ಅಂಕಣ

ಎತ್ತಿನಹೊಳೆ ನೀರ ತಿರುವು – ಕರಾವಳಿಗರ ಕಣ್ಣೀರ ಹರಿವು

ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿಯಿಂದ ನೇತ್ರಾವತಿ-ಹೇಮಾವತಿಗಳ ಜೋಡಣೆಯ ಪ್ರಸ್ತಾಪಗಳು ಕೇಳಿ ಬರುತ್ತಿದ್ದ ಸಮಯದಲ್ಲಿ ಕರ್ನಾಟಕ ಸರಕಾರ ನೇತ್ರಾವತಿ, ಕುಮಾರಧಾರಾ ಮುಂತಾದ ಪಶ್ಚಿಮಕ್ಕೆ ಹರಿಯುವ ನದಿಗಳ ನೀರನ್ನು ತಿರುಗಿಸಿ ಬಯಲಸೀಮೆಯ ಜಿಲ್ಲೆಗಳಾದ ಕೋಲಾರ, ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಕಡೆ ಹರಿಸುವ ಸಲುವಾಗಿ ಯೋಜನೆ ರೂಪಿಸಲು ಡಾ. ಜಿ.ಎಸ್ ಪರಮೇಶ್ವರಯ್ಯ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು. ಅಷ್ಟೇನು ಪ್ರಾಮುಖ್ಯತೆ ಪಡೆಯದಿದ್ದ ಈ ಚರ್ಚೆ ಕೆಲವು ರಾಜಕಾರಣಿಗಳ ಉದ್ಧಾರಕ್ಕಾಗಿ ಎತ್ತಿನಹೊಳೆ ನದಿ ತಿರುವು ಯೋಜನೆಯಾಗಿ ಬದಲಾದುದು, ಅವರು ತಮ್ಮ ಏಳಿಗೆಗಾಗಿ ಹುಟ್ಟೂರೆಂದೂ ಲೆಕ್ಕಿಸದೆ ಜನತೆಯ-ಅಪರೂಪದ ಜೀವ ಸಂಕುಲದ-ವನ್ಯಸಂಪತ್ತಿನ ವಿನಾಶಕ್ಕೂ ಹೇಸಲಾರರು ಎಂದು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಕುಮಾರಧಾರಾದ ಜೀವಸೆಲೆಯಾದ ಗುಂಡ್ಯ ನದಿ ನೀರನ್ನು ತಿರುಗಿಸಿ ಬಯಲುಸೀಮೆಯ ಜಿಲ್ಲೆಗಳಿಗೆ ಹರಿಸುವುದೇ ಈ ಯೋಜನೆಯ ಉದ್ದೇಶ. ಇದರಿಂದಾಗಿ ಹಾನಿ ಕೇವಲ ಗುಂಡ್ಯ-ಕುಮಾರಧಾರಾಗಳಿಗೆ ಮಾತ್ರವಲ್ಲ, ನೇತ್ರಾವತಿಗೂ ತಪ್ಪಿದ್ದಲ್ಲ!

