ಮೊನ್ನೆಯಷ್ಟೇ ದೆಹಲಿಯಲ್ಲಿ ಒಂದು ಘಟನೆ ನಡೆಯುತು. ಜಾಸ್ಲೀನ್ ಕೌರ್ ಎಂಬಾಕೆ ಸರ್ವಜೀತ್ ಸಿಂಗ್ ಎಂಬಾತ್ ತನಗೆ ಕಿರುಕುಳ ನೀಡಿದ್ದಾನೆ ಎನ್ನುತ್ತಾ ಆತನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ರಂಪ ಮಾಡುತ್ತಾಳೆ. ಎಲ್ಲರೂ ಆಕೆಗೆ ಅನುಕಂಪ ತೋರುವವರೇ, ಸಪ್ಪೋರ್ಟ್ ಮಾಡುವವರೇ. ಕಡೆಗೆ ಸಾಕ್ಷಿಯೊಬ್ಬನಿಂದ ಹೊರಬಂದ ಕಟುಸತ್ಯವೇನೆಂದರೆ ಇದರಲ್ಲಿ ಸರ್ವಜೀತ್’ನದ್ದೇನೂ ತಪ್ಪಿಲ್ಲ. ಇದೆಲ್ಲ ಹುಡುಗಿಯದ್ದೇ ಹುನ್ನಾರ ಎಂದು. ಅರ್ಧ ವರ್ಷದ ಹಿಂದೆ ನಡೆದ ಹರ್ಯಾಣದ ವೀರ ವನಿತೆಯರ ಕಥೆಯೂ ಇದೇ ಆಗಿತ್ತು. ಮತ್ತೆ ಬೆಂಗಳೂರಿನಲ್ಲಿ ನಯನಾ ಕೃಷ್ಣ ಎಂಬ ನಟಿಯೊಬ್ಬಳು ವೈದ್ಯನೊಬ್ಬನನ್ನು ಅಶ್ಲೀಲ ವಿಡಿಯೋವನ್ನು ಬಳಸಿಕೊಂಡು ಆಟವಾಡಿಸಿದ್ದು ಗೊತ್ತೇ ಇದೆಯಲ್ಲಾ?ಇದನ್ನೆಲ್ಲಾ ನೋಡಿದ ಬಳಿಕ ಹುಡುಗರು ಯಾರೂ ಕೂಡ ಒಂದು ಹುಡುಗಿಗೆ ಸಹಾಯ ಮಾಡಲು 2 ಸಲ ಯೋಚಿಸದೇ ಇರಲಾರ. ಆತನ ಯೋಚನೆ ನ್ಯಾಯಯುತವಾದದ್ದೇ. ಆತನ ಸ್ಥಾನದಲ್ಲಿ ನಾನಿದ್ದರೂ ಹಾಗೇ ಮಾಡುತ್ತಿದ್ದೆ. ನನಗಾದರೂ ಉಪಕಾರ ಮಾಡಲು ಹೋಗಿ ಅಪಕಾರ ಮಾಡಲು ಬಂದ ಎಂದು ಕೇಳಿಸಿಕೊಳ್ಳುವ ಅಗತ್ಯವಾದರೂ ಏನಿದೆ? ನನ್ನ ಪಾಡಿಗೆ ನಾನು ಬದುಕುತ್ತೇನೆ ಎಂದೆನಿಸುವುದು ಸಹಜವೇ.
ಕಾನೂನು ಮಾತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾಳೆ, ಎಲ್ಲರಿಗೂ ನ್ಯಾಯ ಸಿಗಲಿ ಎಂಬುದೇ ಇದರರ್ಥ ಎಂಬುದು ನಮಗೆ ತಿಳಿದೇ ಇದೆ. ಆದರೆ ಕಾನೂನು ನಿಜವಾಗಿಯೂ ಎಲ್ಲರ ಮಿತಿಗೂ ಸಿಗುತ್ತಿದೆಯೇ?
