ಅಂಕಣ

ರಾಜಕಾರಣಿಗಳು ಮತ್ತು ಅವರ ಕುಟುಂಬ ರಾಜಕೀಯಗಳು…..

ನಮ್ಮಲ್ಲೊಂದು ಮಾತಿದೆ. ಹಳೇ ಬೇರಿಗೆ ಹೊಸ ಚಿಗುರು. ಹಳೇ ತಲೆಮಾರಿನ ನಾಯಕರ ಬಳಿಕ ಹೊಸ ನಾಯಕರ ಉದಯವಾಗಲೇಬೇಕು. ಆದರೆ ನಮ್ಮ ರಾಜಕೀಯ ನಾಯಕರು ತಮ್ಮ ನಂತರ ತಮ್ಮ ಮಕ್ಕಳನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಕೆಟ್ಟ ಚಾಳಿ ಬಹಳ ಹಿಂದಿನಿಂದಲೇ ರೂಢಿಯಲ್ಲಿದೆ. ಕುಟುಂಬ ರಾಜಕಾರಣವನ್ನು ಭಾರತಕ್ಕೆ ಪರಿಚಯಿಸಿದ ಶ್ರೇಯಸ್ಸು ಕಾಂಗ್ರೆಸ್ ಗೆ ಸಲ್ಲಬೇಕು. ನಾಯಕತ್ವದ ಗುಣ ಇರಲಿ, ಇಲ್ಲದಿರಲಿ ಗಾಂಧಿ ಕುಟುಂಬದ ಕುಡಿ ಆಗಿದ್ದರೆ ಸಾಕು, ಅಧಿಕಾರ ಹುಡುಕಿಕೊಂಡು ಬರುತ್ತದೆ. ಕುಟುಂಬ ರಾಜಕಾರಣ ನಮ್ಮ ದೇಶದಲ್ಲಿ ಹೊಸತೇನಲ್ಲ. ಹಳೆಯ ಪಕ್ಷವಾದ ಕಾಂಗ್ರೆಸ್ ಹುಟ್ಟು ಹಾಕಿದ ಈ ಸಂಸ್ಕೃತಿ ರಾಜ್ಯಗಳಲ್ಲೂ ಎಗ್ಗಿಲ್ಲದೇ ವಿಸ್ತರಿಸಿದೆ.

ಕೇವಲ ಕಾಂಗ್ರೆಸ್ ಮಾತ್ರವಲ್ಲದೇ ಹಲವಾರು ಪ್ರಾದೇಶಿಕ ಪಕ್ಷಗಳ ನಾಯಕರೂ ತಮ್ಮ ಏಕಚಕ್ರಾಧಿಪತ್ಯವನ್ನು ಮುಂದುವರಿಸಲು ಕುಟುಂಬಕ್ಕೇ ಮಣೆ ಹಾಕಿದ್ದಾರೆ. ಶರದ್ ಪವಾರ್, ಮುಲಾಯಂ ಸಿಂಗ್, ಫಾರೂಕ್ ಅಬ್ದುಲ್ಲಾ, ಮುಫ್ತಿ ಸಯೀದ್, ಶಿಬು ಸೊರೇನ್, ದೇವೇಗೌಡ, ಯಡಿಯೂರಪ್ಪ ಇವರೆಲ್ಲಾ ತಮ್ಮ ಕುಟುಂಬದವರನ್ನು ರಾಜಕೀಯಕ್ಕೆ ಕರೆತಂದು ಯಶಸ್ವಿಯಾದರೋ ಬಿಟ್ಟರೋ, ಆದರೆ ತಮ್ಮ ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಲಿಲ್ಲ. ಕುಟುಂಬ ರಾಜಕಾರಣದಿಂದಾಗಿ ಹಾಲಂತಿದ್ದ ಜೀವನದಲ್ಲಿ ಬೆಂಕಿ ಬಿರುಗಾಳಿ ಎದ್ದು ನಾನೊಂದು ತೀರ ನೀನೊಂದು ತೀರ ಎಂದಾದ ರಾಜಕೀಯ ಕುಟುಂಬಗಳ ಕಹಾನಿ ಇಲ್ಲಿದೆ ನೋಡಿ.