ಯೋಜನೆಯನ್ವಯ ಎರಡು ಹಂತಗಳಲ್ಲಿ ಎಂಟು ಅಣೆಕಟ್ಟುಗಳನ್ನು ಗುಂಡ್ಯ ನದಿಗೆ ಕಟ್ಟಲಾಗುತ್ತದೆ. ಇವುಗಳಲ್ಲಿ ಎರಡು ಅಣೆಕಟ್ಟುಗಳನ್ನು ಎತ್ತಿನಹೊಳೆ ನದಿ ಹರಿವಿಗೂ, ಎರಡನ್ನು ಅದರ ಉಪನದಿಗಳಿಗೂ, ಎರಡನ್ನು ಕಾಡುಮನೆ ಹೊಳೆಗೂ, ಇನ್ನೊಂದನ್ನು ಕೆರಿಹೊಳೆಗೆ ಅಡ್ಡಲಾಗಿಯೂ, ಉಳಿದೊಂದನ್ನು ಹೊಂಗದ ಹಳ್ಳ ಹರಿವಿಗೆ ಅಡ್ದಲಾಗಿ ಕಟ್ಟಲಾಗುತ್ತದೆ. ಈ ಎಲ್ಲಾ ಹರಿವುಗಳು ಒಟ್ಟಾಗಿ ಗುಂಡ್ಯ ನದಿಯನ್ನು ಸೃಜಿಸಿವೆ. ಗುಂಡ್ಯ ನದಿ ಮುಂದೆ ಕುಮಾರ ಧಾರೆಯೊಡನೆ, ಕುಮಾರಧಾರೆ ನೇತ್ರಾವತಿಯೊಡನೆ ಸೇರುತ್ತದೆ. ಒತ್ತಡದ ಮೂಲಕ ನೀರನ್ನು ಮೂರು ಛೇಂಬರುಗಳಿಗೆ ಪಂಪ್ ಮಾಡಿ ಹಾಯಿಸಿ, ಅಲ್ಲಿಂದ ಸಕಲೇಶಪುರದ ದೊಡ್ದನಗರದಲ್ಲಿ ನಿರ್ಮಾಣವಾಗುವ ಪಂಪಿಂಗ್ ನಿಲ್ದಾಣಕ್ಕೆ ಏರಿಸಲಾಗುತ್ತದೆ. ದೊಡ್ಡನಗರದ ಪಂಪಿಂಗ್ ನಿಲ್ದಾಣದಿಂದ ಮತ್ತೆ ನೀರನ್ನು ಎತ್ತರಿಸಿ ಹಾಯಿಸಿ ಹಾರ್ವನಹಳ್ಳಿಯಲ್ಲಿ ನಿರ್ಮಾಣವಾಗುವ ನಾಲ್ಕು ಚೇಂಬರುಗಳಲ್ಲಿ ಸಂಗ್ರಹಿಸಲಾಗುತ್ತದೆ. ಹಾರ್ವನಹಳ್ಳಿಯಿಂದ 250 ಕಿಮೀ ಉದ್ದದ ಗುರುತ್ವಾಕರ್ಷಕ ಕೊಳವೆಗಳ ಮೂಲಕ ನೀರನ್ನು ತುಮಕೂರಿಗೆ ಹರಿಸಿ ಅಲ್ಲಿಂದ, ದೇವರಾಯನ ದುರ್ಗದಲ್ಲಿ ನಿರ್ಮಾಣಗೊಳ್ಳುವ ಜಲಾಶಯಕ್ಕೆ ನೀರನ್ನು ಎತ್ತರಿಸಿ ಹಾಯಿಸಲಾಗುತ್ತದೆ. ಈ ಜಲಾಶಯ 68 ಮೀಟರ್ ಎತ್ತರವಿದ್ದು 11TMC ನೀರು ಶೇಖರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರಿಂದ ಎರಡು ಹಳ್ಳಿಗಳೂ ಸೇರಿದಂತೆ ಅರಣ್ಯಪ್ರದೇಶವನ್ನೊಳಗೊಂಡ ಸುಮಾರು 1200 ಎಕರೆ ಭೂಮಿ ಮುಳುಗಡೆಯಾಗುತ್ತದೆ. ಇಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರಗಳಿಗೆ ನೀರನ್ನು ಪೈಪ್ ಲೈನ್ಗಳ ಮೂಲಕ ಹರಿಸಲಾಗುತ್ತದೆ. 16ಮೀ ಅಗಲದ 250ಕಿಮೀ ಉದ್ದದ ಕೊಳವೆಗಳು ಸರಿಸುಮಾರು 400 ಹೆಕ್ಟೇರ್ ಪ್ರದೇಶವನ್ನು ನುಂಗುತ್ತದೆ.

