ನನ್ನ ಊರು ಪರಶುರಾಮನ ಸೃಷ್ಟಿಯಂತೆ. ಅದ್ಯಾರ ಸೃಷ್ಟಿಯಾದರೂ ಸರಿ ಸುಂದರ ಸಹಜ ಸೌಂದರ್ಯ ಪ್ರಕೃತಿಯೇ ನನ್ನೊಡಲು, ಹಲವು ಶತಕಗಳನ್ನೇ ಕಂಡಿದ್ದೇನೆ. ಜೀವನ ಇಷ್ಟೊಂದು ಸುಂದರವಾಗಿರಬಹುದು ಎಂದು ಅಂದುಕೊಂಡಿರಲೇ ಇಲ್ಲ, ಅಷ್ಟು ಅಂದವಾಗಿ ಸಾಗುತ್ತಿತ್ತು. ನನ್ನೊಡಲ ಕೂಸುಗಳಿಗೆಲ್ಲಾ ಬರ ಎಂಬ ಶಬ್ದವೂ ತಿಳಿಯಬಾರದು ಎಂದು ಇಷ್ಟು ಸಮಯ ಹರಿಯುತ್ತಲೇ ಇದ್ದೇನೆ, ಅದೆಂತಹಾ ಕಾಲವೇ ಆಗಿರಲಿ ಯಾರಿಗೂ ನೀರಿಲ್ಲ ಆಹಾರ ಇಲ್ಲ ಎಂದಿಲ್ಲ. ನನ್ನೊಡಲ ಅರಸಿ ಬಂದವರಿಗೆಲ್ಲಾ ಆಸರೆಯ ನಿಧಿಯಾದೆ, ಅದೆಷ್ಟೋ ಪ್ರವಾಸಿಗರಿಗೆ ಸುಂದರ ತಾಣವಾದೆ. ಹಲವು ಜೀವ ಪ್ರಭೇದಗಳನ್ನೇ ಹೊಂದಿದ ಅರಣ್ಯಕ್ಕೂ ಸಾಕ್ಷಿಯಾದೆ.
ಇಷ್ಟೆಲ್ಲಾ ನೀಡುತ್ತಿರುವಾಗ ನನ್ನ ಕಂದಮ್ಮಗಳಾದರೂ ನನಗೆ ತೊಂದರೆ ಮಾಡುತ್ತವೆಯೇ? ಇಲ್ಲ.. ಖಂಡಿತಾ ಇಲ್ಲ.. ಅವರು ನನ್ನ ಜೀವನದ ಒಡನಾಡಿಗಳು, ಇಷ್ಟೊಂದು ಸ್ವಚ್ಚಂದ ಬದುಕು ಕಟ್ಟಿಕೊಟ್ಟಿರುವಾಗ ಅವರೇಕೆ ನನ್ನ ಒಡಲನ್ನೇ , ನನ್ನ ಬದುಕಿನ ಗತಿಯನ್ನೇ ಬದಲಿಸುತ್ತಾರೆ ಹೇಳಿ… ತಮ್ಮಲ್ಲಿ ಅಗಾಧವಾಗಿರುವುದನ್ನು ಇನ್ನೊಬ್ಬರಿಗೆ ಕೊಡಲೊಲ್ಲೆ ಎನ್ನುವಷ್ಟು ಸಣ್ಣ ಬುದ್ಧಿಯವರೂ ಅಲ್ಲ. ಆದರೆ ಕೊಡಲು ಇಲ್ಲದ್ದನ್ನು ನಿಮ್ಮನ್ನು ಕೊಂದಾದರೂ ಸರಿ ತೆಗೆದುಕೊಂಡೇ ತೀರುತ್ತೇವೆ ಎಂದರೆ ಅವರು ಕೊಡುವುದಾದರೂ ಎಲ್ಲಿಂದ? ಅದಲ್ಲದೇ ನನ್ನ ಊರು ಬುದ್ಧಿವಂತರ ಊರು. ಅವರೆಂದಿಗೂ ಎರಡು ಸಲ ಯೋಚಿಸದೇ ಕೆಲಸ ಮಾಡುವವರಲ್ಲ, ಅವರನ್ನು ಅದೆಷ್ಟೇ ಹೊಗಳಿ ಉಬ್ಬುವವರಲ್ಲ, ಅದೇ ತಮ್ಮತನಕ್ಕೆ ಪೆಟ್ಟು ಬಿದ್ದರೆ ಸುಮ್ಮನಿರುವವರಲ್ಲ – ಎಂದೆಲ್ಲಾ ಅಂದುಕೊಂಡಿದ್ದೆ. ಹ್ಹ.. ನಾನು ನೇತ್ರಾವತಿ.
ಅಲ್ಲಾ, ನನ್ನ ನಡಿಗೆಯ ಪಥವನ್ನು ಬದಲಿಸುವ ಯೋಜನೆಯ ಹೆಸರನ್ನು ಬದಲಾಯಿಸಿದ ಕೂಡಲೇ ತಿಳಿಯದಷ್ಟು ಮೂರ್ಖರಾ ನನ್ನ ಮಕ್ಕಳು? ನೇತ್ರಾವತಿ ನದಿ ತಿರುವು ಯೋಜನೆ ಅಂತ ಇದ್ದಿದ್ದನ್ನು ಎತ್ತಿನ ಹೊಳೆ ಯೋಜನೆ ಎಂದು ಬದಲಾಯಿಸಿಕೊಂಡರು ನಮ್ಮನಾಳುವವರು. ಎತ್ತಿನ ಹೊಳೆ ಎಂಬ ಹೆಸರಿನಲ್ಲಿ ಪುಟ್ಟ ತೊರೆಯಾಗಿ ಸಕಲೇಶಪುರದ ದಟ್ಟ ಅರಣ್ಯದೊಳಗೆ ಹರಿಯುತ್ತೇನೆ. ಆ ಪುಟ್ಟ ತೊರೆಯಲ್ಲಿ 24 ಟಿಎಂಸಿ ನೀರು ಎಲ್ಲಿಂದ ಬರಬೇಕು ಹೇಳಿ? ನನ್ನ ಹರಿವನ್ನೇ ನಂಬಿಕೊಂಡು ಹರಿಯುವ ಇನ್ನಷ್ಟು 8 ಉಪನದಿಗಳಿಗೆ ಅಣೆಕಟ್ಟು ಕಟ್ಟಿ ನೀರೆತ್ತುವ ಯೋಜನೆ ಮಾಡ ಹೊರಟಿದ್ದಾರಂತೆ. 6-7 ಟಿಎಂಸಿ ನೀರೆತ್ತುವಷ್ಟೂ ನೀರಿಲ್ಲದ ಸ್ಥಿತಿ ಇಂದು ಇನ್ನು 22-24 ಟಿಎಂಸಿ ಎಲ್ಲಿಂದ ತರುವುದು? ಅಲ್ಲದೇ ಈ ಯೋಜನೆಯ ಬಳಿಕ ದಕ್ಷಿಣಕ್ಕೂ ನೀರಿಲ್ಲ, ಉತ್ತರದಲ್ಲಿ ಹೇಗೂ ನೀರಿಲ್ಲ, ಕರ್ನಾಟಕ ಹೆಚ್ಚಿನ ಭಾಗ ಬರಡು ಭೂಮಿ ಎನ್ನುವ ಸ್ಥಿತಿ ಬಂದೀತೆಂಬ ಭಯ ನನ್ನ ಆವರಿಸಿದೆ. ಒಂದಂತೂ ಹೇಳುತ್ತೇನೆ. ನನ್ನ ಒಡಲನ್ನೇ ಬಗೆದು ಹೊರಟರೆ ಈ ಯೋಜನೆ ದಡ ಮುಟ್ಟಿವುದಿಲ್ಲ. ನನ್ನ ಮಕ್ಕಳು ಈಗಲೇ ಬಿಸಿಲ ಧಗೆಗೆ ಬೇಯುತ್ತಿದ್ದಾರೆ. ಬಹುಶಃ ಇಂತಹಾ ಬೇಸಿಗೆಯನ್ನು ತಂಪಾದ ಆಗಸ್ಟ್ ಸೆಪ್ಟೆಂಬರ್ ನಲ್ಲಿ ನನ್ನ ಕಂದಮ್ಮಗಳು ಈ ಮೊದಲು ಯಾವತ್ತೂ ಅನುಭವಿಸುತ್ತಿರಲಿಲ್ಲ. ಅಯ್ಯೋ ಅನಿಸುತ್ತಿದೆ, ಕರುಳು ಕಿತ್ತು ಬರುತ್ತಿದೆ. ನಾನೇನೂ ಮಾಡಲೂ ಸಾಧ್ಯವಿಲ್ಲವೇ ಎಂದು ಹಲವು ಸಲ ಪ್ರಶ್ನೆಗಳನ್ನು ನನ್ನಲ್ಲೇ ಕೇಳಿಕೊಂಡೆ, ಆದರೆ ನನ್ನ ಮೌನದಲ್ಲಿನ ಕೂಗು ಅವರಿಗೆ ಕೇಳಿಸುತ್ತಲೇ ಇಲ್ಲ, ಕೇಳಿದರೂ ನಾನು ಕೂಗುತ್ತಿರುವುದು ಅವರಿಗಾಗಿ ಎಂದು ಅರ್ಥ ಮಾಡಿಕೊಳ್ಳಲಾರರು ನನ್ನ ಬುದ್ಧಿವಂತ ಕಂದಮ್ಮಗಳು.