ಆಕೆ ತನ್ನ ಮೇಲೆ ವರದಕ್ಷಿಣೆ ಕಿರುಕುಳ ಎಂದು ಕಂಪ್ಲೇಟ್ ಕೊಡುತ್ತಾಳೆ ಆತ ತತ್’ಕ್ಷಣವೇ ಅರೆಸ್ಟ್ ಆಗುತ್ತಾನೆ. ಆತ ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದವನೇ. ಹಿಂದೆ ಮುಂದೆ ಇಲ್ಲ, ವರದಕ್ಷಿಣೆ ಕಿರುಕುಳ ಎಂದ ಕೂಡಲೇ ಆತ ಅರೆಸ್ಟ್ ಆಗುತ್ತಾನೆ. ಮತ್ತೊಬ್ಬ ಸಮಾಜದಲ್ಲಿ ದೊಡ್ಡ ಹುದ್ದೆಯಲ್ಲಿದ್ದವ, ನಿಜವಾಗಲೂ ಆತ ಸೌಮ್ಯ ಸ್ವಭಾವದವನು, ಆತನನ್ನು ಬಹಳ ಹತ್ತಿರದಿಂದ ಬಲ್ಲವರಾರು ಆತ ಹಾಗೆ ಎಂದರೆ ನಂಬಲು ಸಾಧ್ಯವಿಲ್ಲ, ಕೊನೆಗೆ ಆತ ಕೋಟಿಯ ಹತ್ತಿರ ಪರಿಹಾರಕ್ಕೆ ಒಪ್ಪಿಕೊಂಡು ಡೈವೋರ್ಸ್ ನೀಡುತ್ತಾನೆ. ಆತನಿಗೆ ಹಣ ಹೆಂಡತಿ ಹೋದರೆ ಹೋಗಲಿ ಒಬ್ಬಂಟಿಯಾಗಿಯಾದರೂ ನೆಮ್ಮದಿಯಿಂದ ಬದುಕುತ್ತೇನೆ ಎನಿಸಬೇಕು. ಬಹುಶಃ ಲೆಕ್ಕ ಕೊಡಲು ಸಾಧ್ಯ ಇಲ್ಲ ಅನಿಸುತ್ತಿದೆ. ಅಷ್ಟು ಜನ ಪುರುಷರು ಇಂದು ಇಂತಹಾ ಮಾಡಿಲ್ಲದ ತಪ್ಪಿಗೆ ಬೆಲೆ ತೆರುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಯಹತ್ಯೆ ಮಾಡಿಕೊಂಡ ಪುರುಷರೂ ಇದ್ದಾರೆ ಎಂದರೆ ನೀವು ನಂಬಲೇಬೇಕು. ಇದು ಮದುವೆಯಾದವರ ಕಥೆಯಾಯಿತು ಬಿಡಿ.
ಆಕೆ ದಾರಿ ಬದಿಯಲ್ಲೋ ಮತ್ತೆಲ್ಲೋ ಹೋಗುತ್ತಿರುತ್ತಾಳೆ, ಆತನ ಬಳಿ ಏನೋ ಸಹಾಯ ಕೇಳುತ್ತಾಳೆ. ಈತ ಅನುಕಂಪದಿಂದಲೋ ಏನೋ, ಸಹಾಯ ಮಾಡಲು ಹೋಗುತ್ತಾನೆ. ಆದರೆ ಆಕೆಯ ವರಸೆಯೇ ಬೇರೆ ನೋಡಿ. ಆತ ತನಗೆ ಕಿರುಕುಳ ನೀಡಿದ ಎಂದು ಬೊಬ್ಬೆ ಇಡುತ್ತಾಳೆ. ಸಾಕಲ್ಲಾ, ಎಲ್ಲರಿಗೂ ಕೂಡಲೇ ಗಂಡಸಿನ ಮೇಲೆಯೇ ಸಂಶಯ. ಕಪಾಳ ಮೋಕ್ಷ, ಧರ್ಮದೇಟು, ಲೈವ್ ಆಕ್ಷನ್.. ಅಲ್ಲಿಗೆ ಆತನ ಮಾನ ಹರಣ. ಅಷ್ಟಾಗಿದ್ದರೂ ಎಲ್ಲೋ ಬದುಕಿದೆಯಾ ಬಡಜೀವವೇ ಎಂದು ಬದುಕಬಹುದಿತ್ತು. ಜೊತೆಗೆ ನಾಲ್ಕಾರು ಐಪಿಸಿ ಸೆಕ್ಷನ್’ಗಳನ್ನೂ ಜಡಿಯುತ್ತಾರಲ್ಲಾ… ಬೇಕಿತ್ತಾ ತನ್ನ ಪಾಡಿಗೆ ಹೋಗುತ್ತಿದ್ದ ಆತನಿಗೆ ಸಹಾಯ ಮಾಡುವ ಕೆಲಸ?