ಸರಕಾರದ ವರದಿಯಂತೆ ಯೋಜನೆಯ ಅನುಷ್ಠಾನಕ್ಕೆ ತಗಲುವ ಒಟ್ಟು ವೆಚ್ಚ 8323 ಕೋಟಿ ರೂ.ಗಳು. ಆದರೆ ಇದರೊಳಗೆ ಪುನರ್ವಸತಿ, ಭೂಸ್ವಾಧೀನ, 337 ಟ್ಯಾಂಕಿಗಳಿಗೆ ಬೇಕಾಗುವ ಪೈಪ್ ಲೈನ್ ಇವೆಲ್ಲಾ ಸೇರಿದರೆ ಈ ಮೊತ್ತ 10000 ಕೋಟಿ ದಾಟುವುದು ಶತಃಸಿದ್ಧ! ವರದಿಯಲ್ಲಿರುವಂತೆ ತಿರುಗಿಸಿದ 24.01 TMC ನೀರು ಕೋಲಾರ-ಚಿಕ್ಕಬಳ್ಳಾಪುರಗಳಿಗೆ ತಲುಪಿದಾಗ 2.81 TMCಗಿಳಿಯುತ್ತದೆ. ಯೋಜನೆ ಅನುಷ್ಠಾನವಾದ ಮೇಲೆ ಪ್ರಾಯೋಗಿಕವಾಗಿ ಎಷ್ಟು ನೀರು ದೊರೆಯುತ್ತದೆ ಎನ್ನುವುದನ್ನು ದೇವರೇ ಬಲ್ಲ. ತಜ್ಞರ ಅಭಿಪ್ರಾಯದಂತೆ ಇದು 0.7TMC! ಅಲ್ಲದೆ ಬಜೆಟಿನಲ್ಲಿ ತಿಳಿಸಿದಂತೆ ಬೆಂಗಳೂರು ನಗರಕ್ಕೂ ಈ ನೀರನ್ನು ಉಪಯೋಗಿಸಿದಲ್ಲಿ ಕೋಲಾರ ಚಿಕ್ಕಾಬಳ್ಳಾಪುರಗಳಿಗೆ ಬರಿಯ ಪೈಪುಗಳಷ್ಟೇ ಗತಿ! ಯೋಜನೆಯ ಯಾವುದೇ ವಿಸ್ತೃತ ವರದಿಯಿಲ್ಲದೆ, ಯೋಜನೆಯ ಲಾಭ-ನಷ್ಟಗಳ ಲೆಕ್ಕಾಚಾರ ಮಾಡದೆ, ಯೋಜನೆಯಿಂದ ಪರಿಸರ ಹಾಗೂ ಜನಜೀವನದ ಮೇಲಾಗುವ ಪರಿಣಾಮದ ಬಗ್ಗೆ ಅಧ್ಯಯನ ಮಾಡದೆ ಈಗಾಗಲೇ 2670 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯೂ ಆರಂಭವಾಗಿದೆ. ವಿಪರ್ಯಾಸವೆಂದರೆ ಕರಾವಳಿಯ ಉದ್ಯಮಿಗಳೂ ಇದರ ಪಾಲುದಾರರು!
ಯೋಜನೆಗೆ ಅಗತ್ಯವಿರುವ ವಿದ್ಯುತ್ ಸುಮಾರು 370 MW. ಸುಮಾರು 90 ಸ್ಕ್ವೇರ್ ಕಿ.ಮೀ ಜಾಗವನ್ನುಪಯೋಗಿಸಿಕೊಂಡು 24.01 TMC ನೀರು ತಿರುಗಿಸುವ ಈ ಯೋಜನೆ ಯಶಸ್ವಿಯಾಗುವುದು ಜೂನ್-ನವಂಬರ್ ಗಳ ನಡುವೆ ಮಾತ್ರ. 24.01 TMC ನೀರು ಸಿಗುವ ಸಾಧ್ಯತೆ 50%ನಷ್ಟು! ಹಾಗಾಗಿ ಈ ಯೋಜನೆಯ ಅನುಷ್ಠಾನಕ್ಕೆ ಮಾಡುವ ನಿರ್ಮಾಣಗಳೂ 50%ನಷ್ಟು ಸಾಧ್ಯತೆಯನ್ನು ಅವಲಂಬಿಸಿಯೇ ಸಿದ್ಧಗೊಳ್ಳುತ್ತವೆ. ಒಂದು ವೇಳೆ 24 TMC ಅಥವಾ ಅದಕ್ಕಿಂತ ಹೆಚ್ಚು ನೀರು ದೊರೆತಲ್ಲಿ ಅಷ್ಟನ್ನೂ ತಿರುಗಿಸುವ ದೂ(ದು)ರಾಲೋಚನೆಯೂ ಇದರಲ್ಲಿದೆ. ಯೋಜನೆಯ ಮುಂದುವರಿದ ಭಾಗವಾಗಿ ಉಳಿದ ನದಿಗಳ ನೀರನ್ನು ತಿರುಗಿಸುವ ಮಾಸ್ಟರ್ ಪ್ಲಾನ್ ಕೂಡಾ ಇದೆ! 110 ಹೆಕ್ಟೇರುಗಳಷ್ಟು ದಟ್ಟಾರಣ್ಯ ಕೇವಲ ಅಣೆಕಟ್ಟುಗಳಿಂದ ಪಂಪಿಂಗ್ ಸ್ಟೇಷನ್ನಿಗೆ ಹಾಕಲಾಗುವ ಮೈನ್ಸ್ ಗಳಿಗೇ ಬಲಿಯಾಗುತ್ತದೆ. ಯೋಜನೆಯ ವರದಿಯಲ್ಲಿ ಕಾಡನ್ನು ಉರಿಸಿ ನಾಶಪಡಿಸುವುದಾಗಿ ಹೇಳಿದ್ದು ಇದರಿಂದಾಗುವ ಅರಣ್ಯನಾಶ, ವನ್ಯಜೀವಿ-ಜಲಚರಗಳ ನಾಶ ಊಹಿಸಲಸಾಧ್ಯ! ಇದಲ್ಲದೆ ಅಣೆಕಟ್ಟು, ಕೆಲಸಗಾರರ ವಸತಿ, ಹೆದ್ದಾರಿಯನ್ನು ಸಂಧಿಸಲು ನಿರ್ಮಿಸುವ ಹೊಸ ಮಾರ್ಗಗಳು, ತ್ಯಾಜ್ಯವನ್ನು ಹೂಳಲು ಬೇಕಾಗುವ ಜಾಗಗಳು, ಇಲೆಕ್ಟ್ರಿಕಲ್ ಸಬ್ ಸ್ಟೇಷನ್ಗಳು, ಮೈನಿಂಗ್ ಸಾಮಗ್ರಿಗಳು, ಬಂಡೆಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ನಾಶ ಸೇರಿ ಅರಣ್ಯದ ಮೇಲಾಗುವ ಅತ್ಯಾಚಾರ ಲೆಕ್ಕವಿಲ್ಲದ್ದು!
ಈ ಯೋಜನೆ ಅನುಷ್ಠಾನಗೊಳ್ಳುವ ಭಾಗದಲ್ಲಿ ಐ.ಐ.ಎಸ್.ಸಿ ಕೈಗೊಂಡ ಅಧ್ಯಯನವೊಂದು 119 ವಿವಿಧ ಜಾತಿಯ ಮರಗಳು, 63 ಜಾತಿಯ ಪೊದೆಗಳು-ಬಳ್ಳಿಗಳು, 57 ಗಿಡಮೂಲಿಕೆಗಳು ಮತ್ತು 54 ಅಪುಷ್ಪಸಸ್ಯಗಳು, 44 ವಿವಿಧ ಜಾತಿಯ ಚಿಟ್ಟೆಗಳು, 4 ಡ್ರಾಗನ್ನುಗಳು, ಕನ್ನೆನೊಣಗಳು, ನಶಿಸುತ್ತಿರುವ ಗುಂಡ್ಯ ಕಪ್ಪೆಗಳನ್ನೊಳಗೊಂಡಂತೆ 23 ವಿವಿಧ ಉಭಯಚರಗಳು, 32 ಸರೀಸೃಪಗಳು, 91 ಜಾತಿಯ ಹಕ್ಕಿಗಳು, ಹುಲಿ ಮುಂತಾದ 22 ಬಗೆಯ ಸಸ್ತನಿಗಳು, ಸಿಂಹ ಬಾಲದ ಕೋತಿಗಳು, ಆನೆ, ಕಾಡುಪಾಪ , ಕಾಡುಕೋಣ ಗಳನ್ನು ಗುರುತಿಸಿತ್ತು. 