ತನ್ನದೇ ರಾಜ್ಯದ ಇನ್ನೊಂದು ಭಾಗಕ್ಕೆ ಕುಡಿಯುವ ನೀರಿಲ್ಲ ಅಲ್ಲಿಗೆ ನಾನು ಓಡಬೇಕು ಸರಿ. ನನ್ನೊಡಲನ್ನು ಬರಿದಾಗಿಸಿ ಇನ್ನೆಲ್ಲಿಗೆ ನೀರೋದಗಿಸಲಿ….??? ನನ್ನ ಸ್ವಂತ ಮಕ್ಕಳನ್ನು ಮಸಣಕ್ಕೆ ತಳ್ಳಿ ಅವರಿಗೆ ನೀರುಣಿಸಲೇನು? ನನ್ನ ಪಥ ಬದಲಿಸುತ್ತಿರುವುದು ಕೇವಲ ಕುಡಿಯುವ ನೀರಿಗಾಗಿ ಅಲ್ಲ. ಕೃಷಿ, ಕೈಗಾರಿಕೆಗೂ ಬೇಕಂತೆ ನೀರು. ಇದು ಹೆಸರಿಗೆ ಮಾತ್ರ ಕೋಲಾರ, ಚಿಕ್ಕಬಳ್ಳಾಪುರ ಮಂದಿಗೆ ಕುಡಿಯುವ ನೀರು. ಆದರೆ, ಈ ಯೋಜನೆಯಲ್ಲಿ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ರಾಮನಗರ, ಕನಕಪುರ, ಬೆಂಗಳೂರಿಗೂ ನೀರು ಹರಿಸುತ್ತಾರಂತೆ. ನನ್ನೊಡಲಾದ ದಕ್ಷಿಣ ಕನ್ನಡವನ್ನು ಬರಿದಾಗಿಸಿ ನನ್ನ ಕಂದಮ್ಮಗಳಿಗೆ ನೀರಿಲ್ಲದಂತೆ ಮಾಡಿ ಇನ್ನೆಲ್ಲೋ ಕೈಗಾರಿಕೆ ನೆಪದಲ್ಲಿ ನನ್ನ ಮೇಲೆ ಅತ್ಯಾಚಾರವೆಸಗುವುದು ಯಾವ ನ್ಯಾಯ..?? ಇಲ್ಲ, ನಾನಾಗಲಾರೆ… ಬುದ್ಧಿವಂತರಿಗೂ ಅರಿವಾಗದಂತೆ ಯೋಜನೆ ರೂಪಿಸಿ ಅದನ್ನು ನಡೆಸುತ್ತಿದ್ದಾರೆ, ನಾನು ಇದಕ್ಕೆಲ್ಲಾ ಮೂಕ ಸಾಕ್ಷಿಯಾಗಿದ್ದೇನೆ. ಮಳೆ ಎಷ್ಟು ಬರುತ್ತಿದೆ, ಅದರ ಪ್ರಮಾಣ ಏನು ಎಂದು ವಿಜ್ಞಾನ ಇಷ್ಟು ಮುಂದುವರಿದ ಇಂತಹಾ ಕಾಲದಲ್ಲೂ ನಿಖರವಾಗಿ ಅಳೆಯಲು ಎ.ಸಿ ರೂಮಲ್ಲಿ ಕೂತು ಅಂಕಿ ಅಂಶಗಳನ್ನು ನೀಡಿದ ಯೋಜನೆ ಅಧಿಕಾರಿಗಳಿಗೆ ತಿಳಿಯದಾಯಿತೆ? ಅಲ್ಲಾ ಬೇಕೆಂದೇ ತಪ್ಪು ಲೆಕ್ಕಗಳನ್ನು ನೀಡಿದರೇ?
