್ಯೋಧನನ ಕಾಣದೆ ಇದೇನಾಯ್ತು ಎಂದು ಧರ್ಮರಾಯ ಕೃಷ್ಣನೊಡನೆ ಆಲೋಚಿಸುತ್ತಿರುವುದನ್ನು ಕುರುಕುಲಾಂತಕ ಕೇಳಿ,

ತೊದಳಾಯ್ತೆನ್ನಯ ಪೂಣ್ದ ಪೂಣ್ಕೆ ಸಭೆಯೊಳ್ ಪಾಂಚಾಲ ರಾಜಾತ್ಮಜಾ-
ವದನಮ್ಲಾನತೆ ಮಾಣ್ದುದಿಲ್ಲ ಗಡ ಮದ್ದೋರ್ದಂಡಕಂಡೂತಿ ತೀ-
ರ್ದುದುಮಿಲ್ಲಿನ್ನುಮೊಳಂ ಸುಯೋಧನದರ್ಕೇಗೆಯ್ವೆನೆಂತಕ್ಕುಮೆಂ-
ಬುದನೆಂತ್ಸುಕಚಿತ್ತನುಮ್ಮಳಿಸಿದಂ ಕೌರವ್ಯಕೋಳಾಹಳಂ

ಸಭೆಯಲ್ಲಿ ಆಡಿದ ನನ್ನ ಮಾತು ಹುಸಿಯಾಯ್ತು, ಪಾಂಚಾಲಿಯ ಮುಖದ ಬೇಸರವು ಇನ್ನೂ ಕಳೆದಿಲ್ಲ, ಅದೂ ಅಲ್ಲದೇ ತೋಳಿನ ತುರಿಕೆ ತೀರಿಲ್ಲ. ಇನ್ನೇನು ಮಾಡುತ್ತಾನೆ ಕೌರವ ಎಂದು ಯೋಚಿಸುತ್ತಿದ್ದೀರಲ್ಲ.

ಮುಂದೆ ಭೀಮನ ಕೋಪಾಟೋಪವನ್ನು ಬಹಳ ದೀರ್ಘವಾಗಿ ವರ್ಣಿಸುತ್ತಾನೆ. ಕುರುಕುಲಮಹೀಪಾಲಬೃಹದೂರುದ್ವಂದ್ವಂಗಳಂ ತನ್ನ ಗದಾದಂಡದಿಂ ನುರ್ಗುನುರಿಮಾಡಲು, ಕೌರವೇಶ್ವರನ ಬಾಹುಶಾಖೆಗಳನ್ನು ಗದೆಯಿಂದ ಕತ್ತರಿಸಲು, ಕೌರವನ ಎದೆಯನ್ನು ಗದೆಯಿಂದ ಸೀಳಲು, ಕೌರವನ ತಲೆಯನ್ನು ಗದೆಯಿಂದ ಪುಡಿಪುಡಿಮಾಡಿ, ಅವನ ಕಿರೀಟವನ್ನು ಮಣ್ಣಿನಲ್ಲಿ ಹೊರಳಾಡಿಸಿ, ಅವನ ನೆತ್ತರಿನ ಅಭಿಷೇಕ ಮಾಡುತ್ತೇನೆ ಎಂದು ಮೀಸೆ ಕಡಿಯುವ ಭೀಮನ ಚಿತ್ರಣ ಅದ್ಭುತವಾಗಿದೆ.

ಭೀಮ ಏನೆಲ್ಲಾ ಮಾಡುತ್ತಾನೆ ರನ್ನನ ಕಾವ್ಯದಲ್ಲಿ? ಒಂದು ವೇಳೆ ಕೌರವ ಸಿಗದಿದ್ದಲ್ಲಿ

ಮೀರಿದ ಪಗೆವನ ಪಟ್ಟಂ
ಪಾರಿಸುವೆನೊ ಮುನ್ನಮಮರರುಂಡಮೃತವನೇಂ
ಕಾರಿಸುವೆನೊ ಖಚರರನಡ-
ರ್ದೇರಿಸುವೆನೊ ಮೇರುಗಿರಿಯ ತೂರಲ ತುದಿಯಂ

ಹಗೆಯ ಪಟ್ಟವನ್ನು ಹಾರಿಸುವೆನು, ಅಮೃತವುಂಡ ದೇವತೆಗಳ ಅಮೃತವನ್ನು ಕಕ್ಕಿಸುವೆನೊ, ಖಚರರನ್ನು ಅಟ್ಟಾಡಿಸಿ ಓಡಿಸುವೆನು ಮೇರುಗಿರಿಯ ತುದಿಯಿಂದ.