ಇನ್ನು ಅತ್ಯಾಚಾರದ ಕೇಸುಗಳಂತೂ ಕೇಳುವುದೇ ಬೇಡ. ರಾಮ ರಾಮ… ಹೀಗೂ ಅತ್ಯಾಚಾರಗಳು ನಡೆಯಲು ಸಾಧ್ಯವಾ ಎನಿಸದೇ ಇದ್ದರೆ ಮತ್ತೆ ಹೇಳಿ. ‘ದಿ ಹಿಂದೂ’ ದಿನಪತ್ರಿಕೆ ಆರು ತಿಂಗಳುಗಳ ಕಾಲ ನಡೆಸಿದ ಸಮೀಕ್ಷೆಯ (ರೇಪ್ ರೇಟ್ ಎಂದೇ ಪರಿಗಣಿಸಲಾಗುತ್ತದೆ ಇದನ್ನು) ಪ್ರಕಾರ ರೇಪ್ ಕೇಸುಗಳಲ್ಲಿ ನಲುವತ್ತು ಶೇಕಡಾ ಕೇಸುಗಳು ಏನೆಂದರೆ ಆತ ಆಕೆಯ ಬಾಯ್’ಫ್ರೆಂಡ್, ಹೊರಗಡೆ ಸುತ್ತಾಡಿ ಬಂದಿರುವುದು ಅದು ತಿಳಿದ ತಂದೆ ತಾಯಿ ಆತನ ಮೇಲೆ ರೇಪ್ ಕೇಸ್ ದಾಖಲಿಸುತ್ತಾರೆ, ಮತ್ತೆ 25% ಕೇಸುಗಳು ಮದುವೆ ನಿಶ್ಚಯ ಆದವರು. ಹೀಗೆ ಹಲವು ವಿಧದವರು. ಅಲ್ಲಿಗೆ 65% ಕೇಸುಗಳು ಫೇಕಾಯಿತಲ್ಲಾ? ದೆಹಲಿ ಮಹಿಳಾ ಅಯೋಗ ಹೇಳುತ್ತದೆ ಏಪ್ರಿಲ್ 2013 – ಜುಲೈ 2014 ರ ನಡುವಿನಲ್ಲಿ ದಾಖಲಾದ ಅತ್ಯಾಚಾರದ ಕೇಸುಗಳಲ್ಲಿ 53% ಕೇಸುಗಳು ಸುಳ್ಳು ಆರೋಪಗಳೆಂದು. ಮಹಿಳಾ ಅಯೋಗ ಸುಳ್ಳು ಹೇಳುವುದಿಲ್ಲ ಎನ್ನುವುದು ನನ್ನ ನಂಬಿಕೆ.