ಇನ್ನು, ಪಶ್ಚಿಮ ಘಟ್ಟದ ಹತ್ತಿರ ಬರುತ್ತೇನೆ. ನೋಡಿ ಪಶ್ಚಿಮ ಘಟ್ಟ ಎಂದರೆ ಅದು ದಟ್ಟಾರಣ್ಯ, ಹಲವು ಜೀವ ಸಂಕುಲಗಳಿಗೆ ಆಶ್ರಯದ ತಾಣ ಈ ಒಡಲು. ವಿಶ್ವದಲ್ಲೇ ಎಲ್ಲೂ ಇರದ ಹಲವು ಅಪರೂಪದ ಜೀವ ಸಂಕುಲಗಳಿಗೆ ನೆಲೆಯೊದಗಿಸಿದವಳು ನಾನು. ಆದರೆ ಈಗಾಗಲೇ ಒಡಲು ಬರಡಾಗುತ್ತಿದೆ. ನಿಮ್ಮಗಳಲ್ಲಿ ಒಂದೇ ಒಂದು ಪ್ರಶ್ನೆ, ಆಗಸ್ಟ್ ಸಪ್ಟೆಂಬರಿನಲ್ಲಿ ನೀವು ಉಪ್ಪಿನಂಗಡಿಯನ್ನೋ, ಬಂಟ್ವಾಳವನ್ನೋ ದಾಟುತ್ತಿದ್ದಾಗ ಮದುಮಗಳಂತೆ ತುಂಬಿತುಳುಕುತ್ತಿದ್ದ ನನ್ನನ್ನು ಮತ್ತೆಂದೂ ನೀವು ಹಾಗೆ ನೋಡಲು ಬಯಸುವುದಿಲ್ಲವೇ? ಸಪ್ಟೆಂಬರಿನಲ್ಲಿಯೇ ನೀರಿಲ್ಲದೆ ನಲುಗಿರುವ ನನ್ನ ಅಸ್ಥಿಪಂಜರ ಕಾಣುವಾಗಲಾದರೂ ನನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ದನಿಯೆತ್ತಲಾರಿರಾ ನೀವು? ನನ್ನ ಒಡಲಲ್ಲಿ ಹುಟ್ಟಿದವರೇ ತಮ್ಮ ಜೀವನ ಇನ್ನೂ ಉದ್ಧಾರ (!) ಆಗಬೇಕೆಂಬ ಹಟಕ್ಕೆ ಬಿದ್ದು ಅರಣ್ಯ ನಾಶಕ್ಕೆ ಕಾರಣರಾಗಿದ್ದಾರೆ. ಪಾಪ ಅವರಿಗೆ ತಿಳಿದಿಲ್ಲ ಅನಿಸುತ್ತದೆ, ನನ್ನೊಡಲ ಪಶ್ಚಿಮ ಘಟ್ಟ ನಾಶವಾಗುತ್ತಿರುವ ಪರಿಣಾಮವೇ ಇಂದು ಮಳೆ ಕಡಿಮೆಯಾಗುತ್ತಿದೆ, ಸೆಖೆ ಧಗೆ ತಡೆಯಲಾಗದೇ ಪರಿತಪಿಸುತ್ತಿದ್ದಾರೆ ಎಂದು. ಈ ಯೋಜನೆಯ ಪ್ರಕಾರ ನನ್ನೊಡಲಲ್ಲಿ ಎಂಟು ಅಣೆಕಟ್ಟು, ನೂರಾರು ಕಿ.