ವರ್ಣರಂಜಿತ ರಾಜಕಾರಣದಲ್ಲಿ ಮಹಾರಾಷ್ಟ್ರವೂ ಒಂದು. ತನ್ನದೇ ಆದ ಸಾಂಸ್ಕೃತಿಕ ವೈವಿಧ್ಯತೆ, ಅಂಡರ್ ವರ್ಲ್ಡ್ ಎಂಬ ಕರಾಳಮುಖ,ಬಾಲಿವುಡ್ ಎಂಬ ಮಾಯಾಲೋಕ, ಅದರೆ ಜೊತೆಗೆ ಠಾಕ್ರೆ ಮನೆತನದ ರಾಜಕೀಯ. ಅದು ೨೦೦೫ರ ಕೊನೆಯ ಭಾಗ. ಸುಮಾರು ದಶಕಗಳ ಕಾಲ ಮುಂಬೈಯನ್ನು ತೆರೆಯ ಹಿಂದಿನಿಂದ ಆಳಿದ್ದ ಸರ್ಕಾರ್, ಮರಾಟಿಗರ ಸ್ವಾಭಿಮಾನದ ಪ್ರತೀಕವಾಗಿದ್ದ ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ತಮ್ಮ ಸುದೀರ್ಘ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದರು. ನಿಧಾನವಾಗಿ ತನ್ನ ಎಲ್ಲಾ ಜವಾಬ್ದಾರಿಗಳನ್ನು ಮಗನಾದ ಉದ್ಧವ್ ಠಾಕ್ರೆಗೆ ವಹಿಸಿದಾಗ ಸಹಜವಾಗೇ ರಾಜ್ ಠಾಕ್ರೆ ಎಂಬ ಫೈರ್ ಬ್ರಾಂಡ್ ರಕ್ತ ಕುದಿದಿತ್ತು. ಉದ್ಧವ್ ಸೇನೆಯ ನೇತೃತ್ವ ವಹಿಸಿಕೊಳ್ಳುತ್ತಲೇ ರಾಜ್ ಆಪ್ತ ನಾರಾಯಣ ರಾಣೆಯನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ. ರಾಜಕೀಯ ಗಂಧಗಾಳಿಯಿಲ್ಲದ ಗುಮಾಸ್ತನ ಕೈ ಕೆಳಗೆ ನಾನು ಕೆಲಸ ಮಾಡಲಾರೆ ಎಂದು ಪಕ್ಷದಿಂದ ಹೊರನಡೆಯುತ್ತಾರೆ. ಬಾಳಾ ಸಾಹೇಬ್ ಅವರ ಅಲ್ಲಿಯವರೆಗಿನ ರಾಜಕೀಯ ಹೋರಾಟದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದವರು ರಾಜ್. ಬಾಳಾ ಸಾಹೇಬ್ ಅಂದುಕೊಂಡಿದ್ದನ್ನು ರಾಜ್ ಕಾರ್ಯರೂಪಕ್ಕೆ ತರುತ್ತಿದ್ದರು.