ಆತ ಸಮಾಜದ ಘನ ವ್ಯಕ್ತಿ, ಆತನ ಮೇಲೆ ಅತ್ಯಾಚಾರದ ಅರೋಪ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ ಆಕೆ, ಆತನಿಗಿರುವುದು ಎರಡೇ ದಾರಿ ಒಂದೋ ಆಕೆ ಕೇಳಿದಷ್ಟು ಹಣ ನೀಡುವುದು ಅಲ್ಲದೇ ಹೋದರೆ ಮುಂದೆ ಕೋರ್ಟ್ ಕಛೇರಿಗಳ ಕಂಬ ಸುತ್ತುವುದು. ಯಾರದ್ದೋ ಕೆಟ್ಟ ಮನಸ್ಥಿತಿಗೆ ಆತನ ಪೂರ್ತಿ ಕುಟುಂಬ ಬಲಿಯಾಗಬೇಕೆ? ಆತನನ್ನೇ ನಂಬಿದ ವ್ಯಕ್ತಿಗಳೆಲ್ಲಾ ಏನು ಮಾಡಬೇಕು ಹೇಳಿ? ಒಬ್ಬ ಪುರುಷ ಎಂದರೆ ಖಂಡಿತಾ ಇಂದಿಗೂ ಆತನನ್ನು ನಂಬಿ ಮೂರೋ ನಾಲ್ಕೋ ಜನ ಇದ್ದೇ ಇರುತ್ತಾರೆ. ಅವರ ಸ್ಥಿತಿ? ನನಗೆ ಈಗಲೂ ನೆನಪಿದೆ, ಕಳೆದ ವರುಷದ ಒಂದು ರೇಪ್ ಕೇಸಿನ ಕಥೆ (! ಹೌದು ಅದು ನಿಜವಲ್ಲ ಕಥೆಯೇ) ಓದಿ ನನ್ನ ಆಪ್ತ ಬಳಗದ ಹಿರಿಯರೊಬ್ಬರು ನನ್ನ ತಂದೆಯ ಬಳಿ ಹೇಳಿದ್ದರು ‘ ಮಾರಾಯ ನಾನು ಹುಡುಗಿಯರು ಸ್ತ್ರೀಯರು ಯಾರೇ ರೋಡ್ ಕ್ರಾಸ್ ಮಾಡುತ್ತಿದ್ದರೂ ಒಂದೆರಡು ಫೀಟ್ ಮೊದಲೇ ನಿಂತು ಬಿಡುತ್ತೇನಪ್ಪ ಎಂದು’ ಕೇಳುವಾಗ ನಮಗೆ ತಮಾಷೆ ಎನಿಸಿಬಹುದು ಆದರೆ ವಸ್ತು ನಿಷ್ಟವಾಗಿ ಯೋಚನೆ ಮಾಡಿ. ಹಿರಿಯರೊಬ್ಬರು ಈ ಮಟ್ಟಿಗೆ ಭಯ ಪಡುವ ಸ್ಥಿತಿ ಬಂದಿದೆ ಎಂದರೆ ನಮ್ಮ ಸಮಾಜದ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ?
ಇಷ್ಟಕ್ಕೆಲ್ಲಾ ಕಾರಣ ಕಾನೂನಿನ ದುರುಪಯೋಗ. ಸ್ತ್ರೀ ಶೋಷಣೆಗೆ ಸಂಬಂಧಿಸಿದ ಕಾನೂನುಗಳು ಲೆಕ್ಕವಿಲ್ಲದಷ್ಟು ಭಾರಿಗೆ ದುರುಪಯೋಗವಾಘಿದೆ. ವರದಕ್ಷಿಣೆ, ಲೈಂಗಿಕ ಕಿರುಕುಳವೆಂದರೆ ಕೇಳುವುದೇ ಬೇಡ, ತಕ್ಷಣವೇ ಪುರುಷರನ್ನು ಬಂಧಿಸಲಾಗುತ್ತದೆ. ಆತ ಅಪರಾಧಿ ಅಲ್ಲ ಎಂದು ತಿಳಿಯುವ ಹೊತ್ತಿಗೆ ಹತ್ತಾರು ಲಾಠಿಯೇಟು ತಿಂದಾಗಿರುತ್ತದೆ. ವರದಕ್ಷಿಣೆ ಸಂಬಂಧಿತ ಕೇಸುಗಳಲ್ಲಿ ತಕ್ಷಣವೇ ಗಂಡನನ್ನು ಮತ್ತು ಅತ್ತೆ ಮಾವನನ್ನು ಬಂಧಿಸಬಾರದು ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಖಂಡಿತಾ, ಹೆಣ್ಣು ಮಗಳು ಸಂಪೂರ್ಣ ಸುರಕ್ಷಿತಳಾಗಿದ್ದಾಳೆ, ಆಕೆಗೆ ತೊಂದರೆಯಾಗುತ್ತಿಲ್ಲ ಎಂದು ನಾ ಹೇಳುವುದಿಲ್ಲ. ಅದೆಷ್ಟೋ ವರುಷಗಳ ಹಿಂದೆ ನಡೆದ ಕೊಲೆ ಕೇಸು ಇಂದಿಗೂ ನ್ಯಾಯ ಸಿಗದೇ ಮುಚ್ಚಿ ಹೋಗಿದೆ, 17-18 ವರುಷದ ಹುಡುಗಿಯ ಬರ್ಬರ ಹತ್ಯೆಗಳಾಗಿವೆ, ಅವರಿಗೆ ಯಾರಿಗೂ ನ್ಯಾಯ ದೊರಕಿಲ್ಲ. ಅದರ ಬಗ್ಗೆ ಮಾತನಾಡುವವರೂ ಇಲ್ಲ, ನೈಜ ಘಟನೆಗಳ ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕಾದ ನಮ್ಮ ನ್ಯಾಯಾಂಗದ ಸಮಯವೆಲ್ಲಾ ಸುಳ್ಳು ಕೇಸುಗಳನ್ನು ನಿಭಾಯಿಸುವಲ್ಲಿಯೇ ಕಳೆದುಹೋಗುತ್ತಿರುವುದು ದುರದೃಷ್ಟಕರ ಸಂಗತಿ.
ನನ್ನ ಚಿಂತನೆಗಳು ಇಷ್ಟೇ. ಅಲ್ಲಾ ನಿಮಗೆಲ್ಲಾ ದ್ವೇಷವಿದ್ದರೆ ದ್ವೇಷವಿರುವ ವಿಷಯ,ವಿಚಾರದ ಮೇಲೆ ಅದನ್ನು ಸಾಧಿಸಿ, ಆದರೆ ವ್ಯಕ್ತಿಯ ಮಾನ ಹರಣ ಮಾಡುವುದರ ಮೂಲಕವಲ್ಲ. ಬ್ಲ್ಯಾಕ್’ಮೈಲ್ ಮಾಡುವ ಮೂಲಕವಲ್ಲ. ನಡೆದೇ ಇಲ್ಲದ ಲೈಂಗಿಕ ಕಿರುಕುಳದ ಆರೋಪ ಮಾಡುವ ಮೂಲಕವಲ್ಲ. ಪುರುಷ ಎಂದಾದ ಕೂಡಲೇ ಆತನನ್ನು ಹೇಗೂ ಬಳಸಬಹುದು ಎಂದುಕೊಂಡಿರುವುದು ನಮ್ಮ ಸದ್ಯದ ಸಮಾಜದ ದುರಂತ. ನಾನೀಗ ದೊಡ್ಡ ಸ್ತ್ರೀ ದ್ವೇಷಿಯಾಗಿ ಕಾಣಿಸುತ್ತಿರಬಹುದು, ಆದರೆ ನನ್ನ ತಂದೆ, ಅಣ್ಣ, ಆಪ್ತ ಸ್ನೇಹಿತ, ಗುರು – ಹಿರಿಯರು ಹೀಗೆ ಹಲವರು ಪುರುಷರೇ. ಇವರೆಲ್ಲಾ ಎಂದಿಗೂ ನನಗೆ ಸ್ತ್ರೀ ದ್ವೇಷಿಗಳಾಗಿ ಕಾಣಿಸಿಲ್ಲ, ಎಂದೂ ಕೆಟ್ಟದ್ದನ್ನೇ ಯೋಚಿಸುವ ವ್ಯಕ್ತಿಗಳಾಗಿ ಗೋಚರಿಸಿಲ್ಲ.
ಸ್ತ್ರಿ-ಪುರುಷ:ನಿಜವಾಗಲೂ ಶೋಷಣೆಗೊಳಗಾಗುತ್ತಿರುವವರು ಯಾರು? ಎಂದು ಕೇಳಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಯರೇ ಆದರೂ ನನ್ನ ಬಳಿ ನಿರ್ಧಿಷ್ಟ ಉತ್ತರವಿಲ್ಲ..!