ಲೋ ಮೀಟರ್ ಉದ್ದದ ಪೈಪ್ ಲೈನ್, ಪವರ್ ಹೌಸ್, ವಿದ್ಯುತ್ ಸರಬರಾಜು ವ್ಯವಸ್ಥೆಗಳು, ರಸ್ತೆ ಹೀಗೆ ಸಾವಿರಾರು ಕಾಮಗಾರಿಗಳು ನಡೆಯಲೇ ಬೇಕು. ಈ ಕಾಮಗಾರಿಯ ವೆಚ್ಚವೆಷ್ಟು ಎನ್ನುವ ಅಂದಾಜಾದರೂ ಇದೆಯಾ ಕೂಸೇ? ಒಂದು ನೀರು ಟಿಎಂಸಿ ನೀರು ಹರಿಸಲು ಸರ್ಕಾರ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ಛೇ!! ಹಣದಿಂದ ಜಾಸ್ತಿ ಈ ನೆಪದಲ್ಲಿ ನನ್ನ ಪಶ್ಚಿಮ ಘಟ್ಟ ನಾಶವಾಗುವುದ ಯೋಚಿಸಿದರೆ ಹರಿಯುವುದನ್ನೇ ನಿಲ್ಲಿಸಿ ಬಿಡಲೇ ಅನಿಸುತ್ತಿದೆ…….
ಇನ್ನು ಕಾಮಗಾರಿ, ಮತ್ತೆ ಕಾಮಗಾರಿಯ ಬಳಿಕ ಎಲ್ಲವೂ ಸುಲಲಿತವಾಗಿ ಸಾಗಬೇಕಿದ್ದರೆ ಕರೆಂಟ್ ಬೇಕಲ್ಲ. 350 ಮೆಗಾವ್ಯಾಟ್’ಗೂ ಮೀರಿ ಕರೆಂಟ್ ಬೇಕಂತೆ. ಈಗಾಗಲೇ ಲೋಡ್ ಶೆಡ್ಡಿಂಗ್ ನಿಂದ ನೀವು ಅದೆಷ್ಟು ಬೇಸತ್ತಿದ್ದೀರಿ ಎಂದು ನಿಮಗೇ ತಿಳಿದಿದೆ. ಪೇಪರಿನಲ್ಲಿ ಪ್ರತಿದಿನ ಬರುತ್ತಿದೆ, ಲೋಡ್ ಶೆಡ್ಡಿಂಗ್ ಕಾರಣ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಬಹುದು, ಗಮನ ಹರಿಸಿ ಎಂದು. ಇನ್ನು ಈ ಯೋಜನೆ ಬೇಕಾದ ಕರೆಂಟ್ ಎಲ್ಲಿಂದ ಬರಬೇಕು? ಕತ್ತಲೆಯ ರಾಜ್ಯ ಅಲ್ಲ, ನೀರಿಲ್ಲದ ರಾಜ್ಯವಾಗುತ್ತದೆ. ಕತ್ತಲೆಯ ರಾಜ್ಯವನ್ನಾದರೂ ಸಹಿಸಬಹುದು ನೀರಿಲ್ಲದೆ ಹೇಗಿರುತ್ತೀ ಕೂಸೇ?