ಎತ್ತುವೆನೊ ಮಂದರಾದ್ರಿಯ-
ನೊತ್ತುವೆನೊ ರಸಾತಳಕ್ಕೆ ನೆಲನಂ ದೆಸೆಯಂ
ಪತ್ತುವೆನೊ ಪಗೆಯ ಬೆನ್ನಂ
ಪತ್ತುವೆನೊ ದಿಶಾಗಜಂಗಳಂ ತುತ್ತುವೆನೋ

ಮಂದರಾದ್ರಿಯನ್ನು ಎತ್ತುವುದೋ, ನೆಲವನ್ನು ರಸಾತಳಕ್ಕೆ ಒತ್ತುವುದೊ, ದಿಕ್ಕುಗಳನ್ನು ಹಿಡಿದು ಹಗೆಯ ಬೆನ್ನು ಹಿಡಿಯುವುದೋ, ಅಷ್ಟದಿಗ್ಗಜಗಳನ್ನು ತುತ್ತಾಗಿ ನುಂಗುವುದೋ.

ಪ್ರಾಸವನ್ನು ಅದೆಷ್ಟು ಉತ್ಕೃಷ್ಟವಾಗಿ ಬಳಸಿಕೊಂಡಿದ್ದಾನೆ ರನ್ನ! ಎತ್ತು, ಒತ್ತು, ಪತ್ತು, ತುತ್ತು ಎನ್ನುತ್ತಾ ಓದುವುದಕ್ಕೆ ಎಷ್ಟು ಖುಷಿಯಾಗುವಂತೆ ಬಳಸಿದ್ದಾನೆ.

ದಾಂಟುವೆನೊ ಕುಲನಗಂಗಳ-
ನೀಂಟುವೆನೊ ಚತುಸ್ಸಮುದ್ರಮಂ ರವಿಶಶಿಯಂ
ಮೀಂಟುವೆನೊ ಗಗನತಳದಿಂ
ಗಂಟಲೊತ್ತುವೆನೊ ಸಕಲದಿಕ್ಪಾಲಕರಂ

ಪರ್ವತಗಳನ್ನು ದಾಟುವುದು, ನಾಲ್ಕು ಸಾಗರಗಳನ್ನು ಈಂಟುವುದೋ, ರವಿಶಶಿಯನ್ನು ಆಕಾಶದಿಂದ ಮೀಂಟುವುದೊ, ಸಕಲದಿಕ್ಪಾಲಕರ ಗಂಟಲೊತ್ತುವುದೋ ಎಂದು “ಕುರುಕುಲಕೃತಾಂತಕಂ” ಅಂತಕನಂತೆ ಮಾಮಸಕಂ ಮಸಗಿ ಒಂದು ಪ್ರತಿಜ್ಞೆ ಮಾಡುತ್ತಾನೆ.

ರಸೆಗಿರಿದನೊ ಮೇಣ್ ನಾಲ್ಕುಂ
ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲಿ
ವಸುಮತಿಯೊಳ್ ಗಾಂಧಾರಿಯ
ಬಸಿರಂ ಮೇಣ್ ಮುಗುಳ್ ಪೋಗಿ ಪೊಕ್ಕಿರ್ದಪನೋ

ಚರಮಚರಮೆಂಬ ಜಗದಂ-
ತರದೊಳ್ ಖಳನೆಲ್ಲಿ ಪೊಕ್ಕೊಡಂ ತದ್ಭುಜಪಂ-
ಜರದೊಳಗಿರ್ದೊಡೆ ಹರಿಹರ
ಹಿರಣ್ಯಗರ್ಭರ್ಕಳಲ್ಲಿಯಂ ಕೊಲ್ಲದಿರೆಂ

ಭೂಮಿಯನ್ನು ಸೇರಿಕೊಂಡನೋ, ನಾಲ್ಕುದಿಕ್ಕಿನ ಕೋಣೆಯೊಳಗೆ ಸೇರಿಕೊಂಡನೋ ಅಲ್ಲ ಗಾಂಧಾರಿಯ ಗರ್ಭವನ್ನು ಪುನಃ ಸೇರಿದನೋ. ಚರಾಚರ ಜಗದಲ್ಲಿ ಖಳನು ಎಲ್ಲಿ ಹೊಕ್ಕಿದರೂ, ತನ್ನೊಳಗೆ ತಾನೇ ಸೇರಿಕೊಂಡರೂ, ಹರಿಹರರ ಗರ್ಭದಲ್ಲಿ ಅಡಗಿದರೂ ಕೊಲ್ಲದಿರೆಂ!

ಚತುರಂತಕ್ಷಿತಿಕಾಂತೆ ಕೇಳ್ – ಮತ್ತೆ ಪಂಪನು ವರ್ಣಿಸಿದ ಭೀಮನ ಪ್ರತಿಜ್ಞೆ – ಮುಂದಿನ ಕಂತಿನಲ್ಲಿ

Facebook ಕಾಮೆಂಟ್ಸ್

ಲೇಖಕರ ಕುರಿತು

Ishwara Bhat

ವೃತ್ತಿ : ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗ,
ಹವ್ಯಾಸ : ಓದುವುದು, ಇಂಟರ್ನೆಟ್, ಪ್ರವಾಸ ಇಷ್ಟು.
ಒಂದು ಕವನಸಂಕಲನ ಪ್ರಕಟವಾಗಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!