ಬಾಳಾ ಸಾಹೇಬರ ಧೃತರಾಷ್ಟ್ರ ಪ್ರೇಮಕ್ಕೆ ನನ್ನ ಧಿಕ್ಕಾರವಿದೆ ಮತ್ತು ಅಪಾತ್ರರ ಕೈ ಅಡಿಯಲ್ಲಿ ಕೆಲಸ ಮಾಡಲು ನಾನೊಲ್ಲೆ ಎಂದು ಶಿವಸೇನೆಯಿಂದ ಸಿಡಿದೆದ್ದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನೆಸ್) ಸ್ಥಾಪಿಸುತ್ತಾರೆ ರಾಜ್ ಠಾಕ್ರೆ. ೨೦೦೬ ರಿಂದ ೨೦೧೪ರ ವರೆಗೆ ಮಹಾರಾಷ್ಟ ರಾಜಕೀಯದಲ್ಲಿ ರಾಜ್ ಠಾಕ್ರೆ ಎತ್ತರಕ್ಕೆ ಏರುತ್ತಲೇ ಬಂದಿದ್ದರು. ಆದರೆ ೨೦೧೪ ಲೋಕಸಭಾ ಹಾಗೂ ೨೦೧೫ರ ವಿಧಾನಸಭಾ ಚುನಾವಣೆಯಲ್ಲಿ ದೊಪ್ಪನೆ ಮುಗ್ಗರಿಸಿತ್ತು ಎಂ.ಎನ್.ಎಸ್.!! ಕಠಿಣ ಮಾತು ಹಾಗೂ ತನ್ನ ದೊಡ್ಡಪ್ಪನಂತಹ ಮಾತಿನ ಶೈಲಿ ಹೊಂದಿರುವ ರಾಜ್ ಸೌಮ್ಯ ಸ್ವಭಾವದ ಉದ್ದವ್ ಗಿಂತ ಬಹಳ ವರ್ಚಸ್ವಿ ನಾಯಕ. ೨೦೦೯ರ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಎಂ.ಎನ್.ಎಸ್  ಬಹಳ ದೊಡ್ಡ ಹೊಡೆತ ನೀಡಿತ್ತು. ಆಡಳಿತ ವಿರೋಧಿ ಅಲೆಯಿದ್ದರೂ, ಮುಂಬೈ ಮೇಲೆ ಉಗ್ರರ ದಾಳಿಯಾಗಿದ್ದರೂ ಮತ್ತೊಮ್ಮೆ ಕಾಂಗ್ರೆಸ್ ಎನ್ಸಿಪಿ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಒಂಬತ್ತು ವರ್ಷಗಳ ಹಿಂದೆ ಶುರುವಾದ ರಾಜ್ ಉದ್ದವ್ ನಡುವಿನ ಗುದ್ದಾಟ ಇನ್ನೂ ಮುಂದುವರಿದಿದೆ.!!

ಇದಿಷ್ಟು ಮಹಾರಾಷ್ಟ್ರ ರಾಜಕೀಯದ ಕಥೆಯಾದರೆ ಕರ್ನಾಟಕದಲ್ಲೂ ಇಂತಹದ್ದೇ ಒಂದು ಕುಟುಂಬವಿದೆ.  ಅದು ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ ಸಾರೆಕೊಪ್ಪ ಬಂಗಾರಪ್ಪ ಕುಟುಂಬ. ತನ್ನ ತಂದೆಯ ಪ್ರಭಾವದಿಂದಲೇ ಕೃಷ್ಣ ಸಂಪುಟದಲ್ಲಿ ಸಚಿವರಾಗುತ್ತಾರೆ ಬಂಗಾರಪ್ಪ ಹಿರಿಯ ಮಗ ಕುಮಾರ್ ಬಂಗಾರಪ್ಪ. ಯಾವಾಗ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರಕಾರ ಪುನರಾಯ್ಕೆ ಬಯಸಿ ಅವಧಿಗೆ ಮುನ್ನವೇ ಚುನಾವಣೆಗೆ ಹೋಗುತ್ತೋ ಕೇಂದ್ರ ಮಂತ್ರಿಯಾಗುವ ದೂರಾಲೋಚನೆಯಲ್ಲಿ ತನ್ನ ಸೈದ್ಧಾಂತಿಕ ವಿರೋಧಿಯಾದ ಬಿಜೆಪಿ ಮಡಿಲಿಗೆ ಬಂಗಾರಪ್ಪ ಬರುತ್ತಾರೆ. ಆದರೆ ತಂದೆಯ ಈ ನಿರ್ಣಯಕ್ಕೆ ಕುಮಾರ್ ಸಾಥ್ ನೀಡದೇ ಕಾಂಗ್ರೆಸ್ ನಲ್ಲೇ ಉಳಿದು ಬಿಡುತ್ತಾರೆ. ಬಂಗಾರಪ್ಪ ಜೊತೆ ಬಿಜೆಪಿಗೆ ಹೋಗಿ ಅಪ್ಪನ ಗೆಲುವಿಗೆ ಹಗಲಿರುಳು ಶ್ರಮಿಸುವುದು ಕಿರಿಯ ಮಗ ಮಧು. ಹಿರಿಯ ಮಗನ ವಿರೋಧದ ನಡುವೆಯೂ ಬಂಗಾರಪ್ಪ ಗೆಲ್ಲುತ್ತಾರೆ. ಆದರೆ ಕೇಂದ್ರದಲ್ಲಿ ಎನ್.ಡಿ.ಎ ಸರಕಾರ ಬಿದ್ದಿರುತ್ತದೆ. ಬಂಗಾರಪ್ಪನವರ ಮಂತ್ರಿಯಾಗುವ ಆಸೆಯೂ ಕಮರಿ ಹೋಗುತ್ತದೆ. ಅದರ ಜೊತೆಗೆ ಸ್ವಂತ ಮಗನೇ ರಾಜಕೀಯ ವೈರಿಯಾಗುತ್ತಾನೆ. ೨೦೦೮ರಲ್ಲಿ ಸೊರಬ ವಿಧಾನಸಭಾ ಚುನಾವಣೆಯಲ್ಲಿ ಮಧು ಹಾಗೂ ಕುಮಾರ್ ನಡುವಿನ ಹೋರಾಟದಲ್ಲಿ ಹಾಲಪ್ಪ ಗೆದ್ದು ಬರುತ್ತಾರೆ. ಅಣ್ಣ ತಮ್ಮಂದಿರ ಈ ವೈರತ್ವ ತಂದೆಯ ಮರಣಾನಂತರವೂ ಮುಂದುವರಿದಿದೆ. ಸಧ್ಯ ಮಧು ಜೆಡಿಎಸ್ ಶಾಸಕರಾಗಿದ್ದರೆ, ಕುಮಾರ್ ಕಾಂಗ್ರೆಸ್ ನಲ್ಲೇ ಮುಂದುವರಿದು ಮೂಲೆಗುಂಪಾಗಿದ್ದಾರೆ. ದಶಕಗಳಿಂದ ಪರಸ್ಪರ ತಮ್ಮ ಮೇಲೆಯೇ ಕತ್ತಿ ಮೆಸೆಯುತ್ತಾ ರಾಜಕೀಯ ಮಾಡುತ್ತಿದ್ದಾರೆ ಬಂಗಾರಪ್ಪ ಪುತ್ರರು.