ದಕ್ಷಿಣ ಕನ್ನಡದ ಕಂದಮ್ಮ ನಿನಗೆ ಗೊತ್ತಿರಬಹುದು, ಆನೆಗಳ ಹಾವಳಿ, ಕೃಷಿಕರ ತೋಟಕ್ಕೆ ಹಲವು ಕಾಡು ಪ್ರಾಣಿಗಳ ಉಪಟಳ. ಇದಕ್ಕೆಲ್ಲಾ ಕಾರಣ ಏನೆಂದು ಯಾವತ್ತಾದರೂ ಯೋಚನೆ ಮಾಡಿದ್ದೀಯ?? ಸುಳ್ಯ, ಸುಬ್ರಹ್ಮಣ್ಯ,ಸಕಲೇಶಪುರದ ಆಸು ಪಾಸಿನ ಕಥೆಯೂ ಅಷ್ಟೇ. ಪ್ರತಿ ದಿನ ಆನೆ ನೀರು ಆಹಾರಕ್ಕಾಗಿ ಅರಣ್ಯ ಬಿಟ್ಟು ಹೊರಗೆ ಬರುತ್ತಿವೆ, ಚಿರತೆಗಳು ದನದ ಕೊಟ್ಟಿಗೆಗೆ ದಾಂಗುಡಿಯಿಡುತ್ತಿವೆ ಎಂದಾದರೆ ಅಲ್ಲಿನ ಸ್ಥಿತಿ ಅದೆಷ್ಟು ಶೋಚನೀಯ ಆಗಿರಬೇಕು? ಇದಕ್ಕೆಲ್ಲಾ ಕಾರಣ ಯಾರು? ಏನೂ ಅರಿಯದ ಆ ಮುಗ್ದ ಕಾಡುಪ್ರಾಣಿಗಳಾ ಇಲ್ಲಾ ಸ್ವಾರ್ಥಕ್ಕಾಗಿ ಅರಿತೂ ಅರಿಯದಂತೆ ಸರ್ವನಾಶದತ್ತ ಸಾಗುತ್ತಿರುವ ನೀವುಗಳಾ? ಇನ್ನು ನನಗೆ ಎಂಟು ಅಣೆಕಟ್ಟು ಕಟ್ಟಿ ಪೈಪ್ ಲೈನ್ ಹಾಕಿ ಅರಣ್ಯ ನಾಶವೂ ಮಾಡಿ, ಹಲವು ಕೃಷಿ ಭೂಮಿಯನ್ನೂ ಕಬಳಿಸಿ, ನನ್ನೊಡಲ ನೀರಿನ ಹರಿವನ್ನೇ ನಿಲ್ಲಿಸಿದಾಗ ನನ್ನ ನಂಬಿ ಬದುಕುತ್ತಿರುವ ಆ ಪುಟ್ಟ ಪುಟ್ಟ, ಮುದ್ದು ಮುದ್ದಾದ ಪ್ರಾಣಿ ಪಕ್ಷಿ ಸಂಕುಲ – ಮರ ಗಿಡಗಳು ಎಲ್ಲಿಗೆ ಹೋಗಬೇಕು?.
ಗ್ರೇ ಫ್ರಂಟೆಡ್ ಗ್ರೀನ್ ಪಿಜನ್, ಮಲಬಾರ್ ಪಾರಕೀಟ್, ಶ್ರೀಲಂಕನ್ ಫ್ರಾಗ್’ಮೌತ್, ಜೆರ್ಡಾನ್ಸ್ ನೈಟ್ ಜಾರ್, ಇಂಡಿಯನ್ ಸ್ವಿಫ಼್ಟ್’ಲೆಟ್, ಬ್ರೌನ್ ಬಾಕ್’ಡ್ ನೀಡಲ್ ಟೈಲ್, ಮಲಬಾರ್ ಟ್ರೊಗೊನ್, ಓರಿಯೆಂಟಲ್ ಡ್ವಾರ್ಫ್ ಕಿಂಗ್’ಫಿಷರ್, ಮಲಬಾರ್ ಹಾರ್ನ್’ಬಿಲ್, ಮಲಬಾರ್ ಪೈಡ್ ಹಾರ್ನ್’ಬಿಲ್, ಮಲಬಾರ್ ಬಾರ್ಬೆಟ್, ಮಲಬಾರ್ ವುಡ್ ಶ್ರೈಕ್, ಆರೆಂಜ್ ಮಿನಿವೆಟ್, ವೈಟ್ ಬೆಲ್ಲೀಡ್ ಟ್ರೀಪಿ, ಮಲಬಾರ್ ಕ್ರೆಸ್ಟೆಡ್ ಲಾರ್ಕ್, ಗ್ರೇ ಹೆಡೆಡ್ ಬುಲ್ ಬುಲ್, ಕೆಂಪು