2002-13ರ ನಡುವೆ 34 ಜನ ಆನೆಗಳ ದಾಳಿಗೆ ಬಲಿಯಾಗಿದ್ದರೆ, 17 ಆನೆಗಳು ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದವು. “ಕರ್ನಾಟಕ ಎಲಿಫೆಂಟ್ ಟಾಸ್ಕ್ ಫೋರ್ಸ್” ಆನೆಗಳಿಗೆ ಹಾಗೂ ಪರಿಸರ ಹಾನಿಯ ಕಾರಣವೊಡ್ಡಿ ಸಕಲೇಶಪುರದಲ್ಲಿ ಆಗಬೇಕಿದ್ದ ಜಲವಿದ್ಯುತ್ ಯೋಜನೆಯೊಂದನ್ನು ನಿಲ್ಲಿಸಿತ್ತು. ಈಗ ಅದಕ್ಕಿಂತಲೂ ಹೆಚ್ಚು ಹಾನಿಯುಂಟುಮಾಡುವ ಯೋಜನೆಗೆ ಅನುಮತಿ ಸಿಕ್ಕಿದ್ದಾದರೂ ಹೇಗೆ? ಮನುಷ್ಯ-ವನ್ಯಜೀವಿಗಳ ನಡುವೆ ಸಂಘರ್ಷ ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಅದನ್ನು ತಪ್ಪಿಸಲು ಸರಿಯಾದ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಆನೆಗಳ ವಾಸಸ್ಥಾನಗಳಿಗೆ ಅಪಾಯವೊಡ್ಡುವ ಈ ಯೋಜನೆಯಿಂದ ಆನೆಗಳು ನೆಲೆಯನ್ನರಸುತ್ತಾ ನಾಡಿಗಿಳಿಯಲಾರಂಭಿಸಿದರೆ ಜನರ ಪಾಡೇನು? ಮಾನವನ ದುರಾಸೆಗಾಗಿ ವನ್ಯಜೀವಿಗಳ ಪ್ರಾಣವನ್ನು ಬಲಿಕೊಡುವುದು ಎಷ್ಟು ಸರಿ? ಈ ಯೋಜನೆ ಅನುಷ್ಠಾನಗೊಳ್ಳುವುದು “ವಿಶ್ವ ಪಾರಂಪರಿಕ ತಾಣ”ಗಳಲ್ಲೊಂದಾದ ಪುಷ್ಪಗಿರಿ ಅಭಯಾರಣ್ಯಕ್ಕೆ ಹತ್ತು ಕಿಮೀ ಅಂತರದಲ್ಲಿ. ಇದರಿಂದ ಅಲ್ಲಿನ ಜೀವ ವೈವಿಧ್ಯದಲ್ಲಿ ವ್ಯತ್ಯಯವಾಗುವುದು ನಿಶ್ಚಿತ. ಈ ಯೋಜನೆ ಮೈಸೂರಿನ ಆನೆಗಳ ರಕ್ಷಿತಾರಣ್ಯಕ್ಕೂ ತೊಂದರೆಯೊಡ್ಡುವುದರಲ್ಲಿ ಅನುಮಾನವಿಲ್ಲ.

