ಕವಿತೆ

ಕರಿಛಾಯೆ

ನೀರವತೆಯಲಿ ಪವಡಿಸಿದ್ದ ನೆಲವ
ತೋಯಿಸಿದೆ ಲೋಹಿತ ರಕ್ತತೈಲ;
ರವಿಯೂ ಹೇಸಿಗೆಯಿಂ ಮಂದನಾದ
ಭುಗಿಲೇಳಲು ಕ್ರೌರ್ಯದ ರಣಜ್ವಾಲಾ||

ಲವಲೇಶವೂ ಇರಲಿಲ್ಲ ಆ ದೀನಕಂಗಳಲಿ
ರುದಿರಕೋಡಿ ಕಾಣುವ ರಣಕಲ್ಪನೆ;
ಇನ್ನೂ ಅರಳದ ಕುಟ್ಮಲಗಳನು
ಬೂದಿಯಾಗಿಸಿತು ರಣೋಪಾಸನೆ||

ಅನುದಿನ ಲೋಹಿತ ಧುನಿಯದೇ ಚಿತ್ರಣ
ವಿರಮಿಸಿದ್ದವು ಕ್ಷಣ ಎಳೆರೆಪ್ಪೆಗಳು;
ಹೊಂಗನಸ ತೆರೆ ಸರಿಸಿ ಅನಂತನಿಶೆಯ
ದರ್ಶಿಸಿದವು ವಿಕೃತ ಅಧಮಾತ್ಮಗಳು||

ಶತಕಗಳಿಂದ ಗುಂಡೇಟಿನದೇ ಸುಪ್ರಭಾತ
ತುಡಿತವಿದೋ ಕ್ಷಣ ಮೌನಕೆ;
ಆವರಿಸಿಹ ಲೋಹಿತ ನೆತ್ತರ ಕಲೆಗಳ
ಅಳಿಸುವ ಶಾಂತಿಯ ಸಿಂಚನಕೆ||

ಅಂತವೆಂದು ಈ ಕ್ರೂರ ವಿಪ್ಲವಕೆ
ಕಾದಿದೆ ವಿಶ್ವದ ಅಣುಅಣುವೂ;
ಕ್ರೌರ್ಯದ ಕರಿಪತಾಕೆ ಕಿತ್ತೆಸೆದು
ಧವಲ ಧ್ವಜ ಕಾಣ್ವ ದೀನ ಹಂಬಲವು||

 

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!