ಕೊರಳಿನ ಪಿಕಳಾರ, ಹಳದಿ ಹುಬ್ಬಿನ ಪಿಕಳಾರ, ಗೋಲ್ಡನ್ ಹೆಡೆಡ್ ಸಿಸ್ಟಿಕೋಲ, ಡಾರ್ಕ್ ಫ್ರಂಟೆಡ್ ಬಾಬ್ಲರ್, ರೂಫ಼ಸ್ ಬಾಬ್ಲರ್, ಲೆಸ್ಸರ್ ಹಿಲ್ ಮೈನಾ, ಬ್ಲಿತ್ಸ್ ಸ್ಟಾರ್ಲಿಂಗ್, ಮಲಬಾರ್ ವಿಸ್ಲಿಂಗ್ ತ್ರಶ್, ವೈಟ್ ಬೆಲ್ಲೀಡ್ ಫ಼್ಲೈಕಾಚರ್, ನೀಲಗಿರಿ ಫ್ಲವರ್ ಪೆಕರ್, ಬ್ಲಾಕ್ ತ್ರೋಟೆಡ್ ಮುನಿಯಾ, ಕ್ರಿಮ್’ಸನ್ ಬಾಕ್’ಡ್ ಸನ್’ಬರ್ಡ್ – ಇದೆಂತಾ ನನ್ನಷ್ಟಕ್ಕೆ ಹರಿಯುವ ನಾನು ಹೀಗೆ ಅದ್ಯಾವುದೋ ಹಕ್ಕಿಗಳ ಹೆಸರನ್ನು ಹೇಳುತ್ತಿದ್ದೇನೆ ಅಂದುಕೊಳ್ಳಬೇಡಿ. ಇಲ್ಲಿ ಹೇಳಿದ ಇಷ್ಟು ಹಕ್ಕಿಗಳು ಪಶ್ಚಿಮ ಘಟ್ಟದಲಲ್ಲದೆ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ನೀವು ನೀರಿನ ಹರಿವನ್ನೇ ನಿಲ್ಲಿಸಿದರೆ, ಅರಣ್ಯ ನಾಶ ಮಾಡಿದರೆ ಇವೆಲ್ಲಾ ಎಲ್ಲಿ ಹೋಗಬೇಕು?? ಪೂರ್ತಿ ಭಾರತದ 25% ಜೀವ ಪ್ರಭೇದ ಇಲ್ಲಿದೆ, ಇನ್ನೂ ಹಲವು ಕಪ್ಪೆಗಳೂ ನನ್ನೊಡಲ ಜೀವಿಗಳು ಮತ್ತೊಂದಿಷ್ಟು ಪ್ರಾಣಿ ಸಂಕುಲಗಳೂ ನನ್ನಲ್ಲಡಗಿವೆ. ಇವೆಲ್ಲಾ ಲೈಫ್ ಸೈಕಲ್ ಎನ್ನುತ್ತೇವಲ್ಲಾ ಅದಕ್ಕೆ ಬಹಳಷ್ಟು ಕೊಡುಗೆಯನ್ನೇ ನೀಡುತ್ತಿವೆ, ಇವುಗಳನ್ನು ಎಂದಿಗೂ ಯಕಶ್ಚಿತ್ ಎಂದು ಭಾವಿಸಿದರೆ ಕ್ಷಮಿಸಲಾರದ ಬಹು ದೊಡ್ಡ ತಪ್ಪಾದೀತು.
ಅಷ್ಟೇ ಏಕೆ ಮುಂದೆ ವೆಸ್ಟರ್ನ್ ಘಾಟ್ಸ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲೂ ಸಾಧ್ಯವಿಲ್ಲದ ದಿನ ಹೆಚ್ಚು ದೂರವಿಲ್ಲ. ನನ್ನ ಕಂದಮ್ಮಗಳು ಎಂದರೆ ಮನುಷ್ಯರು ಮಾತ್ರವಲ್ಲ, ಇವರೆಲ್ಲಾ ನನ್ನ ಕಂದಮ್ಮಗಳೇ…. ಇದ ನೆನೆಸಿಕೊಂಡರೆ ಕಣ್ಣೀರಿಗೂ ಬರವಾಗುವಷ್ಟು ಬತ್ತಿ ಹೋಗುತ್ತೇನೆಂಬ ಭಯ ಆವರಿಸಿದೆ.