ನೀರನ್ನು ತಿರುವುಗೊಳಿಸುವ ಸ್ಥಳವನ್ನು ಯಾವುದೇ ವೈಜ್ಞಾನಿಕ ಅಧ್ಯಯನವನ್ನು ಮಾಡಿ ನಿರ್ಧರಿಸಿಲ್ಲ. ಬಂಟ್ವಾಳದಲ್ಲಿ ನೇತ್ರಾವತಿಯ ನದಿ ನೀರಿನ ಮಾಪನವನ್ನು ತೆಗೆದುಕೊಂಡು ಅದನ್ನೇ ಘಟ್ಟಕ್ಕೆ ಬಹಿರ್ಗಣಿಸಿದಾಗ ಸಿಗುವ ನೀರಿನ ಪ್ರಮಾಣವನ್ನೇ 24TMC ಎಂದು ಪರಿಗಣಿಸಿದವರ ಮೂರ್ಖತನಕ್ಕೆ ಏನೆನ್ನಬೇಕು?! ಈ ಯೋಜನೆಯಿಂದಾಗಿ ಕೆಳಭಾಗಕ್ಕೆ ಹರಿಯುವ ನೀರು ಅತ್ಯಲ್ಪ ಅಥವಾ ಶೂನ್ಯ. ಇದರಿಂದ ಜಲಚರಗಳಿಗೆ, ಕಾಡಿಗೆ ಹಾಗೂ ವನ್ಯಜೀವಿಗಳಿಗೆ ಅಲ್ಲದೆ ಕೆಳಭಾಗದ ಕೃಷಿಕರಿಗಾಗುವ ಹಾನಿಯ ಬಗೆಗೆ ಯೋಜನೆಯ ನಿರ್ಮಾತೃಗಳು ಯೋಚಿಸಿದ್ದಾರೆಯೇ? ಕಳೆದ ಕೆಲವು ವರ್ಷಗಳಲ್ಲಿ ಮಳೆಯ ಪ್ರಮಾಣ ಕುಸಿದಿರುವ ಪಶ್ಚಿಮಘಟ್ಟಗಳಲ್ಲಿ ಮುಂಬರುವ ವರ್ಷಗಳಲ್ಲಿ ಮಳೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯನ್ನು ಅಧ್ಯಯನಗಳು ಹೇಳುತ್ತಿವೆ. ಇದರಿಂದ ಕೆಲವೇ ವರ್ಷಗಳಲ್ಲಿ ಸಣ್ಣ ನದಿಗಳು, ತೊರೆಗಳು ಬಡವಾಗಿ ಅಂತರ್ಜಲವೂ ಬತ್ತಿ ಹೋಗಿ ಭೂಮಿ ಬರಡಾಗಿ ಜನಜೀವನ ಅಸ್ತವ್ಯಸ್ತವಾದೀತು. ಮೊದಲೇ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವ ಕರಾವಳಿ ಭಾಗದಲ್ಲಿ ಮುಂದೆ ಆಗಲಿರುವ ಕೈಗಾರಿಕಾ ವಲಯ, ವಿಶೇಷ ವಿತ್ತವಲಯ, ಹೆಚ್ಚುವ ಜನಸಂಖ್ಯೆಗೆ ಉಪ್ಪು ನೀರೇ ಗತಿ!

ನೇತ್ರೆ ,ಕುಮಾರಧಾರಾ, ಗುಂಡ್ಯ ನದಿಗಳು ಕೆಲವು ಅಪರೂಪದ ಪ್ರಭೇದದ ಮೀನುಗಳಿಗೆ ಆಶ್ರಯತಾಣಗಳಾಗಿವೆ. ಕುಕ್ಕೆ, ನಕುರ್ ಗಯಾ, ಯೇನೇಕಲ್ ಗಳಲ್ಲಿರುವ ಮೀನು ರಕ್ಷಿತ ತಾಣಗಳು ಈ ಯೋಜನೆ ಜಾರಿಯಾದಲ್ಲಿ ಬಡವಾಗುವುದು ಖಂಡಿತ. ನೀರಿನ ಹರಿವು ಕ್ಷೀಣಗೊಂಡಾಗ ಅವುಗಳ ಆವಾಸ-ಆಹಾರಗಳಲ್ಲಿ ವ್ಯತ್ಯಯವುಂಟಾಗಿ ಸಂತತಿಯೇ ನಶಿಸಿ ಹೋಗಬಹುದು. ಈ ಬಗ್ಗೆ ಯಾವುದೇ ಅಧ್ಯಯನವನ್ನು ಮಾಡದೆ ಏಕಾಏಕಿ ಯೋಜನೆ ಜಾರಿಗೊಳಿಸಿದುದೇಕೆ? ಅಲ್ಲದೆ ಬಂಡೆಗಳನ್ನು ಡೈನಮೈಟ್ ಉಪಯೋಗಿಸಿ ಒಡೆಯುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ವನ್ಯಜೀವಿ ಹಾಗೂ ಜಲಚರಗಳಿಗಾಗುವ ಹಾನಿಯೇನು