ಕವಿತೆ

ಸುಪ್ತಪ್ರಜ್ಞೆ

ಹೃದಯದ ನವರಂಗಿನ ಅಂಚಿತ ಲೋಕದಲಿ
ಹೊನ್ನೊಳೆಯಂತೆ ಹೊಳೆವ ಹೊಂಗನಸ ಹೊದಿಕೆ;
ಮಾಯಾಲೋಕದ ಮಿಥ್ಯೆಗಳು, ಹುಸಿ ಆಸೆಗಳು
ಎಲ್ಲವನ್ನೂ ನಿನ್ನ ಕೆನ್ನಾಲಿಗೆ ಚಾಚಿ ನುಂಗಿದೆ||
ಕಾಮನಬಿಲ್ಲಿನ ಕಾಂತಿಯಡಿಯಲಿ ಸುಖವಾಗಿ
ಹೊಸಹಕ್ಕಿಯ ಮಧುರ ಇಂಚರಕೆ ಕಿವಿಯಾಗಿ
ಮೈಮರೆಸಿ ಸೊಗ ನೀಡಿದ್ದ ಸವಿನಿದಿರೆಯನು
ತುಡುಕಿ ಸೆಳೆದು ದೂರತೀರಕೆ ಒಗೆದೆ||
ವಿಧವಿಧ ವಿಶಿಷ್ಟ  ಭಕ್ಷ್ಯಗಳು
ನಾಲಗೆಯಲಿ ನೀರೂರಿಸಿ ನಿಂದ ರಸರುಚಿಗಳು
ಸಪ್ಪೆಯಾದ ಬಾಳಲಿ ಸವಿಯಾಗ ಬಂದ ಬಯಕೆಗಳು
ನಿನ್ನ ಕಬಂಧ ಬಾಹುವಿನಡಿ ಅರುಚಿಗೊಂಡು ಬಿದ್ದಿದ್ದವು||
ಲೋಚನಕೆ ಪರ್ವವಾಗಿ ನಿಂತ ಬಿತ್ತರದಾ ಜಗ
ಅನಂತ ಅಂಬರದ ತಿಳಿ ಅನುಪಮ ವಸನ
ಆಗಷ್ಟೇ ರೆಕ್ಕೆ ಮೂಡಿದ್ದ ಪುಟ್ಟ ಹಕ್ಕಿಯ ಕರೆದವು
ಹಕ್ಕಿಯ ರೆಕ್ಕೆ ತುಂಡು ಮಾಡಿ ಗಾಂಭೀರ್ಯ ತೋರಿದೆ||
ವಜ್ರವನ್ನೂ ನಾಚಿಸುವಂತೆ ಬಹು ಮಿನುಗುತ್ತಿದ್ದ
ಗಾಜಿಗಿಂತ ಅಗಾಧ ವಿಶದವಾಗಿದ್ದ
ಮಾಯೆಯ ನಿಂತ ಹೊಳೆಯ ಉದಕದ ಮೇಲೆ
ನಿಲ್ಲ ಹೊರಟ ನನ್ನ ಕೈಹಿಡಿದು ಕಪಾಲಕೆ ಬಾರಿಸಿದೆ||
ಮೊಗ್ಗಿನ ಮುಗ್ಧತೆ, ಮೃದುಲತೆಯನು ಸೀಳಿ
ಹುಚ್ಚು ಕುದುರೆಯಂತೆ ವೇಗದಿಂದ ಧಾವಿಸಿತ್ತು ವಯಸು;
ಆಗ ಕಂಡದ್ದೆಲ್ಲಾ ಸೊಗಸು, ಕಣ್ಣಗಲಿಸಿದಷ್ಟೂ ಕನಸು
ಚಂಚಲ ಮನಸಿಗೆ ಮುಳ್ಳಹಾಸಿಗೆಯೂ ಹೂವ ಹಾಸು||
ಅತಿಕುತೂಹಲ ತಣಿಸಲು ಮುಳ್ಳನ್ನು ಸ್ಪರ್ಶಿಸಿ
ಬಾಳಸ್ವರೂಪವನೇ ನಿರಾಕಾರಗೊಳಿಸಿ
ಹುಚ್ಚು ಹೆಚ್ಚಿ ಬದುಕ ಸುಡುವ ಮುನ್ನ
ನೀ ಎಚ್ಚರಿಸಿದ್ದೆ ಮನವ, ಚಂಚಲ ಚೇತನವ||
ಬಾಳನು ಉಳಿಸಿ ಬೆಳ್ಳಿ ಬೆಳಕು ಬೀರಿದೆ
ಹುಸಿಕಾಂತಿಯ ಹಿಂದಿನ ಅಂಜನವ ಸಾಕ್ಷಾತ್ಕರಿಸಿದೆ;
ಕೈ ಹಿಡಿದು ನಡೆಸಿ ಸರಿ ದಾರಿ ತೋರಿದೆ
ಕೋಟಿ ನಮನ ಸುಪ್ರಜ್ಞೆಯೇ, ಅರಿವಿನಲಿ ಸುಪ್ತವಾಗಿಹ
            ದೀಧಿತಿಯೇ||

Kavana V Vasishta

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!