ಇದೆಲ್ಲದರ ಹಿಂದೆ ಇರುವ ಕೈಗಳು ನನ್ನ ಕಂದಮ್ಮಗಳದ್ದೇ ಎನ್ನುವ ಮಾತು ಕೇಳಿ ಬರುತ್ತಿದೆ, ಸ್ವಷ್ಟವಾಗಿದೆ ಎನ್ನಬಹುದೇನೋ… ಗೊತ್ತಿಲ್ಲ… ಆದರೆ ಪಟ್ಟಣ್ಣಕ್ಕೆ ಹೋದ ಮೇಲೆ ನನ್ನನ್ನು ಬಿಡಿ ನನ್ನ ಊರಿನ ಜನರಿಗೂ ಮೋಸ ಮಾಡುವ ಬುದ್ಧಿ ನನ್ನದೇ ಒಡಲ ಕುಡಿಗೆ ಯಾಕೆ ಬಂತು? ನನ್ನ ಬಹು ನೆಚ್ಚಿನ ಉಪ್ಪಿನಂಗಡಿ, ಬಂಟ್ವಾಳ, ಉಲ್ಲಾಳ ಕ್ಷೇತ್ರಗಳನ್ನೆಲ್ಲಾ ಪ್ರತಿನಿಧಿಸುವವರು ಇವತ್ತು ಯಾಕೆ ನನ್ನನ್ನು ಇಷ್ಟು ಕಡೆಗಣಿಸುತ್ತಿದ್ದಾರೆ? ನನ್ನ ಬುದ್ಧಿವಂತ ಮಕ್ಕಳೂ ಇದರ ಬಗ್ಗೆ ಹೆಚ್ಚಿನ ಧ್ವನಿಯೆತ್ತುತ್ತಿಲ್ಲ. ಧ್ವನಿಯೆತ್ತಿದವರು ಬುದ್ಧಿ ಜೀವಿಗಳು, ಮಾಡಲು ಕೆಲಸ ಇಲ್ಲದವರು, ಎಂದು ಅವರ ಮೇಲೆಯೇ ಗೂಬೆ ಕೂರಿಸಲಾಗುತ್ತಿದೆ, ನೀರಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದರಿತ ಇವರು ಧ್ವನಿಯೆತ್ತಿದ್ದಾರೆ ಎನ್ನುವುದು ಸತ್ಯ. ಈ ಸತ್ಯ ಅರಿತವರು ನೇತ್ರಾವತಿ ಉಳಿಸಿ ಎಂದು ಹೋರಾಟಕ್ಕಿಳಿದಿದ್ದಾರೆ ಅವರ ಜೊತೆಗಾದರೂ ಧ್ವನಿಯಾಗೋಣ ಎನ್ನುತ್ತ…. ಬದಲಾವಣೆ ಜಗದ ನಿಯಮ ಇದು ಎಂದಿಗೂ ಸತ್ಯ, ಆದರೆ ಬದಲಾವಣೆ ಬದುಕನ್ನು ಕಟ್ಟಬೇಕೆ ಹೊರತು ಒಡೆಯದಿರಲಿ.. ವಿನಾಶದ ಬದಲಾವಣೆ ಬೇಡ ಅಲ್ಲವೇ..??
ನಾನು ಬರಿದಾಗುವೆನೆಂಬ ಬೇಸರವಲ್ಲ.. ನನ್ನ ಒಡಲಾಳದ ನೋವಿಷ್ಟೇ, ನನ್ನೊಡಲು ಒಣಗಿದರೆ ಭೂಮಿ ಎಂಬುದು ಮರುಳುಗಾಡಾಗುತ್ತದೆ.. ಕಂದಮ್ಮಗಳು ಮರುಭೂಮಿಯಲ್ಲಿ ಬದುಕಲು ಸಾಧ್ಯವಾ?? ನನ್ನ ಕೂಸುಗಳು ಸಾಯುವುದನ್ನು ನಾ ನೋಡಲಾರೆ.
ನಾನಲ್ಲಿ ಹೋಗಲಾರೆ – ನಾನೆಂದೂ ನಿಮ್ಮವಳು – ನಾನು ನೇತ್ರಾವತಿ.