ಕಡಿಮೆಯೇ? ಈ ಸ್ಫೋಟಗಳು ಅಂತರ್ಜಲ ಹಾಗೂ ನೀರಿನ ಸೆಲೆಗಳಲ್ಲಿ ಉಂಟಾಗುವ ವ್ಯತ್ಯಯಗಳ ಬಗ್ಗೆ ಸಂಶೋಧನೆಗಳು ಹೇಳುತ್ತವೆ. ಇವನ್ನೆಲ್ಲಾ ಗಮನಕ್ಕೆ ತೆಗೆದುಕೊಂಡಿಲ್ಲವೇಕೆ? ಯೋಜನೆಯ ವರದಿಯಂತೆ ಹದಿನಾಲ್ಕು ಲಕ್ಷ ಕ್ಯೂಬಿಕ್ ಮೀಟರಿಗಿಂತಲೂ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು ನೀರಿನ ಗುಣಮಟ್ಟ, ಕಾಡು ಹಾಗೂ ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಪ್ರತಿದಿವಸ ಈ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗಿ ಮುಂದೊಂದು ದಿನ ಘಟ್ಟದ ಕೆಳಭಾಗದಲ್ಲಿ 2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದಂತೆ ಪ್ರವಾಹ-ಭೂಕುಸಿತಗಳುಂಟಾದರೂ ಆಶ್ಚರ್ಯವಿಲ್ಲ.

ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಅಲ್ಲಿನ ಜೀವ ವೈವಿಧ್ಯವನ್ನು ಉಳಿಸಲೋಸುಗ ಕಸ್ತೂರಿ ರಂಗನ್ ವರದಿ ಜಾರಿಗೆ ಈಗಾಗಲೇ ಶಿಫಾರಸ್ಸು ಮಾಡಲಾಗಿದೆ. ಕಸ್ತೂರಿ ರಂಗನ್ ವರದಿಯಂತೆ ಪರಿಸರಕ್ಕೆ ಮಾರಕವಾಗುವ ಯಾವುದೇ ಕಾಮಗಾರಿ ಈ ಭಾಗದಲ್ಲಿ ನಡೆಯಕೂಡದು. ಹಾಗಾದರೆ ಎತ್ತಿನಹೊಳೆ ಯೋಜನೆ ಹೇಗೆ ಜಾರಿಯಾಗುತ್ತಿದೆ? ಎತ್ತಿನಹೊಳೆ ಯೋಜನೆ ಭಂಡ ರಾಜಕಾರಣಿಗಳ ಇಬ್ಬಂದಿತನವನ್ನು, ತಮ್ಮ ಹೊಟ್ಟೆ ಹೊರೆದುಕೊಳ್ಳುವ ಜಾಣತನವನ್ನು ಸೂಚಿಸುತ್ತದೆ. ಒಟ್ಟಾರೆ ಮಲೆನಾಡಿಗರನ್ನು ಅತ್ತ ಭೂಮಿ ಕಿತ್ತುಕೊಳ್ಳುವ ಕಸ್ತೂರಿ ರಂಗನ್ ವರದಿಯ ಅನುಮಾನಿತ ಭೂತ ಇತ್ತ ಆಹಾರ ಕಿತ್ತುಕೊಳ್ಳುವ ಎತ್ತಿನಹೊಳೆಯ ಪ್ರೇತಗಳು ಜೀವಚ್ಛವವಾಗಿಸುವುದರಲ್ಲಿ ಸಂಶಯವಿಲ್ಲ. ಚೀನಾದಲ್ಲಿ ಹೆಚ್ಚಿದ ವಾಣಿಜ್ಯ ಚಟುವಟಿಕೆ, ಅವೈಜ್ಞಾನಿಕ ನದಿ ತಿರುವು ಯೋಜನೆಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ 28000 ನದಿಗಳೇ ಕಾಣೆಯಾಗಿವೆ. ರಾಜಕಾರಣಿಗಳ ದುರಾಸೆಗೆ ಬಲಿಬಿದ್ದರೆ ಅಂತಹ ಸ್ಥಿತಿ ನಮಗೂ ಬಂದೀತು.

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!