ತಮಿಳುನಾಡಿನ  ಮಾಜಿ ಮುಖ್ಯಮಂತ್ರಿ ಡಿಎಂಕೆ ಪಕ್ಷದ ನಾಯಕ  ಕರುಣಾನಿಧಿ ಕಥೆಯೂ ಇದಕ್ಕಿಂತ ಹೊರತೇನಿಲ್ಲ. ಪುತ್ರರಾದ ಸ್ಟಾಲಿನ್ ಹಾಗೂ ಅಳಗಿರಿ ಅಧಿಕಾರದ ಲಾಲಸೆಯಿಂದ ತಾವೂ ಬಡವರಾಗಿದ್ದಲ್ಲದೇ ತಮ್ಮ ಪಕ್ಷವನ್ನೂ ಬೋರಲು ಮಲಗಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಹಾದಿ ಸುಗಮವಾಗಿಸಿದ ಕೀರ್ತಿ ಈ ಸಹೋದರರಿಗೆ ಸಲ್ಲಲೇಬೇಕು. ಕುಟುಂಬದವರನ್ನು ಬಳಿ ಬಿಟ್ಟು ಹಲವಾರು ಕೋಟಿ ಹಗರಣ ಮಾಡಿಕೊಂಡು ಈಗ ಜೈಲಿನಲ್ಲಿ ಕೊಳೆಯುತ್ತಿರುವ ಕುಟುಂಬವೆಂದರೆ ಅದು ಕರುಣಾನಿಧಿ ಕುಟುಂಬ.

ಅತಿಯಾಸೆಗೆ ಬಿದ್ದು ತಮ್ಮ ಕುಟುಂಬದವರನ್ನೂ ರಾಜಕೀಯಕ್ಕೆ ಕರೆತಂದು ಕುಟುಂಬ ಕಲಹಕ್ಕೆ ಕಾರಣವಾದ ನಾಯಕರ ದುರಂತ ಕಥೆ ಇದು. ಇನ್ನು ಮುಂದಿನ ಪೀಳಿಗೆಯ ನಾಯಕರಾದರೂ ಇದಕ್ಕೆ ಕಡಿವಾಣ ಹಾಕಿ ಒಳ್ಳೆಯ ರಾಜಕೀಯ ಮಾಡಲಿ ಎನ್ನುವುದು ಜನಸಾಮಾನ್ಯರ ಆಶಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!